ಬೈಬಲ್ ಅರ್ಥವಿವರಣೆ—ಯಾರ ಪ್ರಭಾವದಿಂದ?
ಒಂದು ವ್ಯಾಖ್ಯಾನಕ್ಕನುಸಾರ “ಅರ್ಥವಿವರಿಸು” ಎಂಬ ಪದದ ಅರ್ಥವು “ವ್ಯಕ್ತಿಯ ನಂಬಿಕೆ, ಅಭಿಪ್ರಾಯ ಅಥವಾ ಪರಿಸ್ಥಿತಿಯ ಬೆಳಕಿನಲ್ಲಿ ಗ್ರಹಿಸುವುದು” ಎಂದಾಗಿರುತ್ತದೆ. (ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲೀಜಿಯೆಟ್ ಡಿಕ್ಷನರಿ) ಹೀಗೆ, ಯಾವುದೇ ವಿಷಯದ ಅರ್ಥವಿವರಣೆಯು, ಒಬ್ಬನ ಹಿನ್ನೆಲೆ, ಶಿಕ್ಷಣ ಮತ್ತು ಪಾಲನೆ-ಪೋಷಣೆಯಿಂದ ಸಾಮಾನ್ಯವಾಗಿ ಪ್ರಭಾವಿಸಲ್ಪಡುತ್ತದೆ.
ಆದರೆ, ಬೈಬಲಿನ ಅರ್ಥವಿವರಣೆಯ ಕುರಿತೇನು? ಬೈಬಲ್ ವಾಕ್ಯಗಳನ್ನು ನಮ್ಮ ಸ್ವಂತ “ನಂಬಿಕೆ, ಅಭಿಪ್ರಾಯ ಅಥವಾ ಪರಿಸ್ಥಿತಿ”ಗಳಿಗನುಸಾರವಾಗಿ ವಿವರಿಸಲು ನಾವು ಸ್ವತಂತ್ರರೋ? ಸ್ವಾಭಾವಿಕವಾಗಿ, ಅನೇಕ ಬೈಬಲ್ ವಿದ್ವಾಂಸರು ಮತ್ತು ಅನುವಾದಕರು ಹಾಗೆ ಮಾಡಲು ತಮಗೆ ಸ್ವಾತಂತ್ರ್ಯವಿಲ್ಲವೆಂದು ಹೇಳಿದರೂ ತಾವು ದೇವರಿಂದ ಮಾರ್ಗದರ್ಶಿಸಲ್ಪಟ್ಟಿದ್ದೇವೆಂದು ಅವರು ಪ್ರತಿಪಾದಿಸುತ್ತಾರೆ.
ಉದಾಹರಣೆಗೆ, 1836ರಲ್ಲಿ ಜಾನ್ ಲಿಂಗಾರ್ಡ್ ಎಂಬವರಿಂದ ಪ್ರಕಾಶಿಸಲಾದ ಎ ನ್ಯೂ ವರ್ಶನ್ ಆಫ್ ದ ಫೋರ್ ಗಾಸ್ಪಲ್ಸ್ ಎಂಬ ಪುಸ್ತಕದಲ್ಲಿ, “ಒಬ್ಬ ಕ್ಯಾತೊಲಿಕ್” ಎಂಬ ಮಿಥ್ಯಾನಾಮದ ಕೆಳಗೆ ಯೋಹಾನ 1:1ರ ಪಾದಟಿಪ್ಪಣಿಯಲ್ಲಿ ಹೇಳಿರುವ ವಿಷಯವನ್ನು ಗಮನಿಸಿರಿ. ಅದು ಹೇಳುವುದು: “ಪ್ರತಿಯೊಂದು ಧಾರ್ಮಿಕ ನಂಬಿಕೆಯ ಜನರು, ತಮ್ಮದೇ ಆದ ವಿಶಿಷ್ಟ ಅಭಿಪ್ರಾಯಗಳ ದೃಢೀಕರಣವನ್ನು ಪವಿತ್ರ ಶಾಸ್ತ್ರವಚನಗಳಲ್ಲಿ ಕಂಡುಕೊಳ್ಳುತ್ತಾರೆ ಆದರೆ, ವಾಸ್ತವದಲ್ಲಿ ಅವರಿಗೆ ಮಾಹಿತಿ ನೀಡುವುದು ಶಾಸ್ತ್ರವಚನವಲ್ಲ ಅದರ ಬದಲು ಶಾಸ್ತ್ರವಚನಗಳಿಗೆ ತಮ್ಮ ಸ್ವಂತ ಅರ್ಥವಿವರಣೆಯನ್ನು ಅವರು ಕೂಡಿಸುತ್ತಾರೆ.”
ವಿಷಯವು ಸಮರ್ಥನೀಯವಾಗಿದ್ದರೂ, ಬರಹಗಾರನ ಉದ್ದೇಶವೇನಾಗಿತ್ತು? ಅವನ ಹೇಳಿಕೆಯು ಆ ವಚನಕ್ಕೆ ನೀಡಿದ ತನ್ನ ಸ್ವಂತ ಅರ್ಥವಿವರಣೆಯನ್ನು ಬೆಂಬಲಿಸುತ್ತಿತ್ತು, ಏಕೆಂದರೆ ಅವನದನ್ನು ಹೀಗೆ ಭಾಷಾಂತರಿಸಿದನು: “ಆದಿಯಲ್ಲಿ ‘ವಾಕ್ಯ’ವಿತ್ತು; ಮತ್ತು ‘ಆ ವಾಕ್ಯವು’ ದೇವರ ಬಳಿಯಲ್ಲಿತ್ತು; ಮತ್ತು ‘ವಾಕ್ಯವು’ ದೇವರಾಗಿತ್ತು,” ಇದು ತ್ರಯೈಕ್ಯವಾದಿಯ ಒಂದು ಸಾಮಾನ್ಯವಾದ ತರ್ಜುಮೆಯಾಗಿದೆ.
ಯೋಹಾನ 1:1ನ್ನು ಭಾಷಾಂತರಿಸುವಾಗ ತ್ರಯೈಕ್ಯ ಸಿದ್ಧಾಂತವನ್ನು ಬೆಂಬಲಿಸುವಂತೆ ಬರಹಗಾರನನ್ನು ಯಾವುದು ಒತ್ತಾಯಿಸಿತು? “ಮಾಹಿತಿ ನೀಡುವ ಶಾಸ್ತ್ರವಚನವು” ಅವನನ್ನು ಹೀಗೆ ಮಾಡುವಂತೆ ನಡೆಸಿತೋ? ಅದು ಅಸಾಧ್ಯ, ಯಾಕಂದರೆ ಬೈಬಲಿನಲ್ಲಿ ತ್ರಯೈಕ್ಯ ಬೋಧನೆಯು ಎಲ್ಲಿಯೂ ಕಂಡುಬರುವುದಿಲ್ಲ. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕವು ಈ ವಿಷಯದಲ್ಲಿ ಹೀಗೆ ಹೇಳಿರುವುದನ್ನು ಗಮನಿಸಿರಿ: “ತ್ರಯೈಕ್ಯ ಎಂಬ ಪದವಾಗಲಿ, ಸ್ಪಷ್ಟವಾದ ತತ್ವವಾಗಲಿ ಹೊಸ ಒಡಂಬಡಿಕೆಯಲ್ಲಿ ಕಂಡುಬರುವುದಿಲ್ಲ.” ಇದಕ್ಕೆ ಕೂಡಿಸಿ, ಯೇಲ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಇ. ವಾಶ್ಬರ್ನ್ ಹಾಪ್ಕಿನ್ಸ್ ಸ್ಥಿರೀಕರಿಸಿದ್ದು: “ಯೇಸು ಮತ್ತು ಪೌಲನಿಗೆ ತ್ರಯೈಕ್ಯ ತತ್ವವು ಅಜ್ಞಾತವಾಗಿತ್ತೆಂಬುದು ವ್ಯಕ್ತ . . . ಅವರು ಅದರ ವಿಷಯದಲ್ಲಿ ಏನೂ ಹೇಳುವುದಿಲ್ಲ.”
ಹಾಗಾದರೆ, ಯೋಹಾನ 1:1ರ ಅಥವಾ ಬೇರೆ ಯಾವುದೇ ಬೈಬಲ್ ವಚನಗಳ ಕುರಿತು ತ್ರಯೈಕ್ಯವಾದಿಗಳು ನೀಡಿರುವ ಅರ್ಥವಿವರಣೆಯನ್ನು ಬೆಂಬಲಿಸುವವರ ಸಂಬಂಧದಲ್ಲಿ ನಾವು ಯಾವ ಸಮಾಪ್ತಿಗೆ ಬರಸಾಧ್ಯವಿದೆ? ಶ್ರೀಯುತ ಲಿಂಗಾರ್ಡ್ರ ಸ್ವಂತ ಅಳತೆಗೋಲಿನ ಪ್ರಕಾರ, “ಅವರಿಗೆ ಮಾಹಿತಿ ನೀಡುವುದು ಶಾಸ್ತ್ರವಚನವಲ್ಲ ಅದರ ಬದಲು ಶಾಸ್ತ್ರವಚನಗಳಿಗೆ ತಮ್ಮ ಸ್ವಂತ ಅರ್ಥವಿವರಣೆಯನ್ನು ಅವರು ಕೂಡಿಸುತ್ತಾರೆ.”
ಸಂತೋಷಕರವಾಗಿ, ಈ ವಿಷಯದಲ್ಲಿ ನಮಗೆ ಮಾರ್ಗದರ್ಶನೆ ನೀಡಲು ದೇವರ ಸ್ವಂತ ವಾಕ್ಯವೇ ನಮ್ಮ ಬಳಿಯಲ್ಲಿದೆ. ಅಪೊಸ್ತಲ ಪೇತ್ರನು ಹೇಳಿದ್ದು, “ಶಾಸ್ತ್ರದಲ್ಲಿರುವ ಯಾವ ಪ್ರವಾದನವಾಕ್ಯವೂ ಕೇವಲ ಮಾನುಷಬುದ್ಧಿಯಿಂದ ವಿವರಿಸತಕ್ಕಂಥದಲ್ಲವೆಂಬದನ್ನು ಮುಖ್ಯವಾಗಿ ತಿಳಿದುಕೊಳ್ಳಿರಿ. ಯಾಕಂದರೆ ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.”—2 ಪೇತ್ರ 1:20, 21.