ನೀವು ಕಡೇ ವರೆಗೂ ತಾಳಿಕೊಳ್ಳಬಲ್ಲಿರಿ
“ನಮ್ಮ ಮುಂದೆ ಇಡಲ್ಪಟ್ಟಿರುವ ಓಟವನ್ನು ನಾವು ತಾಳ್ಮೆಯಿಂದ ಓಡೋಣ.”—ಇಬ್ರಿಯ 12:1, NW.
1, 2. ತಾಳ್ಮೆಯ ಅರ್ಥವೇನು?
“ನಿಮಗೆ ತಾಳ್ಮೆ ಬೇಕು” ಎಂದು ಅಪೊಸ್ತಲ ಪೌಲನು ಪ್ರಥಮ ಶತಮಾನದ ಇಬ್ರಿಯ ಕ್ರೈಸ್ತರಿಗೆ ಬರೆದನು. (ಇಬ್ರಿಯ 10:36) ಈ ಗುಣದ ಪ್ರಮುಖತೆಯನ್ನು ಒತ್ತಿಹೇಳುತ್ತಾ ಅಪೊಸ್ತಲ ಪೇತ್ರನು ಕ್ರೈಸ್ತರನ್ನು ಪ್ರೋತ್ಸಾಹಿಸಿದ್ದು: “ನಿಮ್ಮ ನಂಬಿಕೆಗೆ . . . ತಾಳ್ಮೆಯನ್ನು ಕೂಡಿಸಿರಿ.” (2 ಪೇತ್ರ 1:5, 6, NW) ಆದರೆ ವಾಸ್ತವದಲ್ಲಿ ತಾಳ್ಮೆಯ ನಿಜಾರ್ಥವೇನು?
2 ಗ್ರೀಕ್ ಭಾಷೆಯ ಒಂದು ನಿಘಂಟು, “ತಾಳಿಕೊ” ಎಂಬ ಶಬ್ದದ ಗ್ರೀಕ್ ಕ್ರಿಯಾಪದಕ್ಕೆ “ಓಡಿಹೋಗುವ ಬದಲು ಅದೇ ಸ್ಥಳದಲ್ಲಿರುವುದು . . . ಒಂದೇ ಕಡೆ ಸ್ಥಿರವಾಗಿ ನಿಲ್ಲುವುದು, ಪಟ್ಟುಹಿಡಿದಿರುವುದು” ಎಂಬರ್ಥವನ್ನು ಕೊಡುತ್ತದೆ. “ತಾಳ್ಮೆ” ಎಂಬ ಶಬ್ದಕ್ಕಾಗಿರುವ ಗ್ರೀಕ್ ನಾಮಪದದ ಕುರಿತು ಒಂದು ಪ್ರಮಾಣಗ್ರಂಥವು ಹೇಳುವುದು: “ಎಲ್ಲ ಸಂಗತಿಗಳು ಸಂಭವಿಸುವುದು ಅನಿವಾರ್ಯ ಎಂಬ ಕಾರಣದಿಂದಲ್ಲ, ಬದಲಾಗಿ ಉತ್ಸಾಹಭರಿತ ನಿರೀಕ್ಷೆಯಿಂದ ಸಹಿಸಿಕೊಳ್ಳುವಂತಹ ಒಂದು ಮನೋಭಾವವೇ ತಾಳ್ಮೆಯಾಗಿದೆ . . . ಇದು ಪ್ರತಿಕೂಲವಾದ ಗಾಳಿಯನ್ನು ಎದುರಿಸುತ್ತಿರುವಾಗಲೂ ಒಬ್ಬ ವ್ಯಕ್ತಿಯು ಸದೃಢವಾಗಿ ನಿಲ್ಲುವಂತೆ ಮಾಡುವ ಒಂದು ಗುಣ. ಇದು ಅತಿ ಕಷ್ಟಕರವಾದ ಪರೀಕ್ಷೆಯನ್ನು ಒಂದು ಯಶಸ್ಸಾಗಿ ಮಾರ್ಪಡಿಸಸಾಧ್ಯವಿರುವಂತಹ ಒಂದು ಸದ್ಗುಣ, ಏಕೆಂದರೆ ನೋವಿನಾಚೆಯಿರುವ ಗುರಿಯನ್ನು ಅದು ನೋಡುತ್ತದೆ.” ಆದುದರಿಂದ, ಅಡೆತಡೆಗಳು ಹಾಗೂ ಕಷ್ಟತೊಂದರೆಗಳ ಎದುರಿನಲ್ಲಿಯೂ ಸ್ಥಿರವಾಗಿ ನಿಲ್ಲುವಂತೆ, ಹಾಗೂ ನಿರೀಕ್ಷೆಯನ್ನು ಕಳೆದುಕೊಳ್ಳದಿರುವಂತೆ ತಾಳ್ಮೆಯು ಒಬ್ಬನನ್ನು ಶಕ್ತನನ್ನಾಗಿ ಮಾಡುತ್ತದೆ. ಇಂದು ವಿಶೇಷವಾಗಿ ಯಾರಿಗೆ ಈ ಗುಣದ ಆವಶ್ಯಕತೆಯಿದೆ?
3, 4. (ಎ) ಯಾರಿಗೆ ಈ ಗುಣದ ಆವಶ್ಯಕತೆಯಿದೆ? (ಬಿ) ನಾವು ಕಡೇ ವರೆಗೂ ಏಕೆ ತಾಳಿಕೊಳ್ಳಬೇಕು?
3 ತಾಳ್ಮೆಯು ಬೇಕಾಗಿರುವ ಒಂದು ಓಟದಲ್ಲಿ ಕ್ರೈಸ್ತರೆಲ್ಲರೂ ಸಾಂಕೇತಿಕವಾಗಿ ಒಳಗೂಡಿದ್ದಾರೆ. ಸುಮಾರು ಸಾ.ಶ. 65ನೆಯ ವರ್ಷದಲ್ಲಿ, ತನ್ನ ಜೊತೆ ಕೆಲಸಗಾರನೂ ನಂಬಿಗಸ್ತ ಸಂಚಾರ ಸಂಗಾತಿಯೂ ಆಗಿದ್ದ ತಿಮೊಥೆಯನಿಗೆ ಅಪೊಸ್ತಲ ಪೌಲನು ಈ ಆಶ್ವಾಸನೆದಾಯಕ ಮಾತುಗಳನ್ನು ಬರೆದನು: “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ [“ಕೊನೆಗೊಳಿಸಿದ್ದೇನೆ,” NW], ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.” (2 ತಿಮೊಥೆಯ 4:7) “ಓಟವನ್ನು ಕೊನೆಗೊಳಿಸಿದ್ದೇನೆ” ಎಂಬ ಅಭಿವ್ಯಕ್ತಿಯನ್ನು ಉಪಯೋಗಿಸುವ ಮೂಲಕ ಪೌಲನು, ಒಬ್ಬ ಕ್ರೈಸ್ತನೋಪಾದಿ ತನ್ನ ಜೀವಿತವನ್ನು ಆರಂಭದ ಹಂತ ಹಾಗೂ ಅಂತಿಮ ರೇಖೆಯಿರುವ ಒಂದು ಓಟಕ್ಕೆ ಹೋಲಿಸುತ್ತಿದ್ದನು. ಈ ಸಮಯದಷ್ಟಕ್ಕೆ ಪೌಲನು ಓಟದ ಅಂತ್ಯವನ್ನು ವಿಜಯೋತ್ಸಾಹದಿಂದ ಸಮೀಪಿಸುತ್ತಿದ್ದನು, ಮತ್ತು ಬಹುಮಾನವನ್ನು ಪಡೆದುಕೊಳ್ಳಲು ದೃಢನಿಶ್ಚಯದಿಂದ ಎದುರುನೋಡುತ್ತಿದ್ದನು. ಅವನು ಹೇಳಿದ್ದು: “ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗೆ ಸಿದ್ಧವಾಗಿದೆ; ಅದನ್ನು ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು.” (2 ತಿಮೊಥೆಯ 4:8) ತಾನು ಕಡೇ ವರೆಗೂ ತಾಳಿಕೊಂಡದ್ದರಿಂದ ತನಗೆ ಖಂಡಿತವಾಗಿಯೂ ಬಹುಮಾನವು ಸಿಗುತ್ತದೆ ಎಂಬ ವಿಷಯದಲ್ಲಿ ಪೌಲನಿಗೆ ದೃಢಭರವಸೆಯಿತ್ತು. ಹಾಗಾದರೆ ನಮ್ಮೆಲ್ಲರ ಕುರಿತಾಗಿ ಏನು?
4 ಯಾರು ಓಟದಲ್ಲಿ ಭಾಗವಹಿಸುತ್ತಿದ್ದಾರೋ ಅವರೆಲ್ಲರನ್ನು ಉತ್ತೇಜಿಸಲಿಕ್ಕಾಗಿ ಪೌಲನು ಬರೆದುದು: “ನಮ್ಮ ಮುಂದೆ ಇಡಲ್ಪಟ್ಟಿರುವ ಓಟವನ್ನು ನಾವು ತಾಳ್ಮೆಯಿಂದ ಓಡೋಣ.” (ಇಬ್ರಿಯ 12:1, NW) ಕ್ರೈಸ್ತರೋಪಾದಿ, ಯೇಸು ಕ್ರಿಸ್ತನ ಮೂಲಕ ನಾವು ನಮ್ಮನ್ನು ಯೆಹೋವ ದೇವರಿಗೆ ಸಮರ್ಪಿಸಿಕೊಳ್ಳುವಾಗ, ಈ ತಾಳ್ಮೆಯ ಓಟವನ್ನು ನಾವು ಆರಂಭಿಸುತ್ತೇವೆ. ಶಿಷ್ಯತ್ವದ ಮಾರ್ಗವು ಒಳ್ಳೆಯ ರೀತಿಯಲ್ಲಿ ಆರಂಭವಾಗುವುದು ಅತಿ ಪ್ರಾಮುಖ್ಯವಾದ ಸಂಗತಿಯಾಗಿದೆಯಾದರೂ, ನಾವು ಈ ದಾರಿಯಲ್ಲಿ ಕೊನೆಮುಟ್ಟುವುದೇ ಅಂತಿಮವಾಗಿ ಗಣನೆಗೆ ತೆಗೆದುಕೊಳ್ಳಲ್ಪಡುತ್ತದೆ. ಯೇಸು ಹೇಳಿದ್ದು: “ಆದರೆ ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು.” (ಮತ್ತಾಯ 24:13) ಯಾರು ಓಟವನ್ನು ಯಶಸ್ವಿಕರವಾಗಿ ಮುಗಿಸುತ್ತಾರೋ ಅವರಿಗೆ ಕಾದಿರುವ ಬಹುಮಾನವು ನಿತ್ಯಜೀವವೇ ಆಗಿದೆ! ಆದುದರಿಂದ, ಮನಸ್ಸಿನಲ್ಲಿ ಒಂದು ಗುರಿಯುಳ್ಳವರಾಗಿದ್ದು ನಾವು ಕಡೇ ವರೆಗೂ ತಾಳಿಕೊಳ್ಳಬೇಕು. ಈ ಗುರಿಯನ್ನು ಸಾಧಿಸಲು ಯಾವುದು ನಮಗೆ ಸಹಾಯ ಮಾಡುವುದು?
ಸರಿಯಾದ ಪೋಷಣೆ ಅತ್ಯಗತ್ಯ
5, 6. (ಎ) ಜೀವಿತದ ಓಟದಲ್ಲಿ ತಾಳಿಕೊಳ್ಳಬೇಕಾದರೆ, ನಾವು ಯಾವುದಕ್ಕೆ ಗಮನಕೊಡಬೇಕು? (ಬಿ) ನಾವು ಯಾವ ಆತ್ಮಿಕ ಒದಗಿಸುವಿಕೆಗಳನ್ನು ಉಪಯೋಗಿಸಿಕೊಳ್ಳಬೇಕು ಮತ್ತು ಏಕೆ?
5 ಪುರಾತನ ಕಾಲದಲ್ಲಿ, ಗ್ರೀಸಿನ ಕೊರಿಂಥ ಪಟ್ಟಣದ ಬಳಿಯೇ ಸುಪ್ರಸಿದ್ಧ ಇಸ್ತ್ಮಿಅನ್ ಪಂದ್ಯಗಳು ನಡೆಯುತ್ತಿದ್ದವು. ಅಲ್ಲಿ ನಡೆಯುತ್ತಿದ್ದ ಕ್ರೀಡಾಸ್ಪರ್ಧೆಗಳು ಹಾಗೂ ಇನ್ನಿತರ ಪಂದ್ಯಗಳ ವಿಷಯದಲ್ಲಿ ಕೊರಿಂಥದ ಸಹೋದರರು ಚಿರಪರಿಚಿತರಾಗಿದ್ದರು ಎಂಬುದು ಪೌಲನಿಗೆ ಖಂಡಿತವಾಗಿಯೂ ಗೊತ್ತಿತ್ತು. ಅವರಿಗೆ ಗೊತ್ತಿದ್ದ ವಿಷಯದ ಆಧಾರದ ಮೇಲೆ, ಅವರು ಒಳಗೂಡಿದ್ದಂತಹ ಜೀವಿತದ ಓಟದ ಕುರಿತು ಅವರಿಗೆ ಪೌಲನು ಜ್ಞಾಪಕ ಹುಟ್ಟಿಸಿದನು: “ರಂಗಸ್ಥಾನದಲ್ಲಿ ಓಡುವದಕ್ಕೆ ಗೊತ್ತಾದವರೆಲ್ಲರೂ ಓಡುತ್ತಾರಾದರೂ ಒಬ್ಬನು ಮಾತ್ರ ಬಿರುದನ್ನು [“ಬಹುಮಾನವನ್ನು,” NW] ಹೊಂದುತ್ತಾನೆ ಎಂಬದು ನಿಮಗೆ ತಿಳಿಯದೋ? ಅವರಂತೆ ನೀವೂ ಬಹುಮಾನವನ್ನು ಪಡಕೊಳ್ಳಬೇಕೆಂತಲೇ ಓಡಿರಿ.” ಓಟದಲ್ಲೇ ಉಳಿದು, ಅದು ಕೊನೆಗೊಳ್ಳುವ ತನಕ ಓಡುತ್ತಾ ಇರುವುದರ ಮಹತ್ವವನ್ನು ಪೌಲನು ಇಲ್ಲಿ ಒತ್ತಿಹೇಳಿದನು. “ಒಂದು ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಯು, ಎಲ್ಲ ವಿಷಯಗಳಲ್ಲಿ ಆತ್ಮಸಂಯಮವನ್ನು ತೋರಿಸುತ್ತಾನೆ” (NW) ಎಂದು ಅವನು ಹೇಳಿದನು. ಹೌದು, ಪುರಾತನ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದ ಸ್ಪರ್ಧಾಳುಗಳು, ಕಟ್ಟುನಿಟ್ಟಾದ ತರಬೇತಿಗೆ ತಮ್ಮನ್ನು ಅಧೀನಪಡಿಸಿಕೊಂಡಿದ್ದರು, ಅಷ್ಟುಮಾತ್ರವಲ್ಲದೆ, ತಿನ್ನುವ ಹಾಗೂ ಕುಡಿಯುವ ಕ್ರಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು, ಮತ್ತು ಜಯವನ್ನು ಪಡೆದುಕೊಳ್ಳಲಿಕ್ಕಾಗಿ ತಮ್ಮ ಪ್ರತಿಯೊಂದು ಚಟುವಟಿಕೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದರು.—1 ಕೊರಿಂಥ 9:24, 25.
6 ಕ್ರೈಸ್ತರು ಆರಂಭಿಸಿರುವ ಓಟದ ಕುರಿತಾಗಿ ಏನು? “ಜೀವಿತದ ಓಟದಲ್ಲಿ ನೀವು ಕಡೇ ವರೆಗೂ ತಾಳಿಕೊಳ್ಳಬೇಕಾದರೆ, ನೀವು ನಿಮ್ಮ ಆತ್ಮಿಕ ಪೋಷಣೆಗೆ ಅತ್ಯಧಿಕ ಗಮನವನ್ನು ಕೊಡಬೇಕು” ಎಂದು ಯೆಹೋವನ ಸಾಕ್ಷಿಗಳ ಸಭೆಯ ಹಿರಿಯರೊಬ್ಬರು ಹೇಳುತ್ತಾರೆ. “ತಾಳ್ಮೆಯನ್ನು ದಯಪಾಲಿಸುವ ದೇವರಾಗಿರುವ” ಯೆಹೋವನು ನಮಗೋಸ್ಕರ ಯಾವ ಆತ್ಮಿಕ ಆಹಾರವನ್ನು ಒದಗಿಸಿದ್ದಾನೆ ಎಂಬುದನ್ನು ಪರಿಗಣಿಸಿರಿ. (ರೋಮಾಪುರ 15:5, NW) ನಮ್ಮ ಆತ್ಮಿಕ ಪೋಷಣೆಯ ಅತಿ ಮುಖ್ಯ ಮೂಲವು, ದೇವರ ವಾಕ್ಯವಾದ ಬೈಬಲೇ ಆಗಿದೆ. ಆದುದರಿಂದ, ನಾವು ಕ್ರಮವಾಗಿ ಬೈಬಲನ್ನು ಓದುವ ಕಾರ್ಯತಖ್ತೆಯನ್ನು ಇಟ್ಟುಕೊಳ್ಳಬಾರದೋ? “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮೂಲಕ ಯೆಹೋವನು, ಕಾವಲಿನಬುರುಜು ಮತ್ತು ಎಚ್ಚರ! ಎಂಬ ಸಮಯೋಚಿತ ಪತ್ರಿಕೆಗಳನ್ನು ಹಾಗೂ ಇನ್ನಿತರ ಬೈಬಲಾಧಾರಿತ ಪ್ರಕಾಶನಗಳನ್ನು ಒದಗಿಸಿದ್ದಾನೆ. (ಮತ್ತಾಯ 24:45) ಈ ಪ್ರಕಾಶನಗಳನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸಿಸುವಲ್ಲಿ, ಇವು ಆತ್ಮಿಕವಾಗಿ ನಮ್ಮನ್ನು ಬಲಪಡಿಸುವವು. ಹೌದು, ವೈಯಕ್ತಿಕ ಅಧ್ಯಯನಕ್ಕಾಗಿ ನಾವು ಸಮಯವನ್ನು ಬದಿಗಿರಿಸಲೇಬೇಕು, ಅಂದರೆ ‘ಅನುಕೂಲಕರವಾದ ಸಮಯವನ್ನು ಖರೀದಿಸಬೇಕು.’—ಎಫೆಸ 5:16, NW.
7. (ಎ) ಕೇವಲ ಮೂಲಭೂತ ಕ್ರೈಸ್ತ ಸಿದ್ಧಾಂತಗಳನ್ನು ಮಾತ್ರ ತಿಳಿದುಕೊಳ್ಳುವುದರಲ್ಲಿ ನಾವು ಏಕೆ ತೃಪ್ತಿಪಟ್ಟುಕೊಳ್ಳಬಾರದು? (ಬಿ) ನಾವು ಹೇಗೆ ‘ಪೂರ್ಣವಾದ ತಿಳುವಳಿಕೆಯ ಕಡೆಗೆ ಸಾಗುತ್ತಾ ಹೋಗ’ಬಹುದು?
7 ಕ್ರೈಸ್ತ ಶಿಷ್ಯತ್ವದ ಮಾರ್ಗದಲ್ಲೇ ಮುಂದುವರಿಯಬೇಕಾದರೆ, ಮೂಲಭೂತವಾದ “ಪ್ರಥಮಬೋಧನೆ”ಗಿಂತಲೂ ಹೆಚ್ಚಿನದ್ದನ್ನು ತಿಳಿದವರಾಗಿದ್ದು, ‘ಪೂರ್ಣವಾದ ತಿಳುವಳಿಕೆಯ ಕಡೆಗೆ ಸಾಗುತ್ತಾ ಹೋಗು’ವವರಾಗಿರುವ ಅಗತ್ಯವಿದೆ. (ಇಬ್ರಿಯ 6:1) ಆದುದರಿಂದ, ಸತ್ಯದ “ಅಗಲ ಉದ್ದ ಎತ್ತರ ಆಳ” ಎಷ್ಟೆಂಬುದನ್ನು ತಿಳಿದುಕೊಳ್ಳುವ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಮತ್ತು “ಪ್ರಾಯಸ್ಥರಿಗೋಸ್ಕರ ಇರುವ ಗಟ್ಟಿಯಾದ ಆಹಾರ”ದಿಂದ ನಮ್ಮನ್ನು ಪೋಷಿಸಿಕೊಳ್ಳಬೇಕು. (ಎಫೆಸ 3:18; ಇಬ್ರಿಯ 5:12-14) ಉದಾಹರಣೆಗೆ, ಭೂಮಿಯ ಮೇಲಿನ ಯೇಸುವಿನ ಜೀವಿತದ ಕುರಿತಾದ ನಾಲ್ಕು ವಿಶ್ವಾಸಾರ್ಹ ವೃತ್ತಾಂತಗಳನ್ನು—ಮತ್ತಾಯ, ಮಾರ್ಕ, ಲೂಕ, ಮತ್ತು ಯೋಹಾನನ ಸುವಾರ್ತೆಗಳನ್ನು—ಪರಿಗಣಿಸಿರಿ. ಈ ಸುವಾರ್ತಾ ದಾಖಲೆಗಳನ್ನು ತುಂಬ ಜಾಗರೂಕತೆಯಿಂದ ಅಭ್ಯಾಸಿಸುವ ಮೂಲಕ ನಾವು, ಯೇಸು ಯಾವ ಅದ್ಭುತ ಕೃತ್ಯಗಳನ್ನು ನಡಿಸಿದನು, ಅವನು ಎಂತಹ ರೀತಿಯ ವ್ಯಕ್ತಿಯಾಗಿದ್ದನು ಎಂಬುದನ್ನು ತಿಳಿದುಕೊಳ್ಳುತ್ತೇವೆ ಮಾತ್ರವಲ್ಲ, ಅವನ ಕೃತ್ಯಗಳನ್ನು ಪ್ರಚೋದಿಸಿದಂತಹ ಆಲೋಚನಾ ರೀತಿಯನ್ನು ಸಹ ಗ್ರಹಿಸುತ್ತೇವೆ. ಆಗ ನಾವು “ಕ್ರಿಸ್ತನ ಮನಸ್ಸ”ನ್ನು ಪಡೆದುಕೊಳ್ಳಸಾಧ್ಯವಿದೆ.—1 ಕೊರಿಂಥ 2:16.
8. ಜೀವಿತದ ಓಟದಲ್ಲಿ ತಾಳ್ಮೆಯಿಂದ ಮುಂದುವರಿಯುವಂತೆ ಕ್ರೈಸ್ತ ಕೂಟಗಳು ನಮಗೆ ಹೇಗೆ ಸಹಾಯ ಮಾಡುತ್ತವೆ?
8 ಪೌಲನು ಜೊತೆವಿಶ್ವಾಸಿಗಳಿಗೆ ಬುದ್ಧಿಹೇಳಿದ್ದು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟು ಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (ಇಬ್ರಿಯ 10:24, 25) ಕ್ರೈಸ್ತ ಕೂಟಗಳು ಎಂತಹ ಪ್ರೋತ್ಸಾಹನೆಯ ಮೂಲವಾಗಿವೆ! ನಮ್ಮಲ್ಲಿ ಆಸಕ್ತಿ ತೋರಿಸುವ ಹಾಗೂ ಕಡೇ ವರೆಗೂ ತಾಳಿಕೊಳ್ಳುವಂತೆ ನಮಗೆ ಸಹಾಯ ಮಾಡಲು ಬಯಸುವಂತಹ ಪ್ರೀತಿಯ ಸಹೋದರ ಸಹೋದರಿಯರೊಂದಿಗಿರುವುದು ಎಷ್ಟು ಚೈತನ್ಯದಾಯಕವಾಗಿದೆ! ಯೆಹೋವನಿಂದ ಏರ್ಪಡಿಸಲ್ಪಟ್ಟಿರುವ ಈ ಪ್ರೀತಿಪರ ಏರ್ಪಾಡನ್ನು ನಾವು ಹಗುರವಾಗಿ ಪರಿಗಣಿಸಸಾಧ್ಯವಿಲ್ಲ. ಶ್ರದ್ಧೆಯಿಂದ ಕೂಡಿದ ನಮ್ಮ ವೈಯಕ್ತಿಕ ಅಭ್ಯಾಸದ ಮೂಲಕ ಮತ್ತು ಕ್ರಮವಾಗಿ ಕೂಟಗಳಿಗೆ ಹಾಜರಾಗುವ ಮೂಲಕ ನಾವು “ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥ”ರಾಗೋಣ.—1 ಕೊರಿಂಥ 14:20.
ನಮ್ಮನ್ನು ಹುರಿದುಂಬಿಸುವ ಪ್ರೇಕ್ಷಕರು
9, 10. (ಎ) ತಾಳ್ಮೆಯ ಓಟದಲ್ಲಿ ಪ್ರೇಕ್ಷಕರು ಯಾವ ರೀತಿಯಲ್ಲಿ ಉತ್ತೇಜನದ ಮೂಲವಾಗಿರಬಲ್ಲರು? (ಬಿ) ಇಬ್ರಿಯ 12:1ರಲ್ಲಿ ‘ಮೇಘದೋಪಾದಿಯಲ್ಲಿ ನಮ್ಮ ಸುತ್ತಲೂ ಇರುವ ಸಾಕ್ಷಿಗಳು’ ಎಂದು ತಿಳಿಸಲ್ಪಟ್ಟಿರುವ ವಿಷಯವು ಏನನ್ನು ಅರ್ಥೈಸುತ್ತದೆ?
9 ಒಬ್ಬ ಓಟಗಾರನು ಎಷ್ಟೇ ಚೆನ್ನಾಗಿ ಸಿದ್ಧನಾಗಿರುವುದಾದರೂ, ಅವನು ಓಡುತ್ತಿರುವಾಗ ದಾರಿಯಲ್ಲಿ ಕೆಲವು ಘಟನೆಗಳು ಸಂಭವಿಸಿ, ಅವನು ಎಡವಿಬೀಳುವಂತೆ ಮಾಡಸಾಧ್ಯವಿದೆ. “ಚೆನ್ನಾಗಿ ಓಡುತ್ತಾ ಇದ್ದಿರಿ; ನೀವು ಸತ್ಯವನ್ನು ಅನುವರ್ತಿಸದಂತೆ ಯಾರು ನಿಮ್ಮನ್ನು ತಡೆದರು?” ಎಂದು ಪೌಲನು ಕೇಳಿದನು. (ಗಲಾತ್ಯ 5:7) ಗಲಾತ್ಯದಲ್ಲಿ ಕೆಲವು ಕ್ರೈಸ್ತರು ಕೆಟ್ಟ ಸಹವಾಸಕ್ಕೆ ಒಳಗಾಗಿದ್ದರು, ಮತ್ತು ಇದರ ಫಲಿತಾಂಶವಾಗಿ ಅವರು ಜೀವಿತಕ್ಕಾಗಿರುವ ತಮ್ಮ ಓಟದಿಂದ ಅಪಕರ್ಷಿಸಲ್ಪಟ್ಟರು ಎಂಬುದು ಸ್ಪಷ್ಟ. ಇನ್ನೊಂದು ಕಡೆಯಲ್ಲಿ, ಇತರರು ನೀಡುವ ಬೆಂಬಲ ಹಾಗೂ ಪ್ರೋತ್ಸಾಹವು, ಓಟದಲ್ಲೇ ಉಳಿಯುವುದನ್ನು ಹೆಚ್ಚು ಸುಲಭವಾದದ್ದಾಗಿ ಮಾಡಬಲ್ಲದು. ಇದು ಹೆಚ್ಚುಕಡಿಮೆ ಒಂದು ಕ್ರೀಡೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ಮೇಲೆ ಪ್ರೇಕ್ಷಕರು ಬೀರುವ ಪ್ರಭಾವದಂತೆಯೇ ಇದೆ. ಅತ್ಯುತ್ಸಾಹದಿಂದ ಕೂಡಿದ ಗುಂಪುಗಳು, ಓಟದ ಆರಂಭದಿಂದ ಹಿಡಿದು ಗುರಿಮುಟ್ಟುವ ತನಕ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಾ, ಅವರ ರೋಮಾಂಚನವನ್ನು ಹೆಚ್ಚಿಸುತ್ತವೆ. ಪ್ರೇಕ್ಷಕರ ಜಯಘೋಷ, ಅದರೊಂದಿಗೆ ದೊಡ್ಡ ಧ್ವನಿಯ ಸಂಗೀತ ಮತ್ತು ಕರತಾಡನವು, ಸ್ಪರ್ಧಾಳುಗಳು ತಮ್ಮ ಓಟವನ್ನು ಮುಗಿಸುತ್ತಿರುವಾಗ ಅವರಿಗೆ ಬೇಕಾಗಿರುವ ಹೆಚ್ಚಿನ ಪ್ರೋತ್ಸಾಹವನ್ನು ಒದಗಿಸಬಲ್ಲದು. ಸಹಾನುಭೂತಿಯುಳ್ಳ ಪ್ರೇಕ್ಷಕರು, ಓಟದ ಪಂದ್ಯದಲ್ಲಿ ಸೇರಿರುವವರ ಮೇಲೆ ಸಕಾರಾತ್ಮಕವಾದ ಪ್ರಭಾವವನ್ನು ಬೀರಬಲ್ಲರು ಎಂಬುದಂತೂ ನಿಜ.
10 ಕ್ರೈಸ್ತರು ಆರಂಭಿಸಿರುವ ಜೀವಿತದ ಓಟದಲ್ಲಿ ಯಾರು ಪ್ರೇಕ್ಷಕರಾಗಿದ್ದಾರೆ? ಇಬ್ರಿಯ ಪುಸ್ತಕದ 11ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವಂತೆ, ಕ್ರೈಸ್ತಪೂರ್ವ ಸಮಯಗಳಲ್ಲಿದ್ದ ಯೆಹೋವನ ನಂಬಿಗಸ್ತ ಸಾಕ್ಷಿಗಳನ್ನು ಪಟ್ಟಿಮಾಡಿದ ಬಳಿಕ ಪೌಲನು ಬರೆದುದು: “ಆದಕಾರಣ, ಇಷ್ಟು ಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲೂ ಇರುವದರಿಂದ, . . . ನಮ್ಮ ಮುಂದೆ ಇಡಲ್ಪಟ್ಟಿರುವ ಓಟವನ್ನು ನಾವು ತಾಳ್ಮೆಯಿಂದ ಓಡೋಣ.” (ಇಬ್ರಿಯ 12:1, NW) ತಾನು ಹೇಳಲಿಕ್ಕಿದ್ದ ವಿಚಾರವನ್ನು ದೃಷ್ಟಾಂತಿಸಲಿಕ್ಕಾಗಿ ಪೌಲನು ಇಲ್ಲಿ ಮೇಘದ ರೂಪಕಾಲಂಕಾರವನ್ನು ಉಪಯೋಗಿಸಿದನಾದರೂ, ಸ್ಪಷ್ಟವಾಗಿ ಚಿತ್ರಿಸಲ್ಪಟ್ಟ ನಿರ್ದಿಷ್ಟ ಗಾತ್ರದ ಹಾಗೂ ಆಕಾರದ ಮೇಘವನ್ನು ವರ್ಣಿಸುವಂತಹ ಗ್ರೀಕ್ ಶಬ್ದವನ್ನು ಅವನು ಉಪಯೋಗಿಸಲಿಲ್ಲ. ಅದಕ್ಕೆ ಬದಲಾಗಿ, ನಿಘಂಟುಕಾರರಾದ ಡಬ್ಲ್ಯೂ. ಈ. ವೈನ್ರಿಗನುಸಾರ, “ಯಾವುದೇ ಆಕಾರವಿಲ್ಲದಂತಹ ಒಂದು ಮೇಘವನ್ನು, ಅಂದರೆ ಇಡೀ ಆಕಾಶವನ್ನೇ ಆವರಿಸುವ ಮೋಡವನ್ನು ಸೂಚಿಸು”ವಂತಹ ಒಂದು ಶಬ್ದವನ್ನು ಅವನು ಉಪಯೋಗಿಸಿದನು. ಸ್ಪಷ್ಟವಾಗಿಯೇ, ಸಾಕ್ಷಿಗಳ ಒಂದು ದೊಡ್ಡ ಸಮುದಾಯವು ಪೌಲನ ಮನಸ್ಸಿನಲ್ಲಿತ್ತು—ಅವರು ಎಷ್ಟು ದೊಡ್ಡ ಸಮೂಹವಾಗಿದ್ದರೆಂದರೆ, ಒಂದು ದೊಡ್ಡ, ದಟ್ಟವಾಗಿ ಕವಿದ ಮೋಡದಂತೆ ಇದ್ದರು.
11, 12. (ಎ) ಓಟವನ್ನು ಕೊನೇ ವರೆಗೂ ಓಡಿ ಮುಗಿಸುವಂತೆ, ಕ್ರೈಸ್ತಪೂರ್ವ ಸಮಯದಲ್ಲಿದ್ದ ನಂಬಿಗಸ್ತ ಸಾಕ್ಷಿಗಳು ನಮ್ಮನ್ನು ಹೇಗೆ ಪ್ರಚೋದಿಸಸಾಧ್ಯವಿದೆ? (ಬಿ) ‘ಮೇಘದೋಪಾದಿಯಲ್ಲಿರುವ ಸಾಕ್ಷಿ’ಗಳಿಂದ ನಾವು ಹೇಗೆ ಸಂಪೂರ್ಣವಾಗಿ ಪ್ರಯೋಜನವನ್ನು ಪಡೆದುಕೊಳ್ಳಬಹುದು?
11 ಕ್ರೈಸ್ತಪೂರ್ವ ಸಮಯದಲ್ಲಿದ್ದ ನಂಬಿಗಸ್ತ ಸಾಕ್ಷಿಗಳು, ಅಕ್ಷರಾರ್ಥವಾಗಿ ಆಧುನಿಕ ದಿನದ ಪ್ರೇಕ್ಷಕರಾಗಿರಸಾಧ್ಯವಿದೆಯೊ? ಖಂಡಿತವಾಗಿಯೂ ಇಲ್ಲ. ಅವರೆಲ್ಲರೂ ಪುನರುತ್ಥಾನಕ್ಕಾಗಿ ಕಾಯುತ್ತಾ ಮರಣದಲ್ಲಿ ನಿದ್ರಿಸುತ್ತಿದ್ದಾರೆ. ಆದರೂ, ಬದುಕಿದ್ದಾಗ ಅವರೆಲ್ಲರೂ ಯಶಸ್ವೀ ಓಟಗಾರರಾಗಿದ್ದರು, ಮತ್ತು ಬೈಬಲಿನ ಪುಟಗಳಲ್ಲಿ ಅವರ ಮಾದರಿಗಳು ದಾಖಲಿಸಲ್ಪಟ್ಟಿವೆ. ನಾವು ಶಾಸ್ತ್ರವಚನಗಳನ್ನು ಅಭ್ಯಾಸಿಸುವಾಗ, ಈ ನಂಬಿಗಸ್ತ ಜನರು ನಮ್ಮ ಮನಸ್ಸಿನ ಮೇಲೆ ಬಲವಾದ ಪ್ರಭಾವವನ್ನು ಬೀರಿ, ನಮ್ಮ ಓಟವನ್ನು ಕೊನೇ ವರೆಗೂ ಓಡಿ ಮುಗಿಸುವಂತೆ ನಮ್ಮನ್ನು ಪ್ರಚೋದಿಸಸಾಧ್ಯವಿದೆ.—ರೋಮಾಪುರ 15:4.a
12 ದೃಷ್ಟಾಂತಕ್ಕಾಗಿ, ಲೌಕಿಕ ಸುಯೋಗಗಳು ನಮಗೆ ಆಕರ್ಷಣೆಯನ್ನು ಒಡ್ಡುವಾಗ, ಮೋಶೆಯು ಹೇಗೆ ಐಗುಪ್ತದ ಮಹಾ ವೈಭವಗಳನ್ನು ತಿರಸ್ಕರಿಸಿದನೆಂಬುದನ್ನು ಪರಿಗಣಿಸುವುದು, ದೃಢಚಿತ್ತರಾಗಿ ನಿಲ್ಲುವಂತೆ ನಮ್ಮನ್ನು ಪ್ರಚೋದಿಸುವುದಿಲ್ಲವೋ? ನಾವು ಎದುರಿಸುತ್ತಿರುವ ಒಂದು ಪರೀಕ್ಷೆಯು ತುಂಬ ಕಠಿನವಾಗಿ ಕಂಡುಬರುವಲ್ಲಿ, ತನ್ನ ಒಬ್ಬನೇ ಮಗನಾದ ಇಸಾಕನನ್ನು ಬಲಿಕೊಡುವಂತೆ ಅಬ್ರಹಾಮನಿಗೆ ಕೇಳಿಕೊಂಡಾಗ ಅವನು ಎದುರಿಸಿದ ಉಗ್ರ ಪರೀಕ್ಷೆಯನ್ನು ಜ್ಞಾಪಿಸಿಕೊಳ್ಳುವುದು, ಖಂಡಿತವಾಗಿಯೂ ನಮ್ಮ ನಂಬಿಕೆಯ ಹೋರಾಟದಲ್ಲಿ ನಾವು ಎಂದಿಗೂ ಪ್ರಯತ್ನವನ್ನು ಬಿಟ್ಟುಬಿಡದಂತೆ ನಮ್ಮನ್ನು ಉತ್ತೇಜಿಸುವುದು. ಈ ನಂಬಿಗಸ್ತ ಸಾಕ್ಷಿಗಳ ‘ಮೇಘ’ವು ನಮ್ಮ ಮೇಲೆ ಬೀರುವ ಪ್ರಭಾವವು, ನಮ್ಮ ತಿಳಿವಳಿಕೆಯ ದೃಷ್ಟಿಯಿಂದ ನಾವು ಅವರನ್ನು ಎಷ್ಟು ಸ್ಪಷ್ಟವಾಗಿ ನೋಡುತ್ತೇವೆ ಎಂಬುದರ ಮೇಲೆ ಹೊಂದಿಕೊಂಡಿದೆ.
13. ಜೀವಿತದ ಓಟದಲ್ಲಿ ಯೆಹೋವನ ಆಧುನಿಕ ದಿನದ ಸಾಕ್ಷಿಗಳು ನಮ್ಮನ್ನು ಯಾವ ರೀತಿಯಲ್ಲಿ ಹುರಿದುಂಬಿಸುತ್ತಾರೆ?
13 ಆಧುನಿಕ ಸಮಯಗಳಲ್ಲಿಯೂ ಅನೇಕಾನೇಕ ಯೆಹೋವನ ಸಾಕ್ಷಿಗಳು ನಮ್ಮ ಸುತ್ತಲೂ ಇದ್ದಾರೆ. ಅಭಿಷಿಕ್ತ ಕ್ರೈಸ್ತರಿಂದ ಹಾಗೂ “ಮಹಾ ಸಮೂಹ”ದ ಸ್ತ್ರೀಪುರುಷರಿಂದ ನಂಬಿಕೆಯ ಎಂತಹ ಮಹಾನ್ ಮಾದರಿಗಳು ಇಡಲ್ಪಟ್ಟಿವೆ! (ಪ್ರಕಟನೆ 7:9) ಈ ಪತ್ರಿಕೆಯಲ್ಲಿ ಮತ್ತು ಇನ್ನಿತರ ವಾಚ್ ಟವರ್ ಪ್ರಕಾಶನಗಳಲ್ಲಿ ನಾವು ಆಗಿಂದಾಗ್ಗೆ ಅವರ ಜೀವನಕಥೆಗಳನ್ನು ಓದಸಾಧ್ಯವಿದೆ.b ಅವರ ನಂಬಿಕೆಯ ಕುರಿತು ಪುನರಾಲೋಚಿಸುವಾಗ, ಕಡೇ ವರೆಗೂ ತಾಳಿಕೊಳ್ಳುವಂತೆ ನಮಗೆ ಅದರಿಂದ ಪ್ರೋತ್ಸಾಹನೆಯು ಸಿಗುತ್ತದೆ. ಮತ್ತು ಸ್ವತಃ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುತ್ತಿರುವ ಆಪ್ತ ಸ್ನೇಹಿತರು ಹಾಗೂ ಸಂಬಂಧಿಕರ ಬೆಂಬಲವನ್ನು ಪಡೆದುಕೊಳ್ಳುವುದು ಎಷ್ಟು ಚೆನ್ನಾಗಿರುತ್ತದೆ! ಹೌದು, ಜೀವಿತದ ಓಟದಲ್ಲಿ ನಮ್ಮನ್ನು ಹುರಿದುಂಬಿಸಲಿಕ್ಕಾಗಿ ನಮ್ಮ ಸುತ್ತಲೂ ಅನೇಕ ಜನರಿದ್ದಾರೆ.
ಓಟದ ವೇಗವನ್ನು ವಿವೇಕದಿಂದ ನಿಯಂತ್ರಿಸಿರಿ
14, 15. (ಎ) ನಾವು ಬಹಳ ವಿವೇಕದಿಂದ ವೇಗವನ್ನು ನಿಯಂತ್ರಿಸುವುದು ಏಕೆ ಪ್ರಾಮುಖ್ಯವಾದದ್ದಾಗಿದೆ? (ಬಿ) ಕೆಲವೊಂದು ಗುರಿಗಳನ್ನು ಇಡುವಾಗ ನಾವು ಏಕೆ ಯುಕ್ತಾಯುಕ್ತ ಪರಿಜ್ಞಾನವುಳ್ಳವರಾಗಿರತಕ್ಕದ್ದು?
14 ಮ್ಯಾರಥಾನ್ನಂತಹ ದೀರ್ಘವಾದ ಓಟವನ್ನು ಓಡುತ್ತಿರುವಾಗ, ಒಬ್ಬ ಓಟಗಾರನು ತನ್ನ ವೇಗವನ್ನು ಬಹಳ ವಿವೇಕದಿಂದ ನಿಯಂತ್ರಿಸತಕ್ಕದ್ದು. “ಓಟದಲ್ಲಿ ಆರಂಭದಲ್ಲೇ ತುಂಬ ವೇಗವಾಗಿ ಓಡುವಲ್ಲಿ ನೀವು ಸೋತುಹೋಗಬಹುದು” ಎಂದು ನ್ಯೂ ಯಾರ್ಕ್ ರನ್ನರ್ ಪತ್ರಿಕೆಯು ಹೇಳುತ್ತದೆ. “ಇದರ ಪರಿಣಾಮವಾಗಿ, ಕೊನೆಯ ಕೆಲವು ಮೈಲುಗಳನ್ನು ಓಡುವುದು ಒಂದು ದೀರ್ಘ ಹೋರಾಟವಾಗಿ ಕಂಡುಬರಬಹುದು ಅಥವಾ ಓಟಗಾರನು ಓಟವನ್ನು ಅರ್ಧಕ್ಕೇ ನಿಲ್ಲಿಸಿಬಿಡಬಹುದು.” ಮ್ಯಾರಥಾನ್ ಆಟಗಾರನೊಬ್ಬನು ಹೀಗೆ ಜ್ಞಾಪಿಸಿಕೊಳ್ಳುತ್ತಾನೆ: “ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಸಿದ್ಧತೆಯಲ್ಲಿ ನಾನು ಒಂದು ಉಪನ್ಯಾಸಕ್ಕೆ ಹಾಜರಾದೆ, ಅಲ್ಲಿ ಒಬ್ಬ ಭಾಷಣಕರ್ತನು ಎಚ್ಚರಿಕೆ ನೀಡಿದ್ದು: ‘ಅತ್ಯಂತ ವೇಗವಾಗಿ ಓಡುವ ಓಟಗಾರರಿಗೆ ಸರಿಸಮವಾಗಿ ಓಡಲು ಖಂಡಿತವಾಗಿಯೂ ಪ್ರಯತ್ನಿಸಬೇಡಿ. ನಿಮ್ಮದೇ ಆದ ವೇಗದಲ್ಲಿ ಓಡಿರಿ. ಇಲ್ಲದಿದ್ದರೆ ನೀವು ತುಂಬ ದಣಿದುಹೋಗುವಿರಿ ಮತ್ತು ಓಟವನ್ನು ಅರ್ಧಕ್ಕೇ ನಿಲ್ಲಿಸಬೇಕಾಗಬಹುದು.’ ಈ ಬುದ್ಧಿವಾದಕ್ಕೆ ಕಿವಿಗೊಡುವುದು, ಓಟವನ್ನು ಯಶಸ್ವಿಕರವಾಗಿ ಕೊನೆಗೊಳಿಸಲು ನನಗೆ ಸಹಾಯ ಮಾಡಿತು.”
15 ಜೀವಿತದ ಓಟದಲ್ಲಿ, ದೇವರ ಸೇವಕರು ತಮ್ಮನ್ನು ಅತ್ಯುತ್ಸಾಹದಿಂದ ನೀಡಿಕೊಳ್ಳಬೇಕು. (ಲೂಕ 13:24) ಆದರೂ, ಶಿಷ್ಯನಾದ ಯಾಕೋಬನು ಬರೆದುದು: “ಮೇಲಣಿಂದ ಬರುವ ವಿವೇಕವು . . . ಯುಕ್ತಾಯುಕ್ತ ಪರಿಜ್ಞಾನವುಳ್ಳದ್ದಾಗಿದೆ.” (ಯಾಕೋಬ 3:17, NW) ಇತರರ ಒಳ್ಳೆಯ ಮಾದರಿಯು ನಾವು ಹೆಚ್ಚನ್ನು ಮಾಡುವಂತೆ ನಮ್ಮನ್ನು ಉತ್ತೇಜಿಸಬಹುದಾದರೂ, ನಮ್ಮ ಸಾಮರ್ಥ್ಯಗಳು ಹಾಗೂ ಪರಿಸ್ಥಿತಿಗಳಿಗೆ ಹೊಂದಿಕೆಯಲ್ಲಿ ವಾಸ್ತವಿಕವಾದ ಗುರಿಗಳನ್ನಿಡುವಂತೆ ಯುಕ್ತಾಯುಕ್ತ ಪರಿಜ್ಞಾನವು ನಮಗೆ ಸಹಾಯ ಮಾಡುವುದು. ಶಾಸ್ತ್ರವಚನವು ನಮಗೆ ನೆನಪು ಹುಟ್ಟಿಸುವುದು: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ. ಯಾಕಂದರೆ ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.”—ಗಲಾತ್ಯ 6:4, 5.
16. ನಮ್ಮ ವೇಗವನ್ನು ನಿಯಂತ್ರಿಸುವುದರಲ್ಲಿ ನಮ್ರಭಾವವು ನಮಗೆ ಹೇಗೆ ಸಹಾಯ ಮಾಡುತ್ತದೆ?
16 ಮೀಕ 6:8ರಲ್ಲಿ ನಮಗೆ ಈ ಆಲೋಚನಾಪ್ರೇರಕ ಪ್ರಶ್ನೆಯು ಕೇಳಲ್ಪಟ್ಟಿದೆ: “ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?” ನಮ್ರಭಾವವು, ನಮ್ಮ ದೌರ್ಬಲ್ಯಗಳು ಅಥವಾ ಇತಿಮಿತಿಗಳ ಬಗ್ಗೆ ನಾವು ಚೆನ್ನಾಗಿ ತಿಳಿದಿರುವುದನ್ನೂ ಒಳಗೂಡುತ್ತದೆ. ದೇವರ ಸೇವೆಯಲ್ಲಿ ನಾವು ನಮ್ಮಿಂದ ಸಾಧ್ಯವಿರುವುದನ್ನು ಮಾಡುತ್ತಿರುವಾಗ, ಅನಾರೋಗ್ಯ ಅಥವಾ ವೃದ್ಧಾಪ್ಯವು ನಮ್ಮ ಮೇಲೆ ಕೆಲವು ದೌರ್ಬಲ್ಯಗಳನ್ನು ತಂದೊಡ್ಡಿದೆಯೊ? ಹಾಗಿರುವಲ್ಲಿ ನಾವು ನಿರುತ್ಸಾಹಗೊಳ್ಳದಿರೋಣ. ‘ನಮ್ಮಲ್ಲಿ ಇಲ್ಲದ್ದನ್ನು ದೇವರು ಕೇಳಿಕೊಳ್ಳುವುದಿಲ್ಲ, ನಮ್ಮಲ್ಲಿರುವುದಕ್ಕೆ ಅನುಸಾರವಾಗಿ ಕೊಟ್ಟರೆ’ ಯೆಹೋವನು ನಮ್ಮ ಪ್ರಯತ್ನಗಳು ಹಾಗೂ ತ್ಯಾಗಗಳನ್ನು ಮನಃಪೂರ್ವಕವಾಗಿ ಅಂಗೀಕರಿಸುತ್ತಾನೆ.—2 ಕೊರಿಂಥ 8:12; ಹೋಲಿಸಿರಿ ಲೂಕ 21:1-4.
ಬಹುಮಾನದ ಮೇಲೆ ನಿಮ್ಮ ದೃಷ್ಟಿಯನ್ನಿಡಿರಿ
17, 18. ಯಾವುದರ ಮೇಲೆ ದೃಷ್ಟಿಯಿಡುವುದು, ಯಾತನಾ ಕಂಬದ ಹಿಂಸೆಯನ್ನು ತಾಳಿಕೊಳ್ಳುವಂತೆ ಯೇಸುವಿಗೆ ಸಹಾಯ ಮಾಡಿತು?
17 ಜೀವಿತದ ಓಟದಲ್ಲಿ ತಾಳಿಕೊಳ್ಳುವ ಅಗತ್ಯವನ್ನು ಕೊರಿಂಥದ ಕ್ರೈಸ್ತರಿಗೆ ಒತ್ತಿಹೇಳುತ್ತಾ ಪೌಲನು, ಅವರ ಗಮನಕ್ಕೆ ಅರ್ಹವಾಗಿದ್ದ ಇಸ್ತ್ಮಿಅನ್ ಪಂದ್ಯಗಳ ಕುರಿತಾದ ಇನ್ನೊಂದು ಅಂಶವನ್ನು ಉಲ್ಲೇಖಿಸಿದನು. ಈ ಪಂದ್ಯಗಳಲ್ಲಿದ್ದ ಸ್ಪರ್ಧೆಗಳ ವಿಷಯದಲ್ಲಿ ಪೌಲನು ಬರೆದುದು: “ಅವರು ಬಾಡಿ ಹೋಗುವ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆಮಾಡುತ್ತಾರೆ [ಓಡುತ್ತಾರೆ]; ನಾವಾದರೋ ಬಾಡಿಹೋಗದ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆ ಮಾಡುವವರಾಗಿದ್ದೇವೆ. ಹೀಗಿರಲಾಗಿ ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದಿರುವ ಅವರಂತೆಯೇ ಓಡುತ್ತೇನೆ; ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ.” (1 ಕೊರಿಂಥ 9:25, 26) ಆ ಪುರಾತನ ಕ್ರೀಡೆಗಳಲ್ಲಿ ಗೆದ್ದವನಿಗೆ ದೊರಕುವ ಬಹುಮಾನವು, ಪೈನ್ ಅಥವಾ ಇತರ ಸಸ್ಯಗಳಿಂದ ಇಲ್ಲವೆ ಒಣಗಿಸಲ್ಪಟ್ಟ ಕಾಡು ಸೆಲರಿ ಸೊಪ್ಪಿನಿಂದ ಮಾಡಲ್ಪಟ್ಟ ಒಂದು ಕಿರೀಟ ಅಥವಾ ಹಾರವಾಗಿರುತ್ತಿತ್ತು. ಖಂಡಿತವಾಗಿಯೂ ಅದು “ಬಾಡಿ ಹೋಗುವ ಜಯಮಾಲಿಕೆ”ಯಾಗಿತ್ತು. ಆದರೂ, ಇಂದು ಕಡೇ ವರೆಗೂ ತಾಳಿಕೊಳ್ಳುವ ಕ್ರೈಸ್ತರಿಗೆ ಏನು ಕಾದಿದೆ?
18 ನಮಗೆ ಅತ್ಯುತ್ತಮ ಮಾದರಿಯಾಗಿರುವ ಯೇಸು ಕ್ರಿಸ್ತನನ್ನು ಸಂಬೋಧಿಸುತ್ತಾ ಅಪೊಸ್ತಲ ಪೌಲನು ಬರೆದುದು: “ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆ [“ಯಾತನೆಯ ಕಂಬ,” NW]ಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.” (ಇಬ್ರಿಯ 12:2) ಯಾತನಾ ಕಂಬಕ್ಕಿಂತಲೂ ತನ್ನ ಬಹುಮಾನದ ಕಡೆಗೆ ನೋಡುತ್ತಾ, ಯೇಸು ತನ್ನ ಮಾನವ ಜೀವಿತದ ಅಂತ್ಯದ ವರೆಗೂ ತಾಳಿಕೊಂಡನು. ಯೆಹೋವನ ನಾಮವನ್ನು ಪವಿತ್ರೀಕರಿಸುವುದರಲ್ಲಿ, ಮಾನವ ಕುಟುಂಬವು ಮರಣದಿಂದ ಮುಕ್ತಿಪಡೆಯುವಂತೆ ತನ್ನನ್ನು ಪ್ರಾಯಶ್ಚಿತ್ತ ಯಜ್ಞವಾಗಿ ಸಮರ್ಪಿಸಿಕೊಳ್ಳುವುದರಲ್ಲಿ, ಮತ್ತು ಪ್ರಮೋದವನ ಭೂಮಿಯಲ್ಲಿ ವಿಧೇಯ ಮಾನವರಿಗೆ ನಿತ್ಯಜೀವವನ್ನು ಪುನಸ್ಸ್ಥಾಪಿಸುವಾಗ ರಾಜನೂ ಮಹಾ ಯಾಜಕನೂ ಆಗಿ ಆಳುವುದರಲ್ಲಿ ಅವನಿಗಿರುವ ಆನಂದವು ಈ ಬಹುಮಾನದಲ್ಲಿ ಒಳಗೂಡಿದೆ.—ಮತ್ತಾಯ 6:9, 10; 20:28; ಇಬ್ರಿಯ 7:23-26.
19. ಕ್ರೈಸ್ತ ಶಿಷ್ಯತ್ವದ ಮಾರ್ಗವನ್ನು ಬೆನ್ನಟ್ಟುತ್ತಿರುವಾಗ, ನಾವು ಯಾವುದರ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು?
19 ಕ್ರೈಸ್ತ ಶಿಷ್ಯತ್ವದ ಮಾರ್ಗವನ್ನು ನಾವು ಬೆನ್ನಟ್ಟುತ್ತಿರುವಾಗ ನಮ್ಮ ಮುಂದೆ ಇಡಲ್ಪಟ್ಟಿರುವ ಆನಂದವನ್ನು ಪರಿಗಣಿಸೋಣ. ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಹಾಗೂ ಬೈಬಲಿನ ಜೀವರಕ್ಷಕ ಜ್ಞಾನವನ್ನು ಇತರರಿಗೆ ತಿಳಿಯಪಡಿಸುವ ಅತಿ ಸಂತೃಪ್ತಿದಾಯಕ ಕೆಲಸವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. (ಮತ್ತಾಯ 28:19, 20) ಸತ್ಯ ದೇವರಲ್ಲಿ ಆಸಕ್ತರಾಗಿರುವ ಯಾರನ್ನಾದರೂ ಕಂಡುಕೊಂಡು, ಜೀವಿತದ ಓಟವನ್ನು ಆರಂಭಿಸಲಿಕ್ಕಾಗಿ ಅವರಿಗೆ ಸಹಾಯ ಮಾಡುವುದು ಎಂತಹ ಆನಂದವಾಗಿರುವುದು! ನಾವು ಯಾರಿಗೆ ಸಾರುತ್ತೇವೋ ಆ ಜನರು ಯಾವುದೇ ಪ್ರತಿಕ್ರಿಯೆಯನ್ನು ತೋರಿಸಲಿ, ಯೆಹೋವನ ನಾಮದ ಪವಿತ್ರೀಕರಣದೊಂದಿಗೆ ಸಂಬಂಧಿಸಿದ ಕೆಲಸದಲ್ಲಿ ಪಾಲ್ಗೊಳ್ಳುವುದು ಒಂದು ಸುಯೋಗವಾಗಿದೆ. ತಿರಸ್ಕಾರ ಅಥವಾ ವಿರೋಧದ ಎದುರಿನಲ್ಲೂ, ನಮ್ಮ ಸಾರುವ ಕ್ಷೇತ್ರದಲ್ಲಿರುವ ಜನರಿಗೋಸ್ಕರ ನಾವು ಶುಶ್ರೂಷೆಯಲ್ಲಿ ತಾಳಿಕೊಂಡು ಮುಂದುವರಿಯುವಲ್ಲಿ, ಯೆಹೋವನ ಹೃದಯವನ್ನು ಸಂತೋಷಪಡಿಸುವ ಅವಕಾಶವು ನಮಗೆ ಸಿಗುವುದು. (ಜ್ಞಾನೋಕ್ತಿ 27:11) ಮತ್ತು ಆತನು ನಮಗೆ ವಾಗ್ದಾನಿಸುವ ದೊಡ್ಡ ಬಹುಮಾನವು ನಿತ್ಯಜೀವವೇ ಆಗಿದೆ. ಅದೆಷ್ಟು ಸಂತೋಷದಾಯಕವಾಗಿರುವುದು! ಈ ಆಶೀರ್ವಾದಗಳನ್ನು ದೃಷ್ಟಿಯಲ್ಲಿಟ್ಟುಕೊಂಡವರಾಗಿದ್ದು, ನಾವು ಜೀವಿತದ ಓಟದಲ್ಲಿ ಮುಂದುವರಿಯುತ್ತಾ ಇರಬೇಕು.
ಅಂತ್ಯವು ಹೆಚ್ಚೆಚ್ಚು ನಿಕಟವಾದಂತೆ
20. ಜೀವಿತದ ಓಟದ ಅಂತ್ಯವು ನಿಕಟವಾಗುತ್ತಿರುವಾಗ, ಆ ಓಟವು ಹೇಗೆ ಹೆಚ್ಚೆಚ್ಚು ಕಷ್ಟಕರವಾಗಬಹುದು?
20 ಜೀವಿತದ ಓಟದಲ್ಲಿ, ನಮ್ಮ ಕಡುವೈರಿಯಾಗಿರುವ ಪಿಶಾಚನಾದ ಸೈತಾನನೊಂದಿಗೆ ನಾವು ಹೋರಾಡಬೇಕು. ನಾವು ಅಂತ್ಯವನ್ನು ಸಮೀಪಿಸುತ್ತಿರುವುದರಿಂದ, ನಮ್ಮನ್ನು ಎಡವಿಸಲು ಅಥವಾ ನಮ್ಮ ವೇಗವನ್ನು ನಿಧಾನಗೊಳಿಸಲು ಅವನು ನಿರ್ದಯವಾಗಿ ಪ್ರಯತ್ನಿಸುತ್ತಿದ್ದಾನೆ. (ಪ್ರಕಟನೆ 12:12, 17) “ಅಂತ್ಯಕಾಲ”ವನ್ನು ಗುರುತಿಸುವ ಯುದ್ಧಗಳು, ಬರಗಾಲಗಳು, ಅಂಟುರೋಗಗಳು ಮತ್ತು ಇನ್ನಿತರ ಎಲ್ಲ ಸಂಕಷ್ಟಗಳ ಎದುರಿನಲ್ಲಿಯೂ, ನಂಬಿಗಸ್ತರಾದ ಸಮರ್ಪಿತ ರಾಜ್ಯ ಘೋಷಕರಾಗಿ ಮುಂದುವರಿಯುವುದು ಅಷ್ಟೇನೂ ಸುಲಭವಲ್ಲ. (ದಾನಿಯೇಲ 12:4; ಮತ್ತಾಯ 24:3-14; ಲೂಕ 21:11; 2 ತಿಮೊಥೆಯ 3:1-5) ಅಷ್ಟುಮಾತ್ರವಲ್ಲ, ಒಂದುವೇಳೆ ನಾವು ಅನೇಕ ದಶಕಗಳ ಹಿಂದೆಯೇ ಈ ಓಟವನ್ನು ಆರಂಭಿಸಿರುವಲ್ಲಿ, ಅಂತ್ಯವು ನಾವು ನಿರೀಕ್ಷಿಸಿದ್ದಕ್ಕಿಂತಲೂ ಇನ್ನೂ ದೂರವಿದೆಯೆಂದು ಕೆಲವೊಮ್ಮೆ ನಮಗನಿಸಬಹುದು. ಆದರೂ, ಅಂತ್ಯವು ಖಂಡಿತವಾಗಿಯೂ ಬರುವುದು ಎಂದು ದೇವರ ವಾಕ್ಯವು ನಮಗೆ ಆಶ್ವಾಸನೆ ಕೊಡುತ್ತದೆ. ಅದು ತಡವಾಗುವುದಿಲ್ಲ ಎಂದು ಯೆಹೋವನು ಹೇಳುತ್ತಾನೆ. ಅಂತ್ಯವು ತುಂಬ ನಿಕಟವಾಗಿದೆ.—ಹಬಕ್ಕೂಕ 2:3; 2 ಪೇತ್ರ 3:9, 10.
21. (ಎ) ಜೀವಿತದ ಓಟದಲ್ಲಿ ಮುಂದುವರಿಯುತ್ತಿರುವಾಗ ಯಾವುದು ನಮ್ಮನ್ನು ಬಲಪಡಿಸುವುದು? (ಬಿ) ಅಂತ್ಯವು ಹೆಚ್ಚೆಚ್ಚು ನಿಕಟವಾಗುತ್ತಿರುವಾಗ, ನಮ್ಮ ನಿರ್ಧಾರವು ಏನಾಗಿರಬೇಕು?
21 ಜೀವಿತದ ಓಟದಲ್ಲಿ ನಾವು ಯಶಸ್ಸನ್ನು ಪಡೆದುಕೊಳ್ಳಬೇಕಾದರೆ, ನಮ್ಮ ಆತ್ಮಿಕ ಪೋಷಣೆಗಾಗಿ ಯೆಹೋವನು ಏನನ್ನು ಪ್ರೀತಿಯಿಂದ ಒದಗಿಸಿದ್ದಾನೋ ಅದರಿಂದ ನಾವು ಬಲವನ್ನು ಪಡೆದುಕೊಳ್ಳಬೇಕು. ಯಾರು ನಮ್ಮಂತೆ ಪಂದ್ಯದಲ್ಲಿ ಓಡುತ್ತಿದ್ದಾರೋ ಅಂತಹ ನಮ್ಮ ಜೊತೆವಿಶ್ವಾಸಿಗಳೊಂದಿಗೆ ಕ್ರಮವಾಗಿ ಸಹವಾಸಮಾಡುವ ಮೂಲಕ ದೊರಕಸಾಧ್ಯವಿರುವ ಎಲ್ಲ ರೀತಿಯ ಉತ್ತೇಜನದ ಅಗತ್ಯವೂ ನಮಗಿದೆ. ನಮ್ಮ ದಾರಿಯಲ್ಲಿ ತೀವ್ರವಾದ ಹಿಂಸೆ ಹಾಗೂ ಮುಂಗಾಣದ ಸಂಭವಗಳು ಅಡ್ಡಬಂದು ನಮ್ಮ ಓಟವನ್ನು ಇನ್ನೂ ಕಷ್ಟಕರವಾಗಿ ಮಾಡುವುದಾದರೂ, ನಾವು ಕಡೇ ವರೆಗೂ ತಾಳಿಕೊಳ್ಳಸಾಧ್ಯವಿದೆ. ಏಕೆಂದರೆ ಯೆಹೋವನು “ಬಲಾಧಿಕ್ಯ”ವನ್ನು ಒದಗಿಸುತ್ತಾನೆ. (2 ಕೊರಿಂಥ 4:7) ನಮ್ಮ ಓಟವನ್ನು ನಾವು ವಿಜಯೋತ್ಸಾಹದಿಂದ ಮುಗಿಸುವಂತೆ ಯೆಹೋವನು ಬಯಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದು ಎಷ್ಟೊಂದು ಆಶ್ವಾಸನೆದಾಯಕವಾಗಿದೆ! ದೃಢನಿರ್ಧಾರದಿಂದ, “ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು” ಎಂಬ ಪೂರ್ಣ ಭರವಸೆಯೊಂದಿಗೆ, “ನಮ್ಮ ಮುಂದೆ ಇಡಲ್ಪಟ್ಟಿರುವ ಓಟವನ್ನು ನಾವು ತಾಳ್ಮೆಯಿಂದ ಓಡೋಣ.”—ಇಬ್ರಿಯ 12:1, NW; ಗಲಾತ್ಯ 6:9.
[ಅಧ್ಯಯನ ಪ್ರಶ್ನೆಗಳು]
a ಇಬ್ರಿಯ 11:1–12:3ರ ಚರ್ಚೆಗಾಗಿ, ವಾಚ್ಟವರ್ ಪತ್ರಿಕೆಯ ಜನವರಿ 15, 1987ರ ಸಂಚಿಕೆಯ 10-20ನೆಯ ಪುಟಗಳನ್ನು ನೋಡಿರಿ.
b ಇಂತಹ ಪ್ರೋತ್ಸಾಹಭರಿತ ಅನುಭವಗಳ ಇತ್ತೀಚಿನ ಉದಾಹರಣೆಗಳಲ್ಲಿ ಕೆಲವನ್ನು, ಕಾವಲಿನಬುರುಜು ಪತ್ರಿಕೆಯ ಜೂನ್ 1, 1998, 28-31ನೆಯ ಪುಟಗಳಲ್ಲಿ, ಸೆಪ್ಟೆಂಬರ್ 1, 1998, 24-8ನೆಯ ಪುಟಗಳಲ್ಲಿ, ಫೆಬ್ರವರಿ 1, 1999, 25-9ನೆಯ ಪುಟಗಳಲ್ಲಿ ಕಂಡುಕೊಳ್ಳಸಾಧ್ಯವಿದೆ.
ನಿಮಗೆ ನೆನಪಿದೆಯೊ?
◻ ನಾವು ಕಡೇ ವರೆಗೂ ಏಕೆ ತಾಳಿಕೊಳ್ಳಬೇಕು?
◻ ಯೆಹೋವನ ಯಾವ ಒದಗಿಸುವಿಕೆಗಳನ್ನು ನಾವು ಅಲಕ್ಷಿಸಬಾರದು?
◻ ನಾವು ಬಹಳ ವಿವೇಕದಿಂದ ನಮ್ಮ ವೇಗವನ್ನು ನಿಯಂತ್ರಿಸುವುದು ಏಕೆ ಪ್ರಾಮುಖ್ಯವಾದದ್ದಾಗಿದೆ?
◻ ಓಟದಲ್ಲಿ ಮುಂದುವರಿಯುತ್ತಿರುವಾಗ, ನಮ್ಮ ಮುಂದೆ ಯಾವ ಸಂತೋಷವು ಕಾದಿರಿಸಲ್ಪಟ್ಟಿದೆ?
[ಪುಟ 18 ರಲ್ಲಿರುವ ಚಿತ್ರ]
ಕ್ರೈಸ್ತ ಕೂಟಗಳಿಂದ ಉತ್ತೇಜನವನ್ನು ಪಡೆದುಕೊಳ್ಳಿರಿ