ಸಿರಿಲ್ ಲೂಕಾರಸ್—ಬೈಬಲಿನ ಮಹತ್ವವನ್ನು ಅರಿತಿದ್ದ ಒಬ್ಬ ವ್ಯಕ್ತಿ
ಅದು 1638ರ ಬೇಸಗೆಯ ಒಂದು ದಿನವಾಗಿತ್ತು. ಆಟೊಮನ್ ಸಾಮ್ರಾಜ್ಯದ ರಾಜಧಾನಿಯಾದ ಕಾನ್ಸ್ಟಾಂಟಿನೋಪಲ್ (ಆಧುನಿಕ ದಿನದ ಇಸ್ಟಂಬೂಲ್)ನ ಸಮೀಪದಲ್ಲಿದ್ದ ಮಾರ್ಮರ ಸಮುದ್ರದ ಮೀನುಗಾರರು, ನೀರಿನಲ್ಲಿ ತೇಲುತ್ತಿದ್ದ ಒಂದು ಹೆಣವನ್ನು ನೋಡಿ ಬೆಚ್ಚಿಬಿದ್ದರು. ತುಂಬ ಹತ್ತಿರದಿಂದ ಅದನ್ನು ಪರಿಶೀಲಿಸಿದ ಬಳಿಕ, ಕತ್ತುಹಿಸುಕಿ ಕೊಲ್ಲಲ್ಪಟ್ಟಿದ್ದ ಆ ಹೆಣವು, ಆರ್ತೊಡಾಕ್ಸ್ ಚರ್ಚಿನ, ಅಂದರೆ ಕಾನ್ಸ್ಟಾಂಟಿನೋಪಲ್ನ ಚರ್ಚ್ ಮುಖ್ಯಸ್ಥನದ್ದು ಎಂಬುದು ಅವರಿಗೆ ಗೊತ್ತಾಯಿತು. ಇದು 17ನೆಯ ಶತಮಾನದ ಒಬ್ಬ ಪ್ರಮುಖ ಧಾರ್ಮಿಕ ವ್ಯಕ್ತಿಯಾಗಿದ್ದ ಸಿರಿಲ್ ಲೂಕಾರಸ್ನ ದುರಂತಮಯ ಅಂತ್ಯವಾಗಿತ್ತು.
ಆಡುಮಾತಿನ ಶೈಲಿಯಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರವನ್ನು ಭಾಷಾಂತರಿಸಿ, ಬಿಡುಗಡೆಮಾಡುವುದೇ ಲೂಕಾರಸ್ನ ಕನಸಾಗಿತ್ತು. ಆದರೆ ತನ್ನ ಕನಸು ನನಸಾಗುವ ತನಕ ಅವನು ಬದುಕಲಿಲ್ಲ. ಲೂಕಾರಸ್ನ ಇನ್ನೊಂದು ಕನಸು ಸಹ ಎಂದೂ ಕೈಗೂಡಲಿಲ್ಲ. ಅದು ಯಾವುದೆಂದರೆ, ಆರ್ತೊಡಾಕ್ಸ್ ಚರ್ಚು “ಔಪದೇಶೀಯ ಸರಳತೆ”ಗೆ ಹಿಂದಿರುಗುವುದನ್ನು ಕಾಣುವುದೇ. ಹಾಗಾದರೆ, ಇವನು ಯಾರಾಗಿದ್ದನು? ಈ ಪ್ರಯತ್ನಗಳನ್ನು ಮಾಡುತ್ತಿದ್ದಾಗ ಅವನು ಯಾವ ರೀತಿಯ ಅಡೆತಡೆಗಳನ್ನು ಎದುರಿಸಿದನು?
ಶಿಕ್ಷಣದ ಕೊರತೆಯಿಂದ ಎದೆಗುಂದಿಸಲ್ಪಟ್ಟದ್ದು
ವೆನೀಸ್ ನಗರದ ವಶವಾಗಿದ್ದ ಕ್ರೀಟ್ನ ಕ್ಯಾಂಡಿಯದಲ್ಲಿ (ಈಗ ಈರಾಕ್ಲೀಓ), ಸಿರಿಲ್ ಲೂಕಾರಸ್ 1572ರಲ್ಲಿ ಜನಿಸಿದನು. ಇವನು ತುಂಬ ಮೇಧಾವಿಯಾಗಿದ್ದುದರಿಂದ, ಇಟಲಿಯಲ್ಲಿರುವ ವೆನೀಸ್ ಮತ್ತು ಪ್ಯಾಡವದಲ್ಲಿ ಶಿಕ್ಷಣವನ್ನು ಪಡೆದುಕೊಂಡನು ಮತ್ತು ಆ ದೇಶದಲ್ಲಿ ಹಾಗೂ ಇನ್ನಿತರ ದೇಶಗಳಲ್ಲಿ ವ್ಯಾಪಕವಾಗಿ ಪ್ರಯಾಣಮಾಡಿದನು. ಚರ್ಚಿನೊಳಗೆ ನಡೆಯುತ್ತಿದ್ದ ಪಕ್ಷೀಯ ಹೋರಾಟಗಳಿಂದ ಬೇಸರಗೊಂಡಿದ್ದು, ಯೂರೋಪಿನಲ್ಲಿ ನಡೆಯುತ್ತಿದ್ದ ಸುಧಾರಣಾ ಚಳವಳಿಗಳಿಂದ ಆಕರ್ಷಿತನಾದ ಲೂಕಾರಸ್, ಆಗ ಕ್ಯಾಲ್ವಿನ್ ಪಂಥಿಗಳ ಪ್ರಭಾವಕ್ಕೆ ಒಳಗಾಗಿದ್ದ ಜಿನೀವ ಪಟ್ಟಣವನ್ನು ಸಂದರ್ಶಿಸಿದ್ದಿರಬಹುದು.
ಪೋಲೆಂಡನ್ನು ಸಂದರ್ಶಿಸುತ್ತಿದ್ದಾಗ, ಅಲ್ಲಿನ ಆರ್ತೊಡಾಕ್ಸ್ ಚರ್ಚಿನ ಪಾದ್ರಿಗಳು ಮತ್ತು ಜನಸಾಮಾನ್ಯರು, ಶಿಕ್ಷಣದ ಕೊರತೆಯ ಪರಿಣಾಮವಾಗಿ ಆತ್ಮಿಕ ರೀತಿಯಲ್ಲಿ ತುಂಬ ಹೀನ ಸ್ಥಿತಿಯಲ್ಲಿರುವುದನ್ನು ಲೂಕಾರಸ್ ನೋಡಿದನು. ಆ್ಯಲೆಕ್ಸಾಂಡ್ರಿಯ ಮತ್ತು ಕಾನ್ಸ್ಟಾಂಟಿನೋಪಲ್ನಲ್ಲಿ, ಎಲ್ಲಿ ಶಾಸ್ತ್ರವಚನಗಳು ಓದಲ್ಪಡುತ್ತಿದ್ದವೋ ಅಂತಹ ಉಪದೇಶ ಪೀಠಗಳನ್ನು ಕೆಲವು ಚರ್ಚುಗಳಿಂದ ತೆಗೆದುಹಾಕಿರುವುದನ್ನು ನೋಡಿ ಅವನು ಕಳವಳಗೊಂಡನು!
1602ರಲ್ಲಿ ಲೂಕಾರಸ್ ಆ್ಯಲೆಕ್ಸಾಂಡ್ರಿಯಕ್ಕೆ ಹೋದನು ಮತ್ತು ಆ ಅಧಿಕಾರ ಪ್ರಾಂತದಲ್ಲಿ ಅವನು ತನ್ನ ಸಂಬಂಧಿಕನಾದ ಪೇಟ್ರಿಆರ್ಕ್ ಮೀಲಿಟಿಯಸ್ನ ಉತ್ತರಾಧಿಕಾರಿಯಾದನು. ತದನಂತರ ಅವನು ಯೂರೋಪಿನ ಸುಧಾರಣಾ ಮನೋಭಾವವುಳ್ಳ ಬೇರೆ ಬೇರೆ ದೇವತಾಶಾಸ್ತ್ರಜ್ಞರೊಂದಿಗೆ ಪತ್ರವ್ಯವಹಾರ ಮಾಡಲಾರಂಭಿಸಿದನು. ಅಂತಹ ಪತ್ರಗಳಲ್ಲೊಂದರಲ್ಲಿ, ಆರ್ತೊಡಾಕ್ಸ್ ಚರ್ಚು ಅನೇಕ ಸುಳ್ಳು ಪದ್ಧತಿಗಳನ್ನು ಪಾಲಿಸುತ್ತಿದೆಯೆಂದು ಅವನು ತಿಳಿಸಿದನು. ಇನ್ನಿತರ ಪತ್ರಗಳಲ್ಲಿ, ಚರ್ಚು ತನ್ನ ಮೂಢನಂಬಿಕೆಗೆ ಬದಲಾಗಿ “ಔಪದೇಶೀಯ ಸರಳತೆ”ಯನ್ನು ಜಾರಿಗೆ ತರುವುದರ ಹಾಗೂ ಶಾಸ್ತ್ರವಚನಗಳ ಅಧಿಕಾರವನ್ನು ಮಾತ್ರ ಅವಲಂಬಿಸುವುದರ ಆವಶ್ಯಕತೆಯನ್ನು ಅವನು ಒತ್ತಿಹೇಳಿದನು.
ಪ್ರಾಚೀನ ಕ್ರೈಸ್ತ ಸಭೆಯ ಮುಖಂಡರ ಆತ್ಮಿಕ ಅಧಿಕಾರವನ್ನು, ಯೇಸು ಹಾಗೂ ಅಪೊಸ್ತಲರ ಮಾತುಗಳಿಗೆ ಸಮಾನವಾಗಿ ಪರಿಗಣಿಸುತ್ತಿರುವುದನ್ನು ಮನಗಂಡ ಲೂಕಾರಸ್ ಜಾಗ್ರತನಾದನು. “ಮಾನವ ಸಂಪ್ರದಾಯಗಳ ಮೇಲಾಧಾರಿತವಾದ ಹೇಳಿಕೆಗಳು, ಶಾಸ್ತ್ರವಚನಗಳಷ್ಟೇ ಮಹತ್ವಪೂರ್ಣವಾಗಿವೆ ಎಂದು ಜನರು ಹೇಳುವುದನ್ನು ನಾನು ಖಂಡಿತವಾಗಿಯೂ ಸಹಿಸಲಾರೆ” ಎಂದು ಅವನು ಬರೆದನು. (ಮತ್ತಾಯ 15:6) ತನ್ನ ಅಭಿಪ್ರಾಯದಲ್ಲಿ ವಿಗ್ರಹಾರಾಧನೆಯು ತುಂಬ ವಿಪತ್ಕಾರಕವಾದದ್ದು ಎಂದು ಅವನು ಕೂಡಿಸಿದನು. “ಸಂತ”ರಿಗೆ ಮಾಡಲ್ಪಡುವ ಪ್ರಾರ್ಥನೆಗಳು, ಮಧ್ಯಸ್ಥಗಾರನಾಗಿರುವ ಯೇಸುವಿಗೆ ಮುಖಭಂಗಮಾಡುವಂತಿವೆ ಎಂದು ಅವನು ಹೇಳಿದನು.—1 ತಿಮೊಥೆಯ 2:5.
ಚರ್ಚ್ ಮುಖ್ಯಸ್ಥರ ಗದ್ದುಗೆಯು ಮಾರಾಟಕ್ಕಿದೆ
ಈ ಅಭಿಪ್ರಾಯಗಳು ಮತ್ತು ಇದರೊಂದಿಗೆ ರೋಮನ್ ಕ್ಯಾತೊಲಿಕ್ ಚರ್ಚಿನ ಕುರಿತಾದ ಅವನ ವಿರೋಧವು, ಜೆಸ್ಯುಯಿಟ್ಟರೊಂದಿಗೆ ಹಾಗೂ ಕ್ಯಾತೊಲಿಕರೊಂದಿಗೆ ಒಮ್ಮತದಿಂದಿರಲು ಇಷ್ಟಪಟ್ಟ ಆರ್ತೊಡಾಕ್ಸ್ ಚರ್ಚಿನ ಸದಸ್ಯರ ದ್ವೇಷ ಮತ್ತು ಹಿಂಸೆಯನ್ನು ಲೂಕಾರಸ್ನ ಮೇಲೆ ಬರಮಾಡಿತು. 1620ರಲ್ಲಿ, ಈ ಎಲ್ಲ ವಿರೋಧದ ಎದುರಿನಲ್ಲಿಯೂ ಲೂಕಾರಸ್ ಕಾನ್ಸ್ಟಾಂಟಿನೋಪಲ್ನ ಚರ್ಚ್ ಮುಖ್ಯಸ್ಥನಾಗಿ ಚುನಾಯಿಸಲ್ಪಟ್ಟನು. ಆ ಸಮಯದಲ್ಲಿ ಆರ್ತೊಡಾಕ್ಸ್ ಚರ್ಚಿನ ಸ್ಥಾನಮಾನಗಳು ಆಟೊಮನ್ ಸಾಮ್ರಾಜ್ಯದ ಆಧಿಪತ್ಯದ ಕೆಳಗಿದ್ದವು. ಒಂದುವೇಳೆ ಹಣವನ್ನು ಕೊಡುವಲ್ಲಿ, ಆಟೊಮನ್ ಸರಕಾರವು ಸುಲಭವಾಗಿ ಒಬ್ಬ ಚರ್ಚ್ ಮುಖ್ಯಸ್ಥನನ್ನು ಅವನ ಸ್ಥಾನದಿಂದ ತೆಗೆದುಹಾಕಿ, ಆ ಸ್ಥಾನದಲ್ಲಿ ಬೇರೊಬ್ಬನನ್ನು ಇರಿಸುತ್ತಿತ್ತು.
ಲೂಕಾರಸ್ನ ವೈರಿಗಳು, ಅದರಲ್ಲೂ ಹೆಚ್ಚಾಗಿ ಜೆಸ್ಯುಯಿಟ್ಟರು ಹಾಗೂ ಸರ್ವಾಧಿಕಾರವಿದ್ದ ಮತ್ತು ದಿಗಿಲುಹುಟ್ಟಿಸುವಂತಿದ್ದ ಪೋಪರ ಕಾಂಗ್ರೆಗೆಟೀಯೊ ಡೇ ಪ್ರೋಪಾಗಾಂಡಾ ಫೀಡೇ (ನಂಬಿಕೆಯ ಪ್ರಚಾರಕ್ಕಾಗಿರುವ ಮಂಡಲಿ) ಸಭೆಯ ಸದಸ್ಯರು, ಅವನ ಮೇಲೆ ಮಿಥ್ಯಾಪವಾದವನ್ನು ಹೊರಿಸುತ್ತಾ, ಅವನ ವಿರುದ್ಧ ಒಳಸಂಚು ನಡೆಸುತ್ತಾ ಇದ್ದರು. “ಈ ಗುರಿಯನ್ನು ಸಾಧಿಸುವ ಉದ್ದೇಶದಿಂದ, ಸಾಧ್ಯವಿರುವ ಪ್ರತಿಯೊಂದು ವಿಧಾನವನ್ನು ಜೆಸ್ಯುಯಿಟ್ಟರು ಉಪಯೋಗಿಸಿದರು; ದ್ರೋಹ, ಅಪನಿಂದೆ, ಮಿಥ್ಯಾಪ್ರಶಂಸೆ, ಮತ್ತು ಎಲ್ಲದಕ್ಕಿಂತಲೂ ಹೆಚ್ಚಾಗಿ [ಆಟೊಮನ್] ರಾಜ್ಯನೀತಿಜ್ಞರ ಮೆಚ್ಚುಗೆಯನ್ನು ಗಳಿಸಲಿಕ್ಕಾಗಿ ಅತ್ಯಂತ ಪರಿಣಾಮಕರ ಸಾಧನವಾಗಿದ್ದ ಲಂಚಗಾರಿಕೆಯನ್ನು ಬಳಸಿದರು” ಎಂದು ಕ್ಯಿರೀಲಾಸ್ ಲೂಕಾರೀಸ್ ಎಂಬ ಪುಸ್ತಕವು ತಿಳಿಸುತ್ತದೆ. ಇದರ ಫಲಿತಾಂಶವಾಗಿ, 1622ರಲ್ಲಿ ಲೂಕಾರಸ್ನನ್ನು ರೋಡ್ಸ್ ದ್ವೀಪಕ್ಕೆ ಗಡೀಪಾರುಮಾಡಲಾಯಿತು ಮತ್ತು ಆಮಾಸ್ಯಾದ ಗ್ರೆಗರಿಯು 20,000 ಬೆಳ್ಳಿ ನಾಣ್ಯಗಳಿಗೆ ಲೂಕಾರಸ್ನ ಸ್ಥಾನವನ್ನು ಖರೀದಿಸಿದನು. ಆದರೂ, ಮಾತುಕೊಟ್ಟಿದ್ದಷ್ಟು ಹಣವನ್ನು ಒಟ್ಟುಗೂಡಿಸಲು ಗ್ರೆಗರಿಗೆ ಸಾಧ್ಯವಾಗಲಿಲ್ಲ. ಆದುದರಿಂದ, ಆ್ಯಡ್ರಿಯಾನೊಪಲ್ನ ಆ್ಯಂಥಮಸ್ ಈ ಸ್ಥಾನವನ್ನು ಖರೀದಿಸಿದನಾದರೂ, ಸ್ವಲ್ಪ ಸಮಯಾನಂತರ ರಾಜೀನಾಮೆ ಕೊಟ್ಟುಬಿಟ್ಟನು. ಆಶ್ಚರ್ಯಕರವಾಗಿಯೇ, ಲೂಕಾರಸ್ ಪುನಃ ಒಮ್ಮೆ ಚರ್ಚ್ ಮುಖ್ಯಸ್ಥನ ಸ್ಥಾನಕ್ಕೆ ನೇಮಿಸಲ್ಪಟ್ಟನು.
ಬೈಬಲಿನ ಹಾಗೂ ದೇವತಾಶಾಸ್ತ್ರಕ್ಕೆ ಸಂಬಂಧಿಸಿದ ಕಿರುಹೊತ್ತಿಗೆಗಳ ಒಂದು ಭಾಷಾಂತರವನ್ನು ಪ್ರಕಾಶಿಸುವ ಮೂಲಕ, ಆರ್ತೊಡಾಕ್ಸ್ ಪಾದ್ರಿಗಳಿಗೆ ಮತ್ತು ಜನಸಾಮಾನ್ಯರಿಗೆ ಶಿಕ್ಷಣ ಕೊಡಲಿಕ್ಕಾಗಿ ತನಗೆ ಸಿಕ್ಕಿದ ಈ ಹೊಸ ಅವಕಾಶವನ್ನು ಉಪಯೋಗಿಸಲು ಲೂಕಾರಸ್ ನಿರ್ಧರಿಸಿದನು. ಈ ಕೆಲಸವನ್ನು ಪೂರೈಸುವುದಕ್ಕಾಗಿ, ಇಂಗ್ಲಿಷ್ ರಾಯಭಾರಿಯ ರಕ್ಷಣೆಯ ಕೆಳಗೆ ಒಂದು ಪ್ರಿಂಟಿಂಗ್ ಪ್ರೆಸ್ಸನ್ನು ಕಾನ್ಸ್ಟಾಂಟಿನೋಪಲ್ಗೆ ತರಲಿಕ್ಕಾಗಿ ಅವನು ಏರ್ಪಾಡನ್ನು ಮಾಡಿದನು. ಆದರೂ, 1627ರ ಜೂನ್ ತಿಂಗಳಿನಲ್ಲಿ ಪ್ರೆಸ್ ಬಂದಾಗ, ಲೂಕಾರಸ್ ಇದನ್ನು ರಾಜಕೀಯ ಉದ್ದೇಶಗಳಿಗಾಗಿ ಉಪಯೋಗಿಸುತ್ತಿದ್ದಾನೆಂದು ಅವನ ವೈರಿಗಳು ಅವನ ಮೇಲೆ ಅಪವಾದವನ್ನು ಹೊರಿಸಿದರು ಮತ್ತು ಕಾಲಕ್ರಮೇಣ ಅದನ್ನು ಹಾಳುಮಾಡಿಬಿಟ್ಟರು. ಈಗ ಲೂಕಾರಸ್ ಜಿನಿವಾದಲ್ಲಿದ್ದ ಪ್ರಿಂಟಿಂಗ್ ಪ್ರೆಸ್ಸನ್ನು ಉಪಯೋಗಿಸಬೇಕಾಗಿತ್ತು.
ಕ್ರೈಸ್ತ ಶಾಸ್ತ್ರಗಳ ಭಾಷಾಂತರ
ಬೈಬಲಿನ ಬಗ್ಗೆ ಹಾಗೂ ಜನರನ್ನು ಶಿಕ್ಷಿತರನ್ನಾಗಿ ಮಾಡಲು ಅದಕ್ಕಿರುವ ಶಕ್ತಿಯ ಬಗ್ಗೆ ಲೂಕಾರಸ್ನಿಗಿದ್ದ ಅತ್ಯಧಿಕ ಗೌರವವು, ಇದರ ಮಾತುಗಳು ಜನಸಾಮಾನ್ಯರಿಗೂ ಹೆಚ್ಚು ಸುಲಭವಾಗಿ ತಲಪಸಾಧ್ಯವಾಗುವಂತೆ ಮಾಡುವ ಅವನ ಬಯಕೆಯನ್ನು ಕೆರಳಿಸಿತು. ದೇವಪ್ರೇರಿತ ಗ್ರೀಕ್ ಬೈಬಲಿನ ಮೂಲ ಹಸ್ತಪ್ರತಿಗಳಲ್ಲಿ ಉಪಯೋಗಿಸಲ್ಪಟ್ಟಿದ್ದ ಭಾಷೆಯು ಜನಸಾಮಾನ್ಯರಿಗೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ತುಂಬ ಕಷ್ಟವಾಗಿದೆ ಎಂಬುದನ್ನು ಅವನು ಅರಿತನು. ಆದುದರಿಂದ, ಲೂಕಾರಸ್ನು ನಿಯೋಜಿಸಿದ ಪ್ರಥಮ ಪುಸ್ತಕವು, ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳನ್ನು ತನ್ನ ದಿನಗಳಲ್ಲಿನ ಗ್ರೀಕ್ ಭಾಷೆಗೆ ಭಾಷಾಂತರಿಸುವುದಾಗಿತ್ತು. ಗ್ರೀಕ್ ಚರ್ಚಿನ ದೊಡ್ಡ ಮಠದ ಸುಶಿಕ್ಷಿತ ಮುಖ್ಯಾಧಿಕಾರಿಯಾಗಿದ್ದ ಮಾಕ್ಸಮಸ್ ಕಾಲೀಪೋಲೀಟೀಸ್, 1629ರ ಮಾರ್ಚ್ ತಿಂಗಳಿನಲ್ಲಿ ಈ ಕೆಲಸವನ್ನು ಆರಂಭಿಸಿದನು. ಶಾಸ್ತ್ರವಚನಗಳ ಮೂಲಪಾಠವು ಓದುಗರಿಗೆ ಎಷ್ಟೇ ಅಸ್ಪಷ್ಟವಾಗಿ ಕಂಡುಬಂದರೂ, ಶಾಸ್ತ್ರವಚನಗಳನ್ನು ಭಾಷಾಂತರಿಸುವುದು ಅಧಾರ್ಮಿಕವಾದದ್ದು ಎಂದು ಆರ್ತೊಡಾಕ್ಸರಲ್ಲಿ ಅನೇಕರು ಪರಿಗಣಿಸಿದ್ದರು. ಅವರನ್ನು ತೃಪ್ತಿಪಡಿಸಲಿಕ್ಕಾಗಿ, ಮೂಲಪಾಠವನ್ನು ಹಾಗೂ ಆಧುನಿಕ ಭಾಷಾಂತರವನ್ನು ಸಮಾಂತರವಾದ ಅಂಕಣಗಳಲ್ಲಿ ನಮೂದಿಸುವಂತೆ ಲೂಕಾರಸ್ ಏರ್ಪಡಿಸಿದನು ಮತ್ತು ಇದಕ್ಕೆ ಕೆಲವೇ ಟಿಪ್ಪಣಿಗಳನ್ನು ಕೂಡಿಸಲಾಯಿತು. ತನ್ನ ಹಸ್ತಪ್ರತಿಯನ್ನು ಲೂಕಾರಸ್ನಿಗೆ ಒಪ್ಪಿಸಿದ ಕೂಡಲೆ ಕಾಲೀಪೋಲೀಟೀಸ್ ಮರಣಹೊಂದಿದ್ದರಿಂದ, ಲೂಕಾರಸ್ನೇ ಅದರ ಕರಡು ಪ್ರತಿಗಳನ್ನು ಓದಿದನು. 1638ರಲ್ಲಿ ಲೂಕಾರಸ್ ಮರಣಹೊಂದಿದ ಸ್ವಲ್ಪ ಸಮಯಾನಂತರ ಈ ಭಾಷಾಂತರವು ಮುದ್ರಿಸಲ್ಪಟ್ಟಿತು.
ಲೂಕಾರಸ್ನು ಎಷ್ಟೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೂ, ಆ ಭಾಷಾಂತರವು ಅನೇಕ ಬಿಷಪರಿಂದ ಅಸಮ್ಮತಿಯ ಬಿರುಗಾಳಿಯನ್ನು ಎದುರಿಸಿತು. ದೇವರ ವಾಕ್ಯದ ಕುರಿತು ಲೂಕಾರಸ್ನಿಗಿದ್ದ ಪ್ರೀತಿಯು, ಬೈಬಲ್ ಭಾಷಾಂತರದ ಮುನ್ನುಡಿಯಲ್ಲಿ ತೀರ ಸ್ಪಷ್ಟವಾಗುತ್ತದೆ. ಜನರು ಮಾತಾಡುವಂತಹ ಭಾಷೆಯಲ್ಲಿ ಭಾಷಾಂತರಿಸಲ್ಪಟ್ಟ ಶಾಸ್ತ್ರವಚನಗಳು, “ನಮಗೆ ಸ್ವರ್ಗದಿಂದ ಕೊಡಲ್ಪಟ್ಟಿರುವ ಸುಮಧುರ ಸಂದೇಶವಾಗಿವೆ” ಎಂದು ಅವನು ಬರೆದನು. “[ಬೈಬಲಿನಲ್ಲಿರುವ] ಎಲ್ಲ ವಿಷಯಗಳನ್ನು ತಿಳಿದುಕೊಂಡು ಅದರ ಬಗ್ಗೆ ಚಿರಪರಿಚಿತರಾಗಿರಿ” ಎಂದು ಅವನು ಜನರಿಗೆ ಬುದ್ಧಿಹೇಳಿದನು. ಅಷ್ಟುಮಾತ್ರವಲ್ಲ, “ನಂಬಿಕೆಗೆ ಸಂಬಂಧಿಸಿದ ವಿಷಯಗಳನ್ನು ಸರಿಯಾಗಿ” ತಿಳಿದುಕೊಳ್ಳಲು, “ದೈವಿಕ ಹಾಗೂ ಪವಿತ್ರ ಸುವಾರ್ತೆಗಳ ಅಭ್ಯಾಸವನ್ನು ಬಿಟ್ಟು” ಬೇರೆ ಯಾವುದೇ ಮಾರ್ಗವಿಲ್ಲ ಎಂದು ಸಹ ಹೇಳಿದನು.—ಫಿಲಿಪ್ಪಿ 1:9, 10.
ಯಾರು ಬೈಬಲಿನ ಅಭ್ಯಾಸವನ್ನು ನಿಷೇಧಿಸಿ, ಮೂಲಪಾಠದ ಭಾಷಾಂತರವನ್ನು ತಿರಸ್ಕರಿಸಿದರೋ ಅಂತಹವರನ್ನು ಲೂಕಾರಸ್ ಕಟ್ಟುನಿಟ್ಟಾಗಿ ಖಂಡಿಸಿದನು: “ನಾವು ಒಂದು ವಿಷಯವನ್ನು ಅರ್ಥಮಾಡಿಕೊಳ್ಳದೆ ಅದರ ಬಗ್ಗೆ ಮಾತಾಡುವಲ್ಲಿ ಅಥವಾ ಅದನ್ನು ಓದುವಲ್ಲಿ, ಅದು ಗಾಳಿಯ ಸಂಗಡ ಮಾತಾಡಿದಂತಿರುವುದು.” (ಹೋಲಿಸಿರಿ 1 ಕೊರಿಂಥ 14:7-9.) ಮುನ್ನುಡಿಯನ್ನು ಮುಕ್ತಾಯಗೊಳಿಸುತ್ತಾ ಅವನು ಬರೆದುದು: “ನೀವೆಲ್ಲರೂ ಈ ದೈವಿಕವಾದ ಹಾಗೂ ಪವಿತ್ರವಾಗಿರುವ ಸುವಾರ್ತೆಯನ್ನು ನಿಮ್ಮ ಭಾಷೆಯಲ್ಲಿ ಓದುವಾಗ, ಅದರ ವಾಚನದಿಂದ ದೊರಕುವ ಪ್ರಯೋಜನಗಳನ್ನು ಗ್ರಹಿಸಿರಿ, . . . ಮತ್ತು ಯಾವುದು ಒಳ್ಳೇದಾಗಿದೆಯೋ ಆ ಮಾರ್ಗದಲ್ಲಿ ನಡೆಯುವಾಗ ಯಾವಾಗಲೂ ದೇವರು ನಿಮ್ಮ ದಾರಿಗೆ ಬೆಳಕು ಬೀರಲಿ.”—ಜ್ಞಾನೋಕ್ತಿ 4:18.
ಕನ್ಫೆಷನ್ ಆಫ್ ಫೇತ್
ಆ ಬೈಬಲ್ ಭಾಷಾಂತರವನ್ನು ಆರಂಭಿಸಿದ ಬಳಿಕ, ಲೂಕಾರಸ್ ಇನ್ನೊಂದು ದಿಟ್ಟ ಕೆಲಸವನ್ನು ಕೈಗೊಂಡನು. 1629ರಲ್ಲಿ, ಜಿನಿವಾದಲ್ಲಿ ಅವನು ಕನ್ಫೆಷನ್ ಆಫ್ ಫೇತ್ (ನಂಬಿಕೆಯ ಪ್ರಕಟನೆ) ಎಂಬ ಪುಸ್ತಕವನ್ನು ಪ್ರಕಾಶಿಸಿದನು. ಅದು, ಆರ್ತೊಡಾಕ್ಸ್ ಚರ್ಚು ಅನುಸರಿಸಬಹುದೆಂದು ಅವನು ನಿರೀಕ್ಷಿಸಿದ್ದ ನಂಬಿಕೆಗಳ ಒಂದು ವೈಯಕ್ತಿಕ ಹೇಳಿಕೆಯಾಗಿತ್ತು. ದಿ ಆರ್ತೊಡಾಕ್ಸ್ ಚರ್ಚ್ ಎಂಬ ಪುಸ್ತಕಕ್ಕನುಸಾರ, ಆ ಕನ್ಫೆಷನ್ ಪುಸ್ತಕವು, “ಎಲ್ಲ ರೀತಿಯ ಯಾಜಕತ್ವ ಮತ್ತು ಉನ್ನತಾಧಿಕಾರಿ ವರ್ಗದ ಕುರಿತಾದ ಆರ್ತೊಡಾಕ್ಸ್ ಸಿದ್ಧಾಂತವನ್ನು ತೊಡೆದುಹಾಕುತ್ತದೆ ಮತ್ತು ಮೂರ್ತಿಪೂಜೆ ಹಾಗೂ ಸಂತರಿಗೆ ಮಾಡಲ್ಪಡುವ ಪ್ರಾರ್ಥನೆಯನ್ನು ವಿಗ್ರಹಾರಾಧನೆಯ ಒಂದು ಭಾಗವಾಗಿ ಪರಿಗಣಿಸುತ್ತದೆ.”
ಕನ್ಫೆಷನ್ನಲ್ಲಿ 18 ಲೇಖನಗಳಿವೆ. ಶಾಸ್ತ್ರವಚನಗಳು ದೇವರಿಂದ ಪ್ರೇರಿತವಾಗಿವೆ ಮತ್ತು ಚರ್ಚಿಗಿಂತಲೂ ಅವುಗಳಿಗೆ ಹೆಚ್ಚಿನ ಅಧಿಕಾರವಿದೆ ಎಂದು ಅದರ ಎರಡನೆಯ ಲೇಖನವು ಪ್ರಸ್ತುತಪಡಿಸುತ್ತದೆ. ಅದು ಹೀಗೆ ಹೇಳುತ್ತದೆ: “ಪವಿತ್ರ ಶಾಸ್ತ್ರವು ದೇವರಿಂದ ಕೊಡಲ್ಪಟ್ಟಿದೆ ಎಂದು ನಾವು ನಂಬುತ್ತೇವೆ . . . ಚರ್ಚಿನ ಅಧಿಕಾರಕ್ಕಿಂತಲೂ ಪವಿತ್ರ ಶಾಸ್ತ್ರದ ಅಧಿಕಾರವು ಹೆಚ್ಚು ಶ್ರೇಷ್ಟವಾದದ್ದು ಎಂಬುದನ್ನು ನಾವು ನಂಬುತ್ತೇವೆ. ಒಬ್ಬ ವ್ಯಕ್ತಿಯಿಂದ ಕಲಿಸಲ್ಪಡುವುದಕ್ಕಿಂತಲೂ ಪವಿತ್ರಾತ್ಮದಿಂದ ಕಲಿಸಲ್ಪಡುವುದು ತೀರ ಭಿನ್ನ ಸಂಗತಿಯಾಗಿದೆ.”—2 ತಿಮೊಥೆಯ 3:16.
ಯೇಸು ಕ್ರಿಸ್ತನೇ ಮಧ್ಯಸ್ಥಗಾರನು, ಮಹಾ ಯಾಜಕನು, ಮತ್ತು ಸಭೆಯ ಹಿರಿಯನಾಗಿದ್ದಾನೆ ಎಂದು ಎಂಟನೆಯ ಹಾಗೂ ಹತ್ತನೆಯ ಲೇಖನಗಳು ತಿಳಿಸುತ್ತವೆ. ಲೂಕಾರಸನು ಬರೆದುದು: “ನಮ್ಮ ಕರ್ತನಾದ ಯೇಸು ಕ್ರಿಸ್ತನು ತನ್ನ ತಂದೆಯ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ ಮತ್ತು ಅಲ್ಲಿ ಅವನು ನಮ್ಮ ಪರವಾಗಿ ಪ್ರಾರ್ಥಿಸುತ್ತಿದ್ದಾನೆ, ಅವನೊಬ್ಬನೇ ಸತ್ಯವಂತನೂ ನಿಯಮಪಾಲಕನೂ ಆಗಿರುವ ಮಹಾ ಯಾಜಕನು ಮತ್ತು ಮಧ್ಯಸ್ಥಗಾರನೆಂದು ನಾವು ನಂಬುತ್ತೇವೆ.”—ಮತ್ತಾಯ 23:10.
ಸುಳ್ಳನ್ನು ಸತ್ಯವೆಂದು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾ ಕೆಲವೊಮ್ಮೆ ಚರ್ಚು ದಾರಿತಪ್ಪಿಹೋಗಬಹುದು, ಆದರೆ ಪವಿತ್ರಾತ್ಮದ ಬೆಳಕು ಅದನ್ನು ನಂಬಿಗಸ್ತ ಶುಶ್ರೂಷಕರ ಕೆಲಸಗಳ ಮೂಲಕ ಕಾಪಾಡಬಹುದು ಎಂದು 12ನೆಯ ಲೇಖನವು ತಿಳಿಸುತ್ತದೆ. 18ನೆಯ ಲೇಖನದಲ್ಲಿ, ಪರ್ಗೆಟರಿ ಎಂಬುದು ಕೇವಲ ಒಂದು ಕಲ್ಪನೆಯಾಗಿದೆ ಎಂದು ಲೂಕಾರಸ್ ಸಮರ್ಥಿಸುತ್ತಾನೆ: “ಪರ್ಗೆಟರಿಯ ಕಲ್ಪನೆಯನ್ನು ಅಂಗೀಕರಿಸಬಾರದು ಎಂಬುದು ಸುವ್ಯಕ್ತ.”
ಕನ್ಫೆಷನ್ನ ಪರಿಶಿಷ್ಟದಲ್ಲಿ ಅನೇಕ ಪ್ರಶ್ನೆಗಳು ಮತ್ತು ಉತ್ತರಗಳು ಇವೆ. ಪ್ರತಿಯೊಬ್ಬ ನಂಬಿಗಸ್ತ ವ್ಯಕ್ತಿಯು ಶಾಸ್ತ್ರವಚನಗಳನ್ನು ಓದಬೇಕು ಮತ್ತು ಒಬ್ಬ ಕ್ರೈಸ್ತನು ದೇವರ ವಾಕ್ಯವನ್ನು ಓದಲು ತಪ್ಪಿಹೋಗುವುದು ಅವನಿಗೆ ತುಂಬ ಹಾನಿಕರವಾದದ್ದಾಗಿದೆ ಎಂದು ಅಲ್ಲಿ ಲೂಕಾರಸ್ ಒತ್ತಿಹೇಳುತ್ತಾನೆ. ಅಪಾಕ್ರಿಫಲ್ ಪುಸ್ತಕಗಳ ಗೊಡವೆಗೆ ಹೋಗಬಾರದು ಎಂದು ಸಹ ಅವನು ಕೂಡಿಸುತ್ತಾನೆ.—ಪ್ರಕಟನೆ 22:18, 19.
ನಾಲ್ಕನೆಯ ಪ್ರಶ್ನೆಯು ಹೀಗಿದೆ: “ವಿಗ್ರಹಗಳ ವಿಷಯದಲ್ಲಿ ನಮ್ಮ ಆಲೋಚನೆ ಏನಾಗಿರಬೇಕು?” ಲೂಕಾರಸ್ ಉತ್ತರಿಸುವುದು: “ದೈವಿಕ ಹಾಗೂ ಪವಿತ್ರ ಶಾಸ್ತ್ರವಚನಗಳಿಂದ ನಮಗೆ ಶಿಕ್ಷಣ ದೊರಕುತ್ತಿದೆ, ಅದು ಸ್ಪಷ್ಟವಾಗಿ ಹೀಗೆ ಹೇಳುತ್ತದೆ, ‘ನೀವು ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು, ಅಥವಾ ಮೇಲೆ ಆಕಾಶದಲ್ಲಾಗಲಿ ಇಲ್ಲವೆ ಕೆಳಗೆ ಭೂಮಿಯಲ್ಲಾಗಲಿ ಇರುವ ಯಾವುದರ ರೂಪವನ್ನೂ ನೀವು ಮಾಡಿಕೊಳ್ಳಬಾರದು; ಅವುಗಳಿಗೆ ಅಡ್ಡಬೀಳಲೂ ಬಾರದು, ಮತ್ತು ಪೂಜೆಮಾಡಲೂ ಬಾರದು; [ವಿಮೋಚನಕಾಂಡ 20:4, 5]’ ನಾವು ಯಾವುದೇ ಸೃಷ್ಟಿಜೀವಿಯನ್ನಲ್ಲ, ಬದಲಾಗಿ ಪರಲೋಕ ಮತ್ತು ಭೂಲೋಕದ ಸೃಷ್ಟಿಕರ್ತನೂ ನಿರ್ಮಾಣಿಕನೂ ಆಗಿರುವಾತನನ್ನು ಮಾತ್ರ ಆರಾಧಿಸಬೇಕಾಗಿದೆ ಮತ್ತು ಆತನನ್ನು ಮಾತ್ರ ಪೂಜಿಸಬೇಕಾಗಿದೆ. . . . [ವಿಗ್ರಹಗಳ] ಆರಾಧನೆ ಮತ್ತು ಪೂಜೆಯು ಪವಿತ್ರ ಶಾಸ್ತ್ರದಲ್ಲಿ . . . ನಿಷೇಧಿಸಲ್ಪಟ್ಟಿದೆ, ಆದುದರಿಂದ ನಾವು ಸಹ ಅದನ್ನು ತಿರಸ್ಕರಿಸಬೇಕು, ಇಲ್ಲದಿದ್ದರೆ ನಾವು ಸೃಷ್ಟಿಕರ್ತನನ್ನು ಮತ್ತು ನಿರ್ಮಾಣಿಕನನ್ನು ಆರಾಧಿಸುವುದಕ್ಕೆ ಬದಲಾಗಿ ಬಣ್ಣಗಳನ್ನು, ಕಲೆಯನ್ನು ಮತ್ತು ಸೃಷ್ಟಿಜೀವಿಗಳನ್ನು ಆರಾಧಿಸುತ್ತಿರಬಹುದು.”—ಅ. ಕೃತ್ಯಗಳು 17:29.
ಲೂಕಾರಸ್ ತಾನು ಜೀವಿಸುತ್ತಿದ್ದa ಆತ್ಮಿಕ ಅಂಧಕಾರದ ಯುಗದಲ್ಲಿ ದೋಷಭರಿತವಾಗಿದ್ದ ಎಲ್ಲ ವಿಷಯಗಳನ್ನು ಸಂಪೂರ್ಣವಾಗಿ ವಿವೇಚಿಸಿ ತಿಳಿದುಕೊಳ್ಳಲು ಅಶಕ್ತನಾಗಿದ್ದರೂ, ಚರ್ಚಿನ ಸಿದ್ಧಾಂತದ ಮೇಲೆ ಬೈಬಲಿಗೆ ಸಂಪೂರ್ಣ ಅಧಿಕಾರವಿರುವಂತೆ ಮಾಡಲಿಕ್ಕಾಗಿ ಮತ್ತು ಬೈಬಲಿನ ಬೋಧನೆಗಳ ಕುರಿತು ಜನರಿಗೆ ಶಿಕ್ಷಣ ನೀಡಲಿಕ್ಕಾಗಿ ಅವನು ಪ್ರಶಂಸನೀಯ ಪ್ರಯತ್ನಗಳನ್ನು ಮಾಡಿದನು.
ಕನ್ಫೆಷನ್ ಪುಸ್ತಕವನ್ನು ಬಿಡುಗಡೆಗೊಳಿಸಿದ ಕೂಡಲೆ, ವಿರೋಧದ ಹೊಸ ಅಲೆಯನ್ನು ಲೂಕಾರಸ್ನು ಎದುರಿಸಬೇಕಾಯಿತು. 1633ರಲ್ಲಿ, ಬೆರೋಯ (ಈಗ ಆ್ಯಲೆಪೊ)ದ ಪ್ರಧಾನ ಬಿಷಪನೂ, ಲೂಕಾರಸ್ನ ವೈಯಕ್ತಿಕ ವೈರಿಯೂ, ಜೆಸ್ಯುಯಿಟ್ಟರಿಂದ ಬೆಂಬಲವನ್ನು ಪಡೆದಿದ್ದವನೂ ಆಗಿದ್ದ ಸಿರಿಲ್ ಕೊಂಟಾರೀ, ಚರ್ಚ್ ಮುಖ್ಯಸ್ಥನ ಸ್ಥಾನವನ್ನು ತನ್ನದಾಗಿಸಿಕೊಳ್ಳಲಿಕ್ಕಾಗಿ ಆಟೊಮನ್ರೊಡನೆ ವ್ಯಾಪಾರ ಕುದುರಿಸಲು ಪ್ರಯತ್ನಿಸಿದನು. ಆದರೂ, ಕೊಂಟಾರೀ ಹಣಸಂದಾಯ ಮಾಡಲು ಅಶಕ್ತನಾದಾಗ ಅವನ ಒಳಸಂಚು ವಿಫಲವಾಯಿತು. ಆದುದರಿಂದ ಲೂಕಾರಸನೇ ಆ ಸ್ಥಾನದಲ್ಲಿ ಉಳಿಯಬೇಕಾಯಿತು. ಮರುವರ್ಷ ಆ ಸ್ಥಾನಕ್ಕಾಗಿ ಥೆಸಲೊನೀಕದ ಆ್ಯಥನೇಸಿಯಸನು ಸುಮಾರು 60,000 ಬೆಳ್ಳಿ ನಾಣ್ಯಗಳನ್ನು ಕೊಟ್ಟನು. ಪುನಃ ಲೂಕಾರಸ್ನನ್ನು ಅಧಿಕಾರದಿಂದ ತಳ್ಳಲಾಯಿತು. ಆದರೆ, ಒಂದೇ ತಿಂಗಳಿನೊಳಗೆ ಅವನನ್ನು ಹಿಂದೆ ಕರೆಸಿ, ಪುನಃ ಚರ್ಚ್ ಮುಖ್ಯಸ್ಥನನ್ನಾಗಿ ನೇಮಿಸಲಾಯಿತು. ಅಷ್ಟರೊಳಗೆ ಸಿರಿಲ್ ಕೊಂಟಾರೀ 50,000 ಬೆಳ್ಳಿ ನಾಣ್ಯಗಳನ್ನು ಒಟ್ಟುಗೂಡಿಸಿಕೊಂಡಿದ್ದನು. ಈ ಬಾರಿ ಲೂಕಾರಸ್ನನ್ನು ರೋಡ್ಸ್ ದ್ವೀಪಕ್ಕೆ ಗಡೀಪಾರುಮಾಡಲಾಯಿತು. ಆರು ತಿಂಗಳುಗಳ ಬಳಿಕ ಅವನ ಸ್ನೇಹಿತರು ಅವನನ್ನು ಪುನಃ ಅದೇ ಸ್ಥಾನಕ್ಕೆ ಏರಿಸಿದರು.
ಆದರೂ, 1638ರಲ್ಲಿ ಜೆಸ್ಯುಯಿಟ್ಟರು ಮತ್ತು ಅವರ ಆರ್ತೊಡಾಕ್ಸ್ ಸಹೋದ್ಯಮಿಗಳು, ಆಟೊಮನ್ ಸಾಮ್ರಾಜ್ಯದ ವಿರುದ್ಧ ಲೂಕಾರಸ್ನು ದೊಡ್ಡ ರಾಜದ್ರೋಹಮಾಡಿದ್ದಾನೆ ಎಂಬ ಅಪವಾದವನ್ನು ಹೊರಿಸಿದರು. ಈ ಬಾರಿ ಸುಲ್ತಾನನು ಅವನನ್ನು ಕೊಲ್ಲುವಂತೆ ಆಜ್ಞೆಯನ್ನಿತ್ತನು. ಲೂಕಾರಸ್ನನ್ನು ಸೆರೆಹಿಡಿಯಲಾಯಿತು ಮತ್ತು 1638ರ ಜುಲೈ 27ರಂದು ಅವನನ್ನು ಗಡೀಪಾರುಮಾಡಲಿಕ್ಕಾಗಿಯೋ ಎಂಬಂತೆ ಒಂದು ಚಿಕ್ಕ ಹಡಗಿನಲ್ಲಿ ಕರೆದೊಯ್ಯಲಾಯಿತು. ಆ ಹಡಗು ಸಮುದ್ರವನ್ನು ತಲಪಿದ ಕೂಡಲೆ ಅವನನ್ನು ಕತ್ತು ಹಿಸುಕಿ ಕೊಲ್ಲಲಾಯಿತು. ಅವನ ದೇಹವನ್ನು ದಡದ ಸಮೀಪದಲ್ಲಿ ಹೂಳಲಾಯಿತು ಮತ್ತು ನಂತರ ಹೆಣವನ್ನು ಅಗೆದು ಸಮುದ್ರಕ್ಕೆ ಎಸೆಯಲಾಯಿತು. ಆ ಹೆಣವು ಮೀನುಗಾರರಿಗೆ ಸಿಕ್ಕಿತು ಮತ್ತು ಲೂಕಾರಸ್ನ ಸ್ನೇಹಿತರು ಅದನ್ನು ಪುನಃ ಸಮಾಧಿಮಾಡಿದರು.
ನಮಗೋಸ್ಕರ ಪಾಠಗಳು
“[ಲೂಕಾರಸ್ನ] ಮೂಲಭೂತ ಗುರಿಗಳಲ್ಲಿ ಒಂದು, ಹದಿನಾರನೆಯ ಮತ್ತು ಹದಿನೇಳನೆಯ ಶತಮಾನದ ಆರಂಭದಲ್ಲಿ ತೀರ ದುಃಸ್ಥಿತಿಯಲ್ಲಿದ್ದ ತನ್ನ ಪಾದ್ರಿಗಳು ಹಾಗೂ ಮಂದೆಗೆ ತಿಳುವಳಿಕೆ ನೀಡಿ, ಅವರ ಶೈಕ್ಷಣಿಕ ಮಟ್ಟವನ್ನು ಉತ್ತಮಗೊಳಿಸುವುದೇ ಆಗಿತ್ತು ಎಂಬುದನ್ನು ಅಲಕ್ಷಿಸಬಾರದು. ಲೂಕಾರಸನು ತನ್ನ ಗುರಿಯನ್ನು ಸಾಧಿಸದಂತೆ ಅನೇಕ ವಿಘ್ನಗಳು ಅಡ್ಡಬಂದವು. ಅವನು ಚರ್ಚ್ ಮುಖ್ಯಸ್ಥನ ಸ್ಥಾನದಿಂದ ಐದು ಬಾರಿ ಕೆಳಗಿಳಿಸಲ್ಪಟ್ಟನು. ಅವನು ಸಾವನ್ನಪ್ಪಿ ಮೂವತ್ತನಾಲ್ಕು ವರ್ಷಗಳು ಕಳೆದ ಬಳಿಕ, ಯೆರೂಸಲೇಮಿನಲ್ಲಿದ್ದ ಒಂದು ಕ್ರೈಸ್ತ ಮಂಡಲಿಯು ಅವನ ನಂಬಿಕೆಗಳನ್ನು ಪಾಷಂಡವಾದವೆಂದು ತಿರಸ್ಕರಿಸಿಬಿಟ್ಟಿತು. ಶಾಸ್ತ್ರವಚನಗಳನ್ನು “ಇಷ್ಟಬಂದವರೆಲ್ಲ ಓದಸಾಧ್ಯವಿಲ್ಲ, ಬದಲಾಗಿ ಸೂಕ್ತವಾದ ಸಂಶೋಧನೆಯನ್ನು ನಡೆಸಿದ ಬಳಿಕ ಆತ್ಮದ ವಿಚಾರಗಳನ್ನು ಆಳವಾಗಿ ಪರಿಶೋಧಿಸಿ ನೋಡುವವರು ಮಾತ್ರ ಅದನ್ನು ಓದಸಾಧ್ಯವಿದೆ,” ಅಂದರೆ ಸುಶಿಕ್ಷಿತರೆಂದು ಪರಿಗಣಿಸಲ್ಪಟ್ಟ ಪಾದ್ರಿಗಳು ಮಾತ್ರ ಅದನ್ನು ಓದಸಾಧ್ಯವಿದೆ ಎಂದು ಅವರು ಪ್ರಕಟಿಸಿದರು.
ತಮ್ಮ ಮಂದೆಗೆ ದೇವರ ವಾಕ್ಯವನ್ನು ಲಭ್ಯಗೊಳಿಸಲಿಕ್ಕಾಗಿ ಮಾಡಲ್ಪಟ್ಟ ಪ್ರಯತ್ನಗಳು ಅಧಿಕಾರದಲ್ಲಿದ್ದ ಕ್ರೈಸ್ತ ಮಠದ ಪಾದ್ರಿಗಳಿಂದ ಪುನಃ ನಿಗ್ರಹಿಸಲ್ಪಟ್ಟವು. ಅವರ ಬೈಬಲೇತರ ನಂಬಿಕೆಗಳಲ್ಲಿದ್ದ ಕೆಲವೊಂದು ಲೋಪದೋಷಗಳನ್ನು ಅವರ ಗಮನಕ್ಕೆ ತಂದಾಗ, ಹಿಂಸಾತ್ಮಕ ರೀತಿಯಲ್ಲಿ ಅವರು ಇತರರ ಸದ್ದಡಗಿಸಿದರು. ಧಾರ್ಮಿಕ ಸ್ವಾತಂತ್ರ್ಯ ಮತ್ತು ಸತ್ಯದ ಅತಿ ದುಷ್ಟ ವೈರಿಗಳಲ್ಲಿ ಇವರೂ ಪಾಲುಗಾರರಾಗಿ ಕಂಡುಬಂದರು. ದುಃಖಕರವಾಗಿಯೇ, ನಮ್ಮ ದಿನದಲ್ಲಿಯೂ ಇದೇ ಮನೋಭಾವವು ಬೇರೆ ಬೇರೆ ವಿಧಗಳಲ್ಲಿ ಕಂಡುಬರುತ್ತದೆ. ಪಾದ್ರಿಗಳಿಂದ ಯೋಜಿಸಲ್ಪಡುವ ಒಳಸಂಚುಗಳು, ಯೋಚನಾ ಸ್ವಾತಂತ್ರ್ಯ ಹಾಗೂ ವಾಕ್ ಸ್ವಾತಂತ್ರ್ಯವನ್ನು ವಿರೋಧಿಸುವಾಗ ಏನು ಸಂಭವಿಸುತ್ತದೆ ಎಂಬುದಕ್ಕೆ ಇದು ಒಂದು ಗಂಭೀರ ಜ್ಞಾಪನವಾಗಿದೆ.
[ಪಾದಟಿಪ್ಪಣಿಗಳು]
a ತನ್ನ ಕನ್ಫೆಷನ್ ಪುಸ್ತಕದಲ್ಲಿ ಅವನು ತ್ರಯೈಕ್ಯವನ್ನು ಮತ್ತು ಪೂರ್ವಕಲ್ಪಿತ ವಿಧಿ ಹಾಗೂ ಅಮರ ಆತ್ಮದ ಸಿದ್ಧಾಂತಗಳನ್ನು ಬೆಂಬಲಿಸುತ್ತಾನೆ; ಈ ಸಿದ್ಧಾಂತಗಳು ಬೈಬಲಿನಲ್ಲಿಲ್ಲ.
[ಪುಟ 29ರಲ್ಲಿರುವ ಸಂಕ್ಷಿಪ್ತ ವಿವರಣೆ]
ಚರ್ಚಿನ ಸಿದ್ಧಾಂತದ ಮೇಲೆ ಬೈಬಲಿಗೆ ಸಂಪೂರ್ಣ ಅಧಿಕಾರವಿರುವಂತೆ ಮಾಡಲಿಕ್ಕಾಗಿ ಮತ್ತು ಬೈಬಲಿನ ಬೋಧನೆಗಳ ಕುರಿತು ಜನರಿಗೆ ಶಿಕ್ಷಣ ನೀಡಲಿಕ್ಕಾಗಿ ಲೂಕಾರಸ್ ಪ್ರಶಂಸನೀಯ ಪ್ರಯತ್ನಗಳನ್ನು ಮಾಡಿದನು
[ಪುಟ 28ರಲ್ಲಿರುವ ಚೌಕ/ಚಿತ್ರ]
ಲೂಕಾರಸ್ ಮತ್ತು ಕೋಡೆಕ್ಸ್ ಆ್ಯಲೆಕ್ಸಾಂಡ್ರಿನಸ್
ಬ್ರಿಟಿಷ್ ಗ್ರಂಥಾಲಯದಲ್ಲಿರುವ ಅಮೂಲ್ಯ ವಸ್ತುಗಳಲ್ಲಿ ಒಂದು, ಸಾ.ಶ. ಐದನೆಯ ಶತಮಾನದ ಒಂದು ಬೈಬಲ್ ಹಸ್ತಪ್ರತಿಯಾಗಿರುವ ಕೋಡೆಕ್ಸ್ ಆ್ಯಲೆಕ್ಸಾಂಡ್ರಿನಸ್ ಆಗಿದೆ. ಅದರಲ್ಲಿ ಇದ್ದಿರಬಹುದಾದ 820 ಮೂಲ ಹಾಳೆಗಳಲ್ಲಿ ಸುಮಾರು 773 ಹಾಳೆಗಳು ಜೋಪಾನವಾಗಿಡಲ್ಪಟ್ಟಿವೆ.
ಲೂಕಾರಸನು ಈಜಿಪ್ಟಿನ ಆ್ಯಲೆಕ್ಸಾಂಡ್ರಿಯದ ಚರ್ಚ್ ಮುಖ್ಯಸ್ಥನಾಗಿದ್ದಾಗ, ಅವನ ಬಳಿ ಒಂದು ದೊಡ್ಡ ಪುಸ್ತಕ ಭಂಡಾರವೇ ಇತ್ತು. ಅವನು ಕಾನ್ಸ್ಟಾಂಟಿನೋಪಲ್ನಲ್ಲಿ ಚರ್ಚ್ ಮುಖ್ಯಸ್ಥನಾದಾಗ, ಅವನು ಕೋಡೆಕ್ಸ್ ಆ್ಯಲೆಕ್ಸಾಂಡ್ರಿನಸನ್ನು ತನ್ನೊಂದಿಗೆ ತೆಗೆದುಕೊಂಡುಹೋದನು. ಅವನು 1624ರಲ್ಲಿ ಅದನ್ನು ಟರ್ಕಿಯಲ್ಲಿದ್ದ ಬ್ರಿಟಿಷ್ ರಾಯಭಾರಿಯ ಮೂಲಕ ಇಂಗ್ಲಿಷ್ ಅರಸನಾಗಿದ್ದ Iನೆಯ ಜೇಮ್ಸ್ಗೆ ಕೊಟ್ಟನು. ಮೂರು ವರ್ಷಗಳ ಬಳಿಕ ಅದು ಆ ರಾಜನ ನಂತರ ಉತ್ತರಾಧಿಕಾರಿಯಾದ Iನೆಯ ಚಾರ್ಲ್ಸ್ಗೆ ಕೊಡಲ್ಪಟ್ಟಿತು.
1757ರಲ್ಲಿ ರಾಜಮನೆತನದ ಈ ಗ್ರಂಥಾಲಯವು ಬ್ರಿಟಿಷ್ ಜನಾಂಗಕ್ಕೆ ಕೊಡಲ್ಪಟ್ಟಿತು ಮತ್ತು ಅತ್ಯುತ್ತಮವಾಗಿದ್ದ ಈ ಕೋಡೆಕ್ಸ್ ಇಂದು ಹೊಸ ಬ್ರಿಟಿಷ್ ಗ್ರಂಥಾಲಯದಲ್ಲಿರುವ ಜಾನ್ ರಿಟ್ಬ್ಲ್ಯಾಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲ್ಪಟ್ಟಿದೆ.
[ಕೃಪೆ]
Gewerbehalle, Vol. 10
From The Codex Alexandrinus in Reduced Photographic Facsimile, 1909
[ಪುಟ 26ರಲ್ಲಿರುವ ಚಿತ್ರ ಕೃಪೆ]
Bib. Publ. Univ. de Genève