ನಿಮ್ಮ ಮಕ್ಕಳಿಗಾಗಿ ನೀವು ಯಾವ ಭವಿಷ್ಯತ್ತನ್ನು ಅಪೇಕ್ಷಿಸುತ್ತೀರಿ?
ನಿಮ್ಮ ಮಕ್ಕಳನ್ನು ನೀವು ಬಹುಮೂಲ್ಯ ಸ್ವಾಸ್ತ್ಯದೋಪಾದಿ ಪರಿಗಣಿಸುತ್ತೀರೊ? (ಕೀರ್ತನೆ 127:3) ಅಥವಾ ಅವರನ್ನು ಬೆಳೆಸುವುದು, ಯಶಸ್ಸಿನ ಖಾತ್ರಿಯಿಲ್ಲದ ಒಂದು ಆರ್ಥಿಕ ಹೊರೆಯಾಗಿದೆಯೆಂದು ನೀವು ಭಾವಿಸುತ್ತೀರೊ? ಮಕ್ಕಳನ್ನು ಬೆಳೆಸುವುದು, ಹಣಕಾಸಿನ ಲಾಭವನ್ನು ತರುವುದಕ್ಕೆ ಬದಲಾಗಿ, ಮಕ್ಕಳು ತಮ್ಮನ್ನು ಪೋಷಿಸಿಕೊಳ್ಳಲು ಸಾಧ್ಯವಾಗುವ ತನಕ ಹಣವನ್ನು ಅವಶ್ಯಪಡಿಸುತ್ತದೆ. ಪಿತ್ರಾರ್ಜಿತ ಬಾಧ್ಯತೆಯನ್ನು ನಿರ್ವಹಿಸಲಿಕ್ಕಾಗಿ ಒಳ್ಳೆಯ ಯೋಜನೆಯು ಅಗತ್ಯವಾಗಿರುವಂತೆಯೇ, ಯಶಸ್ವಿಕರವಾದ ತಂದೆತ್ತಾಯನವನ್ನು ನಿಭಾಯಿಸಲು ಯೋಜನೆಯ ಅಗತ್ಯವಿದೆ.
ಕಾಳಜಿ ವಹಿಸುವ ಹೆತ್ತವರು, ತಮ್ಮ ಮಕ್ಕಳಿಗೆ ಜೀವಿತದಲ್ಲಿ ಒಂದು ಒಳ್ಳೆಯ ಆರಂಭವನ್ನು ಕೊಡಲು ಅಪೇಕ್ಷಿಸುತ್ತಾರೆ. ಈ ಲೋಕದಲ್ಲಿ ಕೆಟ್ಟ ಹಾಗೂ ಅತಿ ದುಃಖಕರವಾದ ಸಂಗತಿಗಳು ಸಂಭವಿಸಬಹುದಾದರೂ, ತಮ್ಮ ಸಂತಾನವನ್ನು ಸಂರಕ್ಷಿಸಲಿಕ್ಕಾಗಿ ಹೆತ್ತವರು ಹೆಚ್ಚನ್ನು ಮಾಡಬಲ್ಲರು. ಹಿಂದಿನ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ ವರ್ನರ್ ಹಾಗೂ ಈವರ ಉದಾಹರಣೆಯನ್ನು ಪರಿಗಣಿಸಿರಿ.a
ಹೆತ್ತವರು ನಿಜವಾಗಿಯೂ ಕಾಳಜಿ ವಹಿಸುವಾಗ
ವರ್ನರ್ ವರದಿಸುವುದೇನೆಂದರೆ, ಆ ವಿಷಯದ ಕುರಿತು ಅಲಕ್ಷ್ಯಭಾವವನ್ನು ತೋರಿಸುವುದಕ್ಕೆ ಬದಲಾಗಿ, ಶಾಲೆಯಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಅವನ ಹೆತ್ತವರು ನಿಜವಾದ ಆಸಕ್ತಿಯನ್ನು ತೋರಿಸಿದರು. “ಅವರು ನನಗೆ ಕೊಟ್ಟ ಪ್ರಾಯೋಗಿಕ ಸಲಹೆಗಳನ್ನು ನಾನು ತುಂಬ ಗಣ್ಯಮಾಡಿದೆ. ಮತ್ತು ಅವರು ನನ್ನ ಕಾಳಜಿ ವಹಿಸಿದರು ಮತ್ತು ನನ್ನನ್ನು ಬೆಂಬಲಿಸುತ್ತಿದ್ದರು ಎಂದು ನನಗನಿಸಿತು. ಹೆತ್ತವರೋಪಾದಿ ಅವರು ತುಂಬ ದೃಢಸಂಕಲ್ಪದವರಾಗಿದ್ದರು, ಆದರೆ ಅವರು ನನ್ನ ನಿಜ ಸ್ನೇಹಿತರಾಗಿದ್ದರೆಂಬುದು ನನಗೆ ಗೊತ್ತಿತ್ತು.” ತನ್ನ ಶಾಲಾ ಕೆಲಸದ ಕುರಿತು ಈವಳು ಎಷ್ಟು ಕ್ಷೋಭೆಗೊಂಡಳೆಂದರೆ, ಖಿನ್ನತೆ ಮತ್ತು ನಿದ್ರಾ ಸಮಸ್ಯೆಗಳನ್ನು ಅವಳು ಅನುಭವಿಸಿದಳು. ಅವಳ ಹೆತ್ತವರಾದ ಫ್ರಾನ್ಸೀಸ್ಕೂ ಹಾಗೂ ಈನೆಸ್ ಸಹ, ಅವಳೊಂದಿಗೆ ಮಾತಾಡುತ್ತಾ, ಮಾನಸಿಕ ಹಾಗೂ ಆತ್ಮಿಕ ಸಮತೂಕವನ್ನು ಪುನಃ ಪಡೆದುಕೊಳ್ಳುವಂತೆ ಅವಳಿಗೆ ಸಹಾಯ ಮಾಡುತ್ತಾ, ಗಣನೀಯ ಸಮಯವನ್ನು ಕಳೆದರು.
ಫ್ರಾನ್ಸೀಸ್ಕೂ ಹಾಗೂ ಈನೆಸ್ರು ತಮ್ಮ ಮಕ್ಕಳನ್ನು ಸಂರಕ್ಷಿಸಲು ಹಾಗೂ ಅವರನ್ನು ವಯಸ್ಕ ಜೀವಿತಕ್ಕಾಗಿ ಸಿದ್ಧಗೊಳಿಸಲು ಹೇಗೆ ಪ್ರಯತ್ನಿಸಿದರು? ಮಕ್ಕಳು ಶಿಶುಗಳಾಗಿದ್ದ ಸಮಯದಿಂದಲೇ, ಈ ಪ್ರೀತಿಪೂರ್ಣ ಹೆತ್ತವರು ಯಾವಾಗಲೂ ಅವರನ್ನು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಳಗೂಡಿಸಿದರು. ಈನೆಸ್ ಹಾಗೂ ಫ್ರಾನ್ಸೀಸ್ಕೂ, ತಮ್ಮ ವಯಸ್ಕ ಸ್ನೇಹಿತರೊಂದಿಗೆ ಮಾತ್ರವೇ ಬೆರೆಯುವುದಕ್ಕೆ ಬದಲಾಗಿ, ತಾವು ಹೋದಲ್ಲೆಲ್ಲ ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದೊಯ್ದರು. ಪ್ರೀತಿಪೂರ್ಣ ಹೆತ್ತವರೋಪಾದಿ, ಅವರು ತಮ್ಮ ಮಗನಿಗೂ ಮಗಳಿಗೂ ಸೂಕ್ತವಾದ ಮಾರ್ಗದರ್ಶನವನ್ನು ಕೊಟ್ಟರು. ಈನೆಸ್ ಹೇಳುವುದು: “ಮನೆಯ ಕೆಲಸ ಮಾಡುವುದು, ಹಣಕಾಸನ್ನು ನಿರ್ವಹಿಸುವುದು, ಹಾಗೂ ತಮ್ಮ ಸ್ವಂತ ಬಟ್ಟೆಗಳ ಜಾಗ್ರತೆ ವಹಿಸುವ ವಿಷಯವನ್ನು ನಾವು ಅವರಿಗೆ ಕಲಿಸಿದೆವು. ಮತ್ತು ಅವರಲ್ಲಿ ಪ್ರತಿಯೊಬ್ಬರೂ ಒಂದು ವೃತ್ತಿಯನ್ನು ಹುಡುಕಿ, ತಮ್ಮ ಜವಾಬ್ದಾರಿಗಳನ್ನು ಆತ್ಮಿಕ ಅಭಿರುಚಿಗಳೊಂದಿಗೆ ಸಮತೂಕವಾಗಿರಿಸಲು ನಾವು ಸಹಾಯ ಮಾಡಿದೆವು.”
ನಿಮ್ಮ ಮಕ್ಕಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಹೆತ್ತವರಿಂದ ಕೊಡಲ್ಪಡಬೇಕಾದ ಮಾರ್ಗದರ್ಶನವನ್ನು ಒದಗಿಸುವುದು ಎಷ್ಟು ಪ್ರಾಮುಖ್ಯವಾದದ್ದಾಗಿದೆ! ನೀವು ಇದನ್ನು ಮಾಡಬಹುದಾಗಿರುವ ಮೂರು ಕ್ಷೇತ್ರಗಳನ್ನು ನಾವು ಪರೀಕ್ಷಿಸೋಣ: (1) ಒಂದು ಸೂಕ್ತವಾದ ರೀತಿಯ ಐಹಿಕ ಉದ್ಯೋಗವನ್ನು ಆಯ್ಕೆಮಾಡುವಂತೆ ನಿಮ್ಮ ಮಕ್ಕಳಿಗೆ ಸಹಾಯ ಮಾಡಿರಿ; (2) ಶಾಲೆಯಲ್ಲಿ ಹಾಗೂ ಕೆಲಸದ ಸ್ಥಳದಲ್ಲಿನ ಭಾವನಾತ್ಮಕ ಒತ್ತಡವನ್ನು ನಿಭಾಯಿಸಲಿಕ್ಕಾಗಿ ಅವರನ್ನು ಸಿದ್ಧಗೊಳಿಸಿರಿ; (3) ತಮ್ಮ ಆತ್ಮಿಕ ಆವಶ್ಯಕತೆಗಳನ್ನು ತೃಪ್ತಿಪಡಿಸುವ ವಿಧವನ್ನು ಅವರಿಗೆ ತೋರಿಸಿರಿ.
ಸೂಕ್ತವಾದ ಉದ್ಯೋಗವನ್ನು ಆಯ್ದುಕೊಳ್ಳಲು ಅವರಿಗೆ ಸಹಾಯ ಮಾಡಿರಿ
ವ್ಯಕ್ತಿಯೊಬ್ಬನ ಐಹಿಕ ಉದ್ಯೋಗವು ಅವನ ಆರ್ಥಿಕ ಸನ್ನಿವೇಶದ ಮೇಲೆ ಪ್ರಭಾವ ಬೀರುತ್ತದೆ ಮಾತ್ರವಲ್ಲ ಅವನ ಹೆಚ್ಚಿನ ಸಮಯವನ್ನೂ ಕಬಳಿಸಿಬಿಡುವುದರಿಂದ, ತಂದೆತಾಯಿಗಳ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುವುದರಲ್ಲಿ, ಪ್ರತಿಯೊಂದು ಮಗುವಿನ ಅಭಿರುಚಿಗಳು ಹಾಗೂ ಸಾಮರ್ಥ್ಯಗಳನ್ನು ಪರಿಗಣಿಸುವುದೂ ಒಳಗೂಡಿದೆ. ಆತ್ಮಸಾಕ್ಷಿಯಂತೆ ನಡೆಯುವ ಯಾವ ವ್ಯಕ್ತಿಯೂ ಇತರರಿಗೆ ಹೊರೆಯಾಗಿರಲು ಬಯಸುವುದಿಲ್ಲವಾದ್ದರಿಂದ, ಸ್ವತಃ ತನ್ನನ್ನು ಹಾಗೂ ಒಂದು ಕುಟುಂಬವನ್ನು ಪೋಷಿಸಲು ತಮ್ಮ ಮಗುವನ್ನು ಹೇಗೆ ಸಿದ್ಧಗೊಳಿಸಸಾಧ್ಯವಿದೆ ಎಂಬುದರ ಕುರಿತು ಹೆತ್ತವರು ಗಂಭೀರವಾಗಿ ಆಲೋಚಿಸಬೇಕಾಗಿದೆ. ಸುಗಮವಾದ ಜೀವಿತವನ್ನು ನಡೆಸಲಿಕ್ಕಾಗಿ ನಿಮ್ಮ ಮಗನಿಗೆ ಅಥವಾ ಮಗಳಿಗೆ ಒಂದು ಕೆಲಸವನ್ನು ಕಲಿಯುವ ಅಗತ್ಯವಿದೆಯೊ? ನಿಜವಾಗಿಯೂ ಕಾಳಜಿ ವಹಿಸುವ ಹೆತ್ತವರೋಪಾದಿ, ಉದ್ಯೋಗಶೀಲರಾಗಿ ಕೆಲಸಮಾಡುವ ಬಯಕೆ, ಕಲಿಯುವ ಸಿದ್ಧಮನಸ್ಸು, ಹಾಗೂ ಇತರರೊಂದಿಗೆ ಹೊಂದಿಕೊಂಡುಹೋಗುವ ಸಾಮರ್ಥ್ಯಗಳಂತಹ ಗುಣಗಳನ್ನು ಬೆಳೆಸಿಕೊಳ್ಳಲಿಕ್ಕಾಗಿ ನಿಮ್ಮ ಮಗುವಿಗೆ ಸಹಾಯ ಮಾಡಲು ಸುಸಂಗತ ಪ್ರಯತ್ನಗಳನ್ನು ಮಾಡಿರಿ.
ನೀಕೊಲಳನ್ನು ತೆಗೆದುಕೊಳ್ಳಿರಿ. ಅವಳು ಹೇಳುವುದು: “ತಮ್ಮ ಕ್ಲೀನಿಂಗ್ ಕೆಲಸದಲ್ಲಿ ನಾನು ಸಹ ಅವರೊಂದಿಗೆ ಕೆಲಸಮಾಡುವಂತೆ ನನ್ನ ಹೆತ್ತವರು ಏರ್ಪಡಿಸಿದರು. ನಾನು ಸಂಪಾದಿಸಿದ ಹಣದ ಸ್ವಲ್ಪ ಪ್ರತಿಶತವನ್ನು ನಮ್ಮ ಮನೆವಾರ್ತೆಯ ವೆಚ್ಚಗಳಿಗಾಗಿ ಕೊಡುವಂತೆ ಮತ್ತು ಉಳಿದ ಹಣವನ್ನು ನನ್ನ ಸ್ವಂತ ಖರ್ಚಿಗೆ ಇಟ್ಟುಕೊಳ್ಳುವಂತೆ ಅಥವಾ ಉಳಿತಾಯಮಾಡುವಂತೆ ಅವರು ಸಲಹೆ ನೀಡಿದರು. ತದನಂತರ ಜೀವಿತದಲ್ಲಿ ತುಂಬ ಪ್ರಯೋಜನಕರವಾಗಿ ಪರಿಣಮಿಸಿದ ಪ್ರಬಲವಾದ ಜವಾಬ್ದಾರಿಯ ಮನೋಭಾವವನ್ನು ಇದು ನನ್ನಲ್ಲಿ ಮೂಡಿಸಿತು.”
ವ್ಯಕ್ತಿಯೊಬ್ಬನು ಎಂತಹ ರೀತಿಯ ಐಹಿಕ ಕೆಲಸವನ್ನು ಆಯ್ಕೆಮಾಡಬೇಕೆಂದು, ದೇವರ ವಾಕ್ಯವಾದ ಬೈಬಲು ನಿರ್ದಿಷ್ಟವಾಗಿ ಸೂಚಿಸುವುದಿಲ್ಲ. ಆದರೆ ಅದು ದೃಢವಾದ ಮಾರ್ಗದರ್ಶನಗಳನ್ನು ಒದಗಿಸುತ್ತದೆ. ದೃಷ್ಟಾಂತಕ್ಕಾಗಿ ಅಪೊಸ್ತಲ ಪೌಲನು ಹೇಳಿದ್ದು: “ಕೆಲಸಮಾಡಲೊಲ್ಲದವನು ಊಟಮಾಡಬಾರದು.” ಥೆಸಲೊನೀಕದಲ್ಲಿದ್ದ ಕ್ರೈಸ್ತರಿಗೆ ಬರೆಯುತ್ತಾ ಅವನು ಇನ್ನೂ ಹೇಳಿದ್ದು: “ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಕೆಲಸದಲ್ಲಿ ಮಾತ್ರ ತಲೆಹಾಕಿ ಅಕ್ರಮವಾಗಿ ನಡೆಯುತ್ತಾರೆಂದು ವರ್ತಮಾನ ಕೇಳಿದ್ದೇವೆ. ಇಂಥವರು ತಮ್ಮ ಕೆಲಸವನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡಬೇಕೆಂದು ಕರ್ತನಾದ ಯೇಸುಕ್ರಿಸ್ತನಲ್ಲಿ ನಾವು ಆಜ್ಞಾಪಿಸಿ ಪ್ರಬೋಧಿಸುತ್ತೇವೆ.”—2 ಥೆಸಲೊನೀಕ 3:10-12.
ಆದರೂ, ಜೀವನದಲ್ಲಿ ಒಂದು ಉದ್ಯೋಗವನ್ನು ಪಡೆದು, ಹಣವನ್ನು ಸಂಪಾದಿಸುವುದು ಮಾತ್ರವೇ ಸಾಕಾಗಲಾರದು. ಕಾಲಕ್ರಮೇಣವಾಗಿ, ಮಹತ್ವಾಕಾಂಕ್ಷೆ ಇರುವವರು ಅಸಮಾಧಾನಿಗಳಾಗಿ ಪರಿಣಮಿಸಿ, ತಾವು “ಗಾಳಿಯನ್ನು ಬೆನ್ನಟ್ಟು”ತ್ತಿದ್ದೇವೆಂದು ಕಂಡುಕೊಳ್ಳಬಹುದು. (ಪ್ರಸಂಗಿ 1:14) ಖ್ಯಾತಿ ಹಾಗೂ ಸಮೃದ್ಧಿಯನ್ನು ಬೆನ್ನಟ್ಟುವಂತೆ ತಮ್ಮ ಮಕ್ಕಳನ್ನು ಉತ್ತೇಜಿಸುವುದಕ್ಕೆ ಬದಲಾಗಿ, ಅಪೊಸ್ತಲ ಯೋಹಾನನ ದೈವಪ್ರೇರಿತ ಮಾತುಗಳ ವಿವೇಕವನ್ನು ಅವಲೋಕಿಸುವಂತೆ ಹೆತ್ತವರು ಅವರಿಗೆ ಸಹಾಯ ಮಾಡುವುದು ಒಳ್ಳೆಯದು. ಅದು ಹೀಗೆ ಹೇಳುತ್ತದೆ: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ; ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:15-17.
ನೀವು ಅವರ ಭಾವನಾತ್ಮಕ ಆವಶ್ಯಕತೆಗಳನ್ನು ಹೇಗೆ ತೃಪ್ತಿಪಡಿಸಬಲ್ಲಿರಿ?
ಒಬ್ಬ ಹೆತ್ತವರೋಪಾದಿ, ನೀವು ಕ್ರೀಡಾಪಟುಗಳ ತರಬೇತುಗಾರನಂತೆ ಏಕಿರಬಾರದು? ಅವನು ತನ್ನ ವಶದಲ್ಲಿರುವ ಕ್ರೀಡಾಪಟುಗಳಲ್ಲಿ, ಹೆಚ್ಚು ವೇಗವಾಗಿ ಓಡುವ ಅಥವಾ ಹೆಚ್ಚು ದೂರ ನೆಗೆಯುವ ಶಾರೀರಿಕ ಸಾಮರ್ಥ್ಯವನ್ನು ವಿಕಸಿಸಿಕೊಳ್ಳುವುದರ ಮೇಲೆ ಮಾತ್ರವೇ ಮನಸ್ಸನ್ನು ಕೇಂದ್ರೀಕರಿಸುವುದಿಲ್ಲ. ಬಹುಶಃ ಅವನು ಯಾವುದೇ ರೀತಿಯ ನಕಾರಾತ್ಮಕ ಮನೋಭಾವವನ್ನು ಜಯಿಸುವಂತೆ ಅವರಿಗೆ ಸಹಾಯ ಮಾಡುವ ಮೂಲಕ, ಅವರ ಭಾವನಾತ್ಮಕ ಬಲವನ್ನು ಬಲಪಡಿಸಲು ಸಹ ಪ್ರಯತ್ನಿಸುತ್ತಾನೆ. ನಿಮ್ಮ ವಿಷಯದಲ್ಲಿ ಹೇಳುವುದಾದರೆ, ನಿಮ್ಮ ಮಕ್ಕಳನ್ನು ನೀವು ಹೇಗೆ ಉತ್ತೇಜಿಸಿ, ಭಕ್ತಿವೃದ್ಧಿಮಾಡಿ, ಪ್ರಚೋದಿಸಬಲ್ಲಿರಿ?
ಹದಿಮೂರು ವರ್ಷ ಪ್ರಾಯದ ಒಬ್ಬ ಯೌವನಸ್ಥನಾದ ರೋಸಾರ್ಯೋನನ್ನು ಪರಿಗಣಿಸಿರಿ. ದೈಹಿಕ ಬದಲಾವಣೆಗಳ ಫಲಿತಾಂಶವಾಗಿ ಉಂಟಾದ ಆಂತರಿಕ ಸಂಕ್ಷೋಭೆಯಲ್ಲದೆ, ತಂದೆತಾಯಿಯರ ಅನೈಕ್ಯ ಹಾಗೂ ಗಮನದ ಕೊರತೆಯ ಕಾರಣದಿಂದ ಅವನು ಭಾವನಾತ್ಮಕ ಒತ್ತಡವನ್ನೂ ಅನುಭವಿಸಿದನು. ಅವನಂತಹ ಯುವ ಜನರ ವಿಷಯದಲ್ಲಿ ಏನು ಮಾಡಸಾಧ್ಯವಿದೆ? ನಿಮ್ಮ ಮಕ್ಕಳನ್ನು ಎಲ್ಲ ಚಿಂತೆಗಳು ಹಾಗೂ ಕೆಟ್ಟ ಪ್ರಭಾವಗಳಿಂದ ರಕ್ಷಿಸುವುದು ಅಸಾಧ್ಯವಾಗಿರುವುದಾದರೂ, ಒಬ್ಬ ಹೆತ್ತವರೋಪಾದಿ ನಿಮ್ಮ ಪಾತ್ರವನ್ನು ಎಂದಿಗೂ ತೊರೆಯಬೇಡಿ. ಮಿತಿಮೀರಿ ಸಂರಕ್ಷಿಸುವವರಾಗಿರದೆ, ನಿಮ್ಮ ಮಕ್ಕಳನ್ನು ಅರ್ಥಮಾಡಿಕೊಂಡು ಅವರಿಗೆ ಶಿಸ್ತನ್ನು ನೀಡಿರಿ. ಇದನ್ನು ಮಾಡುವಾಗ ಪ್ರತಿಯೊಂದು ಮಗುವೂ ಅಸಾಧಾರಣವಾದದ್ದಾಗಿದೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿರಿ. ದಯಾಭಾವ ಹಾಗೂ ಪ್ರೀತಿಯನ್ನು ತೋರಿಸುವ ಮೂಲಕ, ಒಬ್ಬ ಯುವ ವ್ಯಕ್ತಿಯು ಹೆಚ್ಚು ಭದ್ರತೆಯ ಅನಿಸಿಕೆಯುಳ್ಳವನಾಗಿರುವಂತೆ ನೀವು ಮಾಡಸಾಧ್ಯವಿದೆ. ಅವನು ಬೆಳೆಯುತ್ತಾ ಹೋದಂತೆ, ಭರವಸೆ ಹಾಗೂ ಸ್ವಗೌರವದ ಕೊರತೆಯುಳ್ಳವನಾಗುವುದರಿಂದ ಸಹ ಇದು ಅವನನ್ನು ತಡೆಯುವುದು.
ನಿಮ್ಮ ಭಾವನಾತ್ಮಕ ಆವಶ್ಯಕತೆಗಳನ್ನು ತೃಪ್ತಿಪಡಿಸುವುದರಲ್ಲಿ ನಿಮ್ಮ ಸ್ವಂತ ಹೆತ್ತವರು ಬಹಳಷ್ಟು ಯಶಸ್ಸನ್ನು ಪಡೆದಿರುವುದಾದರೂ, ನಿಜವಾಗಿಯೂ ನೀವು ಒಬ್ಬ ಸಹಾಯಕಾರಿ ಹೆತ್ತವರಾಗಿ ಪರಿಣಮಿಸಲಿಕ್ಕಾಗಿ ಈ ಮೂರು ವಿಷಯಗಳು ನೆರವು ನೀಡಬಲ್ಲವು: (1) ನಿಮ್ಮ ಮಕ್ಕಳ ತೀರ ಚಿಕ್ಕದಾಗಿ ತೋರುವ ಸಮಸ್ಯೆಗಳನ್ನು ಅಲಕ್ಷಿಸುವಷ್ಟರ ಮಟ್ಟಿಗೆ ನಿಮ್ಮ ಸ್ವಂತ ತೊಂದರೆಗಳಲ್ಲಿ ಮಗ್ನರಾಗಿರುವುದನ್ನು ನಿಲ್ಲಿಸಿರಿ; (2) ದಿನಾಲೂ ಅವರೊಂದಿಗೆ ಆನಂದಕರವಾದ ಹಾಗೂ ಅರ್ಥವತ್ತಾದ ರೀತಿಯಲ್ಲಿ ಸಂವಾದ ಮಾಡಲು ಪ್ರಯತ್ನಿಸಿರಿ; (3) ಸಮಸ್ಯೆಗಳನ್ನು ಬಗೆಹರಿಸುವ ವಿಧ ಹಾಗೂ ಜನರೊಂದಿಗೆ ವ್ಯವಹರಿಸುವ ವಿಧದ ಕುರಿತು ಒಂದು ಸಕಾರಾತ್ಮಕವಾದ ಮನೋಭಾವವನ್ನು ಪ್ರವರ್ಧಿಸಿರಿ.
ಒಬ್ಬ ಹದಿವಯಸ್ಕಳೋಪಾದಿ ತನ್ನ ಗತ ವರ್ಷಗಳ ಕಡೆಗೆ ಹಿನ್ನೋಟ ಬೀರುತ್ತಾ ಬಿರ್ಗಿಟ್ ಹೇಳುವುದು: “ನೀವು ಜನರನ್ನು ನಿಮ್ಮಿಷ್ಟದಂತೆ ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ನಾನು ಕಲಿಯಬೇಕಾಯ್ತು. ಒಂದುವೇಳೆ ನನಗೆ ಇಷ್ಟವಾಗದಂತಹ ಗುಣಗಳನ್ನು ನಾನು ಇತರರಲ್ಲಿ ಕಂಡುಕೊಳ್ಳುವಲ್ಲಿ, ನಾನು ಅವರಂತೆ ಆಗುವುದನ್ನು ದೂರಮಾಡುವುದೇ ನಾನು ಮಾಡಸಾಧ್ಯವಿದ್ದ ಕಾರ್ಯವಾಗಿತ್ತೆಂದು ನನ್ನ ತಾಯಿ ನನ್ನೊಂದಿಗೆ ತರ್ಕಿಸಿದರು. ನಾನು ನನ್ನ ಸ್ವಂತ ರೀತಿನೀತಿಗಳನ್ನು ಬದಲಾಯಿಸಬೇಕಾದ ಅತ್ಯುತ್ತಮ ಸಮಯವು, ನಾನು ಎಳೆಯವಳಾಗಿದ್ದಾಗಲೇ ಆಗಿದೆಯೆಂದು ಸಹ ಅವರು ಹೇಳಿದರು.”
ಆದರೂ, ನಿಮ್ಮ ಮಕ್ಕಳಿಗೆ ಒಂದು ಉದ್ಯೋಗ ಹಾಗೂ ಭಾವನಾತ್ಮಕ ಸ್ಥಿರತೆಗಿಂತಲೂ ಹೆಚ್ಚಿನದ್ದರ ಆವಶ್ಯಕತೆಯಿದೆ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿರಿ, ‘ನಾನು ತಂದೆತ್ತಾಯನವನ್ನು ಒಂದು ದೇವದತ್ತ ಜವಾಬ್ದಾರಿಯಾಗಿ ವೀಕ್ಷಿಸುತ್ತೇನೊ?’ ನೀವು ಹಾಗೆ ವೀಕ್ಷಿಸುವಲ್ಲಿ, ನಿಮ್ಮ ಮಕ್ಕಳ ಆತ್ಮಿಕ ಆವಶ್ಯಕತೆಗಳಿಗೆ ಗಮನಕೊಡಲು ನೀವು ಬಯಸುವಿರಿ.
ಅವರ ಆತ್ಮಿಕ ಆವಶ್ಯಕತೆಗಳನ್ನು ಪೂರೈಸುವ ವಿಧಗಳು
ಯೇಸು ಕ್ರಿಸ್ತನು ತನ್ನ ಪರ್ವತ ಪ್ರಸಂಗದಲ್ಲಿ ಹೇಳಿದ್ದು: “ತಮ್ಮ ಆತ್ಮಿಕ ಆವಶ್ಯಕತೆಯ ಪ್ರಜ್ಞೆಯುಳ್ಳವರು ಸಂತೋಷಿತರು, ಏಕೆಂದರೆ ಪರಲೋಕದ ರಾಜ್ಯವು ಅವರಿಗೆ ಸೇರಿದ್ದಾಗಿದೆ.” (ಮತ್ತಾಯ 5:3, NW) ಆತ್ಮಿಕ ಆವಶ್ಯಕತೆಗಳನ್ನು ತೃಪ್ತಿಪಡಿಸುವುದರಲ್ಲಿ ಏನು ಒಳಗೂಡಿದೆ? ಯೆಹೋವ ದೇವರಲ್ಲಿ ನಂಬಿಕೆಯನ್ನು ತೋರಿಸುವುದರಲ್ಲಿ ಹೆತ್ತವರು ಒಂದು ಅತ್ಯುತ್ತಮವಾದ ಮಾದರಿಯನ್ನು ಇಡುವಾಗ, ಮಕ್ಕಳು ಬಹಳವಾಗಿ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಅಪೊಸ್ತಲ ಪೌಲನು ಬರೆದುದು: “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” (ಇಬ್ರಿಯ 11:6) ಆದರೂ, ನಂಬಿಕೆಯು ನಿಜವಾದ ಅರ್ಥವನ್ನು ಪಡೆದಿರಬೇಕಾದರೆ, ಪ್ರಾರ್ಥನೆಯು ಅಗತ್ಯವಾಗಿದೆ. (ರೋಮಾಪುರ 12:12) ನಿಮ್ಮ ಸ್ವಂತ ಆತ್ಮಿಕ ಆವಶ್ಯಕತೆಯನ್ನು ನೀವು ಅಂಗೀಕರಿಸುವಲ್ಲಿ, ನೀವು ದೈವಿಕ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುವಿರಿ. ಇಸ್ರಾಯೇಲಿನ ಪ್ರಸಿದ್ಧ ನ್ಯಾಯಸ್ಥಾಪಕನಾಗಿ ಪರಿಣಮಿಸಿದ ಸಂಸೋನನ ತಂದೆಯು ಸಹ ಹಾಗೆ ಮಾಡಿದನು. (ನ್ಯಾಯಸ್ಥಾಪಕರು 13:8) ಸಹಾಯಕ್ಕಾಗಿ ನೀವು ಪ್ರಾರ್ಥಿಸುತ್ತೀರಿ ಮಾತ್ರವಲ್ಲ, ದೇವರ ಪ್ರೇರಿತ ವಾಕ್ಯವಾದ ಬೈಬಲಿನ ಕಡೆಗೆ ಸಹ ತೆರಳುತ್ತೀರಿ.—2 ತಿಮೊಥೆಯ 3:16, 17.b
ಹಿತಕರವಾದ ಮಾರ್ಗದರ್ಶನೆ, ಭಾವನಾತ್ಮಕ ಬೆಂಬಲ, ಮತ್ತು ಆತ್ಮಿಕ ಸಹಾಯವನ್ನು ಒದಗಿಸುವುದರಲ್ಲಿ ಇಷ್ಟೆಲ್ಲ ಕಠಿನ ಪರಿಶ್ರಮವು ಒಳಗೂಡಿರುವುದಾದರೂ, ತಂದೆತ್ತಾಯನದ ಜವಾಬ್ದಾರಿಯು ಪ್ರತಿಫಲದಾಯಕವಾದದ್ದಾಗಿದೆ. ಬ್ರೆಸಿಲ್ನಲ್ಲಿ ಇಬ್ಬರು ಮಕ್ಕಳ ತಂದೆಯೊಬ್ಬನು ಹೇಳುವುದು: “ನನಗೆ ಮಕ್ಕಳು ಇಲ್ಲದಿರುವುದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅವರೊಂದಿಗೆ ನಾವು ಹಂಚಿಕೊಳ್ಳಸಾಧ್ಯವಿರುವ ಅನೇಕ ಒಳ್ಳೆಯ ವಿಚಾರಗಳು ಇವೆ.” ಮಕ್ಕಳು ಏಕೆ ಚೆನ್ನಾಗಿ ಮುಂದುವರಿಯುತ್ತಿದ್ದಾರೆ ಎಂಬುದನ್ನು ವಿವರಿಸುತ್ತಾ ತಾಯಿ ಕೂಡಿಸುವುದು: “ನಾವು ಯಾವಾಗಲೂ ಒಟ್ಟಿಗೆ ಇರುತ್ತೇವೆ, ಮತ್ತು ನಾವು ವಿಷಯಗಳನ್ನು ಉಲ್ಲಾಸಕರವಾಗಿಯೂ ಸಂತೋಷಕರವಾಗಿಯೂ ಮಾಡಲು ಪ್ರಯತ್ನಿಸುತ್ತೇವೆ. ಮತ್ತು ಅತಿ ಪ್ರಾಮುಖ್ಯವಾಗಿ, ನಾವು ಯಾವಾಗಲೂ ಮಕ್ಕಳಿಗಾಗಿ ಪ್ರಾರ್ಥಿಸುತ್ತೇವೆ.”
ಒಂದು ಸಮಸ್ಯೆಯು ಉಂಟಾದಾಗಲೆಲ್ಲ ತನ್ನ ಹೆತ್ತವರು ತನ್ನ ಕಡೆಗೆ ತೋರಿಸಿದ ಪ್ರೀತಿ ಹಾಗೂ ತಾಳ್ಮೆಯನ್ನು ಪ್ರೀಸೀಲ್ಲ ಜ್ಞಾಪಿಸಿಕೊಳ್ಳುತ್ತಾಳೆ. “ಅವರು ನನ್ನ ನಿಜ ಸ್ನೇಹಿತರಾಗಿದ್ದರು ಮತ್ತು ಎಲ್ಲ ವಿಷಯಗಳಲ್ಲಿಯೂ ಅವರು ನನಗೆ ಸಹಾಯ ಮಾಡಿದರು” ಎಂದು ಅವಳು ಹೇಳುತ್ತಾಳೆ. “ಒಬ್ಬ ಮಗುವಿನೋಪಾದಿ ನನ್ನನ್ನು ‘ಯೆಹೋವನಿಂದ ಬಂದ ಸ್ವಾಸ್ಥ್ಯ’ದಂತೆ ನೋಡಿಕೊಳ್ಳಲಾಗುತ್ತಿದೆ ಎಂಬ ಅನಿಸಿಕೆ ನಿಜವಾಗಿಯೂ ನನಗಾಯಿತು.” (ಕೀರ್ತನೆ 127:3) ಇನ್ನಿತರ ಅನೇಕ ಹೆತ್ತವರು ಮಾಡುವಂತೆ, ನೀವು ಬೈಬಲನ್ನು ಮತ್ತು ಕ್ರೈಸ್ತ ಪ್ರಕಾಶನಗಳನ್ನು ನಿಮ್ಮ ಮಕ್ಕಳೊಂದಿಗೆ ಒಟ್ಟಿಗೆ ಓದಲು ಸಾಧ್ಯವಾಗುವಂತೆ, ಸಮಯವನ್ನು ಏಕೆ ಶೆಡ್ಯೂಲ್ ಮಾಡಬಾರದು? ಒಂದು ಸಕಾರಾತ್ಮಕವಾದ ವಾತಾವರಣದಲ್ಲಿ ಬೈಬಲ್ ವೃತ್ತಾಂತಗಳನ್ನು ಹಾಗೂ ಮೂಲತತ್ವಗಳನ್ನು ಪರಿಗಣಿಸುವುದು, ಹೆಚ್ಚು ಆತ್ಮವಿಶ್ವಾಸವುಳ್ಳವರಾಗಿರಲು ಹಾಗೂ ಭವಿಷ್ಯತ್ತಿಗಾಗಿ ಒಂದು ನಿಜವಾದ ನಿರೀಕ್ಷೆಯನ್ನು ಹೊಂದಿರಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಸಾಧ್ಯವಿದೆ.
ಎಲ್ಲ ಮಕ್ಕಳು ಸುರಕ್ಷಿತರಾಗಿರುವಾಗ
ಇಂದು ಅನೇಕ ಮಕ್ಕಳಿಗೆ ಭವಿಷ್ಯತ್ತು ತುಂಬ ವಿಷಣ್ಣವಾಗಿ ತೋರುತ್ತದಾದರೂ, ಅತಿ ಬೇಗನೆ ಭೂಮಿಯು ಮಾನವಕುಲಕ್ಕೆ ಒಂದು ಸುಭದ್ರ ಮನೆಯಾಗಿ ಪರಿಣಮಿಸುವುದೆಂದು ದೇವರ ವಾಕ್ಯವು ಖಾತ್ರಿಕೊಡುತ್ತದೆ. ಹೆತ್ತವರು ಇನ್ನೆಂದಿಗೂ ತಮ್ಮ ಮಕ್ಕಳ ಸುರಕ್ಷೆಯ ಕುರಿತು ಚಿಂತಿಸಬೇಕಾಗಿಲ್ಲದ, ದೇವರ ವಾಗ್ದತ್ತ ಹೊಸ ಲೋಕದಲ್ಲಿನ ಸಮಯದ ಕುರಿತು ಊಹಿಸಿಕೊಳ್ಳಿರಿ! (2 ಪೇತ್ರ 3:13) ಈ ಪ್ರವಾದನೆಯ ಭವ್ಯ ನೆರವೇರಿಕೆಯನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಲು ಪ್ರಯತ್ನಿಸಿರಿ: “ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟಪಶುವೂ ಒಟ್ಟಿಗಿರುವವು; ಇವುಗಳನ್ನು ಚಿಕ್ಕ ಮಗುವು ನಡಿಸುವದು.” (ಯೆಶಾಯ 11:6) ಇಂದು ಸಹ, ಈ ಮಾತುಗಳಲ್ಲಿ ವರ್ಣಿಸಲ್ಪಟ್ಟಿರುವ ಆತ್ಮಿಕ ಸುರಕ್ಷೆಯು, ಯೆಹೋವನಿಗೆ ಸೇವೆಸಲ್ಲಿಸುವ ಜನರ ನಡುವೆ ಸಾಂಕೇತಿಕವಾದ ನೆರವೇರಿಕೆಯನ್ನು ಪಡೆದಿದೆ. ಅವರ ಮಧ್ಯೆ, ನಿಮಗೆ ದೇವರ ಪ್ರೀತಿಪೂರ್ಣ ಆರೈಕೆಯ ಅನುಭವವಾಗುವುದು. ನೀವು ದೇವರಿಗಾಗಿ ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ, ಒಬ್ಬ ಹೆತ್ತವರೋಪಾದಿ ನಿಮ್ಮ ಭಾವನೆಗಳನ್ನು ಆತನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ನಿಮಗೆ ಎದುರಾಗಬಹುದಾದ ಚಿಂತೆಗಳು ಹಾಗೂ ಪರೀಕ್ಷೆಗಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತಾನೆ ಎಂಬ ವಿಷಯದಲ್ಲಿ ನೀವು ಖಾತ್ರಿಯಿಂದಿರಸಾಧ್ಯವಿದೆ. ಆತನ ವಾಕ್ಯವನ್ನು ಅಭ್ಯಾಸಿಸಿರಿ ಮತ್ತು ಆತನ ರಾಜ್ಯದಲ್ಲಿ ನಿಮ್ಮ ನಿರೀಕ್ಷೆಯನ್ನು ಇಡಿರಿ.
ಒಂದು ಒಳ್ಳೆಯ ಮಾದರಿಯನ್ನು ಇಡುವ ಮೂಲಕ, ನಿತ್ಯಜೀವದ ಮಾರ್ಗದಲ್ಲಿ ನಡೆಯುವಂತೆ ನಿಮ್ಮ ಮಕ್ಕಳಿಗೆ ಸಹಾಯ ಮಾಡಿರಿ. ನೀವು ಯೆಹೋವ ದೇವರಲ್ಲಿ ಆಶ್ರಯವನ್ನು ಪಡೆದುಕೊಳ್ಳುವುದಾದರೆ, ನಿಮ್ಮ ಭವಿಷ್ಯತ್ತು ಹಾಗೂ ನಿಮ್ಮ ಮಕ್ಕಳ ಭವಿಷ್ಯತ್ತು, ನಿಮ್ಮ ಎಲ್ಲ ನಿರೀಕ್ಷಣೆಗಳನ್ನು ಮೀರಸಾಧ್ಯವಿದೆ. ‘ಯೆಹೋವನಲ್ಲಿ ಸಂತೋಷಿಸು; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು’ ಎಂದು ಹಾಡಿದ ಕೀರ್ತನೆಗಾರನಿಗೆ ಇದ್ದಂತಹದ್ದೇ ಆತ್ಮವಿಶ್ವಾಸವನ್ನು ನೀವು ಸಹ ಪಡೆದುಕೊಳ್ಳಸಾಧ್ಯವಿದೆ.—ಕೀರ್ತನೆ 37:4.
[ಅಧ್ಯಯನ ಪ್ರಶ್ನೆಗಳು]
a ಈ ಲೇಖನದಲ್ಲಿ ಬದಲಿ ಹೆಸರುಗಳು ಉಪಯೋಗಿಸಲ್ಪಟ್ಟಿವೆ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಕುಟುಂಬ ಸಂತೋಷದ ರಹಸ್ಯ ಪುಸ್ತಕದ, 5ರಿಂದ 7ನೆಯ ಅಧ್ಯಾಯಗಳನ್ನು ನೋಡಿರಿ.