ನೀವು ಕೃತಜ್ಞರಾಗಿದ್ದೀರಿ—ಎಂಬುದನ್ನು ತೋರಿಸುತ್ತೀರೊ?
ಪಶ್ಚಿಮ ಆಫ್ರಿಕದ ಒಂದು ಮಿಷನೆರಿ ಗೃಹದಲ್ಲಿ, ಒಂದೊಮ್ಮೆ ಟೆಡಿ ಎಂಬ ನಾಯಿಯು ಜೀವಿಸುತ್ತಿತ್ತು. ಯಾರಾದರೂ ಟೆಡಿಗೆ ಮಾಂಸದ ಒಂದು ತುಂಡನ್ನು ಎಸೆದಾಗ, ಅದು ಆ ತುಂಡನ್ನು ಆಸ್ವಾದಿಸದೆ, ಅಗಿಯದೆ ತಕ್ಷಣ ನುಂಗಿಬಿಡುತ್ತಿತ್ತು. ಬಿಸಿಲಿನಲ್ಲಿ ಏದುಸಿರು ಬಿಡುತ್ತಾ, ಅದು ತನ್ನ ಕಡೆಗೆ ಬರಲಿದ್ದ ಮುಂದಿನ ತುತ್ತಿಗಾಗಿ ಕಾಯುತ್ತಿತ್ತು. ಮಾಂಸವು ಖಾಲಿಯಾದ ಮೇಲೆ ಅದು ಅಲ್ಲಿಂದ ಹೊರಟುಹೋಗುತ್ತಿತ್ತು.
ಟೆಡಿ ತನಗೆ ಮಾಡಲಾದ ವಿಷಯಗಳಿಗಾಗಿ ಒಂದಿಷ್ಟೂ ಕೃತಜ್ಞತೆಯನ್ನು ತೋರಿಸಲಿಲ್ಲ. ಯಾರೂ ಅದನ್ನು ನಿರೀಕ್ಷಿಸಲೂ ಇಲ್ಲ. ಎಷ್ಟೆಂದರೂ ಅದು ಒಂದು ನಾಯಿಯಾಗಿತ್ತು.
ನಾವು ಕೃತಜ್ಞತೆಯನ್ನು, ಪ್ರಾಣಿಗಳಿಗಿಂತಲೂ ಹೆಚ್ಚಾಗಿ ಜೊತೆ ಮಾನವರಿಂದಲೇ ನಿರೀಕ್ಷಿಸುತ್ತೇವೆ. ಆದರೆ ನಾವು ನಿರಾಶೆಯನ್ನೇ ಹೆಚ್ಚಾಗಿ ಅನುಭವಿಸುತ್ತೇವೆ. ಅಧಿಕಾಂಶ ಜನರು ತಮ್ಮಿಂದ ಸಾಧ್ಯವಾದುದನ್ನು ಜೀವನದಿಂದ ದೋಚಿಕೊಂಡು, ಇನ್ನೂ ಹೆಚ್ಚನ್ನು ಪಡೆದುಕೊಳ್ಳಲು ಆತುರರಾಗಿರುತ್ತಾರೆ. ಇದು ಸಹ ಆಶ್ಚರ್ಯವನ್ನು ಉಂಟುಮಾಡುವುದಿಲ್ಲ. ಏಕೆಂದರೆ, ಕಡೇ ದಿವಸಗಳಲ್ಲಿ ಮನುಷ್ಯರು ಉಪಕಾರ ನೆನಸದವರಾಗಿರುವರೆಂದು ಬೈಬಲು ಮುಂತಿಳಿಸಿತು.—2 ತಿಮೊಥೆಯ 3:1, 2.
ಆದರೆ, ದೇವರ ಸೇವಕರಲ್ಲಿ ಭಿನ್ನವಾದೊಂದು ಮನೋಭಾವವಿದೆ. ಅವರು ಅಪೊಸ್ತಲ ಪೌಲನ ಸಲಹೆಗೆ ಕಿವಿಗೊಡುತ್ತಾರೆ. ಅವನು ಜೊತೆ ವಿಶ್ವಾಸಿಗಳಿಗೆ ಬುದ್ಧಿವಾದ ನೀಡಿದ್ದು: “ಕೃತಜ್ಞತೆಯುಳ್ಳವರಾಗಿರಿ.”—ಕೊಲೊಸ್ಸೆ 3:15.
ಯೆಹೋವನು ತಾನು ಕೃತಜ್ಞತೆಯುಳ್ಳವನೆಂದು ತೋರಿಸುತ್ತಾನೆ
ಗಣ್ಯತೆಯನ್ನು ತೋರಿಸುವ ವಿಷಯದಲ್ಲಿ ಯೆಹೋವ ದೇವರು ಪರಿಪೂರ್ಣ ಮಾದರಿಯನ್ನಿಡುತ್ತಾನೆ. ಆತನು ತನ್ನ ನಂಬಿಗಸ್ತ ಸೇವಕರನ್ನು ಹೇಗೆ ವೀಕ್ಷಿಸುತ್ತಾನೆಂಬುದನ್ನು ಪರಿಗಣಿಸಿರಿ. ಪ್ರೇರಿತ ಪೌಲನು ಇಬ್ರಿಯ ಕ್ರೈಸ್ತರಿಗೆ ಬರೆದುದು: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”—ಇಬ್ರಿಯ 6:10.
ಯೆಹೋವನು ತನ್ನ ನಂಬಿಗಸ್ತ ಸೇವಕರಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸಿದ ಉದಾಹರಣೆಗಳು ಬೇಕಾದಷ್ಟಿವೆ. ಆತನು ಅಬ್ರಹಾಮನ ಸಂತಾನವನ್ನು ಹೆಚ್ಚಿಸುವ ಮೂಲಕ ಅವನನ್ನು ಆಶೀರ್ವದಿಸಿದನು. ಈ ಕಾರಣ ಅವರು “ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ ಅಸಂಖ್ಯವಾಗಿ” ವೃದ್ಧಿಗೊಂಡರು. (ಆದಿಕಾಂಡ 22:17) ಪರೀಕ್ಷೆಯ ಕೆಳಗೆ ನಂಬಿಗಸ್ತನಾಗಿದ್ದ ಯೋಬನ ಪರವಾಗಿ ಗಣ್ಯತೆಯನ್ನು ವ್ಯಕ್ತಪಡಿಸುತ್ತಾ, ಯೆಹೋವನು ಯೋಬನ ಸಂಪತ್ತನ್ನು ಪುನಸ್ಸ್ಥಾಪಿಸಿದನಲ್ಲದೆ ಅದನ್ನು “ಎರಡರಷ್ಟಾಗಿ” ಹೆಚ್ಚಿಸಿದನು. (ಯೋಬ 42:10) ಸಹಸ್ರಾರು ವರ್ಷಗಳಿಂದ ಯೆಹೋವನು ಮಾನವರೊಂದಿಗೆ ವ್ಯವಹರಿಸಿದ ರೀತಿಯು, ಈ ಮುಂದಿನ ಹೇಳಿಕೆಯ ಸತ್ಯತೆಯನ್ನು ರುಜುಪಡಿಸಿದೆ: “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.”—2 ಪೂರ್ವಕಾಲವೃತ್ತಾಂತ 16:9.
ಆತನ ಚಿತ್ತವನ್ನು ಮಾಡಲು ಬಯಸುವವರಿಗಾಗಿ ದೇವರು ತೋರ್ಪಡಿಸುವ ಗಣ್ಯತೆ ಹಾಗೂ ಪ್ರತಿಫಲವನ್ನು ನೀಡುವ ಪ್ರವೃತ್ತಿಯು, ಆತನ ವ್ಯಕ್ತಿತ್ವದ ಪ್ರಧಾನ ವೈಶಿಷ್ಟ್ಯಗಳಾಗಿವೆ. ಇದನ್ನು ಗ್ರಹಿಸಿಕೊಳ್ಳುವುದು ಕ್ರೈಸ್ತ ನಂಬಿಕೆಗೆ ತೀರ ಪ್ರಾಮುಖ್ಯವಾಗಿದೆ. ಪೌಲನು ಬರೆದುದು: “ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.”—ಇಬ್ರಿಯ 11:6.
ಇದಕ್ಕೆ ವಿರುದ್ಧವಾಗಿ, ಯೆಹೋವನು ಒಂದು ಕಠೋರ ಹಾಗೂ ಟೀಕಾತ್ಮಕ ಮನೋಭಾವವನ್ನು ಪ್ರದರ್ಶಿಸುತ್ತಿದ್ದರೆ, ನಾವೆಲ್ಲರೂ ದೋಷಾರೋಪಣೆಗೆ ಗುರಿಯಾಗುತ್ತಿದ್ದೆವು. ಕೀರ್ತನೆಗಾರನು ಈ ವಿಷಯವನ್ನು ಬಹಳ ಸಮಯದ ಹಿಂದೆಯೇ ಸ್ಪಷ್ಟಪಡಿಸಿದನು: “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” (ಕೀರ್ತನೆ 130:3) ಯೆಹೋವನು ಕೃತಘ್ನನೂ ಅಲ್ಲ, ಟೀಕಾತ್ಮಕನೂ ಅಲ್ಲ. ತನ್ನನ್ನು ಪ್ರೀತಿಸುವವರನ್ನು ಆತನು ಆದರಿಸುತ್ತಾನೆ. ತಾನು ಉಪಕಾರ ನೆನಸುವವನೆಂದು ತೋರಿಸುತ್ತಾನೆ.
ಯೇಸು—ಆಳವಾದ ಗಣ್ಯತೆಯನ್ನು ತೋರಿಸುವ ವ್ಯಕ್ತಿ
ತನ್ನ ಸ್ವರ್ಗೀಯ ತಂದೆಯ ಗುಣಗಳನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುವ ಯೇಸು ಕ್ರಿಸ್ತನು, ಇತರರು ನಂಬಿಕೆಯಿಂದ ಮಾಡಿದ ವಿಷಯಗಳಿಗಾಗಿ ಕೃತಜ್ಞನಾಗಿದ್ದನು. ಯೆರೂಸಲೇಮಿನ ಮಂದಿರದಲ್ಲಿ ಒಮ್ಮೆ ನಡೆದ ಸಂಗತಿಯನ್ನು ಪರಿಗಣಿಸಿರಿ: “ಯೇಸು ತಲೆಯೆತ್ತಿ ನೋಡಿ ಐಶ್ವರ್ಯವಂತರು ಕಾಣಿಕೆಗಳನ್ನು ಬೊಕ್ಕಸದಲ್ಲಿ ಹಾಕುವದನ್ನು ಕಂಡನು. ಆಗ ಒಬ್ಬ ಬಡ ವಿಧವೆಯು ಬಂದು ಎರಡು ಕಾಸುಗಳನ್ನು ಹಾಕಲು ಆತನು ಅದನ್ನು ನೋಡಿ—ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಬಡ ವಿಧವೆ ಎಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. ಹೇಗಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಕಾಣಿಕೆಕೊಟ್ಟರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದ ಜೀವನವನ್ನೆಲ್ಲಾ ಕೊಟ್ಟುಬಿಟ್ಟಳು ಅಂದನು.”—ಲೂಕ 21:1-4.
ಧನವಂತರ ಕಾಣಿಕೆಗಳಿಗೆ ಹೋಲಿಸುವಾಗ, ವಿಧವೆಯ ಕಾಣಿಕೆಯು ತೀರ ಕೊಂಚವಾಗಿತ್ತು. ಅಲ್ಲಿದ್ದವರಲ್ಲಿ ಹೆಚ್ಚಿನವರು ಅವಳನ್ನು ಗಮನಿಸದೇ ಇದ್ದಿರಬಹುದು. ಆದರೂ, ಯೇಸು ಆ ವಿಧವೆಯನ್ನು ನೋಡಿ, ಅವಳ ಪರಿಸ್ಥಿತಿಯನ್ನು ಅರಿತುಕೊಂಡನು. ಯೇಸು ಅವಳಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸಿದನು.
ಮತ್ತೊಂದು ಘಟನೆಯು ಒಬ್ಬ ಶ್ರೀಮಂತ ಸ್ತ್ರೀಯಾದ ಮರಿಯಳನ್ನು ಒಳಗೊಂಡಿತ್ತು. ಯೇಸು ಊಟಕ್ಕಾಗಿ ಒರಗಿಕೊಂಡಿದ್ದಾಗ, ಅವಳು ದುಬಾರಿ ವೆಚ್ಚದ ಸುಗಂಧಿತ ತೈಲವನ್ನು ಯೇಸುವಿನ ಕಾಲು ಹಾಗೂ ತಲೆಯ ಮೇಲೆ ಸುರಿಯುತ್ತಾಳೆ. ತೈಲವನ್ನು ಮಾರಿ, ಆ ಹಣವನ್ನು ಬಡವರಿಗೆ ಸಹಾಯಮಾಡಲಿಕ್ಕಾಗಿ ಉಪಯೋಗಿಸಬಹುದಿತ್ತೆಂದು ತರ್ಕಿಸುತ್ತಾ, ಕೆಲವರು ಅವಳನ್ನು ಟೀಕಿಸುತ್ತಾರೆ. ಯೇಸುವಿನ ಪ್ರತಿಕ್ರಿಯೆಯು ಏನಾಗಿತ್ತು? ಅವನು ಹೇಳಿದ್ದು: “ಈಕೆಯನ್ನು ಬಿಡಿರಿ. ಈಕೆಗೆ ಯಾಕೆ ತೊಂದರೆಕೊಡುತ್ತೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ. ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”—ಮಾರ್ಕ 14:3-6, 9; ಯೋಹಾನ 12:3.
ಅಷ್ಟೊಂದು ಅಮೂಲ್ಯವಾದ ತೈಲವನ್ನು ಬೇರೊಂದು ರೀತಿಯಲ್ಲಿ ಉಪಯೋಗಿಸಲಿಲ್ಲವೆಂದು ಯೇಸು ಟೀಕಾತ್ಮಕವಾಗಿ ಹಲುಬಲಿಲ್ಲ. ಮರಿಯಳ ಪ್ರೀತಿ ಹಾಗೂ ನಂಬಿಕೆಯ ಉದಾರ ಅಭಿವ್ಯಕ್ತಿಯನ್ನು ಅವನು ಗಣ್ಯಮಾಡಿದನು. ಅವಳು ಮಾಡಿದ ಆ ಅತ್ಯುತ್ತಮ ಕಾರ್ಯದ ಜ್ಞಾಪಕಾರ್ಥವಾಗಿ, ಆ ಘಟನೆಯನ್ನು ಬೈಬಲಿನಲ್ಲಿ ದಾಖಲುಮಾಡಲಾಗಿದೆ. ಯೇಸು ಆಳವಾದ ಗಣ್ಯತೆಯನ್ನು ತೋರಿಸುವ ವ್ಯಕ್ತಿಯಾಗಿದ್ದನೆಂದು, ಇವು ಮತ್ತು ಇನ್ನಿತರ ಘಟನೆಗಳು ವ್ಯಕ್ತಪಡಿಸುತ್ತವೆ.
ನೀವು ದೇವರ ಸೇವಕರಾಗಿರುವಲ್ಲಿ, ಶುದ್ಧಾರಾಧನೆಯನ್ನು ಪ್ರವರ್ಧಿಸಲಿಕ್ಕಾಗಿ ನೀವು ಮಾಡುವ ಎಲ್ಲ ಪ್ರಯತ್ನಗಳನ್ನು ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಆಳವಾಗಿ ಗಣ್ಯಮಾಡುತ್ತಾರೆಂಬ ವಿಷಯದಲ್ಲಿ ನೀವು ನಿಶ್ಚಿತರಾಗಿರಸಾಧ್ಯವಿದೆ. ಇಂತಹ ಜ್ಞಾನವು ನಮ್ಮನ್ನು ಅವರ ಕಡೆಗೆ ಸೆಳೆಯುತ್ತದೆ ಮತ್ತು ಸ್ವತಃ ಕೃತಜ್ಞರಾಗಿರುವ ಮೂಲಕ ಅವರನ್ನು ಅನುಕರಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ.
ಸೈತಾನನ ಟೀಕಾತ್ಮಕ ಮನೋಭಾವ
ಈಗ ನಾವು ಕೃತಜ್ಞತೆಯನ್ನು ತೋರಿಸದ ಒಬ್ಬ ವ್ಯಕ್ತಿಯ ಉದಾಹರಣೆಯನ್ನು ಪರಿಗಣಿಸೋಣ. ಅವನೇ ಪಿಶಾಚನಾದ ಸೈತಾನನು. ಸೈತಾನನಲ್ಲಿ ಗಣ್ಯತೆಯ ಕೊರತೆಯಿದ್ದ ಕಾರಣ, ಅವನು ದೇವರ ವಿರುದ್ಧ ಒಂದು ವಿಪತ್ಕಾರಕ ದಂಗೆಯನ್ನು ಆರಂಭಿಸುವುದರಲ್ಲಿ ಮುಂದಾಳುತ್ವವನ್ನು ವಹಿಸಿದನು.
ತನ್ನಲ್ಲೇ ಅತೃಪ್ತಿಯ ಟೀಕಾತ್ಮಕ ಮನೋಭಾವವನ್ನು ಪೋಷಿಸಿಕೊಂಡಿದ್ದ ಸೈತಾನನು, ಅದನ್ನು ಇತರರಲ್ಲಿ ಬಿತ್ತಲಾರಂಭಿಸಿದನು. ಏದೆನ್ ತೋಟದಲ್ಲಿ ಸಂಭವಿಸಿದ ಘಟನೆಗಳನ್ನು ಪರಿಗಣಿಸಿರಿ. ಯೆಹೋವನು ಪ್ರಥಮ ಸ್ತ್ರೀಪುರುಷರನ್ನು ಸೃಷ್ಟಿಸಿ, ಅವರನ್ನು ಪ್ರಮೋದವನದಲ್ಲಿರಿಸಿ, ಅವರಿಗೆ ಹೇಳಿದ್ದು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು.” ಆದರೆ, ಒಂದೇ ಒಂದು ನಿರ್ಬಂಧವಿತ್ತು. ದೇವರು ಹೇಳಿದ್ದು: “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.”—ಆದಿಕಾಂಡ 2:16, 17.
ಬೇಗನೆ ಸೈತಾನನು ಯೆಹೋವನ ವಿಶ್ವಾಸಾರ್ಹತೆಯನ್ನು ಪಂಥಾಹ್ವಾನಿಸಿದನು. ಆಂಶಿಕವಾಗಿ, ಸೈತಾನನು ಹವ್ವಳನ್ನು ಯೆಹೋವನ ಪ್ರತಿ ಎಷ್ಟು ಕೃತಘ್ನಳನ್ನಾಗಿ ಮಾಡಲು ಬಯಸಿದನೆಂದರೆ, ಅವನು ದೇವರ ವಿರುದ್ಧ ಹೇಗೆ ದಂಗೆಯೆದ್ದಿದ್ದನೊ ಹಾಗೆಯೇ ಅವಳೂ ದಂಗೆಯೇಳುವಂತೆ ಪ್ರಚೋದಿಸಲ್ಪಡಬೇಕಾಗಿತ್ತು. “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ”? ಎಂದು ಸೈತಾನನು ಕೇಳಿದನು. (ಆದಿಕಾಂಡ 3:1) ಹವ್ವಳ ಕಣ್ಣುಗಳನ್ನು ತೆರೆದು, ಅವಳನ್ನು ಸ್ವತಃ ದೇವರಂತೆ ಮಾಡುವ ಅಮೂಲ್ಯವಾದ ಏನನ್ನೊ ದೇವರು ಹಿಡಿದಿಟ್ಟುಕೊಳ್ಳುತ್ತಿದ್ದನೆಂದು ಸೈತಾನನು ವ್ಯಂಗ್ಯವಾಗಿ ಸೂಚಿಸಿದನು. ಯೆಹೋವನು ಧಾರಾಳವಾಗಿ ಕೊಟ್ಟ ಅನೇಕ ಆಶೀರ್ವಾದಗಳಿಗಾಗಿ ಅವಳು ಕೃತಜ್ಞಳಾಗಿರುವ ಬದಲು, ಯಾವುದು ನಿಷೇಧಿಸಲ್ಪಟ್ಟಿತ್ತೋ ಅದನ್ನೇ ಹವ್ವಳು ತೀವ್ರವಾಗಿ ಬಯಸತೊಡಗಿದಳು.—ಆದಿಕಾಂಡ 3:5, 6.
ಅದರಿಂದಾದ ವಿಪತ್ಕಾರಕ ಪರಿಣಾಮಗಳು ಚಿರಪರಿಚಿತವಾಗಿವೆ. ಅವಳು ‘ಬದುಕುವವರೆಲ್ಲರಿಗೂ ಮೂಲಮಾತೆ’ ಆದ ಕಾರಣ ಹವ್ವಳೆಂದು ಕರೆಯಲ್ಪಟ್ಟರೂ, ಮತ್ತೊಂದು ಅರ್ಥದಲ್ಲಿ ಅವಳು ಸಾಯುವವರೆಲ್ಲರ ಮಾತೆಯಾದಳು. ಏಕೆಂದರೆ, ಮರಣವನ್ನು ಉಂಟುಮಾಡುವ ಪಾಪವನ್ನು ಎಲ್ಲ ಮಾನವರು ಆದಾಮನಿಂದ ಪಿತ್ರಾರ್ಜಿತವಾಗಿ ಪಡೆದುಕೊಂಡರು.—ಆದಿಕಾಂಡ 3:20; ರೋಮಾಪುರ 5:12.
ದೇವರನ್ನು ಮತ್ತು ಕ್ರಿಸ್ತನನ್ನು ಅನುಕರಿಸಿರಿ
ಯೇಸು ಮತ್ತು ಸೈತಾನನಲ್ಲಿರುವ ವ್ಯತ್ಯಾಸವನ್ನು ಪರಿಗಣಿಸಿರಿ. ಸೈತಾನನು “ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರುಗಾರ”ನಾಗಿ ವರ್ಣಿಸಲ್ಪಟ್ಟಿದ್ದಾನೆ. (ಪ್ರಕಟನೆ 12:10) ಆದರೆ ಯೇಸು “ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ.”—ಇಬ್ರಿಯ 7:25.
ಸೈತಾನನು ದೇವರ ಸೇವಕರನ್ನು ದೂಷಿಸುತ್ತಾನೆ. ಯೇಸು ಅವರನ್ನು ಗಣ್ಯಮಾಡಿ, ಅವರ ಪರವಾಗಿ ವಾದಿಸುತ್ತಾನೆ. ಕ್ರಿಸ್ತನನ್ನು ಅನುಕರಿಸುವವರೋಪಾದಿ, ಕ್ರೈಸ್ತರು ಮತ್ತೊಬ್ಬರಲ್ಲಿರುವ ಒಳ್ಳೆಯದನ್ನು ನೋಡಲು ಶ್ರಮಿಸಿ, ಒಬ್ಬರನ್ನೊಬ್ಬರು ಗಣ್ಯಮಾಡಬೇಕು ಮತ್ತು ಮಾನ್ಯರೆಂದೆಣಿಸಬೇಕು. ಹಾಗೆ ಮಾಡುವಾಗ, ಅವರು ಗಣ್ಯತೆಯಲ್ಲಿ ಸರ್ವಶ್ರೇಷ್ಠ ಮಾದರಿಯನ್ನಿಡುವವನಾದ ಯೆಹೋವ ದೇವರಿಗೆ ತಾವು ಕೃತಜ್ಞರೆಂದು ತೋರಿಸುತ್ತಾರೆ.—1 ಕೊರಿಂಥ 11:1.
[ಪುಟ 17 ರಲ್ಲಿರುವ ಚಿತ್ರ]
ಮರಿಯಳ ಅತ್ಯುತ್ತಮ ಕಾರ್ಯಕ್ಕಾಗಿ ಯೇಸು ಗಣ್ಯತೆಯನ್ನು ವ್ಯಕ್ತಪಡಿಸಿದನು