ಕಡು ಬಡತನದಿಂದ ಅತಿ ಶ್ರೇಷ್ಠ ಸಿರಿತನಕ್ಕೆ
ಮ್ಯಾನ್ವೆಲ್ ಡ ಸಸೂಸ್ ಆಲ್ಮೆಡ ಅವರು ಹೇಳಿದಂತೆ
ನಾನು ಅಕ್ಟೋಬರ್ 1916ರಂದು, 17 ಮಕ್ಕಳಲ್ಲಿ ಅತಿ ಕಿರಿಯವನಾಗಿ ಹುಟ್ಟಿದ್ದೆ. ನನಗಿಂತಲೂ ಹಿರಿಯರಾಗಿದ್ದ ಒಂಬತ್ತು ಮಂದಿ ಅಣ್ಣಂದಿರು ಮತ್ತು ಅಕ್ಕಂದಿರು ಕಾಯಿಲೆ ಮತ್ತು ನೂನ್ಯಪೋಷಣೆಯಿಂದ ಮೃತಪಟ್ಟದ್ದರಿಂದ ನನಗೆ ಅವರ ಪರಿಚಯವಿರಲಿಲ್ಲ. ಪೋರ್ಚುಗಲ್ನ ಪೋರ್ಟೊ ಎಂಬ ಸಣ್ಣ ಹಳ್ಳಿಯಲ್ಲಿ, ಉಳಿದಿರುವ ಎಂಟು ಮಂದಿ ಮಕ್ಕಳು ನಮ್ಮ ಹೆತ್ತವರೊಂದಿಗೆ ವಾಸಿಸಿದೆವು.
ನಮ್ಮ ಸಾಧಾರಣ ಮನೆಯಲ್ಲಿ ಒಂದು ಸಣ್ಣ ವಾಸದ ಕೊಠಡಿ ಹಾಗೂ ಒಂದು ಮಲಗುವ ಕೋಣೆಯಿತ್ತು. ಅರ್ಧ ಕಿಲೋಮೀಟರಿನಷ್ಟು ದೂರದಲ್ಲಿದ್ದ ಬಾವಿಯಿಂದ ಕುಡಿಯುವ ನೀರನ್ನು ತರಬೇಕಾಗುತ್ತಿತ್ತು. ಮಾತ್ರವಲ್ಲ, ನಮ್ಮ ಅಡಿಗೆಯ ಸವಲತ್ತುಗಳು ಹಳೆಯ ಕಾಲದ್ದಾಗಿದ್ದವು.
ನನ್ನ ಹಿರೀ ಸಹೋದರರು ದೈಹಿಕವಾಗಿ ಸುದೃಢರಾದ ತಕ್ಷಣ, ಹೊಲದಲ್ಲಿ ಕೆಲಸಮಾಡತೊಡಗಿದರು. ಇವರ ಆದಾಯವು ಕುಟುಂಬಕ್ಕೆ ಸ್ವಲ್ಪ ಆಹಾರವನ್ನು ದೊರಕಿಸಿಕೊಡುವುದರಲ್ಲಿ ಸಹಾಯಮಾಡಿತು. ಇವರ ಸಹಾಯದಿಂದ ನನಗೊಬ್ಬನಿಗೆ ಮಾತ್ರ ಸ್ವಲ್ಪ ಮಟ್ಟಿಗಿನ ಶಾಲಾಶಿಕ್ಷಣವು ಸಿಕ್ಕಿತು. ನಮ್ಮ ಜೀವನವು ಕಷ್ಟಕರವಾಗಿದ್ದರೂ, ನಾವು ಕ್ಯಾತೊಲಿಕ್ ಚರ್ಚಿಗೆ ಬಹಳ ನಂಬಿಗಸ್ತರಾಗಿದ್ದೆವು. ಹೀಗೆ ಇದು ಒಂದಲ್ಲ ಒಂದು ವಿಧದಲ್ಲಿ ನಮ್ಮ ಜೀವಿತಗಳನ್ನು ಸುಧಾರಿಸಬಹುದೆಂದು ಆಶಿಸಿದೆವು.
ಮೇ ತಿಂಗಳಿನ ಸುಮಾರಿಗೆ, ಚರ್ಚಿನಲ್ಲಿ ನೊವೆನಾವೆಂದು ಕರೆಯಲ್ಪಡುವ ಪೂಜಾಕ್ರಮವಿತ್ತು. ಇನ್ನೂ ಕತ್ತಲಿರುವಾಗಲೇ ಬೆಳಗ್ಗಿನ ಜಾವದಲ್ಲಿಯೇ ಕ್ರಮವಾಗಿ ಒಂಬತ್ತು ದಿನಗಳ ವರೆಗೆ ಚರ್ಚಿಗೆ ನಡೆದುಕೊಂಡು ಹೋಗುತ್ತಿದ್ದೆವು. ಅಲ್ಲಿ ನಾವು ಪ್ರಾರ್ಥಿಸುತ್ತಿದ್ದೆವು, ಇದು ದೇವರಿಂದ ಆಶೀರ್ವಾದವನ್ನು ತರುವುದೆಂದು ನಂಬಿದ್ದೆವು. ಪಾದ್ರಿಯು ಪವಿತ್ರ ಮನುಷ್ಯನೆಂದು, ದೇವರ ಪ್ರತಿನಿಧಿಯಾಗಿದ್ದನೆಂದು ಕೂಡ ನಾವು ನೆನಸಿದ್ದೆವು. ಆದರೆ, ಸಮಯಾನಂತರ ನಮ್ಮ ವಿಚಾರವು ಬದಲಾಯಿತು.
ಉತ್ತಮವಾಗಿರುವುದನ್ನು ಹುಡುಕುವುದು
ನಾವು ಚರ್ಚ್ ತೆರಿಗೆಯನ್ನು ಪಾವತಿಮಾಡಲು ತಪ್ಪಿದಾಗ, ಪಾದ್ರಿಯು ನಮ್ಮ ವಿಪರೀತ ಆರ್ಥಿಕ ಸಂಕಷ್ಟಗಳಿಗಾಗಿ ಯಾವುದೇ ಪರಿಗಣನೆಯನ್ನು ಕೊಡಲಿಲ್ಲ. ಇದು ನಮ್ಮನ್ನು ನಿರುತ್ತೇಜಿಸಿತು. ಮತ್ತು ಇದು ಚರ್ಚಿನ ಕಡೆಗಿದ್ದ ನನ್ನ ಅಭಿಪ್ರಾಯವನ್ನು ತೀರಾ ಬದಲಾಯಿಸಿತು. ಹೀಗೆ, ನಾನು 18ರ ಪ್ರಾಯದವನಾದಾಗ, ಕೇವಲ ಹೊಲಗಳಲ್ಲಿ ಕೆಲಸಮಾಡುವುದು ಹಾಗೂ ಚರ್ಚಿನೊಂದಿಗೆ ವಾಗ್ವಾದಕ್ಕೆ ಇಳಿಯುವುದಕ್ಕಿಂತಲೂ ಜೀವನದಲ್ಲಿ ಉತ್ತಮವಾಗಿರುವ ಬೇರೆ ಯಾವ ವಿಷಯವಾದರೂ ಇದೆಯೆ ಎಂದು ಹುಡುಕಲಿಕ್ಕಾಗಿ ನಾನು ನನ್ನ ಕುಟುಂಬದಿಂದ ಪ್ರತ್ಯೇಕಗೊಳ್ಳಲು ನಿರ್ಧರಿಸಿದೆನು. 1936ರಲ್ಲಿ, ನಾನು ಪೋರ್ಚುಗಲ್ನ ರಾಜಧಾನಿ ನಗರವಾಗಿರುವ ಲಿಸ್ಬನ್ಗೆ ತಲಪಿದೆ.
ಅಲ್ಲಿ ನಾನು ಎಡ್ಮಿನ್ಯ ಎಂಬವಳನ್ನು ಸಂಧಿಸಿದೆ. ಧರ್ಮದಿಂದ ವಂಚಿಸಲ್ಪಟ್ಟ ಭಾವನೆಯು ನನ್ನಲ್ಲಿತ್ತಾದರೂ, ನಾವು ಸಂಪ್ರದಾಯವನ್ನು ಅನುಸರಿಸುತ್ತಾ ಕ್ಯಾತೊಲಿಕ್ ಚರ್ಚಿನಲ್ಲಿ ಮದುವೆಯಾದೆವು. ಅನಂತರ 1939ರಲ್ಲಿ, ಎರಡನೇ ಲೋಕ ಯುದ್ಧವು ಪ್ರಾರಂಭವಾಯಿತು. ಪೋರ್ಚುಗಲ್, ಮಿತ್ರರಾಷ್ಟ್ರದ ಪಕ್ಷವಹಿಸಿ ಹೋರಾಡಿತು. ಯುದ್ಧದ ಸಮಯದಲ್ಲಿ, ನನಗೆ 18 ಉಗ್ರಾಣಗಳನ್ನು ನೋಡಿಕೊಳ್ಳುವ ಹೊಣೆಯಿತ್ತು ಮತ್ತು ದಿನವೊಂದಕ್ಕೆ 125 ಟ್ರಕ್ಕುಗಳಷ್ಟು ಯುದ್ಧ ಸಾಮಗ್ರಿಗಳನ್ನು ನಾವು ಸಾಗಕಳುಹಿಸುತ್ತಿದ್ದೆವು.
ಯುದ್ಧದ ಭೀಕರತೆ ಹಾಗೂ ಅದರಲ್ಲಿ ಕ್ಯಾತೊಲಿಕ್ ಚರ್ಚಿನ ಆಳವಾದ ಒಳಗೂಡುವಿಕೆಯೊಂದಿಗೆ ನನ್ನನ್ನು ಬಹಳವಾಗಿ ಬಾಧಿಸಿತು. ‘ದೇವರು ಮಾನವಕುಲದ ಕುರಿತು ನಿಜವಾಗಿಯೂ ಲಕ್ಷಿಸುತ್ತಾನೋ? ನಾವು ಆತನನ್ನು ಹೇಗೆ ಆರಾಧಿಸಬೇಕು?’ ಎಂದು ನಾನು ಯೋಚಿಸತೊಡಗಿದೆ. ಕೆಲವು ವರ್ಷಗಳ ನಂತರ 1954ರಲ್ಲಿ, ಯೆಹೋವನ ಸಾಕ್ಷಿಗಳಲ್ಲೊಬ್ಬನಾದ ನಡುಹರೆಯದ ಸಭ್ಯ ಪುರುಷನು ನನ್ನಲ್ಲಿದ್ದ ಪ್ರಶ್ನೆಗಳ ಕುರಿತು ಮಾತಾಡಿದನು. ಈ ಸಂಭಾಷಣೆಯು ನನ್ನ ಸಂಪೂರ್ಣ ಜೀವಿತವನ್ನು ಬದಲಾಯಿಸಿತು.
ಬೈಬಲಿನ ನಿರೀಕ್ಷೆಯಿಂದ ರೋಮಾಂಚನಗೊಂಡದ್ದು
ಜಾಷುವ ಎಂಬ ಈ ದಯಾಪರ ವ್ಯಕ್ತಿಯು, ದೇವರ ರಾಜ್ಯ ಮಾತ್ರವೇ ಲೋಕ ಸಮಸ್ಯೆಗಳಿಗೆ ಏಕಮಾತ್ರ ಪರಿಹಾರವೆಂದು ಹಾಗೂ ರಾಜ್ಯದಾಳ್ವಿಕೆಯ ಮೂಲಕ ಮಾತ್ರವೇ ಶಾಂತಿ ಮತ್ತು ಭದ್ರತೆಯು ಸಾಧಿಸಲ್ಪಡುವುದೆಂದು ಅವರು ನನಗೆ ವಿವರಿಸಿದರು. (ಮತ್ತಾಯ 6:9, 10; 24:14) ಅವರು ಹೇಳಿರುವುದೆಲ್ಲವೂ ನನ್ನಲ್ಲಿ ಮಹಾನಂದವನ್ನು ಉಂಟುಮಾಡಿದರೂ ಧರ್ಮದೊಂದಿಗೆ ನನ್ನ ಹಿಂದಿನ ಅನುಭವದ ಕಾರಣ, ಅವರ ಅರ್ಥವಿವರಣೆಗಳನ್ನು ಸ್ವೀಕರಿಸಲು ನಾನು ಮನಸ್ಸಿಲ್ಲದವನಾಗಿದ್ದೆನು. ಬೈಬಲಭ್ಯಾಸದ ನೀಡಿಕೆಯನ್ನು ಅವರು ಮಾಡಿದಾಗಲೂ, ಹಣವನ್ನು ಕೇಳಬಾರದೆಂಬ ಹಾಗೂ ರಾಜನೀತಿಯ ಬಗ್ಗೆ ಮಾತಾಡಬಾರದೆಂಬ ಷರತ್ತುಗಳ ಮೇಲೆ ನಾನು ಅಭ್ಯಾಸವನ್ನು ಸ್ವೀಕರಿಸಿದೆನು. ಅವರು ಒಪ್ಪಿಕೊಂಡರು, ತಾವು ನೀಡುವುದೆಲ್ಲವು ಉಚಿತವಾಗಿರುವುದೆಂಬ ಭರವಸೆಯನ್ನು ಕೊಟ್ಟನು.—ಪ್ರಕಟನೆ 22:17.
ಜಾಷುವರಲ್ಲಿ ನನಗಿದ್ದ ಆತ್ಮವಿಶ್ವಾಸವು ಬಲುಬೇಗನೆ ಬೆಳೆಯಿತು. ಹೀಗಾಗಿ, ನಾನು ಬಾಲ್ಯದಿಂದಲೂ ಬಯಸಿದ ವಿಷಯವೊಂದನ್ನು ಅವರಲ್ಲಿ ಕೇಳಿಕೊಂಡೆನು. “ಬೈಬಲಿನ ನನ್ನ ವೈಯಕ್ತಿಕ ಪ್ರತಿಯನ್ನು ಪಡೆದುಕೊಳ್ಳುವುದು ನನಗೆ ಸಾಧ್ಯವೋ?” ಅದನ್ನು ಪಡೆದುಕೊಂಡ ನಂತರ, ನಮ್ಮ ಸೃಷ್ಟಿಕರ್ತನ ಸ್ವಂತ ವಾಕ್ಯದಿಂದ ಪ್ರಥಮ ಬಾರಿಗೆ ಈ ಕೆಲವು ವಾಗ್ದಾನಗಳನ್ನು ಓದುವುದು ನನಗೆಷ್ಟೋ ಹರ್ಷವನ್ನು ಉಂಟುಮಾಡಿತು: “ಆತನು ಅವರೊಡನೆ [ಮಾನವಕುಲದೊಡನೆ] ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು”!—ಪ್ರಕಟನೆ 21:3, 4.
ನಿರ್ದಿಷ್ಟವಾಗಿ, ಬಡತನ ಮತ್ತು ರೋಗಗಳ ನಿರ್ಮೂಲನದ ಕುರಿತು ಬೈಬಲಿನ ವಾಗ್ದಾನಗಳು ನನ್ನನ್ನು ಸಂತೈಸುತ್ತಿದ್ದವು. ನಂಬಿಗಸ್ತ ಪುರುಷನಾದ ಎಲೀಹು ದೇವರ ಕುರಿತು ಹೀಗಂದನು: “[ಆತನು] ಆಹಾರವನ್ನು ಧಾರಾಳವಾಗಿ ದಯಪಾಲಿಸುತ್ತಾನೆ.” (ಯೋಬ 36:31) ಮತ್ತು ದೇವರ ರಾಜ್ಯದ ನೀತಿಯುಳ್ಳ ಆಳ್ವಿಕೆಯ ಕೆಳಗೆ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂದು ಬೈಬಲನ್ನುತ್ತದೆ. (ಯೆಶಾಯ 33:24) ಯೆಹೋವ ದೇವರಿಗೆ ಮಾನವಕುಲದ ಮೇಲೆ ಎಂತಹ ಪ್ರೀತಿಪೂರ್ಣವಾದ ಆಸಕ್ತಿಯಿದೆ! ಆತನ ವಾಗ್ದಾನಗಳಲ್ಲಿ ನನಗಿರುವ ಅಭಿರುಚಿಯು ಎಷ್ಟು ಬೇಗನೆ ಬೆಳೆಯಿತು!
ನಾನು ಯೆಹೋವನ ಸಾಕ್ಷಿಗಳ ಪ್ರಥಮ ಕೂಟವನ್ನು ಏಪ್ರಿಲ್ 17, 1954ರಂದು ಹಾಜರಾದೆ. ಅದು ಕ್ರಿಸ್ತನ ಮರಣದ ಜ್ಞಾಪಕಾಚರಣೆಯ ವಿಶೇಷ ಕೂಟವಾಗಿತ್ತು. ಆ ಸಮಯದಂದಿನಿಂದ, ನಾನು ಕೂಟಗಳಿಗೆ ಕ್ರಮವಾಗಿ ಹಾಜರಾಗತೊಡಗಿದೆ. ಬಲು ಬೇಗನೆ ನಾನು ಕಲಿಯುತ್ತಿರುವ ಒಳ್ಳೆಯ ವಿಷಯಗಳನ್ನು ಇತರರಿಗೆ ಹಂಚಲು ಪ್ರಾರಂಭಿಸಿದೆ. ಆ ದಿನಗಳಲ್ಲಿ ಪೋರ್ಚುಗಲ್ನಲ್ಲಿ ನಾವು ಪ್ರತಿ ತಿಂಗಳು ಸಮುದ್ರ ತೀರದ ಬಳಿ ವಿಹಾರಕ್ಕಾಗಿ ಒಟ್ಟುಗೂಡಿಬರುತ್ತಿದ್ದೆವು ಮತ್ತು ಅನಂತರ ಅಲ್ಲಿ ದೀಕ್ಷಾಸ್ನಾನವು ನಡೆಯುತ್ತಿತ್ತು. ಜಾಷುವನು ನನ್ನೊಂದಿಗೆ ಪ್ರಥಮವಾಗಿ ಮಾತಾಡಿ ಏಳು ತಿಂಗಳುಗಳ ಅನಂತರ, ನಾನು ಯೆಹೋವ ದೇವರಿಗೆ ನನ್ನ ಸಮರ್ಪಣೆಯನ್ನು ಮಾಡಿಕೊಂಡೆ ಮತ್ತು ಸಾಗರದ ನೀರಿನಲ್ಲಿ, ದೀಕ್ಷಾಸ್ನಾನವನ್ನು ಪಡೆದುಕೊಳ್ಳುವುದರ ಮೂಲಕ ಅದನ್ನು ಸಂಕೇತಿಸಿದೆ.
1954ರ ಪ್ರಾರಂಭದಲ್ಲಿ ಇಡೀ ಪೋರ್ಚುಗಲ್ನಲ್ಲಿ ಸುಮಾರು ನೂರು ಸಾಕ್ಷಿಗಳು ಮಾತ್ರವೇ ಇದ್ದರು. ಆದುದರಿಂದ, ಸಾರುವಿಕೆಯ ಕೆಲಸದಲ್ಲಿ ಮುಂದಾಳತ್ವವನ್ನು ವಹಿಸಲು ಪುರುಷರ ಅಗತ್ಯವು ಬಹಳವಿತ್ತು. ನಾನು ತ್ವರಿತವಾಗಿ ಆತ್ಮಿಕ ಪ್ರಗತಿಯನ್ನು ಮಾಡಿದೆ, ಮತ್ತು ಬೇಗನೆ ಸಭೆಗಳಲ್ಲಿ ಜವಾಬ್ದಾರಿಗಳು ಕೊಡಲ್ಪಟ್ಟವು. 1956ರಲ್ಲಿ, ಲಿಸ್ಬನ್ನ ಯೆಹೋವನ ಸಾಕ್ಷಿಗಳ ಎರಡನೇ ಸಭೆಯಲ್ಲಿ ನಾನು ಸಭಾ ಸೇವಕನಾಗಿ ಅಂದರೆ, ಈಗ ಕರೆಯಲ್ಪಡುವಂತಹ ಅಧ್ಯಕ್ಷ್ಯ ಮೇಲ್ವಿಚಾರಕನಾಗಿ ನಿಯುಕ್ತನಾದೆ. ಇಂದು, ಈ ನಗರದಲ್ಲಿ ಮತ್ತು ಅದರ ಉಪನಗರಗಳಲ್ಲಿ ನೂರಕ್ಕಿಂತಲೂ ಹೆಚ್ಚಿನ ಸಭೆಗಳು ಇವೆ.
ಅತಿಥಿಸತ್ಕಾರ ತೋರಿಸುವುದರಿಂದ ಪ್ರಯೋಜನಪಡೆದದ್ದು
ಎಡ್ಮಿನ್ಯ ಮತ್ತು ನಾನು ಅಷ್ಟೇನೂ ಹಣವಂತರಾಗಿರದಿದ್ದರೂ, ಕ್ರೈಸ್ತ ಸಹೋದರರಿಗಾಗಿ ನಮ್ಮ ಮನೆಯ ಬಾಗಿಲು ಯಾವಾಗಲೂ ತೆರೆದಿರುತ್ತಿತ್ತು. 1955ರಲ್ಲಿ, ಬ್ರೆಸಿಲ್ನ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಸೌವಾರ್ತಿಕರೆಂದು ಕರೆಯಲ್ಪಡುತ್ತಿದ್ದ ಒಬ್ಬ ಪಯನೀಯರರು, ಜರ್ಮನಿಯಲ್ಲಿ ಜರುಗಲಿದ್ದ “ವಿಜಯಿ ರಾಜ್ಯ”ವೆಂಬ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಹಾಜರಾಗಲು ಹೋಗುತ್ತಿದ್ದಾಗ, ದಾರಿಯಲ್ಲಿ ಪೋರ್ಚುಗಲ್ನಲ್ಲಿ ನಿಂತರು. ಪ್ರಯಾಣ ಸೌಕರ್ಯಗಳ ಸಮಸ್ಯೆಗಳಿಂದಾಗಿ, ಅವರು ಒಂದು ತಿಂಗಳು ನಮ್ಮ ಮನೆಯಲ್ಲಿ ಉಳಿದರು, ಮತ್ತು ಅವರ ಭೇಟಿಯಿಂದಾಗಿ ನಾವೆಷ್ಟು ಆತ್ಮಿಕವಾಗಿ ಪ್ರಯೋಜನವನ್ನು ಪಡೆದೆವು!
ಆ ಸಮಯದಲ್ಲಿ ನಮ್ಮ ಮನೆಗೆ ಬಂದಿಳಿದ ಇತರ ಸಂದರ್ಶಕರಲ್ಲಿ ಬ್ರೂಕ್ಲಿನ್, ನ್ಯೂಯಾರ್ಕ್ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದ ಕುಟುಂಬ ಸದಸ್ಯರಾಗಿದ್ದ ಹೊಗೊ ರೀಮರ್ ಮತ್ತು ಇವರ ರೂಮ್ನಲ್ಲಿ ಜೊತೆಯಾಗಿ ವಾಸಿಸುತ್ತಿದ್ದ ಚಾರ್ಲ್ಸ್ ಐಕರ್ ಎಂಬವರು ಸೇರಿದ್ದರು. ಇವರು ನಮ್ಮೊಂದಿಗೆ ಮಧ್ಯಾಹ್ನದ ಊಟವನ್ನು ಮಾಡಿದರು ಮತ್ತು ಪೋರ್ಚುಗೀಸ್ ಸಹೋದರರಿಗೆ ಭಾಷಣಗಳನ್ನು ನೀಡಿದರು. ಹೊಸದಾಗಿ ಹೊರಬಂದಿರುವ ಮರಿಗಳು ತಮ್ಮ ತೆರೆದ ಕೊಕ್ಕಿನಿಂದ ತುಣುಕುಗಳಿಗೆ ಕಾಯುವ ಹಾಗೆ, ಇಂಥ ವ್ಯಕ್ತಿಗಳು ನೀಡುತ್ತಿರುವ ರಸಭರಿತವಾದ ಆತ್ಮಿಕ ತುಣುಕುಗಳಿಗಾಗಿ ನಾವು ಕಾಯುತ್ತಿರುತ್ತಿದ್ದೆವು.
ಯೆಹೋವನ ಸಾಕ್ಷಿಗಳ ಸಂಚಾರ ಮೇಲ್ವಿಚಾರಕರು ಸಹ ತಮ್ಮ ಸಂದರ್ಶನಗಳ ಸಮಯದಲ್ಲಿ ನಮ್ಮ ಮನೆಯಲ್ಲಿ ತಂಗುತ್ತಿದ್ದರು. 1957ರಲ್ಲಿ, ಸಹೋದರರನ್ನು ಉತ್ತೇಜಿಸಲಿಕ್ಕಾಗಿ ಪೋರ್ಚುಗಲ್ ಅನ್ನು ಸಂದರ್ಶಿಸಲು ನಿಯುಕ್ತರಾಗಿದ್ದ ಮೊರಾಕೊ ಬ್ರಾಂಚ್ ಮೇಲ್ವಿಚಾರಕರಾಗಿದ್ದ ಅಲ್ವರೂ ಬೇರೆಕೋಚೆಯ ಎಂಬವರು ಸ್ಮರಣೀಯ ಸಂದರ್ಶಕರಾದರು. ಇವರು ನನ್ನ ಮನೆಯಲ್ಲಿ ಪುಸ್ತಕಾಭ್ಯಾಸಕ್ಕೆ ಹಾಜರಾದರು, ಮತ್ತು ಉಳಿದಿರುವ ಸಮಯವನ್ನು ಪೋರ್ಚುಗಲ್ನಲ್ಲಿಯೇ ನಮ್ಮೊಂದಿಗೆ ಉಳಿಯಲು ನಾವು ಅವರನ್ನು ಪಟ್ಟುಹಿಡಿದು ಕೇಳಿಕೊಂಡೆವು. ಇವರ ಒಂದು ತಿಂಗಳ ಸಂದರ್ಶನದ ಸಮಯದಲ್ಲಿ ನಾವು ಮಹತ್ತಾಗಿ ಆಶೀರ್ವದಿಸಲ್ಪಟ್ಟೆವು ಮತ್ತು ಆತ್ಮಿಕವಾಗಿ ಪುಷ್ಟಿಗೊಳಿಸಲ್ಪಟ್ಟೆವು. ಇನ್ನೊಂದೆಡೆ, ನನ್ನ ಪ್ರಿಯ ಎಡ್ಮೀನ್ಯಳ ಒಳ್ಳೆ ಅಡಿಗೆಯ ಫಲವಾಗಿ ಅಲ್ವರೂ ಬೇರೆಕೋಚೇಯರು ದೈಹಿಕವಾಗಿ ಪುಷ್ಟರಾದರು.
ನಾನು ಬಾಲ್ಯದಲ್ಲಿ ಅನುಭವಿಸಿದಂಥ ಕಡು ಬಡತನದ ಪರಿಸ್ಥಿತಿಗಳು ಒಬ್ಬ ವ್ಯಕ್ತಿಯ ಮೇಲೆ ಆಳವಾದ ಪ್ರಭಾವವನ್ನು ಬೀರಬಲ್ಲವು. ಆದರೂ, ನಾವು ಯೆಹೋವನಿಗೆ ಮತ್ತು ಆತನ ನಂಬಿಗಸ್ತ ಸೇವಕರಿಗೆ ಹೆಚ್ಚೆಚ್ಚು ಕೊಡುತ್ತಿದ್ದಂತೆ, ಆತನು ನಮ್ಮನ್ನು ಹೆಚ್ಚೆಚ್ಚು ಆಶೀರ್ವದಿಸುವನೆಂಬುದನ್ನು ನಾನು ಗಣ್ಯಮಾಡತೊಡಗಿದೆ. ಪದೇಪದೇ, ನಮ್ಮಿಂದ ಸಾಧ್ಯವಿದ್ದವರಿಗೆಲ್ಲಾ ಅತಿಥಿಸತ್ಕಾರವನ್ನು ತೋರಿಸುತ್ತಿದ್ದಂತೆ ಈ ವಾಸ್ತವಾಂಶವು ನನ್ನನ್ನು ಪ್ರಭಾವಿಸುತ್ತಿತ್ತು.
1955ರಲ್ಲಿ, ಪೋರ್ಟೂದಲ್ಲಿ ನಡೆದ ನಮ್ಮ ಅಧಿವೇಶನದಲ್ಲಿ, ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನವು, 1958ರಲ್ಲಿ ನ್ಯೂಯಾರ್ಕ್ ಸಿಟಿಯಲ್ಲಿರುವ ಯಾಂಕಿ ಕ್ರೀಡಾಂಗಣದಲ್ಲಿ ನಡೆಯಲಿದೆಯೆಂಬ ಪ್ರಕಟಣೆಯೊಂದನ್ನು ಮಾಡಲಾಯಿತು. ಪೋರ್ಚುಗಲ್ನಲ್ಲಿ ರಾಜ್ಯ ಸಭಾಗೃಹಗಳು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರೂ, ಈ ಅಧಿವೇಶನಕ್ಕೆ ಪೋರ್ಚುಗೀಸ್ ಪ್ರತಿನಿಧಿಗಳನ್ನು ಕಳುಹಿಸಲು ಹಣ ಸಹಾಯನೀಡಲಿಕ್ಕಾಗಿ ಪ್ರತಿಯೊಂದು ಸಭೆಯಲ್ಲಿ ಕಾಣಿಕೆ ಪೆಟ್ಟಿಗೆಯೊಂದನ್ನು ಇಡಲಾಗಿತ್ತು. ಈ ಅಧಿವೇಶನಕ್ಕೆ ನನ್ನ ಹೆಂಡತಿಯನ್ನು ಮತ್ತು ನನ್ನನ್ನು ಅಲ್ಲಿನ ಪ್ರತಿನಿಧಿಗಳಾಗಿ ಆರಿಸಲಾಗಿದೆ ಎಂಬುದನ್ನು ಕೇಳಿದಾಗ ನಮಗಾದ ಸಂತೋಷವನ್ನು ನೀವು ಊಹಿಸಿಕೊಳ್ಳಬಲ್ಲಿರೋ? ಅಮೆರಿಕದ ಆ ಅಧಿವೇಶನಕ್ಕೆ ನಾವು ಹಾಜರಾಗುತ್ತಿದ್ದಾಗಲೇ, ಯೆಹೋವನ ಸಾಕ್ಷಿಗಳ ಬ್ರೂಕ್ಲಿನಿನ ಜಾಗತಿಕ ಮುಖ್ಯಕಾರ್ಯಾಲಯವನ್ನು ಭೇಟಿಮಾಡುವುದು ಎಷ್ಟೊಂದು ಹರ್ಷವನ್ನು ತಂದಿದ್ದಿರಬೇಕು!
ಹಿಂಸೆಯನ್ನು ತಾಳಿಕೊಳ್ಳುವುದು
1962ರಲ್ಲಿ, ಯೆಹೋವನ ಸಾಕ್ಷಿಗಳ ಸಾರುವ ಕೆಲಸವು ಪೋರ್ಚುಗಲ್ನಲ್ಲಿ ನಿಷೇಧಿಸಲ್ಪಟ್ಟಿತು. ಮತ್ತು ಮಿಷನೆರಿಗಳಾದ ಎರಿಕ್ ಬ್ರಿಟನ್, ಡಾಮನಿಕ್ ಪಿಕೋನೀ, ಎರಿಕ್ ಬೆವ್ರಿಜ್ ಮತ್ತು ಇವರೆಲ್ಲರ ಪತ್ನಿಯರು ದೇಶದಿಂದ ಹೊರಕಳುಹಿಸಲ್ಪಟ್ಟರು. ಇದಾದನಂತರ, ರಾಜ್ಯ ಸಭಾಗೃಹಗಳಲ್ಲಿ ನಮ್ಮ ಕೂಟಗಳನ್ನು ನಡೆಸುವುದಕ್ಕೆ ಅನುಮತಿಯು ನಮಗಿರಲಿಲ್ಲವಾದುದರಿಂದ, ನಾವದನ್ನು ಖಾಸಗಿ ಮನೆಗಳಲ್ಲಿ ಗುಪ್ತವಾಗಿ ನಡೆಸಿದೆವು. ಮುಂದೆ ಪೋರ್ಚುಗಲ್ನಲ್ಲಿ ದೊಡ್ಡ ಅಧಿವೇಶನಗಳನ್ನು ನಡೆಸುವುದಕ್ಕೂ ನಮಗೆ ಸಾಧ್ಯವಿರಲಿಲ್ಲ. ಆದುದರಿಂದ, ನಮ್ಮ ಸಹೋದರ ಮತ್ತು ಸಹೋದರಿಯರು ಬೇರೆ ದೇಶಗಳಲ್ಲಿ ಇಂತಹ ಅಧಿವೇಶನಗಳಿಗೆ ಹಾಜರಾಗಲು ಪ್ರಯಾಣ ಸೌಕರ್ಯಗಳನ್ನು ಏರ್ಪಡಿಸುವುದು ನನ್ನ ಜವಾಬ್ದಾರಿಯಾಯಿತು.
ಹೆಚ್ಚು ಸಂಖ್ಯೆಯಲ್ಲಿದ್ದ ಸಾಕ್ಷಿಗಳನ್ನು ಬೇರೆ ದೇಶಗಳಿಗೆ ಕಳುಹಿಸುವ ಪ್ರಯಾಣದ ಏರ್ಪಾಡನ್ನು ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ, ಪೋರ್ಚುಗಲ್ನ ಸಹೋದರರು ಪಡೆದ ಅದ್ಭುತಕರವಾದ ಆತ್ಮಿಕ ಪ್ರಯೋಜನಗಳನ್ನೆಲ್ಲಾ ಪರಿಗಣಿಸುವಾಗ, ಪ್ರಯಾಸವು ನಿಜವಾಗಿಯೂ ಸಾರ್ಥಕವೆನಿಸುತ್ತದೆ. ಸ್ವಿಟ್ಸರ್ಲೆಂಡ್, ಇಂಗ್ಲೆಂಡ್, ಇಟಲಿ ಮತ್ತು ಫ್ರಾನ್ಸ್ನ ಅಧಿವೇಶನಗಳಿಗೆ ಹಾಜರಾಗುವುದು ಅವರಿಗೆಷ್ಟು ಭಕ್ತಿವೃದ್ಧಿಯನ್ನುಂಟುಮಾಡುವ ಅನುಭವವಾಗಿತ್ತು! ತಮ್ಮ ದೇಶವಾದ ಪೋರ್ಚುಗಲ್ಗೆ ಸಾಹಿತ್ಯಗಳನ್ನು ಹೊತ್ತುತರುವುದಕ್ಕೂ ಇಂತಹ ಅಧಿವೇಶನಗಳು ಅವಕಾಶಗಳನ್ನು ಮಾಡಿಕೊಟ್ಟವು. ಆ ವರ್ಷಗಳಲ್ಲಿ, ಪೋರ್ಚುಗಲ್ನಲ್ಲಿ ನಮ್ಮನ್ನು ಒಂದು ಧಾರ್ಮಿಕ ಸಂಸ್ಥೆಯಾಗಿ ನೋಂದಣಿ ಮಾಡಬೇಕೆಂದು ನಾವು ಅಸಂಖ್ಯಾತ ವಿನಂತಿಗಳನ್ನು ಮಾಡಿದೆವಾದರೂ, ನಮ್ಮ ಎಲ್ಲಾ ವಿನಂತಿಗಳು ತಿರಸ್ಕರಿಸಲ್ಪಟ್ಟವು.
1962ರ ಪ್ರಾರಂಭದಲ್ಲಿ ಮಿಷನೆರಿಗಳು ಹೊರಕಳುಹಿಸಲ್ಪಟ್ಟ ನಂತರ, ಗುಪ್ತ ಪೋಲಿಸ್ದಳವು ನಮ್ಮ ಸಾರುವ ಕೆಲಸವನ್ನು ನಿಲ್ಲಿಸಲು ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದಕ್ಕೆ ಪ್ರಾರಂಭಿಸಿತು. ನಮ್ಮ ಸಹೋದರ ಮತ್ತು ಸಹೋದರಿಯರ ದೊಡ್ಡ ಗುಂಪೊಂದನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಘಟನೆಗಳ ಸಾಕ್ಷ್ಯವಿರುವ ವರದಿಗಳು ಈ ಪತ್ರಿಕೆಯಲ್ಲಿ ಹಾಗೂ ಇದರ ಜೊತೆ ಪತ್ರಿಕೆಯಾಗಿರುವ ಎಚ್ಚರ! (ಇಂಗ್ಲಿಷ್) ಪತ್ರಿಕೆಯಲ್ಲಿ ಪ್ರಕಾಶಿಸಲ್ಪಟ್ಟಿವೆ.a
ಸಾರುವುದಕ್ಕಾಗಿ ಬಂಧಿಸಲ್ಪಟ್ಟವರಲ್ಲಿ ದೇವರ ರಾಜ್ಯದ ಸುವಾರ್ತೆಯನ್ನು ನನಗೆ ಪರಿಚಯಮಾಡಿಸಿಕೊಟ್ಟ ಒಬ್ಬ ಪಯನೀಯರ್ ಇದ್ದರು. ನನ್ನ ವಿಳಾಸವು ಅವರ ಸಾಮಾನುಗಳಲ್ಲಿ ಪೊಲೀಸರ ಕೈಗೆ ಸಿಕ್ಕಿದ್ದರಿಂದ, ನನ್ನನ್ನು ಅವರು ಕರೆಕಳುಹಿಸಿದರು ಮತ್ತು ಪರಿಪ್ರಶ್ನಿಸಿದರು.
ತದನಂತರ, ಇಬ್ಬರು ಪೊಲೀಸ್ ಪ್ರತಿನಿಧಿಗಳು ನನ್ನ ಮನೆಯನ್ನು ಸಂದರ್ಶಿಸಿದರು. ಅವರು ನನ್ನ ಬೈಬಲ್ ಅಭ್ಯಾಸದ ಸಹಾಯಕಗಳನ್ನು ಮಾತ್ರವಲ್ಲ, ಬೈಬಲಿನ 13 ಪ್ರತಿಗಳನ್ನು ವಶಪಡಿಸಿಕೊಂಡರು. ಅವರು ತಮ್ಮ ಕಿರುಕುಳವನ್ನು ಮುಂದರಿಸುತ್ತಾ ಒಟ್ಟಿಗೆ ಏಳು ಬಾರಿ, ಬೇರೆ ಬೇರೆ ಸಮಯದಲ್ಲಿ ನಮ್ಮ ವಠಾರವನ್ನು ಶೋಧಿಸಲು ಮರಳಿ ಬರುತ್ತಿದ್ದರು. ಪ್ರತಿ ಸಲ, ಅವರು ಪ್ರಶ್ನೆಗಳ ಸುರಿಮಳೆಯನ್ನು ನಮ್ಮ ಮೇಲೆ ಸುರಿಸುತ್ತಿದ್ದರು.
ನ್ಯಾಯಾಲಯದ ಮೊಕದ್ದಮೆಗಳಲ್ಲಿ ಜೊತೆ ಸಾಕ್ಷಿಗಳ ಪರವಾಗಿ ಸಾಕ್ಷ್ಯನೀಡಲು ಹಲವು ಬಾರಿ ನನ್ನನ್ನು ಕರೆಕಳುಹಿಸುತ್ತಿದ್ದರು. ನನಗೆ ಹೆಚ್ಚು ಐಹಿಕ ಶಿಕ್ಷಣವಿಲ್ಲದಿದ್ದರೂ, “ವಿರೋಧಿಗಳೆಲ್ಲರೂ ಎದುರುನಿಲ್ಲುವದಕ್ಕೂ ಎದುರುಮಾತಾಡುವದಕ್ಕೂ ಆಗದಂಥ ಬಾಯನ್ನೂ ಬುದ್ಧಿಯನ್ನೂ” ಯೆಹೋವನು ನನಗೆ ಕೊಟ್ಟಿದ್ದಾನೆ. (ಲೂಕ 21:15) ಒಂದು ಸಂದರ್ಭದಲ್ಲಿ, ನ್ಯಾಯಾಧೀಶರು ನನ್ನ ಸಾಕ್ಷ್ಯದಿಂದ ಎಷ್ಟು ಬೆರಗಾದರೆಂದರೆ ನಾನು ಎಷ್ಟು ವಿದ್ಯಾಭ್ಯಾಸವನ್ನು ಮಾಡಿದ್ದೇನೆ ಎಂದು ಕೇಳಿದರು. ನಾನು ಕೇವಲ ನಾಲ್ಕನೇ ಕ್ಲಾಸಿನ ವರೆಗೆ ಓದಿದ್ದೇನೆಂದು ಹೇಳಿದಾಗಲಂತೂ, ನ್ಯಾಯಾಲಯ ಪ್ರಾಂಗಣದಲ್ಲಿದ್ದವರೆಲ್ಲರೂ ನಕ್ಕುಬಿಟ್ಟರು.
ಹಿಂಸೆಯು ಹೆಚ್ಚಾದಂತೆ, ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯಿಸುವವರ ಸಂಖ್ಯೆಯೂ ಬೆಳೆಯುತ್ತಾ ಹೋಯಿತು. ಹೀಗೆ, 1962ರಲ್ಲಿ ಪೋರ್ಚುಗಲ್ನಲ್ಲಿ 1,300ಕ್ಕಿಂತಲೂ ಕಡಿಮೆ ಸಾಕ್ಷಿಗಳಿದ್ದವರು 1974ರಷ್ಟಕ್ಕೆ 13,000ಕ್ಕಿಂತಲೂ ಹೆಚ್ಚಾದರು! ಕಾಲಕ್ರಮೇಣ, ಮೇ 1967ರಲ್ಲಿ ಸಂಚರಣ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸುವ ಆಮಂತ್ರಣವು ನನಗೆ ನೀಡಲಾಯಿತು. ಈ ಕೆಲಸದಲ್ಲಿದ್ದಾಗ, ಯೆಹೋವನ ಸಾಕ್ಷಿಗಳ ಸಭೆಗಳನ್ನು ಆತ್ಮಿಕವಾಗಿ ಬಲಪಡಿಸುವುದಕ್ಕಾಗಿ ಅವರನ್ನು ಸಂದರ್ಶಿಸುತ್ತಿದ್ದೆನು.
ಅತಿ ಶ್ರೇಷ್ಠ ಸಿರಿತನದಲ್ಲಿ ಆನಂದಿಸುವುದು
ಡಿಸೆಂಬರ್ 1974ರಲ್ಲಿ, ಪೋರ್ಚುಗಲ್ನಲ್ಲಿ ಯೆಹೋವನ ಸಾಕ್ಷಿಗಳ ಕೆಲಸವನ್ನು ಕಾನೂನುಬದ್ಧವಾಗಿ ನೋಂದಣಿ ಮಾಡುವ ಸುಯೋಗದಲ್ಲಿ ನಾನು ಒಳಗೂಡಿದೆ. ಮರುವರ್ಷವೇ ನನ್ನ ಹೆಂಡತಿ ಮತ್ತು ನಾನು ಈಶ್ಟರೀಲ್ನಲ್ಲಿನ ಯೆಹೋವನ ಸಾಕ್ಷಿಗಳ ಬೆತೆಲ್ ಪರಿವಾರದ ಸದ್ಯಸರಾದೆವು. ಪೋರ್ಚುಗಲ್ನ ಬ್ರಾಂಚ್ ಕಮಿಟಿಯ ಸದಸ್ಯನಾಗಿ ಸೇವೆ ಸಲ್ಲಿಸುವುದಕ್ಕೂ ನಾನು ನಿಯುಕ್ತನಾದೆ.
ಪೋರ್ಚುಗಲ್ನಲ್ಲಿ ಮತ್ತು ನಮ್ಮ ಶಾಖೆಯ ಮೇಲ್ವಿಚಾರಣೆಯ ಕೆಳಗಿರುವ ಕ್ಷೇತ್ರಗಳಲ್ಲಿ ಸಾರುವ ಕೆಲಸವು ಸಮೃದ್ಧವಾಗಿ ಫಲಕೊಡುವುದನ್ನು ನೋಡುವುದು ನಮಗೆಷ್ಟು ಹರ್ಷದಾಯಕವಾಗಿತ್ತು! ಇದರಲ್ಲಿ ಅಂಗೋಲ, ಎಸೋರ್ಸ್, ಕೇಫ್ ವರ್ಡ್, ಮಡಿರ, ಸಾವು ಟಮೆ ಮತ್ತು ಪ್ರಿನ್ಸಿಪ್ ಅನ್ನು ಒಳಗೊಂಡಿದ್ದವು. ಅನೇಕ ವರ್ಷಗಳಿಂದಲೂ ರಾಜ್ಯದ ಸಂದೇಶಕ್ಕೆ ತೀವ್ರ ಆಸಕ್ತಿಯನ್ನು ತೋರಿಸುತ್ತಿರುವ ಪ್ರದೇಶಗಳಲ್ಲಿ ಸೇವೆಸಲ್ಲಿಸಲು ಪೋರ್ಚುಗಲ್ನಿಂದ ಕಳುಹಿಸಲ್ಪಟ್ಟ ಮಿಷನೆರಿಗಳನ್ನು ಕಾಣುವುದು ಬಹಳ ರೋಮಾಂಚಕಾರಿಯಾಗಿರುತ್ತದೆ. ಈ ಸ್ಥಳಗಳಲ್ಲಿ ಈಗ 88,000ಕ್ಕಿಂತಲೂ ಹೆಚ್ಚು ರಾಜ್ಯ ಘೋಷಕರು ಇದ್ದಾರೆಂಬುದನ್ನು ಕೇಳುವಾಗ ನಮ್ಮ ಹರ್ಷವನ್ನು ಊಹಿಸಿಕೊಳ್ಳಿ. ಪೋರ್ಚುಗಲ್ನಲ್ಲಿಯೇ 47,000ಕ್ಕಿಂತಲೂ ಹೆಚ್ಚು ಸೌವಾರ್ತಿಕರು ಇದ್ದಾರೆ! ಈ ದೇಶಗಳಲ್ಲಿ 1954ರಲ್ಲಿ ನಾನೊಬ್ಬ ಸಾಕ್ಷಿಯಾದಾಗ ಜ್ಞಾಪಕಾಚರಣೆಯ ಹಾಜರಿಯು ಕೇವಲ 200ಕ್ಕಿಂತಲೂ ಕಡಿಮೆಯಿದ್ದದ್ದನ್ನು ಹೋಲಿಸುವಾಗ, ಅದು 1998ರಲ್ಲಿ 2,45,000ದ ಉಚ್ಚಾಂಕಕ್ಕೆ ಮುಟ್ಟಿತು.
“ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ” ಎಂದು ಹೇಳಿದ ಬೈಬಲ್ ಕೀರ್ತನೆಗಾರನ ಮಾತುಗಳೊಂದಿಗೆ ಎಡ್ಮೀನ್ಯ ಮತ್ತು ನಾನು ಮನಃಪೂರ್ವಕವಾಗಿ ಸಮ್ಮತಿಸುತ್ತೇವೆ. (ಕೀರ್ತನೆ 84:10) ನನ್ನ ಹಿಂದಿನ ಆ ಸಣ್ಣ ಪ್ರಾರಂಭಗಳನ್ನು ಯೋಚಿಸಿ, ಅಂದಿನಿಂದ ಇಂದಿನವರೆಗೂ ಅನುಭವಿಸಿರುವ ಆತ್ಮಿಕ ಐಶ್ವರ್ಯಗಳೊಂದಿಗೆ ಅವುಗಳನ್ನು ಹೋಲಿಸುವಾಗ, ಪ್ರವಾದಿ ಯೆಶಾಯನು ಭಾವಿಸಿದಂತೆಯೇ ನನಗೂ ಅನಿಸಿಕೆಯಾಗುತ್ತದೆ: “ಯೆಹೋವನೇ, ನೀನೇ ನನ್ನ ದೇವರು . . . ನಿನ್ನನ್ನು ಕೊಂಡಾಡುವೆನು, ನಿನ್ನ ನಾಮವನ್ನು ಮಹಿಮೆಗೊಳಿಸುವೆನು. ನೀನು ದೀನರಿಗೆ ಕೋಟೆ, ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣದುರ್ಗವು ಆಗಿದ್ದೀ.”—ಯೆಶಾಯ 25:1, 4.
[ಅಧ್ಯಯನ ಪ್ರಶ್ನೆಗಳು]
a ಮೇ 22, 1964ರ ಎಚ್ಚರ! (ಇಂಗ್ಲೀಷ್) ಪತ್ರಿಕೆಯ ಪುಟ 8-16, ಮತ್ತು ಅಕ್ಟೋಬರ್ 1, 1966ರ ಕಾವಲಿನಬುರುಜು (ಇಂಗ್ಲೀಷ್) ಪುಟ 581-92ನ್ನು ನೋಡಿರಿ.
[ಪುಟ 24 ರಲ್ಲಿರುವ ಚಿತ್ರಗಳು]
ಮೇಲುಗಡೆ: 1958ರ ನ್ಯೂಯಾರ್ಕ್ ಅಧಿವೇಶನಕ್ಕೆ ಪ್ರತಿನಿಧಿಗಳನ್ನು ಕಳುಹಿಸುವ ಏರ್ಪಾಡನ್ನು ಲಿಸ್ಬನ್ನಲ್ಲಿ ಸಹೋದರ ಆಲ್ಮೆಡ ಪ್ರಕಟಿಸುತ್ತಿರುವುದು
ಮಧ್ಯ: ಪ್ಯಾರಿಸ್ನಲ್ಲಿ ನಡೆದ “ಭೂಮಿಯಲ್ಲಿ ಶಾಂತಿ” ಎಂಬ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾದರಿ ಸೇವಕರ ಕೂಟವನ್ನು ನಡೆಸುತ್ತಿರುವುದು
ಕೆಳಗಡೆ: ಫ್ರಾನ್ಸಿನ ಜಿಲ್ಲಾ ಅಧಿವೇಶನಕ್ಕೆ ಬಾಡಿಗೆಯ ಬಸ್ಸುಗಳು ಸಜ್ಜಾಗುತ್ತಿರುವುದು
[ಪುಟ 25 ರಲ್ಲಿರುವ ಚಿತ್ರ]
ಪೋರ್ಚುಗಲ್ನ ಬ್ರಾಂಚ್ನಲ್ಲಿ ಬೆಳಗಿನ ಆರಾಧನೆಯನ್ನು ನಿರ್ವಹಿಸುತ್ತಿರುವುದು
[ಪುಟ 25 ರಲ್ಲಿರುವ ಚಿತ್ರ]
ಪೋರ್ಚುಗಲ್ ಬ್ರಾಂಚ್, 1988ರಲ್ಲಿ ಸಮರ್ಪಿಸಲಾಯಿತು
[ಪುಟ 26 ರಲ್ಲಿರುವ ಚಿತ್ರ]
ಬ್ರೂಕ್ಲಿನ್ ಬೆತೆಲಿನಿಂದ ಸಂದರ್ಶಿಸಿದ ಸಹೋದರ ಹೊಗೊ ರೀಮರ್ರ ಭಾಷಣಗಳು ಹುರಿದುಂಬಿಸಿದವು
[ಪುಟ 26 ರಲ್ಲಿರುವ ಚಿತ್ರ]
ನನ್ನ ಹೆಂಡತಿಯೊಂದಿಗೆ