ಕೆಲವರು ತಮ್ಮ ಧರ್ಮವನ್ನು ಬದಲಾಯಿಸುತ್ತಿರುವುದರ ಕಾರಣ
ಅನೇಕರಿಗೆ ಧರ್ಮವು ಕೇವಲ ಒಂದು ಲೇಬಲ್ ಆಗಿದೆ. ಅದು ಒಬ್ಬ ವ್ಯಕ್ತಿಯು ಅಪರೂಪಕ್ಕೆ ಆದಿತ್ಯವಾರದಂದು ಹೋಗುವ ಸ್ಥಳ, ಅವನು ಮದುವೆಯಾಗುವ ಸ್ಥಳ ಮತ್ತು ಅವನು ಹೂಳಲ್ಪಡುವ ಸ್ಥಳವನ್ನು ಸೂಚಿಸಬಹುದು. ಆದರೆ ಅವನು ಎಂತಹ ವ್ಯಕ್ತಿಯಾಗಿದ್ದಾನೆ ಮತ್ತು ಅವನಿಗೆ ಏನು ತಿಳಿದಿದೆ ಮತ್ತು ಏನನ್ನು ನಂಬುತ್ತಾನೆ ಎಂಬುದನ್ನು ಅದು ಹೇಳುವುದಿಲ್ಲ. ಉದಾಹರಣೆಗಾಗಿ, ನಾಮಮಾತ್ರದ ಕ್ರೈಸ್ತರಲ್ಲಿ 50 ಪ್ರತಿಶತ ಮಂದಿಗೆ, ಪರ್ವತ ಪ್ರಸಂಗವನ್ನು ಯಾರು ಕೊಟ್ಟರೆಂಬುದು ಗೊತ್ತಿಲ್ಲವೆಂದು ಒಂದು ಸಮೀಕ್ಷೆಯು ತಿಳಿಸಿತು. ಆದರೆ, ಒಬ್ಬ ಹಿಂದೂವಾಗಿದ್ದ ಪ್ರಸಿದ್ಧ ಭಾರತೀಯ ನಾಯಕರಾದ ಮೋಹನ್ದಾಸ್ ಗಾಂಧಿಯವರಿಗೂ ಅದು ತಿಳಿದಿತ್ತು!
ಇಷ್ಟು ಮಂದಿಗೆ ತಮ್ಮ ನಂಬಿಕೆಯ ಕುರಿತಾಗಿ ಇಷ್ಟು ಅಲ್ಪವಾದ ಜ್ಞಾನವಿರುವಾಗ, ಜನರು ಧರ್ಮದಿಂದ ದೂರ ಹೋಗುವುದು ಆಶ್ಚರ್ಯದ ಸಂಗತಿಯೊ? ಇಲ್ಲ. ಆದರೂ, ಅದು ಅನಿವಾರ್ಯವಾದ ವಿಷಯವೇನೂ ಅಲ್ಲ. ಬೈಬಲಿನ ಕುರಿತಾಗಿ ಕಲಿಯಲು ಸಹಾಯವನ್ನು ಸ್ವೀಕರಿಸಿರುವವರು, ಅದರಿಂದ ತಮಗೆಷ್ಟು ಪ್ರಯೋಜನವಾಗುತ್ತದೆ ಎಂಬುದನ್ನು ಕಂಡುಕೊಳ್ಳುವಾಗ, ಅನೇಕವೇಳೆ ಆಶ್ಚರ್ಯಚಕಿತರಾಗುತ್ತಾರೆ. ಬೈಬಲ್ ತಾನೇ ಹೇಳುವುದು: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ [“ನೀನು ಪ್ರಯೋಜನ ಪಡೆದುಕೊಳ್ಳುವಂತೆ ಕಲಿಸಿ,” NW] ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”—ಯೆಶಾಯ 48:17.
ಅಸಂತೃಪ್ತ ಆತ್ಮಿಕ ಹಸಿವುಳ್ಳವರು ಏನು ಮಾಡಬೇಕು? ದೇವರ ಸೇವೆಮಾಡುವುದನ್ನು ಅವರು ಬಿಟ್ಟುಕೊಡಬಾರದು! ಬದಲಿಗೆ, ಅವರು ಬೈಬಲಿನಲ್ಲಿ ಹುಡುಕಿ, ದೇವರೇ ಅವರಿಗಾಗಿ ಏನನ್ನು ಲಭ್ಯಗೊಳಿಸುತ್ತಾನೆಂಬುದನ್ನು ನೋಡಬೇಕು.
ಕಷ್ಟಕರ ಪ್ರಶ್ನೆಗಳಿಗೆ ಉತ್ತರಗಳು
ಏಳು ವರ್ಷ ಪ್ರಾಯದಲ್ಲಿ, ತನ್ನ ತಾಯಿಯು ಸಾಯುವುದನ್ನು ಬರ್ನ್ಟ್ ನೋಡಿದನು.a ತನ್ನ ಬಾಲ್ಯಾವಸ್ಥೆಯಲ್ಲೆಲ್ಲಾ, ‘ನನ್ನ ಅಮ್ಮ ಎಲ್ಲಿದ್ದಾಳೆ? ಅವಳಿಲ್ಲದೆ ನಾನು ಏಕೆ ಬೆಳೆಯಬೇಕು?’ ಎಂದು ಅವನು ಚಿಂತಿಸಿದನು. ಒಬ್ಬ ಹದಿವಯಸ್ಕನೋಪಾದಿ ಬರ್ನ್ಟ್, ಒಬ್ಬ ಸಕ್ರಿಯ ಚರ್ಚ್ ಸದಸ್ಯನಾಗಿದ್ದನು. ಮಾನವಕುಲದ ಕಷ್ಟಾನುಭವದ ಕುರಿತು ಚಿಂತಿತನಾಗಿದ್ದು, ಅವನು ವಿದೇಶಿ ನೆರವಿನ ಕಾರ್ಯಕರ್ತನಾಗಿರಲು ನಿರೀಕ್ಷಿಸಿದನು. ಆಗಲೂ, ಅವನನ್ನು ಕೆಲವು ಪ್ರಶ್ನೆಗಳು ಕಾಡುತ್ತಿದ್ದವು ಮತ್ತು ಅವನ ಚರ್ಚು ಅವುಗಳಿಗೆ ತೃಪ್ತಿಕರವಾದ ಉತ್ತರಗಳನ್ನು ಕೊಡಲಿಲ್ಲ.
ಆಗ ಬರ್ನ್ಟ್, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದ ತನ್ನ ಒಬ್ಬ ಸಹಪಾಠಿಯೊಂದಿಗೆ ಮಾತಾಡಿದನು. ಅವನ ತಾಯಿಯು, ಪ್ರಜ್ಞಾಹೀನ ಸ್ಥಿತಿಯಲ್ಲಿ—ಮರಣದಲ್ಲಿ—ನಿದ್ರಿಸುತ್ತಿದ್ದಾಳೆಂದು ಆ ಯೌವನಸ್ಥನು ಬರ್ನ್ಟ್ನಿಗೆ ಬೈಬಲಿನಿಂದ ತೋರಿಸಿದನು. ಇದನ್ನು ವಿವರಿಸುವ ಪ್ರಸಂಗಿ 9:5ರಂತಹ ಅನೇಕ ಬೈಬಲ್ ವಚನಗಳ ಕುರಿತಾಗಿ ಬರ್ನ್ಟ್ ಕಲಿತುಕೊಂಡನು. ಅದು ತಿಳಿಸುವುದು: “ಸತ್ತವರಿಗೊ ಯಾವ ತಿಳುವಳಿಕೆಯೂ ಇಲ್ಲ.” ಆದುದರಿಂದ ತನ್ನ ತಾಯಿಯು ಯಾವುದೊ ರೀತಿಯ ಪರ್ಗಟರಿಯಲ್ಲಿ, ಅಥವಾ ಅದಕ್ಕಿಂತಲೂ ಕೆಟ್ಟದಾದ ಸ್ಥಳದಲ್ಲಿ ಕಷ್ಟಾನುಭವಿಸುತ್ತಿದ್ದಾರೊ ಏನೋ ಎಂಬುದರ ಕುರಿತಾಗಿ ಚಿಂತೆಮಾಡಲು ಯಾವುದೇ ಕಾರಣವಿರಲಿಲ್ಲ. ಅಮರ ಆತ್ಮದ ಬೋಧನೆಯು ಹೆಚ್ಚಿನ ಧರ್ಮಗಳಲ್ಲಿ ಕಲಿಸಲ್ಪಟ್ಟಿರುವುದಾದರೂ, ಒಬ್ಬ ಮನುಷ್ಯನು ಸಾಯುವಾಗ, ಬದುಕುಳಿಯುವ ಯಾವುದೇ ಅಮರ ಭಾಗವು ಅವನೊಳಗಿರುವುದಿಲ್ಲ ಎಂಬುದನ್ನು ಬರ್ನ್ಟ್ ಬೈಬಲಿನಲ್ಲಿ ನೋಡಿದನು.
ಸತ್ತವರಿಗಾಗಿರುವ ಆಶ್ಚರ್ಯಕರ ಪ್ರತೀಕ್ಷೆಯ ಕುರಿತಾಗಿಯೂ ಬರ್ನ್ಟ್ ಕಲಿತನು. ಬೈಬಲಿನ ಅಪೊಸ್ತಲರ ಕೃತ್ಯ ಪುಸ್ತಕದಲ್ಲಿ ಅವನು ಸ್ವತಃ ಇದನ್ನು ಓದಿದನು: ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.’ (ಅ. ಕೃತ್ಯಗಳು 24:15) ಈ ಪುನರುತ್ಥಾನವು, ದೇವರು ಪ್ರಮೋದವನವನ್ನು ಪುನಸ್ಸ್ಥಾಪಿಸಲಿರುವ ಇದೇ ಭೂಮಿಯ ಮೇಲೆ ನಡೆಯುವುದೆಂಬುದನ್ನು ಕಲಿತು ಅವನು ಎಷ್ಟು ರೋಮಾಂಚನಗೊಂಡನು!—ಕೀರ್ತನೆ 37:29; ಪ್ರಕಟನೆ 21:3, 4.
ಬೇಗನೆ ಬರ್ನ್ಟ್ನ ಆತ್ಮಿಕ ಅಗತ್ಯಗಳು ನೈಜವಾದ ಬೈಬಲ್ ಜ್ಞಾನದಿಂದ ತೃಪ್ತಿಪಡಿಸಲ್ಪಟ್ಟವು. ಬರ್ನ್ಟ್ ಧರ್ಮವನ್ನು ಬಿಟ್ಟುಬಿಡಲಿಲ್ಲ. ಬದಲಾಗಿ, ತನ್ನ ಹಸಿವನ್ನು ತೃಪ್ತಿಪಡಿಸಲು ಅಸಾಧ್ಯವಾದ ಚರ್ಚನ್ನು ಬಿಟ್ಟು, ಬೈಬಲಿನ ಮೇಲೆ ದೃಢವಾಗಿ ಆಧಾರಿಸಲ್ಪಟ್ಟ ಇನ್ನೊಂದು ಧರ್ಮವನ್ನು ಸ್ವೀಕರಿಸಿದನು. ಅವನು ಹೇಳುವುದು: “ಅದು 14 ವರ್ಷಗಳ ಹಿಂದಿನ ಮಾತು. ಮತ್ತು ಆಗ ನಾನು ತೆಗೆದುಕೊಂಡ ನಿರ್ಧಾರಕ್ಕಾಗಿ ನಾನು ಎಂದೂ ವಿಷಾದಪಟ್ಟಿಲ್ಲ. ಸೃಷ್ಟಿಕರ್ತನು ಕಷ್ಟಾನುಭವವನ್ನು ಉಂಟುಮಾಡುವುದಿಲ್ಲವೆಂದು ನನಗೆ ಈಗ ತಿಳಿದಿದೆ. ಸೈತಾನನು ಈ ವ್ಯವಸ್ಥೆಯ ದೇವರಾಗಿದ್ದಾನೆ, ಮತ್ತು ನಮ್ಮ ಸುತ್ತಲಿರುವ ಪರಿಸ್ಥಿತಿಗಳಿಗಾಗಿ ಅವನು ಜವಾಬ್ದಾರನಾಗಿದ್ದಾನೆ. ಆದರೆ ಸೈತಾನನ ಲೋಕದಿಂದ ಮಾಡಲ್ಪಟ್ಟಿರುವ ಎಲ್ಲ ಹಾನಿಯನ್ನು ದೇವರು ಬೇಗನೆ ಇಲ್ಲವಾಗಿಸುವನು. ನನ್ನ ತಾಯಿಯೂ ಪುನರುತ್ಥಾನದಲ್ಲಿ ಹಿಂದಿರುಗುವರು. ಅದೆಷ್ಟು ಆನಂದದಾಯಕವಾಗಿರುವುದು!”
ಪ್ರಾಸಂಗಿಕವಾಗಿ, ಇತರರಿಗೆ ಸಹಾಯಮಾಡಲಿಕ್ಕಾಗಿ ಹೊರದೇಶದಲ್ಲಿ ಕೆಲಸಮಾಡುವ ತನ್ನ ಗುರಿಯನ್ನು ಬರ್ನ್ಟ್ ತಲಪಿದ್ದಾನೆ. ತಮ್ಮ ಸಂಕಷ್ಟಕ್ಕೆ ನಿಜವಾದ ಪರಿಹಾರವಾಗಿರುವ, ದೇವರ ರಾಜ್ಯದ ಕುರಿತಾಗಿ ಇತರರು ಕಲಿಯುವಂತೆ ಸಹಾಯಮಾಡುತ್ತಾ, ಅವನು ವಿದೇಶದಲ್ಲಿ ಕೆಲಸಮಾಡುತ್ತಿದ್ದಾನೆ. ದೇವರು ಬೇಗನೆ ಮಾನವ ಕಷ್ಟಾನುಭವಕ್ಕೆ ಅಂತ್ಯವನ್ನು ತರುವನೆಂಬುದನ್ನು, ಬರ್ನ್ಟ್ನಂತೆ ಲಕ್ಷಾಂತರ ಮಂದಿ ಕಲಿತಿದ್ದಾರೆ. ತಮ್ಮ ಆತ್ಮಿಕ ಅಗತ್ಯಗಳನ್ನು ತೃಪ್ತಿಪಡಿಸುವ ಒಂದು ಧರ್ಮವಿದೆಯೆಂಬುದನ್ನು ಕಂಡು ಅವರು ರೋಮಾಂಚಿತರಾಗಿದ್ದಾರೆ.—ಮತ್ತಾಯ 5:3.
ಜೀವನದ ಉದ್ದೇಶವೇನು?
ಪಾಶ್ಚಿಮಾತ್ಯ ಲೋಕವು ಹೆಚ್ಚೆಚ್ಚು ಪ್ರಾಪಂಚಿಕ ಮನೋಭಾವದ್ದಾಗಿ ಪರಿಣಮಿಸುತ್ತಿರುವಾಗ, ‘ಜೀವನದ ಉದ್ದೇಶವೇನು?’ ಎಂದು ಅನೇಕರು ಕೇಳುತ್ತಾರೆ. ಮೈಕಲ್ ಕಂಡುಹಿಡಿದಂತೆ ಉತ್ತರವನ್ನು ಬೈಬಲಿನಲ್ಲಿ ಕಂಡುಕೊಳ್ಳಸಾಧ್ಯವಿದೆ. 1970ಗಳ ಮಧ್ಯ ಭಾಗದಲ್ಲಿ, ಮೈಕಲ್ ಒಂದು ಭಯೋತ್ಪಾದಕ ಗುಂಪಿಗೆ ಸೇರಲು ಬಯಸಿದನು. ಅವನಿಗೆ ಜೀವನದಲ್ಲಿ ಒಂದೇ ಒಂದು ಗುರಿಯಿತ್ತು—ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅನ್ಯಾಯಗಳಿಗಾಗಿ ಜವಾಬ್ದಾರರೆಂದು ಅವನೆಣಿಸಿದಂತಹ ಜನರಿಗೆ ಸಮಸ್ಯೆಗಳನ್ನು ಉಂಟುಮಾಡುವುದು. ಅವನು ಹೇಳಿದ್ದು: “ನನ್ನ ಬಂದೂಕು ಇಲ್ಲದೆ ನಾನು ಮನೆಯಿಂದ ಹೊರಬರುತ್ತಿರಲಿಲ್ಲ. ಉಚ್ಚಸ್ಥಾನದಲ್ಲಿದ್ದ ರಾಜಕಾರಣಿಗಳು ಮತ್ತು ವ್ಯಾಪಾರಸ್ಥರಲ್ಲಿ ಸಾಧ್ಯವಿರುವಷ್ಟು ಹೆಚ್ಚು ಮಂದಿಯನ್ನು ಕೊಲ್ಲುವುದು ನನ್ನ ಯೋಜನೆಯಾಗಿತ್ತು. ನನ್ನ ಗುರಿಸಾಧನೆಗಾಗಿ ಅಗತ್ಯವಿದ್ದಲ್ಲಿ ನಾನು ಜೀವವನ್ನೇ ಬಲಿಕೊಡುತ್ತಿದ್ದೆ.”
ಮೈಕಲ್ ಚರ್ಚಿಗೆ ಹೋಗುವವನಾಗಿದ್ದನಾದರೂ, ಅವನ ಚರ್ಚಿನಲ್ಲಿ ಯಾರೊಬ್ಬರೂ ಜೀವನದ ನಿಜ ಉದ್ದೇಶದ ಕುರಿತಾಗಿ ವಿವರಿಸಲು ಶಕ್ತರಾಗಿರಲಿಲ್ಲ. ಆದುದರಿಂದ ಯೆಹೋವನ ಸಾಕ್ಷಿಗಳು ತನ್ನ ಮನೆಗೆ ಭೇಟಿ ನೀಡಿ, ತನ್ನ ಪ್ರಶ್ನೆಗಳಿಗೆ ಬೈಬಲಿನ ಉತ್ತರಗಳನ್ನು ತೋರಿಸಿದಾಗ, ಮೈಕಲ್ ಜಾಗರೂಕತೆಯಿಂದ ಕಿವಿಗೊಟ್ಟನು. ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹದಲ್ಲಿನ ಆರಾಧನಾ ಕೂಟಗಳಿಗೆ ಅವನು ಹಾಜರಾಗಲು ಆರಂಭಿಸಿದನು.
ಮೈಕಲನಿಗೆ ಬೈಬಲಿನ ವಿಷಯದಲ್ಲಿ ಆರಂಭಗೊಂಡಿದ್ದ ಈ ಹೊಸ ಆಸಕ್ತಿಯ ಕುರಿತಾಗಿ ಅವನ ಸ್ನೇಹಿತರು ಕುತೂಹಲಿಗಳಾದರು. “ಈ ಆದಿತ್ಯವಾರ ಕೂಟಕ್ಕೆ ಬನ್ನಿ. ಸ್ವಲ್ಪ ಸಮಯ ಕುಳಿತುಕೊಳ್ಳಿ. ನೀವೇನು ಕೇಳುತ್ತೀರೊ ಅದು ನಿಮಗೆ ಇಷ್ಟವಾಗದಿದ್ದಲ್ಲಿ, ಆಗ ಮನೆಗೆ ಹೋಗಿ” ಎಂದು ಮೈಕಲ್ ಅವರನ್ನು ಉತ್ತೇಜಿಸಿದನು. ಹಾಗೆಯೇ ಆಯಿತು. 45 ನಿಮಿಷದ ಬೈಬಲ್ ಆಧಾರಿತ ಭಾಷಣದ ಅನಂತರ ಅವನ ಸ್ನೇಹಿತರಲ್ಲಿ ಹೆಚ್ಚಿನವರು ಹೊರಟುಹೋದರು. ಆದರೆ ಒಬ್ಬಳು—ಸೂಸನ್—ಹಿಂದೆ ಉಳಿದಳು. ಈ ಯುವತಿಯು, ತಾನು ಏನನ್ನು ಕೇಳಿದ್ದಳೊ ಅದರಿಂದ ವಿಸ್ಮಿತಳಾಗಿದ್ದಳು. ಮೈಕಲ್ ಮತ್ತು ಸೂಸನ್ ತದನಂತರ ಮದುವೆಯಾದರು ಮತ್ತು ಯೆಹೋವನ ಸಾಕ್ಷಿಗಳೋಪಾದಿ ದೀಕ್ಷಾಸ್ನಾನ ಪಡೆದುಕೊಂಡರು. “ನಾವು ಭೂಮಿಯಲ್ಲಿ ಏಕೆ ಇದ್ದೇವೆಂಬುದು ನನಗೆ ಈಗ ತಿಳಿದಿದೆ. ನಾವು ಯೆಹೋವನಿಂದ ಸೃಷ್ಟಿಸಲ್ಪಟ್ಟಿದ್ದೇವೆ. ಜೀವನದಲ್ಲಿ ನಮ್ಮ ನಿಜವಾದ ಉದ್ದೇಶವು, ಆತನನ್ನು ತಿಳಿಯುವುದು ಮತ್ತು ಆತನ ಚಿತ್ತವನ್ನು ಮಾಡುವುದೇ ಆಗಿದೆ. ಇದು ತಾನೇ ನಿಜವಾದ ತೃಪ್ತಿಯನ್ನು ತರುತ್ತದೆ!”
ಲಕ್ಷಾಂತರ ಜನರಿಗೆ ಮೈಕಲ್ನಿಗಿರುವಂತಹದ್ದೇ ನಿಶ್ಚಿತಾಭಿಪ್ರಾಯವಿದೆ. ಅವರು ಬೈಬಲಿನ ಈ ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”—ಪ್ರಸಂಗಿ 12:13.
ಜೀವನದ ಸಮಸ್ಯೆಗಳನ್ನು ನಿಭಾಯಿಸುವುದು
ಎರಡನೆಯ ತಿಮೊಥೆಯ 3:1ರಲ್ಲಿರುವ ಪ್ರವಾದನೆಯ ನೆರವೇರಿಕೆಯನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ: ‘ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವು.’ ಈ ‘ಕಠಿನಕಾಲಗಳನ್ನು’ ಯಾರೂ ತಪ್ಪಿಸಿಕೊಳ್ಳಲಾರರು. ಆದರೆ ಅವುಗಳನ್ನು ನಿಭಾಯಿಸಲು ಬೈಬಲ್ ನಮಗೆ ಸಹಾಯನೀಡುತ್ತದೆ.
ಒಬ್ಬ ವಿವಾಹಿತ ದಂಪತಿಗಳಾಗಿರುವ ಸ್ಟೀವನ್ ಮತ್ತು ಆಲಿವ್ರನ್ನು ಪರಿಗಣಿಸಿರಿ. ಅವರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಾಗ, ಇತರ ಅನೇಕರಂತೆ ಅವರಿಗೂ ವೈವಾಹಿಕ ಸಮಸ್ಯೆಗಳಿದ್ದವು. “ನಾವು ಪರಸ್ಪರ ದೂರ ಸರಿಯುತ್ತಿದ್ದೆವು. ನಮಗೆ ಭಿನ್ನವಾದ ಗುರಿಗಳು ಮತ್ತು ಅಭಿರುಚಿಗಳಿದ್ದವು” ಎಂದು ಸ್ಟೀವನ್ ವಿವರಿಸುತ್ತಾನೆ. ಅವರು ಜೊತೆಯಾಗಿ ಉಳಿಯುವಂತೆ ಸಹಾಯಮಾಡಿದ ಸಂಗತಿ ಯಾವುದು? ಸ್ಟೀವನ್ ಮುಂದುವರಿಸುತ್ತಾ ಹೇಳುವುದು: “ನಮ್ಮ ಜೀವಿತಗಳಲ್ಲಿ ಬೈಬಲ್ ಮೂಲತತ್ವಗಳನ್ನು ಅನ್ವಯಿಸಸಾಧ್ಯವಿರುವ ವಿಧವನ್ನು ಯೆಹೋವನ ಸಾಕ್ಷಿಗಳು ನಮಗೆ ತೋರಿಸಿದರು. ನಿಸ್ವಾರ್ಥಿಗಳೂ ಕಾಳಜಿವಹಿಸುವವರೂ ಆಗಿರುವುದರ ಅರ್ಥವೇನೆಂಬುದನ್ನು ನಾವು ಪ್ರಥಮ ಬಾರಿ ಕಲಿತುಕೊಂಡೆವು. ಬೈಬಲ್ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುವುದು ನಮ್ಮನ್ನು ಒಗ್ಗಟ್ಟಿನಿಂದ ಇರುವಂತೆ ಮಾಡಿತು. ಈಗ ನಾವು ಒಂದು ಸಂತೋಷಕರವಾದ, ಸ್ಥಿರವಾದ ವಿವಾಹದಲ್ಲಿ ಆನಂದಿಸುತ್ತೇವೆ.”
ದೇವರೊಂದಿಗೆ ಒಂದು ಆಪ್ತ ಸಂಬಂಧ
ಇತ್ತೀಚಿನ ಒಂದು ಗ್ಯಾಲಪ್ ಸಮೀಕ್ಷೆಗನುಸಾರ, ಅಮೆರಿಕನರಲ್ಲಿ 96 ಪ್ರತಿಶತ ಮಂದಿ ದೇವರಲ್ಲಿ ನಂಬಿಕೆಯಿಡುತ್ತಾರೆ ಮತ್ತು ಇವರಲ್ಲಿ ಹೆಚ್ಚಿನವರು ಆತನಿಗೆ ಪ್ರಾರ್ಥಿಸುತ್ತಾರೆ. ಆದರೂ, ಇನ್ನೊಂದು ಸಮೀಕ್ಷೆಯು ತೋರಿಸಿದ್ದೇನೆಂದರೆ, ಚರ್ಚ್ ಮತ್ತು ಸಿನಗಾಗ್ ಹಾಜರಿಯು ಈಗ, ಅರ್ಧ ಶತಮಾನದಲ್ಲಿ ತೀರ ಕೆಳಮಟ್ಟದಲ್ಲಿದೆ. ಅಮೆರಿಕನರಲ್ಲಿ ಸುಮಾರು 58 ಪ್ರತಿಶತ ಮಂದಿ, ತಾವು ತಿಂಗಳಿಗೊಮ್ಮೆ ಅಥವಾ ಅದಕ್ಕಿಂತಲೂ ಕಡಿಮೆ ಬಾರಿ ಚರ್ಚಿಗೆ ಹೋಗುತ್ತೇವೆಂದು ಹೇಳುತ್ತಾರೆ. ಧರ್ಮವು ಅವರನ್ನು ದೇವರ ಸನಿಹಕ್ಕೆ ತಂದಿಲ್ಲವೆಂಬುದು ಸ್ಪಷ್ಟ. ಮತ್ತು ಈ ಸಮಸ್ಯೆಯು ಕೇವಲ ಅಮೆರಿಕಕ್ಕೆ ಸೀಮಿತವಾಗಿಲ್ಲ.
ಲಿಂಡ, ಬವೇರಿಯದಲ್ಲಿ ಬೆಳೆದವಳು. ಅವಳು ಒಬ್ಬ ಸಕ್ರಿಯ ಕ್ಯಾಥೊಲಿಕಳಾಗಿದ್ದಳು ಮತ್ತು ಕ್ರಮವಾಗಿ ಪ್ರಾರ್ಥಿಸುತ್ತಿದ್ದಳು. ಅದೇ ಸಮಯದಲ್ಲಿ ಅವಳು ಭವಿಷ್ಯತ್ತಿನ ಕುರಿತಾಗಿ ಭಯಪಡುತ್ತಿದ್ದಳು. ಮನುಷ್ಯರಿಗಾಗಿರುವ ದೇವರ ಉದ್ದೇಶದ ಕುರಿತು ಅವಳಿಗೆ ಏನೂ ತಿಳಿದಿರಲಿಲ್ಲ. ಕೇವಲ 14 ವರ್ಷ ಪ್ರಾಯದವಳಾಗಿದ್ದಾಗ ಲಿಂಡ ಯೆಹೋವನ ಸಾಕ್ಷಿಗಳನ್ನು ಭೇಟಿಯಾದಳು ಮತ್ತು ಅವಳು ವರದಿಸುವುದು: “ಅವರೇನನ್ನು ಹೇಳಿದರೊ ಅದು ಆಸಕ್ತಿಗೊಳಿಸುವಂತಹ ವಿಷಯವಾಗಿತ್ತು. ಆದುದರಿಂದ ನಾನು ಎರಡು ಬೈಬಲ್ ಅಭ್ಯಾಸ ಸಹಾಯಕಗಳನ್ನು ಸ್ವೀಕರಿಸಿ, ಅವುಗಳನ್ನು ತತ್ಕ್ಷಣವೇ ಓದಲಾರಂಭಿಸಿದೆ.” ಎರಡು ವರ್ಷಗಳ ಬಳಿಕ, ಲಿಂಡ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಳು. “ಬೈಬಲಿನಿಂದ ನಾನು ದೇವರ ಕುರಿತಾಗಿ ಕಲಿತಂತಹ ಎಲ್ಲ ವಿಷಯವು ಅರ್ಥಭರಿತವಾಗಿತ್ತು” ಎಂದು ಅವಳು ಹೇಳುತ್ತಾಳೆ. ಲಿಂಡ ತನ್ನ ಚರ್ಚಿಗೆ ರಾಜೀನಾಮೆ ಕೊಟ್ಟು, 18ನೆಯ ವಯಸ್ಸಿನಲ್ಲಿ ಯೆಹೋವನ ಸಾಕ್ಷಿಯೋಪಾದಿ ದೀಕ್ಷಾಸ್ನಾನ ಪಡೆದುಕೊಂಡಳು.
ಲಿಂಡ ತನ್ನ ಧರ್ಮವನ್ನು ಬದಲಾಯಿಸುವಂತೆ ಯಾವುದು ಮಾಡಿತು? ಅವಳು ವಿವರಿಸುವುದು: “ಒಬ್ಬ ದೇವರಿದ್ದಾನೆಂದು ನೋಡುವಂತೆ ನನ್ನ ಚರ್ಚ್ ನನಗೆ ಸಹಾಯಮಾಡಿತು, ಮತ್ತು ನಾನು ಆತನಲ್ಲಿ ನಂಬಿಕೆಯಿಡಲು ಕಲಿತೆ. ಆದರೆ ಆತನು ವ್ಯಕ್ತಿಸ್ವರೂಪವಿಲ್ಲದವನೂ, ದೂರದಲ್ಲಿರುವವನೂ ಆಗಿದ್ದನು. ಬೈಬಲಿನ ನನ್ನ ಅಭ್ಯಾಸವು, ದೇವರಲ್ಲಿನ ನನ್ನ ನಂಬಿಕೆಯನ್ನು ದೃಢಪಡಿಸಿದ್ದು ಮಾತ್ರವಲ್ಲ, ಆತನನ್ನು ತಿಳಿದುಕೊಳ್ಳಲು ಮತ್ತು ಪ್ರೀತಿಸಲೂ ನನಗೆ ಸಹಾಯಮಾಡಿತು. ಈಗ ನನಗೆ ದೇವರೊಂದಿಗೆ ಒಂದು ಅಮೂಲ್ಯವಾದ ವೈಯಕ್ತಿಕ ಸಂಬಂಧವಿದೆ. ಮತ್ತು ಇದು ಬೇರೆ ಯಾವುದೇ ವಿಷಯಕ್ಕಿಂತಲೂ ಹೆಚ್ಚು ಅಮೂಲ್ಯವಾದದ್ದಾಗಿದೆ.”
ನಿಜ ಧರ್ಮವು ಸಾರ್ಥಕ!
ನಿಮ್ಮ ಧರ್ಮವು, ನಿಮಗೆ ಆತ್ಮಿಕ ಮಾರ್ಗದರ್ಶನವನ್ನು ಕೊಟ್ಟು, ಜೀವನದ ಸಮಸ್ಯೆಗಳನ್ನು ನಿಭಾಯಿಸುವಂತೆ ಬೈಬಲ್ ನಿಮಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ತೋರಿಸುತ್ತದೊ? ಭವಿಷ್ಯತ್ತಿಗಾಗಿರುವ ಬೈಬಲಿನ ನಿರೀಕ್ಷೆಯನ್ನು ಅದು ಕಲಿಸುತ್ತದೊ? ನಿಷ್ಕೃಷ್ಟವಾದ ಬೈಬಲ್ ಜ್ಞಾನದ ಮೇಲೆ ಆಧಾರಿತವಾದ, ಸೃಷ್ಟಿಕರ್ತನೊಂದಿಗಿನ ಆಪ್ತ, ವೈಯಕ್ತಿಕ ಸಂಬಂಧಕ್ಕೆ ಅದು ನಿಮ್ಮನ್ನು ತರುತ್ತದೊ? ಹಾಗಿರದಿದ್ದರೆ, ಬಿಟ್ಟುಕೊಡಬೇಡಿ. ಧರ್ಮವನ್ನು ತೊರೆಯುವ ಬದಲಿಗೆ, ಬೈಬಲಿನ ಮೇಲೆ ದೃಢವಾಗಿ ಆಧಾರಿಸಲ್ಪಟ್ಟಿರುವ ಇನ್ನೊಂದು ಧರ್ಮಕ್ಕಾಗಿ ಹುಡುಕಿರಿ. ಆಗ ನೀವು, ಬೈಬಲಿನ ಯೆಶಾಯ ಪುಸ್ತಕದಲ್ಲಿ ಪ್ರವಾದಿಸಲ್ಪಟ್ಟವರಂತೆ ಇರುವಿರಿ: “ಇಗೋ, ನನ್ನ ಸೇವಕರು ಊಟಮಾಡುವರು, . . . ನನ್ನ ಸೇವಕರು ಕುಡಿಯುವರು, . . . ನನ್ನ ಸೇವಕರು ಉಲ್ಲಾಸಗೊಳ್ಳುವರು, . . . ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು.”—ಯೆಶಾಯ 65:13, 14.
[ಪಾದಟಿಪ್ಪಣಿ]
a ಈ ಲೇಖನದಲ್ಲಿರುವ ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.
[ಪುಟ 4,5 ರಲ್ಲಿರುವಚಿತ್ರಗಳು]
ದೇವರನ್ನು ತಿಳಿದುಕೊಂಡು ಆತನನ್ನು ಪ್ರೀತಿಸಲು ಬೈಬಲ್ ನಮಗೆ ಸಹಾಯಮಾಡುತ್ತದೆ