ನಮ್ಮ ದಿನಗಳಿಗೆ ಸಂಬಂಧಿಸಿದ ಅತ್ಯಾವಶ್ಯಕ ಪ್ರಶ್ನೆಗಳನ್ನು ಬೈಬಲು ಉತ್ತರಿಸುತ್ತದೆ
ಬೈಬಲು ನಮ್ಮ ದಿನಗಳಿಗೆ ಪ್ರಾಯೋಗಿಕವಾಗಿ ಅನ್ವಯವಾಗುತ್ತದೊ? ಉತ್ತರವು ಹೌದು ಎಂದಾಗಿರಬೇಕಾದರೆ, ಖಂಡಿತವಾಗಿಯೂ ಈ ಪುರಾತನ ಗ್ರಂಥವು ತನ್ನ ಓದುಗರಿಗೆ, ಸದ್ಯದ ಅಭಿರುಚಿ ಹಾಗೂ ಪ್ರಸ್ತುತ ವಿಷಯಕ್ಕೆ ಸಂಬಂಧಪಟ್ಟ ಸಂಗತಿಗಳ ಕುರಿತು ಮಾರ್ಗದರ್ಶನವನ್ನು ಒದಗಿಸಬೇಕು. ಇಂದಿನ ಲೋಕದಲ್ಲಿ ನಿಜವಾಗಿಯೂ ಪ್ರಾಮುಖ್ಯವಾಗಿರುವ ವಸ್ತುವಿಷಯಗಳ ಕುರಿತು ಪ್ರಯೋಜನಾರ್ಹವಾದ ಸಲಹೆಯನ್ನು ಬೈಬಲು ಕೊಡುತ್ತದೋ?
ಎರಡು ಪ್ರಚಲಿತ ವಿವಾದಾಂಶಗಳನ್ನು ನಾವೀಗ ಪರಿಗಣಿಸೋಣ. ಹೀಗೆ ಪರಿಗಣಿಸುವಾಗ, ಈ ವಿಷಯಗಳ ಬಗ್ಗೆ ಬೈಬಲು ಏನು ಹೇಳುತ್ತದೆ ಎಂಬುದನ್ನು ನಾವು ಪರೀಕ್ಷಿಸುವೆವು.
ದೇವರು ಏಕೆ ಕಷ್ಟಾನುಭವವನ್ನು ಅನುಮತಿಸುತ್ತಾನೆ?
ಇಂದು ಲೋಕದಲ್ಲಿರುವ ಪರಿಸ್ಥಿತಿಗಳನ್ನು ನೋಡುವಾಗ, ತುಂಬ ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳಲ್ಲಿ ಒಂದು ಹೀಗಿದೆ: ಮುಗ್ಧ ಜನರು ಕಷ್ಟಾನುಭವಿಸುವಂತೆ ದೇವರು ಏಕೆ ಅನುಮತಿಸುತ್ತಾನೆ? ಹೆಚ್ಚೆಚ್ಚು ಜನರು ಹಿಂಸಾತ್ಮಕ ದುಷ್ಕೃತ್ಯ, ಭ್ರಷ್ಟಾಚಾರ, ಕೊಲೆ, ವೈಯಕ್ತಿಕ ದುರಂತ, ಇವೇ ಮುಂತಾದ ಅನೇಕ ಸಂಗತಿಗಳಿಂದ ಬಾಧಿಸಲ್ಪಡುತ್ತಿರುವುದರಿಂದ ಈ ಪ್ರಶ್ನೆಯು ಸಮಂಜಸವಾಗಿದೆ.
ಉದಾಹರಣೆಗೆ, 1998ರ ಜೂನ್ ತಿಂಗಳಿನಲ್ಲಿ, ಉತ್ತರ ಜರ್ಮನಿಯಲ್ಲಿ ಒಂದು ಎಕ್ಸ್ಪ್ರೆಸ್ ರೈಲು ಸೇತುವೆಗೆ ಅಪ್ಪಳಿಸಿತು ಮತ್ತು ನೂರಕ್ಕಿಂತಲೂ ಹೆಚ್ಚು ಪ್ರಯಾಣಿಕರ ಸಾವಿಗೆ ಕಾರಣವಾಯಿತು. ಮೃತರ ಹಾಗೂ ಗಾಯಾಳುಗಳ ಆರೈಕೆಮಾಡಲಿಕ್ಕಾಗಿ ಬಂದ ಅನುಭವಸ್ಥ ವೈದ್ಯರು ಹಾಗೂ ಅಗ್ನಿಶಾಮಕ ದಳದವರು, ರಕ್ತದ ಕೋಡಿಯೇ ಹರಿದಿರುವುದನ್ನು ನೋಡಿ ಕ್ಷೋಭೆಗೊಂಡಿದ್ದರು. ಇವ್ಯಾಂಜಲಿಕಲ್ ಚರ್ಚಿನ ಬಿಷಪನೊಬ್ಬನು ಕೇಳಿದ್ದು: “ಪ್ರಿಯ ದೇವರೇ, ಹೀಗೆ ಏಕೆ ಸಂಭವಿಸಬೇಕಾಗಿತ್ತು?” ಆ ಬಿಷಪನಿಗೇ ಇದರ ಉತ್ತರವು ಗೊತ್ತಿರಲಿಲ್ಲ.
ಮುಗ್ಧ ಜನರು ಕಷ್ಟಾನುಭವಿಸುವಾಗ ಮತ್ತು ಇದಕ್ಕೆ ಕಾರಣವೇನು ಎಂಬುದು ಅವರಿಗೆ ವಿವರವಾಗಿ ಗೊತ್ತಿಲ್ಲದ ಕಾರಣ, ಕೆಲವೊಮ್ಮೆ ಅವರು ಉದ್ರೇಕಗೊಳ್ಳುತ್ತಾರೆ ಎಂದು ಅನುಭವಗಳು ತೋರಿಸುತ್ತವೆ. ಈ ಹಂತದಲ್ಲಿ ಬೈಬಲು ಸಹಾಯ ಮಾಡಬಲ್ಲದು, ಏಕೆಂದರೆ ಮುಗ್ಧ ಜನರು ದುಷ್ಟತನ ಹಾಗೂ ಕಷ್ಟಾನುಭವಕ್ಕೆ ಏಕೆ ಒಳಗಾಗುತ್ತಾರೆ ಎಂಬುದನ್ನು ಅದು ವಿವರಿಸುತ್ತದೆ.
ಯೆಹೋವ ದೇವರು ಭೂಮಿಯನ್ನು ಹಾಗೂ ಅದರಲ್ಲಿರುವುದೆಲ್ಲವನ್ನು ಸೃಷ್ಟಿಸಿದಾಗ, ಮಾನವಕುಲವು ದುಷ್ಟತನ ಹಾಗೂ ಕಷ್ಟಾನುಭವವನ್ನು ಅನುಭವಿಸಬೇಕು ಎಂಬುದು ಆತನ ಉದ್ದೇಶವಾಗಿರಲಿಲ್ಲ. ಇದರ ಬಗ್ಗೆ ನಾವು ಹೇಗೆ ಖಾತ್ರಿಯಿಂದಿರಬಲ್ಲೆವು? ಹೇಗೆಂದರೆ, ತನ್ನ ಸೃಷ್ಟಿಕಾರ್ಯವನ್ನು ಪೂರ್ಣಗೊಳಿಸಿದ ಬಳಿಕ, “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” (ಆದಿಕಾಂಡ 1:31) ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಒಂದುವೇಳೆ ನಾನು ಏನಾದರೂ ಕೆಟ್ಟದ್ದನ್ನು ಗಮನಿಸುತ್ತಿದ್ದಲ್ಲಿ, “ಬಹು ಒಳ್ಳೇದಾಗಿತ್ತು” ಎಂದು ನಾನು ಹೇಳುತ್ತಿದ್ದೆನೊ?’ ಖಂಡಿತವಾಗಿಯೂ ಇಲ್ಲ! ಅದೇ ರೀತಿಯಲ್ಲಿ, ಎಲ್ಲವೂ “ಒಳ್ಳೇದಾಗಿತ್ತು” ಎಂದು ದೇವರು ಹೇಳಿದಾಗ, ಭೂಮಿಯಲ್ಲಿ ದುಷ್ಟತನದ ಕುರುಹೂ ಇರಲಿಲ್ಲ. ಹಾಗಾದರೆ, ದುಷ್ಟತನವು ಯಾವಾಗ ಮತ್ತು ಹೇಗೆ ಆರಂಭವಾಯಿತು?
ನಮ್ಮ ಪ್ರಥಮ ಹೆತ್ತವರಾದ ಆದಾಮಹವ್ವರು ಸೃಷ್ಟಿಸಲ್ಪಟ್ಟ ಸ್ವಲ್ಪ ಸಮಯದ ನಂತರ, ಒಬ್ಬ ಶಕ್ತಿಶಾಲಿ ಆತ್ಮಜೀವಿಯು ಹವ್ವಳನ್ನು ಸಮೀಪಿಸಿ, ಯೆಹೋವನ ಸತ್ಯತೆ ಹಾಗೂ ಆತನ ಪರಮಾಧಿಕಾರದ ನ್ಯಾಯವಾದ ಹಕ್ಕಿಗೆ ಪಂಥಾಹ್ವಾನವನ್ನೊಡ್ಡಿದನು. (ಆದಿಕಾಂಡ 3:1-5) ತದನಂತರ ಈ ಆತ್ಮಜೀವಿಯು, ಅಂದರೆ ಪಿಶಾಚನಾದ ಸೈತಾನನು, ಆಪತ್ಕಾಲದಲ್ಲಿ ಮಾನವರು ದೇವರಿಗೆ ನಿಷ್ಠಾವಂತರಾಗಿ ಉಳಿಯಲು ಸಾಧ್ಯವಿಲ್ಲ ಎಂದು ಆಪಾದಿಸಿದನು. (ಯೋಬ 2:1-5) ಈ ಸನ್ನಿವೇಶಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? ತನ್ನಿಂದ ಸ್ವತಂತ್ರರಾಗಿ ಜೀವಿಸುವ ಆಯ್ಕೆಯನ್ನು ಮಾಡಿಕೊಂಡ ಮಾನವರು ಯಶಸ್ವಿಕರವಾಗಿ ತಮ್ಮ ಹೆಜ್ಜೆಗಳನ್ನು ಇಡಲಾರರು ಎಂಬುದು ರುಜುವಾಗಸಾಧ್ಯವಾಗುವಂತೆ ಆತನು ಕಾಲಾವಕಾಶವನ್ನು ಕೊಟ್ಟನು. (ಯೆರೆಮೀಯ 10:23) ಸೃಷ್ಟಿಜೀವಿಗಳು ದೇವರ ನಿಯಮಗಳು ಹಾಗೂ ಮೂಲತತ್ವಗಳಿಗೆ ವ್ಯತಿರಿಕ್ತವಾಗಿ ಕ್ರಿಯೆಗೈಯುವಾಗ ಪಾಪವು ಫಲಿಸುತ್ತದೆ ಮತ್ತು ಇದು ಹಾನಿಕರವಾದ ಪರಿಸ್ಥಿತಿಗಳನ್ನು ಉಂಟುಮಾಡುತ್ತದೆ. (ಪ್ರಸಂಗಿ 8:9; 1 ಯೋಹಾನ 3:4) ಈ ಎಲ್ಲ ಪ್ರತಿಕೂಲ ಸನ್ನಿವೇಶಗಳ ಎದುರಿನಲ್ಲಿಯೂ, ಕೆಲವು ಮಾನವರು ತನ್ನ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವರು ಎಂಬುದು ಯೆಹೋವನಿಗೆ ಗೊತ್ತಿತ್ತು.
ಏದೆನ್ನಲ್ಲಿ ಆ ಶೋಚನೀಯ ದಂಗೆಯು ಸಂಭವಿಸಿದಂದಿನಿಂದ ಸುಮಾರು 6,000 ವರ್ಷಗಳು ಸಂದಿವೆ. ಇದು ಅತಿ ದೀರ್ಘಕಾಲವಾಗಿ ಪರಿಣಮಿಸಿದೆಯೊ? ಯೆಹೋವನು ಸೈತಾನನನ್ನೂ ಅವನ ಬೆಂಬಲಿಗರನ್ನೂ ಶತಮಾನಗಳ ಹಿಂದೆಯೇ ನಾಶಮಾಡಿಬಿಡಸಾಧ್ಯವಿತ್ತು. ಆದರೆ, ಯೆಹೋವನ ಪರಮಾಧಿಕಾರದ ನ್ಯಾಯವಾದ ಹಕ್ಕು ಹಾಗೂ ಆತನ ಕಡೆಗೆ ಮಾನವರು ತೋರಿಸುವ ಸಮಗ್ರತೆಯ ಕುರಿತಾದ ಪ್ರತಿಯೊಂದು ಸಂಶಯವೂ ನಿವಾರಿಸಲ್ಪಡುವ ತನಕ ಕಾಯುವುದು ಉತ್ತಮವಾಗಿರುವುದಿಲ್ಲವೊ? ಒಂದು ಕೋರ್ಟ್ ಕೇಸಿನಲ್ಲಿ, ಯಾರು ನಿರಪರಾಧಿಗಳು ಮತ್ತು ಯಾರು ತಪ್ಪಿತಸ್ಥರು ಎಂಬುದನ್ನು ರುಜುಪಡಿಸಲು ಅನೇಕ ವರ್ಷಗಳೇ ಹಿಡಿಯುವಂತಹ ಇಂದಿನ ನ್ಯಾಯನಿರ್ಣಾಯಕ ವ್ಯವಸ್ಥೆಗಳ ವಿಷಯದಲ್ಲಿ ಇದು ನಿಜವಾಗಿರುವುದಿಲ್ಲವೊ?
ಯೆಹೋವನನ್ನು ಹಾಗೂ ಮಾನವಕುಲವನ್ನು, ಅಂದರೆ ವಿಶ್ವ ಪರಮಾಧಿಕಾರ ಮತ್ತು ಮಾನವರ ಸಮಗ್ರತೆಯನ್ನು ಒಳಗೊಂಡಿರುವ ಈ ವಿವಾದಾಂಶಗಳ ಪ್ರಮುಖತೆಯನ್ನು ಪರಿಗಣಿಸುವಾಗ, ದೇವರು ಇಷ್ಟು ಕಾಲಾವಧಿಯನ್ನು ಅನುಮತಿಸಿದ್ದು ಆತನ ವತಿಯಿಂದ ಎಷ್ಟು ವಿವೇಕಪ್ರದವಾದದ್ದಾಗಿತ್ತು! ಮಾನವರು ದೇವರ ನಿಯಮಗಳನ್ನು ಅಲಕ್ಷಿಸಿ, ತಮ್ಮ ವ್ಯವಹಾರಗಳನ್ನು ತಾವೇ ನಿಯಂತ್ರಿಸಿಕೊಳ್ಳಲು ಪ್ರಯತ್ನಿಸುವಾಗ ಏನು ಸಂಭವಿಸುತ್ತದೆ ಎಂಬುದನ್ನು ನಾವು ಈಗ ಸ್ಪಷ್ಟವಾಗಿ ನೋಡುತ್ತಿದ್ದೇವೆ. ಇದರ ಫಲಿತಾಂಶವಾಗಿ ಲೋಕದಾದ್ಯಂತ ಕೆಟ್ಟತನವೇ ತುಂಬಿಹೋಗಿದೆ. ಆದುದರಿಂದಲೇ, ಇಂದು ಅನೇಕ ಮುಗ್ಧ ಜನರು ಕಷ್ಟಾನುಭವಿಸುತ್ತಾರೆ.
ಆದರೂ, ದುಷ್ಟತನವು ಸದಾಕಾಲ ಇರುವುದಿಲ್ಲ ಎಂದು ದೇವರ ವಾಕ್ಯವು ಸೂಚಿಸುವುದು ಸಂತೋಷಕರ ಸಂಗತಿಯೇ. ವಾಸ್ತವದಲ್ಲಿ, ಯೆಹೋವನು ಅತಿ ಬೇಗನೆ ಕೆಟ್ಟತನವನ್ನು ತೆಗೆದುಹಾಕುತ್ತಾನೆ ಹಾಗೂ ಅದಕ್ಕೆ ಕಾರಣರಾದವರನ್ನು ನಾಶಮಾಡಿಬಿಡುತ್ತಾನೆ. “ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು” ಎಂದು ಜ್ಞಾನೋಕ್ತಿ 2:22 ಹೇಳುತ್ತದೆ. ಇನ್ನೊಂದು ಕಡೆಯಲ್ಲಿ, ಯಾರು ದೇವರಿಗೆ ನಂಬಿಗಸ್ತರಾಗಿರುತ್ತಾರೋ ಅವರು, ‘ಮರಣವಾಗಲಿ ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇಲ್ಲದಿರು’ವಂತಹ ಒಂದು ಸಮಯವನ್ನು ಮುನ್ನೋಡಬಲ್ಲರು; ಮತ್ತು ಆ ಸಮಯವು ಸನ್ನಿಹಿತವಾಗಿದೆ.—ಪ್ರಕಟನೆ 21:4.
ಆದುದರಿಂದ, ಮುಗ್ಧ ಜನರು ಏಕೆ ಕಷ್ಟಾನುಭವಿಸುತ್ತಾರೆ ಎಂಬುದನ್ನು ಬೈಬಲು ಸ್ಪಷ್ಟವಾಗಿ ವಿವರಿಸುತ್ತದೆ. ಅತಿ ಬೇಗನೆ ಕೆಟ್ಟತನ ಹಾಗೂ ಕಷ್ಟಾನುಭವಗಳು ಇಲ್ಲವಾಗುವವು ಎಂಬ ಆಶ್ವಾಸನೆಯನ್ನು ಸಹ ಅದು ನಮಗೆ ಕೊಡುತ್ತದೆ. ಆದರೂ, ನಾವು ಜೀವನದಲ್ಲಿ ಸದ್ಯದ ತೊಂದರೆಗಳನ್ನು ಅನುಭವಿಸುತ್ತಿರುವಾಗ, ಅತ್ಯಾವಶ್ಯಕವಾದ ಇನ್ನೊಂದು ಪ್ರಶ್ನೆಗೆ ನಾವು ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.
ಜೀವಿತದ ಉದ್ದೇಶವೇನು?
ಬಹುಶಃ ಮಾನವಕುಲದ ಇತಿಹಾಸದಲ್ಲಿನ ಯಾವುದೇ ಸಮಯಕ್ಕಿಂತಲೂ ಹೆಚ್ಚಾಗಿ ಇಂದು, ಜೀವಿತದ ಉದ್ದೇಶವೇನು ಎಂಬುದನ್ನು ಕಂಡುಹಿಡಿಯಲು ಜನರು ಪ್ರಯತ್ನಿಸುತ್ತಿದ್ದಾರೆ. ಅನೇಕರು ಹೀಗೆ ಪ್ರಶ್ನಿಸಿಕೊಳ್ಳುತ್ತಾರೆ, ‘ನಾನು ಏಕೆ ಬದುಕಿದ್ದೇನೆ? ನನ್ನ ಜೀವಿತದಲ್ಲಿ ನಾನು ಹೇಗೆ ಅರ್ಥವನ್ನು ಕಂಡುಕೊಳ್ಳಸಾಧ್ಯವಿದೆ?’ ಅನೇಕಾನೇಕ ಪರಿಸ್ಥಿತಿಗಳು, ಈ ಪ್ರಶ್ನೆಗಳನ್ನು ಕೇಳುವಂತೆ ಅವರನ್ನು ಪ್ರಚೋದಿಸುತ್ತವೆ.
ಒಬ್ಬ ವ್ಯಕ್ತಿಯ ಜೀವಿತವು ಒಂದು ವೈಯಕ್ತಿಕ ದುರಂತದಿಂದ ನುಚ್ಚುನೂರಾಗಬಹುದು. ದೃಷ್ಟಾಂತಕ್ಕಾಗಿ, 1998ರ ಆರಂಭದಲ್ಲಿ, ಜರ್ಮನಿಯ ಬವೇರಿಯದಲ್ಲಿನ 12 ವರ್ಷ ಪ್ರಾಯದ ಹುಡುಗಿಯೊಬ್ಬಳನ್ನು ಕಿಡ್ನ್ಯಾಪ್ ಮಾಡಿ, ತದನಂತರ ಕೊಲ್ಲಲಾಯಿತು. ಒಂದು ವರ್ಷದ ಬಳಿಕ, ಪ್ರತಿಯೊಂದು ದಿನವನ್ನೂ ತಾನು ಜೀವಿತದ ಉದ್ದೇಶವನ್ನು ಕಂಡುಕೊಳ್ಳುವುದರಲ್ಲಿ ವ್ಯಯಿಸುತ್ತೇನೆ, ಆದರೆ ಇದರಿಂದ ಏನೂ ಪ್ರಯೋಜನವಾಗಿಲ್ಲ ಎಂದು ಅವಳ ತಾಯಿ ಒಪ್ಪಿಕೊಂಡಳು. ಕೆಲವು ಯುವ ಜನರು, ಜೀವಿತದ ಉದ್ದೇಶದ ಕುರಿತು ಚಿಂತಿಸುವಂತೆ ಪ್ರಚೋದಿಸಲ್ಪಟ್ಟಿದ್ದಾರೆ. ಅವರು ಭದ್ರತೆ, ಸಂತೃಪ್ತಿ, ಮತ್ತು ಆಪ್ತ ಸಂಬಂಧವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ವ್ಯಾಪಕವಾಗಿರುವ ಕಪಟತನ ಹಾಗೂ ಭ್ರಷ್ಟಾಚಾರವನ್ನು ನೋಡಿ ಅವರು ನಿರಾಶೆಗೊಳ್ಳುತ್ತಿದ್ದಾರೆ. ಇನ್ನಿತರರು ಒಂದು ಕೆಲಸದ ಸುತ್ತಲೂ ತಮ್ಮ ಜೀವಿತವನ್ನು ಕಟ್ಟುತ್ತಾರಾದರೂ, ತಾವು ಏಕೆ ಅಸ್ತಿತ್ವದಲ್ಲಿದ್ದೇವೆ ಎಂಬುದನ್ನು ಕಂಡುಕೊಳ್ಳಲಿಕ್ಕಾಗಿರುವ ಆಂತರಿಕ ಹಂಬಲವನ್ನು, ಅಧಿಕಾರ, ಪ್ರಖ್ಯಾತಿ, ಮತ್ತು ಆಸ್ತಿಪಾಸ್ತಿಗಳು ತೃಪ್ತಿಪಡಿಸಲಾರವು ಎಂಬುದು ಅವರಿಗೆ ಗೊತ್ತಾಗುತ್ತದೆ.
ಜೀವಿತದ ಉದ್ದೇಶದ ಕುರಿತು ವಿಚಾರಿಸುವಂತೆ ಒಬ್ಬ ವ್ಯಕ್ತಿಯನ್ನು ಯಾವುದೇ ಸಂಗತಿಯು ಪ್ರಚೋದಿಸಲಿ, ಈ ಪ್ರಶ್ನೆಗೆ ಮಾತ್ರ ಗಂಭೀರವಾದ ಹಾಗೂ ಸಂತೃಪ್ತಿಕರವಾದ ಉತ್ತರವು ಸಿಗಲೇಬೇಕು. ಮತ್ತೊಮ್ಮೆ ಬೈಬಲೇ ನಮಗೆ ಸಹಾಯ ಮಾಡಬಲ್ಲದು. ಅದು ಯೆಹೋವನನ್ನು ಉದ್ದೇಶದ ದೇವರು, ತಾನು ಮಾಡುವ ಪ್ರತಿಯೊಂದು ಕೆಲಸಕ್ಕೂ ಸದೃಢವಾದ ಕಾರಣಗಳನ್ನು ಹೊಂದಿರುವವನು ಎಂದು ಗುರುತಿಸುತ್ತದೆ. ಯಾವುದೇ ಕಾರಣವಿಲ್ಲದೆ ನೀವು ಒಂದು ಮನೆಯನ್ನು ಕಟ್ಟುವಿರೊ? ಎಂದು ನಾವು ಕೇಳುತ್ತೇವೆ. ಬಹುಶಃ ಇಲ್ಲ, ಏಕೆಂದರೆ ಒಂದು ಮನೆಯನ್ನು ಕಟ್ಟಲಿಕ್ಕಾಗಿ ದೊಡ್ಡ ಮೊತ್ತದ ಬಂಡವಾಳದ ಅಗತ್ಯವಿದೆ ಮತ್ತು ಇದಕ್ಕೆ ಅನೇಕ ತಿಂಗಳುಗಳು ಅಥವಾ ವರ್ಷಗಳು ಹಿಡಿಯಬಹುದು. ನೀವು ಅಥವಾ ಬೇರೆ ಯಾರಾದರೂ ವಾಸಿಸಲು ಸಾಧ್ಯವಾಗುವಂತೆ ನೀವು ಒಂದು ಮನೆಯನ್ನು ಕಟ್ಟುತ್ತೀರಿ. ಇದೇ ತರ್ಕವನ್ನು ಯೆಹೋವನಿಗೂ ಅನ್ವಯಿಸಸಾಧ್ಯವಿದೆ. ಒಂದು ಕಾರಣವಿಲ್ಲದೆ, ಅಂದರೆ ಒಂದು ಉದ್ದೇಶವಿಲ್ಲದೆ ಆತನು ಈ ಭೂಮಿಯನ್ನು ಹಾಗೂ ಅದರಲ್ಲಿರುವ ಜೀವಜಂತುಗಳನ್ನು ಸೃಷ್ಟಿಸುವ ತೊಂದರೆಯನ್ನು ತೆಗೆದುಕೊಳ್ಳಲಿಲ್ಲ. (ಇಬ್ರಿಯ 3:4ನ್ನು ಹೋಲಿಸಿರಿ.) ಭೂಮಿಯ ಕಡೆಗೆ ಆತನಿಗೆ ಯಾವ ಉದ್ದೇಶವಿದೆ?
ಯೆಶಾಯನ ಪ್ರವಾದನೆಯು ಯೆಹೋವನನ್ನು “ಆತನೇ [ಸತ್ಯ] ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು” ಎಂದು ಗುರುತಿಸುತ್ತದೆ. ಅಷ್ಟುಮಾತ್ರವಲ್ಲ, ಆತನೇ “ಅದನ್ನು [ಭೂಮಿಯನ್ನು] ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾಯ 45:18) ಹೌದು, ಭೂಮಿಯು ಸೃಷ್ಟಿಸಲ್ಪಟ್ಟಂದಿನಿಂದ, ಅದರಲ್ಲಿ ಜನರು ವಾಸಿಸಬೇಕೆಂಬುದೇ ಯೆಹೋವನ ಉದ್ದೇಶವಾಗಿದೆ. ಕೀರ್ತನೆ 115:16 ಹೇಳುವುದು: “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ.” ಹೀಗೆ, ಭೂಮಿಯನ್ನು ಚೆನ್ನಾಗಿ ನೋಡಿಕೊಳ್ಳುವ ವಿಧೇಯ ಮಾನವರು, ಅದರಲ್ಲಿ ವಾಸಿಸಲು ಸಾಧ್ಯವಾಗುವಂತೆ ಯೆಹೋವನು ಭೂಮಿಯನ್ನು ಸೃಷ್ಟಿಸಿದನು ಎಂದು ಬೈಬಲು ತೋರಿಸುತ್ತದೆ.—ಆದಿಕಾಂಡ 1:27, 28.
ಆದಾಮಹವ್ವರ ದಂಗೆಯು, ಯೆಹೋವನು ತನ್ನ ಉದ್ದೇಶವನ್ನು ಬದಲಾಯಿಸುವಂತೆ ಮಾಡಿತೊ? ಖಂಡಿತವಾಗಿಯೂ ಇಲ್ಲ. ಇದನ್ನು ನಾವು ಇಷ್ಟು ಖಾತ್ರಿಯಿಂದ ಹೇಗೆ ಹೇಳಸಾಧ್ಯವಿದೆ? ಈ ಅಂಶವನ್ನು ಪರಿಗಣಿಸಿರಿ: ಏದೆನಿನಲ್ಲಿ ದಂಗೆಯು ನಡೆದು ಸಾವಿರಾರು ವರ್ಷಗಳು ಗತಿಸಿದ ಬಳಿಕ ಬೈಬಲು ಬರೆಯಲ್ಪಟ್ಟಿತು. ಒಂದುವೇಳೆ ದೇವರು ತನ್ನ ಮೂಲ ಉದ್ದೇಶವನ್ನು ಬದಲಾಯಿಸಿರುತ್ತಿದ್ದಲ್ಲಿ, ಅದರ ಬಗ್ಗೆ ಬೈಬಲಿನಲ್ಲಿ ಏಕೆ ತಿಳಿಸಲ್ಪಟ್ಟಿಲ್ಲ? ಭೂಮಿ ಹಾಗೂ ಮಾನವಕುಲದ ಕಡೆಗಿನ ಆತನ ಉದ್ದೇಶವು ಖಂಡಿತವಾಗಿಯೂ ಬದಲಾಗಿಲ್ಲ ಎಂಬುದೇ ಸ್ಪಷ್ಟವಾದ ತೀರ್ಮಾನವಾಗಿದೆ.
ಅಷ್ಟುಮಾತ್ರವಲ್ಲ, ಯೆಹೋವನ ಉದ್ದೇಶಗಳು ಎಂದೂ ಅಸಫಲಗೊಳ್ಳುವುದಿಲ್ಲ. ಯೆಶಾಯನ ಮೂಲಕ ದೇವರು ಈ ಆಶ್ವಾಸನೆಯನ್ನು ನೀಡುತ್ತಾನೆ: “ಮಳೆಯೂ ಹಿಮವೂ ಆಕಾಶದಿಂದ ಬಿದ್ದು ಭೂಮಿಯನ್ನು ತೋಯಿಸಿ ಹಸುರುಗೊಳಿಸಿ ಫಲಿಸುವಂತೆ ಮಾಡಿ ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವದಿಲ್ಲವೋ ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:10, 11.
ದೇವರು ನಮ್ಮಿಂದ ನಿರೀಕ್ಷಿಸುವ ವಿಷಯಗಳು
ಹಾಗಾದರೆ, ಭೂಮಿಯಲ್ಲಿ ವಿಧೇಯ ಮಾನವರು ಸದಾಕಾಲಕ್ಕೂ ವಾಸಿಸುವುದರ ಕುರಿತಾದ ದೇವರ ಉದ್ದೇಶದ ನೆರವೇರಿಕೆಯಲ್ಲಿ ನಾವು ಭರವಸೆಯನ್ನು ಇಡಬಲ್ಲೆವೆಂಬುದು ಸ್ಪಷ್ಟ. ಭೂಮಿಯ ಮೇಲೆ ಶಾಶ್ವತವಾಗಿ ಜೀವಿಸುವ ಸುಯೋಗವುಳ್ಳವರಾಗಿರುವಂತಹ ಜನರ ಮಧ್ಯೆ ನಾವು ಇರಲು ಬಯಸುವಲ್ಲಿ, ಜ್ಞಾನಿಯಾಗಿದ್ದ ರಾಜ ಸೊಲೊಮೋನನು ಏನು ಹೇಳಿದನೋ ಅದನ್ನು ನಾವೂ ಮಾಡಬೇಕು: “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”—ಪ್ರಸಂಗಿ 12:13; ಯೋಹಾನ 17:3.
ಮಾನವಕುಲಕ್ಕಾಗಿರುವ ಯೆಹೋವನ ಉದ್ದೇಶಕ್ಕೆ ಹೊಂದಿಕೆಯಲ್ಲಿ ಜೀವಿಸುವುದರ ಅರ್ಥವು, ಸತ್ಯ ದೇವರನ್ನು ತಿಳಿದುಕೊಳ್ಳುವುದು ಮತ್ತು ಪವಿತ್ರ ಶಾಸ್ತ್ರದಲ್ಲಿ ತಿಳಿಸಲ್ಪಟ್ಟಿರುವ ಆತನ ಆವಶ್ಯಕತೆಗಳಿಗೆ ಅನುಗುಣವಾಗಿ ನಡೆಯುವುದೇ ಆಗಿದೆ. ನಾವು ಇದನ್ನು ಈಗಲೇ ಮಾಡುವುದಾದರೆ, ಒಂದು ಭೂಪ್ರಮೋದವನದಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಸಾಧ್ಯವಿದೆ. ಆ ಭೂಪ್ರಮೋದವನದಲ್ಲಿ, ದೇವರ ಹಾಗೂ ಆತನ ಅದ್ಭುತಕರ ಸೃಷ್ಟಿಯ ಕುರಿತು ಹೊಸ ಹೊಸ ಸಂಗತಿಗಳನ್ನು ಕಲಿಯುವುದು ಎಂದೂ ಕೊನೆಗೊಳ್ಳುವುದೇ ಇಲ್ಲ. (ಲೂಕ 23:43) ಎಂತಹ ರೋಮಾಂಚಕ ಪ್ರತೀಕ್ಷೆ!
ಜೀವಿತದಲ್ಲಿ ಒಂದು ಉದ್ದೇಶವನ್ನು ಕಂಡುಕೊಳ್ಳಲು ಪ್ರಯತ್ನಿಸುವ ಅನೇಕರು, ಬೈಬಲಿನ ಕಡೆಗೆ ತಿರುಗುತ್ತಾರೆ ಮತ್ತು ಈಗಲೇ ಭಾರೀ ಸಂತೋಷವನ್ನು ಅನುಭವಿಸುತ್ತಾರೆ. ಉದಾಹರಣೆಗೆ, ಆಲ್ಫ್ರೇಟ್ ಎಂಬ ಹೆಸರಿನ ಯೌವನಸ್ಥನು, ಜೀವಿತದಲ್ಲಿ ಯಾವುದೇ ಅರ್ಥವನ್ನು ಕಂಡುಕೊಳ್ಳಲಿಲ್ಲ. ಯುದ್ಧದಲ್ಲಿ ಧರ್ಮದ ಒಳಗೂಡುವಿಕೆಯನ್ನು ನೋಡಿ ಅವನು ಅಸಹ್ಯಪಟ್ಟನು, ಮತ್ತು ರಾಜಕೀಯದಲ್ಲಿದ್ದ ಕಪಟತೆ ಹಾಗೂ ಭ್ರಷ್ಟಾಚಾರವನ್ನು ನೋಡಿ ಕ್ಷೋಭೆಗೊಂಡಿದ್ದನು. ಜೀವಿತದ ಉದ್ದೇಶದ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುವ ನಿರೀಕ್ಷೆಯಿಂದ ಆಲ್ಫ್ರೇಟ್ ಉತ್ತರ ಅಮೆರಿಕದ ಇಂಡಿಯನ್ನರನ್ನು ಭೇಟಿಮಾಡಿದನು. ಆದರೆ ತುಂಬ ನಿರುತ್ಸಾಹಗೊಂಡು ಯೂರೋಪಿಗೆ ಹಿಂದಿರುಗಿದನು. ಹತಾಶನಾಗಿದ್ದ ಅವನು ಅಮಲೌಷಧಗಳು ಹಾಗೂ ಉನ್ಮತ್ತ ಸಂಗೀತವನ್ನು ಆಶ್ರಯಿಸಿದನು. ಆದರೂ, ಬೈಬಲಿನ ಕ್ರಮವಾದ ಹಾಗೂ ಜಾಗರೂಕ ಪರೀಕ್ಷೆಯು, ಜೀವಿತದ ನಿಜ ಉದ್ದೇಶವನ್ನು ತಿಳಿದುಕೊಳ್ಳಲು ಮತ್ತು ಸಂತೃಪ್ತಿಯನ್ನು ಕಂಡುಕೊಳ್ಳಲು ಆಲ್ಫ್ರೇಟ್ನಿಗೆ ಸಹಾಯ ಮಾಡಿತು.
ನಮ್ಮ ಹಾದಿಯಲ್ಲಿ ಒಂದು ವಿಶ್ವಾಸಾರ್ಹ ಬೆಳಕು
ಹಾಗಾದರೆ, ಬೈಬಲಿನ ಕುರಿತು ನಾವು ಯಾವ ತೀರ್ಮಾನಕ್ಕೆ ಬರಸಾಧ್ಯವಿದೆ? ನಮ್ಮ ದಿನಗಳಿಗೆ ಅದು ಅನ್ವಯವಾಗುತ್ತದೊ? ಖಂಡಿತವಾಗಿಯೂ ಅನ್ವಯವಾಗುತ್ತದೆ, ಏಕೆಂದರೆ ಪ್ರಚಲಿತ ವಿವಾದಾಂಶಗಳ ಕುರಿತು ಅದು ಮಾರ್ಗದರ್ಶನವನ್ನು ಒದಗಿಸುತ್ತದೆ. ದುಷ್ಟತನವನ್ನು ದೇವರು ಉಂಟುಮಾಡಲಿಲ್ಲ ಎಂದು ಬೈಬಲು ವಿವರಿಸುತ್ತದೆ ಮತ್ತು ಜೀವಿತದಲ್ಲಿ ಸಂತೃಪ್ತಿಕರವಾದ ಉದ್ದೇಶವನ್ನು ಕಂಡುಕೊಳ್ಳುವಂತೆ ಅದು ನಮಗೆ ಸಹಾಯ ಮಾಡುತ್ತದೆ. ಅಷ್ಟುಮಾತ್ರವಲ್ಲ, ಇಂದು ಜನರ ಆಸಕ್ತಿಯನ್ನು ಕೆರಳಿಸುವಂತಹ ಇನ್ನಿತರ ಸಂಗತಿಗಳ ಕುರಿತು ಸಹ ಬೈಬಲು ಅತ್ಯಧಿಕ ವಿಷಯಗಳನ್ನು ತಿಳಿಯಪಡಿಸುತ್ತದೆ. ವಿವಾಹ, ಮಕ್ಕಳನ್ನು ಬೆಳೆಸುವುದು, ಮಾನವ ಸಂಬಂಧಗಳು, ಹಾಗೂ ಮೃತರಿಗಾಗಿರುವ ನಿರೀಕ್ಷೆಗಳಂತಹ ವಿಷಯಗಳು ಸಹ ದೇವರ ವಾಕ್ಯದಲ್ಲಿ ಕಂಡುಬರುತ್ತವೆ.
ಬೈಬಲಿನಲ್ಲಿ ಏನೆಲ್ಲ ಒಳಗೂಡಿದೆ ಎಂಬುದನ್ನು ನೀವು ಇಷ್ಟರ ತನಕ ಪರೀಕ್ಷಿಸದಿರುವಲ್ಲಿ, ದಯವಿಟ್ಟು ಈಗ ಪರೀಕ್ಷಿಸಿ ನೋಡಿರಿ. ಜೀವಿತಕ್ಕಾಗಿರುವ ಅದರ ಮಾರ್ಗದರ್ಶನೆಗಳ ನಿಜ ಮೌಲ್ಯವನ್ನು ಒಮ್ಮೆ ನೀವು ಕಂಡುಕೊಂಡರೆ, ಕೀರ್ತನೆಗಾರನಿಗೆ ಆದಂತಹದ್ದೇ ಅನಿಸಿಕೆಯು ನಿಮಗೂ ಆಗಬಹುದು. ಮಾರ್ಗದರ್ಶನಕ್ಕಾಗಿ ಕೀರ್ತನೆಗಾರನು ಯೆಹೋವ ದೇವರ ಕಡೆಗೆ ತಿರುಗಿದನು ಮತ್ತು ಅವನು ಹಾಡಿದ್ದು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.”—ಕೀರ್ತನೆ 119:105.
[ಪುಟ 6 ರಲ್ಲಿರುವ ಚಿತ್ರ]
ಮುಗ್ಧ ಜನರು ಕಷ್ಟಾನುಭವಿಸುವಂತೆ ದೇವರು ಏಕೆ ಅನುಮತಿಸುತ್ತಾನೆ ಎಂಬುದು ನಿಮಗೆ ಗೊತ್ತಿದೆಯೊ?
[ಪುಟ 7 ರಲ್ಲಿರುವ ಚಿತ್ರ]
ನೀವು ಒಂದು ಉದ್ದೇಶಭರಿತ ಜೀವನದಲ್ಲಿ ಆನಂದಿಸಬಲ್ಲಿರಿ