ನಿತ್ಯಜೀವವು ನಿಜವಾಗಿಯೂ ಸಾಧ್ಯವೋ?
“ಬೋಧಕನೇ, ನಾನು ನಿತ್ಯಜೀವವನ್ನು ಪಡೆಯಬೇಕಾದರೆ ಏನು ಒಳ್ಳೇ ಕಾರ್ಯವನ್ನು ಮಾಡಬೇಕು”?—ಮತ್ತಾಯ 19:16.
1. ಮಾನವರ ಜೀವನಾವಧಿಯ ಕುರಿತು ಏನು ಹೇಳಸಾಧ್ಯವಿದೆ?
ಬೈಬಲಿನಲ್ಲಿ ಅಹಷ್ವೇರೋಷನೆಂದು ಕರೆಯಲ್ಪಟ್ಟಿರುವ ಪರ್ಷಿಯದ ರಾಜನಾದ ಸರ್ಕ್ಸೀಸ್, ಸಾ.ಶ.ಪೂ. 480ನೆಯ ವರ್ಷದಲ್ಲಿ ನಡೆಯಲಿದ್ದ ಯುದ್ಧಕ್ಕೆ ಮುಂಚಿತವಾಗಿ ತನ್ನ ದಂಡುಗಳನ್ನು ಪರಿಶೀಲಿಸುತ್ತಿದ್ದನು. (ಎಸ್ತೇರಳು 1:1, 2) ಗ್ರೀಕ್ ಇತಿಹಾಸಕಾರ ಹಿರಾಡಟಸ್ನಿಗನುಸಾರ, ರಾಜನು ತನ್ನ ಸೈನಿಕರನ್ನು ವೀಕ್ಷಿಸಿದಂತೆ ಕಣ್ಣೀರು ಸುರಿಸಿದನು. ಏಕೆ? ಏಕೆಂದರೆ ಸರ್ಕ್ಸೀಸನು ಹೇಳಿದ್ದು: “ಮನುಷ್ಯನ ಅಲ್ಪಾಯುಷ್ಯದ ಕುರಿತು ಯೋಚಿಸುವಾಗ ನನಗೆ ದುಃಖವಾಗುತ್ತದೆ. ಯಾಕೆಂದರೆ ಇಂದಿನಿಂದ ಒಂದು ನೂರು ವರ್ಷಗಳಲ್ಲಿ ಈ ಪುರುಷರಲ್ಲಿ ಒಬ್ಬನಾದರೂ ಬದುಕಿರುವುದಿಲ್ಲ.” ಜೀವನವು ಅಲ್ಪಕಾಲದ್ದಾಗಿದೆಯೆಂದು ಮತ್ತು ಯಾರೊಬ್ಬರೂ ವೃದ್ಧರಾಗಿ, ರೋಗದಿಂದ ಕಷ್ಟಾನುಭವಿಸಿ, ಅನಂತರ ಸಾಯುವುದಕ್ಕೆ ಇಷ್ಟಪಡುವುದಿಲ್ಲವೆಂದು ನೀವು ಸಹ ಗಮನಿಸಿದ್ದಿರಬಹುದು. ಆಹಾ, ಯೌವನಭರಿತ ಆರೋಗ್ಯ ಮತ್ತು ಸಂತೋಷದ ಜೀವನವನ್ನು ಅನುಭವಿಸಲು ನಮಗೆ ಸಾಧ್ಯವಿದ್ದಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!—ಯೋಬ 14:1, 2.
2. ಯಾವ ನಿರೀಕ್ಷೆಯು ಅನೇಕರಿಗಿದೆ, ಮತ್ತು ಏಕೆ?
2 ಗಮನಾರ್ಹವಾಗಿ, ಸೆಪ್ಟೆಂಬರ್ 28, 1997ರ ದ ನ್ಯೂ ಯಾರ್ಕ್ ಟೈಮ್ಸ್ ಮ್ಯಾಗಸಿನ್, “ಅವರು ಜೀವಿಸಬಯಸುತ್ತಾರೆ” ಎಂಬ ಲೇಖನವನ್ನು ಪ್ರಕಾಶಿಸಿತ್ತು. ಅದು ಒಬ್ಬ ಸಂಶೋಧಕನ ಮಾತುಗಳನ್ನು ಉದ್ಧರಿಸಿತು. ಅವನು ಘೋಷಿಸಿದ್ದು: “ಸದಾಕಾಲ ಜೀವಿಸುವ ಪ್ರಥಮ ಸಂತತಿಯು ನಮ್ಮದಾಗಿರಸಾಧ್ಯವೆಂದು ನಾನು ನಿಜವಾಗಿಯೂ ನಂಬುತ್ತೇನೆ”! ನಿತ್ಯಜೀವವು ಸಾಧ್ಯವೆಂದು ನೀವು ಸಹ ನಂಬಬಹುದು. ನಾವು ಭೂಮಿಯ ಮೇಲೆ ಸದಾಕಾಲ ಜೀವಿಸಸಾಧ್ಯವಿದೆ ಎಂದು ಬೈಬಲು ವಾಗ್ದಾನಿಸುವುದರಿಂದ, ನೀವು ಹಾಗೆ ನೆನಸಬಹುದು. (ಕೀರ್ತನೆ 37:29; ಪ್ರಕಟನೆ 21:3, 4) ಆದರೂ, ಬೈಬಲಿನಲ್ಲಿ ಕಂಡುಬರುವವುಗಳಿಗಿಂತಲೂ ಬೇರೆಯೇ ಆದ ಕಾರಣಗಳಿಗಾಗಿ ನಿತ್ಯಜೀವವು ಸಾಧ್ಯವೆಂದು ಕೆಲವು ಜನರು ನಂಬುತ್ತಾರೆ. ಈ ಕಾರಣಗಳಲ್ಲಿ ಒಂದೆರಡನ್ನು ಪರಿಗಣಿಸುವ ಮೂಲಕ, ನಿತ್ಯಜೀವವು ನಿಜವಾಗಿಯೂ ಸಾಧ್ಯವಿದೆ ಎಂಬ ವಿಷಯವನ್ನು ನಾವು ಗಣ್ಯಮಾಡುವೆವು.
ಸದಾಕಾಲ ಜೀವಿಸುವಂತೆ ವಿನ್ಯಾಸಿಸಲ್ಪಟ್ಟದ್ದು
3, 4. (ಎ) ನಾವು ಸದಾಕಾಲ ಜೀವಿಸಲು ಶಕ್ತರಾಗಿರಬೇಕೆಂದು ಕೆಲವರು ಏಕೆ ನಂಬುತ್ತಾರೆ? (ಬಿ) ದಾವೀದನು ತನ್ನ ರಚನೆಯ ಕುರಿತು ಏನು ಹೇಳಿದನು?
3 ಮನುಷ್ಯರು ಸದಾಕಾಲ ಜೀವಿಸಲು ಶಕ್ತರಾಗಿರಬೇಕೆಂದು ನಂಬುವುದಕ್ಕೆ ಅನೇಕರಿಗಿರುವ ಒಂದು ಕಾರಣವು, ನಾವು ನಿರ್ಮಿಸಲ್ಪಟ್ಟಿರುವ ಅದ್ಭುತಕರವಾದ ರೀತಿಗೆ ಸಂಬಂಧಿಸುತ್ತದೆ. ದೃಷ್ಟಾಂತಕ್ಕಾಗಿ, ನಮ್ಮ ತಾಯಿಯ ಗರ್ಭದಲ್ಲಿ ನಾವು ರಚಿಸಲ್ಪಟ್ಟಿರುವ ರೀತಿಯು ನಿಜವಾಗಿಯೂ ಅದ್ಭುತಕರವಾಗಿದೆ. ಮುದಿಯಾಗುವಿಕೆಯ ಕುರಿತ ಒಬ್ಬ ಪ್ರಮುಖ ತಜ್ಞರು, “ಗರ್ಭಧಾರಣೆಯಿಂದ ಹಿಡಿದು ಜನನಕ್ಕೆ ಮತ್ತು ಅನಂತರ ಲೈಂಗಿಕ ಪ್ರೌಢತೆಗೆ ಮತ್ತು ಪ್ರಾಪ್ತವಯಸ್ಸಿಗೆ ನಮ್ಮನ್ನೊಯ್ಯುವ ಅದ್ಭುತಗಳನ್ನು ಮಾಡಿದ ಮೇಲೆ, ಆ ಅದ್ಭುತಗಳನ್ನು ಸದಾಕಾಲ ಕಾಪಾಡಿಕೊಂಡು ಹೋಗುವಂತಹ ಒಂದು ಸರಳವಾದ ಕಾರ್ಯವಿಧಾನವನ್ನು ರೂಪಿಸಿಕೊಳ್ಳಲು ಪ್ರಕೃತಿಯು ಬಯಸಲಿಲ್ಲ” ಎಂಬುದಾಗಿ ಬರೆದರು. ಹೌದು, ನಮ್ಮ ಅದ್ಭುತಕರ ರಚನೆಯನ್ನು ಪರಿಗಣಿಸುವಾಗ, ನಾವು ಏಕೆ ಸಾಯಬೇಕು? ಎಂಬ ಪ್ರಶ್ನೆಯು ಉತ್ತರಿಸಲ್ಪಡದೆಯೇ ಉಳಿಯುತ್ತದೆ.
4 ಇಂದು ವಿಜ್ಞಾನಿಗಳು ಗರ್ಭದೊಳಗಿರುವಂಥದ್ದನ್ನು ನೋಡಸಾಧ್ಯವಿರುವಂತೆ ಬೈಬಲ್ ಬರಹಗಾರನಾದ ದಾವೀದನು ನೋಡಿರಲಿಲ್ಲವಾದರೂ, ಸಹಸ್ರಾರು ವರ್ಷಗಳ ಹಿಂದೆಯೇ ಅವೇ ಅದ್ಭುತಗಳ ಕುರಿತು ಅವನು ಚಿಂತಿಸಿದನು. ದಾವೀದನು ತನ್ನ ಸ್ವಂತ ರಚನೆಯ ಕುರಿತು ಆಲೋಚಿಸಿ, ತಾನು ‘ತಾಯಿಯ ಗರ್ಭದಲ್ಲಿ ಮರೆಮಾಡಲ್ಪಟ್ಟೆನು’ ಎಂಬುದಾಗಿ ಬರೆದನು. ಆ ಸಮಯದಲ್ಲಿ ‘ಅವನ ಅಂತರಿಂದ್ರಿಯಗಳು ರೂಪಿಸಲ್ಪಟ್ಟವು’ ಎಂದು ಅವನು ಹೇಳಿದನು. “ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ” ಇದ್ದಾಗ, ತನ್ನ “ಅಸ್ಥಿಪಂಜರವು” ರೂಪಿಸಲ್ಪಟ್ಟಿತೆಂದು ಅವನು ಹೇಳುತ್ತಾನೆ. “ನಾನು . . . ಕೇವಲ ಪಿಂಡ”ವಾಗಿದ್ದ ಸಮಯದ ಕುರಿತು ದಾವೀದನು ತರುವಾಯ ತಿಳಿಸಿ, ತನ್ನ ತಾಯಿಯ ಗರ್ಭದೊಳಗಿರುವ ಆ ಪಿಂಡದ ಸಂಬಂಧದಲ್ಲಿ ಗಮನಿಸಿದ್ದು: “ಅದರ ಎಲ್ಲ ಭಾಗಗಳು ಬರೆದಿಡಲ್ಪಟ್ಟವು.”—ಕೀರ್ತನೆ 139:13-16, NW.
5. ಗರ್ಭದೊಳಗಿನ ನಮ್ಮ ರಚನೆಯಲ್ಲಿ ಯಾವ ಅದ್ಭುತಗಳು ಒಳಗೊಂಡಿವೆ?
5 ದಾವೀದನ ರಚನೆಗಾಗಿ ಅವನ ತಾಯಿಯ ಗರ್ಭದಲ್ಲಿ ಅಕ್ಷರಾರ್ಥವಾದ ಒಂದು ಲಿಖಿತ ನೀಲಿನಕ್ಷೆಯು ಇರಲಿಲ್ಲವೆಂಬುದು ಸ್ಪಷ್ಟ. ಆದರೆ, ತನ್ನ ‘ಅಂತರಿಂದ್ರಿಯಗಳು,’ ‘ಅಸ್ತಿಪಂಜರ’ ಮತ್ತು ದೇಹದ ಇತರ ಭಾಗಗಳ ರಚನೆಯ ಕುರಿತು ದಾವೀದನು ಮನನಮಾಡಿದಂತೆ, ಇವುಗಳ ವಿಕಸನವು ಒಂದು ಯೋಜನೆಗನುಸಾರ ಇರುವಂತೆ, ಅಂದರೆ ಎಲ್ಲವೂ “ಬರೆದಿಡಲ್ಪಟ್ಟಿ”ವೆಯೋ ಎಂಬಂತೆ ಅವನಿಗೆ ಭಾಸವಾಯಿತು. ತನ್ನ ತಾಯಿಯ ಗರ್ಭದಲ್ಲಿ ಫಲೀಕರಿಸಿದ ಜೀವಕೋಶದೊಳಗೆ, ಒಂದು ಮಾನವ ಶಿಶುವನ್ನು ಹೇಗೆ ರೂಪಿಸಬೇಕೆಂಬುದರ ಕುರಿತು ವಿಸ್ತೃತ ಉಪದೇಶವನ್ನೊಳಗೊಂಡ ಪುಸ್ತಕಗಳ ಒಂದು ದೊಡ್ಡ ಭಂಡಾರವಿದ್ದು, ಈ ಜಟಿಲವಾದ ಉಪದೇಶಗಳು ಪ್ರತಿಯೊಂದು ಹೊಸ ಜೀವಕೋಶಕ್ಕೆ ಸಾಗಿಸಲ್ಪಟ್ಟಿತ್ತೊ ಎಂಬಂತಿತ್ತು. ಹೀಗೆ, ಸೈಎನ್ಸ್ ವರ್ಲ್ಡ್ ಎಂಬ ಪತ್ರಿಕೆಯು, ‘ವಿಕಸಿಸುತ್ತಿರುವ ಭ್ರೂಣದ ಪ್ರತಿಯೊಂದು ಕೋಶದಲ್ಲಿ, ಒಂದು ಪೆಟ್ಟಿಗೆಯನ್ನು ತುಂಬುವಷ್ಟು ನೀಲಿನಕ್ಷೆಗಳಿವೆ’ ಎಂದು ಅಲಂಕಾರಿಕ ಭಾಷೆಯನ್ನು ಉಪಯೋಗಿಸಿ ತಿಳಿಸುತ್ತದೆ.
6. ದಾವೀದನು ಬರೆದಂತೆ, ನಾವು “ಅದ್ಭುತವಾಗಿ” ರಚಿಸಲ್ಪಟ್ಟಿದ್ದೇವೆ ಎಂಬುದಕ್ಕೆ ಯಾವ ಸಾಕ್ಷ್ಯವಿದೆ?
6 ನಮ್ಮ ಶರೀರಗಳ ಅದ್ಭುತಕರ ಕಾರ್ಯಾಚರಣೆಯ ಕುರಿತು ನೀವು ಎಂದಾದರೂ ಯೋಚಿಸಿ ನೋಡಿದ್ದೀರೊ? ಜೀವಶಾಸ್ತ್ರಜ್ಞ ಜ್ಯಾರಡ್ ಡೈಮಂಡ್ ಗಮನಿಸಿದ್ದು: “ನಾವು ನಮ್ಮ ಕರುಳಿನ ಸುತ್ತಲೂ ಇರುವ ಜೀವಕೋಶಗಳನ್ನು ಕೆಲವು ದಿನಗಳಿಗೊಮ್ಮೆ, ಮೂತ್ರಕೋಶಗಳನ್ನು ಆವರಿಸಿರುವ ಜೀವಕೋಶಗಳನ್ನು ಎರಡು ತಿಂಗಳಿಗೊಮ್ಮೆ, ಮತ್ತು ನಮ್ಮ ಕೆಂಪು ರಕ್ತಕಣಗಳನ್ನು ನಾಲ್ಕು ತಿಂಗಳಿಗೊಮ್ಮೆ ಹೊಸದಾಗಿ ಭರ್ತಿಮಾಡಿಕೊಳ್ಳುತ್ತೇವೆ.” ಅವರು ಸಮಾಪ್ತಿಗೊಳಿಸಿದ್ದು: “ನಿಸರ್ಗವು ಪ್ರತಿದಿನ ನಮ್ಮ ಭಾಗಗಳನ್ನು ಬೇರ್ಪಡಿಸಿ, ಪುನಃ ಒಂದುಗೂಡಿಸುತ್ತಾ ಇದೆ.” ಇದು ನಿಜವಾಗಿಯೂ ಏನನ್ನು ಅರ್ಥೈಸುತ್ತದೆ? ನಾವು 8, 80, ಇಲ್ಲವೆ 800 ವರ್ಷಗಳೇ ಜೀವಿಸಲಿ, ನಮ್ಮ ಭೌತಿಕ ಶರೀರವು ಹರೆಯಾವಸ್ಥೆಯಲ್ಲೇ ಉಳಿಯುತ್ತದೆ. ವಿಜ್ಞಾನಿಯೊಬ್ಬನು ಒಮ್ಮೆ ಅಂದಾಜುಹಾಕಿದ್ದು: “ಈಗ ನಮ್ಮಲ್ಲಿರುವ ಜೀವಕಣಗಳಲ್ಲಿ ಸರಿಸುಮಾರು 98 ಪ್ರತಿಶತದಷ್ಟು ಕಣಗಳು, ನಾವು ಸೇವಿಸುವ ಗಾಳಿ, ಆಹಾರ, ಮತ್ತು ಪಾನೀಯದಲ್ಲಿರುವ ಇತರ ಪರಮಾಣುಗಳಿಂದ ಒಂದು ವರ್ಷದೊಳಗೆ ಪುನಃ ಭರ್ತಿಯಾಗುವವು.” ನಿಶ್ಚಯವಾಗಿಯೂ, ದಾವೀದನು ಕೊಂಡಾಡಿದಂತೆಯೇ ನಾವು “ಅದ್ಭುತವಾಗಿಯೂ ವಿಚಿತ್ರವಾಗಿಯೂ” ರಚಿಸಲ್ಪಟ್ಟಿದ್ದೇವೆ.—ಕೀರ್ತನೆ 139:14.
7. ನಮ್ಮ ಭೌತಿಕ ಶರೀರಗಳ ರಚನೆಯ ಆಧಾರದ ಮೇಲೆ ಕೆಲವರು ಯಾವ ತೀರ್ಮಾನಕ್ಕೆ ಬಂದಿದ್ದಾರೆ?
7 ನಮ್ಮ ಭೌತಿಕ ದೇಹಗಳ ರಚನೆಯ ಮೇಲೆ ಆಧಾರಿಸಿ, ವೃದ್ಧಾಪ್ಯದ ಕುರಿತ ಒಬ್ಬ ಪ್ರಮುಖ ತಜ್ಞನು ಹೇಳಿದ್ದು: “ಮುದಿಯಾಗುವಿಕೆ ಏಕೆ ಸಂಭವಿಸಬೇಕೆಂಬುದು ಅಸ್ಪಷ್ಟವಾಗಿದೆ.” ಆದುದರಿಂದ ನಾವು ಸದಾ ಜೀವಿಸಬೇಕೆಂಬುದೇ ಸತ್ಯವೆಂದು ತೋರುತ್ತದೆ. ಈ ಕಾರಣದಿಂದಲೇ, ಮನುಷ್ಯರು ತಮ್ಮ ತಂತ್ರಜ್ಞಾನದ ಮೂಲಕ ಈ ಗುರಿಯನ್ನು ಮುಟ್ಟಲು ಪ್ರಯತ್ನಿಸುತ್ತಿದ್ದಾರೆ. ಸ್ವಲ್ಪ ಸಮಯದ ಹಿಂದೆ, ಡಾ. ಆಲ್ವಿನ್ ಸಿಲ್ವರ್ಸ್ಟೈನ್, ಮರಣದ ಮೇಲೆ ವಿಜಯ ಎಂಬ ತಮ್ಮ ಇಂಗ್ಲಿಷ್ ಪುಸ್ತಕದಲ್ಲಿ ಆತ್ಮವಿಶ್ವಾಸದಿಂದ ಬರೆದುದು: “ಜೀವನದ ಸ್ವತವನ್ನು ನಾವು ಬಹಿರಂಗಗೊಳಿಸುವೆವು . . . ವ್ಯಕ್ತಿಗೆ ಮುಪ್ಪು ಬರುವುದು ಹೇಗೆಂಬುದನ್ನು . . . ನಾವು ತಿಳಿದುಕೊಳ್ಳುವೆವು.” ಯಾವ ಫಲಿತಾಂಶದೊಂದಿಗೆ? ಅವರು ಮುಂತಿಳಿಸಿದ್ದು: “‘ವೃದ್ಧರು’ ಇನ್ನು ಮುಂದೆ ಇರುವುದಿಲ್ಲ, ಯಾಕಂದರೆ ಮರಣದ ಮೇಲೆ ವಿಜಯವನ್ನು ಸಾಧಿಸುವ ಜ್ಞಾನವು ಶಾಶ್ವತವಾದ ಯೌವನವನ್ನೂ ಬರಮಾಡುವುದು.” ಮನುಷ್ಯನ ರಚನೆಯ ಸಂಬಂಧದಲ್ಲಿ ವೈಜ್ಞಾನಿಕ ಶೋಧನೆಯನ್ನು ಪರಿಗಣಿಸುವಾಗ, ನಿತ್ಯಜೀವವು ಬಹಳ ಅಸಂಭವವೆಂದು ಅನಿಸುತ್ತದೊ? ನಿತ್ಯಜೀವವು ಸಾಧ್ಯವೆಂದು ನಂಬುವುದಕ್ಕೆ ಮತ್ತೊಂದು ಬಲವಾದ ಕಾರಣವಿದೆ.
ಸದಾಕಾಲ ಜೀವಿಸುವ ಬಯಕೆ
8, 9. ಇತಿಹಾಸದಾದ್ಯಂತ ಜನರು ಯಾವ ಸ್ವಾಭಾವಿಕ ಬಯಕೆಯನ್ನು ಪೋಷಿಸಿದ್ದಾರೆ?
8 ಸದಾಕಾಲ ಜೀವಿಸುವುದು ಒಂದು ಸ್ವಾಭಾವಿಕ ಮಾನುಷ ಅಪೇಕ್ಷೆಯಾಗಿದೆ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರೊ? ಒಂದು ಜರ್ಮನ್ ಪತ್ರಿಕೆಯಲ್ಲಿ, ಒಬ್ಬ ಡಾಕ್ಟರರು ಬರೆದದ್ದು: “ನಿತ್ಯಜೀವದ ಕನಸು ಬಹುಶಃ ಮಾನವಕುಲದಷ್ಟೇ ಹಳೆಯದ್ದಾಗಿದೆ.” ಕೆಲವು ಪುರಾತನ ಯೂರೋಪಿಯನರ ನಂಬಿಕೆಗಳನ್ನು ವರ್ಣಿಸುತ್ತಾ, ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಅರ್ಹರಾದ ಜನರು, ಬಂಗಾರದ ಚಾವಣಿಯು ಹೊದಿಸಲ್ಪಟ್ಟ ಸುಶೋಭಿತ ಸಭಾಂಗಣದಲ್ಲಿ ಸದಾಕಾಲ ಜೀವಿಸುವರು.” ಮತ್ತು ನಿತ್ಯಜೀವದ ಆ ಮೂಲಭೂತ ಬಯಕೆಯನ್ನು ಪೂರೈಸಲಿಕ್ಕಾಗಿ ಮನುಷ್ಯರು ಮಾಡಿರುವ ಪ್ರಯತ್ನ ಅಷ್ಟಿಷ್ಟಲ್ಲ!
9 ದಿ ಎನ್ಸೈಕ್ಲೊಪೀಡಿಯ ಅಮೆರಿಕಾನ ಅವಲೋಕಿಸುವುದೇನಂದರೆ, 2,000 ವರ್ಷಗಳ ಹಿಂದೆ ಚೀನಾದಲ್ಲಿ “ಸಾಮ್ರಾಟರು ಮತ್ತು [ಸಾಮಾನ್ಯ] ಜನರು ಸಮಾನವಾಗಿ, ಟಾವೊ ಯಾಜಕರ ನಾಯಕತ್ವದ ಕೆಳಗೆ, ಜೀವದ ಸಿದ್ಧರಸಕ್ಕಾಗಿ ಹುಡುಕಲು ಕೆಲಸವನ್ನು ಅಲಕ್ಷಿಸಿದರು.” ಆ ಸಿದ್ಧರಸವನ್ನು ಯೌವನದ ಒರತೆಯೆನ್ನಲಾಗುತ್ತಿತ್ತು. ಇತಿಹಾಸದಾದ್ಯಂತ, ಜನರು ವಿವಿಧ ಪದಾರ್ಥಗಳನ್ನು ಬೆರಸಿ ತಯಾರಿಸಿದ ಮಿಶ್ರಣವನ್ನು ಸೇವಿಸುವ ಮೂಲಕ ಅಥವಾ ನಿರ್ದಿಷ್ಟ ನೀರನ್ನು ಕುಡಿಯುವ ಮೂಲಕವೂ ತಾವು ಯುವಕರಾಗಿ ಉಳಿಯುವ ಸಾಧ್ಯತೆ ಇದೆಯೆಂದು ನಂಬಿದರು.
10. ದೀರ್ಘಾವಧಿಯ ಜೀವಿತವು ಸಾಧ್ಯವಾಗುವಂತೆ ಯಾವ ಆಧುನಿಕ ಪ್ರಯತ್ನವನ್ನು ಮಾಡಲಾಗಿದೆ?
10 ನಿತ್ಯಜೀವಕ್ಕಾಗಿರುವ ಮನುಷ್ಯನ ಸ್ವಾಭಾವಿಕ ಬಯಕೆಯನ್ನು ತೃಪ್ತಿಪಡಿಸಲು ಮಾಡಲ್ಪಟ್ಟಿರುವ ಆಧುನಿಕ ಪ್ರಯಾಸಗಳು ಸಹ ತದ್ರೀತಿಯಲ್ಲಿ ಗಮನಾರ್ಹವಾಗಿವೆ. ಒಂದು ಪ್ರಮುಖ ಉದಾಹರಣೆಯು, ರೋಗಕ್ಕೆ ಬಲಿಯಾಗಿ ಸಾಯುವ ಒಬ್ಬ ಮನುಷ್ಯನನ್ನು ಘನೀಭವಿಸಿಡುವ ಪದ್ಧತಿಯೇ. ಭವಿಷ್ಯತ್ತಿನಲ್ಲಿ ಆ ರೋಗಕ್ಕೆ ಔಷಧವು ಕಂಡುಹಿಡಿಯಲ್ಪಟ್ಟಾಗ, ಜೀವವನ್ನು ಪುನರುಜ್ಜೀವಿಸುವ ನಿರೀಕ್ಷೆಯಿಂದಲೇ ಇದನ್ನು ಮಾಡಲಾಗುತ್ತದೆ. ಕ್ರೈಯಾನಿಕ್ಸ್ ಎಂದು ಕರೆಯಲ್ಪಡುವ ಈ ಪದ್ಧತಿಯ ಪ್ರತಿಪಾದಕನೊಬ್ಬನು ಬರೆದುದು: “ನಮ್ಮ ಆಶಾವಾದವು ನಿಜವೆಂದು ರುಜುವಾದಲ್ಲಿ ಮತ್ತು ವೃದ್ಧಾಪ್ಯದ ನಿರ್ಬಲತೆಗಳೂ ಸೇರಿ, ಸಕಲ ಹಾನಿಯನ್ನು ವಾಸಿಮಾಡುವ ಅಥವಾ ದುರಸ್ತಿಮಾಡುವ ವಿಧಾನವನ್ನು ನಾವು ಕಲಿತುಕೊಂಡಲ್ಲಿ, ಈಗ ‘ಸಾಯು’ವವರಿಗೆ ಭವಿಷ್ಯತ್ತಿನಲ್ಲಿ ಅನಂತಕಾಲದ ತನಕ ವ್ಯಾಪಿಸಿರುವ ಜೀವವಿರುವುದು.”
11. ಜನರು ಸದಾಕಾಲ ಜೀವಿಸಲು ಏಕೆ ಬಯಸುತ್ತಾರೆ?
11 ನಿತ್ಯಜೀವದ ಈ ಬಯಕೆಯು ನಮ್ಮ ಯೋಚನೆಯಲ್ಲಿ ಇಷ್ಟೊಂದು ಭದ್ರವಾಗಿ ಏಕೆ ನೆಡಲ್ಪಟ್ಟಿದೆ? ಎಂದು ನೀವು ಕೇಳಬಹುದು. ಅದು, “[ದೇವರು] ಮನುಷ್ಯನ ಮನಸ್ಸಿನೊಳಗೆ ಅನಂತಕಾಲದ ಯೋಚನೆಯನ್ನು ಹಾಕಿದ್ದಾನೆ” ಎಂಬ ಕಾರಣದಿಂದಲ್ಲವೊ? (ಪ್ರಸಂಗಿ 3:11, ರಿವೈಸ್ಡ್ ಸ್ಟ್ಯಾಂಡರ್ಡ್ ವರ್ಷನ್) ಇದು ಗಂಭೀರವಾಗಿ ಯೋಚಿಸತಕ್ಕ ಒಂದು ವಿಷಯವಾಗಿದೆ! ಸ್ವಲ್ಪ ಆಲೋಚಿಸಿರಿ: ಅನಂತವಾಗಿ, ಸದಾಕಾಲ ಜೀವಿಸುವ ಸ್ವಾಭಾವಿಕ ಅಪೇಕ್ಷೆಯನ್ನು ತೃಪ್ತಿಪಡಿಸುವುದು ನಮ್ಮ ನಿರ್ಮಾಣಿಕರ್ತನ ಉದ್ದೇಶವಾಗಿರದಿದ್ದಲ್ಲಿ, ಆ ಬಯಕೆಯು ನಮ್ಮಲ್ಲಿ ಏಕೆ ಇರುತ್ತಿತ್ತು? ನಿತ್ಯಜೀವದ ಬಯಕೆಯೊಂದಿಗೆ ಆತನು ನಮ್ಮನ್ನು ಸೃಷ್ಟಿಸಿ, ಅನಂತರ, ಆ ಬಯಕೆಯನ್ನು ಕೈಗೂಡಿಸಲು ಬಿಡದೆ ಇರುವ ಮೂಲಕ ನಮ್ಮನ್ನು ನಿರಾಶೆಗೊಳಿಸುವುದು ಪ್ರೀತಿಪರವಾಗಿರುವುದೊ?—ಕೀರ್ತನೆ 145:16.
ನಾವು ಯಾರನ್ನು ನಂಬತಕ್ಕದ್ದು?
12. ಯಾವ ಭರವಸೆ ಕೆಲವರಿಗಿದೆ, ಆದರೆ ಅದು ಸಾಧಾರವಾದದ್ದೆಂದು ನೀವು ನಂಬುತ್ತೀರೊ?
12 ಆದರೆ ನಿತ್ಯಜೀವವನ್ನು ಪಡೆದುಕೊಳ್ಳುವುದಕ್ಕಾಗಿ ನಾವು ನಮ್ಮ ಭರವಸೆಯನ್ನು ಎಲ್ಲಿ ಮತ್ತು ಯಾವುದರಲ್ಲಿ ಇಡಬೇಕು? 20ನೆಯ ಅಥವಾ 21ನೆಯ ಶತಮಾನದ ಮಾನವ ತಂತ್ರಜ್ಞಾನದಲ್ಲೊ? “ಅವರು ಜೀವಿಸಬಯಸುತ್ತಾರೆ” ಎಂಬ ದ ನ್ಯೂ ಯಾರ್ಕ್ ಟೈಮ್ಸ್ ಮ್ಯಾಗಸೀನ್ ಲೇಖನವು ಒಂದು ಹೊಸ “ದೈವ, ಅಂದರೆ ತಂತ್ರಜ್ಞಾನ ಮತ್ತು ತಂತ್ರಜ್ಞಾನದ ಸಾಧ್ಯತೆಯ ಕುರಿತ ಉತ್ಸುಕತೆಗಳನ್ನು” ತಿಳಿಯಪಡಿಸಿತು. ಒಬ್ಬ ಸಂಶೋಧಕನು “ಮುಪ್ಪಾಗುವುದನ್ನು ನಿಲ್ಲಿಸುವ, ಅಥವಾ ಅದನ್ನು ತದ್ವಿರುದ್ಧಗೊಳಿಸುವ ಮೂಲಕವೂ [ನಮ್ಮನ್ನು] ರಕ್ಷಿಸಲಿಕ್ಕಾಗಿ ಸಕಾಲದಲ್ಲಿ ದೊರೆಯಲಿರುವ ಆನುವಂಶೀಯವರ್ಧನ ತಂತ್ರಜ್ಞಾನಗಳ ವಿಷಯದಲ್ಲಿ ಉಲ್ಲಾಸಕರವಾದ ಆತ್ಮವಿಶ್ವಾಸ”ವುಳ್ಳವನಾಗಿದ್ದನು ಎಂದು ಹೇಳಲಾಯಿತು. ಆದರೆ ವಾಸ್ತವದಲ್ಲಿ, ಮುಪ್ಪಾಗುವುದನ್ನು ನಿಲ್ಲಿಸುವ ಇಲ್ಲವೆ ಮರಣವನ್ನು ಜಯಿಸುವ ಸಂಬಂಧದಲ್ಲಿ ಮಾನವ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿವೆ.
13. ನಾವು ಸದಾಕಾಲ ಜೀವಿಸುವಂತೆ ಉದ್ದೇಶಿಸಲ್ಪಟ್ಟಿದ್ದೇವೆಂದು ನಮ್ಮ ಮಿದುಳಿನ ರಚನೆಯು ಹೇಗೆ ಸೂಚಿಸುತ್ತದೆ?
13 ಆದರೆ ನಿತ್ಯಜೀವವನ್ನು ಸಂಪಾದಿಸುವ ಮಾರ್ಗವು ಇಲ್ಲವೆಂದು ಇದರ ಅರ್ಥವೋ? ಅಲ್ಲವೇ ಅಲ್ಲ! ಒಂದು ಮಾರ್ಗವು ಇದೆ! ಕಲಿಯುವ ಅಪರಿಮಿತ ಸಾಮರ್ಥ್ಯವಿರುವ ನಮ್ಮ ಅದ್ಭುತಕರ ಮಿದುಳಿನ ರಚನೆಯು, ಇದನ್ನು ನಮಗೆ ಮನಗಾಣಿಸಬೇಕು. ಅಣುಜೀವಿಶಾಸ್ತ್ರಜ್ಞರಾದ ಜೇಮ್ಸ್ ವಾಟ್ಸನ್, ನಮ್ಮ ಮಿದುಳನ್ನು “ನಾವು ಈ ತನಕ ಸಂಶೋಧಿಸಿರುವ ವಸ್ತುಗಳಲ್ಲೇ ವಿಶ್ವದ ಅತ್ಯಂತ ಜಟಿಲವಾದ ವಸ್ತು” ಎಂಬುದಾಗಿ ಕರೆದರು. ನರವ್ಯೂಹ ವಿಜ್ಞಾನಿ ರಿಚರ್ಡ್ ರೆಸ್ಟ್ಯಾರ್ ಹೇಳಿದ್ದು: “ಜ್ಞಾತ ವಿಶ್ವದ ಯಾವ ಮೂಲೆಯಲ್ಲೂ ಮಿದುಳನ್ನು ಸ್ವಲ್ಪಮಟ್ಟಿಗಾದರೂ ಹೋಲುವಂತಹ ವಸ್ತುವೇ ಇಲ್ಲ.” ನಾವು ಸದಾಕಾಲದ ಜೀವನದಲ್ಲಿ ಆನಂದಿಸಬೇಕೆಂದು ಉದ್ದೇಶಿಸಲ್ಪಟ್ಟಿಲ್ಲವಾದರೆ, ಅಪಾರ ಸಮಾಚಾರವನ್ನು ಸಂಗ್ರಹಿಸುವ ಮತ್ತು ಶೇಖರಿಸುವ ಸಾಮರ್ಥ್ಯವುಳ್ಳ ಒಂದು ಮಿದುಳು ಮತ್ತು ಸದಾಕಾಲ ಕಾರ್ಯಮಾಡುವಂತೆ ರಚಿಸಲ್ಪಟ್ಟ ಒಂದು ಶರೀರವು ನಮಗಿರುವುದಾದರೂ ಏಕೆ?
14. (ಎ) ಮಾನವ ಜೀವಿತದ ಸಂಬಂಧದಲ್ಲಿ ಯಾವ ತೀರ್ಮಾನಕ್ಕೆ ಬೈಬಲ್ ಬರಹಗಾರರು ನಮ್ಮ ಗಮನ ಸೆಳೆಯುತ್ತಾರೆ? (ಬಿ) ನಾವು ಏಕೆ ಮನುಷ್ಯನಲ್ಲಿ ಭರವಸವಿಡದೆ ದೇವರಲ್ಲಿ ಭರವಸವಿಡಬೇಕು?
14 ಹಾಗಾದರೆ, ನಾವು ತಲಪಸಾಧ್ಯವಿರುವ ಏಕಮಾತ್ರ ನ್ಯಾಯಸಮ್ಮತವಾದ, ವಾಸ್ತವಿಕ ತೀರ್ಮಾನವು ಯಾವುದಾಗಿದೆ? ಅದು, ಒಬ್ಬ ಸರ್ವಶಕ್ತನಾದ ಬುದ್ಧಿಶಕ್ತಿಯುಳ್ಳ ನಿರ್ಮಾಣಕರ್ತನಿಂದ ನಾವು ವಿನ್ಯಾಸಿಸಲ್ಪಟ್ಟವರೂ ನಿರ್ಮಿಸಲ್ಪಟ್ಟವರೂ ಆಗಿದ್ದೇವೆ ಎಂಬ ತೀರ್ಮಾನವಲ್ಲವೇ? (ಯೋಬ 10:8; ಕೀರ್ತನೆ 36:9; 100:3; ಮಲಾಕಿಯ 2:10; ಅ. ಕೃತ್ಯಗಳು 17:24, 25) ಆದುದರಿಂದ, “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡ ಶಕ್ತನಲ್ಲ” ಎಂಬ ಬೈಬಲಿನ ಕೀರ್ತನೆಗಾರನ ಪ್ರೇರಿತ ಆಜ್ಞೆಗೆ ವಿವೇಕಯುತರಾಗಿ ನಾವು ಕಿವಿಗೊಡಬೇಕಲ್ಲವೊ? ಮನುಷ್ಯನಲ್ಲಿ ನಾವು ಏಕೆ ಭರವಸವಿಡಬಾರದು? ಏಕೆಂದರೆ, ಕೀರ್ತನೆಗಾರನು ಬರೆದಂತೆ: “ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” ಸದಾಕಾಲ ಜೀವಿಸುವ ಸಾಮರ್ಥ್ಯವಿದ್ದರೂ, ಮನುಷ್ಯರು ಮರಣದ ಎದುರಿನಲ್ಲಿ ನಿಸ್ಸಹಾಯಕರಾಗಿದ್ದಾರೆ. ಕೀರ್ತನೆಗಾರನು ಕೊನೆಗೊಳಿಸುವುದು: “ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು.”—ಕೀರ್ತನೆ 146:3-5.
ಇದು ನಿಜವಾಗಿಯೂ ದೇವರ ಉದ್ದೇಶವಾಗಿದೆಯೊ?
15. ನಾವು ಸದಾಕಾಲ ಜೀವಿಸಬೇಕೆಂಬುದು ದೇವರ ಉದ್ದೇಶವೆಂದು ಯಾವುದು ತೋರಿಸುತ್ತದೆ?
15 ಆದರೆ, ನಾವು ನಿತ್ಯಜೀವವನ್ನು ಪಡೆಯಬೇಕೆಂಬುದು ನಿಜವಾಗಿಯೂ ದೇವರ ಉದ್ದೇಶವಾಗಿದೆಯೊ? ಎಂದು ನೀವು ಕೇಳಬಹುದು. ಹೌದು! ಅನೇಕ ಬಾರಿ ಆತನ ವಾಕ್ಯವು ಅದರ ಕುರಿತು ವಾಗ್ದಾನಿಸುತ್ತದೆ. “ದೇವರ ಉಚಿತಾರ್ಥ ವರವು . . . ನಿತ್ಯಜೀವ” ಎಂಬುದಾಗಿ ಬೈಬಲು ನಮಗೆ ಆಶ್ವಾಸನೆ ನೀಡುತ್ತದೆ. ದೇವರ ಸೇವಕನಾದ ಅಪೊಸ್ತಲ ಯೋಹಾನನು ಬರೆದುದು: “[ದೇವರು] ತಾನು ಕೊಡುತ್ತೇನೆಂದು ನಮಗೆ ವಾಗ್ದಾನ ಮಾಡಿದ್ದು ನಿತ್ಯಜೀವವು.” ಒಬ್ಬ ಯುವಕನು “ಬೋಧಕನೇ, ನಾನು ನಿತ್ಯಜೀವವನ್ನು ಪಡೆಯಬೇಕಾದರೆ ಏನು ಒಳ್ಳೇ ಕಾರ್ಯವನ್ನು ಮಾಡಬೇಕು?” ಎಂದು ಯೇಸುವನ್ನು ಕೇಳಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. (ರೋಮಾಪುರ 6:23; 1 ಯೋಹಾನ 2:25, NW; ಮತ್ತಾಯ 19:16) ವಾಸ್ತವದಲ್ಲಿ, ಅಪೊಸ್ತಲ ಪೌಲನು, “ಸುಳ್ಳಾಡದ ದೇವರು ಆ ನಿತ್ಯಜೀವವನ್ನು ಕೊಡುತ್ತೇನೆಂದು ಅನಾದಿಕಾಲದಲ್ಲಿ ವಾಗ್ದಾನಮಾಡಿ”ರುವ ವಿಷಯದ ಕುರಿತು ಬರೆದನು.—ತೀತ 1:2.
16. ದೇವರು ‘ಅನಾದಿಕಾಲದಿಂದಲೂ’ ನಿತ್ಯಜೀವವನ್ನು ವಾಗ್ದಾನಿಸಿರುವುದು ಯಾವ ಅರ್ಥದಲ್ಲಿ?
16 ದೇವರು ತಾನು ನಿತ್ಯಜೀವವನ್ನು ಕೊಡುತ್ತೇನೆಂದು “ಅನಾದಿಕಾಲದಲ್ಲಿ” ವಾಗ್ದಾನ ಮಾಡಿದುದರ ಅರ್ಥವೇನು? ಪ್ರಥಮ ದಂಪತಿಗಳಾದ ಆದಾಮಹವ್ವರನ್ನು ಸೃಷ್ಟಿಸುವ ಮೊದಲೇ ಮಾನವರು ಸದಾಕಾಲ ಜೀವಿಸಬೇಕೆಂದು ದೇವರು ಉದ್ದೇಶಿಸಿದ್ದನೆಂದು ಕೆಲವರು ನೆನಸುತ್ತಾರೆ. ಆದರೆ ಮನುಷ್ಯರ ಸೃಷ್ಟಿಯ ತರುವಾಯ ಯೆಹೋವನು ತನ್ನ ಉದ್ದೇಶವನ್ನು ಪುನಃ ತಿಳಿಯಪಡಿಸಿದ ಸಮಯಕ್ಕೆ ಪೌಲನು ಸೂಚಿಸುತ್ತಿದ್ದರೂ, ಮಾನವರಿಗಾಗಿ ನಿತ್ಯಜೀವವು ದೇವರ ಚಿತ್ತದಲ್ಲಿ ಸೇರಿಕೊಂಡಿತ್ತೆಂಬುದು ತೀರ ಸ್ಪಷ್ಟವಾಗಿದೆ.
17. ಆದಾಮಹವ್ವರು ಏದೆನ್ ತೋಟದಿಂದ ಏಕೆ ಹೊರಹಾಕಲ್ಪಟ್ಟರು, ಮತ್ತು ದ್ವಾರದಲ್ಲಿ ಕೆರೂಬಿಯರನ್ನು ಏಕೆ ನಿಲ್ಲಿಸಲಾಯಿತು?
17 “ಯೆಹೋವ ದೇವರು . . . ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನು . . . ಬೆಳೆಸಿದನು” ಎಂದು ಬೈಬಲು ಹೇಳುತ್ತದೆ. ಆದಾಮನನ್ನು ಆ ಭೂಪ್ರಮೋದವನದಿಂದ ಹೊರಗಟ್ಟಲು ಕೊಡಲ್ಪಟ್ಟ ವಿಶಿಷ್ಟ ಕಾರಣವು, ಅವನು “ಕೈಚಾಚಿ ಜೀವವೃಕ್ಷದ ಫಲವನ್ನು ಸಹ ತೆಗೆದು ತಿಂದು ಶಾಶ್ವತವಾಗಿ” ಹೌದು, ಸದಾಕಾಲ “ಬದುಕುವವನಾಗಬಾರದು” ಎಂಬುದಕ್ಕಾಗಿಯೇ. ಆದಾಮ ಹವ್ವರನ್ನು ಏದೆನ್ ತೋಟದಿಂದ ಹೊರಹಾಕಿದ ಮೇಲೆ, ಯೆಹೋವನು “ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವುದಕ್ಕೆ . . . ಕೆರೂಬಿಯರನ್ನೂ ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನೂ ಇರಿಸಿದನು.”—ಆದಿಕಾಂಡ 2:9; 3:22-24.
18. (ಎ) ಜೀವವೃಕ್ಷದ ಫಲವನ್ನು ತಿನ್ನುವುದು, ಆದಾಮಹವ್ವರಿಗೆ ಏನನ್ನು ಅರ್ಥೈಸಲಿತ್ತು? (ಬಿ) ಆ ಜೀವವೃಕ್ಷದ ಫಲವನ್ನು ತಿನ್ನುವುದು ಏನನ್ನು ಪ್ರತಿನಿಧಿಸಿತು?
18 ಆದಾಮ ಹವ್ವರಿಗೆ ಆ ಜೀವವೃಕ್ಷದ ಫಲವನ್ನು ತಿನ್ನುವ ಅನುಮತಿ ಇರುತ್ತಿದ್ದಲ್ಲಿ, ಅದು ಅವರಿಗೆ ಯಾವ ಅರ್ಥದಲ್ಲಿರುತ್ತಿತ್ತು? ಪ್ರಮೋದವನದಲ್ಲಿ ಸದಾಕಾಲ ಜೀವಿಸುವ ಸುಯೋಗವೇ ಅವರಿಗಿರುತ್ತಿತ್ತು! ಒಬ್ಬ ಬೈಬಲ್ ವ್ಯಾಖ್ಯಾನಕಾರನು ಹೇಳಿದ್ದು: “ಮನುಷ್ಯನ ದೇಹವನ್ನು ವೃದ್ಧಾಪ್ಯದ ಕುಸಿಯುವಿಕೆಯಿಂದ ಅಥವಾ ಮರಣದಲ್ಲಿ ಕೊನೆಗೊಳ್ಳುವ ಕ್ಷಯಿಸುವಿಕೆಯಿಂದ ಮುಕ್ತವಾಗಿಡುವ ಯಾವುದೋ ಒಂದು ಉತ್ಕೃಷ್ಟ ಶಕ್ತಿಯು ಆ ಜೀವವೃಕ್ಷದಲ್ಲಿದ್ದಿರಲೇಬೇಕು.” ವೃದ್ಧಾಪ್ಯದ “ಪರಿಣಾಮಗಳನ್ನು ಪ್ರತಿರೋಧಿಸಲು ಶಕ್ತವಾದ ಒಂದು ಉತ್ಕೃಷ್ಟ ಶಕ್ತಿಯ ಮೂಲಿಕೆಯು ಭೂಪ್ರಮೋದವನದಲ್ಲಿತ್ತು” ಎಂದೂ ಅವನು ವಾದಿಸಿದನು. ಆದರೆ, ಆ ಜೀವವೃಕ್ಷಕ್ಕೆ ಅಂತಹ ಯಾವ ಜೀವದಾಯಕ ಗುಣಗಳು ಇದ್ದವೆಂದು ಬೈಬಲು ಹೇಳುವುದಿಲ್ಲ. ಬದಲಾಗಿ, ಯಾರು ಅದರ ಫಲವನ್ನು ತಿನ್ನಲು ಅನುಮತಿಸಲ್ಪಡುವರೋ ಅವರಿಗೆ ನಿತ್ಯಜೀವವನ್ನು ಕೊಡುವ ದೇವರ ಖಾತರಿಯನ್ನು ಆ ವೃಕ್ಷವು ಕೇವಲ ಪ್ರತಿನಿಧಿಸಿತು.—ಪ್ರಕಟನೆ 2:7.
ಬದಲಾಗದ ದೇವರ ಉದ್ದೇಶ
19. ಆದಾಮನು ಏಕೆ ಸತ್ತನು, ಮತ್ತು ಅವನ ಸಂತಾನದವರಾದ ನಾವು ಏಕೆ ಸಾಯುತ್ತೇವೆ?
19 ಆದಾಮನು ಪಾಪಮಾಡಿದಾಗ, ಅವನು ತನಗಾಗಿಯೂ ತನ್ನ ಇನ್ನೂ ಹುಟ್ಟದ ಸಂತತಿಗಾಗಿಯೂ ನಿತ್ಯಜೀವದ ಹಕ್ಕನ್ನು ಕಳೆದುಕೊಂಡನು. (ಆದಿಕಾಂಡ 2:17) ಅವಿಧೇಯತೆಯ ಪರಿಣಾಮವಾಗಿ ಅವನು ಪಾಪಿಯಾಗಿ ಪರಿಣಮಿಸಿದಾಗ ಅವನು ನ್ಯೂನತೆಯುಳ್ಳವನಾಗಿ ಅಪರಿಪೂರ್ಣನಾದನು. ಆ ಸಮಯದಿಂದ ಹಿಡಿದು, ಆದಾಮನ ದೇಹವು ಕಾರ್ಯತಃ ಮರಣಕ್ಕಾಗಿ ವಿಧಿಸಲ್ಪಟ್ಟಿತ್ತು. ಬೈಬಲು ಹೇಳುವಂತೆ, “ಪಾಪವು ಕೊಡುವ ಸಂಬಳ ಮರಣ” ಆಗಿದೆ. (ರೋಮಾಪುರ 6:23) ಅಷ್ಟಲ್ಲದೆ, ಆದಾಮನ ಅಪರಿಪೂರ್ಣ ಸಂತಾನಕ್ಕೆ ಸಹ ಕಾರ್ಯತಃ ಮರಣವು ವಿಧಿಸಲ್ಪಟ್ಟಿತ್ತು, ನಿತ್ಯಜೀವ ಅಲ್ಲ. ಬೈಬಲು ವಿವರಿಸುವುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮಾಪುರ 5:12.
20. ಮಾನವರು ಭೂಮಿಯಲ್ಲಿ ಸದಾಕಾಲ ಜೀವಿಸುವಂತೆ ನಿರ್ಮಿಸಲ್ಪಟ್ಟಿದ್ದರೆಂಬುದನ್ನು ಯಾವುದು ಸೂಚಿಸುತ್ತದೆ?
20 ಆದರೆ ಆದಾಮನು ಪಾಪಮಾಡದೆ ಇರುತ್ತಿದ್ದಲ್ಲಿ ಏನಾಗುತ್ತಿತ್ತು? ದೇವರಿಗೆ ಅವನು ಅವಿಧೇಯನಾಗದೆ ಇರುತ್ತಿದ್ದರೆ ಮತ್ತು ಜೀವವೃಕ್ಷದ ಫಲವನ್ನು ತಿನ್ನುವ ಅನುಮತಿ ಅವನಿಗೆ ಕೊಡಲ್ಪಟ್ಟಿರುತ್ತಿದ್ದರೆ ಏನಾಗುತ್ತಿತ್ತು? ದೇವರ ನಿತ್ಯಜೀವದ ಕೊಡುಗೆಯನ್ನು ಅವನು ಎಲ್ಲಿ ಅನುಭವಿಸುತ್ತಿದ್ದನು? ಪರಲೋಕದಲ್ಲೊ? ಇಲ್ಲ! ಆದಾಮನು ಸ್ವರ್ಗಕ್ಕೆ ಒಯ್ಯಲ್ಪಡಲಿದ್ದನೆಂಬುದರ ಕುರಿತು ದೇವರು ಏನನ್ನೂ ಹೇಳಲಿಲ್ಲ. ಅವನ ಕೆಲಸದ ನೇಮಕವು ಭೂಮಿಯಲ್ಲಿತ್ತು. ಬೈಬಲು ವಿವರಿಸುವುದೇನೆಂದರೆ, “ಯೆಹೋವ ದೇವರು ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರಗಳನ್ನು ಆ ಭೂಮಿಯಲ್ಲಿ ಬೆಳೆಯಮಾಡಿದನು,” ಮತ್ತು “ಯೆಹೋವ ದೇವರು ಆ ಮನುಷ್ಯನನ್ನು ಕರಕೊಂಡು ಹೋಗಿ ಏದೆನ್ ತೋಟವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು.” (ಆದಿಕಾಂಡ 2:9, 15) ಹವ್ವಳನ್ನು ಆದಾಮನ ಸಂಗಾತಿಯಾಗಿ ಸೃಷ್ಟಿಸಿದ ಬಳಿಕ, ಅವರಿಬ್ಬರಿಗೂ ಭೂಮಿಯ ಮೇಲೆ ಹೆಚ್ಚಿನ ಕೆಲಸದ ನೇಮಕಗಳು ಕೊಡಲ್ಪಟ್ಟವು. ದೇವರು ಅವರಿಗೆ ಹೇಳಿದ್ದು: “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.”—ಆದಿಕಾಂಡ 1:28.
21. ಪ್ರಥಮ ಮಾನವರು ಯಾವ ಅದ್ಭುತಕರ ಪ್ರತೀಕ್ಷೆಗಳನ್ನು ಅನುಭವಿಸಿದರು?
21 ದೇವರಿಂದ ಕೊಡಲ್ಪಟ್ಟ ಆ ಸೂಚನೆಗಳು, ಆದಾಮ ಹವ್ವರಿಗಾಗಿ ತೆರೆದ ಆಶ್ಚರ್ಯಕರವಾದ ಭೂಪ್ರತೀಕ್ಷೆಗಳ ಕುರಿತು ತುಸು ಯೋಚಿಸಿರಿ! ಪರಿಪೂರ್ಣ ಆರೋಗ್ಯವಂತರಾಗಿದ್ದ ಪುತ್ರ ಪುತ್ರಿಯರನ್ನು ಆ ಭೂಪ್ರಮೋದವನದಲ್ಲಿ ಅವರು ಬೆಳೆಸಲಿಕ್ಕಿದ್ದರು. ಅವರ ಪ್ರಿಯ ಮಕ್ಕಳು ಬೆಳೆದು ದೊಡ್ಡವರಾದಂತೆ, ಅವರೊಂದಿಗೆ ಆಹ್ಲಾದಕರವಾದ ತೋಟದ ಕೆಲಸದಲ್ಲಿ ಪಾಲಿಗರಾಗುತ್ತಾ, ಆ ಪ್ರಮೋದವನವನ್ನು ದುರಸ್ತಾಗಿಡಲಿದ್ದರು. ಮತ್ತು ಪ್ರಾಣಿಗಳೆಲ್ಲವೂ ಮಾನವರಿಗೆ ಅಧೀನವಾಗಿರುತ್ತಿದ್ದುದರಿಂದ, ಅವರ ಜೀವಿತಗಳು ಹೆಚ್ಚು ಸಂತೃಪ್ತಿಕರವಾಗಿರುತ್ತಿದ್ದವು. ಕಟ್ಟಕಡೆಗೆ ಇಡೀ ಭೂಮಿಯು ಒಂದು ಪ್ರಮೋದವನವಾಗಿ ಪರಿಣಮಿಸುವುದಕ್ಕಾಗಿ, ಏದೆನ್ ತೋಟದ ಸೀಮೆಗಳನ್ನು ವಿಸ್ತರಿಸುವುದರ ಸಂತೋಷವನ್ನು ಊಹಿಸಿಕೊಳ್ಳಿರಿ! ಮುದುಕರಾಗುವ ಮತ್ತು ಸಾಯುವ ಯಾವ ಚಿಂತೆಯೂ ಇಲ್ಲದವರಾಗಿ, ಅಂತಹ ಸುಂದರವಾದ ಭೂಗೃಹದಲ್ಲಿ ಪರಿಪೂರ್ಣ ಮಕ್ಕಳೊಂದಿಗಿನ ಜೀವನದಲ್ಲಿ ನೀವು ಆನಂದಿಸುವಿರೋ? ನಿಮ್ಮ ಹೃದಯದ ಸಹಜ ಪ್ರವೃತ್ತಿಗಳು ಆ ಪ್ರಶ್ನೆಯನ್ನು ಉತ್ತರಿಸಲಿ.
22. ಭೂಮಿಗಾಗಿದ್ದ ತನ್ನ ಉದ್ದೇಶವನ್ನು ದೇವರು ಬದಲಾಯಿಸಲಿಲ್ಲವೆಂಬ ವಿಷಯದಲ್ಲಿ ನಾವು ಏಕೆ ನಿಶ್ಚಿತರಾಗಿರಬಲ್ಲೆವು?
22 ಹಾಗಾದರೆ, ಆದಾಮಹವ್ವರು ಅವಿಧೇಯರಾಗಿ, ಏದೆನ್ ತೋಟದಿಂದ ಹೊರಗೆ ದೊಬ್ಬಲ್ಪಟ್ಟಾಗ, ಭೂಮಿಯ ಮೇಲೆ ಪ್ರಮೋದವನದಲ್ಲಿ ಮಾನವರು ನಿತ್ಯವಾಗಿ ಜೀವಿಸುವ ತನ್ನ ಉದ್ದೇಶವನ್ನು ದೇವರು ಬದಲಾಯಿಸಿದನೋ? ಖಂಡಿತವಾಗಿಯೂ ಇಲ್ಲ! ಹಾಗೆ ಮಾಡುವುದು ದೇವರಿಗೆ ತನ್ನ ಮೂಲ ಉದ್ದೇಶವನ್ನು ಕೈಗೂಡಿಸುವ ಸಾಮರ್ಥ್ಯದ ಬಗ್ಗೆ ಸೋಲನ್ನು ಒಪ್ಪಿಕೊಳ್ಳುವಂತಿರುತ್ತಿತ್ತು. ದೇವರು ಏನು ವಚನಕೊಡುತ್ತಾನೋ ಅದನ್ನು ನಡೆಸುತ್ತಾನೆಂಬ ನಿಶ್ಚಿತಭಾವ ನಮಗಿರಸಾಧ್ಯವಿದೆ. ಆತನೇ ಹೀಗೆ ಪ್ರಕಟಿಸುತ್ತಾನೆ: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:11.
23. (ಎ) ನೀತಿವಂತರು ಭೂಮಿಯಲ್ಲಿ ಸದಾಕಾಲ ಜೀವಿಸಬೇಕೆಂಬುದು ದೇವರ ಉದ್ದೇಶವಾಗಿದೆ ಎಂಬ ವಿಷಯವನ್ನು ಯಾವುದು ಪುನಃ ದೃಢೀಕರಿಸುತ್ತದೆ? (ಬಿ) ಯಾವ ವಿಷಯವನ್ನು ನಾವು ಮುಂದೆ ಚರ್ಚಿಸುವೆವು?
23 ಭೂಮಿಯ ಕಡೆಗಿನ ದೇವರ ಉದ್ದೇಶವು ಬದಲಾಗಿಲ್ಲವೆಂಬುದನ್ನು ಬೈಬಲು ಸ್ಪಷ್ಟಪಡಿಸುತ್ತದೆ. “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂಬ ದೇವರ ವಾಗ್ದಾನವು ಅದರಲ್ಲಿ ಅಡಕವಾಗಿದೆ. ಶಾಂತರು ಭೂಮಿಗೆ ಬಾಧ್ಯರಾಗುವರೆಂಬುದನ್ನು, ಯೇಸು ಕ್ರಿಸ್ತನು ತನ್ನ ಪರ್ವತ ಪ್ರಸಂಗದಲ್ಲಿ ತಿಳಿಯಪಡಿಸಿದನು. (ಕೀರ್ತನೆ 37:29; ಮತ್ತಾಯ 5:5) ಹಾಗಿದ್ದರೂ, ನಿತ್ಯಜೀವವನ್ನು ನಾವು ಹೇಗೆ ಪಡೆದುಕೊಳ್ಳಸಾಧ್ಯವಿದೆ, ಮತ್ತು ಅಂತಹ ಜೀವಿತವನ್ನು ಅನುಭವಿಸಲು ನಾವು ಏನು ಮಾಡಬೇಕು? ಇದು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುದು.
ನೀವು ಹೇಗೆ ಉತ್ತರಿಸುವಿರಿ?
◻ ನಿತ್ಯಜೀವವು ಸಾಧ್ಯವೆಂದು ಅನೇಕರು ಏಕೆ ನಂಬುತ್ತಾರೆ?
◻ ನಾವು ಸದಾಕಾಲ ಜೀವಿಸುವಂತೆ ನಿರ್ಮಿಸಲ್ಪಟ್ಟಿದ್ದೇವೆ ಎಂಬುದನ್ನು ನಮಗೆ ಯಾವುದು ಮನಗಾಣಿಸಬೇಕು?
◻ ಮಾನವಕುಲ ಮತ್ತು ಭೂಮಿಗಾಗಿ ದೇವರ ಮೂಲ ಉದ್ದೇಶವು ಏನಾಗಿತ್ತು?
◻ ದೇವರು ತನ್ನ ಮೂಲ ಉದ್ದೇಶವನ್ನು ನೆರವೇರಿಸುವನೆಂಬ ವಿಷಯದಲ್ಲಿ ನಾವು ಏಕೆ ನಿಶ್ಚಿತರಾಗಿರಬಲ್ಲೆವು?