“ನೀವಿರುವ ರೀತಿಯಲ್ಲೇ ನಾವೂ ಇರುವಂತೆ ದೇವರು ನಿರೀಕ್ಷಿಸುತ್ತಾನೆ”
“ಕರ್ತನ ನಿಮಿತ್ತ” ಐಹಿಕ ಅಧಿಕಾರಿಗಳೊಂದಿಗೆ ಸಹಕರಿಸುವಾಗ, ಕ್ರೈಸ್ತರು “ಒಳ್ಳೇದನ್ನೇ ಮಾಡುವವರು ಎಂಬ ಹೊಗಳಿಕೆ”ಯನ್ನು (NW) ನಿರೀಕ್ಷಿಸಸಾಧ್ಯವಿದೆ. (1 ಪೇತ್ರ 2:13-15) ಸ್ವಲ್ಪ ಸಮಯದ ಹಿಂದೆ ಕಾಲೇಜ್ ಸಭಾಂಗಣದಲ್ಲಿ ನಡೆಸಿದ ಒಂದು ಜಿಲ್ಲಾ ಅಧಿವೇಶನದಲ್ಲಿ, ದಕ್ಷಿಣ ಆಫ್ರಿಕದಲ್ಲಿರುವ ಯೆಹೋವನ ಸಾಕ್ಷಿಗಳಿಗೆ ಇದರ ಅನುಭವವಾಯಿತು.
ಅಧಿವೇಶನದ ಮೊದಲನೆಯ ದಿನದಂದು, ಕಾಲೇಜಿನ ಭದ್ರತಾ ಪಡೆಯ ಪೊಲೀಸರು, ಪ್ರತಿನಿಧಿಗಳನ್ನು ಎದುರಿಸಲು ಸಿದ್ಧರಾಗಿ ನಿಂತರು. ಏಕೆಂದರೆ ಸರ್ವಸಾಮಾನ್ಯವಾಗಿ ಅಲ್ಲಿಗೆ ಬರುವ ಜನರು, ಕೋಪದಿಂದ, ಅಸಹಕಾರ ಮನೋಭಾವದಿಂದ ವರ್ತಿಸುತ್ತಿದ್ದರು. ಮತ್ತು ಬೇರೆಯವರ ಕಾರ್ಯಕ್ರಮಗಳಲ್ಲಿ ಅವರಿಗೆ ಈ ರೀತಿಯ ಅನುಭವವಾಗಿತ್ತು. ಅವರಿಗೆ ಎಂದೂ ಯೆಹೋವನ ಸಾಕ್ಷಿಗಳೊಂದಿಗೆ ವ್ಯವಹರಿಸುವ ಅವಕಾಶವು ಸಿಕ್ಕಿರಲಿಲ್ಲ, ಆದರೆ ಈಗ ಅವರಿಗೆ ಆಶ್ಚರ್ಯಕರವಾದ ಸಂಗತಿಯೊಂದು ಕಾದಿತ್ತು!
ವಾಡಿಕೆಯಂತೆ ಅವರು ಗೇಟ್ನ ಬಳಿ ಕ್ರಮವಾಗಿ ತಪಾಸಣೆಮಾಡುತ್ತಿದ್ದಾಗ, ಈ ಪೊಲೀಸರು ಆ ಸ್ಥಳವನ್ನು ಪ್ರವೇಶಿಸುತ್ತಿರುವ ಹಾಗೂ ಹೊರಗೆ ಹೋಗುತ್ತಿರುವ ಪ್ರತಿಯೊಂದು ಕಾರನ್ನು ಪರೀಕ್ಷಿಸುತ್ತಿದ್ದರು. ಪ್ರತಿನಿಧಿಗಳ ವಾಹನಗಳನ್ನು ತಪಾಸಣೆಮಾಡಿ ಕಳುಹಿಸುತ್ತಿದ್ದಾಗ, ತಮಗೆ ತಡವಾದರೂ ಅವರು ಸ್ನೇಹಭಾವದಿಂದ, ತಾಳ್ಮೆಯಿಂದ, ಮತ್ತು ಗೌರವದಿಂದ ಅಭಿವಂದಿಸುತ್ತಿರುವುದನ್ನು ನೋಡಿ ಅವರು ವಿಸ್ಮಿತರಾದರು. ಸರ್ವಸಾಮಾನ್ಯರ ಯಾವುದೇ ರೀತಿಯ ಪ್ರತಿಭಟನೆ, ವಾಗ್ವಾದ, ಹಾಗೂ ನಿಂದಾತ್ಮಕ ಮಾತುಗಳು ಅಲ್ಲಿ ಕೇಳಿಬರಲಿಲ್ಲ. “ಬೇರೆ ಸಂದರ್ಶಕರಿಗೆ ಅಸದೃಶವಾಗಿ, ನೀವು ಎಷ್ಟು ದೀನತೆಯನ್ನು ಹಾಗೂ ಗಾಂಭೀರ್ಯವನ್ನು ತೋರಿಸಿದ್ದೀರೆಂದರೆ, ಇದು ನಮ್ಮೆಲ್ಲರ ದೃಷ್ಟಿಗೂ ಬಿದ್ದಿದೆ” ಎಂದು ಭದ್ರತಾ ಪಡೆಯ ಅಧಿಕಾರಿಯೊಬ್ಬನು ಹೇಳಿದನು.
ಯೆಹೋವನ ಸಾಕ್ಷಿಗಳ ಸಹಕಾರ ತೋರಿಸುವ ನಡತೆಯು ಭದ್ರತಾ ಪಡೆಯ ಅಧಿಕಾರಿಯ ಅರಿವಿಗೆ ಬಂದ ಬಳಿಕ, ಅವರ ಕಾರನ್ನು ತಪಾಸಣೆಮಾಡುವ ಅಗತ್ಯವಿಲ್ಲ ಎಂದು ಅವನು ನಿರ್ಧರಿಸಿದನು. “ಏಕೆಂದರೆ, ನೀವು ತುಂಬ ಶಿಸ್ತಿನ ಜನರಾಗಿದ್ದೀರಿ” ಎಂದು ಅವನು ಹೇಳಿದನು. ಇದರ ಪರಿಣಾಮವಾಗಿ, “ಜೆಡಬ್ಲ್ಯೂ” ಎಂಬ ಸ್ಟಿಕ್ಕರ್ಗಳಿಂದ ಗುರುತಿಸಲ್ಪಟ್ಟಿರುವ ಕಾರ್ಗಳನ್ನು ನೇರವಾಗಿ ಒಳಗೆ ಬಿಡಲಾಯಿತು. ಅವುಗಳನ್ನು ತಪಾಸಣೆಮಾಡಲಿಲ್ಲ.
ಅಧಿವೇಶನದ ಕೊನೆಯಲ್ಲಿ, ನೀವು ಪುನಃ ಇಲ್ಲಿಗೆ ಬೇಗನೆ ಬರುವಿರೆಂದು ನಾನು ನಿರೀಕ್ಷಿಸುತ್ತೇನೆ ಎಂದು ಭದ್ರತಾ ಪಡೆಯ ಅಧಿಕಾರಿಯು ಹೇಳಿದನು. “ಇಷ್ಟು ಒಳ್ಳೆಯ ನಡತೆಯುಳ್ಳ ಜನರನ್ನು ನಾನು ಎಂದೂ ನೋಡಿಲ್ಲ, ನೀವಿರುವ ರೀತಿಯಲ್ಲೇ ನಾವೂ ಇರುವಂತೆ ದೇವರು ನಿರೀಕ್ಷಿಸುತ್ತಾನೆ” ಎಂದು ಅವನು ಹೇಳಿದನು. ಅಂತಹ ಶ್ಲಾಘನೆಯು, ನಿಜ ಕ್ರೈಸ್ತರಿಗೆ ‘ಯೋಗ್ಯವಾದ ನಡವಳಿಕೆಯನ್ನು ಕಾಪಾಡಿಕೊಳ್ಳಲು’ (NW) ಒಂದು ಪ್ರೋತ್ಸಾಹದಾಯಕ ವಿಷಯವಾಗಿದೆ. ಇದರಿಂದ ಜನರು ‘ಅವರ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ದೇವರನ್ನು ಕೊಂಡಾಡುವಂತಾಗುವುದು.’—1 ಪೇತ್ರ 2:12.