“ಅರಾಮ್ಯ ಮರುಭೂಮಿಯ ಕಪ್ಪು ಕೂದಲ ರಾಣಿ”
ಅವಳು ಕಪ್ಪು ವರ್ಣದವಳಾಗಿದ್ದಳು, ಅವಳ ದಂತಪಂಕ್ತಿಗಳು ಬಿಳಿಯ ಮುತ್ತುಗಳಂತಿದ್ದವು, ಅವಳ ಕಣ್ಣುಗಳು ಕಪ್ಪಾಗಿದ್ದು, ಕಾಂತಿಭರಿತವಾಗಿದ್ದವು. ಅವಳು ಸುಶಿಕ್ಷಿತಳಾಗಿದ್ದಳು ಮತ್ತು ಬಹುಭಾಷಾ ಪಂಡಿತೆಯಾಗಿದ್ದಳು. ಈ ಯೋಧೆ ರಾಣಿಯು, ಕ್ಲಿಯೋಪಾತ್ರಳಷ್ಟೇ ಲಾವಣ್ಯವತಿಯೂ ಅವಳಿಗಿಂತಲೂ ಬುದ್ಧಿಶಾಲಿಯೂ ಆಗಿದ್ದಳೆಂದು ಹೇಳಲಾಗುತ್ತದೆ. ತನ್ನ ದಿನಗಳ ಪ್ರಮುಖ ಲೋಕ ಶಕ್ತಿಯನ್ನು ಧೈರ್ಯವಾಗಿ ಎದುರಿಸುವಷ್ಟು ಎದೆಗಾರಿಕೆ ಅವಳಿಗಿದ್ದುದರಿಂದ, ಶಾಸ್ತ್ರೀಯ ನಾಟಕದಲ್ಲಿ ಅವಳು ಒಂದು ಪ್ರವಾದನಾತ್ಮಕ ಪಾತ್ರವನ್ನು ಪೂರೈಸಿದಳು. ಅವಳ ಮರಣಾನಂತರ, ಬರಹಗಾರರು ಅವಳನ್ನು ಹೊಗಳಿದರು, ಮತ್ತು ವರ್ಣಚಿತ್ರಕಾರರು ಅವಳನ್ನು ಇನ್ನೂ ಹೆಚ್ಚು ಲಾವಣ್ಯವತಿಯಾಗಿ ಚಿತ್ರಿಸಿದರು. 19ನೆಯ ಶತಮಾನದ ಒಬ್ಬ ಕವಿಯು ಅವಳನ್ನು, “ಅರಾಮ್ಯ ಮರುಭೂಮಿಯ ಕಪ್ಪು ಕೂದಲ ರಾಣಿ” ಎಂದು ವರ್ಣಿಸಿದನು. ಅರಾಮ್ಯರ ಪಾಲ್ಮಾಯಿರ ಪಟ್ಟಣದ ರಾಣಿಯಾದ ಸೆನೋಬಿಯಳೇ ಈ ರೀತಿಯ ಹೆಗ್ಗಳಿಕೆ ಪಡೆದ ಸ್ತ್ರೀಯಾಗಿದ್ದಳು.
ಸೆನೋಬಿಯಳು ಈ ರೀತಿಯ ಪ್ರಾಧಾನ್ಯತೆಯನ್ನು ಹೇಗೆ ಪಡೆದುಕೊಂಡಳು? ಅವಳು ಅಧಿಕಾರಕ್ಕೆ ಬರಲು ಯಾವ ರಾಜಕೀಯ ಪರಿಸ್ಥಿತಿಯು ಕಾರಣವಾಗಿತ್ತು? ಅವಳ ವ್ಯಕ್ತಿತ್ವದ ಕುರಿತು ಏನು ಹೇಳಸಾಧ್ಯವಿದೆ? ಮತ್ತು ಈ ರಾಣಿಯು ಯಾವ ಪ್ರವಾದನಾತ್ಮಕ ಪಾತ್ರವನ್ನು ಪೂರೈಸಿದಳು? ಈ ನಾಟಕವು ಆರಂಭವಾಗುವ ಭೌಗೋಳಿಕ ಸನ್ನಿವೇಶವನ್ನು ಮೊದಲಾಗಿ ಗಮನಿಸಿರಿ.
ಮರುಭೂಮಿಯ ತುದಿಭಾಗದಲ್ಲಿರುವ ಒಂದು ಪಟ್ಟಣ
ಸೆನೋಬಿಯಳು ಇದ್ದ ಪಾಲ್ಮಾಯಿರ ಪಟ್ಟಣವು, ದಮಸ್ಕದಿಂದ ಈಶಾನ್ಯಕ್ಕೆ ಸುಮಾರು 210 ಕಿಲೊಮೀಟರುಗಳಷ್ಟು ದೂರದಲ್ಲಿತ್ತು. ಇದು ಅರಾಮ್ಯ ಮರುಭೂಮಿಯ ಉತ್ತರ ತುದಿಭಾಗದಲ್ಲಿತ್ತು, ಅಲ್ಲಿ ಆ್ಯಂಟಿ-ಲೆಬನಾನ್ ಪರ್ವತಗಳ ತಪ್ಪಲು ಹಾಗೂ ಬಯಲುಪ್ರದೇಶವು ಒಟ್ಟುಗೂಡುತ್ತದೆ. ಈ ಓಯಸಿಸ್ ಪಟ್ಟಣವು, ಪಶ್ಚಿಮದಲ್ಲಿ ಮೆಡಿಟರೇನಿಯನ್ ಸಮುದ್ರ ಹಾಗೂ ಪೂರ್ವದಲ್ಲಿ ಯೂಫ್ರೇಟೀಸ್ ನದಿಯ ನಡುವೆ ಇತ್ತು. ಅರಸನಾದ ಸೊಲೊಮೋನನಿಗೆ ಇದು ತದ್ಮೋರ್ ಎಂಬ ಹೆಸರಿನಿಂದ ಪರಿಚಿತವಾಗಿದ್ದಿರಬಹುದು. ಅವನ ರಾಜ್ಯದ ಹಿತಕ್ಷೇಮದ ವಿಷಯದಲ್ಲಿ ಎರಡು ಕಾರಣಗಳಿಗಾಗಿ ಈ ಸ್ಥಳವು ಅತ್ಯಗತ್ಯವಾಗಿತ್ತು: ಉತ್ತರಭಾಗದ ಗಡಿಯ ರಕ್ಷಣೆಗಾಗಿ ಒಂದು ದುರ್ಗದೋಪಾದಿ ಮತ್ತು ವರ್ತಕರ ತಂಡದ ನಗರಗಳಿಗೆ ಅತಿ ಪ್ರಮುಖ ಕೊಂಡಿಯೋಪಾದಿ ಕಾರ್ಯನಡಿಸಿದ್ದಿರಬಹುದು. ಆದುದರಿಂದಲೇ ಸೊಲೊಮೋನನು “ಅರಣ್ಯದಲ್ಲಿರುವ ತದ್ಮೋರ್ ಪಟ್ಟಣವನ್ನು ಪುನಃ ನಿರ್ಮಿಸಿದನು.”—2 ಪೂರ್ವಕಾಲವೃತ್ತಾಂತ 8:4, NW.
ಅರಸನಾದ ಸೊಲೊಮೋನನ ಆಳ್ವಿಕೆಯ ನಂತರದ ಸಾವಿರ ವರ್ಷದಾಳಿಕೆಯ ಇತಿಹಾಸವು, ತದ್ಮೋರ್ನ ಕುರಿತು ಏನನ್ನೂ ತಿಳಿಯಪಡಿಸುವುದಿಲ್ಲ. ವಾಸ್ತವದಲ್ಲಿ ಇದೇ ಪಾಲ್ಮಾಯಿರ ಆಗಿರುವಲ್ಲಿ, ಸಾ.ಶ.ಪೂ. 64ರಲ್ಲಿ ಅರಾಮ್ ರೋಮನ್ ಸಾಮ್ರಾಜ್ಯದ ಗಡಿಕಾವಲು ಪ್ರಾಂತ್ಯವಾಗಿ ರೂಪಿಸಲ್ಪಟ್ಟ ಬಳಿಕ, ಅದು ಪ್ರಾಧಾನ್ಯತೆಗೆ ಬಂತು. “ರೋಮ್ಗೆ ಪಾಲ್ಮಾಯಿರವು ಎರಡು—ಆರ್ಥಿಕ ಹಾಗೂ ಮಿಲಿಟರಿ—ಕ್ಷೇತ್ರಗಳಲ್ಲಿ ಅತಿ ಹೆಚ್ಚು ಪ್ರಯೋಜನಕರವಾಗಿತ್ತು” ಎಂದು ರಿಚರ್ಡ್ ಸ್ಟೋನ್ಮನ್, ಪಾಲ್ಮಾಯಿರ ಮತ್ತು ಅದರ ಸಾಮ್ರಾಜ್ಯ—ರೋಮ್ನ ವಿರುದ್ಧ ಸೆನೋಬಿಯಳ ಕ್ರಾಂತಿ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ. ರೋಮ್ನಿಂದ ಮೆಸಪೊಟೆಮಿಯ ಹಾಗೂ ಪೂರ್ವ ದೇಶಗಳಿಗೆ ವ್ಯಾಪಾರ ಮಾರ್ಗವನ್ನು ರೂಪಿಸುತ್ತಿದ್ದ ಹಾದಿಯಲ್ಲೇ ತಾಳೆಮರಗಳ ಈ ಪಟ್ಟಣವೂ ಇತ್ತು. ಆದುದರಿಂದ, ಈ ಪಟ್ಟಣದ ಮೂಲಕವೇ ಪುರಾತನ ಸಮಯದ ವಾಣಿಜ್ಯ ಸಂಪತ್ತುಗಳು ಕೊಂಡೊಯ್ಯಲ್ಪಡುತ್ತಿದ್ದವು—ಈಸ್ಟ್ ಇಂಡೀಸ್ನಿಂದ ಸಂಬಾರ ಪದಾರ್ಥಗಳು, ಚೀನಾದಿಂದ ರೇಷ್ಮೆ, ಮತ್ತು ಪರ್ಷಿಯ, ಲೋವರ್ ಮೆಸಪೊಟೆಮಿಯ, ಹಾಗೂ ಮೆಡಿಟರೇನಿಯನ್ ದೇಶಗಳಿಂದ ಇನ್ನಿತರ ಸರಕುಗಳು ಬರುತ್ತಿದ್ದವು. ಈ ಸರಕುಗಳ ಆಮದಿನ ಮೇಲೆಯೇ ರೋಮ್ ಅವಲಂಬಿಸಿತ್ತು.
ಮಿಲಿಟರಿ ಕ್ಷೇತ್ರದ ವಿಷಯದಲ್ಲಿ ನೋಡುವುದಾದರೆ, ರೋಮ್ ಹಾಗೂ ಪರ್ಷಿಯದ ವೈರಿ ರಾಜ್ಯಗಳ ಮಧ್ಯೆ ಅರಾಮ್ಯ ಪ್ರಾಂತ್ಯವು, ಕಾದಾಟವನ್ನು ಕಡಿಮೆಮಾಡುವ ಒಂದು ಚಿಕ್ಕ ರಾಜ್ಯವಾಗಿ ಕಾರ್ಯನಡಿಸಿತು. ನಮ್ಮ ಸಾಮಾನ್ಯ ಶಕದ ಮೊದಲ 250 ವರ್ಷಗಳ ವರೆಗೆ, ಯೂಫ್ರೇಟೀಸ್ ನದಿಯು, ರೋಮ್ನಿಂದ ಅದರ ಪೂರ್ವ ನೆರೆಹೊರೆ ದೇಶಗಳನ್ನು ಪ್ರತ್ಯೇಕಿಸಿತ್ತು. ಪಾಲ್ಮಾಯಿರವು ಮರುಭೂಮಿಯ ಆಚೆ ಬದಿಯಲ್ಲಿ, ಅಂದರೆ ಯೂಫ್ರೇಟೀಸ್ನ ಮೇಲಿರುವ ಡೂರಾಯುರೋಪಸ್ ಪಟ್ಟಣದ ಪಶ್ಚಿಮ ಭಾಗದಲ್ಲಿತ್ತು. ಹ್ಯಾಡ್ರಿಯನ್ ಮತ್ತು ವಲೇರಿಯನ್ ಎಂಬ ರೋಮನ್ ಸಾಮ್ರಾಟರು, ಪಾಲ್ಮಾಯಿರದ ಪ್ರಮುಖ ಸ್ಥಾನವನ್ನು ಗುರುತಿಸಿ, ಅಲ್ಲಿಗೆ ಭೇಟಿಯಿತ್ತರು. ಹ್ಯಾಡ್ರಿಯನನು ಪಾಲ್ಮಾಯಿರದ ವಾಸ್ತುಶಿಲ್ಪಕಲೆಯ ವೈಭವವನ್ನು ಇನ್ನೂ ಹೆಚ್ಚಿಸಿದನು ಮತ್ತು ಉದಾರ ಕಾಣಿಕೆಗಳನ್ನು ಕೊಟ್ಟನು. ಸಾ.ಶ. 258ರಲ್ಲಿ, ವಲೇರಿಯನನು ಪಾಲ್ಮಾಯಿರದ ಪ್ರಸಿದ್ಧ ವ್ಯಕ್ತಿಯಾದ ಆಡಿನೇಥಸ್—ಸೆನೋಬಿಯಳ ಗಂಡ—ನನ್ನು, ರೋಮ್ನ ಪರರಾಜ್ಯ ಪ್ರತಿನಿಧಿಯ ಹುದ್ದೆಗೆ ಬಡ್ತಿ ಮಾಡಿದನು. ಏಕೆಂದರೆ ಆಡಿನೇಥಸನು ಪರ್ಷಿಯದ ವಿರುದ್ಧ ಯಶಸ್ವಿಕರವಾಗಿ ದಂಡಯಾತ್ರೆ ನಡೆಸಿ, ರೋಮನ್ ಸಾಮ್ರಾಜ್ಯದ ಗಡಿಯನ್ನು ಮೆಸಪೊಟೆಮಿಯದ ತನಕ ವಿಸ್ತರಿಸಿದ್ದನು. ತನ್ನ ಗಂಡನು ಈ ಸ್ಥಾನಕ್ಕೆ ಏರುವಂತೆ ಮಾಡುವುದರಲ್ಲಿ ಸೆನೋಬಿಯಳು ಒಂದು ಪ್ರಮುಖ ಪಾತ್ರವನ್ನು ವಹಿಸಿದ್ದಳು. ಇತಿಹಾಸಕಾರ ಎಡ್ವರ್ಡ್ ಗಿಬ್ಬೊನ್ ಬರೆದುದು: “ಆಡಿನೇಥಸನ ಈ ಎಲ್ಲ ಯಶಸ್ಸಿಗೆ, ಬಹಳ ಮಟ್ಟಿಗೆ ಅವಳ [ಸೆನೋಬಿಯಳ] ಅಸಾಧಾರಣವಾದ ವಿವೇಕ ಹಾಗೂ ಸ್ಥೈರ್ಯಗಳೇ ಕಾರಣವೆಂದು ಹೇಳಲಾಗುತ್ತದೆ.”
ಈ ಮಧ್ಯೆ, ಪರ್ಷಿಯದ ರಾಜ Iನೆಯ ಶಾಪೂರನು, ರೋಮನ್ ಪರಮಾಧಿಕಾರಕ್ಕೆ ಪಂಥಾಹ್ವಾನವೊಡ್ಡಿ, ಪರ್ಷಿಯದ ಹಿಂದಣ ಪ್ರಾಂತ್ಯಗಳೆಲ್ಲ ತನ್ನ ಅಧಿಕಾರಕ್ಕೆ ಸೇರಿವೆಯೆಂದು ಪ್ರತಿಪಾದಿಸಲು ನಿರ್ಧರಿಸಿದನು. ಒಂದು ದೊಡ್ಡ ಸೈನ್ಯದೊಂದಿಗೆ ಅವನು ಪಶ್ಚಿಮ ದಿಕ್ಕಿನ ಕಡೆಗೆ ಹೋಗಿ, ನಿಸಬಸ್ ಹಾಗೂ ಕಾರೀ (ಹಾರಾನ್) ಎಂಬ ಕಾವಲುದಂಡಿನ ಪಟ್ಟಣಗಳನ್ನು ಆಕ್ರಮಿಸಿ, ಉತ್ತರದಲ್ಲಿರುವ ಅರಾಮ್ಯ ಹಾಗೂ ಕಿಲಿಕ್ಯ ಪಟ್ಟಣಗಳನ್ನು ಧ್ವಂಸಮಾಡಲು ಮುಂದುವರಿದನು. ಆಕ್ರಮಣಗಾರರ ವಿರುದ್ಧ ತನ್ನ ಪಡೆಗಳನ್ನು ಮುನ್ನಡಿಸಲು ಸ್ವತಃ ಸಾಮ್ರಾಟ ವಲೇರಿಯನನೇ ಬಂದನು, ಆದರೂ ಅವನು ಸೋಲಿಸಲ್ಪಟ್ಟು, ಪರ್ಷಿಯನ್ನರಿಂದ ಸೆರೆಹಿಡಿಯಲ್ಪಟ್ಟನು.
ಪರ್ಷಿಯದ ರಾಜನಿಗೆ ಅಮೂಲ್ಯವಾದ ಉಡುಗೊರೆಗಳನ್ನು ಹಾಗೂ ಶಾಂತಿ ಸಂದೇಶವನ್ನು ಕಳುಹಿಸಲು ಇದೇ ಉಚಿತವಾದ ಸಮಯವೆಂದು ಆಡಿನೇಥಸನು ಮನಗಂಡನು. ಆ ಉಡುಗೊರೆಗಳನ್ನು ಯೂಫ್ರೇಟೀಸ್ ನದಿಗೆ ಎಸೆಯಿರಿ ಮತ್ತು ಆಡಿನೇಥಸನನ್ನು ನನ್ನ ಮುಂದೆ ಒಬ್ಬ ಬಂಧಿತ ವ್ಯಕ್ತಿಯನ್ನಾಗಿ ಹಾಜರುಪಡಿಸಿ ಎಂದು ರಾಜ ಶಾಪೂರನು ಉದ್ಧಟತನದಿಂದ ಆಜ್ಞಾಪಿಸಿದನು. ಇದಕ್ಕೆ ಉತ್ತರವಾಗಿ, ಪಾಲ್ಮಾಯಿರದವರು ಮರುಭೂಮಿಯ ಅಲೆಮಾರಿ ಜನರ ಒಂದು ಸೈನ್ಯವನ್ನೂ ರೋಮನ್ ಸೈನಿಕರಲ್ಲಿ ಉಳಿಕೆಯವರನ್ನೂ ಒಟ್ಟುಗೂಡಿಸಿ, ಹಿಮ್ಮೆಟ್ಟುತ್ತಿದ್ದ ಪರ್ಷಿಯನ್ನರನ್ನು ಧ್ವಂಸಮಾಡಲು ಮುನ್ನಡೆದರು. ಸಾಮಾನ್ಯವಾಗಿ ಮರುಭೂಮಿಯ ಯುದ್ಧವೀರರು ವೈರಿಗಳನ್ನು ಹೊಡೆದು ಪರಾರಿಯಾಗುತ್ತಿದ್ದರು, ಆದುದರಿಂದ ಅವರ ಈ ಚಾತುರ್ಯದ ಮುಂದೆ ಶಾಪೂರನ ಆಟವು ನಡೆಯಲಿಲ್ಲ. ಶಾಪೂರನ ಸೈನಿಕರು ದಂಡಯಾತ್ರೆಯಿಂದ ಆಯಾಸಗೊಂಡಿದ್ದು, ಕೊಳ್ಳೆಹೊಡೆದ ವಸ್ತುಗಳ ಹೊರೆಯಿಂದ ದಣಿದಿದ್ದು, ಅಲ್ಲಿಂದ ಪಲಾಯನಗೈದರು.
ಆಡಿನೇಥಸನು ಶಾಪೂರನ ವಿರುದ್ಧ ಸಾಧಿಸಿದ ಜಯವನ್ನು ಕಂಡು, ವಲೇರಿಯನ್ನ ಮಗನೂ ರಾಜ್ಯದ ಉತ್ತರಾಧಿಕಾರಿಯೂ ಆಗಿದ್ದ ಗಾಲಿನಸ್ನು, ಅವನಿಗೆ ಕೊರೆಕ್ಟರ್ ಟೊಟ್ಯಸ್ ಓರಿಂಥಿಸ್ (ಇಡೀ ಪೂರ್ವದ ಗವರ್ನರ್) ಎಂಬ ಬಿರುದನ್ನು ಕೊಟ್ಟನು. ಸಕಾಲದಲ್ಲಿ ಆಡಿನೇಥಸನು ಸ್ವತಃ “ರಾಜಾಧಿರಾಜ” ಎಂಬ ಬಿರುದನ್ನು ತನಗೆ ಕೊಟ್ಟುಕೊಂಡನು.
ಸೆನೋಬಿಯಳು ಒಂದು ಸಾಮ್ರಾಜ್ಯವನ್ನು ಕಟ್ಟಲು ಹಾರೈಸಿದಳು
ಸಾ.ಶ. 267ರಲ್ಲಿ, ಆಡಿನೇಥಸನು ತನ್ನ ಆಳ್ವಿಕೆಯ ಉತ್ತುಂಗದಲ್ಲಿರುವಾಗ, ಅವನ ಮೇಲೆ ಸೇಡು ತೀರಿಸಿಕೊಳ್ಳಲಿಕ್ಕಾಗಿ, ಅವನ ಸೋದರಳಿಯನೊಬ್ಬನು ಅವನನ್ನೂ ಅವನ ಉತ್ತರಾಧಿಕಾರಿಯನ್ನೂ ಮೋಸದಿಂದ ಕೊಂದುಹಾಕಿದನು. ಸೆನೋಬಿಯಳ ಮಗನು ಇನ್ನೂ ಚಿಕ್ಕವನಾಗಿದ್ದರಿಂದ, ಅವಳೇ ತನ್ನ ಗಂಡನ ಸ್ಥಾನವನ್ನು ಪಡೆದುಕೊಂಡಳು. ಸೌಂದರ್ಯವತಿಯೂ, ಮಹತ್ವಾಕಾಂಕ್ಷೆಯುಳ್ಳವಳೂ, ಆಡಳಿತವನ್ನು ನಿರ್ವಹಿಸುವುದರಲ್ಲಿ ಸಮರ್ಥಳೂ, ತನ್ನ ಗತಿಸಿದ ಪತಿಯೊಂದಿಗೆ ದಂಡಯಾತ್ರೆಯ ವ್ಯೂಹವನ್ನು ರಚಿಸುವುದರಲ್ಲಿ ನಿಪುಣಳೂ, ಅನೇಕ ಭಾಷೆಗಳನ್ನು ನಿರರ್ಗಳವಾಗಿ ಮಾತಾಡುವವಳೂ ಆಗಿದ್ದ ಸೆನೋಬಿಯಳು, ತನ್ನ ಪ್ರಜೆಗಳ ಗೌರವ ಹಾಗೂ ಬೆಂಬಲವನ್ನು ಸಂಪಾದಿಸಲು ಶಕ್ತಳಾದಳು. ಅಲೆಮಾರಿಗಳ ಮಧ್ಯೆ ಇದು ಒಂದು ದೊಡ್ಡ ಸಾಧನೆಯಾಗಿತ್ತು. ಸೆನೋಬಿಯಳು ವಿದ್ಯಾಪ್ರೇಮಿಯಾಗಿದ್ದಳು ಮತ್ತು ಯಾವಾಗಲೂ ಬುದ್ಧಿವಂತರು ಅವಳ ಜೊತೆಗಿರುತ್ತಿದ್ದರು. ತತ್ವಜ್ಞಾನಿಯೂ ಆಲಂಕಾರಿಕ ಭಾಷಣಕಾರನೂ ಆಗಿದ್ದ ಕ್ಯಾಸಿಯಸ್ ಲಾಂಗಿನಸ್ ಅವಳ ಸಲಹೆಗಾರರಲ್ಲಿ ಒಬ್ಬನಾಗಿದ್ದನು. ಅವನು “ನಡೆದಾಡುವ ಗ್ರಂಥಾಲಯ ಅಥವಾ ಮ್ಯೂಸಿಯಮ್ ಆಗಿದ್ದನು” ಎಂದು ಹೇಳಲಾಗುತ್ತದೆ. ಲೇಖಕ ಸ್ಟೋನ್ಮನ್ ಹೇಳಿದ್ದು: “ಆಡಿನೇಥಸನ ಮರಣಾನಂತರ ಸುಮಾರು ಐದು ವರ್ಷಗಳಲ್ಲೇ . . . ಸೆನೋಬಿಯಳು ತಾನು ಪೂರ್ವದ ರಾಣಿಯೆಂಬ ಭಾವನೆಯನ್ನು ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದಳು.”
ಸೆನೋಬಿಯಳ ಆಧಿಪತ್ಯದ ಒಂದು ಭಾಗದಲ್ಲಿ ಪರ್ಷಿಯವು—ಅವಳೂ ಅವಳ ಪತಿಯೂ ಸೇರಿಕೊಂಡು ಪರ್ಷಿಯವನ್ನು ದುರ್ಬಲಗೊಳಿಸಿದ್ದರು—ಇತ್ತು, ಮತ್ತು ಇನ್ನೊಂದು ಭಾಗದಲ್ಲಿ ಕುಸಿಯುತ್ತಿರುವ ರೋಮ್ ಇತ್ತು. ಆ ಸಮಯದಲ್ಲಿ ರೋಮನ್ ಸಾಮ್ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಪರಿಸ್ಥಿತಿಗಳ ಕುರಿತು, ಇತಿಹಾಸಕಾರ ಜೆ. ಎಮ್. ರಾಬರ್ಟ್ಸ್ ಹೇಳುವುದು: “ಮೂರನೆಯ ಶತಮಾನದಲ್ಲಿ . . . ರೋಮ್ನ ಪೂರ್ವ ಹಾಗೂ ಪಶ್ಚಿಮ ಗಡಿನಾಡುಗಳಿಗೆ ಕಷ್ಟಕಾಲವು ಒದಗಿಬಂದಿತ್ತು. ಅದೇ ಸಮಯಕ್ಕೆ ರೋಮ್ನಲ್ಲಿ ಆಂತರಿಕ ಯುದ್ಧ ಹಾಗೂ ಉತ್ತರಾಧಿಕಾರಗಳ ಕುರಿತಾದ ವ್ಯಾಜ್ಯಗಳು ಆರಂಭಗೊಂಡಿದ್ದವು. ಇಪ್ಪತ್ತೆರಡು ಸಾಮ್ರಾಟರು (ಸುಳ್ಳು ಹಕ್ಕುದಾರರನ್ನು ಬಿಟ್ಟು) ಅಧಿಕಾರಕ್ಕೆ ಬಂದುಹೋದರು.” ಇನ್ನೊಂದು ಕಡೆಯಲ್ಲಿ, ಅರಾಮ್ಯ ರಾಣಿಯು ತನ್ನ ಸಾಮ್ರಾಜ್ಯದಲ್ಲಿ ಸಂಪೂರ್ಣ ಅಧಿಕಾರವನ್ನು ಸ್ಥಾಪಿಸಿದ್ದಳು. “ಎರಡು ಸಾಮ್ರಾಜ್ಯಗಳ [ಪರ್ಷಿಯ ಮತ್ತು ರೋಮ್] ಓಡಾಟವನ್ನು ನಿಯಂತ್ರಿಸುತ್ತಾ, ಈ ಎರಡೂ ಸಾಮ್ರಾಜ್ಯಗಳನ್ನು ಆಳಸಾಧ್ಯವಿರುವಂತಹ ಒಂದು ಮೂರನೆಯ ಸಾಮ್ರಾಜ್ಯವನ್ನು ಕಟ್ಟುವ ಕಡುಬಯಕೆ ಅವಳಲ್ಲಿತ್ತು” ಎಂದು ಸ್ಟೋನ್ಮನ್ ದಾಖಲಿಸುತ್ತಾನೆ.
ಸಾ.ಶ. 269ರಲ್ಲಿ, ತನ್ನ ರಾಜಯೋಗ್ಯ ಅಧಿಕಾರಗಳನ್ನು ವಿಸ್ತರಿಸುವ ಅವಕಾಶ ಸೆನೋಬಿಯಳಿಗೆ ಒದಗಿತು. ಆಗ ರೋಮ್ನ ಆಳ್ವಿಕೆಯನ್ನು ಪ್ರತಿಭಟಿಸುವವನೆಂದು ಹೇಳಿಕೊಳ್ಳುವ ಒಬ್ಬ ವ್ಯಕ್ತಿಯು ಈಜಿಪ್ಟ್ಗೆ ಬಂದನು. ತತ್ಕ್ಷಣವೇ ಸೆನೋಬಿಯಳ ಸೈನ್ಯವು ಈಜಿಪ್ಟ್ಗೆ ಹೋಗಿ, ದಂಗೆಯನ್ನು ಅಡಗಿಸಿ, ಆ ದೇಶವನ್ನು ಸ್ವಾಧೀನಪಡಿಸಿಕೊಂಡಿತು. ತಾನೇ ಈಜಿಪ್ಟಿನ ರಾಣಿಯೆಂದು ಘೋಷಿಸಿಕೊಂಡು, ತನ್ನ ಹೆಸರಿನಲ್ಲಿ ಅವಳ ನಾಣ್ಯಗಳ ಟಂಕವನ್ನು ಒತ್ತಿಸಿದಳು. ಈಗ ಅವಳ ರಾಜ್ಯವು, ನೈಲ್ ನದಿಯಿಂದ ಯೂಫ್ರೇಟೀಸ್ ನದಿಯ ವರೆಗೂ ವ್ಯಾಪಿಸಿತ್ತು. ಅವಳ ಜೀವಿತದ ಈ ಹಂತದಲ್ಲಿ, ದಾನಿಯೇಲನ ಬೈಬಲ್ ಪ್ರವಾದನೆಯಲ್ಲಿ “ದಕ್ಷಿಣ ರಾಜ” ಎಂದು ಯಾರ ಕುರಿತಾಗಿ ಬರೆಯಲಾಗಿದೆಯೋ ಆ ಸ್ಥಾನವನ್ನು ಅವಳು ಆಕ್ರಮಿಸಿದ್ದಳು. ಏಕೆಂದರೆ ದಾನಿಯೇಲನ ಸ್ವದೇಶವಾಗಿದ್ದ ದಕ್ಷಿಣ ಕ್ಷೇತ್ರವನ್ನು ಆ ಸಮಯದಲ್ಲಿ ಅವಳೇ ಆಳುತ್ತಿದ್ದಳು. (ದಾನಿಯೇಲ 11:25, 26) ಅವಳು ಏಷಿಯಾ ಮೈನರ್ನ ಅಧಿಕಾಂಶ ಭಾಗವನ್ನು ಸಹ ಗೆದ್ದಿದ್ದಳು.
ಸೆನೋಬಿಯಳು ತನ್ನ ರಾಜಧಾನಿಯಾದ ಪಾಲ್ಮಾಯಿರವನ್ನು ಎಷ್ಟು ಚೆನ್ನಾಗಿ ಭದ್ರಪಡಿಸಿ, ಅದನ್ನು ಅಂದಗೊಳಿಸಿದಳೆಂದರೆ, ಅದು ರೋಮನ್ ಜಗತ್ತಿನಲ್ಲಿದ್ದ ಅತಿ ದೊಡ್ಡ ನಗರಗಳಿಗೆ ಸರಿಸಮವಾಗಿತ್ತು. ಅದರ ಅಂದಾಜುಮಾಡಲ್ಪಟ್ಟ ಜನಸಂಖ್ಯೆಯು 1,50,000ವನ್ನು ಮುಟ್ಟಿತ್ತು. ನಯನ ಮನೋಹರವಾದ ಸಾರ್ವಜನಿಕ ಕಟ್ಟಡಗಳು, ದೇವಾಲಯಗಳು, ಉದ್ಯಾನವನಗಳು, ಕಂಭಗಳು, ಮತ್ತು ಸ್ಮಾರಕ ಸ್ತಂಭಗಳು ಆ ಪಟ್ಟಣದಲ್ಲಿ ತುಂಬಿದ್ದವು. ಮತ್ತು ಅವುಗಳ ಸುತ್ತಲೂ 21 ಕಿಲೊಮೀಟರುಗಳಷ್ಟು ಸುತ್ತಳತೆಯಿರುವ ಒಂದು ಗೋಡೆಯು ಇತ್ತು. ಮುಖ್ಯ ಪ್ರವೇಶ ಮಾರ್ಗದ ಉದ್ದಕ್ಕೂ, ಕೊರಿಂಥದ ಸ್ತಂಭಗಳಿಂದ ರಚಿತವಾದ ಸುಮಾರು 1,500 ಕಂಭಸಾಲುಗಳು ಇದ್ದವು. ಪಟ್ಟಣದಾದ್ಯಂತ ವೀರನಾಯಕರು ಹಾಗೂ ಶ್ರೀಮಂತ ದಾನಿಗಳ ಪ್ರತಿಮೆಗಳು ಮತ್ತು ಎದೆವಿಗ್ರಹಗಳು ಇದ್ದವು. ಸಾ.ಶ. 271ರಲ್ಲಿ ಸೆನೋಬಿಯಳು, ತನ್ನ ಹಾಗೂ ತನ್ನ ಗತಿಸಿಹೋದ ಪತಿಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದಳು. ಮರುಭೂಮಿಯ ಇನ್ನೊಂದು ತುದಿಯಿಂದ ನೋಡುವಾಗ, ಪಾಲ್ಮಾಯಿರವು ಒಂದು ಆಭರಣದಂತೆ ಹೊಳೆಯುತ್ತಿತ್ತು.
ಪಾಲ್ಮಾಯಿರದಲ್ಲಿರುವ ಅತ್ಯುತ್ತಮ ವಾಸ್ತುಶಿಲ್ಪಗಳಲ್ಲಿ ಒಂದು, ಸೂರ್ಯದೇವನ ದೇವಾಲಯವಾಗಿತ್ತು. ನಗರದ ಧಾರ್ಮಿಕ ಪ್ರಾಬಲ್ಯವನ್ನು ಅದು ಎತ್ತಿತೋರಿಸಿತು. ಸೆನೋಬಿಯಳು ಸಹ ಸೂರ್ಯದೇವನೊಂದಿಗೆ ಸಂಬಂಧಿಸಿದ ದೇವತೆಯನ್ನು ಆರಾಧಿಸಿದ್ದಿರಬಹುದು ಎಂಬುದು ಸಂಭವನೀಯ. ಆದರೂ, ಮೂರನೆಯ ಶತಮಾನದ ಅರಾಮ್ಯವು ಬಹು ಧರ್ಮಗಳ ನಿವಾಸವಾಗಿತ್ತು. ಸೆನೋಬಿಯಳ ರಾಜ್ಯದಲ್ಲಿ, ಕ್ರೈಸ್ತರೆಂದು ಹೇಳಿಕೊಳ್ಳುವವರು, ಯೆಹೂದ್ಯರು, ಜ್ಯೋತಿಶಾಸ್ತ್ರಜ್ಞರು, ಮತ್ತು ಸೂರ್ಯ ಹಾಗೂ ಚಂದ್ರ ದೇವರ ಆರಾಧಕರು ಇದ್ದರು. ತನ್ನ ಸಾಮ್ರಾಜ್ಯದಲ್ಲಿದ್ದ ವಿವಿಧ ಆರಾಧನಾ ವಿಧಗಳ ಕಡೆಗೆ ಅವಳಿಗೆ ಯಾವ ಮನೋಭಾವವಿತ್ತು? ಲೇಖಕ ಸ್ಟೋನ್ಮನ್ ಗಮನಿಸಿದ್ದು: “ಒಬ್ಬ ಬುದ್ಧಿವಂತ ಶಾಸಕನು, ತನ್ನ ಜನರಿಗೆ ಸೂಕ್ತವಾಗಿ ಕಂಡುಬರುವ ಯಾವುದೇ ಪದ್ಧತಿಗಳನ್ನು ಅಲಕ್ಷಿಸುವುದಿಲ್ಲ. . . . ದೇವದೇವತೆಗಳು . . . ಯಾವಾಗಲೂ ಪಾಲ್ಮಾಯಿರದ ಪಕ್ಷವನ್ನೇ ವಹಿಸುತ್ತಿದ್ದರು ಎಂದು ಅಭಿಪ್ರಯಿಸಲಾಗಿತ್ತು.” ಸೆನೋಬಿಯಳು ಧರ್ಮದ ವಿಷಯದಲ್ಲಿ ಸಹನಶೀಲಳಾಗಿದ್ದಳು ಎಂಬುದು ಸುವ್ಯಕ್ತ. ಆದರೆ ನಿಜವಾಗಿಯೂ “ದೇವದೇವತೆಗಳು ಪಾಲ್ಮಾಯಿರದ ಪಕ್ಷವನ್ನೇ ವಹಿಸುತ್ತಿದ್ದವೊ?” ಪಾಲ್ಮಾಯಿರಕ್ಕೂ ಮತ್ತು ಅದರ “ಬುದ್ಧಿವಂತ ಶಾಸಕ”ನಿಗೂ ಯಾವ ಭವಿಷ್ಯತ್ತು ಕಾದಿತ್ತು?
ಒಬ್ಬ ಸಾಮ್ರಾಟನು ಸೆನೋಬಿಯಳ ವಿರುದ್ಧ ದಂಗೆಯೇಳಲು ‘ಧೈರ್ಯತಂದುಕೊಂಡನು’
ಸಾ.ಶ. 270ನೆಯ ವರ್ಷದಲ್ಲಿ, ಔರೇಲಿಯನ್ ಎಂಬಾತನು ರೋಮ್ನ ಸಾಮ್ರಾಟನಾದನು. ಅವನ ಸೈನ್ಯದಳವು ಉತ್ತರದಲ್ಲಿದ್ದ ಬರ್ಬರರನ್ನು ಯಶಸ್ವಿಕರವಾಗಿ ಸೋಲಿಸಿ, ಅವರನ್ನು ತನ್ನ ನಿಯಂತ್ರಣಕ್ಕೆ ತಂದುಕೊಂಡಿತು. ಸಾ.ಶ. 271ರಲ್ಲಿ, ಈಗ ದಾನಿಯೇಲನ ಪ್ರವಾದನೆಯ “ಉತ್ತರ ರಾಜ”ನನ್ನು ಪ್ರತಿನಿಧಿಸುತ್ತಿರುವ ಔರೇಲಿಯನನು, ‘ದಕ್ಷಿಣ ರಾಜನಿಗೆ,’ ಅಂದರೆ ಸೆನೋಬಿಯಳಿಗೆ ‘ವಿರುದ್ಧವಾಗಿ ತನ್ನ ರಾಜ್ಯದ ಬಲವನ್ನೆಲ್ಲ ಒಟ್ಟುಗೂಡಿಸಿ ಧೈರ್ಯತಂದುಕೊಂಡು ಯುದ್ಧಕ್ಕೆ ಹೋದನು.’ (ದಾನಿಯೇಲ 11:25ಬಿ) ಔರೇಲಿಯನನು ತನ್ನ ಸೈನಿಕರಲ್ಲಿ ಕೆಲವರನ್ನು ನೇರವಾಗಿ ಈಜಿಪ್ಟ್ಗೆ ಕಳುಹಿಸಿದನು ಮತ್ತು ತನ್ನ ಮುಖ್ಯ ಸೈನ್ಯವನ್ನು ಏಷಿಯ ಮೈನರ್ನ ಮೂಲಕ ಪೂರ್ವದಿಕ್ಕಿಗೆ ಕಳುಹಿಸಿದನು.
ದಕ್ಷಿಣ ರಾಜನು—ಇದು ಒಂದು ಆಡಳಿತ ವ್ಯವಸ್ಥೆಯಾಗಿದ್ದು, ಸೆನೋಬಿಯಳು ಅದರ ನೇತೃತ್ವ ವಹಿಸುತ್ತಿದ್ದಳು—ಸಾಬ್ದಾಸ್ ಹಾಗೂ ಸಾಬೈ ಎಂಬ ಇಬ್ಬರು ಜನರಲ್ಗಳ ನೇತೃತ್ವದ ಕೆಳಗೆ, ಔರೇಲಿಯನನ ವಿರುದ್ಧ “ಅತ್ಯಧಿಕಬಲವುಳ್ಳ ಮಹಾ ಸೈನ್ಯಸಮೇತನಾಗಿ” ಯುದ್ಧಕ್ಕೆ ಹೊರಟನು. (ದಾನಿಯೇಲ 11:25ಬಿ) ಆದರೆ ಔರೇಲಿಯನನು ಈಜಿಪ್ಟನ್ನು ವಶಪಡಿಸಿಕೊಂಡು, ತದನಂತರ ಏಷಿಯಾ ಮೈನರ್ ಹಾಗೂ ಅರಾಮ್ಯವನ್ನು ಆಕ್ರಮಿಸಲು ದಂಡಯಾತ್ರೆಯನ್ನು ಕೈಕೊಂಡನು. ಇಮೆಸಾ (ಈಗ ಹೋಮ್ಸ್) ಎಂಬ ಸ್ಥಳದಲ್ಲಿ ಸೆನೋಬಿಯಳು ಸೋಲಿಸಲ್ಪಟ್ಟು, ಪಾಲ್ಮಾಯಿರಕ್ಕೆ ಹಿಮ್ಮೆಟ್ಟಲ್ಪಟ್ಟಳು.
ಔರೇಲಿಯನನು ಪಾಲ್ಮಾಯಿರಕ್ಕೆ ಮುತ್ತಿಗೆ ಹಾಕಿದಾಗ, ಸಹಾಯವನ್ನು ಪಡೆದುಕೊಳ್ಳುವ ನಿರೀಕ್ಷೆಯಿಂದ ಸೆನೋಬಿಯಳು ತನ್ನ ಮಗನೊಂದಿಗೆ ಪರ್ಷಿಯದ ಕಡೆಗೆ ಪಲಾಯನಗೈದಳು. ಆದರೆ ಯೂಫ್ರೇಟೀಸ್ ನದಿಯ ಬಳಿ ಅವಳು ರೋಮನರಿಂದ ಬಂಧಿಸಲ್ಪಟ್ಟಳು. ಸಾ.ಶ. 272ರಲ್ಲಿ ಪಾಲ್ಮಾಯಿರದವರು ತಮ್ಮ ಪಟ್ಟಣವನ್ನು ಒಪ್ಪಿಸಿ ಶರಣಾಗತರಾದರು. ಔರೇಲಿಯನನು ಪಾಲ್ಮಾಯಿರದ ನಿವಾಸಿಗಳೊಂದಿಗೆ ಉದಾರ ಮನಸ್ಸಿನಿಂದ ನಡೆದುಕೊಂಡನು. ಆದರೆ ಆ ಪಟ್ಟಣದಿಂದ ಅವನು ಬಹಳಷ್ಟು ವಸ್ತುಗಳನ್ನು ಸೂರೆಮಾಡಿ, ಸೂರ್ಯದೇವನ ದೇವಾಲಯದಿಂದ ವಿಗ್ರಹವನ್ನೂ ತೆಗೆದುಕೊಂಡು ರೋಮ್ಗೆ ಹೊರಟುಹೋದನು. ರೋಮನ್ ಸಾಮ್ರಾಟನು ಸೆನೋಬಿಯಳನ್ನು ಕೊಲ್ಲಲಿಲ್ಲ. ಬದಲಾಗಿ, ಸಾ.ಶ. 274ರಲ್ಲಿ, ತನ್ನ ವಿಜಯದ ಮೆರವಣಿಗೆಯಲ್ಲಿ ಅವಳನ್ನು ಪ್ರಮುಖ ಆಕರ್ಷಣೆಯಾಗಿ ಮಾಡಿಕೊಂಡು ರೋಮ್ಗೆ ಕರೆದೊಯ್ದನು. ಅಲ್ಲಿ ಅವಳು ಒಬ್ಬ ರೋಮನ್ ವ್ಯವಸ್ಥಾಪಿಕೆಯೋಪಾದಿ ತನ್ನ ಜೀವಿತದ ಉಳಿದ ಸಮಯಾವಧಿಯನ್ನು ಕಳೆದಳು.
ಮರುಭೂಮಿಯ ಪಟ್ಟಣವು ಹಾಳುಗೆಡವಲ್ಪಟ್ಟದ್ದು
ಔರೇಲಿಯನನು ಪಾಲ್ಮಾಯಿರವನ್ನು ವಶಪಡಿಸಿಕೊಂಡ ಕೆಲವು ತಿಂಗಳುಗಳ ಬಳಿಕ, ಅವನು ಹಿಂದೆ ಬಿಟ್ಟುಹೋಗಿದ್ದ ರೋಮನ್ ಕಾವಲುದಂಡನ್ನು ಪಾಲ್ಮಾಯಿರದವರು ಸಾಮೂಹಿಕವಾಗಿ ಸಂಹರಿಸಿಬಿಟ್ಟರು. ಈ ಕ್ರಾಂತಿಯ ಸುದ್ದಿಯು ಔರೇಲಿಯನನಿಗೆ ಮುಟ್ಟಿದಾಗ, ಅವನು ತತ್ಕ್ಷಣವೇ ತನ್ನ ಸೈನಿಕರಿಗೆ ಅಲ್ಲಿಗೆ ಹಿಂದಿರುಗಲು ಆಜ್ಞೆಯನ್ನಿತ್ತನು, ಮತ್ತು ಈ ಬಾರಿ ಅವರು ಮುಯ್ಯಿತೀರಿಸುವಂತಹ ರೀತಿಯಲ್ಲಿ ಆ ಜನಸಂಖ್ಯೆಯ ಮೇಲೆ ಆಕ್ರಮಣ ಮಾಡಿದರು. ನಿಷ್ಕಾರುಣ್ಯ ರೀತಿಯ ವಧೆಯಿಂದ ತಪ್ಪಿಸಿಕೊಂಡವರು, ಗುಲಾಮರೋಪಾದಿ ರೋಮ್ಗೆ ಕೊಂಡೊಯ್ಯಲ್ಪಟ್ಟರು. ಒಂದು ಕಾಲದಲ್ಲಿ ಗರ್ವದಿಂದ ಕೂಡಿದ್ದ ಪಟ್ಟಣವು ಈಗ ಸೂರೆಮಾಡಲ್ಪಟ್ಟು, ಪುನಃ ದುರಸ್ತು ಮಾಡಲಾರದಂತಹ ಸ್ಥಿತಿಗೆ ಬಂದಿತ್ತು. ಹೀಗೆ ಗದ್ದಲ ಸಂಭ್ರಮದಿಂದ ಕೂಡಿದ್ದ ರಾಜಧಾನಿಯು, ತನ್ನ ಪೂರ್ವ ಸ್ಥಿತಿಗೆ—“ಅರಣ್ಯದಲ್ಲಿರುವ ತದ್ಮೋರ್ ಪಟ್ಟಣ”—ಮರಳಿತ್ತು.
ಸೆನೋಬಿಯಳು ರೋಮ್ನ ವಿರುದ್ಧ ಧೈರ್ಯದಿಂದ ನಿಂತಾಗ, ಅವಳೂ ಸಾಮ್ರಾಟನಾದ ಔರೇಲಿಯನನೂ, ಯಾವ ಅರಿವೂ ಇಲ್ಲದೆ “ದಕ್ಷಿಣ ರಾಜ” ಮತ್ತು “ಉತ್ತರ ರಾಜ”ರ ಪಾತ್ರವನ್ನು ನಿರ್ವಹಿಸಿದ್ದರು. ಸುಮಾರು 800 ವರ್ಷಗಳಿಗೆ ಮುಂಚೆ ಯೆಹೋವನ ಪ್ರವಾದಿಯಿಂದ ಸವಿಸ್ತಾರವಾಗಿ ದಾಖಲಿಸಲ್ಪಟ್ಟಿದ್ದ ಪ್ರವಾದನೆಯ ಒಂದು ಭಾಗವನ್ನು ಇದು ಪೂರೈಸಿತ್ತು. (ದಾನಿಯೇಲ 11ನೆಯ ಅಧ್ಯಾಯ) ತನ್ನ ಆಕರ್ಷಕ ವ್ಯಕ್ತಿತ್ವದಿಂದ ಸೆನೋಬಿಯಳು ಅನೇಕರ ಮೆಚ್ಚುಗೆ ಪಡೆದಳು. ದಾನಿಯೇಲನ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟ ಒಂದು ರಾಜಕೀಯ ಪ್ರಭುತ್ವವನ್ನು ಪ್ರತಿನಿಧಿಸುವುದರಲ್ಲಿ ಅವಳು ನಿರ್ವಹಿಸಿದ ಪಾತ್ರವು ಅತಿ ಹೆಚ್ಚು ಗಮನಾರ್ಹವಾಗಿತ್ತು. ಅವಳ ಆಳ್ವಿಕೆಯು ಕೇವಲ ಐದು ವರ್ಷಗಳ ವರೆಗೆ ಮಾತ್ರ ಉಳಿದಿತ್ತು. ಸೆನೋಬಿಯಳ ರಾಜ್ಯದ ರಾಜಧಾನಿಯಾದ ಪಾಲ್ಮಾಯಿರ, ಇಂದು ಕೇವಲ ಒಂದು ಹಳ್ಳಿಯಾಗಿಯೇ ಉಳಿದಿದೆ. ಅಷ್ಟುಮಾತ್ರವಲ್ಲ, ಪ್ರಬಲವಾಗಿದ್ದ ರೋಮನ್ ಸಾಮ್ರಾಜ್ಯವು ಸಹ ಬಹಳ ಸಮಯದ ಹಿಂದೆಯೇ ಅಳಿದುಹೋಗಿದ್ದು, ಆಧುನಿಕ ರಾಜ್ಯಗಳ ಕೈಸೇರಿಹೋಗಿದೆ. ಈ ಶಕ್ತಿಗಳ ಭವಿಷ್ಯತ್ತು ಏನಾಗಿರುವುದು? ಖಂಡಿತವಾಗಿಯೂ ಅವುಗಳ ಅಂತ್ಯವು ಸಹ ಬೈಬಲ್ ಪ್ರವಾದನೆಯ ನೆರವೇರಿಕೆಯ ಮೂಲಕ ನಿಯಂತ್ರಿಸಲ್ಪಡುವುದು.—ದಾನಿಯೇಲ 2:44.
[ಪುಟ 29 ರಲ್ಲಿರುವ ಚೌಕ]
ಸೆನೋಬಿಯಳ ಪೂರ್ವಾರ್ಜಿತ ಆಸ್ತಿ
ಪಾಲ್ಮಾಯಿರದ ರಾಣಿಯಾಗಿದ್ದ ಸೆನೋಬಿಯಳನ್ನು ಸೋಲಿಸಿದ ಬಳಿಕ ರೋಮ್ಗೆ ಹಿಂದಿರುಗಿದ ಔರೇಲಿಯನನು, ಸೂರ್ಯದೇವನಿಗೆ ಒಂದು ದೇವಾಲಯವನ್ನು ಕಟ್ಟಿಸಿದನು. ಅವನು ಸೆನೋಬಿಯಳ ಪಟ್ಟಣದಿಂದ ತಂದಿದ್ದ ಸೂರ್ಯದೇವನ ಪ್ರತಿಮೆಯನ್ನು ಅದರಲ್ಲಿ ಇಟ್ಟನು. ಇನ್ನೂ ಹೆಚ್ಚಿನ ಅಭಿವೃದ್ಧಿಯ ಕುರಿತು ಹೇಳಿಕೆ ನೀಡುತ್ತಾ, ಇಂದಿನ ಇತಿಹಾ (ಇಂಗ್ಲಿಷ್) ಎಂಬ ಪತ್ರಿಕೆಯು ಹೇಳುವುದು: “ಔರೇಲಿಯನನ ಕೆಲಸಗಳಲ್ಲಿ ಅತಿ ದೀರ್ಘ ಕಾಲ ಉಳಿದ ಕೆಲಸವು ಯಾವುದೆಂದರೆ, ಸಾ.ಶ. 274ರ ಡಿಸೆಂಬರ್ 25ರಂದು, ಅಂದರೆ ಮಕರ ಸಂಕ್ರಾಂತಿಯಂದು ಬರುವ ಸೂರ್ಯದೇವನ ವಾರ್ಷಿಕ ಹಬ್ಬದ ಆಚರಣೆಯನ್ನು ಆರಂಭಿಸಿದ್ದೇ ಆಗಿರಬಹುದು. ಈ ಸಾಮ್ರಾಜ್ಯವು ಕ್ರೈಸ್ತಧರ್ಮಕ್ಕೆ ಪರಿವರ್ತಿತಗೊಂಡಾಗ, ಕ್ರಿಸ್ತನ ಜನ್ಮದಿನವನ್ನು ಇದೇ ತಾರೀಖಿನಂದು ಆಚರಿಸಲು ಆರಂಭಿಸಲಾಯಿತು. ಏಕೆಂದರೆ ಹಿಂದೆ ನಡೆಯುತ್ತಿದ್ದ ಹಬ್ಬಗಳನ್ನು ಇಷ್ಟಪಡುತ್ತಿದ್ದ ಜನರಿಗೆ ಈ ಹೊಸ ಧರ್ಮವು ಹೆಚ್ಚು ಅಂಗೀಕೃತವಾಗುವಂತೆ ಮಾಡಲಿಕ್ಕಾಗಿಯೇ. ಕೊನೆಗೂ ಸಾಮ್ರಾಜ್ಞಿಯಾದ ಸೆನೋಬಿಯಳ ಕಾರಣದಿಂದಲೇ . . . [ಜನರು] ಕ್ರಿಸ್ಮಸನ್ನು ಆಚರಿಸುತ್ತಿರಬೇಕು ಎಂಬುದು ಆಸಕ್ತಿಕರವಾದ ವಿಷಯವಾಗಿದೆ.”
[ಪುಟ 5ರಲ್ಲಿರುವಚಿತ್ರ/ಚಿತ್ರಗಳು]
(For fully formatted text, see publication)
ಮೆಡಿಟರೇನಿಯನ್ ಸಮುದ್ರ
ಅರಾಮ್
ಅಂತಿಯೋಕ್ಯ
ಇಮೆಸಾ (ಹೋಮ್ಸ್)
ಪಾಲ್ಮಾಯಿರ
ದಮಸ್ಕ
ಮೆಸಪೊಟೆಮಿಯ
ಯೂಫ್ರೇಟೀಸ್
ಕಾರೀ (ಹಾರಾನ್)
ನಿಸಬಸ್
ಡೂರಾ-ಯುರೋಪಸ್
[ಕೃಪೆ]
ಭೂಪಟ: Mountain High Maps® Copyright © 1997 Digital Wisdom, Inc.
ಕಂಭಸಾಲು: Michael Nicholson/Corbis
[ಪುಟ 29 ರಲ್ಲಿರುವ ಚಿತ್ರ]
ಔರೇಲಿಯನನನ್ನು ಚಿತ್ರಿಸುತ್ತಿರಬಹುದಾದ ರೋಮನ್ ನಾಣ್ಯ
[ಪುಟ 30 ರಲ್ಲಿರುವ ಚಿತ್ರ]
ಪಾಲ್ಮಾಯಿರದಲ್ಲಿರುವ ಸೂರ್ಯದೇವನ ದೇವಾಲಯ
[ಕೃಪೆ]
The Complete Encyclopedia of Illustration/J. G. Heck
[ಪುಟ 31 ರಲ್ಲಿರುವ ಚಿತ್ರ]
ತನ್ನ ಸೈನಿಕರನ್ನು ಸಂಬೋಧಿಸಿ ಮಾತಾಡುತ್ತಿರುವ ರಾಣಿ ಸೆನೋಬಿಯ
[ಕೃಪೆ]
Giovanni Battista Tiepolo, Queen Zenobia Addressing Her Soldiers, Samuel H. Kress Collection, Photograph © Board of Trustees, National Gallery of Art, Washington
[ಪುಟ 28 ರಲ್ಲಿರುವ ಚಿತ್ರ ಕೃಪೆ]
Detail of: Giovanni Battista Tiepolo, Queen Zenobia Addressing Her Soldiers, Samuel H. Kress Collection, Photograph © Board of Trustees, National Gallery of Art, Washington