ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಫ್ರಾನ್ಸಿನ ಜನತೆಯನ್ನು ಸಾಕ್ಷಿಗಳು ಸಂಧಿಸುತ್ತಾರೆ
ಫ್ರಾನ್ಸಿನ ಜನತೆಯೇ, ನೀವು ವಂಚಿಸಲ್ಪಡುತ್ತಿದ್ದೀರಿ! ಎಂಬ ಶೀರ್ಷಿಕೆಯುಳ್ಳ ಕಿರುಹೊತ್ತಗೆಯ 1.2 ಕೋಟಿ ಪ್ರತಿಗಳನ್ನು, ಫ್ರಾನ್ಸಿನಲ್ಲಿರುವ ಯೆಹೋವನ ಸಾಕ್ಷಿಗಳು ಮೊದಲು ಬೀದಿಗಳಲ್ಲಿ ತದನಂತರ ಮನೆಯಿಂದ ಮನೆಗೆ ಅತ್ಯುತ್ಸಾಹದಿಂದ ವಿತರಿಸಿದರು. ಈ ಕಾರ್ಯಾಚರಣೆಯನ್ನು ಅವರು ಶುಕ್ರವಾರ, ಜನವರಿ 29, 1999ರ ಬೆಳಗ್ಗೆ ಬೇಗನೆ ಆರಂಭಿಸುತ್ತಾ, ವಾರಾಂತ್ಯದ ವರೆಗೂ ಮುಂದುವರಿಸಿದರು. ಈ ರೀತಿಯ ಒಂದು ಕಾರ್ಯಾಚರಣೆಯನ್ನು ಏಕೆ ಮಾಡಲಾಯಿತು?
ಆ ಶುಕ್ರವಾರ ಬೆಳಗ್ಗೆ ಪ್ಯಾರಿಸ್ನಲ್ಲಿ ನಡೆದ ಒಂದು ಪತ್ರಿಕಾ ಸಮಾಲೋಚನೆಯಲ್ಲಿ, ಈ ಕಾರ್ಯಾಚರಣೆಯ ಕಾರಣವನ್ನು ನೀಡಲಾಯಿತು. ಒಬ್ಬ ಸಾಕ್ಷಿ ಪ್ರತಿನಿಧಿಯು ವಿವರಿಸಿದ್ದು: “ನಾವು ಯಾವ ರೀತಿಯ ಜನರಾಗಿದ್ದೇವೆಂದು ತಿಳಿಯಪಡಿಸಲು ಮತ್ತು ನಮ್ಮ ಬಗ್ಗೆ ಹರಡಿರುವ ಅಪಮಾನಕರ ಹೇಳಿಕೆಗಳ ಸದ್ದಡಗಿಸಲು ನಾವು ಇಂದು ಬಯಸುತ್ತೇವೆ. ನಾವು ಟೀಕೆಗೆ ಕಿವಿಗೊಡಲು ಸಿದ್ಧರಾಗಿದ್ದೇವಾದರೂ, ನಮ್ಮ ಸತ್ಕೀರ್ತಿಗೆ ಚ್ಯುತಿ ತರುವಂತಹ ಸುಳ್ಳಾರೋಪಗಳಿಗೆ ಮತ್ತು ಹೇಳಿಕೆಗಳಿಗೆ ನಾವು ಇನ್ನು ಮುಂದೆ ಕಿವಿಗೊಡಲಾರೆವು.”
ಯೆಹೋವನ ಸಾಕ್ಷಿಗಳು ಫ್ರಾನ್ಸಿನಲ್ಲಿರುವ ಮೂರನೆಯ ಅತಿ ದೊಡ್ಡ ಕ್ರೈಸ್ತ ಧರ್ಮವಾಗಿದ್ದರೂ, ಅನೇಕ ಸಾಕ್ಷಿ ಮಕ್ಕಳನ್ನು ಶಾಲೆಯಲ್ಲಿ ಅಪಮಾನಕ್ಕೆ ಗುರಿಪಡಿಸಿ, ಪೀಡಿಸಲಾಗಿದೆ. ವಯಸ್ಕರು ತಮ್ಮ ಧರ್ಮದ ಕಾರಣ, ಕೆಲಸಗಳಿಂದ ವಜಾಮಾಡಲ್ಪಟ್ಟು, ಬೆದರಿಸಲ್ಪಟ್ಟಿದ್ದಾರೆ. ಅಷ್ಟುಮಾತ್ರವಲ್ಲದೆ, ನಂಬಲಸಾಧ್ಯವಾಗುವಂತೆ, ಸಾಕ್ಷಿಗಳು ಪಡೆದುಕೊಂಡಿರುವ ಧಾರ್ಮಿಕ ದಾನಗಳ ಮೇಲೆಯೂ 60 ಪ್ರತಿಶತ ತೆರಿಗೆಯನ್ನು ವಿಧಿಸಲಾಗಿದೆ. ಸಾಕ್ಷಿಗಳು ಕೈಗೊಂಡ ಈ ಕಾರ್ಯಾಚರಣೆಯು, ಈ ಭೇದಭಾವದ ವಿರುದ್ಧ ಹೇಗೆ ಕಾರ್ಯನಡೆಸಿತು?
ಆ ಕಿರುಹೊತ್ತಗೆಯು ಪ್ರಕಟಿಸುವುದು: “1900ನೇ ಇಸವಿಯಿಂದ ಫ್ರಾನ್ಸಿನಲ್ಲಿ ಇರುವ ತಮ್ಮ ಕ್ರೈಸ್ತ ಧರ್ಮವನ್ನು, 1995ರಿಂದ ಅಪಾಯಕರ ಕುಪಂಥಗಳೊಂದಿಗೆ ಜೊತೆಗೂಡಿಸಿರುವ ಮೋಸಕರ ರೀತಿನೀತಿಯ ವಿರುದ್ಧ, ಫ್ರಾನ್ಸಿನಲ್ಲಿ ವಾಸಿಸುತ್ತಿರುವ 2,50,000 ಯೆಹೋವನ ಸಾಕ್ಷಿಗಳು ಮತ್ತು ಅವರ ಸಂಗಡಿಗರು ಪ್ರತಿಭಟಿಸುತ್ತಾರೆ. . . . ತಾವು ಒಳಗಾಗಿರುವ ಸತತವಾದ ಕಿರುಕುಳದ ವಿರುದ್ಧವೂ ಅವರು ಪ್ರತಿಭಟಿಸುತ್ತಾರೆ.” ಫ್ರಾನ್ಸಿನಲ್ಲಿರುವ ಸಾಕ್ಷಿಗಳ ಮೇಲೆ ಹೊರಿಸಲ್ಪಟ್ಟಿರುವ ನಿಂದಾತ್ಮಕ ಆರೋಪಗಳು ಮತ್ತು ಅವರ ಬಗ್ಗೆ ನಕಾರಾತ್ಮಕ ಪ್ರಚಾರವನ್ನು ಹಬ್ಬಿಸಲು ಈ ಚಾಡಿಕೋರರು ಬಳಸಿರುವ ವಕ್ರವಾದ ವಿಧಾನಗಳು ಬಯಲುಗೊಳಿಸಲ್ಪಟ್ಟವು. ಸಮಾಪ್ತಿಯಲ್ಲಿ ಆ ಕಿರುಹೊತ್ತಗೆಯು ಹೀಗೆ ಹೇಳುತ್ತದೆ: “ಇಂದು, 20 ಲಕ್ಷಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳು ಮತ್ತು ಅವರ ಸಂಗಡಿಗರು ಯೂರೋಪಿನಲ್ಲಿ ವಾಸಿಸುತ್ತಾರೆ. ಸುವಾರ್ತೆಗಳಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ, ಅವರು ಯಾವ ಸರಕಾರದ ಪ್ರಜೆಗಳಾಗಿದ್ದಾರೊ ಅದರ ಕಾನೂನನ್ನು ಮಾನ್ಯಮಾಡುತ್ತಾರೆ. ಫ್ರಾನ್ಸಿನ ಜನತೆಯೇ, ನಿಮ್ಮ ಮುಂದೆ ನಿಜಾಂಶಗಳನ್ನು ಇಡಲಾಗಿದೆ. ಅವುಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ನಿಮ್ಮ ಮುಂದೆ ಅವನ್ನು ಪ್ರಸ್ತುತಪಡಿಸುವುದು ನಮ್ಮ ಕರ್ತವ್ಯವಾಗಿದೆ!”
ಕೂಡಲೇ ದೊರಕಿದ ಸಕಾರಾತ್ಮಕ ಪ್ರತಿಕ್ರಿಯೆ
ಲಕ್ಷಾಂತರ ಕಿರುಹೊತ್ತಗೆಗಳನ್ನು ಪ್ರಥಮ ದಿನವೇ ವಿತರಿಸಲಾಯಿತು. ಪ್ಯಾರಿಸ್ನಲ್ಲಿಯೇ, ಮಧ್ಯಾಹ್ನದೊಳಗಾಗಿ 7,000ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳು, 13 ಲಕ್ಷಕ್ಕಿಂತಲೂ ಹೆಚ್ಚಿನ ಕಿರುಹೊತ್ತಗೆಗಳನ್ನು ವೈಯಕ್ತಿಕವಾಗಿ ಜನರಿಗೆ ನೀಡಿದ್ದರು. ಇಷ್ಟೊಂದು ಸಾಕ್ಷಿಗಳು ಬೀದಿಗಳಲ್ಲಿ ಕಿರುಹೊತ್ತಗೆಗಳನ್ನು ನೀಡುತ್ತಿರುವ ದೃಶ್ಯವು, ಅಲ್ಲಿನ ಜನರಿಗೆ ಖಂಡಿತವಾಗಿಯೂ ಪ್ರಥಮ ಬಾರಿ ನಡೆದ ಘಟನೆಯಾಗಿತ್ತು. ಅಲ್ಲಿಯ ರಾಷ್ಟ್ರೀಯ ಹಾಗೂ ಸ್ಥಳಿಕ ವಾರ್ತಾಪತ್ರಿಕೆಗಳು ಮತ್ತು ಟೆಲಿವಿಷನ್ ಅನ್ನು ಸೇರಿಸಿ, ವಾರ್ತಾಮಾಧ್ಯಮವು ಈ ಕಾರ್ಯಾಚರಣೆಯ ಬಗ್ಗೆ ಅನುಕೂಲಕರವಾಗಿ ಪ್ರತಿಕ್ರಿಯಿಸಿತು. ಲ ಪ್ರಾಗ್ರೀ ಡ ಲೀಓ ಎಂಬ ವಾರ್ತಾಪತ್ರಿಕೆಯು ಗಮನಿಸಿದ್ದು: “ಈ ಆರಂಭವು . . . ಅಪಾರ್ಥಕ್ಕೆ ಒಳಗಾಗಿರುವ ಒಂದು ಪದವನ್ನು ಎಲ್ಲರ ಗಮನಕ್ಕೂ ತರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ, ‘ಪಂಥ’ ಎಂಬ ಪದವು . . . ವಕ್ರವಾದ, ಅಪಾಯಕರ, ಮತ್ತು ಹಾನಿಕಾರಕ ಅರ್ಥವನ್ನು ಪಡೆದುಕೊಂಡಿದೆ. . . . ಯೆಹೋವನ ಸಾಕ್ಷಿಗಳು ಸಮಾಜದ ಸ್ಥಿರತೆಯನ್ನು ಕೆಡಿಸುವಷ್ಟು ಅಪಾಯಕರ ಸ್ವಭಾವದವರಾಗಿರುವುದಿಲ್ಲ.”
ಯೆಹೋವನ ಸಾಕ್ಷಿಗಳ ಪರಿಚಯವಿರುವವರು, ಅವರ ಶಾಂತ ಸ್ವಭಾವವನ್ನು ಮತ್ತು ಸ್ಥಾಪಿತ ಸಾಮಾಜಿಕ ವ್ಯವಸ್ಥೆಗಾಗಿ ಅವರಿಗಿರುವ ಆಳವಾದ ಗೌರವವನ್ನು ಗಣ್ಯಮಾಡುತ್ತಾರೆ. ಈ ಕಾರಣ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಹತ್ತಾರು ಸಾವಿರ ಸಾಕ್ಷಿಗಳಿಗಾಗಿ, ಬೀದಿಗಳಲ್ಲಿದ್ದ ಅನೇಕರು ತಮ್ಮ ಗಣ್ಯತೆಯನ್ನು ಹಾಗೂ ಸಮರ್ಥನೆಯನ್ನು ವ್ಯಕ್ತಪಡಿಸಿದರು. ಕಿರುಹೊತ್ತಗೆಯನ್ನು ಪಡೆದುಕೊಂಡವರು ಕೂಡಲೇ ಟೆಲಿಫೋನ್ ಕರೆಗಳು, ಫ್ಯಾಕ್ಸ್ಗಳು, ಮತ್ತು ಪತ್ರಗಳ ಮೂಲಕ ತಮ್ಮ ಉಪಕಾರಗಳನ್ನು ತಿಳಿಸಿದರು. ಎಲ್ಲಕ್ಕಿಂತಲೂ ಹೆಚ್ಚಾಗಿ, ಸಾಕ್ಷಿಗಳ ಕುರಿತು ಸುಳ್ಳಾದ ಹಾಗೂ ಅವಿವೇಕದ ಹೇಳಿಕೆಗಳನ್ನು ಕೇಳಿಸಿಕೊಂಡ ಯಥಾರ್ಥವಂತರಿಗೆ, ಸಾಕ್ಷಿಗಳ ಬಗ್ಗೆ ನಿಜಾಂಶಗಳನ್ನು ತಿಳಿದುಕೊಳ್ಳುವ ಅವಕಾಶವು ಸಿಕ್ಕಿತಲ್ಲದೆ, ಯಾರ ನಂಬಿಕೆಗಳ ಮೇಲೆ ಅಪವಾದ ಹೊರಿಸಲಾಗಿತ್ತೊ ಅವರಿಗೆ ತಮ್ಮ ಅಚ್ಚುಮೆಚ್ಚಿನ ನಂಬಿಕೆಗಳ ಬಗ್ಗೆ ಇರುವ ಭಾವನೆಗಳನ್ನು ವ್ಯಕ್ತಪಡಿಸುವ ಸಂದರ್ಭವೂ ದೊರಕಿತು.