ಒಂದು ಐತಿಹಾಸಿಕ ಸಂದರ್ಶನದಿಂದ ದ್ವೀಪವೊಂದು ಹರ್ಷಿಸುತ್ತದೆ
ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಸುಂದರವಾದ ದ್ವೀಪವಾಗಿರುವ ಕ್ಯೂಬ, ಆತ್ಮಿಕ ಚೈತನ್ಯದ ಅಭೂತಪೂರ್ವ ಕಾಲವನ್ನು ಇತ್ತೀಚೆಗೆ ಅನುಭವಿಸಿತು. 1998ರ ಸಮಾಪ್ತಿಯು, ಈ ವೆಸ್ಟ್ ಇಂಡಿಯನ್ ದೇಶದಲ್ಲಿರುವ ಯೆಹೋವನ ಸಾಕ್ಷಿಗಳಿಗೆ ದೀರ್ಘ ಸಮಯದಿಂದ ಎದುರು ನೋಡಲ್ಪಟ್ಟ ಒಂದು ಆಶೀರ್ವಾದವನ್ನು ತಂದಿತು. 30ಕ್ಕಿಂತಲೂ ಹೆಚ್ಚಿನ ವರ್ಷಗಳ ಅವಧಿಯಲ್ಲಿ ಪ್ರಥಮ ಬಾರಿ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಸದಸ್ಯರು ಈ ದೇಶಕ್ಕೆ ಭೇಟಿ ನೀಡಿದರು. ಅವರನ್ನು ಬೇರೆ 15 ಪ್ರತಿನಿಧಿಗಳು ಜೊತೆಗೂಡಿದ್ದರು. ಸಂದರ್ಶಕರು ಆಸ್ಟ್ರೇಲಿಯ, ಆಸ್ಟ್ರೀಯ, ಇಟಲಿ, ಗ್ರೇಟ್ ಬ್ರಿಟನ್, ನ್ಯೂಸಿಲೆಂಡ್, ಪೋರ್ಟರೀಕೊ ಮತ್ತು ಬೆಲ್ಜಿಯಮ್ ದೇಶಗಳ ಪ್ರಜೆಗಳಾಗಿದ್ದರು.
ಅಲ್ಲಿನ 82,258 ರಾಜ್ಯ ಪ್ರಚಾರಕರಿಗೆ ಮತ್ತು 1998ರ ವಸಂತಕಾಲದಲ್ಲಿ ಕರ್ತನ ಸಂಧ್ಯಾ ಭೋಜನವನ್ನು ಆಚರಿಸಲು ಅವರೊಂದಿಗೆ ಕೂಡಿಬಂದ 87,890 ಜನರಿಗೆ ಇದೊಂದು ಐತಿಹಾಸಿಕ ಘಟನೆಯಾಗಿತ್ತು.
ಇಸವಿ 1998ರ ಡಿಸೆಂಬರ್ 1ರಿಂದ 7ರ ವರೆಗೆ, ಲಾಯಡ್ ಬ್ಯಾರಿ, ಜಾನ್ ಬಾರ್, ಮತ್ತು ಗೆರಿಟ್ ಲಾಷ್ ಹವಾನದಲ್ಲಿರುವ ಬೆತೆಲ್ ಗೃಹಕ್ಕೆ ಭೇಟಿನೀಡಿ, ಕ್ಯೂಬದಲ್ಲಿ ನಡೆದ “ದೇವರ ಜೀವನ ಮಾರ್ಗ” ಜಿಲ್ಲಾ ಅಧಿವೇಶನಗಳಲ್ಲಿ ಕೆಲವೊಂದನ್ನು ಹಾಜರಾದರು. ಅವರು ಸಂಚರಣ ಮೇಲ್ವಿಚಾರಕರನ್ನು ಭೇಟಿಯಾಗಲು ಮತ್ತು ಕ್ಯೂಬದ ಅಧಿಕಾರಿಗಳ ಪರಿಚಯ ಮಾಡಿಕೊಳ್ಳಲು ಸಂತೋಷಿಸಿದರು.
“ಇದು ನನ್ನ ಮತ್ತು ನನ್ನ ಪತ್ನಿಯ ಜೀವಮಾನದಲ್ಲಿ ಒಂದು ದೇವಪ್ರಭುತ್ವ ಮುಖ್ಯಾಂಶವಾಗಿತ್ತು,” ಎಂದು ಜಾನ್ ಬಾರ್ ಹೇಳಿದರು. “ಕ್ಯೂಬದಲ್ಲಿರುವ ನಮ್ಮ ಪ್ರಿಯ ಸಹೋದರ ಸಹೋದರಿಯರು ಸತ್ಯಕ್ಕಾಗಿ ತುಂಬ ಹುರುಪುಳ್ಳವರಾಗಿದ್ದಾರೆ! ನಮ್ಮ ಲೋಕವ್ಯಾಪಕ ಸಹೋದರತ್ವವು ನಿಜವಾಗಿಯೂ ಅಮೂಲ್ಯವಾಗಿದೆ ಎಂಬ ಸಂಗತಿ ನನ್ನ ಮೇಲೆ ಭಾರಿ ಪ್ರಭಾವವನ್ನು ಬೀರಿತು!” “ಅಲ್ಲಿರುವ ನಮ್ಮ ಸಹೋದರರ ಸನ್ನಿವೇಶಗಳನ್ನು ನಾನು ಇನ್ನೂ ಉತ್ತಮವಾಗಿ ಅರ್ಥಮಾಡಿಕೊಳ್ಳುವಂತೆ ಈ ಪ್ರಮುಖ ವಾರವು ನನಗೆ ಸಹಾಯಮಾಡಿತು” ಎಂದು ಲಾಯಡ್ ಬ್ಯಾರಿ ಕೂಡಿಸಿ ಹೇಳಿದರು.
ಕಳೆದ ಐದು ವರ್ಷಗಳಲ್ಲಿ, ಕ್ಯೂಬದಲ್ಲಿರುವ ಯೆಹೋವನ ಸಾಕ್ಷಿಗಳಿಗೆ ಹೆಚ್ಚಿನ ಆರಾಧನಾ ಸ್ವಾತಂತ್ರ್ಯವನ್ನು ಅನುಗ್ರಹಿಸಲಾಗಿದೆ. ಮತ್ತು ಈ ಪರಿಸ್ಥತಿಯು ಮುಂದುವರಿಯಬೇಕೆಂದು ಕ್ಯೂಬನ್ ಅಧಿಕಾರಿಗಳು ಬಯಸುವುದನ್ನು ಅವರ ಹೇಳಿಕೆಗಳು ಒಬ್ಬನಿಗೆ ಮನದಟ್ಟುಮಾಡುತ್ತವೆ.
ಸೆಪ್ಟೆಂಬರ್ 1994ರಲ್ಲಿ, ಹವಾನದಲ್ಲಿರುವ ಬೆತೆಲ್ ಗೃಹದಲ್ಲಿ ಮುದ್ರಣಾ ಕಾರ್ಯವನ್ನು ಆರಂಭಿಸಲಾಯಿತು. ಪುನಃ ಒಮ್ಮೆ ಯೆಹೋವನ ಸಾಕ್ಷಿಗಳು ಯಾವ ನಿರ್ಬಂಧವಿಲ್ಲದೆ ಕೂಡಿಬರಲು ಮತ್ತು ಮನೆಯಿಂದ ಮನೆಗೆ ಸಾಕ್ಷಿನೀಡಲು ಶಕ್ತರಾದರು. ತದನಂತರ 1998ರಲ್ಲಿ, ಆಡಳಿತ ಮಂಡಳಿಯ ಮೂವರು ಸದಸ್ಯರನ್ನು ಸೇರಿಸಿ, 18 ಮಂದಿ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಪ್ರತಿನಿಧಿ ಮಂಡಳಿಯ ಭೇಟಿಗೆ ಅಧಿಕಾರಿಗಳು ಅನುಮತಿ ನೀಡಿದರು.
ಹರ್ಷೋಲ್ಲಾಸದ ಪುನರ್ಮಿಲನ
ಪ್ರತಿನಿಧಿಗಳು ಹವಾನದ ಹೋಸೆ ಮಾರ್ಟೀ ವಿಮಾನನಿಲ್ದಾಣದಲ್ಲಿ ಬಂದಿಳಿದಾಗ, ಸರಕಾರೀ ಅಧಿಕಾರಿಗಳ ಮಂಡಳಿಯಿಂದ ಮತ್ತು ಬೆತೆಲ್ ಗೃಹದಿಂದ ಬಂದ ಒಂದು ಗುಂಪಿನಿಂದ ಆದರಪೂರ್ವಕವಾಗಿ ಸ್ವಾಗತಿಸಲ್ಪಟ್ಟರು. ಅವರಲ್ಲಿದ್ದ ಒಬ್ಬ ಸಹೋದರನು, 1961ರಲ್ಲಿ ಕ್ಯೂಬಕ್ಕೆ ಆಡಳಿತ ಮಂಡಳಿಯ ಸದಸ್ಯರಾದ ಮಿಲ್ಟನ್ ಹೆಂಷಲ್ ನೀಡಿದ ಭೇಟಿಯನ್ನು ಜ್ಞಾಪಿಸಿಕೊಂಡನು. ಆಗ 12 ವರ್ಷದವನಾಗಿದ್ದ ಈ ಸಹೋದರನು, ಈಗ ಒಬ್ಬ ಸಂಚರಣ ಮೇಲ್ವಿಚಾರಕನಾಗಿದ್ದಾನೆ.
ಬೆತೆಲ್ ಗೃಹವನ್ನು ತಲಪಿದ ಪ್ರತಿನಿಧಿಗಳು, ವಿಶೇಷವಾಗಿ ಆ ಸಂದರ್ಭಕ್ಕಾಗಿಯೇ ಒಬ್ಬ ಸಹೋದರನಿಂದ ಬೆಳೆಸಲ್ಪಟ್ಟ ಗ್ಲ್ಯಾಡಿಯೋಲಸ್, ಗುಲಾಬಿಗಳು, ಜ್ಯಾಸ್ಮಿನ್ ಹೂವುಗಳು, ಮತ್ತು ಹಳದಿ ಹಾಗೂ ಕೆಂಪು ಬಣ್ಣದ ಡೇಸಿ ಹೂವುಗಳ ಗೊಂಚಲುಗಳಿಂದ ಸ್ವಾಗತಿಸಲ್ಪಟ್ಟರು. ಬೆತೆಲ್ ಕುಟುಂಬವು ಪ್ರತಿನಿಧಿಗಳನ್ನು ಸ್ವಾಗತಿಸಿದಂತೆ, ಕಣ್ಣೀರು ಧಾರಾಕಾರವಾಗಿ ಹರಿಯಿತು. ತರುವಾಯ ಅವರು, ಕ್ಯೂಬನ್ ಶೈಲಿಯಲ್ಲಿ ಸುಟ್ಟ ಹಂದಿಯ ಮಾಂಸ, ಅನ್ನ ಮತ್ತು ಬೀನ್ಸ್, ಸ್ಯಾಲಡ್, ಮಾಕೊ (ಬೆಳ್ಳುಳ್ಳಿ ಮತ್ತು ಆಲಿವ್ ಎಣ್ಣೆಯಿಂದ ಮಾಡಲ್ಪಟ್ಟ ಗೊಜ್ಜು)ದೊಂದಿಗೆ ಯುಕ್ಕಾ, ಮತ್ತು ತಾಜಾ ಹಣ್ಣುಗಳ ಊಟದಲ್ಲಿ ಪಾಲ್ಗೊಂಡರು. ಊಟದ ನಂತರ, ಆಡಳಿತ ಮಂಡಳಿಯ ಪ್ರತಿಯೊಬ್ಬ ಸದಸ್ಯರು, ಬೆತೆಲ್ ಸೇವೆಯ ನಿಕ್ಷೇಪದ ಕುರಿತು ಭಕ್ತಿವೃದ್ಧಿಮಾಡುವ ಭಾಷಣವನ್ನು ನೀಡಿದರು. ಸಹೋದರ ಲಾಷರ ಹೇಳಿಕೆಗಳು ವಿಶೇಷ ರೀತಿಯಲ್ಲಿ ಮನಸ್ಸನ್ನು ಪ್ರಚೋದಿಸಿದವು ಏಕೆಂದರೆ, ಅವರು ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡಿದರು. ಈ ಬೆತೆಲ್ ಕುಟುಂಬದಲ್ಲಿ 48 ಮಂದಿ ಕ್ರಮದ ಸ್ವಯಂಸೇವಕರು ಮತ್ತು 18 ಮಂದಿ ತಾತ್ಕಾಲಿಕ ಸಹಾಯಕರಿದ್ದಾರೆ
ಕ್ಯೂಬದಲ್ಲಿರುವ ಸಹೋದರರಿಗಾಗಿ ಪುಸ್ತಕಗಳು ಮತ್ತು ಬೈಬಲುಗಳು ಇಟಲಿಯಲ್ಲಿ ಮುದ್ರಿಸಲ್ಪಡುತ್ತವಾದರೂ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಕಪ್ಪು ಬಿಳಿ ಮುದ್ರಣಗಳು, ಕ್ಯೂಬದಲ್ಲೇ ಎರಡು ಮಿಮಿಯೊಗ್ರಾಫ್ (ಪ್ರತಿಯೆತ್ತುವ) ಸಲಕರಣಗಳ ಸಹಾಯದಿಂದ ಮುದ್ರಿಸಲ್ಪಡುತ್ತವೆ. ಬೇಕಾದ ಎಲ್ಲ ಪತ್ರಿಕೆಗಳನ್ನು ಉತ್ಪಾದಿಸಲು, ಸಂಕುಚಿತ ಸ್ಥಳದಲ್ಲಿ ಒಂದೇ ರೀತಿಯ ಕೈ ಕೆಲಸವನ್ನು ದೀರ್ಘಾವಧಿಯ ವರೆಗೆ ಮಾಡಬೇಕಾಗುತ್ತದೆ. ಯೆಹೋವನಿಗೆ ಮಾಡುವ ಈ ಸೇವೆಯ ನಿಕ್ಷೇಪವನ್ನು, ಸ್ವಯಂಸೇವಕರು ವಿಶೇಷವಾದ ರೀತಿಯಲ್ಲಿ ಮಾನ್ಯಮಾಡುತ್ತಾರೆ.—2 ಕೊರಿಂಥ 4:7.
ಅಧಿವೇಶನದ ಮುಖ್ಯಾಂಶಗಳು
ಹವಾನ, ಕಾಮಗೂಯೇ, ಮತ್ತು ಹೋಲ್ಗೂಯಿನ್ ಎಂಬಂತಹ ಮೂರು ಸ್ಥಳಗಳಲ್ಲಿ ಜರುಗಲಿದ್ದ ಜಿಲ್ಲಾ ಅಧಿವೇಶನಗಳಿಗೆ ಹಾಜರಾಗಲು, 18 ಸದಸ್ಯರ ಮಂಡಳಿಯು ಮೂರು ಗುಂಪುಗಳಾಗಿ ಬೇರ್ಪಟ್ಟಿತು. ಮೂರೂ ದಿನಗಳಂದು, ಅನೇಕ ಹಿರಿಯರು ಮತ್ತು ಪಯನೀಯರರನ್ನು ಸೇರಿಸಿ, ಸಹೋದರ ಸಹೋದರಿಯರ ಒಂದು ದೊಡ್ಡ ಗುಂಪು, ಪ್ರತಿಯೊಂದು ಸ್ಥಳದಲ್ಲಿ ನಡೆದ ಅಧಿವೇಶನಕ್ಕೆ ಹಾಜರಾಗುವಂತೆ ಆಮಂತ್ರಿಸಲ್ಪಟ್ಟಿತು. ಇದೊಂದು ವಿಶೇಷ ಸಂದರ್ಭವಾಗಿರುವುದೆಂದು ಸ್ಥಳಿಕ ಸಾಕ್ಷಿಗಳಿಗೆ ಹೇಳಲಾಗಿತ್ತು. ಹಾಗಿದ್ದರೂ ಆಡಳಿತ ಮಂಡಳಿಯ ಸದಸ್ಯರು ಹಾಜರಾಗುವರೆಂದು ಅವರಿಗೆ ಗೊತ್ತಿರಲಿಲ್ಲ. ಶುಕ್ರವಾರ ಬೆಳಗ್ಗೆ ಈ ಪ್ರಿಯ ಸಹೋದರರು ಮತ್ತು ಅವರ ಪತ್ನಿಯರು ಬಸ್ಸಿನಿಂದ ಕೆಳಗಿಳಿಯುವುದನ್ನು ನೋಡಿ, ಅವರಿಗಾದ ಆಶ್ಚರ್ಯವನ್ನು ಊಹಿಸಿಕೊಳ್ಳಿರಿ!
ಅಧಿವೇಶನಗಳು, ಅಧಿಕಾರಿಗಳ ಅನುಮತಿಯಿಂದ ಸಹೋದರರು ಬಯಲಿನಲ್ಲಿ ಕಟ್ಟಿದ ಸೌಕರ್ಯಗಳಲ್ಲಿ ನಡೆಸಲ್ಪಟ್ಟವು. ಹವಾನ ಅಧಿವೇಶನದ ಸ್ಥಳದಲ್ಲಿ, ಪ್ರವೇಶದ್ವಾರದಲ್ಲಿದ್ದ ಒಂದು ಕಲ್ಲಿನ ಮೇಲೆ “ಕೀರ್ತನೆ 133:1” ಎಂಬ ಉದ್ಧರಣವನ್ನು ಕೆತ್ತಲಾಗಿತ್ತು. ಇದು ಆ ವಚನದಲ್ಲಿ ಕಂಡುಬರುವ ಮಾತುಗಳನ್ನು ಸಹೋದರರ ಜ್ಞಾಪಕಕ್ಕೆ ತಂದಿತು: “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!” ನಿಶ್ಚಯವಾಗಿಯೂ, ಅಧಿವೇಶನದ ಆ ನಿವೇಶನದಲ್ಲಿ, ಒಳ್ಳೆಯ ಹಾಗೂ ಹಿತಕರವಾದ ಕ್ರೈಸ್ತ ಸಾಹಚರ್ಯವಿತ್ತು.
ಭಾಷಣಗಳು ಮತ್ತು ಇಂಟರ್ವ್ಯೂಗಳು ಅತ್ಯುತ್ತಮ ರೀತಿಯಲ್ಲಿ ನೀಡಲ್ಪಟ್ಟವೆಂದು ಸಂದರ್ಶಕರು ಹೇಳಿದರು. ಮತ್ತು ಪುರಾತನ ಬಾಬೆಲಿನ ಹಿನ್ನೆಲೆಯಲ್ಲಿದ್ದ, ದಾನಿಯೇಲ 3ನೆಯ ಅಧ್ಯಾಯದ ಬೈಬಲ್ ಕಥೆಯ ಮೇಲಾಧಾರಿತ ಡ್ರಾಮದಿಂದ ಅವರು ತುಂಬ ಪ್ರಭಾವಿತರಾದರು. ಸಹೋದರಿಯೊಬ್ಬಳು ಹೇಳಿದ್ದು: “ಎಲ್ಲರೂ ಬಹು ಸೊಗಸಾಗಿ ನಟಿಸಿದರು. ಮತ್ತು ಧ್ವನಿಯ ಮೇಳೈಸುವಿಕೆ ಎಷ್ಟು ಚೆನ್ನಾಗಿ ಮಾಡಲ್ಪಟ್ಟಿತ್ತೆಂದರೆ, ಅದು ಈ ಮೊದಲೇ ರೆಕಾರ್ಡು ಮಾಡಲಾಗಿತ್ತೆಂದು ಗೊತ್ತೇ ಆಗುವುದಿಲ್ಲ. . . . ಬಾಬೆಲಿನ ಆ ದುಷ್ಟನು ನಿಜವಾಗಿಯೂ ದುಷ್ಟನಾಗಿ ಕಂಡನು, ಮತ್ತು ಆ ಮೂವರು ಇಬ್ರಿಯರು ಸ್ಥಿರರೂ ದೃಢನಿರ್ಧಾರವುಳ್ಳವರೂ ಆಗಿದ್ದರು.”
ಅಧಿವೇಶನಗಳನ್ನು ನೋಡಲು ಬಂದ ಧಾರ್ಮಿಕ ಕಾರ್ಯಕಲಾಪಗಳ ಆಫೀಸಿನ ಪ್ರತಿನಿಧಿಗಳು ಮತ್ತು ಇತರ ಸರಕಾರಿ ಅಧಿಕಾರಿಗಳು, ಒಳ್ಳೆಯ ವ್ಯವಸ್ಥೆ ಹಾಗೂ ಉತ್ತಮ ನಡತೆಗಾಗಿ ಸಹೋದರರನ್ನು ಶ್ಲಾಘಿಸಿದರು. ಸಂದರ್ಶಿಸುತ್ತಿರುವ ಪ್ರತಿನಿಧಿಗಳನ್ನು ಕ್ಯೂಬನ್ ಅಧಿಕಾರಿಗಳು ಅತ್ಯುತ್ತಮವಾಗಿ ಉಪಚರಿಸಿದ್ದಕ್ಕಾಗಿ ಸಹೋದರ ಬ್ಯಾರಿ ಯಥಾರ್ಥವಾದ ಕೃತಜ್ಞತೆಯನ್ನು ಸಲ್ಲಿಸಿದರು. ಭಾಷಣಗಳಿಗೆ ಹಾಗೂ ಅಧಿವೇಶನಗಳನ್ನು ನಡೆಸುವಂತೆ ಅಧಿಕಾರಿಗಳು ನೀಡಿದ ಅನುಮತಿಗಾಗಿ, ಸಹೋದರರು ತಮ್ಮ ಗಣ್ಯತೆಯನ್ನು ವ್ಯಕ್ತಪಡಿಸುತ್ತಾ ಹಲವಾರು ನಿಮಿಷಗಳ ವರೆಗೆ ಚಪ್ಪಾಳೆ ಹೊಡೆದರು. “ಇದು ನಾವು ನಿರೀಕ್ಷಿಸಿದಕ್ಕಿಂತಲೂ ಹೆಚ್ಚಾಗಿದೆ, ಅಂದರೆ ಇದೊಂದು ಸಣ್ಣ ಪ್ರಮಾಣದ ಅಂತಾರಾಷ್ಟ್ರೀಯ ಅಧಿವೇಶನವೇ ಆಗಿದೆ!” ಎಂದು ಒಂದು ಕ್ರೈಸ್ತ ಕುಟುಂಬವು ಹೇಳಿತು. “ಇದು ನಿಜವಾಗಿಯೂ ಅದ್ಭುತವಾಗಿದೆ, ಏಕೆಂದರೆ ತನ್ನ ವಾಗ್ದಾನಗಳನ್ನು ನೆರವೇರಿಸಲಿಕ್ಕಾಗಿ ಯೆಹೋವನಿಗಿರುವ ಮಹಾ ಶಕ್ತಿಯ ಪ್ರಮಾಣವನ್ನು ಇದು ತೋರಿಸಿದೆ.”
ಇತರರು ಸಾಕ್ಷಿಗಳನ್ನು ಉತ್ತಮವಾಗಿ ತಿಳಿದುಕೊಳ್ಳಲು ಕೂಡ ಅಧಿವೇಶನಗಳು ಒಂದು ಅವಕಾಶವನ್ನು ಒದಗಿಸಿದವು. ಒಬ್ಬ ಬಸ್ ಚಾಲಕನು ಶನಿವಾರ ಹಾಗೂ ಪುನಃ ಭಾನುವಾರದಂದು ಅಧಿವೇಶನಕ್ಕೆ ಹಾಜರಾದನು. ಯೆಹೋವನ ಸಾಕ್ಷಿಗಳ ಬಗ್ಗೆ ಅನೇಕ ವಿಷಯಗಳನ್ನು ಕೇಳಿಸಿಕೊಂಡಿದ್ದರೂ, ಅವರು ಒಳ್ಳೆಯವರೂ ಶಾಂತಿಪ್ರಿಯರೂ ಆಗಿದ್ದಾರೆಂದು ಈಗ ತಿಳಿದಿರುವುದಾಗಿ ಅವನು ಹೇಳಿದನು.
“ನಾವೆಂದಿಗೂ ಮರೆಯಲಾಗದ ವಿಷಯಗಳು”
ಕ್ಯೂಬ ನಿವಾಸಿಗಳ ಆದರ ಹಾಗೂ ಸ್ನೇಹಭಾವದಿಂದ ಪ್ರತಿನಿಧಿಗಳು ತುಂಬ ಪ್ರಭಾವಿತರಾದರು. ಕ್ಯೂಬದ ನಿವಾಸಿಗಳು ಶ್ರಮಶೀಲರೂ, ನೀತಿನಿಷ್ಠೆಯುಳ್ಳವರೂ, ದಯೆಯುಳ್ಳವರೂ ಆಗಿದ್ದಾರೆ. “ಸಂಪೂರ್ಣ ಅಪರಿಚಿತರು ನಮಗೆ ಒಂದೆರಡು ಬಾರಿ ಸಹಾಯ ನೀಡಲು ಮುಂದಾದರು” ಎಂದು ಒಬ್ಬ ಪ್ರತಿನಿಧಿಯು ಹೇಳಿದನು.
ಕ್ಯೂಬದ ಜೊತೆ ಸಾಕ್ಷಿಗಳು ಪ್ರದರ್ಶಿಸಿದ ನಂಬಿಕೆ, ಸಂತೋಷ ಹಾಗೂ ಪ್ರೀತಿಯಿಂದ ಪ್ರತಿನಿಧಿಗಳು ಗಾಢವಾಗಿ ಪ್ರಭಾವಿತರಾದರು. ಮಹತ್ತರವಾದ ಅಡೆತಡೆಗಳ ಎದುರಿನಲ್ಲೂ, ಅವರು ಯೆಹೋವನನ್ನು ತಮ್ಮ ಆಶ್ರಯವನ್ನಾಗಿ ಮಾಡಿಕೊಂಡಿದ್ದಾರೆ. (ಕೀರ್ತನೆ 91:2) ಜಾನ್ ಬಾರ್ ಹೇಳಿದ್ದು: “ನಾನು ಕ್ಯೂಬಕ್ಕೆ ನೀಡಿದ ಪ್ರಥಮ ಭೇಟಿಯಲ್ಲಿ ಅನೇಕ ವಿಷಯಗಳು ನನ್ನನ್ನು ಆಶ್ಚರ್ಯಗೊಳಿಸಿದವು. ಉದಾಹರಣೆಗೆ, ಆ ದೇಶದ ಸೌಂದರ್ಯ, ನಾನು ಸಂಧಿಸಿದ ಜನರ ಹಿತವಾದ ಸ್ವಭಾವ, ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಕ್ಯೂಬನ್ ಸಾಕ್ಷಿಗಳ ತುಂಬಿತುಳುಕುವ ಉತ್ಸಾಹ ಮತ್ತು ಆತ್ಮಿಕ ಚೈತನ್ಯ ಕೆಲವಾಗಿವೆ. ನಮ್ಮ ರಾಜ್ಯ ಗೀತೆಗಳ ಇಂತಹ ಹೃತ್ಪೂರ್ವಕ ಹಾಡುವಿಕೆ ಹಾಗೂ ಆತ್ಮಿಕ ವಿಷಯಗಳು ಅವರ ಮನತಟ್ಟಿದಾಗ ಇಂತಹ ದೀರ್ಘಾವಧಿಯ ಚಪ್ಪಾಳೆಯನ್ನು ನಾನು ನನ್ನ ಜೀವಿತದಲ್ಲೇ ಕೇಳಿಸಿಕೊಂಡಿಲ್ಲ! ಇವು ನಾವೆಂದಿಗೂ ಮರೆಯಲಾಗದ ವಿಷಯಗಳು. ಇವುಗಳನ್ನು ನಾವು ಸದಾ ಆದರಿಸುವೆವು.”
ಕೀರ್ತನೆ 97:1 ಹೇಳುವುದು: “ಸಮುದ್ರದ ತೀರಪ್ರದೇಶಗಳೆಲ್ಲಾ ಹರ್ಷಿಸಲಿ.” ನಿಜವಾಗಿಯೂ, ಕ್ಯೂಬ ದ್ವೀಪದಲ್ಲಿರುವ ಯೆಹೋವನ ಸಾಕ್ಷಿಗಳು, ದೇವರನ್ನು ಆರಾಧಿಸಲು ತಾವು ಪಡೆದುಕೊಂಡ ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ಮತ್ತು ಈ ಅಂತಾರಾಷ್ಟ್ರೀಯ ಪ್ರತಿನಿಧಿ ಮಂಡಳಿಯ ಐತಿಹಾಸಿಕ ಸಂದರ್ಶನಕ್ಕಾಗಿ ಹರ್ಷಿಸುತ್ತಾರೆ.
[ಪುಟ 8 ರಲ್ಲಿರುವ ಚಿತ್ರ]
ಆಡಳಿತ ಮಂಡಳಿಯ ಸದಸ್ಯರು ಸರಕಾರೀ ಅಧಿಕಾರಿಗಳಿಗೆ ಕೊಡುಗೆಯಾಗಿ ಕೊಟ್ಟ ಬೈಬಲುಗಳಿಗೆ ಸಹಿ ಹಾಕುತ್ತಾರೆ
[ಪುಟ 8 ರಲ್ಲಿರುವ ಚಿತ್ರ]
ಕ್ಯೂಬದಲ್ಲಾದ ವಿಶೇಷವಾದ “ದೇವರ ಜೀವನ ಮಾರ್ಗ” ಎಂಬ ಜಿಲ್ಲಾ ಅಧಿವೇಶನಗಳಿಗೆ ಅನೇಕ ಕುಟುಂಬಗಳು ಹಾಜರಿದ್ದವು
[ಪುಟ 8 ರಲ್ಲಿರುವ ಚಿತ್ರ]
ಹವಾನದ ಬೆತೆಲ್ ಗೃಹವು 1994ರಲ್ಲಿ ಪುನಃ ತೆರೆಯಲ್ಪಟ್ಟಿತು