ಅವರು ‘ಸತ್ಯವನ್ನು ಕೊಂಡು’ಕೊಂಡರು!
“ಸತ್ಯವನ್ನು . . . ಕೊಂಡುಕೋ; ಮಾರಿ ಬಿಡಬೇಡ.” (ಜ್ಞಾನೋಕ್ತಿ 23:23) ವಿವೇಕಿ ಪುರುಷನಾದ ಸೊಲೊಮೋನನು ಹೀಗೆ ಪ್ರೇರೇಪಿಸಿದನು. ಇದನ್ನು ಸಾಮಾನ್ಯಾರ್ಥದಲ್ಲಿ ಸತ್ಯದ ಕುರಿತಾಗಿ ಹೇಳಸಾಧ್ಯವಿದ್ದರೂ, ಇದನ್ನು ವಿಶೇಷವಾಗಿ ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಸತ್ಯದ ವಿಷಯದಲ್ಲಿ ಹೇಳಸಾಧ್ಯವಿದೆ. ಅಂತಹ ಸತ್ಯವು ನಿತ್ಯಜೀವಕ್ಕೆ ನಡಿಸಬಲ್ಲದು! (ಯೋಹಾನ 17:3, 17) ಆದರೂ, ಅಂತಹ ಸತ್ಯವನ್ನು ಬೆಲೆಯಿಲ್ಲದೆ ಪಡೆದುಕೊಳ್ಳಸಾಧ್ಯವಿಲ್ಲವೆಂಬುದನ್ನು ಗಮನಿಸಿರಿ. ಒಬ್ಬನು ಅದನ್ನು ‘ಕೊಂಡುಕೊಳ್ಳ’ಲು, ಅಂದರೆ ಅದನ್ನು ಪಡೆದುಕೊಳ್ಳಲಿಕ್ಕಾಗಿ ಏನನ್ನಾದರೂ ತ್ಯಾಗಮಾಡಲು ಅಥವಾ ಬಿಟ್ಟುಕೊಡಲು ಸಿದ್ಧಮನಸ್ಸುಳ್ಳವನಾಗಿರಬೇಕು. (ಹೋಲಿಸಿ ಮತ್ತಾಯ 13:45, 46.) ಒಟ್ಟಿನಲ್ಲಿ, ಜನರು ಹಾಗೆ ಮಾಡಲು ಸಿದ್ಧಮನಸ್ಸುಳ್ಳವರಾಗಿರುವುದಿಲ್ಲ. ಆದರೆ ಅನೇಕ ದೇಶಗಳಲ್ಲಿ, ಹೆಚ್ಚುತ್ತಿರುವ ಸಂಖ್ಯೆಗಳ ಧೈರ್ಯಶಾಲಿ ಜನರು ಬೈಬಲ್ ಸತ್ಯವನ್ನು—ಅನೇಕವೇಳೆ ಭಾರಿ ವೈಯಕ್ತಿಕ ಬೆಲೆಯನ್ನು ತೆತ್ತು—ಕೊಂಡುಕೊಳ್ಳುತ್ತಿದ್ದಾರೆ.
ಉದಾಹರಣೆಗಾಗಿ, ಪಶ್ಚಿಮ ಆಫ್ರಿಕ ದೇಶದ ಘಾನದಲ್ಲಿನ ಯೆಹೋವನ ಸಾಕ್ಷಿಗಳನ್ನು ತೆಗೆದುಕೊಳ್ಳಿರಿ. 1989ರ ಜೂನ್ ತಿಂಗಳಷ್ಟಕ್ಕೆ ಆ ದೇಶದಲ್ಲಿ, ಬೈಬಲ್ ಸತ್ಯವನ್ನು ಸ್ವೀಕರಿಸಿದ್ದ ಮತ್ತು ಅದನ್ನು ಇತರರೊಂದಿಗೆ ಸಕ್ರಿಯವಾಗಿ ಹಂಚಿಕೊಳ್ಳುತ್ತಿದ್ದ 34,000ಕ್ಕಿಂತಲೂ ಹೆಚ್ಚು ವ್ಯಕ್ತಿಗಳಿದ್ದರು. ಅನಂತರ, ಸಾರ್ವಜನಿಕ ಸಾರುವ ಕಾರ್ಯದ ಮೇಲೆ ಕಾನೂನುಬದ್ಧ ನಿರ್ಬಂಧಗಳು ಹಾಕಲ್ಪಟ್ಟವು. ಆದರೂ, ಕಾನೂನುಬದ್ಧ ಪ್ರತಿಬಂಧಗಳಿದ್ದರೂ, ಪ್ರಾಮಾಣಿಕ ಹೃದಯದ ಜನರು ‘ಸತ್ಯವನ್ನು ಕೊಂಡು’ಕೊಳ್ಳುವುದನ್ನು ಮುಂದುವರಿಸಿದರು. ಆ ನಿರ್ಬಂಧಗಳು, ಅಕ್ಟೋಬರ್ 31, 1991ರಲ್ಲಿ ಅಂತ್ಯಗೊಂಡವು, ಮತ್ತು 1995ರ ಮಧ್ಯಭಾಗದಷ್ಟಕ್ಕೆ—ಆ ನಿರ್ಬಂಧಗಳನ್ನು ತೆಗೆದುಹಾಕಿದ ಕೇವಲ ಮೂರುವರೆ ವರ್ಷಗಳ ಬಳಿಕ—ಘಾನದಲ್ಲಿ ಯೆಹೋವನ ಸಕ್ರಿಯ ಸಾಕ್ಷಿಗಳ ಸಂಖ್ಯೆಯು 46,104ಕ್ಕೆ ಏರಿತ್ತು! ಮತ್ತು ಈ ವರ್ಷ ಆ ಸಂಖ್ಯೆಯು 52,800ಕ್ಕಿಂತಲೂ ಹೆಚ್ಚಿನ ಸಂಖ್ಯೆಗೆ ಬೆಳೆದಿದೆ.
ದೇವರ ವಾಕ್ಯದ ಸತ್ಯದ ಕಡೆಗೆ ಜನರನ್ನು ಸೆಳೆದಿರುವ ವಿಷಯವು ಯಾವುದು? ‘ಸತ್ಯವನ್ನು ಕೊಂಡುಕೊಳ್ಳ’ಲು ಕೆಲವರು ಯಾವ ತ್ಯಾಗಗಳನ್ನು ಮಾಡಬೇಕಾಯಿತು? ಇದಕ್ಕೆ ಉತ್ತರವಾಗಿ, ಘಾನದ ಮೂವರು ಕ್ರೈಸ್ತರ ಅನುಭವಗಳನ್ನು ನಾವು ನೋಡೋಣ.
ಬೈಬಲ್ ಬೋಧನೆಗಳಿಂದ ಆಕರ್ಷಿಸಲ್ಪಟ್ಟದ್ದು
ಪ್ರಥಮವಾಗಿ ನಾವು ತನ್ನ 20ಗಳ ಆದಿಭಾಗದಲ್ಲಿರುವ ಒಬ್ಬ ಸ್ತ್ರೀಯನ್ನು ಪರಿಗಣಿಸೋಣ. ಆಕೆ ತಂದೆಯು ಪಾದ್ರಿಯಾಗಿದ್ದನಾದರೂ, ಆಕೆ ತನ್ನ ತಂದೆಯ ಧರ್ಮವನ್ನು ಬಿಟ್ಟುಬಿಡಲು ಆರಿಸಿಕೊಂಡಳು. ಕಾರಣವೇನು? ಸತ್ಯಕ್ಕಾಗಿರುವ ಅವಳ ಪ್ರೀತಿಯೇ.
ಆಕೆ ಒಮ್ಮೆ ವಿವರಿಸಿದ್ದು: “ಸಾಕ್ಷಿಗಳು, ತಮ್ಮ ಮನೆಯಿಂದ ಮನೆಯ ಭೇಟಿಗಳನ್ನು ಮಾಡುತ್ತಿರುವಾಗ, ನಮ್ಮ ಮನೆಗೆ ಬರುತ್ತಿದ್ದರು. ಅವರೊಂದಿಗಿನ ಕೆಲವೊಂದು ಚರ್ಚೆಗಳ ಬಳಿಕ, ಅವರೇನನ್ನು ಕಲಿಸುತ್ತಿದ್ದರೋ ಅದು ಬೈಬಲಿನಲ್ಲಿ ಚೆನ್ನಾಗಿ ಆಧಾರಿತವಾಗಿತ್ತೆಂಬುದನ್ನು ನಾನು ಗ್ರಹಿಸಿದೆ. ತ್ರಯೈಕ್ಯ, ನರಕಾಗ್ನಿ, ಪ್ರಾಣದ ಅಮರತ್ವ, ಮತ್ತು ವಿಶೇಷವಾಗಿ ಭಕ್ತಿಚಿಕಿತ್ಸೆಯಂತಹ ವಿಷಯಗಳ ಕುರಿತು ನಾನು ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಸಿದ್ಧಾಂತಗಳು ಬೈಬಲಿನಲ್ಲಿವೆಯೆಂದು ನಾನು ಬಲವಾಗಿ ನಂಬಿದ್ದೆ. ಆದರೆ, ಇದು ಸತ್ಯವಲ್ಲವೆಂಬುದನ್ನು ಗ್ರಹಿಸುವಂತೆ ಆ ಸಾಕ್ಷಿಗಳು ನನಗೆ ಸಹಾಯಮಾಡಿದರು.”—ಅಂತಹ ವಿಷಯಗಳ ಕುರಿತ ಬೈಬಲಿನ ದೃಷ್ಟಿಕೋನದ ಸೂಚನೆಗಾಗಿ, ದಯವಿಟ್ಟು ಮಾರ್ಕ 13:32; ರೋಮಾಪುರ 6:23; ಅ. ಕೃತ್ಯಗಳು 10:40; ಮತ್ತು 1 ಕೊರಿಂಥ 13:8-10ನ್ನು ನೋಡಿರಿ.
ಆ ಯುವ ಸ್ತ್ರೀ ಕೂಡಿಸಿದ್ದು: “ಆದರೂ, ನನ್ನ ಕುಟುಂಬದಿಂದ, ವಿಶೇಷವಾಗಿ ನನ್ನ ತಂದೆಯಿಂದ ಬಲವಾದ ವಿರೋಧವಿತ್ತು. ನನ್ನನ್ನು ದಾರಿತಪ್ಪಿಸಲಾಗುತ್ತಿದೆಯೆಂದು ಅವರಿಗನಿಸಿತು. ಆದಾಗಲೂ, ನಾನು ಯೆಹೋವನ ಸಾಕ್ಷಿಗಳಿಂದ ಏನನ್ನು ಕಲಿಯುತ್ತಿದ್ದೆನೊ ಅದು ಸತ್ಯವಾಗಿತ್ತೆಂದು ನನಗೆ ತಿಳಿದಿತ್ತು. ಈ ವಿಷಯಗಳನ್ನು ನಾನು ನನ್ನ ತಂದೆಗೆ ಬೈಬಲಿನಿಂದ ಪರಿಚಯಿಸಲು ಪ್ರಯತ್ನಿಸಿದೆ, ಆದರೆ ಅವರು ಕಿವಿಗೊಡುತ್ತಿರಲಿಲ್ಲ. ವಾಸ್ತವದಲ್ಲಿ, ವಿರೋಧವು ತೀವ್ರಗೊಂಡಿತು.
“ಆದರೂ ನಾನು ಎದೆಗುಂದಲಿಲ್ಲ. ಕೇವಲ ಸತ್ಯ ಜ್ಞಾನವು ಪ್ರಮೋದವನದಲ್ಲಿನ ನಿತ್ಯಜೀವಕ್ಕೆ ನಡಿಸುವದೆಂದು ನನಗೆ ತಿಳಿದಿತ್ತು, ಮತ್ತು ನಾನು ಅದನ್ನು ಬಿಡದಿರಲು ದೃಢಸಂಕಲ್ಪವುಳ್ಳವಳಾಗಿದ್ದೆ. ನಾನು ಎದುರಿಸುತ್ತಿದ್ದ ಸಮಸ್ಯೆಗಳ ಕುರಿತಾಗಿ ಸ್ಥಳಿಕ ಸಾಕ್ಷಿಗಳು ಕೇಳಿಸಿಕೊಂಡಾಗ, ಅವರು ನನಗೆ ಪ್ರೀತಿಪೂರ್ವಕವಾಗಿ ಸಹಾಯಮಾಡಿ, ನನ್ನನ್ನು ಉತ್ತೇಜಿಸಿದರು ಮತ್ತು ನಿರ್ದಿಷ್ಟ ಮೂಲಭೂತ ಆವಶ್ಯಕತೆಗಳನ್ನು ಒದಗಿಸಿದರು. ಇದು ನನಗೆ, ಯೋಹಾನ 13:35ರಲ್ಲಿ ಕಂಡುಬರುವ ಯೇಸುವಿನ ಮಾತುಗಳ ಮಹತ್ವವನ್ನು ತಿಳಿದುಕೊಳ್ಳಲು ಸಹಾಯಮಾಡಿತು. ‘ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.’ ಯೆಹೋವನ ಸಾಕ್ಷಿಗಳು ಸತ್ಯ ಧರ್ಮವನ್ನು ಆಚರಿಸುತ್ತಾರೆಂಬ ನನ್ನ ನಿಶ್ಚಿತಾಭಿಪ್ರಾಯವು ಗಾಢವಾಯಿತು. ನಾನು ನನ್ನ ಜೀವಿತವನ್ನು ಹೆಚ್ಚು ಉತ್ತಮವಾಗಿ ಬದಲಾಯಿಸಿದ್ದೇನೆಂಬುದನ್ನು ತದನಂತರ ನನ್ನ ಹೆತ್ತವರು ಗಮನಿಸಿದಾಗ, ಅವರೇನನ್ನು ನೋಡಿದರೊ ಅದನ್ನು ಅವರು ಇಷ್ಟಪಟ್ಟರು ಮತ್ತು ನನ್ನ ಕಡೆಗಿನ ಅವರ ಮನೋಭಾವವು ಬದಲಾಯಿತು—ಎಷ್ಟೆಂದರೆ, ನನ್ನ ತಂದೆಯವರು, ಸಾಕ್ಷಿಗಳು ನನ್ನ ಅಣ್ಣನೊಂದಿಗೆ ಬೈಬಲನ್ನು ಅಭ್ಯಾಸಿಸುವಂತೆ ಕೇಳಿಕೊಂಡರು!”
ಸತ್ಯವನ್ನು ತನಗೇ ರುಜುಪಡಿಸಿಕೊಳ್ಳುವುದು
ಸಾಕ್ಷಿ ಹೆತ್ತವರಿಂದ ಬೆಳೆಸಲ್ಪಟ್ಟಿರುವ ಕೆಲವು ಎಳೆಯರಿಗೂ ‘ಸತ್ಯವನ್ನು ಕೊಂಡುಕೊಳ್ಳು’ವುದು ಒಂದು ಪಂಥಾಹ್ವಾನವಾಗಿದೆ. ಕೆಲವು ಯುವ ಜನರು ಬೈಬಲಿನ ಸತ್ಯವನ್ನು ಮಾಮೂಲಾಗಿ ತೆಗೆದುಕೊಳ್ಳುವ ಪ್ರವೃತ್ತಿಯುಳ್ಳವರಾಗಿದ್ದಾರೆ. ಅವರು ಅಂತಹ ಸತ್ಯಗಳನ್ನು ತಮ್ಮದಾಗಿಸಿಕೊಳ್ಳಲು ತಪ್ಪಿಹೋಗುವಲ್ಲಿ, ಅವರ ನಂಬಿಕೆಯು ಬಲಹೀನವಾದದ್ದು, ಮೇಲುಮೇಲಿನದ್ದಾಗಿರುತ್ತದೆ. (ಮತ್ತಾಯ 13:20, 21ನ್ನು ಹೋಲಿಸಿರಿ.) ನತಾನ್ಯೆಲ್ ಎಂಬ ಹೆಸರಿನ, ತನ್ನ 30ಗಳಲ್ಲಿರುವ ಘಾನದ ಒಬ್ಬ ಪುರುಷನು, ಅವನು ಇನ್ನೂ ಯುವಪ್ರಾಯದವನಾಗಿದ್ದಾಗ ‘ಸತ್ಯವನ್ನು ಕೊಂಡು’ಕೊಂಡ ವಿಧವನ್ನು ತಿಳಿಸುತ್ತಾನೆ.
ಅವನು ಜ್ಞಾಪಿಸಿಕೊಳ್ಳುವುದು: “ನಾನು ಒಬ್ಬ ಶಿಶುವಾಗಿದ್ದಾಗಿನಿಂದ, ನನ್ನ ಹೆತ್ತವರು ನನಗೆ ಬೈಬಲನ್ನು ಕಲಿಸಿದರು. ಬೆಳೆಯುತ್ತಾ ಹೋದಂತೆ, ನಾನು ಅವರೊಂದಿಗೆ ಸಾರುವ ಕಾರ್ಯದಲ್ಲಿ ಜೊತೆಗೂಡುತ್ತಿದ್ದೆನಾದರೂ ನಾನು ಒಬ್ಬ ಸಾಕ್ಷಿಯಾಗಲು ನಿಜವಾಗಿಯೂ ನಿರ್ಣಯಿಸಿರಲಿಲ್ಲ. ಸಕಾಲದಲ್ಲಿ, ಸ್ವತಃ ನನಗಾಗಿ ನಾನು ಬೈಬಲನ್ನು ಪರೀಕ್ಷಿಸಬೇಕೆಂಬುದನ್ನು ನಾನು ಗ್ರಹಿಸಲಾರಂಭಿಸಿದೆ.
“ಪ್ರಥಮವಾಗಿ, ಧರ್ಮದ ಬೇರೆ ಯಾವುದೇ ಪವಿತ್ರ ಪುಸ್ತಕ ಅಲ್ಲ ಬದಲಾಗಿ ಕೇವಲ ಬೈಬಲ್ ದೇವರ ವಾಕ್ಯವಾಗಿದೆಯೆಂಬ ವಿಷಯದಲ್ಲಿ ನನಗೆ ಮನದಟ್ಟಾಗಬೇಕಿತ್ತು. ವೈಯಕ್ತಿಕ ಅಭ್ಯಾಸದ ಮೂಲಕ, ನಿಷ್ಕೃಷ್ಟವಾಗಿ ನೆರವೇರಿದಂತಹ ಅನೇಕ ಸ್ಪಷ್ಟವಾದ ಪ್ರವಾದನೆಗಳನ್ನು ಹೊಂದಿರುವ ಏಕಮಾತ್ರ ಪವಿತ್ರ ಪುಸ್ತಕ ಅದಾಗಿದೆಯೆಂಬುದನ್ನು ನಾನು ಕಲಿತೆ. ಬೈಬಲಿನಲ್ಲಿ ಹಲವಾರು ವೈಜ್ಞಾನಿಕ ಸತ್ಯಗಳು ಅಡಕವಾಗಿವೆಯೆಂಬುದನ್ನೂ ನಾನು ಕಲಿತೆ—ದೃಷ್ಟಾಂತಕ್ಕಾಗಿ, ಭೂಮಿಯು ‘ಯಾವ ಆಧಾರವೂ ಇಲ್ಲದೆ ತೂಗುತ್ತಿದೆ.’ (ಯೋಬ 26:7) ವಿಜ್ಞಾನಿಗಳಿಗೆ ನಮ್ಮ ಸೌರವ್ಯೂಹದ ಕುರಿತಾಗಿ ತಿಳಿಯುವ ಸಾವಿರಾರು ವರ್ಷಗಳ ಮುಂಚೆಯೇ ಈ ಮಾತುಗಳು ಬರೆಯಲ್ಪಟ್ಟಿದ್ದವು. ಮನುಷ್ಯರು ಅಂತಹ ವಿಷಯಗಳನ್ನು ಬರೆಯುವಂತೆ ದೇವರು ಮಾತ್ರವೇ ಪ್ರೇರಿಸಸಾಧ್ಯವಿತ್ತು!a
“ಮುಂದಕ್ಕೆ, ಬೈಬಲಿನಲ್ಲಿ ಕಲಿಸಲ್ಪಟ್ಟಿರುವ ಸತ್ಯಗಳನ್ನು ಯಾವ ಧಾರ್ಮಿಕ ಸಂಸ್ಥೆಯು ಕಲಿಸುತ್ತದೆ ಮತ್ತು ಆಚರಿಸುತ್ತದೆ ಎಂಬುದನ್ನು ನಾನು ಕಂಡುಹಿಡಿಯಲು ಬಯಸಿದೆ. ಹೆಚ್ಚಿನ ಧರ್ಮಗಳು ನರಕಾಗ್ನಿ, ತ್ರಯೈಕ್ಯ, ಮತ್ತು ಮೃತ್ಯುವನ್ನು ಪಾರಾಗುವ ಒಂದು ಅಮರ ಪ್ರಾಣದ ಕುರಿತಾಗಿ ಕಲಿಸುತ್ತವೆ. ಆದರೆ ಈ ಸಿದ್ಧಾಂತಗಳು ನನಗೆ ಅರ್ಥವಾಗುವ ಸಂಗತಿಗಳಾಗಿರಲಿಲ್ಲ. ನಾನು ಹೀಗೆ ತರ್ಕಿಸಿದೆ: ಒಂದು ಶಿಕ್ಷೆಯೋಪಾದಿ, ತನ್ನ ಮಗುವಿನ ಕೈಯನ್ನು ಕುದಿಯುತ್ತಿರುವ ನೀರಿನ ಪಾತ್ರೆಯಲ್ಲಿಡುವವನು ಒಬ್ಬ ದುಷ್ಟ ತಂದೆ ಆಗಿರುವುದಿಲ್ಲವೊ? ಹಾಗಿರುವಾಗ, ಪ್ರೀತಿಯ ದೇವರೊಬ್ಬನು, ತನ್ನ ಮಕ್ಕಳನ್ನು ಒಂದು ಅಗ್ನಿಮಯ ನರಕದಲ್ಲಿ ಹಾಕಿ, ಅವರು ನರಳುವಂತೆ ಹೇಗೆ ಬಿಡಸಾಧ್ಯವಿದೆ? ಯೆಹೋವನ ಸಾಕ್ಷಿಗಳಾದರೋ, ರೋಮಾಪುರ 6:23ರಂತಹ ಬೈಬಲ್ ವಚನಗಳಿಗೆ ಹೊಂದಿಕೆಯಲ್ಲಿ ಕಲಿಸುತ್ತಾರೆ. ಅದು ಹೇಳುವುದು: ‘ಪಾಪವು ಕೊಡುವ ಸಂಬಳ ಮರಣ’—ಯಾವುದೊ ಅಗ್ನಿಮಯ ನರಕವನ್ನಲ್ಲ. ಇದು ನನಗೆ ಅರ್ಥವಾಗುವಂತಹ ಸಂಗತಿಯಾಗಿತ್ತು.
“ಯೆಹೋವನ ಸಾಕ್ಷಿಗಳು, ತಮ್ಮ ಎಲ್ಲ ಸದಸ್ಯರು ಬೈಬಲ್ ಮಟ್ಟಗಳಿಗನುಸಾರ ಜೀವಿಸುವುದನ್ನು ಅವಶ್ಯಪಡಿಸುತ್ತಾರೆ, ಮತ್ತು ಪಶ್ಚಾತ್ತಾಪಪಡದೆ ಪಾಪವನ್ನು ಆಚರಿಸುವವರೆಲ್ಲರನ್ನು ಅವರು ಬಹಿಷ್ಕರಿಸುತ್ತಾರೆಂಬುದನ್ನು ನಾನು ಗಮನಿಸಿದೆ. ಇದೆಲ್ಲದರ ನೋಟದಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಸತ್ಯವಿದೆಯೆಂಬ ತೀರ್ಮಾನಕ್ಕೆ ಬಂದೆ, ಮತ್ತು ನಾನು ಅವರಲ್ಲಿ ಒಬ್ಬನಾಗುವ ವೈಯಕ್ತಿಕ ನಿರ್ಣಯವನ್ನು ಮಾಡಿದೆ. ಒಬ್ಬ ಸಾಕ್ಷಿಯಾಗಿ ದೀಕ್ಷಾಸ್ನಾನಕ್ಕೆ ಅರ್ಹನಾಗಲು ನಾನು ಕಷ್ಟಪಟ್ಟು ಕೆಲಸಮಾಡಿದೆ.”—1 ಕೊರಿಂಥ 5:11-13.
ಕ್ರೈಸ್ತ ಹೆತ್ತವರಿಂದ ಬೆಳೆಸಲ್ಪಟ್ಟ ಯುವ ಜನರು ಕೂಡ, ‘ಸತ್ಯವನ್ನು ಕೊಂಡುಕೊಳ್ಳ’ಬೇಕೆಂಬುದನ್ನು ನತಾನ್ಯೇಲನ ಅನುಭವವು ದೃಷ್ಟಾಂತಿಸುತ್ತದೆ. ಅವರು ಸಭಾ ಕೂಟಗಳನ್ನು ಕೇವಲ ಅನಾಸಕ್ತರಾಗಿ ಹಾಜರಾಗುತ್ತಿರಬಾರದು. ಪ್ರಾಚೀನ ಬೆರೋಯದವರಂತೆ, ಅವರು “ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸ”ಬೇಕು. (ಅ. ಕೃತ್ಯಗಳು 17:11) ಇದಕ್ಕೆ ಸಮಯ ಮತ್ತು ಪ್ರಯತ್ನ ಬೇಕಾಗುತ್ತದೆ, ಆದರೆ ಅದು ದೃಢವಾದ ನಂಬಿಕೆ ಮತ್ತು ಮನಗಾಣಿಕೆಯಲ್ಲಿ ಫಲಿಸಬಲ್ಲದು.—ಎಫೆಸ 3:17-19ನ್ನು ಹೋಲಿಸಿರಿ.
ಸುಳ್ಳು ಧರ್ಮದಿಂದ ಭ್ರಮನಿರಸನಗೊಳಿಸಲ್ಪಟ್ಟದ್ದು
ಗಾಡ್‌ವಿನ್ ಎಂಬ ಹೆಸರಿನ ಘಾನದ ಒಬ್ಬ ಪುರುಷನು, ಪ್ರೆಸ್ಬೀಟೇರಿಯನ್ ಚರ್ಚ್ ಮತ್ತು ಮೆಸಾನಿಕ್ ಲಾಡ್ಜ್ ಅನ್ನು ಬಿಟ್ಟಾಗ ಬಹುಮಟ್ಟಿಗೆ 70 ವರ್ಷದವನಾಗಿದ್ದನು. ಗಾಡ್‌ವಿನ್ ಹೇಳುವುದು: “ಆಕ್ಷೇಪಣೀಯವೆಂದು ನಾನು ಕಂಡುಕೊಂಡ ವಿಷಯಗಳು ಚರ್ಚಿನಲ್ಲಿ ನಡೆಯುತ್ತಿದ್ದವು. ಉದಾಹರಣೆಗಾಗಿ, ಅಲ್ಲಿ ತುಂಬ ಒಳಜಗಳವಿತ್ತು, ಮತ್ತು ಅದು ಈಗಲೂ ನಡೆಯುತ್ತಾ ಇದೆ. ಶಾಂತಿ ಮತ್ತು ವ್ಯವಸ್ಥೆಯನ್ನು ಪುನಸ್ಸ್ಥಾಪಿಸಲು ಕೆಲವೊಮ್ಮೆ ಪೊಲೀಸರು ಬರಬೇಕಾಗುತ್ತಿತ್ತು! ಇದು ಕ್ರಿಸ್ತನ ಹಿಂಬಾಲಕರಿಗೆ ಉಚಿತವಲ್ಲವೆಂದು ನಾನು ನೆನಸಿದೆ. ಅನಂತರ ಒಬ್ಬ ಜೊತೆಪ್ರೆಸ್ಬೀಟೇರಿಯನ್ ಮತ್ತು ನನ್ನ ಮಧ್ಯೆ ಒಂದು ಸಮಸ್ಯೆ ಬೆಳೆಯಿತು. ಒಂದು ಸಾರ್ವಜನಿಕ ನ್ಯಾಯಾಲಯವು ಮೊಕದ್ದಮೆಯನ್ನು ಕೇಳಿ, ಆ ಮನುಷ್ಯನು ಅಪರಾಧಿಯೆಂಬ ತೀರ್ಪುಕೊಟ್ಟಿತು. ಆದರೆ ಆ ಚರ್ಚಿನ ಪಾದ್ರಿಯು, ಅನ್ಯಾಯದಿಂದ ಈ ಮನುಷ್ಯನ ಪಕ್ಷಹಿಡಿದು, ಇಡೀ ಸಭೆಯ ಮುಂದೆ ನನ್ನನ್ನು ದೂಷಿಸಲು ಪ್ರಯತ್ನಿಸಿದನು! ಈ ವಿಷಯದ ಕುರಿತಾಗಿ ನಾನು ಮುಚ್ಚುಮರೆಯಿಲ್ಲದೆ ಅವನಿಗೆ ನನ್ನ ಅಭಿಪ್ರಾಯವನ್ನು ತಿಳಿಸಿದೆ ಮತ್ತು ಚರ್ಚಿನಿಂದ ಹೊರನಡೆದೆ—ಮುಂದೆಂದೂ ಅಲ್ಲಿಗೆ ಹಿಂದಿರುಗಿ ಹೋಗಲಿಲ್ಲ.
“ಸ್ವಲ್ಪ ಸಮಯ ಗತಿಸಿತು, ಮತ್ತು ಯೆಹೋವನ ಸಾಕ್ಷಿಗಳು ನನ್ನ ಮನೆಯನ್ನು ಸಂದರ್ಶಿಸಿದರು. ದೇವರ ಕುರಿತಾಗಿ ಮಾತಾಡುವ ಜನರನ್ನು ನಾನು ತಿರಸ್ಕರಿಸಲು ಬಯಸದಿದ್ದ ಕಾರಣಕ್ಕೋಸ್ಕರ ಮಾತ್ರ ನಾನು ಆರಂಭದಲ್ಲಿ ಕಿವಿಗೊಟ್ಟೆ. ಆದರೆ ನಾನು ಅನೇಕ ದಶಕಗಳಿಂದ ಒಬ್ಬ ಪ್ರೆಸ್ಬಿಟೇರಿಯನ್ ಆಗಿದ್ದರೂ, ಬೈಬಲಿನ ಕುರಿತಾಗಿ ನನಗೆ ತಿಳಿದಿರದ ಅನೇಕ ಸಂಗತಿಗಳು ಇದ್ದವೆಂಬುದನ್ನು ನಾನು ಗಮನಿಸಲಾರಂಭಿಸಿದೆ. ಉದಾಹರಣೆಗಾಗಿ, ಭೂಮಿಯಲ್ಲಿ ಪ್ರಮೋದವನದಲ್ಲಿ ಸದಾ ಜೀವಿಸುವ ನಿರೀಕ್ಷೆಯನ್ನು ಬೈಬಲ್ ಕೊಡುತ್ತದೆಂದು ನನಗೆ ಎಂದೂ ತಿಳಿದಿರಲಿಲ್ಲ.b ಮತ್ತು ನಾನು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಲು ಆರಂಭಿಸಿದಾಗ, ಅವರ ಶಿಷ್ಟಾಚಾರಗಳು, ಮತ್ತು ವಿಶೇಷವಾಗಿ ಅವರ ನಡುವೆ ಇದ್ದ ಯುವ ಜನರ ಉಡುಪು ಮತ್ತು ಕೇಶಾಲಂಕಾರಗಳು ನನ್ನನ್ನು ತುಂಬ ಪ್ರಭಾವಿಸಿದವು. ಬೈಬಲ್ ಮೂಲತತ್ವಗಳಿಗನುಸಾರ ನಿಜವಾಗಿಯೂ ಜೀವಿಸುತ್ತಿದ್ದ ಜನರು ಇವರೇ ಆಗಿದ್ದರು!”
ಆದರೂ, ‘ಸತ್ಯವನ್ನು ಕೊಂಡುಕೊಳ್ಳು’ವುದು, ಅವನು ತನ್ನ ಜೀವಿತದಲ್ಲಿ ಕೆಲವೊಂದು ಪ್ರಯಾಸಕರ ಅಳವಡಿಸುವಿಕೆಗಳನ್ನು ಮಾಡುವುದನ್ನು ಅವಶ್ಯಪಡಿಸಿತು. ಗಾಡ್‌ವಿನ್ ಜ್ಞಾಪಿಸಿಕೊಳ್ಳುವುದು: “ನಾನು ಮೆಸಾನಿಕ್ ಲಾಡ್ಜ್‌ನ ಒಬ್ಬ ಸದಸ್ಯನಾಗಿದ್ದೆ. ಮತ್ತು ಅದು ತನ್ನ ಸದಸ್ಯರಿಗೆ ಸಹಾಯವನ್ನು ಕೊಡುವ ಭಾತೃಭಾವದ ಸಂಸ್ಥೆಯಾಗಿ ಜ್ಞಾತವಾಗಿದ್ದರೂ, ಬುರುಡೆಗಳು ಮತ್ತು ಎಲುಬುಗಳ ಉಪಯೋಗ ಮತ್ತು ಆತ್ಮಗಳನ್ನು ಆಹ್ವಾನಿಸುವುದನ್ನು ಒಳಗೂಡಿದ ಸಂಸ್ಕಾರಗಳನ್ನು ನಾನು ಗಮನಿಸಿದೆ. ಈ ಆತ್ಮಗಳು, ತಮ್ಮೊಂದಿಗೆ ಪರಸ್ಪರವಾಗಿ ಕಾರ್ಯನಡೆಸುವವರಿಗೆ, ಆತ್ಮಿಕವಾಗಿ ಬೆಳೆಯಲು ಸಹಾಯಮಾಡುತ್ತವೆಂದು ಹೇಳಲಾಗುತ್ತದೆ.
“ಪ್ರೇತಾರಾಧನೆಯೊಂದಿಗಿನ ಯಾವುದೇ ಒಳಗೂಡುವಿಕೆಯು, ಒಬ್ಬನನ್ನು ಸೈತಾನನ ಮತ್ತು ಅವನ ದುಷ್ಟಾತ್ಮ ಶಕ್ತಿಗಳ ಪ್ರಭಾವದ ಕೆಳಗೆ ತರಸಾಧ್ಯವಿರುವುದರಿಂದ, ಯೆಹೋವ ದೇವರು ಅದನ್ನು ಹೇಸುತ್ತಾನೆಂಬುದನ್ನು ನೋಡುವಂತೆ ನನ್ನ ಅಭ್ಯಾಸಗಳು ನನಗೆ ಸಹಾಯಮಾಡಿದವು.c ಅದರ ಎಲ್ಲ ಮಾಂತ್ರಿಕವಿದ್ಯೆಯೊಂದಿಗೆ ನಾನು ಮೆಸಾನಿಕ ಲಾಡ್ಜ್‌ನ ಒಬ್ಬ ಸದಸ್ಯನಾಗಿ ಮುಂದುವರಿಯುವೆನೊ, ಅಥವಾ ಅದರಿಂದ ಹೊರಬಂದು, ಯೆಹೋವನನ್ನು ಸಂತೋಷಗೊಳಿಸುವೆನೊ? ನಾನು ಎರಡನೆಯದನ್ನು ಮಾಡಲು ಆರಿಸಿಕೊಂಡೆ. ನನ್ನಲ್ಲಿದ್ದ ಎಲ್ಲ ಫ್ರೀಮೇಸನ್ ಸಾಧನಸಾಮಗ್ರಿಗಳನ್ನು—ಲಾಡ್ಜ್ ಕೂಟಗಳಿಗಾಗಿ ನಾನು ಉಪಯೋಗಿಸುತ್ತಿದ್ದ ಸೂಟನ್ನೂ—ನಾನು ನಾಶಮಾಡಿದೆ. ‘ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು’ ಎಂದು ಯೇಸು ಹೇಳಿದಾಗ ಅವನು ಮಾಡಿದ ವಾಗ್ದಾನದ ಸತ್ಯತೆಯನ್ನು ನಾನು ಅನುಭವಿಸಿದೆ! (ಯೋಹಾನ 8:32) ನಾನು ಕಲಿತಿರುವ ಸಂಗತಿಗಳನ್ನು ಈಗ ಸಂತೋಷದಿಂದ ಇತರರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನಗೆ ಯಾವ ವಿಷಾದಗಳೂ ಇಲ್ಲ.”
‘ಸತ್ಯವನ್ನು ಕೊಂಡುಕೊಳ್ಳ’ಲು ಅನೇಕ ಸಾವಿರಾರು ಪ್ರಾಮಾಣಿಕ ಹೃದಯದ ಜನರು ತದ್ರೀತಿಯಲ್ಲಿ ಮಹಾನ್ ತ್ಯಾಗಗಳನ್ನು ಮಾಡಿದ್ದಾರೆ. ಇಲ್ಲಿ ಚರ್ಚಿಸಲ್ಪಟ್ಟಿರುವ ಮೂವರು ಕ್ರೈಸ್ತರಂತೆ, ಅವರಿಗೆ ತಾವು ಮಾಡಿರುವ ಬದಲಾವಣೆಗಳ ಕುರಿತು ಯಾವ ವಿಷಾದಗಳು ಇಲ್ಲ. ಬೈಬಲ್ ಸತ್ಯವು ಅವರಿಗೆ, “ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ . . . ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರ”ವನ್ನು ಅವರಿಗೆ ಕೊಟ್ಟಿದೆ. (1 ತಿಮೊಥೆಯ 6:19) ನೀವು ‘ಸತ್ಯವನ್ನು ಕೊಂಡುಕೊಳ್ಳು’ವಲ್ಲಿ ಆ “ವಾಸ್ತವವಾದ ಜೀವ” ಮತ್ತು ಅದರೊಂದಿಗಿನ ಎಲ್ಲ ಆಶೀರ್ವಾದಗಳು ನಿತ್ಯವಾಗಿ ನಿಮ್ಮವೂ ಆಗಸಾಧ್ಯವಿದೆ.
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ಮಾಹಿತಿಗಾಗಿ, ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಬೈಬಲ್—ದೇವರ ವಾಕ್ಯವೊ ಅಥವಾ ಮನುಷ್ಯನದ್ದೊ? (ಇಂಗ್ಲಿಷ್) ಎಂಬ ಪುಸ್ತಕವನ್ನು ನೋಡಿರಿ.
b ಉದಾಹರಣೆಗಾಗಿ, ಕೀರ್ತನೆ 37:9-11, 29ನ್ನು ನೋಡಿರಿ.
[ಪುಟ 9 ರಲ್ಲಿರುವ ಚಿತ್ರ]
ನತಾನ್ಯೇಲ್
[ಪುಟ 9 ರಲ್ಲಿರುವ ಚಿತ್ರ]
ಗಾಡ್‌ವಿನ್