ದೇವರ ವಾಕ್ಯದ ಪ್ರೇಮಿಗಳಿಗೊಂದು ಮಹತ್ವದ ಮೈಲಿಗಲ್ಲು
ದೇವರ ವಾಕ್ಯದ ಎಲ್ಲ ಪ್ರೇಮಿಗಳು 1998ರಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ತಲಪಿದರು. ಆ ವರ್ಷದಲ್ಲಿ, “ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್” ಬೈಬಲಿನ ಪ್ರತಿಗಳು ಮುದ್ರಿಸಲ್ಪಟ್ಟಾಗ, ಒಟ್ಟು ಮುದ್ರಣವು ಹತ್ತು ಕೋಟಿ ಸಂಖ್ಯೆಯನ್ನು ತಲಪಿತು. ಹೀಗೆ ಅದು ಈ ಶತಮಾನದಲ್ಲಿ ಅತಿ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಬೈಬಲುಗಳಲ್ಲಿ ಒಂದಾಗಿ ಪರಿಣಮಿಸಿದೆ!
ಅದು ಬಿಡುಗಡೆಯಾದ ಸಮಯದಲ್ಲಿ ತುಂಬ ವಿಮರ್ಶೆಗೆ ಒಳಗಾಗಿತ್ತು ಎಂಬ ಸಂಗತಿಯನ್ನು ಪರಿಗಣಿಸುವಾಗ, ಇದು ತುಂಬ ಗಮನಾರ್ಹವಾದ ಸಾಧನೆಯಾಗಿದೆ. ಆದರೂ, ಅದು ಪಾರಾಗಿ ಉಳಿದಿದೆ ಮಾತ್ರವಲ್ಲ, ಅಭಿವೃದ್ಧಿಹೊಂದಿ, ಲೋಕವ್ಯಾಪಕವಾಗಿ ಕೋಟಿಗಟ್ಟಲೆ ಮನೆಗಳೊಳಗೆ ಮತ್ತು ಹೃದಯಗಳೊಳಗೆ ಹೋಗಿ ಸೇರಿದೆ! ಅಪೂರ್ವವಾದ ಈ ಭಾಷಾಂತರದ ಮೂಲವೇನು? ಅದರ ಹಿಂದೆ ಯಾರಿದ್ದಾರೆ? ಮತ್ತು ಅದನ್ನು ಉಪಯೋಗಿಸುವ ಮೂಲಕ ನೀವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು?
ಒಂದು ಹೊಸ ಭಾಷಾಂತರವೇಕೆ ಬೇಕಾಗಿತ್ತು?
ಯೆಹೋವನ ಸಾಕ್ಷಿಗಳನ್ನು ಪ್ರತಿನಿಧಿಸುತ್ತಿರುವ ಕಾನೂನುಬದ್ಧ ಸಂಸ್ಥೆಯಾದ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯು, ನೂರಕ್ಕೂ ಹೆಚ್ಚು ವರ್ಷಗಳಿಂದ ಬೈಬಲುಗಳನ್ನು ವಿತರಿಸಿದೆ. ಹಾಗಾದರೆ, ದೇವರ ವಾಕ್ಯದ ಇನ್ನೊಂದು ಭಾಷಾಂತರವನ್ನು ಉತ್ಪಾದಿಸುವ ಆಲೋಚನೆ ಯೆಹೋವನ ಸಾಕ್ಷಿಗಳಿಗೆ ಏಕೆ ಬಂತು? ಸಾಕಾಏ ಕುಬೋ ಮತ್ತು ವಾಲ್ಟರ್ ಸ್ಪೆಕ್ಟ್ ಬರೆದ ಇಷ್ಟೊಂದು ಭಾಷಾಂತರಗಳೇಕೆ? (ಇಂಗ್ಲಿಷ್) ಎಂಬ ಪುಸ್ತಕವು ತಿಳಿಸುವುದು: “ಬೈಬಲಿನ ಯಾವುದೇ ಭಾಷಾಂತರವನ್ನು ಕೊನೆಯದ್ದೆಂದು ಹೇಳಲಾಗುವುದಿಲ್ಲ. ಬೈಬಲ್ ಸಂಬಂಧಿತ ಪಾಂಡಿತ್ಯ ಹಾಗೂ ಭಾಷಾ ಬದಲಾವಣೆಗಳಿಗೆ ಸರಿಸಮವಾಗಿ ಭಾಷಾಂತರಗಳು ಸಹ ಬದಲಾಗುತ್ತಾ ಇರಬೇಕು.”
ಈ ಶತಮಾನದಲ್ಲಿ, ಹೀಬ್ರು, ಗ್ರೀಕ್ ಮತ್ತು ಆ್ಯರಮೇಯಿಕ್ ಎಂಬ ಬೈಬಲಿನ ಮೂಲ ಭಾಷೆಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಗಮನಾರ್ಹ ಪ್ರಗತಿಯನ್ನು ಮಾಡಲಾಗಿದೆ. ಅಷ್ಟುಮಾತ್ರವಲ್ಲ, ಹಿಂದಿನ ಬೈಬಲ್ ಭಾಷಾಂತರಕಾರರು ಉಪಯೋಗಿಸಿದ್ದ ಬೈಬಲ್ ಹಸ್ತಪ್ರತಿಗಳಿಗಿಂತಲೂ ಹೆಚ್ಚು ಹಳೆಯದಾದ ಮತ್ತು ಹೆಚ್ಚು ನಿಷ್ಕೃಷ್ಟವಾದ ಹಸ್ತಪ್ರತಿಗಳು ಕಂಡುಹಿಡಿಯಲ್ಪಟ್ಟಿವೆ. ಹೀಗೆ, ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ದೇವರ ವಾಕ್ಯವನ್ನು ತುಂಬ ನಿಷ್ಕೃಷ್ಟವಾಗಿ ಭಾಷಾಂತರಿಸಸಾಧ್ಯವಿದೆ! ಆದುದರಿಂದ, ಆಧುನಿಕ ದಿನದ ಭಾಷೆಗಳಲ್ಲಿ ಬೈಬಲನ್ನು ಭಾಷಾಂತರಿಸುವ ಕೆಲಸವನ್ನು ನಿರ್ವಹಿಸಲಿಕ್ಕಾಗಿ, ಸಕಾರಣದಿಂದಲೇ ನ್ಯೂ ವರ್ಲ್ಡ್ ಬೈಬಲ್ ಟ್ರಾನ್ಸ್ಲೇಶನ್ ಕಮಿಟಿಯನ್ನು ರಚಿಸಲಾಯಿತು.
1950ರಲ್ಲಿ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಕ್ರಿಶ್ಚಿಯನ್ ಗ್ರೀಕ್ ಸ್ಕ್ರಿಪ್ಚರ್ಸ್ನ ಇಂಗ್ಲಿಷ್ ಭಾಷಾಂತರವು ಪ್ರಕಾಶಿಸಲ್ಪಟ್ಟಿತು. ಬೈಬಲನ್ನು “ಹಳೆಯ” ಮತ್ತು “ಹೊಸ” ಒಡಂಬಡಿಕೆಗಳಾಗಿ ವಿಭಾಗಿಸದೇ ಇರುವ ಮೂಲಕ, ಈ ಬೈಬಲ್ ಭಾಷಾಂತರದ ಶೀರ್ಷಿಕೆಯು ತಾನೇ ತುಂಬ ಹಿಂದಿನಿಂದಲೂ ಜಾರಿಯಲ್ಲಿದ್ದ ಪದ್ಧತಿಯನ್ನು ತಳ್ಳಿಹಾಕಿತು. ಅದರ ಮುಂದಿನ ದಶಕದಲ್ಲಿ, ಹೀಬ್ರು ಶಾಸ್ತ್ರದ ಭಾಗಗಳನ್ನು ಸ್ವಲ್ಪಸ್ವಲ್ಪವಾಗಿ ಪ್ರಕಾಶಿಸಲಾಯಿತು. 1961ರಲ್ಲಿ, ಇಂಗ್ಲಿಷ್ ಭಾಷೆಯ ಇಡೀ ಬೈಬಲನ್ನು ಒಂದೇ ಸಂಪುಟದಲ್ಲಿ ಬಿಡುಗಡೆಮಾಡಲಾಯಿತು.
ಆದರೆ ಅಸಾಧಾರಣವಾದ ಈ ಬೈಬಲನ್ನು ಭಾಷಾಂತರಿಸಿದವರು ಯಾರು? ಸೆಪ್ಟೆಂಬರ್ 15, 1950ರ ದ ವಾಚ್ಟವರ್ ಪತ್ರಿಕೆಯು ಹೇಳಿದ್ದು: “ಭಾಷಾಂತರ ಕಮಿಟಿಯಲ್ಲಿರುವ ವ್ಯಕ್ತಿಗಳು, ಅನಾಮಧೇಯರಾಗಿ ಉಳಿಯುವ . . . ಬಯಕೆಯನ್ನು ವ್ಯಕ್ತಪಡಿಸಿದ್ದಾರೆ, ಮತ್ತು ತಾವು ಜೀವಿಸುತ್ತಿರುವಾಗಲೇ ಆಗಲಿ, ಮರಣಪಟ್ಟ ಬಳಿಕವೇ ಆಗಲಿ ತಮ್ಮ ಹೆಸರುಗಳನ್ನು ಪ್ರಕಟಿಸಬಾರದೆಂದು ಕೇಳಿಕೊಂಡಿದ್ದಾರೆ. ಭಾಷಾಂತರದ ಉದ್ದೇಶವು, ಜೀವಸ್ವರೂಪನಾದ ಸತ್ಯ ದೇವರ ನಾಮವನ್ನು ಘನತೆಗೇರಿಸುವುದೇ ಆಗಿದೆ.” ಕೆಲವು ವಿಮರ್ಶಕರು, ಇದನ್ನು ಅನನುಭವಿಗಳು ತಯಾರಿಸಿರುವ ಕೃತಿಯೆಂದು ಪರಿಗಣಿಸಿ ತಳ್ಳಿಹಾಕುವಂತೆ ಸಲಹೆ ನೀಡಿದರು. ಆದರೆ ಎಲ್ಲರೂ ಇಂತಹ ಅಸಮಂಜಸವಾದ ನಿಲುವನ್ನು ತೆಗೆದುಕೊಳ್ಳಲಿಲ್ಲ. ಆ್ಯಲನ್ ಎಸ್. ಡತೀ ಬರೆಯುವುದು: “ಒಂದು ನಿರ್ದಿಷ್ಟ ಬೈಬಲಿನ ಭಾಷಾಂತರಕಾರರು ಅಥವಾ ಪ್ರಕಾಶಕರು ಯಾರು ಎಂದು ನಮಗೆ ತಿಳಿದಿರುವಲ್ಲಿ, ಆ ಭಾಷಾಂತರವು ಉತ್ತಮವಾಗಿದೆಯೋ ಅಥವಾ ಕೆಟ್ಟದ್ದಾಗಿದೆಯೋ ಎಂಬುದನ್ನು ನಿರ್ಧರಿಸಲು ಅದು ನಮಗೆ ಸಹಾಯ ಮಾಡುತ್ತದೊ? ನೇರವಾಗಿ ಸಹಾಯ ಮಾಡುವುದಿಲ್ಲ. ಇದನ್ನು ನಿರ್ಧರಿಸಲು, ಪ್ರತಿಯೊಂದು ಭಾಷಾಂತರದ ಗುಣಲಕ್ಷಣಗಳನ್ನೇ ಪರೀಕ್ಷಿಸುವುದನ್ನು ಬಿಟ್ಟು ಇನ್ಯಾವ ಮಾರ್ಗವೂ ಇಲ್ಲ.”a
ಅಪೂರ್ವ ಅಂಶಗಳು
ಕೋಟಿಗಟ್ಟಲೆ ವಾಚಕರು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲಿನ ಗುಣಲಕ್ಷಣಗಳನ್ನು ಪರೀಕ್ಷಿಸಿ ನೋಡಿದ್ದಾರೆ ಮತ್ತು ಇದು ಸುಲಭವಾಗಿ ಓದಬಹುದಾದ ಗ್ರಂಥವಾಗಿದೆ ಮಾತ್ರವಲ್ಲ, ಇದರಲ್ಲಿ ಅತಿ ಸೂಕ್ಷ್ಮ ಅಂಶಗಳು ಸಹ ತುಂಬ ನಿಷ್ಕೃಷ್ಟವಾಗಿವೆ ಎಂಬುದನ್ನು ಕಂಡುಹಿಡಿದಿದ್ದಾರೆ. ಇದರ ಭಾಷಾಂತರಕಾರರು, ಲಭ್ಯವಿರುವ ಅತ್ಯುತ್ತಮ ಗ್ರಂಥಪಾಠಗಳನ್ನು ಉಪಯೋಗಿಸಿ, ಮೂಲ ಹೀಬ್ರು, ಆ್ಯರಮೇಯಿಕ್ ಮತ್ತು ಗ್ರೀಕ್ ಭಾಷೆಗಳಿಂದ ಭಾಷಾಂತರಿಸಿದ್ದಾರೆ.b ಪುರಾತನ ಗ್ರಂಥಪಾಠವನ್ನು ಸಾಧ್ಯವಿರುವಷ್ಟರ ಮಟ್ಟಿಗೆ ಅಕ್ಷರಾರ್ಥವಾಗಿ, ಆದರೆ ಸುಲಭವಾಗಿ ಅರ್ಥಮಾಡಿಕೊಳ್ಳಸಾಧ್ಯವಿರುವ ಭಾಷೆಯಲ್ಲಿ ಭಾಷಾಂತರಿಸಲು ಬಹಳಷ್ಟು ಜಾಗ್ರತೆಯನ್ನು ವಹಿಸಲಾಯಿತು. ಆದುದರಿಂದ, ಕೆಲವು ವಿದ್ವಾಂಸರು ಈ ಭಾಷಾಂತರದ ಸಮಗ್ರತೆ ಮತ್ತು ನಿಷ್ಕೃಷ್ಟತೆಯನ್ನು ತುಂಬ ಪ್ರಶಂಸಿಸಿದ್ದಾರೆ. ಉದಾಹರಣೆಗೆ, ಜನವರಿ 1963ರ ಆ್ಯಂಡೋವರ್ ನ್ಯೂಟನ್ ಕ್ವಾರ್ಟರ್ಲಿ ಹೇಳಿದ್ದು: “ಬೈಬಲಿನ ಭಾಷಾಂತರದಲ್ಲಿ ಬರುವ ಅನೇಕ ಸಮಸ್ಯೆಗಳೊಂದಿಗೆ ತುಂಬ ಬುದ್ಧಿವಂತಿಕೆಯಿಂದ ವ್ಯವಹರಿಸಲು ಅರ್ಹರಾಗಿರುವಂತಹ ವಿದ್ವಾಂಸರು ಯೆಹೋವನ ಸಾಕ್ಷಿಗಳಲ್ಲಿ ಇದ್ದಾರೆ ಎಂಬುದಕ್ಕೆ ಹೊಸ ಒಡಂಬಡಿಕೆಯ ಈ ಭಾಷಾಂತರವೇ ಪುರಾವೆಯಾಗಿದೆ.”
ಭಾಷಾಂತರಕಾರರು, ಬೈಬಲಿನ ತಿಳಿವಳಿಕೆಯ ಹೊಸ ಪ್ರಪಂಚವನ್ನೇ ಬೆಳಕಿಗೆ ತಂದರು. ಈ ಮುಂಚೆ ಕೇವಲ ಅಸ್ಪಷ್ಟವಾಗಿ ಅರ್ಥವಾಗಿದ್ದ ಬೈಬಲ್ ವಚನಗಳು ಈಗ ಅತಿ ಸ್ಪಷ್ಟವಾಗಿ ಅರ್ಥವಾಗತೊಡಗಿದವು. ಉದಾಹರಣೆಗೆ, ಮತ್ತಾಯ 5:3ರಲ್ಲಿರುವ “ಆತ್ಮದಲ್ಲಿ ಬಡವರಾಗಿರುವವರು ಧನ್ಯರು” ಎಂಬ ಗೊಂದಲಮಯ ವಚನವನ್ನು, ತಮ್ಮ ಆತ್ಮಿಕ ಆವಶ್ಯಕತೆಗಳ ಪ್ರಜ್ಞೆಯುಳ್ಳವರು ಸಂತುಷ್ಟರು ಎಂಬರ್ಥ ಕೊಡುವ ರೀತಿಯಲ್ಲಿ ಭಾಷಾಂತರಿಸಲಾಯಿತು. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲು ಮುಖ್ಯವಾದ ಶಬ್ದಗಳನ್ನು, ಮೃತರ ಸ್ಥಿತಿಯ ಕುರಿತು ಯಾವುದೇ ಗೊಂದಲವನ್ನು ಉಂಟುಮಾಡದಿರುವಂತಹ ರೀತಿಯಲ್ಲಿ ಭಾಷಾಂತರಿಸುತ್ತದೆ. ಇದರ ಫಲಿತಾಂಶವಾಗಿ, ಧಾರ್ಮಿಕ ಊಹೆಗಳಿಗೆ ವ್ಯತಿರಿಕ್ತವಾಗಿ, ಮನುಷ್ಯನು ಮೃತಪಟ್ಟಾಗ ಅವನ ದೇಹದಿಂದ ಹೊರಗೆ ಹೋಗಿ ಬದುಕುವಂತಹ ಯಾವುದೇ ಅಮರ ಭಾಗವು ಇಲ್ಲ ಎಂಬುದನ್ನು ವಾಚಕರು ಅತಿ ಬೇಗನೆ ವಿವೇಚಿಸಿ ತಿಳಿದುಕೊಳ್ಳಬಲ್ಲರು.
ದೇವರ ಹೆಸರನ್ನು ಯಥಾಸ್ಥಾನಕ್ಕೆ ಹಿಂದಿರುಗಿಸುವುದು
ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲಿನ ಅತಿ ಪ್ರಮುಖ ಅಂಶವು, ದೇವರ ಜಿಹೋವ (ಯೆಹೋವ) ಎಂಬ ಹೆಸರು ಯಥಾಸ್ಥಾನಕ್ಕೆ ಹಿಂದಿರುಗಿಸಲ್ಪಟ್ಟಿರುವುದೇ ಆಗಿದೆ. ಹೀಬ್ರು ಬೈಬಲಿನ ಪುರಾತನ ಪ್ರತಿಗಳಲ್ಲಿ, ದೈವಿಕ ನಾಮವು “ಯಾಧ್,” “ಹೇ,” “ವಾ,” “ಹೇ” ಎಂಬ ನಾಲ್ಕು ವ್ಯಂಜನಾಕ್ಷರಗಳಿಂದ ಪ್ರತಿನಿಧಿಸಲ್ಪಟ್ಟಿದೆ. ಹಳೆಯ ಒಡಂಬಡಿಕೆಯೆಂದು ಕರೆಯಲ್ಪಡುವ ಭಾಗದಲ್ಲಿಯೇ, ಈ ವೈಶಿಷ್ಟ್ಯಸೂಚಕ ಹೆಸರು ಸುಮಾರು 7,000 ಬಾರಿ ಕಂಡುಬರುತ್ತದೆ. (ವಿಮೋಚನಕಾಂಡ 3:15; ಕೀರ್ತನೆ 83:18) ತನ್ನ ಆರಾಧಕರು ಆ ಹೆಸರನ್ನು ತಿಳಿದುಕೊಳ್ಳುವಂತೆ ಹಾಗೂ ಬಳಸುವಂತೆ ನಮ್ಮ ಸೃಷ್ಟಿಕರ್ತನು ಉದ್ದೇಶಿಸಿದನೆಂಬುದು ಸ್ಪಷ್ಟ!
ಆದರೂ, ಮೂಢನಂಬಿಕೆಯಿಂದ ಕೂಡಿದ ಭಯವು, ಯೆಹೂದ್ಯರು ದೇವರ ಹೆಸರನ್ನು ಉಪಯೋಗಿಸುವುದನ್ನು ನಿಲ್ಲಿಸುವಂತೆ ಮಾಡಿತು. ಯೇಸುವಿನ ಅಪೊಸ್ತಲರ ಮರಣಾನಂತರ, ಗ್ರೀಕ್ ಶಾಸ್ತ್ರದ ನಕಲುಗಾರರು, ದೇವರ ವೈಯಕ್ತಿಕ ಹೆಸರಿನ ಸ್ಥಾನದಲ್ಲಿ ಕಿರಿಯಾಸ್ (ಕರ್ತನು) ಅಥವಾ ಥೀಆಸ್ (ದೇವರು) ಎಂಬ ಗ್ರೀಕ್ ಶಬ್ದಗಳನ್ನು ಉಪಯೋಗಿಸಲಾರಂಭಿಸಿದರು. ದುಃಖಕರವಾಗಿಯೇ, ದೇವರನ್ನು ಅಗೌರವಿಸುವಂತಹ ಈ ಸಂಪ್ರದಾಯವನ್ನು ಆಧುನಿಕ ಭಾಷಾಂತರಕಾರರು ಇಷ್ಟರತನಕ ಮುಂದುವರಿಸಿಕೊಂಡು ಬಂದಿದ್ದಾರೆ. ಅಂದರೆ, ಅವರು ಅಧಿಕಾಂಶ ಬೈಬಲುಗಳಿಂದ ದೇವರ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ ಮಾತ್ರವಲ್ಲ, ದೇವರಿಗೆ ಒಂದು ಹೆಸರಿದೆ ಎಂಬುದನ್ನು ಸಹ ಅವರು ಮರೆಮಾಚಿದ್ದಾರೆ. ಉದಾಹರಣೆಗೆ, ಯೋಹಾನ 17:6ರಲ್ಲಿ ಯೇಸು ಹೇಳಿದ್ದು: “[ನಾನು] ನಿನ್ನ ಹೆಸರನ್ನು ತಿಳಿಯಪಡಿಸಿದೆನು.” ಆದರೆ, ಟುಡೇಸ್ ಇಂಗ್ಲಿಷ್ ವರ್ಷನ್ ಈ ವಚನವನ್ನು “ನಾನು ನಿನ್ನನ್ನು ತಿಳಿಯಪಡಿಸಿದೆನು” ಎಂದು ಭಾಷಾಂತರಿಸುತ್ತದೆ.
ದೇವರ ಹೆಸರಿನ ಸರಿಯಾದ ಉಚ್ಚಾರಣೆ ಯಾರಿಗೂ ಗೊತ್ತಿಲ್ಲದಿರುವುದರಿಂದ, ಅದನ್ನು ತೆಗೆದುಹಾಕುವುದು ಸರಿಯೆಂದು ಕೆಲವು ವಿದ್ವಾಂಸರು ಸಮರ್ಥಿಸುತ್ತಾರೆ. ಆದರೆ, ಜೆರೆಮಾಯ, ಐಸಾಯ, ಮತ್ತು ಜೀಸಸ್ (ಯೆರೆಮೀಯ, ಯೆಶಾಯ, ಮತ್ತು ಯೇಸು) ಎಂಬ ಬೈಬಲಿನ ಚಿರಪರಿಚಿತ ಹೆಸರುಗಳನ್ನು ವಾಡಿಕೆ ಪ್ರಕಾರ ಭಾಷಾಂತರಿಸಲಾಗಿರುವ ರೀತಿಯು, ಅವುಗಳ ಮೂಲ ಹೀಬ್ರು ಉಚ್ಚಾರಣೆಗೆ ಅಷ್ಟೇನೂ ಹೋಲುವುದಿಲ್ಲ. ಜಿಹೋವ ಎಂಬ ಇಂಗ್ಲಿಷ್ ರೂಪವು ದೇವರ ಹೆಸರನ್ನು ಭಾಷಾಂತರಿಸುವ ನ್ಯಾಯಸಮ್ಮತ ರೀತಿಯಾಗಿರುವುದರಿಂದ, ಮತ್ತು ಅನೇಕರಿಗೆ ಇದೇ ಉಚ್ಚಾರಣೆಯು ಚಿರಪರಿಚಿತವಾಗಿರುವುದರಿಂದ, ಇದನ್ನು ಉಪಯೋಗಿಸುವುದರ ವಿರುದ್ಧ ಉದ್ಭವಿಸುವ ಆಕ್ಷೇಪಣೆಗಳು ಖಂಡಿತವಾಗಿಯೂ ಪೊಳ್ಳಾಗಿ ಕಂಡುಬರುತ್ತವೆ.
ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಕಮಿಟಿಯು, ಹೀಬ್ರು ಶಾಸ್ತ್ರದಲ್ಲಿ ಮತ್ತು ಗ್ರೀಕ್ ಶಾಸ್ತ್ರದಲ್ಲಿ ಜಿಹೋವ ಎಂಬ ಹೆಸರನ್ನು ಉಪಯೋಗಿಸುವ ದಿಟ್ಟ ಹೆಜ್ಜೆಯನ್ನು ತೆಗೆದುಕೊಂಡಿತು. ಹೀಗೆ ಮಾಡಲು ಅವರಿಗೆ ಒಂದು ಪೂರ್ವನಿದರ್ಶನವಿತ್ತು. ಮಧ್ಯ ಅಮೆರಿಕ, ಸೌತ್ ಪೆಸಿಫಿಕ್, ಮತ್ತು ಪ್ರಾಚ್ಯ ದೇಶಗಳಲ್ಲಿದ್ದ ಜನರಿಗಾಗಿ ಮಾಡಲ್ಪಟ್ಟ ಆರಂಭದ ಮಿಷನೆರಿ ಭಾಷಾಂತರಗಳಲ್ಲಿ ದೇವರ ಹೆಸರಿತ್ತು. ಆದರೂ, ದೇವರ ಹೆಸರನ್ನು ಈ ರೀತಿ ಉಪಯೋಗಿಸುವುದು ಕೇವಲ ಪಾಂಡಿತ್ಯದ ಆಸಕ್ತಿಯಿಂದಲ್ಲ. ದೇವರನ್ನು ಒಬ್ಬ ವ್ಯಕ್ತಿಯೋಪಾದಿ ತಿಳಿದುಕೊಳ್ಳಲಿಕ್ಕಾಗಿ, ಆತನ ಹೆಸರನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. (ವಿಮೋಚನಕಾಂಡ 34:6, 7) ಆತನ ಹೆಸರನ್ನು ಉಪಯೋಗಿಸುವಂತೆ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲು ಲಕ್ಷಾಂತರ ವಾಚಕರನ್ನು ಪ್ರೋತ್ಸಾಹಿಸಿದೆ!
ಇಂಗ್ಲಿಷ್ ಭಾಷೆಯನ್ನು ಓದದಿರುವಂತಹ ಜನರನ್ನು ತಲಪುವುದು
1963 ಮತ್ತು 1989ರ ನಡುವೆ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲ್ ಇನ್ನೂ ಹತ್ತು ಭಾಷೆಗಳಲ್ಲಿ—ಸಂಪೂರ್ಣವಾಗಿ ಅಥವಾ ಭಾಗಶಃ—ಲಭ್ಯವಾಯಿತು. ಆದರೂ, ಭಾಷಾಂತರದ ಕೆಲಸವು ತುಂಬ ಪ್ರಯಾಸಕರವಾದದ್ದಾಗಿತ್ತು ಮತ್ತು ಕೆಲವು ಭಾಷಾಂತರಗಳ ಯೋಜನೆಯನ್ನು ಪೂರೈಸಲು 20 ವರ್ಷಗಳು ಅಥವಾ ಇನ್ನೂ ಹೆಚ್ಚು ಸಮಯ ಹಿಡಿಯಿತು. ತದನಂತರ, 1989ರಲ್ಲಿ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಟ್ರಾನ್ಸ್ಲೇಶನ್ ಸರ್ವಿಸಸ್ ಡಿಪಾರ್ಟ್ಮೆಂಟ್ ಸ್ಥಾಪಿಸಲ್ಪಟ್ಟಿತು. ಆಡಳಿತ ಮಂಡಳಿಯ ರೈಟಿಂಗ್ ಕಮಿಟಿಯ ಮಾರ್ಗದರ್ಶನದ ಕೆಳಗೆ, ಈ ಡಿಪಾರ್ಟ್ಮೆಂಟ್ ಬೈಬಲ್ ಭಾಷಾಂತರದ ಕೆಲಸವನ್ನು ತ್ವರಿತಗೊಳಿಸಲು ಆರಂಭಿಸಿತು. ಬೈಬಲಿಗೆ ಸಂಬಂಧಪಟ್ಟ ಶಬ್ದಗಳ ಅಧ್ಯಯನ ಹಾಗೂ ಕಂಪ್ಯೂಟರ್ ತಾಂತ್ರಿಕತೆಯು ಜೊತೆಗೂಡಿದಂತಹ ಒಂದು ಭಾಷಾಂತರ ವಿಧಾನವನ್ನು ರೂಪಿಸಲಾಯಿತು. ಈ ವ್ಯವಸ್ಥೆಯು ಹೇಗೆ ಕಾರ್ಯನಡಿಸುತ್ತದೆ?
ಒಂದು ಹೊಸ ಭಾಷೆಯಲ್ಲಿ ಬೈಬಲನ್ನು ಭಾಷಾಂತರಿಸಲು ರೈಟಿಂಗ್ ಕಮಿಟಿಯು ಒಪ್ಪಿಗೆ ನೀಡಿದ ಬಳಿಕ, ಸಮರ್ಪಿತ ಕ್ರೈಸ್ತರ ಒಂದು ಗುಂಪು ಭಾಷಾಂತರ ತಂಡದೋಪಾದಿ ಕಾರ್ಯನಡಿಸುವಂತೆ ಅದು ನೇಮಿಸುತ್ತದೆ. ಒಬ್ಬ ವ್ಯಕ್ತಿಯು ಒಂಟಿಯಾಗಿ ಕೆಲಸಮಾಡುವುದಕ್ಕಿಂತಲೂ ಹೆಚ್ಚಾಗಿ ಅನೇಕರು ಒಂದು ತಂಡದೋಪಾದಿ ಕೆಲಸಮಾಡುವುದರಿಂದ ಸಮತೂಕವಾದ ಭಾಷಾಂತರಗಳನ್ನು ಉತ್ಪಾದಿಸಸಾಧ್ಯವಿದೆ. (ಹೋಲಿಸಿರಿ ಜ್ಞಾನೋಕ್ತಿ 11:14.) ಸಾಮಾನ್ಯವಾಗಿ, ಭಾಷಾಂತರ ತಂಡದ ಪ್ರತಿಯೊಬ್ಬ ಸದಸ್ಯನಿಗೂ, ಸೊಸೈಟಿಯ ಪ್ರಕಾಶನಗಳನ್ನು ಭಾಷಾಂತರಿಸುವುದರಲ್ಲಿ ಅನುಭವವಿರುತ್ತದೆ. ತದನಂತರ, ಬೈಬಲ್ ಭಾಷಾಂತರದಲ್ಲಿ ಒಳಗೂಡಿರುವ ಸಾಮಾನ್ಯ ನಿಯಮಗಳ ಬಗ್ಗೆ ಮತ್ತು ವಿಶೇಷವಾಗಿ ವಿನ್ಯಾಸಿಸಲಾದ ಕಂಪ್ಯೂಟರ್ ಪ್ರೋಗ್ರ್ಯಾಮ್ಗಳ ಬಗ್ಗೆ ಆ ತಂಡಕ್ಕೆ ಒಳ್ಳೆಯ ತರಬೇತಿಯನ್ನು ಕೊಡಲಾಗುತ್ತದೆ. ಭಾಷಾಂತರ ಕೆಲಸವನ್ನು ಒಂದು ಕಂಪ್ಯೂಟರ್ ಮಾಡುವುದಿಲ್ಲವಾದರೂ, ಒಂದು ತಂಡಕ್ಕೆ ಅಗತ್ಯವಿರುವ ಅತಿ ಪ್ರಾಮುಖ್ಯ ಮಾಹಿತಿಯನ್ನು ಪಡೆದುಕೊಳ್ಳಲು ಮತ್ತು ಒಂದು ಗುಂಪಿನೋಪಾದಿ ತಾವು ಮಾಡಿರುವ ನಿರ್ಣಯಗಳ ಬಗ್ಗೆ ದಾಖಲೆಯನ್ನಿಡಲು ಅದು ಅವರಿಗೆ ಸಹಾಯ ಮಾಡಬಲ್ಲದು.
ಬೈಬಲ್ ಭಾಷಾಂತರದ ಕಾರ್ಯಯೋಜನೆಯಲ್ಲಿ ಎರಡು ಹಂತಗಳಿವೆ. ಮೊದಲನೆಯ ಹಂತದಲ್ಲಿ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ ಶಬ್ದಗಳು ಹಾಗೂ ಅಭಿವ್ಯಕ್ತಿಗಳ ಒಂದು ಪಟ್ಟಿಯನ್ನು ಭಾಷಾಂತರಕಾರರಿಗೆ ಕೊಡಲಾಗುತ್ತದೆ. ಸಂಬಂಧಿತ ಇಂಗ್ಲಿಷ್ ಶಬ್ದಗಳನ್ನು ಒಟ್ಟುಗೂಡಿಸಿ, ಭಾಷಾಂತರಕಾರರು ಆ ಶಬ್ದಗಳ ನಡುವಿನ ಅತಿಸೂಕ್ಷ್ಮ ಅರ್ಥವ್ಯತ್ಯಾಸವನ್ನು ತಿಳಿದುಕೊಳ್ಳುವಂತೆ ಮಾಡಲಾಗುತ್ತದೆ. ಈ ಶಬ್ದಗಳಿಗೆ ಅನುರೂಪವಾದ ದೇಶೀಯ ಭಾಷೆಯ ಸಮಾನಾರ್ಥಕ ಪದಗಳ ಒಂದು ಪಟ್ಟಿಯನ್ನು ಅವರು ಸಂಗ್ರಹಿಸುತ್ತಾರೆ. ಆದರೂ, ಕೆಲವೊಮ್ಮೆ ಒಂದು ವಚನವನ್ನು ಭಾಷಾಂತರಿಸುವುದನ್ನು ಭಾಷಾಂತರಕಾರನು ಕಷ್ಟಕರವಾದದ್ದಾಗಿ ಕಂಡುಕೊಳ್ಳಬಹುದು. ಆಗ, ಕಂಪ್ಯೂಟರ್ ರಿಸರ್ಚ್ ಸಿಸ್ಟಮ್, ಗ್ರೀಕ್ ಮತ್ತು ಹೀಬ್ರು ಮೂಲ ಶಬ್ದಗಳ ಕುರಿತಾದ ಮಾಹಿತಿಯನ್ನು ಭಾಷಾಂತರಕಾರನಿಗೆ ಒದಗಿಸುತ್ತದೆ ಹಾಗೂ ವಾಚ್ ಟವರ್ ಪ್ರಕಾಶನಗಳನ್ನು ಅವನಿಗೆ ಲಭ್ಯಗೊಳಿಸುತ್ತದೆ.
ಭಾಷಾಂತರ ಯೋಜನೆಯು ಎರಡನೆಯ ಹಂತಕ್ಕೆ ಬರುವಾಗ, ಆಯ್ಕೆಮಾಡಲ್ಪಟ್ಟ ದೇಶೀಯ ಭಾಷೆಯ ಶಬ್ದಗಳು ತಮ್ಮಷ್ಟಕ್ಕೆ ತಾವೇ ಬೈಬಲ್ ಮೂಲಪಾಠ (ಟೆಕ್ಸ್ಟ್)ದೊಳಗೆ ಸೇರಿಕೊಳ್ಳುತ್ತವೆ. ಇದರಿಂದ ಭಾಷಾಂತರದ ನಿಷ್ಕೃಷ್ಟತೆ ಹಾಗೂ ಸಾಮರಸ್ಯವು ಸಾಕಷ್ಟು ಅಧಿಕಗೊಳ್ಳುತ್ತದೆ. ಆದರೂ, ಈ “ಸರ್ಚ್ ಆ್ಯಂಡ್ ರಿಪ್ಲೇಸ್” ಕಾರ್ಯವಿಧಾನದ ನಂತರ ಬದಲಾದ ಮೂಲಪಾಠವನ್ನು ಓದಲು ಸಾಧ್ಯವಿಲ್ಲ. ಆದುದರಿಂದ, ಬೈಬಲ್ ವಚನಗಳನ್ನು ಹೆಚ್ಚು ನಿರರ್ಗಳವಾಗಿ ಓದಸಾಧ್ಯವಾಗುವಂತೆ, ಅವುಗಳನ್ನು ತಿದ್ದಲು ಮತ್ತು ಬೇರೆ ರೀತಿಯಲ್ಲಿ ನಿರೂಪಿಸಲು ಸಾಕಷ್ಟು ಶ್ರಮಿಸಬೇಕಾಗುತ್ತದೆ.
ಈ ರೀತಿಯ ಭಾಷಾಂತರ ವ್ಯವಸ್ಥೆಯು ತುಂಬ ಪರಿಣಾಮಕಾರಿಯಾಗಿ ಪರಿಣಮಿಸಿದೆ. ಭಾಷಾಂತರಕಾರರ ಒಂದು ಗುಂಪು, ಕೇವಲ ಎರಡೇ ವರ್ಷಗಳಲ್ಲಿ ಹೀಬ್ರು ಶಾಸ್ತ್ರಗಳ ಇಡೀ ಭಾಗವನ್ನು ಭಾಷಾಂತರಿಸಲು ಶಕ್ತವಾಯಿತು. ಕಂಪ್ಯೂಟರ್ನ ಸಹಾಯವಿಲ್ಲದೆ ಬೈಬಲನ್ನು ಭಾಷಾಂತರಿಸಿದ ಒಂದು ಗುಂಪಿನೊಂದಿಗೆ ಇದನ್ನು ಹೋಲಿಸಿರಿ. ಭಾಷಾಂತರವನ್ನು ಮುಗಿಸಲು ಅವರಿಗೆ 16 ವರ್ಷಗಳು ಹಿಡಿದವು. 1989ರಿಂದ ಇಂದಿನ ತನಕ, ಕ್ರೈಸ್ತ ಗ್ರೀಕ್ ಶಾಸ್ತ್ರವು ಇನ್ನೂ 18 ಭಾಷೆಗಳಲ್ಲಿ ಮುದ್ರಿಸಲ್ಪಟ್ಟಿದೆ. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲು ಇಂದು 34 ಭಾಷೆಗಳಲ್ಲಿ—ಸಂಪೂರ್ಣವಾಗಿ ಅಥವಾ ಭಾಗಶಃ—ಲಭ್ಯವಿದೆ. ಹೀಗೆ, ಯೆಹೋವನ ಸಾಕ್ಷಿಗಳಲ್ಲಿ 80 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿಯ ಬಳಿ, ಕಡಿಮೆಪಕ್ಷ ಕ್ರೈಸ್ತ ಗ್ರೀಕ್ ಶಾಸ್ತ್ರವು ಅವರ ಮಾತೃಭಾಷೆಯಲ್ಲಿ ಲಭ್ಯವಿದೆ.
ಜಗತ್ತಿನ 6,500 ಭಾಷೆಗಳಲ್ಲಿ, ಬೈಬಲಿನ ಭಾಗಗಳು ಕೇವಲ 2,212 ಭಾಷೆಗಳಲ್ಲಿ ಮಾತ್ರ ದೊರಕುತ್ತಿವೆ ಎಂದು ಯುನೈಟೆಡ್ ಬೈಬಲ್ ಸೊಸೈಟಿಗಳು ವರದಿಸುತ್ತವೆ.c ಆದುದರಿಂದ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲಿನ ಹೀಬ್ರು ಮತ್ತು ಗ್ರೀಕ್ ಶಾಸ್ತ್ರಗಳನ್ನು 11 ಮತ್ತು 8 ಭಾಷೆಗಳಲ್ಲಿ ಸಿದ್ಧಗೊಳಿಸಲಿಕ್ಕಾಗಿ, ಸುಮಾರು 100 ಮಂದಿ ಭಾಷಾಂತರಕಾರರು ಕೆಲಸಮಾಡುತ್ತಿದ್ದಾರೆ. “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ. (1 ತಿಮೊಥೆಯ 2:4) ಇದನ್ನು ಪೂರೈಸುವುದರಲ್ಲಿ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲು ಪ್ರಮುಖ ಪಾತ್ರವನ್ನು ವಹಿಸುವುದು ಎಂಬುದರಲ್ಲಿ ಸಂದೇಹವಿಲ್ಲ.
ಆದುದರಿಂದಲೇ, ಈ ಭಾಷಾಂತರವು 10 ಕೋಟಿ ಪ್ರತಿಗಳ ಮೈಲಿಗಲ್ಲನ್ನು ದಾಟಿರುವುದಕ್ಕಾಗಿ ನಾವು ತುಂಬ ಹರ್ಷಿಸುತ್ತೇವೆ. ಮತ್ತು ಭವಿಷ್ಯತ್ತಿನಲ್ಲಿ ಇನ್ನೂ ಅನೇಕ ಕೋಟಿ ಪ್ರತಿಗಳು ಉತ್ಪಾದಿಸಲ್ಪಡಲಿ ಎಂದು ಪ್ರಾರ್ಥಿಸುತ್ತೇವೆ. ನೀವೇ ಅದನ್ನು ಪರೀಕ್ಷಿಸಿ ನೋಡುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಅದರ ಅನೇಕ ವಿಶೇಷ ವೈಶಿಷ್ಟ್ಯಗಳನ್ನು ನೋಡಿ ನೀವು ಆನಂದಿಸುವಿರಿ: ಸುಲಭವಾಗಿ ಓದಲಾಗುವಂತಹ ಅಕ್ಷರಗಳು, ಪೇಜ್ ಹೆಡಿಂಗ್ಸ್ (ಪುಟದ ಮೇಲ್ಬರಹಗಳು), ಚಿರಪರಿಚಿತ ವಚನಗಳನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡಸಾಧ್ಯವಿರುವ ಇಂಡೆಕ್ಸ್, ಸವಿಸ್ತಾರವಾದ ನಕ್ಷೆಗಳು, ಮತ್ತು ಚಿತ್ತಾಕರ್ಷಕ ಪರಿಶಿಷ್ಟವು ಇದರಲ್ಲಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಇದು ದೇವರ ಮಾತುಗಳನ್ನೇ ನಿಮ್ಮ ಭಾಷೆಯಲ್ಲಿ ನಿಷ್ಕೃಷ್ಟವಾಗಿ ತಿಳಿಯಪಡಿಸುತ್ತದೆ ಎಂಬ ದೃಢವಿಶ್ವಾಸದಿಂದ ನೀವು ಈ ಬೈಬಲನ್ನು ಓದಸಾಧ್ಯವಿದೆ.
[ಅಧ್ಯಯನ ಪ್ರಶ್ನೆಗಳು]
a ಆಸಕ್ತಿಕರವಾಗಿ, ನ್ಯೂ ಅಮೆರಿಕನ್ ಸ್ಟ್ಯಾಂಡರ್ಡ್ ಬೈಬಲ್ನ 1971ರ ರೆಫರೆನ್ಸ್ ಆವೃತ್ತಿಯ ಹೊರಗಿನ ಆವರಣವು ಸಹ ಇದೇ ರೀತಿ ಹೇಳಿತು: “ನಾವು ರೆಫರೆನ್ಸಿಗಾಗಿ ಅಥವಾ ಶಿಫಾರಸ್ಸಿಗಾಗಿ ಯಾವುದೇ ವಿದ್ವಾಂಸನ ಹೆಸರನ್ನು ಬಳಸಿಲ್ಲ. ಏಕೆಂದರೆ ದೇವರ ವಾಕ್ಯವು ತನ್ನ ಸ್ವಂತ ಕೀರ್ತಿಯ ಮೇಲೆ ಮಾತ್ರ ನಿಲ್ಲಬೇಕೆಂಬುದು ನಮ್ಮ ಬಯಕೆಯಾಗಿದೆ.”
b ವೆಸ್ಕಾಟ್ ಮತ್ತು ಹಾರ್ಟ್ ಅವರಿಂದ ಬರೆಯಲ್ಪಟ್ಟ ದ ನ್ಯೂ ಟೆಸ್ಟಮೆಂಟ್ ಇನ್ ದಿ ಒರಿಜಿನಲ್ ಗ್ರೀಕ್ ಎಂಬ ಭಾಷಾಂತರವು, ಮೂಲಭೂತ ಗ್ರೀಕ್ ಗ್ರಂಥಪಾಠವಾಗಿ ಉಪಯೋಗಿಸಲ್ಪಟ್ಟಿತು. ಆರ್. ಕಿಟೆಲ್ ಎಂಬ ವ್ಯಕ್ತಿಯ ಬೀಬ್ಲಿಯ ಹೀಬ್ರೆಕ ಎಂಬ ಭಾಷಾಂತರವು, ಹೀಬ್ರು ಶಾಸ್ತ್ರದ ಮೂಲಭೂತ ಗ್ರಂಥಪಾಠವಾಗಿ ಕಾರ್ಯನಡಿಸಿತು.
c ಅನೇಕ ಜನರು ಎರಡು ಭಾಷೆಗಳನ್ನು ಸರಾಗವಾಗಿ ಮಾತಾಡಲು ಅಥವಾ ಓದಲು ಶಕ್ತರಾಗಿರುವುದರಿಂದ, ಬೈಬಲು—ಸಂಪೂರ್ಣವಾಗಿ ಅಥವಾ ಭಾಗಶಃ—ಭೂಮಿಯ ಜನಸಂಖ್ಯೆಯ 90 ಪ್ರತಿಶತದಷ್ಟು ಜನರು ಓದಸಾಧ್ಯವಿರುವಷ್ಟು ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿದೆ ಎಂದು ನಂಬಲಾಗುತ್ತದೆ.
[ಪುಟ 29 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಬೈಬಲಿನ ಭಾಷಾಂತರದಲ್ಲಿ ಬರುವ ಅನೇಕ ಸಮಸ್ಯೆಗಳೊಂದಿಗೆ ತುಂಬ ಬುದ್ಧಿವಂತಿಕೆಯಿಂದ ವ್ಯವಹರಿಸಲು ಅರ್ಹರಾಗಿರುವಂತಹ ವಿದ್ವಾಂಸರು ಯೆಹೋವನ ಸಾಕ್ಷಿಗಳಲ್ಲಿ ಇದ್ದಾರೆ ಎಂಬುದಕ್ಕೆ, ಹೊಸ ಒಡಂಬಡಿಕೆಯ ಈ ಭಾಷಾಂತರವೇ ಪುರಾವೆಯಾಗಿದೆ.”—ಆ್ಯಂಡೋವರ್ ನ್ಯೂಟನ್ ಕ್ವಾರ್ಟರ್ಲಿ, ಜನವರಿ 1963
[ಪುಟ 30 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಬೈಬಲ್ ಸಂಬಂಧಿತ ಪಾಂಡಿತ್ಯ ಹಾಗೂ ಭಾಷಾ ಬದಲಾವಣೆಗಳಿಗೆ ಸರಿಸಮವಾಗಿ ಭಾಷಾಂತರಗಳು ಸಹ ಬದಲಾಗುತ್ತಾ ಇರಬೇಕು”
[ಪುಟ 31 ರಲ್ಲಿರುವ ಚೌಕ/ಚಿತ್ರಗಳು]
ವಿದ್ವಾಂಸರು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲನ್ನು ಪ್ರಶಂಸಿಸುತ್ತಾರೆ
ಆ್ಯನ್ ಅಮೆರಿಕನ್ ಟ್ರಾನ್ಸ್ಲೇಶನ್ನಲ್ಲಿ, ಗ್ರೀಕ್ ಭಾಷೆಯ “ಹೊಸ ಒಡಂಬಡಿಕೆ”ಯ ಭಾಷಾಂತರಕಾರರಾದ ಎಡ್ಗರ್ ಜೆ. ಗುಡ್ಸ್ಪೀಡ್ ಅವರು, ಡಿಸೆಂಬರ್ 8, 1950ರ ತಾರೀಖಿನ ಒಂದು ಪತ್ರದಲ್ಲಿ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಕ್ರಿಶ್ಚಿಯನ್ ಗ್ರೀಕ್ ಸ್ಕ್ರಿಪ್ಚರ್ಸ್ನ ಕುರಿತು ಬರೆದುದು: “ನಿಮ್ಮ ಜನರ ಧಾರ್ಮಿಕ ಕಾರ್ಯಾಚರಣೆಯಲ್ಲಿ, ಮತ್ತು ಅದರ ಲೋಕವ್ಯಾಪಕ ಗುರಿಯಲ್ಲಿ ನನಗೆ ಅಭಿರುಚಿಯಿದೆ. ಅಷ್ಟುಮಾತ್ರವಲ್ಲ, ಮುಕ್ತವಾದ, ಮುಚ್ಚುಮರೆಯಿಲ್ಲದ ಹಾಗೂ ಸ್ಫುಟವಾದ ಭಾಷಾಂತರವನ್ನು ಓದಿ ನನಗೆ ತುಂಬ ಸಂತೋಷವಾಗಿದೆ. ತರ್ಕಬದ್ಧವಾದ ಗಂಭೀರ ಪಾಂಡಿತ್ಯವು ಇದರಲ್ಲಿ ಅಡಕವಾಗಿದೆ, ಮತ್ತು ನಾನೇ ಇದಕ್ಕೆ ರುಜುವಾತು ನೀಡಬಲ್ಲೆ.”
ಹೀಬ್ರು ಮತ್ತು ಗ್ರೀಕ್ ವಿದ್ವಾಂಸರಾದ ಆ್ಯಲೆಕ್ಸಾಂಡರ್ ಥಾಮ್ಸನ್ ಬರೆದುದು: “ಈ ಭಾಷಾಂತರವು, ತುಂಬ ಕುಶಲ ಹಾಗೂ ಬುದ್ಧಿವಂತ ವಿದ್ವಾಂಸರಿಂದ ಉತ್ಪಾದಿಸಲ್ಪಟ್ಟ ಒಂದು ಕೃತಿಯಾಗಿದೆ ಎಂಬುದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಈ ವಿದ್ವಾಂಸರು, ಗ್ರೀಕ್ ಮೂಲಪಾಠದ ನಿಜಾರ್ಥವನ್ನು, ಇಂಗ್ಲಿಷ್ ಭಾಷೆಯಲ್ಲಿ ಎಷ್ಟರ ಮಟ್ಟಿಗೆ ವ್ಯಕ್ತಪಡಿಸಲು ಸಾಧ್ಯವಿದೆಯೋ ಅಷ್ಟರ ಮಟ್ಟಿಗೆ ವ್ಯಕ್ತಪಡಿಸಲು ಪ್ರಯತ್ನಿಸಿದ್ದಾರೆ.”—ದ ಡಿಫರೆನ್ಷಿಯೇಟರ್, ಏಪ್ರಿಲ್ 1952, 52-7ನೆಯ ಪುಟಗಳು.
ಇಸ್ರೇಲ್ನಲ್ಲಿರುವ ಒಬ್ಬ ಹೀಬ್ರು ವಿದ್ವಾಂಸರಾದ ಪ್ರೊಫೆಸರ್ ಬೆಂಜಮಿನ್ ಕಡಾರ್ ಅವರು 1989ರಲ್ಲಿ ಹೇಳಿದ್ದು: “ಹೀಬ್ರು ಬೈಬಲ್ ಮತ್ತು ಭಾಷಾಂತರಗಳ ಸಂಬಂಧದಲ್ಲಿ ನಾನು ನಡೆಸುವ ಭಾಷಾಶಾಸ್ತ್ರದ ಸಂಶೋಧನೆಯಲ್ಲಿ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಎಂದು ಪ್ರಸಿದ್ಧವಾಗಿರುವ ಬೈಬಲಿನ ಇಂಗ್ಲಿಷ್ ಸಂಪುಟವನ್ನು ಹೆಚ್ಚಾಗಿ ಉಪಯೋಗಿಸುತ್ತೇನೆ. ಹೀಗೆ ಉಪಯೋಗಿಸುವಾಗ, ಮೂಲಪಾಠದ ಸಾಧ್ಯವಿರುವಷ್ಟು ನಿಷ್ಕೃಷ್ಟವಾದ ಅರ್ಥವನ್ನು ವ್ಯಕ್ತಪಡಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆಯೆಂಬುದನ್ನು ಈ ಕೃತಿಯು ಪ್ರತಿಬಿಂಬಿಸುತ್ತದೆ ಎಂಬ ಪುನರಾಶ್ವಾಸನೆಯು ನನಗೆ ಪದೇಪದೇ ಸಿಗುತ್ತದೆ.”