ದೈವಿಕ ಒಗಟುಗಳು ಮತ್ತು ದೇವರ ಉದ್ದೇಶ
ಉತ್ತರ ತಿಳಿಯದಿರುವಾಗ ಅದೊಂದು ಸವಾಲು; ಅದೇನೆಂದು ತಿಳಿದಾಗ ಅದು ಸವಾಲಲ್ಲ. ಅದೇನು? ಒಗಟು.
ಇಂದಿನ ತೀರ ಕಾರ್ಯಮಗ್ನ ಸಮಾಜದಲ್ಲಿ, ಒಗಟುಗಳನ್ನು ಮಕ್ಕಳಾಟವೆಂಬಂತೆ ನೋಡುವುದು ಜನರ ಪ್ರವೃತ್ತಿಯಾಗಿದೆಯಾದರೂ, ಪುರಾತನ ಕಾಲಗಳಲ್ಲಿ ಒಗಟನ್ನು “ವಿವೇಕದ ಒಂದು ಪರೀಕ್ಷೆ” ಆಗಿ ಕಾಣಲಾಗುತ್ತಿತ್ತು ಎಂದು ದಿ ಇಂಟರ್ಪ್ರಿಟರ್ಸ್ ಡಿಕ್ಷನೆರಿ ಆಫ್ ದ ಬೈಬಲ್ ಹೇಳುತ್ತದೆ.—ಹೋಲಿಸಿ ಜ್ಞಾನೋಕ್ತಿ 1:5, 6.
ಯೆಹೋವನು ಕೆಲವೊಮ್ಮೆ ತನ್ನ ಇಚ್ಛೆ ಅಥವಾ ಉದ್ದೇಶವನ್ನು ಸರಳವಾಗಿ ತಿಳಿಸುವ ಬದಲು, ಸಾಮ್ಯಗಳನ್ನೊ, ರಹಸ್ಯವಾದ “ಅಸ್ಪಷ್ಟ ಹೇಳಿಕೆಗಳು” ಇಲ್ಲವೆ ಗಲಿಬಿಲಿಗೊಳಿಸುವ ಒಗಟುಗಳನ್ನೊ ಹೇಳಿಸಿ, ತನ್ನ ಪ್ರವಾದನಾ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ಮೊಬ್ಬುಗೊಳಿಸಿದ್ದಾನೆ. (ಕೀರ್ತನೆ 78:2, ಕಿಂಗ್ ಜೇಮ್ಸ್ ವರ್ಷನ್; ಅರಣ್ಯಕಾಂಡ 12:8, ದಿ ಎಂಫೆಸೈಸ್ಡ್ ಬೈಬಲ್) ವಾಸ್ತವದಲ್ಲಿ, ಒಗಟಿಗಿರುವ ಹೀಬ್ರು ಪದವನ್ನು ಬೈಬಲಿನಲ್ಲಿ ಕೇವಲ 17 ಬಾರಿ ಉಪಯೋಗಿಸಲಾಗಿದೆಯಾದರೂ, ಶಾಸ್ತ್ರವು ಒಗಟುಗಳು ಮತ್ತು ಜ್ಞಾನೋಕ್ತಿಗಳಿಂದ ತುಂಬಿತುಳುಕುತ್ತದೆ.
ಬೈಬಲ್ ಒಗಟುಗಳು ಸಮೃದ್ಧ
ಸೊಲೊಮೋನ ರಾಜನು, ತನಗೆ ಕೇಳಲಾಗುತ್ತಿದ್ದ ಬಹಳ ತಬ್ಬಿಬ್ಬುಗೊಳಿಸುವ ಪ್ರಶ್ನೆಗಳನ್ನು ಇಲ್ಲವೆ ಒಗಟುಗಳನ್ನು ಬಿಡಿಸಶಕ್ತನಾಗಿದ್ದನಂತೆ. (1 ಅರಸು 10:1, ಪಾದಟಿಪ್ಪಣಿ) ಇದು ನಿಶ್ಚಯವಾಗಿಯೂ ದೇವದತ್ತ ವಿವೇಕದ ಫಲವಾಗಿತ್ತು. ತೂರಿನ ಹಿರಾಮ ರಾಜನೊಂದಿಗೆ ನಡೆದ ಒಗಟು ಬಿಡಿಸುವ ಸ್ಪರ್ಧೆಯಲ್ಲಿ ಸೊಲೊಮೋನನು ಒಮ್ಮೆ ಸೋತುಹೋದನೆಂದು ಬರೆದ ಪುರಾತನ ಇತಿಹಾಸಕಾರರ ವರದಿಗಳಲ್ಲಿ ಸತ್ಯಾಂಶವೇನಾದರೂ ಇರುವಲ್ಲಿ, ಅವನು ಧರ್ಮಭ್ರಷ್ಟತೆಯಿಂದಾಗಿ ಯೆಹೋವನ ಆತ್ಮವನ್ನು ಕಳೆದುಕೊಂಡ ಬಳಿಕ ಇದು ಸಂಭವಿಸಿದ್ದಿರಬೇಕು. ನ್ಯಾಯಸ್ಥಾಪಕನಾಗಿದ್ದ ಸಂಸೋನನು ಸಹ ಒಗಟುಪ್ರಿಯನಾಗಿದ್ದನು. ಒಂದು ಸಂದರ್ಭದಲ್ಲಿ, ಪವಿತ್ರಾತ್ಮ ಶಕ್ತಿಯಿಂದ, ದೇವರ ಶತ್ರುಗಳ ಹೃದಯಗಳಲ್ಲಿ ಭಯಭೀತಿಯನ್ನು ಉಂಟುಮಾಡುವಂತಹ ಒಂದು ಒಗಟು ಅವನಿಗೆ ಕೊಡಲ್ಪಟ್ಟಿತು.—ನ್ಯಾಯಸ್ಥಾಪಕರು 14:12-19.
ಆದರೂ ಅನೇಕ ಬೈಬಲ್ ಒಗಟುಗಳು ಯೆಹೋವನ ಉದ್ದೇಶಗಳೊಂದಿಗೆ ನೇರವಾಗಿ ಸಂಬಂಧಿಸಿವೆ. ಉದಾಹರಣೆಗೆ, ಆದಿಕಾಂಡ 3:15ನ್ನು ಪರಿಗಣಿಸಿ. ಬೈಬಲಿನ ಮುಖ್ಯ ವಿಷಯಕ್ಕೆ ಆಧಾರವಾಗಿರುವ ಈ ಪ್ರವಾದನೆಯು ತಾನೇ ಒಂದು ನಿಗೂಢ ಸಂಗತಿ, ಒಂದು “ಪವಿತ್ರ ರಹಸ್ಯ” ಆಗಿದೆ. (ರೋಮಾಪುರ 16:25, 26, NW) ಅಪೊಸ್ತಲ ಪೌಲನಿಗೆ ಪ್ರಕೃತ್ಯಾತೀತ ದರ್ಶನಗಳು ಮತ್ತು ಪ್ರಕಟನೆಗಳು ಕೊಡಲ್ಪಟ್ಟದ್ದು ಮಾತ್ರವಲ್ಲ, ದೇವರ ಉದ್ದೇಶಗಳ ಕೆಲವು ಅಂಶಗಳನ್ನು ಅವನು “ಮೊಬ್ಬಾಗಿ” ಅಥವಾ ಅಕ್ಷರಾರ್ಥವಾಗಿ “ಅಸ್ಪಷ್ಟ ಅಭಿವ್ಯಕ್ತಿ”ಯಲ್ಲಿ ನೋಡಿದನು. (1 ಕೊರಿಂಥ 13:12; 2 ಕೊರಿಂಥ 12:1-4) ಮತ್ತು ಪ್ರಕಟನೆ 13:18ರಲ್ಲಿ ಅನಿರೀಕ್ಷಿತವಾಗಿ ಮತ್ತು ಯಾವುದೇ ವಿವರಣೆಯಿಲ್ಲದೆ ಪರಿಚಯಿಸಲ್ಪಟ್ಟ, ಕಾಡುಮೃಗದ ರಹಸ್ಯ ಸಂಖ್ಯೆಯಾದ ಆರುನೂರ ಅರುವತ್ತಾರರ ಕುರಿತು ಮಾಡಲ್ಪಡುವ ಅಂತ್ಯವಿಲ್ಲದ ಊಹೆಗಳ ಕುರಿತೇನು? ಈ ದೈವಿಕ ಒಗಟುಗಳನ್ನು ಬಿಡಿಸಲು ಯಾರು ಶಕ್ತರು, ಮತ್ತು ಅವುಗಳ ಉದ್ದೇಶವೇನು?
ಪವಿತ್ರ ರಹಸ್ಯಗಳನ್ನು ಬಿಡಿಸುವುದು
ಪಂಚೇಂದ್ರಿಯಗಳಲ್ಲಿ ಒಂದಾಗಿರುವ ದೃಷ್ಟಿಯು ನಮ್ಮಲ್ಲಿ ಅನೇಕರಿಗೆ ಅತಿ ಅಮೂಲ್ಯವಾಗಿದೆ. ಆದರೆ ಬೆಳಕಿಲ್ಲದಿರುವಲ್ಲಿ, ಮಾನವ ದೃಷ್ಟಿಯು ಹೆಚ್ಚುಕಡಿಮೆ ನಿಷ್ಪ್ರಯೋಜಕ. ನಾವು ಕಾರ್ಯತಃ ಕುರುಡರಾಗಿರುವೆವು. ಮಾನವನ ಮನಸ್ಸೂ ಹೀಗೆಯೇ. ಅದಕ್ಕೆ ನಮೂನೆಗಳನ್ನು ಹೊಂದಿಸಿಕೊಳ್ಳುವ, ತರ್ಕವನ್ನು ಅನ್ವಯಿಸಿಕೊಳ್ಳುವ ಮತ್ತು ಹೀಗೆ ಒಗಟುಗಳನ್ನು ಬಿಡಿಸುವ ಅದ್ಭುತಕರವಾದ ಸಾಮರ್ಥ್ಯವಿದೆ. ಆದರೂ, ಪವಿತ್ರ ರಹಸ್ಯಗಳನ್ನು ಬಿಡಿಸಬೇಕಾದರೆ ಹೆಚ್ಚಿನದ್ದೇನೊ ಅಗತ್ಯ. ಬೈಬಲಿನಲ್ಲಿರುವ ಒಗಟುಗಳಿಗೆ ಇತರರು ಉತ್ತರಗಳನ್ನು ಕೊಡಬಹುದಾದರೂ, ಅದರ ಗ್ರಂಥಕರ್ತನು, ಬೆಳಕಿನ ದೇವರಾದ ಯೆಹೋವನು ಮಾತ್ರ ಅವುಗಳ ಉದ್ದೇಶಿತ ಅರ್ಥವನ್ನು ತಿಳಿಸಬಲ್ಲನು.—1 ಯೋಹಾನ 1:5.
ವಿಷಾದಕರವಾಗಿ, ಜನರು ಅನೇಕ ವೇಳೆ, ಯೆಹೋವನಿಂದ ಉತ್ತರಕ್ಕಾಗಿ ಕಾಯುವ ವಿಷಯದಲ್ಲಿ ತೀರ ಅಹಂಕಾರಿಗಳೂ ಸ್ವತಂತ್ರರೂ ಆಗಿರುತ್ತಾರೆ. ರಹಸ್ಯದ ಕಾರಣ ಕುತೂಹಲಿಗಳಾಗಿರುವ ಕೆಲವರು, ಸತ್ಯವನ್ನಲ್ಲ, ಬೌದ್ಧಿಕ ಸಂಗತಿಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾ, ಇವುಗಳಿಗೆ ಪರಿಹಾರವನ್ನು ದೇವರ ವಾಕ್ಯದ ಹೊರಗಿನ ಮೂಲಗಳಿಂದ ಹುಡುಕಿದ್ದಾರೆ. ಉದಾಹರಣೆಗೆ, ಕಬಾಲದಲ್ಲಿ ಹೇಳಲಾಗಿರುವ ಯೆಹೂದಿ ರಹಸ್ಯವಾದವು, ಹೀಬ್ರು ಅಕ್ಷರಮಾಲೆಯ ಸಂಖ್ಯೆಗಳು ಮತ್ತು ಅಕ್ಷರಗಳ ಮಾಂತ್ರಿಕ ವೈಶಿಷ್ಟ್ಯವನ್ನು ವಿಮರ್ಶಿಸಿತು. ಆದರೆ ಇನ್ನೊಂದು ಕಡೆಯಲ್ಲಿ, ಎರಡನೆಯ ಶತಮಾನದ ನಾಸ್ಟಿಕ್ ರಹಸ್ಯಜ್ಞಾನ ಪಂಗಡದವರು, ಹೀಬ್ರು ಮತ್ತು ಗ್ರೀಕ್ ಶಾಸ್ತ್ರಗಳಿಂದ ಮಾರ್ಮಿಕ ಅರ್ಥವನ್ನು ಕಂಡುಕೊಳ್ಳುವ ಪ್ರಯತ್ನದಿಂದ ಅವುಗಳನ್ನು ಉಪಯೋಗಿಸಿದರು.
ಆದರೆ, ಇಂತಹ ಸಕಲ ಅನ್ವೇಷಣೆಗಳು ಅವರನ್ನು ವಿಧರ್ಮಿ ಸಂಸ್ಕಾರಗಳೊಳಗೆ ಮತ್ತು ಮೂಢನಂಬಿಕೆಗಳೊಳಗೆ ಹೆಚ್ಚೆಚ್ಚಾಗಿ ಕೊಂಡೊಯ್ದು, ದೈವಿಕ ಸತ್ಯದಿಂದ ದೂರ ಹೋಗುವಂತೆ ಮಾಡಿದವು. ನಾಸ್ಟಿಕರ ತರ್ಕವು ಹೀಗಿತ್ತು: ‘ಲೋಕವು ದುಷ್ಟತ್ವದಿಂದ ತುಂಬಿರುವುದಾದರೆ, ಅದರ ಸೃಷ್ಟಿಕರ್ತನಾದ ಯೆಹೋವನು ಒಳ್ಳೆಯ ದೇವರಾಗಿರಸಾಧ್ಯವಿಲ್ಲ.’ ಅವರು ನೀಡಸಾಧ್ಯವಿದ್ದ ಅತ್ಯುತ್ತಮ ತೀರ್ಮಾನವು ಇದೆಯೊ? ಮಾನವ ತರ್ಕಸರಣಿಯು ಎಷ್ಟು ಪೊಳ್ಳು! ನಾಸ್ಟಿಕ್ ಪಂಗಡಗಳಿಂದ ಸಮಯಾನಂತರ ವಿಕಾಸಗೊಂಡ ಧರ್ಮಭ್ರಷ್ಟ ವಿಚಾರಗಳೊಂದಿಗೆ ಹೋರಾಡುತ್ತ, “ಶಾಸ್ತ್ರದಲ್ಲಿ ಬರೆದಿರುವದನ್ನು ಮೀರಿಹೋಗಬಾರದು” ಎಂದು ಅಪೊಸ್ತಲ ಪೌಲನು ತನ್ನ ಪತ್ರಿಕೆಗಳಲ್ಲಿ ಬಲವಾಗಿ ಎಚ್ಚರಿಸಿದ್ದರಲ್ಲಿ ಆಶ್ಚರ್ಯವಿಲ್ಲ!—1 ಕೊರಿಂಥ 4:6.
“ಕತ್ತಲಾದ ಹೇಳಿಕೆಗಳ” ಮೇಲೆ ಬೆಳಕನ್ನು ಬೀರುವುದು
ಆದರೂ, ಬೆಳಕಿನ ದೇವರೊಬ್ಬನು “ಕತ್ತಲಾದ ಹೇಳಿಕೆಗಳನ್ನು” ಏಕೆ ಹೇಳಬೇಕು? ಒಂದು ಒಗಟಿನ ರೀತಿಯೇ ಒಬ್ಬನ ಕಲ್ಪನಾಶಕ್ತಿಗೆ ಮತ್ತು ತಾರ್ಕಿಕವಾಗಿ ತೀರ್ಮಾನಿಸುವ ಶಕ್ತಿಗೆ ಸವಾಲೊಡ್ಡುತ್ತದೆ. ಒಂದು ಮೃಷ್ಟಾನ್ನ ಭೋಜನದಲ್ಲಿ ರುಚಿಕರವಾದ ಅಲಂಕಾರಿಕ ತಿನಿಸುಗಳಿರುವಂತೆ, ಶಾಸ್ತ್ರದಾದ್ಯಂತ ಹರಡಿರುವ ಈ ಹೇಳಿಕೆಗಳನ್ನು ಕೆಲವೊಮ್ಮೆ ಜನರ ಆಸಕ್ತಿಯನ್ನು ಕೆರಳಿಸುವುದಕ್ಕಾಗಿ ಇಲ್ಲವೆ ಕೊಡಲ್ಪಡುವ ಸಂದೇಶವನ್ನು ಸ್ಪಷ್ಟಗೊಳಿಸಲಿಕ್ಕಾಗಿ ಉಪಯೋಗಿಸಲಾಗಿದೆ. ಈ ಸಂದರ್ಭಗಳಲ್ಲಿ, ಸಾಮಾನ್ಯವಾಗಿ ವಿವರಣೆಗಳು ಒಡನೆ ಕೊಡಲ್ಪಡುತ್ತವೆ.—ಯೆಹೆಜ್ಕೇಲ 17:1-18; ಮತ್ತಾಯ 18:23-35.
ಯೆಹೋವನು ವಿವೇಕವನ್ನು ಉದಾರವಾಗಿ ನೀಡುತ್ತಾನಾದರೂ ಮನಸೋ ಇಚ್ಛೆ ನೀಡುವುದಿಲ್ಲ. (ಯಾಕೋಬ 1:5-8) ಜ್ಞಾನೋಕ್ತಿ ಪುಸ್ತಕವನ್ನು ಪರಿಗಣಿಸಿ. ಇದು ತಬ್ಬಿಬ್ಬುಗೊಳಿಸುವ ಅನೇಕ ಹೇಳಿಕೆಗಳ ಪ್ರೇರಿತ ಸಂಗ್ರಹವಾಗಿದೆ. ಕೆಲವರು ಈ ಹೇಳಿಕೆಗಳನ್ನು ಒಗಟುಗಳಾಗಿ ವೀಕ್ಷಿಸಬಹುದು. ಅವುಗಳನ್ನು ಅರ್ಥೈಸಿಕೊಳ್ಳಲು ಸಮಯ ಮತ್ತು ಮನನ ಅಗತ್ಯ. ಆದರೆ ಎಷ್ಟು ಜನರು ಈ ಪ್ರಯತ್ನವನ್ನು ಮಾಡುತ್ತಾರೆ? ಅವುಗಳಲ್ಲಿ ಅಡಗಿರುವ ವಿವೇಕವು ಅವುಗಳನ್ನು ಅಗೆಯುವವರಿಗೆ ಮಾತ್ರ ಲಭ್ಯವಾಗುತ್ತದೆ.—ಜ್ಞಾನೋಕ್ತಿ 2:1-5.
ಹಾಗೆಯೇ ಯೇಸು ತನ್ನ ಮಾತುಗಳನ್ನು ಕೇಳಿಸಿಕೊಂಡವರ ಮನೋಭಾವವನ್ನು ಬಯಲುಪಡಿಸಲು ದೃಷ್ಟಾಂತಗಳನ್ನು ಬಳಸಿದನು. ಅವನ ಸುತ್ತಲೂ ಜನಸ್ತೋಮವು ನೆರೆದುಬಂತು. ಅವನ ಕಥೆಗಳಲ್ಲಿ ಅವರು ಆನಂದಿಸಿದರು. ಅವನ ಅದ್ಭುತಗಳನ್ನು ಅವರು ಇಷ್ಟಪಟ್ಟರು. ಆದರೂ, ಅವರಲ್ಲಿ ಎಷ್ಟು ಜನರು ತಮ್ಮ ಜೀವನಶೈಲಿಯನ್ನು ಬದಲಾಯಿಸಿ ಅವನನ್ನು ಹಿಂಬಾಲಿಸಲು ಇಷ್ಟಪಟ್ಟರು? ಆದರೆ ಯೇಸುವಿನ ಶಿಷ್ಯರು ಇದಕ್ಕೆ ವ್ಯತಿರಿಕ್ತವಾದ ಭಾವವನ್ನು ತೋರಿಸಿದರು. ಅವರು ಯೇಸುವಿನ ಬೋಧನೆಗಳನ್ನು ಅರ್ಥಮಾಡಿಕೊಳ್ಳಲು ಪದೇಪದೇ ಅವನನ್ನು ಪ್ರಶ್ನಿಸಿದರು. ಅವನ ಹಿಂಬಾಲಕರಾಗಲು ಅವರು ತಮ್ಮನ್ನೇ ಇಚ್ಛಾಪೂರ್ವಕವಾಗಿ ನಿರಾಕರಿಸಿಕೊಂಡರು!—ಮತ್ತಾಯ 13:10-23, 34, 35; 16:24; ಯೋಹಾನ 16:25, 29.
ಬೆಳಕಿಗಾಗಿ ನೋಡುವುದು
ಒಂದು ಗ್ರಂಥವು ಅವಲೋಕಿಸುವುದು: “ಒಗಟುಗಳಲ್ಲಿ ಆಸಕ್ತಿಯು, ಬೌದ್ಧಿಕ ಜಾಗೃತಿಯ ಸಮಯದೊಂದಿಗೆ ಕಾಕತಾಳೀಯವಾಗುವಂತೆ ತೋರುತ್ತದೆ.” ಇಂದು, ದೇವಜನರಿಗೆ ಆತ್ಮಿಕ “ಬೆಳಕು ಮಿಂಚಿರುವಂತಹ” ಸಮಯದಲ್ಲಿ ಜೀವಿಸುವ ಮಹಾ ಸುಯೋಗ ನಮಗಿದೆ. (ಕೀರ್ತನೆ 97:11, NW; ದಾನಿಯೇಲ 12:4, 9) ಯೆಹೋವನು ತನ್ನ ಕಾಲತಖ್ತೆಗನುಸಾರ ತನ್ನ ಉದ್ದೇಶಗಳನ್ನು ತಿಳಿಯಪಡಿಸುವ ಸಮಯಕ್ಕಾಗಿ ನಾವು ತಾಳ್ಮೆಯಿಂದ ಕಾಯಬಲ್ಲೆವೊ? ಹೆಚ್ಚು ಮುಖ್ಯವಾಗಿ, ದೇವರ ಪ್ರಕಟಿತ ಚಿತ್ತಕ್ಕೆ ಹೆಚ್ಚು ಪೂರ್ಣವಾಗಿ ಹೇಗೆ ಹೊಂದಿಕೊಳ್ಳಬೇಕೆಂಬ ಅರಿವು ನಮಗೆ ಬರುವಾಗ, ನಾವು ನಮ್ಮ ಜೀವನವನ್ನು ಬದಲಾಯಿಸಲಿಕ್ಕಾಗಿ ತಕ್ಷಣ ಕ್ರಿಯೆಗೈಯುವೆವೊ? (ಕೀರ್ತನೆ 1:1-3; ಯಾಕೋಬ 1:22-25) ಹಾಗೆ ಮಾಡುವಲ್ಲಿ ಯೆಹೋವನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನು. ಮಂದವಾದ ದೃಷ್ಟಿಯನ್ನು ಕನ್ನಡಕವು ಸರಿಪಡಿಸುವಂತೆಯೇ, ಪವಿತ್ರಾತ್ಮವು ನಮ್ಮ ಆತ್ಮಿಕ ದೃಷ್ಟಿಯನ್ನು ಸರಿಪಡಿಸುತ್ತಾ, ದೇವರ ಉದ್ದೇಶದ ಸುಂದರವಾದ ಚಿತ್ರಣವನ್ನು ನಮ್ಮ ಮಾನಸಿಕ ಕಣ್ಣಿಗೆ ಸ್ಪಷ್ಟವಾಗಿ ತೋರಿಸುವುದು.—1 ಕೊರಿಂಥ 2:7, 9, 10.
ಆತ್ಮಿಕ ಒಗಟುಗಳು ನಿಶ್ಚಯವಾಗಿ “ಗೂಢಾರ್ಥಗಳನ್ನು ಬೈಲಿಗೆ” ತರುವಾತನಾದ ಯೆಹೋವನನ್ನು ಘನಪಡಿಸುತ್ತವೆ. (ದಾನಿಯೇಲ 2:28, 29) ಅಷ್ಟುಮಾತ್ರವಲ್ಲ, ಆತನು ಹೃದಯಗಳ ಪರೀಕ್ಷಕನೂ ಹೌದು. (1 ಪೂರ್ವಕಾಲವೃತ್ತಾಂತ 28:9) ದೈವಿಕ ಸತ್ಯದ ಬೆಳಕಿನ ಅನಾವರಣವು ಯಾವಾಗಲೂ ಪ್ರಗತಿಪರವಾಗಿತ್ತೆಂಬುದನ್ನು ತಿಳಿದುಕೊಳ್ಳುವುದು ನಮ್ಮನ್ನು ಆಶ್ಚರ್ಯಗೊಳಿಸಬಾರದು. (ಜ್ಞಾನೋಕ್ತಿ 4:18; ರೋಮಾಪುರ 16:25, 26) ದೇವರ ಗಹನವಾದ ವಿಚಾರಗಳ ಕುರಿತ ಜ್ಞಾನವನ್ನು, ಕೇವಲ ವ್ಯರ್ಥತೆಗೆ ನಡೆಸಬಲ್ಲ ರಹಸ್ಯವಾದದ ಮೂಲಕ ಅಥವಾ ಪೊಳ್ಳಾದ ಮಾನವ ವಿವೇಕದ ಮೂಲಕ ತಿಳಿದುಕೊಳ್ಳಲು ಬಯಸುವ ಬದಲಿಗೆ, ಯೆಹೋವ ದೇವರು ತನ್ನ “ಕತ್ತಲಾದ ಹೇಳಿಕೆ”ಗಳ ಮೇಲೆ ಸತ್ಯದ ಬೆಳಕನ್ನು ಚೆಲ್ಲುವಂತೆ ಮತ್ತು ತನ್ನ ನಿಯುಕ್ತ ಸಮಯದಲ್ಲಿ ತನ್ನ ನಂಬಿಗಸ್ತ ಸೇವಕರಿಗೆ ಅದ್ಭುತಕರವಾದ ಉದ್ದೇಶಗಳನ್ನು ತಿಳಿಯಪಡಿಸುವಂತೆ ನಾವು ಭರವಸೆಯಿಂದ ಎದುರುನೋಡೋಣ.—ಆಮೋಸ 3:7; ಮತ್ತಾಯ 24:25-27.
[ಪುಟ 26 ರಲ್ಲಿರುವ ಚಿತ್ರ ಕೃಪೆ]
Biblia Hebraica Stuttgartensia, Deutsche Bibelgesellschaft Stuttgart