ಯಾರಾದರೂ ನಿಜವಾಗಿಯೂ ಚಿಂತೆ ತೋರಿಸುತ್ತಾರೊ?
“ಹಿಂಸೆಗೊಂಡವರ ಕಣ್ಣೀರು” ಇಂದು ಒಂದು ಪ್ರವಾಹವಾಗಿ ಬಿಟ್ಟಿದೆ. ಲೋಕದಾದ್ಯಂತ “ದಬ್ಬಾಳಿಕೆಯ ಕೃತ್ಯಗಳಿಗೆ” ಈಡಾಗಿರುವ ಅಸಂಖ್ಯಾತ ಜನರೇ ಅಂತಹ ಕಣ್ಣೀರನ್ನು ಸುರಿಸುತ್ತಾರೆ. ಸಂಕಷ್ಟಕ್ಕೆ ಗುರಿಯಾದವರಿಗೆ ಅನೇಕವೇಳೆ, ತಮ್ಮನ್ನು ‘ಸಂತಯಿಸುವವರು ಯಾರೂ ಇಲ್ಲ,’ ತಮ್ಮ ಕುರಿತಾಗಿ ಯಾರಿಗೂ ಆಸಕ್ತಿಯೇ ಇಲ್ಲ ಎಂಬ ಅನಿಸಿಕೆಯಾಗುತ್ತದೆ.—ಪ್ರಸಂಗಿ 4:1.
ಕಣ್ಣೀರಿನ ಈ ಪ್ರವಾಹದ ಎದುರಿನಲ್ಲೂ, ಕೆಲವರು ತಮ್ಮ ಜೊತೆಮಾನವರ ಕಷ್ಟಾನುಭವಗಳಿಗೆ ಸ್ಪಂದಿಸದೆ ಕಲ್ಲುಬಂಡೆಗಳಂತಿದ್ದಾರೆ. ಇವರು ಇತರ ಜನರ ಸಂಕಟವನ್ನು ನೋಡಿಯೂ ನೋಡದಂತೆ ಇರುತ್ತಾರೆ. ಯೇಸು ಕ್ರಿಸ್ತನ ಒಂದು ದೃಷ್ಟಾಂತದಲ್ಲಿ, ಕಳ್ಳರು ದಾಳಿಮಾಡಿ, ದೋಚಿ, ರಸ್ತೆಬದಿಯಲ್ಲಿ ಅರೆಜೀವ ಸ್ಥಿತಿಯಲ್ಲಿ ಬಿಟ್ಟುಹೋದ ಒಬ್ಬ ಮನುಷ್ಯನನ್ನು ನೋಡಿಯೂ ನೋಡದಂತೆ ಮುಂದೆಹೋದ ಯಾಜಕ ಮತ್ತು ಲೇವಿಯರಂತೆ ಇವರಿದ್ದಾರೆ. (ಲೂಕ 10:30-32) ಇಂಥವರು, ತಮ್ಮ ಮತ್ತು ತಮ್ಮ ಕುಟುಂಬಗಳ ಸಂಬಂಧದಲ್ಲಿ ಎಲ್ಲವೂ ಕ್ಷೇಮವಾಗಿರುವಷ್ಟರ ತನಕ ಬೇರೆ ಯಾರ ಕುರಿತಾಗಿಯೂ ಚಿಂತಿಸುವುದಿಲ್ಲ. ಇವರು ಕಾರ್ಯತಃ, “ನಾನು ಯಾರ ಕುರಿತಾಗಿಯೂ ಚಿಂತಿಸುವುದಿಲ್ಲ” ಎಂದು ಹೇಳುತ್ತಾರೆ.
ಇದರಿಂದ ನಾವು ಆಶ್ಚರ್ಯಚಕಿತರಾಗಬೇಕಾಗಿಲ್ಲ. “ಕಡೇ ದಿವಸಗಳಲ್ಲಿ” ಅನೇಕ ಜನರು “ಮಮತೆಯಿಲ್ಲದವರು” ಆಗಿರುವರೆಂದು ಅಪೊಸ್ತಲ ಪೌಲನು ಮುಂತಿಳಿಸಿದನು. (2 ತಿಮೊಥೆಯ 3:1, 3) ಇತರರ ಕುರಿತು ಎಳ್ಳಷ್ಟೂ ಚಿಂತೆಯಿಲ್ಲದಿರುವ ಮನೋಭಾವಗಳು ಹೆಚ್ಚಾಗುತ್ತಿರುವುದರ ಕುರಿತಾಗಿ ಒಬ್ಬ ಪ್ರೇಕ್ಷಕನು ಪ್ರಲಾಪಿಸಿದನು. “ಇತರರಿಗೆ ಸಹಾಯಮಾಡು ಎಂಬ ಹಳೆಯ ಐರಿಷ್ ತತ್ತ್ವವಿಚಾರ ಮತ್ತು ಸಂಪ್ರದಾಯವು, ಸ್ವಹಿತಚಿಂತನೆ ಮಾತ್ರ ಎಂಬ ಹೊಸ ಸೂತ್ರದಿಂದ ಸ್ಥಾನಪಲ್ಲಟವಾಗುತ್ತಿದೆ” ಎಂದು ಅವನು ಹೇಳಿದನು. ಜಗದ್ವ್ಯಾಪಕವಾಗಿ, ಜನರು ಇತರರ ಅವಸ್ಥೆಯನ್ನು ಪೂರ್ಣವಾಗಿ ಅಸಡ್ಡೆಮಾಡುತ್ತಾ, ಎಲ್ಲವನ್ನೂ ತಮಗಾಗಿಯೇ ಮಾಡುತ್ತಾರೆ ಮತ್ತು ತೆಗೆದುಕೊಳ್ಳುತ್ತಾರೆ.
ಚಿಂತೆ ತೋರಿಸುವವರೊಬ್ಬರ ಅಗತ್ಯವಿದೆ
ಖಂಡಿತವಾಗಿಯೂ, ಚಿಂತೆ ತೋರಿಸುವ ಯಾರಾದರೊಬ್ಬರು ಇರಲೇಬೇಕು. ಉದಾಹರಣೆಗಾಗಿ, ಜರ್ಮನಿಯಲ್ಲಿದ್ದ ಒಬ್ಬ ಒಂಟಿ ಪುರುಷನ ಕುರಿತಾಗಿ ಯೋಚಿಸಿರಿ. ಇವನನ್ನು “ಟಿವಿಯ ಮುಂದೆ ಕುಳಿತುಕೊಂಡಿರುವ ಭಂಗಿಯಲ್ಲಿ ಕಂಡುಕೊಳ್ಳಲಾಯಿತು—ಅದೂ ಅವನು ಕ್ರಿಸ್ಮಸ್ ಸಮಯದಲ್ಲಿ ಮೃತಪಟ್ಟು ಸುಮಾರು ಐದು ವರ್ಷಗಳು ಕಳೆದ ಬಳಿಕವೇ.” ಈ “ವಿಚ್ಛೇದಿತನೂ, ಅಂಗವಿಕಲನೂ ಆಗಿದ್ದ ಒಂಟಿಜೀವವು,” ಜೀವಿತದಲ್ಲಿನ ದುಃಖಕರ ಅನುಭವಗಳಿಂದ ನೊಂದಿತ್ತು. ಅವನ ಬ್ಯಾಂಕ್ ಖಾತೆಯು ಬಾಡಿಗೆಯನ್ನು ತೆರುತ್ತಿದ್ದು, ಅದು ಬರಿದಾಗುವ ತನಕ ಅವನು ಇನ್ನಿಲ್ಲವೆಂಬುದು ಯಾರಿಗೂ ತಿಳಿದುಬರಲಿಲ್ಲ. ಅವನ ಕುರಿತಾಗಿ ನಿಜವಾಗಿಯೂ ಯಾರೂ ಚಿಂತೆ ತೋರಿಸಲಿಲ್ಲ.
ಪ್ರಭಾವಶಾಲಿ ಹಾಗೂ ಲೋಭಿಗಳಾದ ಅಧಿಪತಿಗಳ ದಬ್ಬಾಳಿಕೆಗೆ ಒಳಗಾಗಿರುವ ಜನರ ಕುರಿತಾಗಿಯೂ ಯೋಚಿಸಿರಿ. ಒಂದು ಕ್ಷೇತ್ರದಲ್ಲಿ, ಸುಮಾರು 2,00,000 ಜನರ (ಅಲ್ಲಿನ ಜನಸಂಖ್ಯೆಯ ಮುಕ್ಕಾಲು ಭಾಗ) ಜಮೀನನ್ನು ಬಲಾತ್ಕಾರದಿಂದ ಕಸಿದುಕೊಳ್ಳಲ್ಪಟ್ಟಾಗ, ಅವರು “ದಬ್ಬಾಳಿಕೆ ಮತ್ತು ಕ್ಷಾಮದಿಂದಾಗಿ” ಸತ್ತರು. ಅಥವಾ ಹೆಚ್ಚುಕಡಮೆ ನಂಬಲಾಗದಷ್ಟು ಕ್ರೂರತೆಯನ್ನು ನೋಡಿದ ಮಕ್ಕಳ ಕುರಿತಾಗಿಯೂ ಯೋಚಿಸಿರಿ. ಒಂದು ವರದಿಯು ಹೀಗಂದಿತು: “ಕೆಲವೊಮ್ಮೆ ಇತರ ವಯಸ್ಕರಿಂದ ನಡೆಸಲ್ಪಟ್ಟ ಕೊಲೆಗಳು, ಏಟುಗಳು, ಬಲಾತ್ಕಾರಸಂಭೋಗದಂತಹ ಅನೇಕಾನೇಕ ಘೋರಕೃತ್ಯಗಳನ್ನು ಕಣ್ಣಾರೆ ನೋಡಿರುವ [ಒಂದು ದೇಶದ] ಮಕ್ಕಳ ಪ್ರತಿಶತವು ತತ್ತರಿಸುವಂತಹದ್ದಾಗಿದೆ.” ಇಂತಹ ಅನ್ಯಾಯಗಳಿಗೆ ಬಲಿಯಾಗಿರುವ ಒಬ್ಬ ವ್ಯಕ್ತಿಯು ಕಣ್ಣೀರು ಸುರಿಸುತ್ತಾ, “ನನ್ನ ಕುರಿತಾಗಿ ನಿಜವಾಗಿಯೂ ಯಾರಾದರೂ ಚಿಂತೆ ತೋರಿಸುತ್ತಾರೋ?” ಎಂದು ಏಕೆ ಕೇಳಬಹುದೆಂಬುದು ನಿಮಗೆ ಆಗ ಅರ್ಥವಾಗಬಹುದು.
ವಿಶ್ವ ಸಂಸ್ಥೆಯ ಒಂದು ವರದಿಗನುಸಾರ, ಅಭಿವೃದ್ಧಿಶೀಲ ಲೋಕದಲ್ಲಿ 130 ಕೋಟಿ ಜನರು, ದಿನವೊಂದಕ್ಕೆ ಒಂದು ಅಮೆರಿಕನ್ ಡಾಲರಿಗಿಂತಲೂ ಕಡಿಮೆ ಮೌಲ್ಯವುಳ್ಳ ಹಣದೊಂದಿಗೆ ಜೀವನವನ್ನು ಸಾಗಿಸಬೇಕಾಗುತ್ತದೆ. ತಮ್ಮ ಕುರಿತಾಗಿ ಯಾರಾದರೂ ಚಿಂತಿಸುತ್ತಾರೊ ಎಂದು ಇವರು ಸಹ ಯೋಚಿಸುತ್ತಿರಬಹುದು. ಸಾವಿರಾರು ಮಂದಿ ನಿರಾಶ್ರಿತರು ಸಹ ಹಾಗೆ ಯೋಚಿಸುತ್ತಾರೆ. ದಿ ಐರಿಷ್ ಟೈಮ್ಸ್ ವಾರ್ತಾಪತ್ರಿಕೆಯಲ್ಲಿನ ಒಂದು ವರದಿಗನುಸಾರ, “ತಮ್ಮ ಮನಸ್ಸಿಗೆ ಹಿಡಿಸದ ಈ ಆಯ್ಕೆಯು ಇವರ ಮುಂದಿದೆ: ನಿರಾಶ್ರಿತರ ಶಿಬಿರದಲ್ಲೇ ಉಳಿಯುವುದು ಅಥವಾ ಆದರಣೆ ತೋರದ ದೇಶದಲ್ಲಿ ಜೀವಿಸುವುದು ಅಥವಾ ಈಗಲೂ ಯುದ್ಧ ಇಲ್ಲವೇ ಕುಲಸಂಬಂಧಿತ ವಿಭಜನೆಯಿಂದ ಛಿದ್ರಗೊಂಡಿರುವ ಸ್ವದೇಶಕ್ಕೆ ಹಿಂದಿರುಗುವುದು.” ಅದೇ ವರದಿಯು ಹೇಳಿದ್ದು: “ಹೀಗೆ ಮಾಡಿ: ಕಣ್ಣುಗಳನ್ನು ಮುಚ್ಚಿಕೊಂಡು ಒಂದರಿಂದ ಮೂರರ ವರೆಗೆ ಎಣಿಸಿರಿ. ಮನಸ್ಸಿನಲ್ಲಿಡಿ, ಇಷ್ಟರೊಳಗೆ ಒಂದು ಮಗು ಸತ್ತಿರುತ್ತದೆ. ನ್ಯೂನಪೋಷಣೆ ಅಥವಾ ತಡೆಗಟ್ಟಸಾಧ್ಯವಿರುವ ರೋಗದಿಂದ ಇಂದು ಸಾಯಲಿರುವ 35,000 ಮಕ್ಕಳಲ್ಲಿ ಇದು ಒಂದಾಗಿದೆ.” ಎಷ್ಟು ಭಯಂಕರ! ಆದುದರಿಂದಲೇ ಅನೇಕರು ಸಂಕಟ ಮತ್ತು ಮನೋವ್ಯಥೆಯಿಂದ ಆಕ್ರಂದಿಸುತ್ತಿರುವುದು ಆಶ್ಚರ್ಯಗೊಳಿಸುವ ಸಂಗತಿಯೇನಲ್ಲ!—ಯೋಬ 7:11ನ್ನು ಹೋಲಿಸಿರಿ.
ಇವೆಲ್ಲ ಕೇವಲ ಉದ್ದೇಶಿಸಲ್ಪಟ್ಟಿರುವ ಕಷ್ಟಾನುಭವಗಳೊ? ವಾಸ್ತವವಾಗಿ, ಕೇವಲ ಚಿಂತೆ ತೋರಿಸುವವನು ಮಾತ್ರವಲ್ಲದೆ, ಜನರು ಅನುಭವಿಸಿರುವ ಕಷ್ಟಾನುಭವವನ್ನು ಕೊನೆಗೊಳಿಸಲು ಮತ್ತು ಎಲ್ಲ ನೋವನ್ನು ಗುಣಪಡಿಸಲು ಶಕ್ತಿಯುಳ್ಳ ಯಾರಾದರೊಬ್ಬನು ಇದ್ದಾನೊ?
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover and page 32: Reuters/Nikola Solic/Archive Photos
[ಪುಟ 3 ರಲ್ಲಿರುವ ಚಿತ್ರ ಕೃಪೆ]
A. Boulat/Sipa Press