ನಮೀಬಿಯಾದಲ್ಲಿ ಜೀವಂತ ರತ್ನಮಣಿಗಳಿವೆ!
ನಮೀಬಿಯಾವು ಆಫ್ರಿಕದ ನೈರುತ್ಯ ತೀರದಲ್ಲಿ ನೆಲೆಸಿದ್ದು, ಸುಮಾರು 1,500 ಕಿಲೊಮೀಟರುಗಳಷ್ಟು ದೂರದ ವರೆಗೆ ಚಾಚಿಕೊಂಡಿದೆ. ಈ ದೇಶದ ಇಡೀ ತೀರಪ್ರದೇಶಗಳಲ್ಲಿ ಮರಳ ರಾಶಿಗಳು, ಬಂಡೆಗಳಿಂದ ಕೂಡಿರುವ ಗುಡ್ಡಗಳು, ಮತ್ತು ವಿಸ್ತಾರವಾಗಿ ಹರಡಿಕೊಂಡಿರುವ ಜಲ್ಲಿಕಲ್ಲುಗಳ ಬಯಲುಗಳಿವೆ. ನಮೀಬಿಯಾದ ಸಮುದ್ರ ತೀರದಲ್ಲಿರುವ ಸಣ್ಣ ಉರುಟು ಕಲ್ಲುಗಳ ನಡುವೆ ಬಣ್ಣಬಣ್ಣದ ರತ್ನಶಿಲೆಗಳು ಅಡಕವಾಗಿವೆ. ಕೆಲವೊಮ್ಮೆ ಇಲ್ಲಿ ವಜ್ರಗಳು ಸಹ ಸಿಗುತ್ತವೆ. ಆದರೆ, ಈ ದೇಶದಲ್ಲಿ ಇಂತಹ ಕಲ್ಲುಗಳಿಗಿಂತಲೂ ಹೆಚ್ಚು ಅಮೂಲ್ಯವಾದದ್ದೊಂದು ಇದೆ. ಅವು ನಮೀಬಿಯಾದ ಜೀವಂತ ರತ್ನಮಣಿಗಳಾಗಿವೆ. ಅಂದರೆ ಅದರ ಅನೇಕ ರಾಷ್ಟ್ರೀಯ ಗುಂಪುಗಳ ಜನರೇ ಆ ರತ್ನಮಣಿಗಳಾಗಿದ್ದಾರೆ.
ನಮೀಬಿಯಾದ ಅತ್ಯಂತ ಹಳೆಯ ಮೂಲನಿವಾಸಿಗಳು ಖಾಯ್ಸಾನ್ ಎಂದು ಕರೆಯಲ್ಪಡುವ ಮೂಲಭಾಷೆಯನ್ನು ಮಾತಾಡುತ್ತಿದ್ದರು. ಅವರ ಮಾತು ಕ್ಲಿಕ್ ಎಂಬ ಶಬ್ದಗಳಿಗೆ ಪ್ರಸಿದ್ಧವಾಗಿತ್ತು. ಇಂದು ಖಾಯ್ಸನ್ ಭಾಷೆಯನ್ನು ಮಾತಾಡುವವರಲ್ಲಿ, ಕಪ್ಪುವರ್ಣದ ಡಾಮಾರಾ ಜನರು ಹಾಗೂ ಗಿಡ್ಡರೂ ಬಿಳಿ ವರ್ಣದವರೂ ಆದ ನಾಮಾ ಜನರು, ಮತ್ತು ಪೊದೆಗಾಡಿನ ಪ್ರಸಿದ್ಧ ಬೇಟೆಗಾರರು ಸೇರಿದ್ದಾರೆ. ಇತ್ತೀಚಿನ ಶತಮಾನಗಳಲ್ಲಿ, ಅನೇಕ ಕಪ್ಪುವರ್ಣದ ಕುಲಗಳು ಸಹ ನಮೀಬಿಯಾಕ್ಕೆ ಬಂದು ನೆಲೆಸಿವೆ. ಇವುಗಳನ್ನು ವಿಶೇಷವಾಗಿ ಮೂರು ಜಾತಿಗಳಾಗಿ ವಿಂಗಡಿಸಲಾಗಿದೆ: ಓವ್ಯಾಂಬೊ (ನಮೀಬಿಯಾದಲ್ಲಿರುವ ಅತಿ ದೊಡ್ಡ ಕುಲ), ಹರೆರೊ, ಮತ್ತು ಕವ್ಯಾಂಗೊ. 19ನೆಯ ಶತಮಾನದಲ್ಲಿ ಯೂರೋಪಿಯನರು ನಮೀಬಿಯಾಕ್ಕೆ ಬಂದು ನೆಲೆಸಲು ಆರಂಭಿಸಿದರು. ಮರಳುಗಾಡಿನ ಮರಳಿನಲ್ಲಿ ವಜ್ರಗಳು ಸಿಕ್ಕಿದ ಬಳಿಕ, ಅನೇಕ ವಲಸೆಗಾರರು ನಮೀಬಿಯಾಕ್ಕೆ ಬರತೊಡಗಿದರು.
ನಮೀಬಿಯಾದ ನಿವಾಸಿಗಳು ತುಂಬ ಅಮೂಲ್ಯರಾಗಿದ್ದಾರೆ. ಏಕೆಂದರೆ, ಅವರು ನಿತ್ಯಜೀವಕ್ಕೆ ಮಾರ್ಗವನ್ನು ತೆರೆಯುತ್ತಾ, ಯಾರಿಗೋಸ್ಕರ ದೇವರು ತನ್ನ ಮಗನನ್ನು ಕೊಟ್ಟನೋ ಆ ಮಾನವಕುಲದ ಲೋಕದ ಭಾಗವಾಗಿದ್ದಾರೆ. (ಯೋಹಾನ 3:16) ನಮೀಬಿಯಾದ ಬೇರೆ ಬೇರೆ ಕುಲಗಳಿಂದ ಬಂದ ನೂರಾರು ಜನರು ಈಗಾಗಲೇ ರಕ್ಷಣೆಯ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ. ಇವರನ್ನು ರತ್ನಶಿಲೆಗಳಿಗೆ ಹೋಲಿಸಸಾಧ್ಯವಿದೆ. ಏಕೆಂದರೆ, ಯೆಹೋವನ ಆರಾಧನಾಲಯಕ್ಕೆ ಒಟ್ಟುಗೂಡಿಸಲ್ಪಡುತ್ತಿರುವ “ಸಮಸ್ತಜನಾಂಗಗಳ ಇಷ್ಟವಸ್ತುಗಳ” ನಡುವೆ ಇವರೂ ಸೇರಿದ್ದಾರೆ.—ಹಗ್ಗಾಯ 2:7.
ಆತ್ಮಿಕ ಗಣಿಗಾರಿಕೆಯು ಆರಂಭಗೊಳ್ಳುತ್ತದೆ
1928ರಲ್ಲಿ, ನಮೀಬಿಯಾದಲ್ಲಿರುವ ಆತ್ಮಿಕ ರತ್ನಮಣಿಗಳನ್ನು ಗಣಿಯಿಂದ ಅಗೆದುತೆಗೆಯುವ ಕೆಲಸವು ಆರಂಭವಾಯಿತು. ಆ ವರ್ಷದಲ್ಲಿ ದಕ್ಷಿಣ ಆಫ್ರಿಕದ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸು, ಆ ದೇಶದಾದ್ಯಂತ ಚದರಿಹೋಗಿದ್ದ ಜನರಿಗೆ ಬೈಬಲ್ ಸಾಹಿತ್ಯದ 50,000 ಪ್ರತಿಗಳನ್ನು ರವಾನಿಸಿತು. ಮುಂದಿನ ವರ್ಷ ದಕ್ಷಿಣ ಆಫ್ರಿಕದ ಲೀನೀ ಟೆರನ್ ಎಂಬ ಹೆಸರಿನ ಒಬ್ಬ ಅಭಿಷಿಕ್ತ ಕ್ರೈಸ್ತೆ, ಆಸಕ್ತಿಯನ್ನು ತೋರಿಸಿದ ಜನರಿಗೆ ಪುನರ್ಭೇಟಿ ಮಾಡಿದರು. ನಾಲ್ಕೇ ತಿಂಗಳುಗಳಲ್ಲಿ, ವಿಸ್ತಾರವಾಗಿದ್ದ ದೇಶದಾದ್ಯಂತ ಅವರೊಬ್ಬರೇ ಸಂಚರಿಸಿ, ಆಫ್ರಿಕಾನ್ಸ್, ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಲ್ಲಿ 6,000ಕ್ಕಿಂತಲೂ ಹೆಚ್ಚು ಬೈಬಲ್ ಅಭ್ಯಾಸಕ್ಕಾಗಿರುವ ಸಹಾಯಕಗಳನ್ನು ನೀಡಿದರು. ಖಂಡಿತವಾಗಿಯೂ ಅವರ ಈ ಎಲ್ಲ ಕೆಲಸವು ವ್ಯರ್ಥವಾಗಲಿಲ್ಲ.
ಉದಾಹರಣೆಗಾಗಿ, ಬರ್ನ್ಹಾರ್ಟ್ ಬಾಡೆ ಎಂಬ ಒಬ್ಬ ಜರ್ಮನ್ ಗಣಿಕೆಲಸಗಾರನನ್ನು ಪರಿಗಣಿಸಿರಿ. 1929ರಲ್ಲಿ ಇವನು ಒಬ್ಬ ರೈತನಿಂದ ಮೊಟ್ಟೆಗಳನ್ನು ಕೊಂಡುಕೊಳ್ಳುತ್ತಿದ್ದನು. ಆ ರೈತನು ವಾಚ್ ಟವರ್ ಪ್ರಕಾಶನದ ಪುಟಗಳನ್ನು ಹರಿದು, ಆ ಪುಟಗಳಲ್ಲಿ ಪ್ರತಿಯೊಂದು ಮೊಟ್ಟೆಯನ್ನು ಪ್ಯಾಕ್ಮಾಡಿ ಕಳುಹಿಸುತ್ತಿದ್ದನು. ಬರ್ನ್ಹಾರ್ಟ್ ಕಾತುರದಿಂದ ಪ್ರತಿಯೊಂದು ಪುಟವನ್ನು ಓದುತ್ತಾ, ಈ ಪುಸ್ತಕವನ್ನು ಯಾರು ಬರೆದಿರಬಹುದೆಂದು ಕುತೂಹಲಪಡುತ್ತಿದ್ದನು. ಕಟ್ಟಕಡೆಗೆ ಅವನಿಗೆ ಕೊನೆಯ ಪುಟವು ಸಿಕ್ಕಿತು, ಮತ್ತು ಅದರಲ್ಲಿ ವಾಚ್ ಟವರ್ ಸೊಸೈಟಿಯ ಜರ್ಮನ್ ವಿಳಾಸವು ಕೊಡಲ್ಪಟ್ಟಿತ್ತು. ಆ ವಿಳಾಸವನ್ನು ಉಪಯೋಗಿಸಿ ಬರ್ನ್ಹಾರ್ಟ್ ಹೆಚ್ಚಿನ ಸಾಹಿತ್ಯವನ್ನು ಕಳುಹಿಸುವಂತೆ ಸೊಸೈಟಿಗೆ ಪತ್ರ ಬರೆದನು ಮತ್ತು ಸತ್ಯಕ್ಕಾಗಿ ದೃಢವಾದ ನಿಲುವನ್ನು ತೆಗೆದುಕೊಂಡ ನಮೀಬಿಯಾದ ಪ್ರಪ್ರಥಮ ಸಾಕ್ಷಿಯಾಗಿ ಪರಿಣಮಿಸಿದನು.
ಪೂರ್ಣ ಸಮಯದ ಕೆಲಸಗಾರರು ಆಗಮಿಸುತ್ತಾರೆ
1950ರಲ್ಲಿ, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನಲ್ಲಿ ತರಬೇತಿಯನ್ನು ಪಡೆದುಕೊಂಡ ನಾಲ್ಕು ಮಿಷನೆರಿಗಳು ನಮೀಬಿಯಾಕ್ಕೆ ಬಂದರು. 1953ರಷ್ಟಕ್ಕೆ, ಮಿಷನೆರಿಗಳ ಸಂಖ್ಯೆಯು ಎಂಟಕ್ಕೆ ಏರಿತು. ಅವರಲ್ಲಿ ಆಸ್ಟ್ರೇಲಿಯದ ವಿವಾಹಿತ ದಂಪತಿಗಳಾದ ಡಿಕ್ ಮತ್ತು ಕಾರಲೀ ವಾಲ್ಡ್ರನ್ ಸಹ ಸೇರಿದ್ದರು. ಇವರು ಈಗಲೂ ನಮೀಬಿಯಾದಲ್ಲಿ ನಂಬಿಗಸ್ತಿಕೆಯಿಂದ ಸೇವೆಮಾಡುತ್ತಿದ್ದಾರೆ. ದಕ್ಷಿಣ ಆಫ್ರಿಕದಿಂದ ಮತ್ತು ಇನ್ನಿತರ ಸ್ಥಳಗಳಿಂದ ಬಂದ ಅನೇಕ ಪೂರ್ಣ ಸಮಯದ ರಾಜ್ಯ ಘೋಷಕರು ಸಹ, ನಮೀಬಿಯಾದ ಆತ್ಮಿಕ ರತ್ನಮಣಿಗಳನ್ನು ಗಣಿಯಿಂದ ಅಗೆದುತೆಗೆಯುವ ಕೆಲಸದಲ್ಲಿ ಪಾಲ್ಗೊಂಡಿದ್ದಾರೆ. ಇತರ ಮಿಷನೆರಿಗಳು, ಮತ್ತು ಮಿನಿಸ್ಟೀರಿಯಲ್ ಟ್ರೈನಿಂಗ್ ಸ್ಕೂಲಿನ ಪದವೀಧರರು ಸಹ ನಮೀಬಿಯಾಕ್ಕೆ ಕಳುಹಿಸಲ್ಪಟ್ಟಿದ್ದಾರೆ.
ನಮೀಬಿಯಾದಲ್ಲಿ ಆತ್ಮಿಕ ಬೆಳವಣಿಗೆಗೆ ಸಹಾಯ ಮಾಡುವ ಇನ್ನೊಂದು ಅಂಶವು, ಪ್ರಮುಖ ಸ್ಥಳಿಕ ಭಾಷೆಗಳಲ್ಲಿ ಬೈಬಲ್ ಸಾಹಿತ್ಯಗಳನ್ನು ಭಾಷಾಂತರಿಸಿ ಅವುಗಳನ್ನು ಮುದ್ರಿಸುವುದೇ ಆಗಿದೆ. ಆ ಪ್ರಮುಖ ಸ್ಥಳಿಕ ಭಾಷೆಗಳಲ್ಲಿ ಕೆಲವು, ಹರೆರೊ, ಕ್ವಾಂಗಾಲೀ, ಕ್ವನ್ಯಾಮ, ನಾಮಾ/ಡಾಮಾರಾ, ಮತ್ತು ಡಾಂಗಗಳೇ ಆಗಿವೆ. 1990ರಿಂದ, ನಮೀಬಿಯಾದ ರಾಜಧಾನಿಯಾದ ವಿಂಟ್ಹುಕ್ನಲ್ಲಿ, ಪೂರ್ಣ ಸಮಯದ ಸ್ವಯಂ ಸೇವಕರಿಗಾಗಿ ಒಂದು ಭಾಷಾಂತರ ಆಫೀಸು ಹಾಗೂ ವಸತಿಗೃಹವು ಸ್ಥಾಪಿಸಲ್ಪಟ್ಟು, ಅದು ಈಗಲೂ ಕಾರ್ಯನಡಿಸುತ್ತಿದೆ. ತನ್ನ ಪತಿಯ ಜೊತೆ ನಮೀಬಿಯಾದ ಬೇರೆ ಬೇರೆ ಭಾಗಗಳಲ್ಲಿ ಪೂರ್ಣ ಸಮಯದ ಸೌವಾರ್ತಿಕಳಾಗಿ ಸೇವೆಮಾಡುತ್ತಿರುವ ಕಾರನ್ ಡೆಪಿಷ್ ಹೇಳುವುದು: “ಸ್ಥಳಿಕ ಜನರಿಗೆ ಅವರ ಸ್ವಂತ ಭಾಷೆಯಲ್ಲಿ ಸಾಹಿತ್ಯವನ್ನು ನೀಡುವಾಗ, ವಿಶೇಷವಾಗಿ ಯಾವ ಭಾಷೆಯಲ್ಲಿ ಬಹಳ ಕಡಿಮೆ ಪುಸ್ತಕಗಳು ಲಭ್ಯವಿದೆಯೋ ಆ ಭಾಷೆಯಲ್ಲಿ ಸಾಹಿತ್ಯವನ್ನು ಅವರಿಗೆ ನೀಡುವಾಗ, ಅವರಲ್ಲಿ ಅನೇಕರು ಬೆರಗಾಗುತ್ತಾರೆ.”
ರತ್ನಶಿಲೆಗಳಿಗೆ ಹೆಚ್ಚು ಹೊಳಪು ನೀಡುವುದು
ನಮೀಬಿಯಾದಲ್ಲಿರುವ ರತ್ನಮಣಿಗಳಲ್ಲಿ ಕೆಲವು, ಅಸಂಖ್ಯಾತ ಬಾರಿ ಅಲೆಗಳ ಹೊಡೆತಕ್ಕೆ ಸಿಕ್ಕಿ ಹಾಗೂ ಮರಳಿನ ಘರ್ಷಣೆಗೆ ಒಳಗಾಗಿ, ಹೆಚ್ಚೆಚ್ಚು ಹೊಳಪನ್ನು ಪಡೆಯುತ್ತವೆ. ಆದರೆ, ಇಂತಹ ನೈಸರ್ಗಿಕ ಪ್ರಕ್ರಿಯೆಯಿಂದ ಜೀವಂತ ರತ್ನಮಣಿಗಳು ಉಂಟಾಗುವುದಿಲ್ಲವೆಂಬುದು ನಿಜ. ಅಪರಿಪೂರ್ಣ ಮಾನವರು “ಪೂರ್ವಸ್ವಭಾವವನ್ನು ತೆಗೆದುಹಾಕಿ,” ಕ್ರಿಸ್ತನಂತಹ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಪ್ರಯತ್ನದ ಅಗತ್ಯವಿದೆ. (ಎಫೆಸ 4:20-24) ಉದಾಹರಣೆಗೆ, ನಮೀಬಿಯಾದ ಅನೇಕ ಕುಲಗಳಲ್ಲಿ ಮೃತ ಪೂರ್ವಜರನ್ನು ಪೂಜ್ಯಭಾವನೆಯಿಂದ ಕಾಣುವುದು ಒಂದು ಕಟ್ಟುನಿಟ್ಟಾದ ಸಂಪ್ರದಾಯವಾಗಿದೆ. ಯಾರು ಪೂರ್ವಜರ ಆರಾಧನೆಯ ಸಂಪ್ರದಾಯಗಳನ್ನು ಅನುಸರಿಸುವುದಿಲ್ಲವೋ ಅವರನ್ನು ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರು ತುಂಬ ಹಿಂಸೆಗೊಳಪಡಿಸುತ್ತಾರೆ. “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂಬುದನ್ನು ಕೆಲವರು ಬೈಬಲಿನಿಂದ ತಿಳಿದುಕೊಳ್ಳುವಾಗ, ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. (ಪ್ರಸಂಗಿ 9:5) ಹೇಗೆ?
ಹರೆರೊ ಭಾಷೆಯ ಸಾಕ್ಷಿಯೊಬ್ಬನು ವಿವರಿಸುವುದು: “ಸತ್ಯಕ್ಕೆ ವಿಧೇಯನಾಗಿರುವುದು ಒಂದು ದೊಡ್ಡ ಪಂಥಾಹ್ವಾನವಾಗಿತ್ತು. ನಾನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಿನ ಅಭ್ಯಾಸವನ್ನು ಮಾಡಲು ಒಪ್ಪಿಕೊಂಡೆನಾದರೂ, ನಾನು ಕಲಿಯುತ್ತಿದ್ದ ವಿಷಯಗಳನ್ನು ನನ್ನ ಜೀವನದಲ್ಲಿ ಅನ್ವಯಿಸಿಕೊಳ್ಳಲು ಬಹಳಷ್ಟು ಸಮಯ ಹಿಡಿಯಿತು. ಮೊದಲಾಗಿ, ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸದಿರುವುದರಿಂದ ನನಗೇನಾದರೂ ಆಪತ್ತುಂಟಾಗುವುದೋ ಎಂಬುದನ್ನು ನಾನು ಪರೀಕ್ಷಿಸಿ ನೋಡಬೇಕಾಗಿತ್ತು. ಉದಾಹರಣೆಗೆ, ನಮೀಬಿಯಾದ ಕೆಲವೊಂದು ಸ್ಥಳಗಳಲ್ಲಿ ಗಾಡಿಯನ್ನು ಓಡಿಸುತ್ತಿರುವಾಗ, ನಾನು ಯಾವುದಾದರೂ ಗೋರಿಯ ಕಡೆಯಿಂದ ಹಾದುಹೋಗುತ್ತಿದ್ದರೆ, ನಾನು ಆ ಕಡೆ ನೋಡಿಯೂ ನೋಡದಂತೆ ಮುಂದೆ ಹೋಗಿಬಿಡುತ್ತಿದ್ದೆ. ಅಲ್ಲಿ ನಿಂತು ಗೋರಿಯ ಮೇಲೆ ಕಲ್ಲನ್ನು ಇಡುತ್ತಿರಲಿಲ್ಲ ಅಥವಾ ಮೃತ ವ್ಯಕ್ತಿಗೆ ಗೌರವವನ್ನು ಸಲ್ಲಿಸುವ ಸಲುವಾಗಿ ಟೋಪಿಯನ್ನು ತೆಗೆದಿಡುತ್ತಿರಲಿಲ್ಲ. ಕಾಲಕ್ರಮೇಣ, ಮೃತ ಪೂರ್ವಜರಿಗೆ ಆರಾಧನೆಯನ್ನು ಸಲ್ಲಿಸದಿದ್ದರೆ ನನಗೆ ಯಾವ ಅಪಾಯವು ಆಗುವುದಿಲ್ಲ ಎಂದು ನನಗೆ ಮನದಟ್ಟಾಯಿತು. ನನ್ನ ಕುಟುಂಬಕ್ಕೆ ಹಾಗೂ ಇತರ ಆಸಕ್ತ ಜನರಿಗೆ ಸತ್ಯವನ್ನು ಕಲಿಸಲಿಕ್ಕಾಗಿರುವ ನನ್ನ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸಿರುವುದಕ್ಕೆ ನಾನೆಷ್ಟು ಆನಂದಿತನು!”
ಆತ್ಮಿಕ ಗಣಿಕೆಲಸಗಾರರ ಆವಶ್ಯಕತೆ
1950ರಲ್ಲಿ ಮಿಷನೆರಿಗಳು ಬರುವುದಕ್ಕೆ ಮೊದಲು, ನಮೀಬಿಯಾದಲ್ಲಿ ಸುವಾರ್ತೆಯ ಏಕಮಾತ್ರ ಪ್ರಚಾರಕನು ಇದ್ದನು. ಆ ಸಂಖ್ಯೆಯು ಕ್ರಮೇಣವಾಗಿ ಹೆಚ್ಚಿದ್ದು, 995ರ ಉಚ್ಚಾಂಕವನ್ನು ತಲಪಿದೆ. ಆದರೂ, ಇನ್ನೂ ಹೆಚ್ಚು ಕೆಲಸವನ್ನು ಮಾಡಲಿಕ್ಕಿದೆ. ನಿಜಾಂಶವೇನೆಂದರೆ, ಕೆಲವೊಂದು ಧರ್ಮಗಳಿಗೆ ಇನ್ನೂ ಸುವಾರ್ತೆಯು ಮುಟ್ಟಿಲ್ಲ. ಎಲ್ಲಿ ಹುರುಪಿನ ರಾಜ್ಯ ಘೋಷಕರ ಆವಶ್ಯಕತೆಯು ಅತ್ಯಧಿಕವಾಗಿದೆಯೋ ಅಂತಹ ಒಂದು ಕ್ಷೇತ್ರದಲ್ಲಿ ಸೇವೆಮಾಡುವಂತಹ ಸ್ಥಿತಿಯಲ್ಲಿ ನೀವಿದ್ದೀರೊ? ಹಾಗಾದರೆ ದಯವಿಟ್ಟು, ನಮೀಬಿಯಾಕ್ಕೆ ಬಂದು, ಹೆಚ್ಚೆಚ್ಚು ಆತ್ಮಿಕ ರತ್ನಶಿಲೆಗಳನ್ನು ಕಂಡುಕೊಂಡು, ಅವುಗಳಿಗೆ ಹೊಳಪು ನೀಡುವ ಕೆಲಸದಲ್ಲಿ ನಮಗೆ ಸಹಾಯ ಮಾಡಿರಿ.—ಹೋಲಿಸಿರಿ ಅ. ಕೃತ್ಯಗಳು 16:9.
[ಪುಟ 26ರಲ್ಲಿರುವಚಿತ್ರ]
(For fully formatted text, see publication)
ಆಫ್ರಿಕ
ನಮೀಬಿಯಾ
[ಚಿತ್ರಗಳು]
ನಮೀಬಿಯಾವು ಸುಂದರವಾದ ರತ್ನಮಣಿಗಳಿರುವ ಒಂದು ದೇಶವಾಗಿದೆ
[ಕೃಪೆ]
ಭೂಪಟಗಳು: Mountain High Maps® Copyright © 1997 Digital Wisdom, Inc.; ವಜ್ರಗಳು: Courtesy Namdek Diamond Corporation
[ಪುಟ 26 ರಲ್ಲಿರುವ ಚಿತ್ರ]
ನಮೀಬಿಯಾದ ಎಲ್ಲ ಕುಲಗಳ ಜನರಿಗೆ ಸುವಾರ್ತೆಯು ಸಾರಲ್ಪಡುತ್ತಿದೆ
[ಪುಟ 28 ರಲ್ಲಿರುವ ಚಿತ್ರ]
ರಾಜ್ಯ ಘೋಷಕರ ಅಗತ್ಯವು ಎಲ್ಲಿ ಹೆಚ್ಚಾಗಿದೆಯೋ ಅಲ್ಲಿ ನೀವು ಸೇವೆಮಾಡಬಲ್ಲಿರೊ?