ದುರ್ಗುಣ ತುಂಬಿದ ಜಗತ್ತಿನಲ್ಲಿ ಸದ್ಗುಣವನ್ನು ಉಳಿಸಿಕೊಳ್ಳುವುದು
“ಗುಣುಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ. ಹೀಗೆ ನೀವು ನಿರ್ದೋಷಿಗಳೂ ಯಥಾರ್ಥ ಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ.”—ಫಿಲಿಪ್ಪಿ 2:14, 15.
1, 2. ಕಾನಾನ್ಯರ ನಾಶನಕ್ಕೆ ದೇವರು ಕರೆಕೊಟ್ಟದ್ದೇಕೆ?
ಯೆಹೋವನ ಆಜ್ಞೆಗಳು ಯಾವುದೇ ಒಪ್ಪಂದಕ್ಕೆ ಎಡೆಗೊಡುವುದಿಲ್ಲ. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಇನ್ನೇನು ಪ್ರವೇಶಿಸುವುದರಲ್ಲಿದ್ದರು. ಆಗ ಮೋಶೆಯು ಅವರಿಗಂದದ್ದು: “ನಿಮ್ಮ ದೇವರಾದ ಯೆಹೋವನು ನಿಮಗೆ ಅಪ್ಪಣೆಕೊಟ್ಟಂತೆ ಇವರನ್ನು ಅಂದರೆ ಹಿತ್ತಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು, ಯೆಬೂಸಿಯರು, ಇವರೆಲ್ಲರನ್ನೂ ನಾಶಮಾಡಿಬಿಡಬೇಕು.”—ಧರ್ಮೋಪದೇಶಕಾಂಡ 7:2; 20:17.
2 ಯೆಹೋವನು ಕೃಪಾಳು ದೇವರಾಗಿರುವುದರಿಂದ, ಕಾನಾನಿನ ನಿವಾಸಿಗಳ ನಾಶನವನ್ನು ಆತನು ಒತ್ತಾಯಪಡಿಸಿದ್ದೇಕೆ? (ವಿಮೋಚನಕಾಂಡ 34:6) ‘ಕಾನಾನ್ಯರು ತಮ್ಮ ದೇವರುಗಳಿಗೆ ಮಾಡಿದ ನಿಷಿದ್ಧಾಚಾರಗಳನ್ನು ಇಸ್ರಾಯೇಲ್ಯರಿಗೆ ಕಲಿಸಿ, ಇಸ್ರಾಯೇಲ್ಯರು ಯೆಹೋವನಿಗೆ ವಿರುದ್ಧವಾಗಿ ಪಾಪ ಮಾಡದಂತೆ’ ಸಹಾಯ ಮಾಡುವುದು ಒಂದು ಕಾರಣವಾಗಿತ್ತು. (ಧರ್ಮೋಪದೇಶಕಾಂಡ 20:18) ಮೋಶೆ ಹೀಗೂ ಹೇಳಿದನು: “ಆ ಜನಾಂಗಗಳ ದುರ್ನಡತೆಯ ದೆಸೆಯಿಂದಲೇ ಯೆಹೋವನು ನಿಮ್ಮ ಎದುರಿನಿಂದ ಅವರನ್ನು ಹೊರಡಿಸುತ್ತಾನೆ.” (ಧರ್ಮೋಪದೇಶಕಾಂಡ 9:4) ಕಾನಾನ್ಯರು ದುರ್ಗುಣದ ಮೂರ್ತರೂಪವೇ ಆಗಿದ್ದರು. ಲೈಂಗಿಕ ಭ್ರಷ್ಟತೆ ಮತ್ತು ವಿಗ್ರಹಾರಾಧನೆಗಳು ಅವರ ಆರಾಧನೆಯ ವೈಶಿಷ್ಟ್ಯಚಿಹ್ನೆಗಳಾಗಿದ್ದವು. (ವಿಮೋಚನಕಾಂಡ 23:24; 34:12, 13; ಅರಣ್ಯಕಾಂಡ 33:52; ಧರ್ಮೋಪದೇಶಕಾಂಡ 7:5) ಅಗಮ್ಯಗಮನ, ಪುಂಮೈಥುನ ಮತ್ತು ಪಶುಸಂಭೋಗಗಳು ‘ಕಾನಾನ್ದೇಶದವರ ಆಚರಣೆಗಳು’ ಆಗಿದ್ದವು. (ಯಾಜಕಕಾಂಡ 18:3-25) ಮುಗ್ಧ ಮಕ್ಕಳನ್ನು ಮರುಕವಿಲ್ಲದೆ ಸುಳ್ಳುದೇವತೆಗಳಿಗೆ ಬಲಿ ಅರ್ಪಿಸಲಾಗುತ್ತಿತ್ತು. (ಧರ್ಮೋಪದೇಶಕಾಂಡ 18:9-12) ಈ ಜನಾಂಗಗಳ ಬರಿಯ ಅಸ್ತಿತ್ವವೇ ತನ್ನ ಜನರ ಶಾರೀರಿಕ, ನೈತಿಕ ಮತ್ತು ಆತ್ಮಿಕ ಹಿತಕ್ಕೆ ಧಕ್ಕೆಯಾಗಿದೆಯೆಂದು ಯೆಹೋವನು ಪರಿಗಣಿಸಿದ್ದು ಆಶ್ಚರ್ಯಕರವೇನಲ್ಲ!—ವಿಮೋಚನಕಾಂಡ 34:14-16.
3. ಇಸ್ರಾಯೇಲ್ಯರು ಕಾನಾನಿನ ನಿವಾಸಿಗಳ ಕುರಿತ ದೇವರ ಆಜ್ಞೆಗಳನ್ನು ಪೂರ್ತಿಯಾಗಿ ನೆರವೇರಿಸದಿದ್ದ ಕಾರಣ ಏನು ಪರಿಣಮಿಸಿತು?
3 ದೇವರ ಆಜ್ಞೆಗಳನ್ನು ಅವರು ಪೂರ್ತಿಯಾಗಿ ನೆರವೇರಿಸದಿದ್ದ ಕಾರಣ ಅನೇಕ ಕಾನಾನ್ ನಿವಾಸಿಗಳು ಇಸ್ರಾಯೇಲು ವಾಗ್ದತ್ತ ದೇಶವನ್ನು ಜಯಿಸಿದಾಗ ಬದುಕಿ ಉಳಿದರು. (ನ್ಯಾಯಸ್ಥಾಪಕರು 1:19-21) ಸಕಾಲದಲ್ಲಿ, ಕಾನಾನ್ಯರ ಗುಪ್ತವಾಗಿ ಬೆಳೆದ ಪ್ರಭಾವವು ಗೋಚರವಾಯಿತು, ಮತ್ತು “ಆತನು [ಯೆಹೋವನು] ತಮ್ಮ ಪಿತೃಗಳಿಗೆ ಕೊಟ್ಟ ವಿಧಿನಿಬಂಧನೆಗಳನ್ನೂ ತಮಗೆ ಹೇಳಿಸಿದ ಬುದ್ಧಿವಾಕ್ಯಗಳನ್ನೂ ತಿರಸ್ಕರಿಸಿ ಮಿಥ್ಯಾ ದೇವತೆಗಳನ್ನು ಆರಾಧಿಸಿ ನಿಷ್ಪ್ರಯೋಜಕರಾದರು; ಸುತ್ತಣ ಜನಾಂಗದವರನ್ನು ಅನುಸರಿಸಬಾರದೆಂದು ಯೆಹೋವನು ಆಜ್ಞಾಪಿಸಿದರೂ ಅವರು [ಇಸ್ರಾಯೇಲ್ಯರು] ಕೇಳದೆ ಅವರನ್ನು ಅನುಸರಿಸಿದರು,” ಎಂದು ಹೇಳಸಾಧ್ಯವಾಯಿತು. (2 ಅರಸುಗಳು 17:15) ಹೌದು, ವರ್ಷಗಳುದ್ದಕ್ಕೂ ಅನೇಕ ಇಸ್ರಾಯೇಲ್ಯರು, ಯಾವ ಕಾರಣಕ್ಕಾಗಿ ದೇವರು ಕಾನಾನ್ಯರ ನಾಶನವನ್ನು ಆಜ್ಞಾಪಿಸಿದ್ದನೊ ಆ ದುರ್ಗುಣಗಳನ್ನೇ—ವಿಗ್ರಹಾರಾಧನೆ, ಲೈಂಗಿಕ ಅತಿರೇಕಗಳು ಮತ್ತು ಶಿಶು ಬಲಿಯನ್ನೂ—ಆಚರಿಸಿದರು!—ನ್ಯಾಯಸ್ಥಾಪಕರು 10:6; 2 ಅರಸುಗಳು 17:17; ಯೆರೆಮೀಯ 13:27.
4, 5. (ಎ) ಅಪನಂಬಿಗಸ್ತ ಇಸ್ರಾಯೇಲ್ ಮತ್ತು ಯೆಹೂದ ಕುಲಗಳಿಗೇನಾಯಿತು? (ಬಿ) ಫಿಲಿಪ್ಪಿ 2:14, 15ರಲ್ಲಿ ಯಾವ ಬುದ್ಧಿವಾದವು ಕೊಡಲ್ಪಟ್ಟಿದೆ, ಮತ್ತು ಯಾವ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ?
4 ಆ ಕಾರಣದಿಂದ ಹೋಶೇಯ ಪ್ರವಾದಿಯು ಪ್ರಕಟಿಸಿದ್ದು: “ಇಸ್ರಾಯೇಲ್ಯರೇ, ಯೆಹೋವನ ವಾಕ್ಯವನ್ನು ಕೇಳಿರಿ; ಯೆಹೋವನು ದೇಶನಿವಾಸಿಗಳ ಮೇಲೆ ವಿವಾದವನ್ನು ಹಾಕಿದ್ದಾನೆ. ಏಕಂದರೆ ಪ್ರೀತಿ ಸತ್ಯತೆ ದೇವಜ್ಞಾನಗಳು ದೇಶದಲ್ಲಿಲ್ಲ. ಸುಳ್ಳುಸಾಕ್ಷಿ, ನರಹತ್ಯ, ಕಳ್ಳತನ, ವ್ಯಭಿಚಾರ, ಇವುಗಳೇ ನಡೆಯುತ್ತವೆ; ದೊಂಬಿಗಳು ಆಗುತ್ತಲಿವೆ, ದೇಶವೆಲ್ಲಾ ರಕ್ತಮಯವಾಗಿದೆ. ಹೀಗಿರಲು ದೇಶವು ನರಳುವದು, ಅದರಲ್ಲಿ ವಾಸಿಸುವ ಸಕಲ ಭೂಜಂತುಗಳೂ ಆಕಾಶಪಕ್ಷಿಗಳೂ ಬಳಲಿಹೋಗುವವು; ಸಮುದ್ರದ ಮೀನುಗಳು ಸಹ ನೀಗಿಹೋಗುವವು.” (ಹೋಶೇಯ 4:1-3) ಸಾ.ಶ.ಪೂ. 740ರಲ್ಲಿ ಅಶ್ಶೂರವು ಭ್ರಷ್ಟಗೊಂಡಿದ್ದ ಉತ್ತರ ಇಸ್ರಾಯೇಲ್ ರಾಜ್ಯವನ್ನು ಸೋಲಿಸಿತು. ಸುಮಾರು ಒಂದಕ್ಕೂ ಹೆಚ್ಚು ಶತಮಾನಾನಂತರ, ದಕ್ಷಿಣದ ಅಪನಂಬಿಗಸ್ತ ಯೆಹೂದ ರಾಜ್ಯವು ಬಾಬೆಲಿನಿಂದ ಸೋಲಿಸಲ್ಪಟ್ಟಿತು.
5 ದುರ್ಗುಣಗಳು ನಮ್ಮನ್ನು ಬಲಿತೆಗೆದುಕೊಳ್ಳುವಂತೆ ಬಿಡುವುದು ಎಷ್ಟು ಅಪಾಯಕರವೆಂಬುದನ್ನು ಈ ಘಟನೆಗಳು ಚಿತ್ರಿಸುತ್ತವೆ. ದೇವರು ಅನೀತಿಯನ್ನು ಹೇಸುತ್ತಾನೆ. ಮತ್ತು ತನ್ನ ಜನರ ಮಧ್ಯೆ ಅನೀತಿಯನ್ನು ಆತನು ಸಹಿಸಿಕೊಳ್ಳುವುದಿಲ್ಲ. (1 ಪೇತ್ರ 1:14-16) ನಾವಿಂದು “ವಿಷಯಗಳ ಪ್ರಸಕ್ತ ದುಷ್ಟ ವ್ಯವಸ್ಥೆ” (NW)ಯಲ್ಲಿ, ಹೆಚ್ಚೆಚ್ಚು ಭ್ರಷ್ಟವಾಗುತ್ತ ಹೋಗುವ ಜಗತ್ತಿನಲ್ಲಿ ಜೀವಿಸುತ್ತಿರುವುದು ನಿಜ. (ಗಲಾತ್ಯ 1:4; 2 ತಿಮೊಥೆಯ 3:13) ಹಾಗಿದ್ದರೂ, ದೇವರ ವಾಕ್ಯವು ಸಕಲ ಕ್ರೈಸ್ತರಿಗೆ, “ನಿರ್ದೋಷಿಗಳೂ ಯಥಾರ್ಥ ಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯ ಮೂರ್ಖಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿ . . . ಲೋಕದಲ್ಲಿ ಹೊಳೆಯುವ ಜ್ಯೋತಿರ್ಮಂಡಲ”ಗಳಂತಹ ರೀತಿಯಲ್ಲಿ ವರ್ತಿಸುತ್ತಿರಬೇಕೆಂದು ಬುದ್ಧಿಹೇಳುತ್ತದೆ. (ಫಿಲಿಪ್ಪಿ 2:14, 15) ಆದರೆ ದುರ್ಗುಣ ತುಂಬಿದ ಲೋಕದಲ್ಲಿ ನಾವು ಸದ್ಗುಣವನ್ನು ಹೇಗೆ ಉಳಿಸಿಕೊಳ್ಳಬಲ್ಲೆವು? ಹಾಗೆ ಮಾಡುವುದು ನಿಜವಾಗಿಯೂ ಸಾಧ್ಯವೊ?
ದುರ್ಗುಣ ತುಂಬಿದ ರೋಮನ್ ಜಗತ್ತು
6. ಒಂದನೆಯ ಶತಮಾನದ ಕ್ರೈಸ್ತರು ಸದ್ಗುಣವನ್ನು ಉಳಿಸಿಕೊಳ್ಳುವ ಪಂಥಾಹ್ವಾನವನ್ನು ಏಕೆ ಎದುರಿಸಿದರು?
6 ದುರ್ಗುಣವು ರೋಮನ್ ಸಮಾಜದ ಪ್ರತಿಯೊಂದು ಅಂಶದಲ್ಲಿಯೂ ಹರಡಿಕೊಂಡಿದ್ದ ಕಾರಣ, ಸದ್ಗುಣವನ್ನು ಉಳಿಸಿಕೊಳ್ಳುವ ಪಂಥಾಹ್ವಾನವನ್ನು ಪ್ರಥಮ ಶತಮಾನದ ಕ್ರೈಸ್ತರು ಎದುರಿಸಿದರು. ರೋಮನ್ ತತ್ತ್ವಜ್ಞಾನಿ ಸೆನಿಕ ತನ್ನ ಸಮಕಾಲೀನರ ಕುರಿತು ಹೇಳಿದ್ದು: “ಜನರು ದುಷ್ಟತ್ವದ ಭಾರೀ ಪ್ರತಿಸ್ಪರ್ಧೆಯಲ್ಲಿ ಹೋರಾಡುತ್ತಾರೆ. ತಪ್ಪು ಮಾಡುವ ಬಯಕೆ ಪ್ರತಿ ದಿನ ಹೆಚ್ಚಾಗುತ್ತದೆ, ಅದರ ಭಯ ಕಡಮೆಯಾಗುತ್ತದೆ.” ಅವನು ರೋಮನ್ ಸಮಾಜವನ್ನು “ಕಾಡು ಮೃಗಗಳ ಸಮುದಾಯ”ಕ್ಕೆ ಹೋಲಿಸಿದನು. ಆದಕಾರಣ ಮನೋರಂಜನೆಗಾಗಿ ರೋಮನರು ಕ್ರೂರ ಕತ್ತಿಮಲ್ಲರ ಹೋರಾಟಗಳನ್ನು ಮತ್ತು ಲಂಪಟ ನಾಟಕ ಪ್ರದರ್ಶನಗಳನ್ನು ನೋಡಲು ಆತುರಪಟ್ಟದ್ದು ಆಶ್ಚರ್ಯಕರವೇನಲ್ಲ.
7. ಸಾ.ಶ. ಒಂದನೆಯ ಶತಮಾನದಲ್ಲಿ ಅನೇಕರ ಮಧ್ಯೆ ಸಾಮಾನ್ಯವಾಗಿದ್ದ ದುರ್ಗುಣಗಳನ್ನು ಪೌಲನು ಹೇಗೆ ವರ್ಣಿಸಿದನು?
7 ಈ ಕೆಳಗಿನಂತೆ ಬರೆದಾಗ, ಅಪೊಸ್ತಲ ಪೌಲನ ಮನಸ್ಸಿನಲ್ಲಿ ಒಂದನೆಯ ಶತಮಾನದ ಜನರ ತುಚ್ಛ ವರ್ತನೆಯು ಇದ್ದಿರಬಹುದು: “ಅವರು ಇಂಥದನ್ನು ಮಾಡಿದ್ದರಿಂದ ದೇವರು ಅವರನ್ನು ಕೇವಲ ತುಚ್ಛವಾದ ಕಾಮಾಭಿಲಾಷೆಗೆ ಒಪ್ಪಿಸಿದನು. ಹೇಗಂದರೆ ಅವರ ಹೆಂಗಸರು ಸ್ವಾಭಾವಿಕವಾದ ಭೋಗವನ್ನು ಬಿಟ್ಟು ಸ್ವಭಾವಕ್ಕೆ ವಿರುದ್ಧವಾದ ಭೋಗವನ್ನು ಅನುಸರಿಸಿದರು. ಅದರಂತೆ ಗಂಡಸರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರ ಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ ಗಂಡಸರ ಸಂಗಡ ಗಂಡಸರು ಕೇವಲ ಅವಲಕ್ಷಣವಾದದ್ದನ್ನು ನಡಿಸಿ ತಮ್ಮ ಭ್ರಾಂತಿಗೆ ತಕ್ಕ ಫಲವನ್ನು ತಮ್ಮಲ್ಲಿ ಹೊಂದುವವರಾದರು.” (ರೋಮಾಪುರ 1:26, 27) ಅಶುದ್ಧವಾದ ಶಾರೀರಿಕ ಬಯಕೆಗಳನ್ನು ಬೆನ್ನಟ್ಟುವುದರಲ್ಲಿ ನಿರತವಾಗಿದ್ದುದರಿಂದ, ರೋಮನ್ ಸಮಾಜವು ದುರ್ಗುಣಗಳಿಂದ ತುಂಬಿದ್ದಾಗಿ ಪರಿಣಮಿಸಿತು.
8. ಗ್ರೀಕ್ ಮತ್ತು ರೋಮನ್ ಸಮಾಜಗಳಲ್ಲಿ ಅನೇಕ ವೇಳೆ ಮಕ್ಕಳನ್ನು ಹೇಗೆ ಶೋಷಣೆಗೊಳಪಡಿಸಲಾಗುತ್ತಿತ್ತು?
8 ರೋಮನರ ಮಧ್ಯೆ ಸಲಿಂಗಿಕಾಮವು ಎಷ್ಟರ ಮಟ್ಟಿಗೆ ಹರಡಿಕೊಂಡಿತ್ತೆಂಬ ವಿಷಯವನ್ನು ಇತಿಹಾಸವು ಸ್ಪಷ್ಟವಾಗಿ ಹೇಳುವುದಿಲ್ಲ. ಆದರೆ ಅವರು ತಮಗಿಂತಲೂ ಮುಂಚೆ ಇದ್ದ ಗ್ರೀಕರಿಂದ ಪ್ರಭಾವಿತರಾಗಿದ್ದುದು ನಿಸ್ಸಂದೇಹ. ಗ್ರೀಕರ ಮಧ್ಯೆ ಸಲಿಂಗಿಕಾಮವನ್ನು ವ್ಯಾಪಕವಾಗಿ ಆಚರಿಸಲಾಗುತ್ತಿತ್ತು. ಪ್ರಾಯದ ಪುರುಷರು ಎಳೆಯ ಹುಡುಗರನ್ನು ತಮ್ಮ ಪಾಲನೆಯ ಕೆಳಗೆ ಒಂದು ಶಿಕ್ಷಾರ್ಥಿ-ಶಿಕ್ಷಕ ಸಂಬಂಧದಲ್ಲಿ ತೆಗೆದುಕೊಂಡು, ಅವರನ್ನು ಭ್ರಷ್ಟಗೊಳಿಸುವುದು ರೂಢಿಯಾಗಿತ್ತು. ಇದು ಅನೇಕ ವೇಳೆ ಯುವ ಜನರನ್ನು ವಕ್ರ ಲೈಂಗಿಕ ವರ್ತನೆಗಳಿಗೆ ತಿರುಗಿಸುತ್ತಿತ್ತು. ಇಂತಹ ದುರ್ಗುಣ ಮತ್ತು ಮಕ್ಕಳ ಅಪಪ್ರಯೋಗದ ಹಿಂದೆ ಸೈತಾನನೂ ಅವನ ದೆವ್ವಗಳೂ ಇದ್ದರೆಂಬುದು ನಿಸ್ಸಂಶಯ.—ಯೋವೇಲ 3:3; ಯೂದ 6:7.
9, 10. (ಎ) 1 ಕೊರಿಂಥ 6:9, 10, ವಿವಿಧ ರೀತಿಯ ದುರ್ಗುಣಗಳನ್ನು ಯಾವ ವಿಧದಲ್ಲಿ ಖಂಡಿಸಿತು? (ಬಿ) ಕೊರಿಂಥ ಸಭೆಯಲ್ಲಿದ್ದ ಕೆಲವರ ಹಿನ್ನೆಲೆ ಏನಾಗಿತ್ತು, ಮತ್ತು ಅವರಲ್ಲಿ ಯಾವ ಬದಲಾವಣೆ ಸಂಭವಿಸಿತು?
9 ದೈವಿಕ ಪ್ರೇರಣೆಯಿಂದ ಬರೆಯುತ್ತ, ಪೌಲನು ಕೊರಿಂಥದ ಕ್ರೈಸ್ತರಿಗೆ ಹೇಳಿದ್ದು: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ. ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.”—1 ಕೊರಿಂಥ 6:9-11.
10 ಹೀಗೆ ಪೌಲನ ಪ್ರೇರಿತ ಪತ್ರವು “ಜಾರರು . . . ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ”ವೆಂದು ಹೇಳುತ್ತ, ಲೈಂಗಿಕ ದುರಾಚಾರವನ್ನು ಖಂಡಿಸಿತು. ಅನೇಕ ದುರ್ಗುಣಗಳ ಪಟ್ಟಿಯನ್ನು ಮಾಡಿದ ಬಳಿಕ ಪೌಲನು ಹೇಳಿದ್ದು: “ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; . . . ತೊಳೆದುಕೊಂಡಿರಿ.” ದೇವರ ಸಹಾಯದಿಂದ ತಪ್ಪುಗಾರರಿಗೆ ಆತನ ದೃಷ್ಟಿಯಲ್ಲಿ ಶುದ್ಧರಾಗಿ ಪರಿಣಮಿಸುವ ಸಾಧ್ಯತೆಯಿತ್ತು.
11. ತಮ್ಮ ದಿನದ ದುಷ್ಟ ಪರಿಸರದಲ್ಲಿ ಒಂದನೆಯ ಶತಮಾನದ ಕ್ರೈಸ್ತರು ಹೇಗೆ ಬಾಳಿದರು?
11 ಹೌದು, ಕ್ರೈಸ್ತ ಸದ್ಗುಣವು ದುರ್ಗುಣ ತುಂಬಿದ ಒಂದನೆಯ ಶತಮಾನದ ಜಗತ್ತಿನಲ್ಲಿಯೂ ವರ್ಧಿಸಿತು. ವಿಶ್ವಾಸಿಗಳು ‘ತಮ್ಮ ಮನಸ್ಸುಗಳನ್ನು ಪುನರ್ರೂಪಿಸುವ ಮೂಲಕ ರೂಪಾಂತರಗೊಂಡರು.’ (ರೋಮಾಪುರ 12:2, NW) ಅವರು ತಮ್ಮ “ಪೂರ್ವ ಸ್ವಭಾವವನ್ನು” ಬಿಟ್ಟು ‘ಅವರ ಮನಸ್ಸುಗಳನ್ನು ಚುರುಕುಗೊಳಿಸುವ ಶಕ್ತಿಯಲ್ಲಿ ಹೊಸಬರಾಗಿ’ ಮಾಡಲ್ಪಟ್ಟರು. ಹೀಗೆ ಅವರು ಜಗತ್ತಿನ ದುರ್ಗುಣಗಳಿಂದ ಪಲಾಯನಗೈದು, “ನಿಜ ನೀತಿ ಮತ್ತು ಕರ್ತವ್ಯನಿಷ್ಠೆಯಲ್ಲಿ ದೇವರ ಚಿತ್ತಾನುಸಾರವಾಗಿ ಸೃಷ್ಟಿಸಲ್ಪಟ್ಟ ನೂತನ ವ್ಯಕ್ತಿತ್ವವನ್ನು” (NW) ಧರಿಸಿದರು.—ಎಫೆಸ 4:22-24.
ಇಂದಿನ ದುರ್ಗುಣ ತುಂಬಿದ ಜಗತ್ತು
12. ಜಗತ್ತಿನಲ್ಲಿ, 1914ರಿಂದ ಯಾವ ಬದಲಾವಣೆ ಕಂಡುಬಂದಿದೆ?
12 ನಮ್ಮ ದಿನದ ಕುರಿತಾಗಿ ಏನು? ನಾವು ಜೀವಿಸುವ ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ದುರ್ಗುಣ ತುಂಬಿದ್ದಾಗಿದೆ. ವಿಶೇಷವಾಗಿ 1914ರಿಂದ, ಭೌಗೋಲಿಕವಾದ ಒಂದು ನೈತಿಕ ಅಧೋಗತಿ ಕಂಡುಬರುತ್ತದೆ. (2 ತಿಮೊಥೆಯ 3:1-5) ಸದ್ಗುಣ, ನೈತಿಕತೆ, ಗೌರವ, ಮತ್ತು ನೀತಿನಿಯಮಗಳ ಕುರಿತ ಸಾಂಪ್ರದಾಯಿಕ ವಿಚಾರಗಳನ್ನು ತಳ್ಳಿಹಾಕುತ್ತ, ಅನೇಕರು ತಮ್ಮ ಯೋಚನೆಯಲ್ಲಿ ಸ್ವವಿಚಾರಾಸಕ್ತರಾಗಿ, “ಸಕಲ ನೈತಿಕ ಪ್ರಜ್ಞೆಯ ಮೇರೆಯನ್ನು ದಾಟಿ”ದ್ದಾರೆ. (ಎಫೆಸ 4:19, NW) “ನಾವು ನೈತಿಕ ಸಂಬಂಧವಾದದ ಒಂದು ಯುಗದಲ್ಲಿ ಜೀವಿಸುತ್ತಿದ್ದೇವೆ,” ಎಂದು ಹೇಳುತ್ತ ನ್ಯೂಸ್ವೀಕ್ ಪತ್ರಿಕೆಯು ಕೂಡಿಸಿದ್ದು, ಚಾಲ್ತಿಯಲ್ಲಿರುವ ನೈತಿಕ ವಾತಾವರಣವು, “ಸರಿ ಮತ್ತು ತಪ್ಪಿನ ವಿಚಾರಗಳನ್ನೆಲ್ಲ, ವೈಯಕ್ತಿಕ ಅಭಿರುಚಿ, ಭಾವಾತ್ಮಕ ಆದ್ಯತೆ ಅಥವಾ ಸಾಂಸ್ಕೃತಿಕ ಆಯ್ಕೆಗೆ ತಂದುಮುಟ್ಟಿಸಿದೆ.”
13. (ಎ) ಇಂದಿನ ಮನೋರಂಜನೆಯಲ್ಲಿ ಹೆಚ್ಚಿನದ್ದು ದುರ್ಗುಣವನ್ನು ಹೇಗೆ ವರ್ಧಿಸುತ್ತದೆ? (ಬಿ) ಅಯೋಗ್ಯವಾದ ಮನೋರಂಜನೆಯು ವ್ಯಕ್ತಿಗಳ ಮೇಲೆ ಯಾವ ಕೆಟ್ಟ ಪರಿಣಾಮವನ್ನು ಉಂಟುಮಾಡಬಲ್ಲದು?
13 ಒಂದನೆಯ ಶತಮಾನದಲ್ಲಿದ್ದಂತೆಯೇ, ಲೋಲುಪತೆಯ ಮನೋರಂಜನೆಯು ಇಂದು ಸಾಮಾನ್ಯವಾಗಿದೆ. ಟೆಲಿವಿಷನ್, ರೇಡಿಯೊ, ಚಲನ ಚಿತ್ರಗಳು ಮತ್ತು ವಿಡಿಯೊಗಳು, ಕಾಮಾಸಕ್ತಿಯ ವಿಷಯಗಳ ಏಕಪ್ರಕಾರದ ಪ್ರವಾಹವನ್ನು ಹೊರಡಿಸುತ್ತವೆ. ದುರ್ಗುಣಗಳು ಕಂಪ್ಯೂಟರ್ ನೆಟ್ವರ್ಕ್ಗಳೊಳಗೂ ನುಸುಳಿವೆ. ಪ್ರಸ್ತುತ ದಿನದ ಕಂಪ್ಯೂಟರ್ ನೆಟ್ವರ್ಕ್ಗಳಲ್ಲಿ, ಅಶ್ಲೀಲ ವಿಷಯವು ಹೆಚ್ಚೆಚ್ಚು ಅಧಿಕವಾಗಿ ಲಭ್ಯವಾಗುತ್ತಿದೆ, ಮತ್ತು ವಿಭಿನ್ನ ವಯೋಮಿತಿಯ ವ್ಯಕ್ತಿಗಳು ಇದನ್ನು ಉಪಯೋಗಿಸುತ್ತಿದ್ದಾರೆ. ಇದೆಲ್ಲದರ ಪರಿಣಾಮಗಳೇನು? ವಾರ್ತಾಪತ್ರಿಕೆಯ ಒಬ್ಬ ಅಂಕಣಕಾರನು ಹೇಳುವುದು: “ರಕ್ತ, ಅಂಗಹೀನಗೊಳಿಸುವಿಕೆ ಮತ್ತು ಹೊಲಸು ಕಾಮವು ನಮ್ಮ ಜನಪ್ರಿಯ ಸಂಸ್ಕೃತಿಯನ್ನು ತೋಯಿಸುವಾಗ, ನಮಗೆ ರಕ್ತ, ಅಂಗಹೀನಗೊಳಿಸುವಿಕೆ ಮತ್ತು ಹೊಲಸು ಕಾಮವು ರೂಢಿಯಾಗುತ್ತದೆ. ನಾವು ಸಂವೇದನೆಯಿಲ್ಲದವರಾಗಿ ಬೆಳೆಯುತ್ತೇವೆ. ವಿಷಯಗಳು ಕಡಮೆ ಕಡಮೆಯಾಗಿ ನಮ್ಮನ್ನು ಜಿಗುಪ್ಸೆಗೊಳಿಸುವಾಗ, ನೀತಿಭ್ರಷ್ಟತೆಯು ಹೆಚ್ಚೆಚ್ಚು ಸಹ್ಯವಾಗುತ್ತದೆ.”—1 ತಿಮೊಥೆಯ 4:1, 2ನ್ನು ಹೋಲಿಸಿ.
14, 15. ಲೈಂಗಿಕ ನೀತಿಯು ಲೋಕವ್ಯಾಪಕವಾಗಿ ಕೀಳಾಗಿದೆಯೆಂಬುದಕ್ಕೆ ಯಾವ ಪುರಾವೆಯಿದೆ?
14 ದ ನ್ಯೂ ಯಾರ್ಕ್ ಟೈಮ್ಸ್ನಲ್ಲಿನ ಈ ವರದಿಯನ್ನು ಪರಿಗಣಿಸಿರಿ: “25 ವರ್ಷಗಳ ಹಿಂದೆ ಜಿಗುಪ್ಸೆ ಹುಟ್ಟಿಸುವಂತಹದ್ದೆಂದು ಪರಿಗಣಿಸಲಾಗುತ್ತಿದ್ದ ಸಂಗತಿಯು ಈಗ ಅಂಗೀಕಾರಾರ್ಹವಾದ ಬಳಕೆಯಲ್ಲಿರುವ ಏರ್ಪಾಡಾಗಿ ಪರಿಣಮಿಸಿದೆ. [ಅಮೆರಿಕದಲ್ಲಿ] 1980 ಮತ್ತು 1991ರ ನಡುವೆ, ವಿವಾಹವಾಗುವ ಬದಲು ಜೊತೆಯಾಗಿ ಜೀವಿಸುವವರ ಸಂಖ್ಯೆ 80 ಪ್ರತಿಶತಕ್ಕೇರಿತು.” ಇದು ಬರಿಯ ಉತ್ತರ ಅಮೆರಿಕದ ಚಮತ್ಕಾರಿಕ ಘಟನೆಯಲ್ಲ. ಏಷಿಯಾವೀಕ್ ಪತ್ರಿಕೆ ವರದಿಮಾಡುವುದು: “[ಏಷಿಯದ] ದೇಶಗಳಲ್ಲೆಲ್ಲ ಒಂದು ಸಾಂಸ್ಕೃತಿಕ ಚರ್ಚೆ ಜನಪ್ರಿಯವಾಗುತ್ತಿದೆ. ವಿವಾದಾಂಶವು ಸಾಂಪ್ರದಾಯಿಕ ಮೌಲ್ಯಗಳಿಗೆ ಪ್ರತಿಯಾಗಿ ಲೈಂಗಿಕ ಸ್ವಾತಂತ್ರ್ಯವಾಗಿದೆ ಮತ್ತು ಬದಲಾವಣೆಗಾಗಿ ಒತ್ತಡಗಳು ಒಂದೇ ಸಮನೆ ಬೆಳೆಯುತ್ತಿವೆ.” ಅನೇಕ ದೇಶಗಳಲ್ಲಿ ವ್ಯಭಿಚಾರ ಮತ್ತು ವಿವಾಹಪೂರ್ವ ಸಂಭೋಗಗಳನ್ನು ಹೆಚ್ಚೆಚ್ಚಾಗಿ ಅಂಗೀಕರಿಸಲಾಗುತ್ತದೆಂದು ಸಂಖ್ಯಾಸಂಗ್ರಹಣಗಳು ತಿಳಿಸುತ್ತವೆ.
15 ನಮ್ಮ ದಿನಗಳಲ್ಲಿ ಸೈತಾನಸಂಬಂಧಿತ ಚಟುವಟಿಕೆಯು ತೀವ್ರಗೊಳ್ಳುವುದೆಂದು ಬೈಬಲು ಮುಂತಿಳಿಸಿತು. (ಪ್ರಕಟನೆ 12:12) ಆದಕಾರಣ, ದುರ್ಗುಣವು ಅಪಾಯಸೂಚಕ ರೀತಿಯಲ್ಲಿ ಚಾಲ್ತಿಯಲ್ಲಿರುವುದು ನಮ್ಮನ್ನು ಆಶ್ಚರ್ಯಗೊಳಿಸಬಾರದು. ಉದಾಹರಣೆಗೆ, ಮಕ್ಕಳ ಲೈಂಗಿಕ ಶೋಷಣೆಯು ವ್ಯಾಪಕವಾದ ಅನುಪಾತಗಳನ್ನು ತಲಪಿದೆ.a “ಲೋಕದಲ್ಲಿ ಕಾರ್ಯತಃ ಪ್ರತಿಯೊಂದು ದೇಶದಲ್ಲಿ ವ್ಯಾಪಾರ ಸಂಬಂಧವಾದ ಲೈಂಗಿಕ ಶೋಷಣೆಯು ಮಕ್ಕಳಿಗೆ ಹಾನಿಯುಂಟುಮಾಡುತ್ತಿದೆ” ಎಂದು, ವಿಶ್ವಸಂಸ್ಥೆಯ ಮಕ್ಕಳ ನಿಧಿಯು ವರದಿಮಾಡುತ್ತದೆ. ಪ್ರತಿ ವರ್ಷ “ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ಶಿಶು ವೇಶ್ಯಾವಾಟಿಕೆಗೆ ಬಲಾತ್ಕರಿಸಲ್ಪಟ್ಟು, ಲೈಂಗಿಕ ಉದ್ದೇಶಗಳಿಗಾಗಿ ಸಾಗಿಸಲ್ಪಡುತ್ತ ಮಾರಲ್ಪಡುತ್ತಾರೆ ಮತ್ತು ಶಿಶು ಅಶ್ಲೀಲ ಸಾಹಿತ್ಯ ತಯಾರಿಯಲ್ಲಿ ಬಳಸಲ್ಪಡುತ್ತಾರೆಂದು ವರದಿಯುಂಟು.” ಸಲಿಂಗಿಕಾಮವು ಸಹ ಸಾಮಾನ್ಯವಾಗಿದೆ. ಕೆಲವು ರಾಜಕಾರಣಿಗಳು ಮತ್ತು ಧಾರ್ಮಿಕ ನೇತಾರರು ಅದನ್ನೊಂದು “ಅನ್ಯವಿಧದ ಜೀವನ ಶೈಲಿ” ಎಂದು ಪ್ರವರ್ಧಿಸುವುದರಲ್ಲಿ ನಾಯಕತ್ವವನ್ನು ವಹಿಸುತ್ತಾರೆ.
ಜಗತ್ತಿನ ದುರ್ಗುಣಗಳನ್ನು ನಿರಾಕರಿಸುವುದು
16. ಲೈಂಗಿಕ ನೈತಿಕತೆಯ ಸಂಬಂಧದಲ್ಲಿ ಯೆಹೋವನ ಸಾಕ್ಷಿಗಳು ಯಾವ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ?
16 ಲೈಂಗಿಕ ನೈತಿಕತೆಯ ಸ್ವೇಚ್ಫಾಚಾರದ ಮಟ್ಟಗಳನ್ನು ಅನುಮೋದಿಸುವವರೊಂದಿಗೆ ಯೆಹೋವನ ಸಾಕ್ಷಿಗಳು ಸಮ್ಮತಿಸುವುದಿಲ್ಲ. ತೀತ 2:11, 12 ಹೇಳುವುದು: “ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು; ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ವಿಸರ್ಜಿಸಿ . . . ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕಬೇಕೆಂದು ಅದು ನಮಗೆ ಬೋಧಿಸುತ್ತದೆ.” ಹೌದು, ವಿವಾಹಪೂರ್ವ ಸಂಭೋಗ, ವ್ಯಭಿಚಾರ ಮತ್ತು ಸಲಿಂಗಿಕಾಮದ ನಡವಳಿಕೆಗಳಂತಹ ದುರ್ಗುಣಗಳ ಕಡೆಗೆ ನಾವು ನಿಜ ದ್ವೇಷವನ್ನು, ಜಿಗುಪ್ಸೆಯನ್ನು ಬೆಳೆಸುತ್ತೇವೆ.b (ರೋಮಾಪುರ 12:9; ಎಫೆಸ 5:3-5) ಪೌಲನು ಈ ಬುದ್ಧಿವಾದವನ್ನು ಕೊಟ್ಟನು: “ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡ”ಬೇಕು.—2 ತಿಮೊಥೆಯ 2:19.
17. ಮದ್ಯದ ಉಪಯೋಗವನ್ನು ಸತ್ಯ ಕ್ರೈಸ್ತರು ಹೇಗೆ ವೀಕ್ಷಿಸುತ್ತಾರೆ?
17 ಚಿಕ್ಕದೆಂದು ಕಂಡುಬರುವ ದುರ್ಗುಣಗಳ ಕುರಿತ ಲೋಕದ ವೀಕ್ಷಣೆಯನ್ನು ಸತ್ಯ ಕ್ರೈಸ್ತರು ತೊರೆದುಬಿಡುತ್ತಾರೆ. ಉದಾಹರಣೆಗೆ, ಇಂದು ಅನೇಕರು ಮದ್ಯದ ದುರುಪಯೋಗವನ್ನು ವ್ಯಂಗ್ಯ ವಿನೋದದಿಂದ ನೋಡುತ್ತಾರೆ. ಆದರೆ ಯೆಹೋವನ ಜನರು ಎಫೆಸ 5:18, 19ರ ಸಲಹೆಗೆ ಕಿವಿಗೊಡುತ್ತಾರೆ: “ಮದ್ಯಪಾನ ಮಾಡಿ ಮತ್ತರಾಗಬೇಡಿರಿ; ಅದರಿಂದ ಪಟಿಂಗತನವು ಹುಟ್ಟುತ್ತದೆ. . . . ಆದರೆ ಪವಿತ್ರಾತ್ಮಭರಿತ”ರಾಗಿರಿ. ಕ್ರೈಸ್ತನೊಬ್ಬನು ಕುಡಿಯಲು ಆರಿಸಿಕೊಳ್ಳುತ್ತಾನಾದರೆ, ಅವನು ಮಿತವಾಗಿ ಕುಡಿಯುತ್ತಾನೆ.—ಜ್ಞಾನೋಕ್ತಿ 23:29-32.
18. ಕುಟುಂಬ ಸದಸ್ಯರನ್ನು ನೋಡಿಕೊಳ್ಳುವ ವಿಷಯದಲ್ಲಿ ಬೈಬಲ್ ಮೂಲತತ್ತ್ವಗಳು ಯೆಹೋವನ ಸೇವಕರನ್ನು ಹೇಗೆ ಮಾರ್ಗದರ್ಶಿಸುತ್ತವೆ?
18 ಯೆಹೋವನ ಸೇವಕರೋಪಾದಿ ನಾವು, ಒಬ್ಬನ ವಿವಾಹ ಸಂಗಾತಿ ಅಥವಾ ಮಕ್ಕಳ ಕಡೆಗೆ ಬೊಬ್ಬೆಯಿಟ್ಟು ಕಿರಿಚಾಡುವ ಅಥವಾ ನೋಯಿಸುವ ಮಾತುಗಳಿಂದ ದೂಷಿಸುವ ವಿಷಯದಲ್ಲಿ, ಅದು ಅಂಗೀಕಾರಾರ್ಹ ನಡತೆಯೆಂದು ಹೇಳುವ ಲೋಕದಲ್ಲಿರುವ ಕೆಲವರ ವೀಕ್ಷಣವನ್ನೂ ತಳ್ಳಿಹಾಕುತ್ತೇವೆ. ಸದ್ಗುಣ ಮಾರ್ಗದಲ್ಲಿ ನಡೆಯುವರೆ ದೃಢವಾಗಿ ನಿರ್ಣಯಿಸುತ್ತ, ಕ್ರೈಸ್ತ ಪತಿಪತ್ನಿಯರು ಪೌಲನ ಸಲಹೆಯನ್ನು ಅನ್ವಯಿಸಿಕೊಳ್ಳುವರೆ ಜೊತೆಗೂಡಿ ಕೆಲಸಮಾಡುತ್ತಾರೆ: “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ.”—ಎಫೆಸ 4:31, 32.
19. ವ್ಯಾಪಾರ ಜಗತ್ತಿನಲ್ಲಿ ದುರ್ಗುಣವು ಎಷ್ಟು ಚಾಲ್ತಿಯಲ್ಲಿದೆ?
19 ಅಪ್ರಾಮಾಣಿಕತೆ, ವಂಚನೆ, ಸುಳ್ಳಾಡುವಿಕೆ, ಘಾತಕವಾದ ವ್ಯಾಪಾರ ತಂತ್ರಗಳು ಮತ್ತು ಕಳ್ಳತನಗಳು ಸಹ ಇಂದು ಸಾಮಾನ್ಯ. ಸಿಎಫ್ಓ ಎಂಬ ವ್ಯಾಪಾರ ಪತ್ರಿಕೆಯಲ್ಲಿ ಒಂದು ಲೇಖನವು ವರದಿಮಾಡುವುದು: “4,000 ಕಾರ್ಮಿಕರ ಒಂದು ಸಮೀಕ್ಷೆಯು . . . ಉತ್ತರವಿತ್ತವರಲ್ಲಿ 31 ಪ್ರತಿಶತ, ಹಿಂದಿನ ವರ್ಷದಲ್ಲಿ ‘ಗಂಭೀರವಾದ ದುರ್ನಡತೆ’ಗೆ ಸಾಕ್ಷಿಗಳಾಗಿದ್ದರೆಂದು ಕಂಡುಹಿಡಿಯಿತು.” ಇಂತಹ ದುರ್ನಡತೆಯಲ್ಲಿ, ಸುಳ್ಳಾಡುವುದು, ದಾಖಲೆಗಳನ್ನು ತಪ್ಪಾಗಿಸುವುದು, ಲೈಂಗಿಕ ಕಿರುಕುಳ ಮತ್ತು ಕಳ್ಳತನಗಳು ಸೇರಿದ್ದವು. ನಾವು ಯೆಹೋವನ ದೃಷ್ಟಿಯಲ್ಲಿ ನೈತಿಕವಾಗಿ ಶುದ್ಧರಾಗಿ ಉಳಿಯಬೇಕಾದರೆ, ಅಂತಹ ನಡತೆಗಳಿಂದ ದೂರವಿದ್ದು, ನಮ್ಮ ಆರ್ಥಿಕ ವ್ಯವಹಾರಗಳಲ್ಲಿ ನಾವು ಪ್ರಾಮಾಣಿಕರಾಗಿರಬೇಕು.—ಮೀಕ 6:10, 11.
20. ಕ್ರೈಸ್ತರು “ಹಣದಾಸೆ”ಯಿಂದ ಮುಕ್ತರಾಗಿರುವ ಅಗತ್ಯವು ಏಕಿದೆ?
20 ತಾನು ಒಂದು ವ್ಯಾಪಾರದಲ್ಲಿ ದೊಡ್ಡ ಲಾಭವನ್ನು ಗಳಿಸುವುದಾದರೆ, ತನಗೆ ದೇವರ ಸೇವೆಯಲ್ಲಿ ಹೆಚ್ಚು ಸಮಯ ದೊರೆಯಬಹುದೆಂದು ಭಾವಿಸಿದ ಒಬ್ಬ ಮನುಷ್ಯನಿಗೆ ಏನು ಸಂಭವಿಸಿತೆಂದು ಪರಿಗಣಿಸಿರಿ. ಅವನು ಇತರರಿಗೆ, ಅವರ ಭಾವೀ ಲಾಭಗಳನ್ನು ಹೆಚ್ಚು ಅತಿಶಯಿಸಿ ಹೇಳಿ, ಅವರು ಬಂಡವಾಳ ಹೂಡುವಂತೆ ಮಾಡಿದನು. ಆದರೆ ಲಾಭಗಳು ದೊರಕದೆ ಹೋದಾಗ, ನಷ್ಟಭರ್ತಿಮಾಡಲು ಅವನು ಎಷ್ಟು ಅಪಾಯಸಿದ್ಧನಾದನೆಂದರೆ, ಅವನ ಬಳಿ ಇಡಲು ಕೊಡಲ್ಪಟ್ಟಿದ್ದ ಹಣವನ್ನು ಅವನು ಕದ್ದನು. ಅವನ ಕೃತ್ಯಗಳು ಮತ್ತು ಪಶ್ಚಾತ್ತಾಪರಹಿತ ಮನೋಭಾವದ ಕಾರಣ, ಅವನನ್ನು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲಾಯಿತು. ಬೈಬಲಿನ ಎಚ್ಚರಿಕೆಯು ನಿಜವಾಗಿಯೂ ಸತ್ಯವಾಗಿದೆ: “ಐಶ್ವರ್ಯವಂತರಾಗಬೇಕೆಂಬ ಮನಸ್ಸುಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”—1 ತಿಮೊಥೆಯ 6:9, 10.
21. ಲೋಕದಲ್ಲಿ ಅಧಿಕಾರದಲ್ಲಿರುವ ಜನರಲ್ಲಿ ಯಾವ ನಡತೆಯು ಸಾಮಾನ್ಯವಾಗಿದೆ, ಆದರೆ ಕ್ರೈಸ್ತ ಸಭೆಯಲ್ಲಿ ಜವಾಬ್ದಾರಿಯ ಸ್ಥಾನದಲ್ಲಿರುವವರು ಹೇಗೆ ನಡೆದುಕೊಳ್ಳತಕ್ಕದ್ದು?
21 ಅಧಿಕಾರ, ಪ್ರಭಾವಗಳುಳ್ಳ ಲೌಕಿಕ ಜನರು, ಅನೇಕ ವೇಳೆ ಸದ್ಗುಣಗಳಿಲ್ಲದವರಾಗಿದ್ದು, ‘ಅಧಿಕಾರವು ಭ್ರಷ್ಟಗೊಳಿಸುತ್ತದೆ’ ಎಂಬ ಸಾರ್ವತ್ರಿಕ ಸೂತ್ರದ ಸತ್ಯವನ್ನು ಪ್ರದರ್ಶಿಸುತ್ತಾರೆ. (ಪ್ರಸಂಗಿ 8:9) ಕೆಲವು ದೇಶಗಳಲ್ಲಿ, ಲಂಚ ಮತ್ತು ಭ್ರಷ್ಟಾಚಾರಗಳ ಇತರ ರೂಪಗಳು, ನ್ಯಾಯಾಧೀಶರು, ಪೊಲೀಸರು ಮತ್ತು ರಾಜಕಾರಣಿಗಳ ಮಧ್ಯೆ ಒಂದು ಜೀವನರೀತಿಯಾಗಿವೆ. ಆದರೂ, ಕ್ರೈಸ್ತ ಸಭೆಯಲ್ಲಿ ನಾಯಕತ್ವ ವಹಿಸುವವರೊ, ಸದ್ಗುಣಶೀಲರಾಗಿದ್ದು, ಇತರರ ಮೇಲೆ ದಬ್ಬಾಳಿಕೆ ನಡೆಸುವವರಾಗಿರಬಾರದು. (ಲೂಕ 22:25, 26) ಹಿರಿಯರು ಹಾಗೂ ಶುಶ್ರೂಷಾ ಸೇವಕರು “ನೀಚವಾದ ದ್ರವ್ಯಾಶೆ”ಗಾಗಿ ಸೇವೆಮಾಡುವುದಿಲ್ಲ. ಸ್ವಂತ ಶ್ರೀಮಂತಿಕೆಯ ಪ್ರತೀಕ್ಷೆಯಿಂದ ತಮ್ಮ ತೀರ್ಮಾನವನ್ನು ಅಪಪ್ರಯೋಗಿಸುವ ಅಥವಾ ಪ್ರಭಾವಿಸುವ ಯಾವುದೇ ಪ್ರಯತ್ನಗಳ ವಿಷಯದಲ್ಲಿ ಅವರು ಅಬಾಧಿತರಾಗಿರಬೇಕು.—1 ಪೇತ್ರ 5:2; ವಿಮೋಚನಕಾಂಡ 23:8; ಜ್ಞಾನೋಕ್ತಿ 17:23; 1 ತಿಮೊಥೆಯ 5:21.
22. ಮುಂದಿನ ಲೇಖನವು ಏನನ್ನು ಚರ್ಚಿಸುವುದು?
22 ಒಟ್ಟಿನಲ್ಲಿ, ನಮ್ಮ ದುರ್ಗುಣ ತುಂಬಿದ ಜಗತ್ತಿನಲ್ಲಿ ಸದ್ಗುಣವನ್ನು ಉಳಿಸಿಕೊಳ್ಳುವ ಪಂಥಾಹ್ವಾನವನ್ನು ಕ್ರೈಸ್ತರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಆದರೂ, ಸದ್ಗುಣದಲ್ಲಿ ಕೇವಲ ದುಷ್ಟತನದಿಂದ ದೂರವಿರುವುದಕ್ಕಿಂತ ಹೆಚ್ಚಿನ ವಿಷಯಗಳು ಒಳಗೊಂಡಿವೆ. ಸದ್ಗುಣವನ್ನು ಬೆಳೆಸುವುದಕ್ಕೆ ನಿಜವಾಗಿಯೂ ಏನು ಆವಶ್ಯಕವೆಂಬುದನ್ನು ಮುಂದಿನ ಲೇಖನವು ಚರ್ಚಿಸುವುದು.
[ಅಧ್ಯಯನ ಪ್ರಶ್ನೆಗಳು]
a ಅಕ್ಟೋಬರ್ 8, 1993ರ ಅವೇಕ್! ಪತ್ರಿಕೆಯಲ್ಲಿ ಕಂಡುಬರುವ “ನಿಮ್ಮ ಮಕ್ಕಳನ್ನು ಕಾಪಾಡಿರಿ!” ಎಂಬ ಲೇಖನಮಾಲೆಯನ್ನು ನೋಡಿ.
b ಗತಕಾಲಗಳಲ್ಲಿ ಸಲಿಂಗಿಕಾಮದ ಕೃತ್ಯಗಳಲ್ಲಿ ಒಳಗೂಡಿರುವವರು, ಒಂದನೆಯ ಶತಮಾನದಲ್ಲಿ ಕೆಲವರು ಮಾಡಿದಂತೆಯೇ ತಮ್ಮ ವರ್ತನೆಯಲ್ಲಿ ಬದಲಾವಣೆಗಳನ್ನು ಮಾಡಬಲ್ಲರು. (1 ಕೊರಿಂಥ 6:11) ಎಪ್ರಿಲ್ 8, 1995ರ ಎಚ್ಚರ! ಪತ್ರಿಕೆಯ 23-25ನೆಯ ಪುಟಗಳಲ್ಲಿ ಸಹಾಯಕರವಾದ ಮಾಹಿತಿಯು ನೀಡಲ್ಪಟ್ಟಿತ್ತು.
ಪುನರ್ವಿಮರ್ಶೆಗಾಗಿ ವಿಷಯಗಳು
◻ ಯೆಹೋವನು ಕಾನಾನ್ಯರ ನಾಶನವನ್ನು ಏಕೆ ಆಜ್ಞಾಪಿಸಿದನು?
◻ ಯಾವ ದುರ್ಗುಣಗಳು ಒಂದನೆಯ ಶತಮಾನದಲ್ಲಿ ಸಾಮಾನ್ಯವಾಗಿದ್ದವು, ಮತ್ತು ಕ್ರೈಸ್ತರು ಅಂತಹ ಪರಿಸರದಲ್ಲಿ ಹೇಗೆ ಬಾಳಿದರು?
◻ ಜಗತ್ತು 1914ರಿಂದ ಭೌಗೋಲಿಕ ನೈತಿಕ ಅವನತಿಯನ್ನು ನೋಡಿದೆ ಎಂಬುದಕ್ಕೆ ಯಾವ ಪುರಾವೆಯಿದೆ?
◻ ಯಾವ ಸಾಮಾನ್ಯ ದುರ್ಗುಣಗಳನ್ನು ಯೆಹೋವನ ಜನರು ನಿರಾಕರಿಸಬೇಕು?
[ಪುಟ 9 ರಲ್ಲಿರುವ ಚಿತ್ರ]
ಒಂದನೆಯ ಶತಮಾನದ ಕ್ರೈಸ್ತರು ದುರ್ಗುಣ ತುಂಬಿದ ಜಗತ್ತಿನಲ್ಲಿ ಜೀವಿಸಿದರೂ ಸದ್ಗುಣಿಗಳಾಗಿದ್ದರು
[ಪುಟ 10 ರಲ್ಲಿರುವ ಚಿತ್ರ]
ದುರ್ಗುಣವು ಕಂಪ್ಯೂಟರ್ ನೆಟ್ವರ್ಕ್ನ ಒಳಗೂ ಸೇರಿ ಅನೇಕ ಯುವಜನರಿಗೆ ಮತ್ತು ಇತರರಿಗೆ ಅಶ್ಲೀಲ ವಿಷಯಕ್ಕೆ ಪ್ರವೇಶವನ್ನು ಒದಗಿಸುತ್ತದೆ
[ಪುಟ 12 ರಲ್ಲಿರುವ ಚಿತ್ರ]
ಕ್ರೈಸ್ತರು ಸದ್ಗುಣವನ್ನು ಉಳಿಸಿಕೊಳ್ಳಬೇಕು, ಇತರರ ಅಪ್ರಾಮಾಣಿಕ ತಂತ್ರಗಳನ್ನು ಅನುಕರಿಸುವುದಲ್ಲ