ಇಸ್ರಾಯೇಲ್ಯರಲ್ಲಿ ಉಚ್ಚರಿಸಲ್ಪಟ್ಟ ದೈವಿಕ ನಾಮ
ಶತಮಾನಗಳಿಂದಲೂ ಸಂಪ್ರದಾಯಸ್ಥ ಯೆಹೂದ್ಯರು, ಯೆಹೋವ ಎಂಬ ದೈವಿಕ ನಾಮವನ್ನು ಉಚ್ಚರಿಸಲು ತಮ್ಮ ಅನುಯಾಯಿಗಳಿಗೆ ಕಟ್ಟುನಿಟ್ಟಾದ ನಿರ್ಬಂಧವನ್ನು ಹಾಕಿದ್ದರು. ಮಿಷ್ನಾದ ಪ್ರಕಾರ, ದೇವರ ನಾಮವನ್ನು ಉಚ್ಚರಿಸುವ ಯಾರೊಬ್ಬನಿಗೂ “ಬರಲಿರುವ ಲೋಕದಲ್ಲಿ ಯಾವ ಪಾಲೂ ಇರುವುದಿಲ್ಲ.”—ಸನ್ಹೇದ್ರಿನ್ 10:1.a
ಜನವರಿ 30, 1995ರಂದು, ಹಿಂದಿನ ಸಫೊರಿನ ಇಸ್ರಾಯೇಲಿನ ಮುಖ್ಯ ರಬ್ಬಿಯಾಗಿದ್ದವನು ಆ ದೈವಿಕ ನಾಮವನ್ನು ಬೇಕುಬೇಕೆಂದೇ ಉಚ್ಚರಿಸಿದನು. ಒಬ್ಬ ಮತಪರಿಣತನ (ಕೆಬಾಲ್) ತಿದ್ದುವಿಕೆಯ ಪ್ರಾರ್ಥನೆಯಾಗಿರುವ ಟೇಕುನ್ ಅನ್ನು ಗಟ್ಟಿಯಾಗಿ ಹೇಳುವ ಮೂಲಕ ಅವನದನ್ನು ಮಾಡಿದನು. ಆರಾಧಕರಿಗನುಸಾರ, ದುಷ್ಟ ಶಕ್ತಿಗಳಿಂದ ಅಡ್ಡಿಮಾಡಲ್ಪಟ್ಟಿರುವ ವಿಶ್ವದ ಸಾಮರಸ್ಯವನ್ನು ದೇವರು ನೈಜ ಸ್ಥಿತಿಗೆ ಪುನಃಸ್ಥಾಪಿಸಬೇಕೆಂದು ಕೇಳಿಕೊಳ್ಳುವುದಕ್ಕಾಗಿ ಈ ಪ್ರಾರ್ಥನೆಯನ್ನು ಮಾಡಲಾಗುತ್ತಿತ್ತು. ಫೆಬ್ರವರಿ 6, 1995ರ ಯೇಡಿಯೋತ್ ಆಹಾರೋನಟ್ ಎಂಬ ವಾರ್ತಾಪತ್ರಿಕೆಯು ತಿಳಿಸಿದ್ದು: “ಇಂತಹ ವಿಸ್ಮಯಕಾರಿ ಶಕ್ತಿಯನ್ನು ಹೊಂದಿದ್ದ ಈ ಆರಾಧನಾ ವಿಧದ ಸಮುಚಿತ ಪದಗಳು ಸಾರ್ವಜನಿಕರಿಗೆ ಮಾರಾಟಕ್ಕಿರದ ಒಂದು ವಿಶೇಷ ಪುಸ್ತಿಕೆಯಲ್ಲಿ ಮಾತ್ರವೇ ಕಾಣಬರುತ್ತವೆ.” ಈ ಸಂದರ್ಭದಲ್ಲಿ ದೇವರ ನಾಮಕ್ಕೆ ಮೊರೆಯಿಡುವುದು ಆ ವಿನಂತಿಗೆ ವಿಶೇಷ ಬಲವನ್ನು ನೀಡುವುದೆಂದು ನೆನಸಲಾಗುತ್ತದೆ.
ದೇವರ ಸೇವಕರು ಯೆಹೋವ ಎಂಬ ದೈವಿಕ ನಾಮವನ್ನು ಉಪಯೋಗಿಸಬೇಕೆಂದು ಬೈಬಲ್ ಆಜ್ಞೆಯನ್ನು ನೀಡಿರುವುದು ಗಮನಾರ್ಹವಾಗಿದೆ. (ವಿಮೋಚನಕಾಂಡ 3:15; ಜ್ಞಾನೋಕ್ತಿ 18:10; ಯೆಶಾಯ 12:4; ಚೆಫನ್ಯ 3:9) ಬೈಬಲಿನ ಮೂಲ ಹೀಬ್ರು ಗ್ರಂಥಪಾಠದಲ್ಲಿ, ಆ ಹೆಸರು ಹೆಚ್ಚುಕಡಿಮೆ 7,000 ಬಾರಿ ಕಂಡುಬರುತ್ತದೆ. ಹೀಗಿದ್ದರೂ, ದೇವರ ಹೆಸರನ್ನು ದುರುಪಯೋಗಿಸುವುದರ ವಿರುದ್ಧ ಬೈಬಲು ಎಚ್ಚರಿಸುತ್ತದೆ. ದಶಾಜ್ಞೆಯಲ್ಲಿ ಮೂರನೆಯದು ಹೀಗೆ ತಿಳಿಸುತ್ತದೆ: “ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತುವವನನ್ನು ಶಿಕ್ಷಿಸದೆ ಬಿಡುವದಿಲ್ಲ.” (ವಿಮೋಚನಕಾಂಡ 20:7) ದೇವರ ಹೆಸರನ್ನು ‘ಅಯೋಗ್ಯಕಾರ್ಯ’ಕ್ಕಾಗಿ ಹೇಗೆ ಎತ್ತಸಾಧ್ಯವಿದೆ? ಯೆಹೂದಿ ಪ್ರಕಾಶನ ಸಂಸ್ಥೆಯ ಸಾಹಿತ್ಯಕೃತಿಯು ಗಮನಿಸಿದ್ದೇನೆಂದರೆ, ‘ಅಯೋಗ್ಯಕಾರ್ಯ’ವೆಂದು ಭಾಷಾಂತರಿಸಲಾಗಿರುವ ಹೀಬ್ರು ಪದವು, ದೈವಿಕ ನಾಮದ ‘ತುಚ್ಛ ಉಪಯೋಗವನ್ನು’ ಮಾತ್ರವೇ ಅಲ್ಲ ‘ಅನಾವಶ್ಯಕ ಹರಸುವಿಕೆಯ ಪಠಣವನ್ನು’ ಕೂಡ ಅರ್ಥೈಸುತ್ತದೆ.
ಹಾಗಾದರೆ, ಪರಿಣತನ ತಿದ್ದುವಿಕೆಯ ಪ್ರಾರ್ಥನೆಯಾಗಿರುವ ಟೇಕುನ್ ಅನ್ನು ನಾವು ಹೇಗೆ ವೀಕ್ಷಿಸಬೇಕು? ಅದರ ಮೂಲವು ಯಾವುದು? ಸಾ. ಶ. 12ನೇ ಹಾಗೂ 13ನೇ ಶತಮಾನಗಳಲ್ಲಿ ಕೆಬಾಲ್ ಎಂದು ಕರೆಯಲ್ಪಡುವ ಯೆಹೂದಿಮತದ ಗೂಢಾರ್ಥವುಳ್ಳ ಪಂಥವು ಜನಪ್ರಿಯತೆಯನ್ನು ಗಳಿಸಿತು. 16ನೆಯ ಶತಮಾನದಲ್ಲಿ, ಐಸಕ್ ಲೂರಿಯಾ ಎಂಬ ಒಬ್ಬ ರಬ್ಬಿಯು ‘ಟೆಕುನಿಮ್’ ಎಂಬ ಕೆಬಾಲ್ ಆಚರಣಾ ವಿಧವನ್ನು ಪ್ರಾರಂಭಿಸಿದನು. ದೇವರ ಹೆಸರನ್ನು ವಿಶೇಷ ಮಂತ್ರಶಕ್ತಿಯ ಮಾಂತ್ರಿಕ ಶ್ಲೋಕವಾಗಿ ಉಪಯೋಗಿಸಲಾಗುತ್ತಿತ್ತು ಮತ್ತು ಇದು ಕೆಬಾಲ್ ಮತಸಂಸ್ಕಾರದ ಒಂದು ಭಾಗವಾಯಿತು. ಇದು ದೇವರ ಹೆಸರಿನ ಯೋಗ್ಯ ಉಪಯೋಗವಾಗಿತ್ತೆಂದು ನೀವು ಭಾವಿಸುತ್ತೀರೋ?—ಧರ್ಮೋಪದೇಶಕಾಂಡ 18:10-12
ಈ ಪ್ರಶ್ನೆಯನ್ನು ನೀವು ಹೇಗೆ ಉತ್ತರಿಸಿದರೂ, ಆಧುನಿಕ ದಿನದ ಇಸ್ರಾಯೇಲಿನಲ್ಲಿ ದೇವರ ನಾಮದ ಬಹಿರಂಗ ಉಚ್ಚಾರವು ಅತಿ ಅಪೂರ್ವ ಘಟನೆಯಾಗಿತ್ತು. ಆದರೂ ದೇವರು ಸ್ವತಃ ಮುಂತಿಳಿಸಿದ್ದು: “ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ, ಆತನ ನಾಮದ ಮಹತ್ವವನ್ನು ವರ್ಣಿಸಿರಿ, ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ, ಆತನ ನಾಮವು ಉನ್ನತೋನ್ನತವೆಂದು ಜ್ಞಾಪಕಪಡಿಸಿರಿ. ಯೆಹೋವನನ್ನು ಗಾನದಿಂದ ಸ್ತುತಿಸಿರಿ; ಆತನು ಮಹಿಮೆಯ ಕಾರ್ಯಗಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.”—ಯೆಶಾಯ 12:4, 5.
ಸಂತೋಷಕರವಾಗಿ, ಇಸ್ರಾಯೇಲಿನಲ್ಲಿ ಹೇಗೊ ಹಾಗೆಯೇ, ಲೋಕದಾದ್ಯಂತ 230ಕ್ಕಿಂತಲೂ ಹೆಚ್ಚು ದೇಶಗಳಲ್ಲಿ, ಯೆಹೋವನ ಸಾಕ್ಷಿಗಳು ತಮ್ಮ ನೆರೆಹೊರೆಯವರಿಗೆ ಯೆಹೋವನ ಕುರಿತು ನಿಷ್ಕೃಷ್ಟ ಜ್ಞಾನವನ್ನು ಪಡೆಯುವಂತೆ ಸಹಾಯ ಮಾಡುವುದರಲ್ಲಿ ಸಾಧ್ಯವಾದ ಎಲ್ಲ ಪ್ರಯತ್ನವನ್ನು ಹಾಕುತ್ತಿದ್ದಾರೆ. ಇನ್ನೂ ಅನೇಕರು ಕೀರ್ತನೆ 91:14ರಂತಹ ಶಾಸ್ತ್ರವಚನಗಳ ಅರ್ಥವನ್ನು ಗಣ್ಯಮಾಡುವುದಕ್ಕೆ ತೊಡಗುವರೆಂಬುದು ಅವರ ಹಾರೈಕೆಯಾಗಿದೆ. ನಾವು ಅಲ್ಲಿ ಓದುವುದು: “ಅವನು ನನ್ನಲ್ಲಿ (ಯೆಹೋವ) ಆಸಕ್ತನಾಗಿರುವದರಿಂದ ಅವನನ್ನು ರಕ್ಷಿಸುವೆನು; ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು.”
[ಅಧ್ಯಯನ ಪ್ರಶ್ನೆಗಳು]
a ಮಿಷ್ನಾವು, ಶಾಸ್ತ್ರೀಯ ನಿಯಮಕ್ಕೆ ಕೂಡಿಸಿ ಕೊಡಲ್ಪಟ್ಟ ವ್ಯಾಖ್ಯಾನಗಳ ಒಂದು ಸಂಗ್ರಹವಾಗಿದೆ. ಅದು, ಟಾನಾಯೀಮ್ (ಶಿಕ್ಷಕರು) ಎಂದು ಕರೆಯಲ್ಪಡುವ ರಬ್ಬಿಗಳ ಅರ್ಥವಿವರಣೆಗಳ ಮೇಲೆ ಆಧರಿಸಲ್ಪಟ್ಟಿದೆ. ಅದು ಸಾ. ಶ. ಎರಡನೆಯ ಶತಮಾನದ ಕೊನೆಯ ಭಾಗದಲ್ಲಿ ಮತ್ತು ಮೂರನೆಯ ಶತಮಾನದ ಪ್ರಾರಂಭದ ಸಮಯದಲ್ಲಿ ಬರವಣಿಗೆಯ ರೂಪದಲ್ಲಿ ಹಾಕಲಾಯಿತು.
[ಪುಟ 28 ರಲ್ಲಿರುವ ಚಿತ್ರ]
ಇಲ್ಲಿ ನೆಗಾಬಿನಲ್ಲಿ ಯೆಹೋವನ ನಾಮ ಮತ್ತು ಅವನ ವಾಕ್ಯವನ್ನು ಜನರಿಗೆ ತಿಳಿಯಪಡಿಸಲಾಗುತ್ತಿತ್ತು
[ಪುಟ 29 ರಲ್ಲಿರುವ ಚಿತ್ರ]
ದೈವಿಕ ನಾಮವನ್ನು ತೋರಿಸುತ್ತಿರುವ ಭಿತ್ತಿಪತ್ರ