ಆಪತ್ತುಗಳ ಒಂದು ಸಮಯದಲ್ಲಿ ರಕ್ಷಿಸಲ್ಪಟ್ಟಿರುವುದು
ಕೊರಿಯದ ಸೋಲ್ನಲ್ಲಿನ ಐದು ಅಂತಸ್ತಿನ ವಿವಿಧ ಸರಕಿನ ಮಳಿಗೆ (ಡಿಪಾರ್ಟ್ಮೆಂಟ್ ಸ್ಟೋರ್)ಯು ಥಟ್ಟನೆ ಕುಸಿದುಬಿದ್ದು, ಅದರ ಒಳಗೆ ನೂರಾರು ಜನರನ್ನು ಸಿಕ್ಕಿಸಿಹಾಕಿತು! ಸಾಧ್ಯವಿರುವಷ್ಟು ಹೆಚ್ಚು ಜೀವಗಳನ್ನು ರಕ್ಷಿಸಲಿಕ್ಕಾಗಿ, ರಕ್ಷಣಾ ದಳದ ಕೆಲಸಗಾರರು ಹಗಲೂ ರಾತ್ರಿ ಶ್ರಮಿಸಿದರು. ದಿನಗಳು ಗತಿಸಿದಂತೆ, ಕಾಂಕ್ರಿಟ್ ಹಾಗೂ ಉಕ್ಕಿನ ದೊಡ್ಡ ರಾಶಿಯಲ್ಲಿ ಹೂತುಹೋಗಿದ್ದ, ಇನ್ನೂ ಬದುಕಿ ಉಳಿದಿರುವ ವ್ಯಕ್ತಿಗಳನ್ನು ಹುಡುಕುವ ಸಂಭವಗಳು ಕಡಿಮೆಯಾಗತೊಡಗಿದವು.
ಎಲ್ಲಾ ನಿರೀಕ್ಷೆಗಳನ್ನು ತೊರೆದಿರುವಾಗಲೇ, ಬೆರಗುಗೊಳಿಸುವಂತಹ ಯಾವುದೋ ಘಟನೆಯು ಸಂಭವಿಸಿತು. ಬಿದ್ದಿರುವ ಇಟ್ಟಿಗೆ ಹೆಂಟೆಗಳ ರಾಶಿಯ ಕೆಳಗಿನಿಂದ, ನಿಶ್ಶಕ್ತ ಅಳಲಿನ ನರಳಾಟವು ಕೇಳಿಬಂತು. 16 ದೀರ್ಘ ದಿನಗಳ ವರೆಗೆ ಜೀವಂತವಾಗಿಯೇ ಹೂಳಲ್ಪಟ್ಟಿದ್ದ 19 ವರ್ಷ ಪ್ರಾಯದ ಒಬ್ಬ ಸ್ತ್ರೀಯನ್ನು ಕಾಪಾಡುವ ಸಲುವಾಗಿ, ರಕ್ಷಣಾ ದಳದವರು ಉದ್ರೇಕಗೊಂಡು ತಮ್ಮ ಬರಿಯ ಕೈಗಳಿಂದಲೇ ಅಗೆದರು. ಕುಸಿದುಬಿದ್ದಿದ್ದ ಎಲಿವೇಟರ್ನ ತೆರಪು ಅವಳ ಮೇಲೆ ಒಂದು ರಕ್ಷಣಾತ್ಮಕ ಕುಳಿಯನ್ನು ರೂಪಿಸಿ, ಬೀಳುತ್ತಿರುವ ಟನ್ನುಗಟ್ಟಲೆ ಕಾಂಕ್ರಿಟ್ನಿಂದ ಅವಳನ್ನು ರಕ್ಷಿಸಿತ್ತು. ವಿಪರೀತವಾಗಿ ನಿರ್ಜಲೀಕರಿಸಿದ್ದು, ಕೊಯ್ತವಾಗಿತ್ತಾದರೂ, ಅವಳು ಮೃತ್ಯುವಿನಿಂದ ಪಾರಾಗಿದ್ದಳು!
ಈ ದಿನಗಳಲ್ಲಿ, ಅದು ಭೂಕಂಪವಾಗಿರಲಿ, ಒಂದು ಪ್ರಚಂಡ ಬಿರುಗಾಳಿಯಾಗಿರಲಿ, ಜ್ವಾಲಾಮುಖಿಯ ಒಂದು ಸ್ಫೋಟನವಾಗಿರಲಿ, ಒಂದು ಅಪಘಾತವಾಗಿರಲಿ, ಇಲ್ಲವೆ ಒಂದು ಕ್ಷಾಮವಾಗಿರಲಿ, ಒಂದಲ್ಲ ಒಂದು ವಿಪತ್ತಿನ ಕುರಿತಾದ ವರದಿಗಳಿಲ್ಲದೆ ಒಂದು ತಿಂಗಳೂ ಗತಿಸುವುದಿಲ್ಲ. ಮತ್ತು ಬಚಾವುಗಳ ಹಾಗೂ ಬದುಕಿ ಉಳಿಯುವಿಕೆಗಳ ಕುರಿತಾದ ಪ್ರೇಕ್ಷಣೀಯ ಕಥೆಗಳು, ವಾರ್ತೆಗಳನ್ನು ಓದುವ, ವೀಕ್ಷಿಸುವ, ಅಥವಾ ಆಲಿಸುವ ಕೋಟಿಗಟ್ಟಲೆ ಜನರ ಆಸಕ್ತಿಯನ್ನು ಕೆರಳಿಸಿ, ಅವರನ್ನು ಆಕರ್ಷಿಸುತ್ತವೆ. ಆದರೂ, ಮುಂಬರುತ್ತಿರುವ ಒಂದು ಆಪತ್ತಿನ—ಮಾನವ ಇತಿಹಾಸದಲ್ಲೇ ಸಂಭವಿಸಿರುವ ಯಾವುದೇ ಆಪತ್ತಿಗಿಂತಲೂ ಹೆಚ್ಚು ಮಹತ್ತರವಾದ ಒಂದು ಆಪತ್ತು—ಕುರಿತಾದ ಎಚ್ಚರಿಕೆಯು, ಒಟ್ಟಿನಲ್ಲಿ ಅಲಕ್ಷಿಸಲ್ಪಟ್ಟಿದೆ. (ಮತ್ತಾಯ 24:21) ಮುಂಬರುತ್ತಿರುವ ಈ ಘಟನೆಯನ್ನು ಬೈಬಲು ಈ ಮಾತುಗಳಲ್ಲಿ ವರ್ಣಿಸುತ್ತದೆ: “ಆಹಾ, ಕೇಡು ಜನಾಂಗದಿಂದ ಜನಾಂಗಕ್ಕೆ ಹರಡುವದು; ದೊಡ್ಡ ಬಿರುಗಾಳಿಯು ಲೋಕದ ಕಟ್ಟಕಡೆಯಿಂದ ಎದ್ದುಬರುವದು. ಆ ದಿನದಲ್ಲಿ ಯೆಹೋವನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ಬಿದ್ದಿರುವರು; ಅವರಿಗಾಗಿ ಯಾರೂ ಗೋಳಾಡರು, ಅವರನ್ನು ಯಾರೂ ಒಟ್ಟುಗೂಡಿಸರು, ಯಾರೂ ಹೂಣಿಡರು, ಭೂಮಿಯ ಮೇಲೆ ಗೊಬ್ಬರವಾಗುವರು.”—ಯೆರೆಮೀಯ 25:32, 33.
ಭಯಚಕಿತಗೊಳಿಸುವ ಮಾತುಗಳು! ಆದರೆ ನೈಸರ್ಗಿಕ ವಿಪತ್ತುಗಳು ಹಾಗೂ ಅಪಘಾತಗಳಿಗೆ ಅಸದೃಶವಾಗಿ, ಈ ಆಪತ್ತು ಗೊತ್ತುಗುರಿಯಿಲ್ಲದ ವಧಿಸುವಿಕೆಯಾಗಿರುವುದಿಲ್ಲ. ವಾಸ್ತವವಾಗಿ, ಬದುಕಿ ಉಳಿಯುವಿಕೆ—ನಿಮ್ಮ ಬದುಕಿ ಉಳಿಯುವಿಕೆ—ಸಾಧ್ಯವಿದೆ!
ಜರೂರಿಯ ಒಂದು ಸಮಯ
ಈ ವಾಸ್ತವಾಂಶವನ್ನು ಸಂಪೂರ್ಣವಾಗಿ ಗ್ರಹಿಸಲಿಕ್ಕಾಗಿ, ಮೊತ್ತಮೊದಲು ಈ ಭೌಗೋಲಿಕ ಆಪತ್ತು ಏಕೆ ಸಂಭವಿಸುವುದೆಂಬುದನ್ನು ಒಬ್ಬನು ಅರ್ಥಮಾಡಿಕೊಳ್ಳಬೇಕು. ವಾಸ್ತವವಾಗಿ, ಮಾನವಕುಲದ ಸಮಸ್ಯೆಗಳಿಗೆ ಇದು ಏಕಮಾತ್ರ ನೈಜ ಪರಿಹಾರವಾಗಿದೆ. ಇಂದು ಕೆಲವು ಜನರಿಗೆ ಮಾತ್ರ ಸುರಕ್ಷೆ ಹಾಗೂ ಭದ್ರತೆಯ ಅನಿಸಿಕೆಯಾಗುತ್ತದೆ. ವಿಜ್ಞಾನದ ಅತ್ಯುತ್ತಮವಾದ ಪ್ರಯತ್ನಗಳ ಎದುರಿನಲ್ಲೂ, ಸೋಂಕುದಾಯಕ ರೋಗಗಳು ಭೂಮಿಯ ಜನಸಂಖ್ಯೆಯನ್ನು ಹಾಳುಮಾಡುತ್ತಾ ಮುಂದುವರಿದಿವೆ. ಧಾರ್ಮಿಕ, ಕುಲಸಂಬಂಧಿತ, ಹಾಗೂ ರಾಜಕೀಯ ಭಿನ್ನತೆಗಳಿಂದ ಫಲಿಸುವ ಯುದ್ಧಗಳು, ಮಾನವ ಜೀವಿತಗಳನ್ನು ಸಾವಿರಗಟ್ಟಲೆಯಲ್ಲಿ ಆಹುತಿತೆಗೆದುಕೊಳ್ಳುತ್ತಿವೆ. ಕ್ಷಾಮವು, ಮುಗ್ಧ ಪುರುಷರು, ಸ್ತ್ರೀಯರು, ಮತ್ತು ಮಕ್ಕಳ ದುರವಸ್ಥೆ ಹಾಗೂ ಕಷ್ಟಾನುಭವಕ್ಕೆ ಹೆಚ್ಚನ್ನು ಕೂಡಿಸುತ್ತದೆ. ನೈತಿಕ ಅವನತಿಯು ಸಮಾಜದ ತಳಪಾಯವನ್ನೇ ಕೊರೆದುಹಾಕುತ್ತದೆ; ಮಕ್ಕಳು ಸಹ ಭ್ರಷ್ಟಗೊಳಿಸಲ್ಪಟ್ಟಿದ್ದಾರೆ.
1,900 ವರ್ಷಗಳ ಹಿಂದೆಯೇ ಬರೆಯಲ್ಪಟ್ಟ ಒಂದು ಬೈಬಲ್ ಪ್ರವಾದನೆಯು, ನಮ್ಮ ಸನ್ನಿವೇಶವನ್ನು ಗಮನಾರ್ಹವಾದ ನಿಷ್ಕೃಷ್ಟತೆಯಿಂದ ವರ್ಣಿಸುತ್ತದೆ. ಅದು ಹೇಳುವುದು: “ಕಡೇ ದಿವಸಗಳಲ್ಲಿ ಸಮಯಗಳು ಅಪಾಯದಿಂದ ತುಂಬಿರುವವು ಎಂಬುದನ್ನು ನೀವು ಗ್ರಹಿಸಬೇಕು.”—2 ತಿಮೊಥೆಯ 3:1, ಜೆ. ಬಿ. ಫಿಲಿಪ್ಸ್ರಿಂದ ಬರೆಯಲ್ಪಟ್ಟ, ದ ನ್ಯೂ ಟೆಸ್ಟಮೆಂಟ್ ಇನ್ ಮಾಡರ್ನ್ ಇಂಗ್ಲಿಷ್; ಮತ್ತಾಯ 24:3-22ನ್ನು ಹೋಲಿಸಿರಿ.
ಪ್ರೀತಿಸ್ವರೂಪಿಯಾದ ದೇವರೊಬ್ಬನು ನಮ್ಮ ಅವಸ್ಥೆಯನ್ನು ತಾತ್ಸಾರಮಾಡುವನೆಂಬುದು ನಿಮಗೆ ಸಮಂಜಸವಾದುದಾಗಿ ತೋರುತ್ತದೊ? ಬೈಬಲು ಹೇಳುವುದು: “ಆತನೇ [“ಸತ್ಯ,” NW] ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; [ಆತನು] ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾಯ 45:18) ಹೌದು, ಸುಂದರವಾದ ಈ ಭೂಗ್ರಹವು ಧ್ವಂಸಗೊಳಿಸಲ್ಪಡುವಂತೆ ಹಾಗೂ ಅದರ ನಿವಾಸಿಗಳೆಲ್ಲರೂ ನಿರ್ನಾಮವಾಗುವಂತೆ ಅನುಮತಿಸುವ ಬದಲು, ದೇವರು ಹಸ್ತಕ್ಷೇಪಮಾಡುವನು. ಪ್ರಶ್ನೆಯೇನೆಂದರೆ, ಆತನು ಅದನ್ನು ಹೇಗೆ ಮಾಡುವನು?
ಜೀವವನ್ನೇ ಆದುಕೊಳ್ಳಿರಿ!
ಕೀರ್ತನೆ 92:7ರಲ್ಲಿ ಬೈಬಲು ಉತ್ತರಿಸುವುದು: “ದುಷ್ಟರು ಹುಲ್ಲಿನಂತೆ ಬೆಳೆಯುವದೂ ಕೆಡುಕರು ಹೂವಿನಂತೆ ಮೆರೆಯುವದೂ ತೀರಾ ಹಾಳಾಗುವದಕ್ಕಾಗಿಯೇ.” ಭೂಮಿಯ ಸಮಸ್ಯೆಗಳಿಗಿರುವ ದೇವರ ಪರಿಹಾರವು, ದುಷ್ಟತನವನ್ನೇ ನಿರ್ಮೂಲಮಾಡುವುದಾಗಿದೆ. ಸಂತೋಷಕರವಾಗಿಯೇ, ಎಲ್ಲ ಜನರನ್ನು ನಿರ್ಮೂಲಮಾಡುವ ಅಗತ್ಯವಿದೆಯೆಂಬುದು ಇದರ ಅರ್ಥವಲ್ಲ. ಕೀರ್ತನೆ 37:34 ನಮಗೆ ಆಶ್ವಾಸನೆ ಕೊಡುವುದು: “ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವದನ್ನು ನೀನು ನೋಡುವಿ.”
ಈ ಮಾತುಗಳು, ಮಾನವಕುಲದ ಮೇಲೆ ಎಂದಾದರೂ ಸಂಭವಿಸಲಿರುವ ಅತ್ಯಂತ ದೊಡ್ಡ ಆಪತ್ತಿನಿಂದ ಪಾರಾಗುವ ಅವಕಾಶವಿದೆ ಎಂಬುದನ್ನು ಸೂಚಿಸುತ್ತವೆ. ದೇವರು ನಮಗೆ ಒಂದು ಆಯ್ಕೆಯನ್ನು ಕೊಟ್ಟಿದ್ದಾನೆ. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಲು ಸಿದ್ಧರಾಗುತ್ತಿದ್ದಾಗ, ಮೋಶೆಯು ಯಾವ ಮಾತುಗಳಿಂದ ಅವರನ್ನು ಪ್ರೋತ್ಸಾಹಿಸಿದನೋ ಆ ಮಾತುಗಳು, ಇಂದು ನಮಗೆ ಸಮಾನವಾಗಿ ಅನ್ವಯವಾಗುತ್ತವೆ: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; . . . ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ.” (ಧರ್ಮೋಪದೇಶಕಾಂಡ 30:19) ಆದರೆ ಒಬ್ಬನು ಕೇವಲ “ಜೀವವನ್ನೇ ಆದು”ಕೊಂಡು, ರಕ್ಷಿಸಲ್ಪಡುವುದು ಹೇಗೆ? ನಿಜ ರಕ್ಷಣೆಯು ನಿಜವಾಗಿಯೂ ಏನನ್ನು ಅರ್ಥೈಸುತ್ತದೆ?
[ಪುಟ 2 ರಲ್ಲಿರುವ ಚಿತ್ರ ಕೃಪೆ]
COVER: Explosion: Copyright © Gene Blevins/Los Angeles Daily News
[ಪುಟ 3 ರಲ್ಲಿರುವ ಚಿತ್ರ ಕೃಪೆ]
Yunhap News Agency/Sipa Press