ಗತಕಾಲದ ತಪ್ಪುಗಳಿಂದ ಪಾಠವನ್ನು ಕಲಿಯುವುದು
ನಮ್ಮ ಸೃಷ್ಟಿಕರ್ತನ ನೈತಿಕ ನಿಯಮಗಳು, ಶಾಶ್ವತವಾದವುಗಳೂ ಬದಲಾಯಿಸಲು ಅಸಾಧ್ಯವಾದವುಗಳೂ ಆಗಿವೆ. ಈ ಕಾರಣಕ್ಕಾಗಿ ಗಲಾತ್ಯ 6:7ರಲ್ಲಿ ಕಂಡುಬರುವ ಮೂಲತತ್ವವು ಇಂದು ಅನ್ವಯವಾಗುತ್ತದೆ: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.” ನಿಜ, ಒಬ್ಬ ವ್ಯಕ್ತಿಯು ತಾನು ದೇವರಿಗೆ ಜವಾಬ್ದಾರನಾಗಿದ್ದೇನೆ ಎಂಬುದನ್ನು ಅಲ್ಲಗಳೆಯಬಹುದಾದರೂ, ದೈವಿಕ ನಿಯಮವು ಅಚಲವಾಗಿರುತ್ತದೆ. ಅಂತಿಮವಾಗಿ, ಯಾವ ಮನುಷ್ಯನೂ ತನ್ನ ಕ್ರಿಯೆಗಳ ಫಲಿತಾಂಶಗಳಿಂದ ವಿನಾಯಿತಿ ಪಡೆಯಲಾರನು.
ಒಂದು ವಕ್ರವಾದ ಜೀವನವನ್ನು ನಡೆಸಿ, ಅನಂತರ ಬದಲಾವಣೆಗಳನ್ನು ಮಾಡುತ್ತಾ, ದೇವರ ಸೇವಕನಾಗಿ ಪರಿಣಮಿಸುವ ವ್ಯಕ್ತಿಯ ಕುರಿತಾಗಿ ಏನು? ಆಗಲೂ ಅವನು ತನ್ನ ಹಿಂದಿನ ಜೀವನ ಶೈಲಿಯ ಫಲಿತಾಂಶಗಳೊಂದಿಗೆ ಜೀವಿಸಬೇಕಾಗಬಹುದು. ಆದರೆ ದೇವರು ಅವನನ್ನು ಕ್ಷಮಿಸಿಲ್ಲವೆಂದು ಇದರ ಅರ್ಥವಲ್ಲ. ಬತ್ಷೆಬೆಯೊಂದಿಗೆ ರಾಜ ದಾವೀದನ ವ್ಯಭಿಚಾರೀ ಸಂಬಂಧವು ಅವನ ಜೀವನದಲ್ಲಿ ತುಂಬ ಆಪತ್ತನ್ನು ತಂದೊಡ್ಡಿತು. ಅವನು ಇದನ್ನು ತಪ್ಪಿಸಲು ಅಸಮರ್ಥನಾಗಿದ್ದನು. ಆದರೆ ಅವನು ಪಶ್ಚತ್ತಾಪಪಟ್ಟನು, ಮತ್ತು ದೇವರ ಕ್ಷಮೆಯನ್ನು ಪಡೆದುಕೊಂಡನು.—2 ಸಮುವೇಲ 12:13-19; 13:1-31.
ನೀವು ಮಾಡಿರುವ ತಪ್ಪುಗಳ ಫಲಿತಾಂಶಗಳನ್ನು ಅನುಭವಿಸುವಾಗ ನೀವು ಎದೆಗುಂದುವವರಾಗುತ್ತೀರೊ? ಸರಿಯಾದ ರೀತಿಯಲ್ಲಿ ವೀಕ್ಷಿಸಲ್ಪಡುವಲ್ಲಿ, ವಿಷಾದಪಡುವುದು, ‘ಎಚ್ಚರಿಕೆಯಾಗಿದ್ದು, ಅಧರ್ಮದ ಕಡೆಗೆ ಕಾಲಿಕ್ಕದಂತೆ’ ಇರಲು ಒಂದು ಮರುಜ್ಞಾಪನವಾಗಿ ಕಾರ್ಯನಡಿಸಬಲ್ಲದು. (ಯೋಬ 36:21) ಹೌದು, ವಿಷಾದಪಡುವುದು, ನಾವು ಒಂದು ತಪ್ಪನ್ನು ಪುನಃ ಮಾಡುವುದನ್ನು ತಪ್ಪಿಸಲು ಸಹಾಯಮಾಡಬಲ್ಲದು. ಹೆಚ್ಚು ಉತ್ತಮವಾಗಿ, ದಾವೀದನು ತಾನು ಗೈದ ಪಾಪದಿಂದ ಪಡೆದುಕೊಂಡ ಅನುಭವವನ್ನು, ಕೇವಲ ತನಗೆ ಮಾತ್ರವಲ್ಲ ಇತರರಿಗೂ ಪ್ರಯೋಜನವಾಗುವಂತೆ ಉಪಯೋಗಿಸಿದನು. ಅವನು ಹೇಳಿದ್ದು: “ಆಗ ನಿನ್ನ ಮಾರ್ಗವನ್ನು ದ್ರೋಹಿಗಳಿಗೆ ಬೋಧಿಸುವೆನು; ಪಾಪಿಗಳು ನಿನ್ನ ಕಡೆಗೆ ತಿರುಗಿಕೊಳ್ಳುವರು.”—ಕೀರ್ತನೆ 51:13.
[ಪುಟ 7 ರಲ್ಲಿರುವ ಚಿತ್ರಗಳು]
ಬತ್ಷೆಬೆಯೊಂದಿಗೆ ಮಾಡಿದ ಪಾಪದಿಂದ ದಾವೀದನು ಪಾಠವನ್ನು ಕಲಿತುಕೊಂಡನು