ಜೀವನ ಕಥೆ
ಯೆಹೋವನನ್ನು ಸೇವಿಸುವುದಕ್ಕಾಗಿ ಜೀವನವನ್ನು ಸರಳವಾಗಿರಿಸುವುದು
ಕ್ಲಾರಾ ಗರ್ಬರ್ ಮೋಯರ್ ಅವರಿಂದ ಹೇಳಲ್ಪಟ್ಟಂತೆ
ನನಗೆ 92 ವರ್ಷ ಪ್ರಾಯ ಮತ್ತು ನನಗೆ ನಡೆಯಲಿಕ್ಕೆ ಆಗುವುದಿಲ್ಲ. ಆದರೆ ಈಗಲೂ ನನಗೆ ಸ್ಪಷ್ಟವಾದ, ನೆನಪಿನ ಸಾಮರ್ಥ್ಯ ಇದೆ. ಯೆಹೋವನನ್ನು ಚಿಕ್ಕಂದಿನಿಂದಲೂ ಸೇವಿಸುವ ಸುಯೋಗವು ನನಗೆ ಸಿಕ್ಕಿದ್ದಕ್ಕೆ ನಾನೆಷ್ಟು ಆಭಾರಿಯಾಗಿದ್ದೇನೆ! ಸರಳವಾದ ಮತ್ತು ಜಟಿಲವಲ್ಲದ ಜೀವಿತವನ್ನು ನಡೆಸುವ ಮೂಲಕ, ನಾನು ಇಂತಹ ಅಪರಿಮಿತವಾದ ಅಮೂಲ್ಯ ನಿಧಿಯನ್ನು ಪಡೆದುಕೊಂಡಿದ್ದೇನೆ.
ನಾನು ಆಗಸ್ಟ್ 18, 1907ರಂದು ಅಮೆರಿಕದ ಆ್ಯಲಿಯನ್ಸ್ ಓಹಾಯೋದಲ್ಲಿ ಜನಿಸಿದೆ. ಕುಟುಂಬದ ಐದು ಮಂದಿ ಮಕ್ಕಳಲ್ಲಿ ನಾನು ಹಿರಿಯಳು. ನಾನು ಎಂಟು ವರ್ಷ ಪ್ರಾಯದವಳಾಗಿದ್ದಾಗ, ಬೈಬಲ್ ವಿದ್ಯಾರ್ಥಿಗಳ—ಯೆಹೋವನ ಸಾಕ್ಷಿಗಳನ್ನು ಆಗ ಈ ಹೆಸರಿನಿಂದ ಕರೆಯಲಾಗುತ್ತಿತ್ತು—ಒಬ್ಬ ಪೂರ್ಣ ಸಮಯದ ಶುಶ್ರೂಷಕನು ನಮ್ಮ ಡೈರಿ ಫಾರ್ಮಿಗೆ ಸೈಕಲಿನಲ್ಲಿ ಬಂದನು. ಅವನು ನನ್ನ ತಾಯಿಯಾದ ಲೋರಾ ಗರ್ಬರ್ರನ್ನು ನಮ್ಮ ಮನೆಯಲ್ಲಿ ಭೇಟಿಯಾದನು ಮತ್ತು ದುಷ್ಟತನವು ಏಕೆ ಅನುಮತಿಸಲ್ಪಟ್ಟಿದೆ ಎಂಬುದು ನಿಮಗೆ ತಿಳಿದಿದೆಯೋ ಎಂದು ಅವರನ್ನು ಕೇಳಿದನು. ತಾಯಿಯು ಯಾವಾಗಲೂ ಅದರ ಕುರಿತು ಯೋಚಿಸುತ್ತಿದ್ದರು.
ಕಣಜದಲ್ಲಿದ್ದ ನನ್ನ ತಂದೆಯೊಂದಿಗೆ ಒಟ್ಟಾಗಿ ಮಾತಾಡಿದ ನಂತರ, ತಾಯಿಯು ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ ಎಂಬ ಪುಸ್ತಕದ ಆರು ಸಂಚಿಕೆಗಳ ಇಡೀ ಸೆಟ್ಟನ್ನು ಆರ್ಡರ್ ಮಾಡಿದರು. ಅವರು ಇವುಗಳನ್ನು ಅತ್ಯಾಸಕ್ತಿಯಿಂದ ಓದಿದರು ಮತ್ತು ತಾವು ಕಲಿಯುತ್ತಿದ್ದ ಬೈಬಲ್ ಸತ್ಯಗಳಿಂದ ಆಳವಾಗಿ ಪ್ರಚೋದಿಸಲ್ಪಟ್ಟರು. ಹೊಸ ಸೃಷ್ಟಿ (ಇಂಗ್ಲಿಷ್) ಎಂಬ ಶೀರ್ಷಿಕೆಯ ಸಂಚಿಕೆ 6ನ್ನು ಅವರು ಓದಿದರು ಮತ್ತು ನೀರಿನ ನಿಮಜ್ಜನದ ಮೂಲಕ ಪಡೆದುಕೊಳ್ಳುವ ಕ್ರೈಸ್ತ ದೀಕ್ಷಾಸ್ನಾನದ ಆವಶ್ಯಕತೆಯನ್ನು ಅವರು ಸ್ಪಷ್ಟವಾಗಿ ಅರ್ಥಮಾಡಿಕೊಂಡರು. ಬೈಬಲ್ ವಿದ್ಯಾರ್ಥಿಗಳನ್ನು ಹೇಗೆ ಕಂಡುಕೊಳ್ಳುವುದೆಂದು ತಿಳಿಯದೆ, ಮಾರ್ಚ್ 1916ರ ಚಳಿಗಾಲದ ಸಮಯವಾಗಿದ್ದರೂ ಆ ಫಾರ್ಮಿನಲ್ಲಿರುವ ಚಿಕ್ಕ ತೊರೆಯಲ್ಲಿ ತನಗೆ ದೀಕ್ಷಾಸ್ನಾನವನ್ನು ಕೊಡುವಂತೆ ತಂದೆಯನ್ನು ಅವರು ಕೇಳಿಕೊಂಡರು.
ಇದಾದ ಸ್ವಲ್ಪ ಸಮಯದಲ್ಲೇ, ಆ್ಯಲಿಯನ್ಸ್ನಲ್ಲಿರುವ ಡಾಟರ್ಸ್ ಆಫ್ ವೆಟರನ್ಸ್ ಹಾಲ್ನಲ್ಲಿ ಜರುಗಲಿದ್ದ ಒಂದು ಭಾಷಣದ ಪ್ರಕಟನೆಯ ಕುರಿತು ವಾರ್ತಾಪತ್ರಿಕೆಯಲ್ಲಿ ನೀಡಿದ್ದ ಜಾಹೀರಾತನ್ನು ತಾಯಿಯು ನೋಡಿದರು. ಭಾಷಣದ ಮುಖ್ಯವಿಷಯವು “ದ ಡಿವೈನ್ ಪ್ಲ್ಯಾನ್ ಆಫ್ ದ ಏಜಸ್” ಎಂದಾಗಿತ್ತು. ಅವರು ತಕ್ಷಣವೇ ಅಲ್ಲಿಗೆ ಹೋಗಲು ನಿಶ್ಚಯಿಸಿದರು, ಯಾಕೆಂದರೆ ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ ಎಂಬ ಪುಸ್ತಕದ ಸಂಚಿಕೆ 1ರ ಶೀರ್ಷಿಕೆ ಮತ್ತು ಅಲ್ಲಿ ಕೊಡಲ್ಪಡುವ ಭಾಷಣದ ಮುಖ್ಯವಿಷಯವು ಒಂದೇ ಆಗಿತ್ತು. ಹಗುರವಾದ ಗಾಡಿಯು ಮೋಟಾರಿಗೆ ಜೋಡಿಸಲ್ಪಟ್ಟು, ಕುದುರೆ ಮತ್ತು ಬಗ್ಗಿಯ ಮೂಲಕ ಇಡೀ ಕುಟುಂಬವು ಮೊದಲ ಬಾರಿ ಕೂಟಕ್ಕೆ ಹಾಜರಾಯಿತು. ಅಂದಿನಿಂದ ಹಿಡಿದು, ಭಾನುವಾರ ಮತ್ತು ಬುಧವಾರ ಸಂಜೆಗಳಲ್ಲಿ ಸಹೋದರರ ಮನೆಗಳಲ್ಲಿ ನಡೆಯುವ ಕೂಟಗಳಿಗೆ ನಾವು ಹಾಜರಾಗುತ್ತಾ ಬಂದೆವು. ಇದಾದ ಸ್ವಲ್ಪದರಲ್ಲೇ, ಕ್ರೈಸ್ತ ಸಭೆಯ ಪ್ರತಿನಿಧಿಯೊಬ್ಬರಿಂದ ನನ್ನ ತಾಯಿಯವರು ಪುನಃ ಒಮ್ಮೆ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಫಾರ್ಮಿನ ಕೆಲಸದಲ್ಲಿ ಯಾವಾಗಲೂ ಕಾರ್ಯಮಗ್ನರಾಗಿರುತ್ತಿದ್ದ ನನ್ನ ತಂದೆಯವರು ಕ್ರಮೇಣ ಬೈಬಲ್ ಅಭ್ಯಾಸದಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳಲಾರಂಭಿಸಿದರು ಮತ್ತು ಅವರು ಸಹ ಕೆಲವು ವರ್ಷಗಳ ನಂತರ ದೀಕ್ಷಾಸ್ನಾನವನ್ನು ಪಡೆದುಕೊಂಡರು.
ಮುಂದಾಳತ್ವವನ್ನು ತೆಗೆದುಕೊಳ್ಳುವವರನ್ನು ಭೇಟಿಯಾಗುವುದು
ಜೂನ್ 10, 1917ರಂದು, ವಾಚ್ಟವರ್ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ ಜೆ. ಎಫ್. ರಧರ್ಫರ್ಡ್ರವರು ಆ್ಯಲಿಯನ್ಸನ್ನು ಭೇಟಿಮಾಡಿ “ಜನಾಂಗಗಳು ಯಾಕೆ ಯುದ್ಧ ಮಾಡುತ್ತವೆ?” ಎಂಬ ವಿಷಯದ ಮೇಲೆ ಭಾಷಣವನ್ನು ಕೊಟ್ಟರು. ಆಗ ನಾನು ಒಂಬತ್ತು ವರ್ಷ ಪ್ರಾಯದವಳಾಗಿದ್ದೆ ಮತ್ತು ನನ್ನ ಹೆತ್ತವರೊಂದಿಗೆ ಮತ್ತು ನನ್ನ ಇಬ್ಬರು ಸಹೋದರರಾಗಿದ್ದ ವಿಲ್ಲಿ ಮತ್ತು ಚಾರ್ಲ್ಸ್ರೊಂದಿಗೆ ಆ ಭಾಷಣಕ್ಕೆ ಹಾಜರಾದೆ. ಅಲ್ಲಿ ನೂರಕ್ಕಿಂತಲೂ ಹೆಚ್ಚು ಮಂದಿ ಕೂಡಿದ್ದ ಒಂದು ದೊಡ್ಡ ಗುಂಪು ಹಾಜರಿತ್ತು. ಸಹೋದರ ರಧರ್ಫರ್ಡ್ರ ಭಾಷಣದ ನಂತರ, ಅಲ್ಲಿ ಹಾಜರಿದ್ದ ಅನೇಕರು ಭಾಷಣವು ಕೊಡಲ್ಪಟ್ಟ ಕೊಲಂಬಿಯ ಥಿಯೇಟರ್ನ ಹೊರಗಡೆ ಫೋಟೋಗಾಗಿ ಪೋಸ್ ಕೊಟ್ಟರು. ಮುಂದಿನ ವಾರ ಅದೇ ಸ್ಥಳದಲ್ಲಿ, ಎ. ಏಚ್. ಮ್ಯಾಕ್ಮಿಲನ್ “ಬರಲಿರುವ ದೇವರ ರಾಜ್ಯ” ಎಂಬ ವಿಷಯದ ಮೇಲೆ ಭಾಷಣವನ್ನು ಕೊಟ್ಟರು. ನಮ್ಮ ಚಿಕ್ಕ ಪಟ್ಟಣವನ್ನು ಇಂತಹ ಸಹೋದರರು ಭೇಟಿಮಾಡುವುದು ನಮಗೆ ನಿಜವಾಗಿಯೂ ಒಂದು ಸುಯೋಗವಾಗಿತ್ತು.
ಹಿಂದಿನ ಸ್ಮರಣೀಯ ಅಧಿವೇಶನಗಳು
1918ರಲ್ಲಿ ಆ್ಯಲಿಯನ್ಸ್ನಿಂದ ಕೆಲವೇ ಕಿಲೋಮೀಟರುಗಳಷ್ಟು ದೂರದಲ್ಲಿರುವ ಓಹಾಯೋದ ಆ್ಯಟ್ವಾಟರ್ ಪಟ್ಟಣದಲ್ಲಿ ನಾನು ಮೊದಲ ಬಾರಿ ಅಧಿವೇಶನಕ್ಕೆ ಹಾಜರಾದೆ. ನಾನು ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ಸಾಕಷ್ಟು ಪ್ರಾಯದವಳಾಗಿದ್ದೇನೋ ಎಂಬುದನ್ನು ಅಮ್ಮ ಸೊಸೈಟಿಯ ಪ್ರತಿನಿಧಿಗಳಿಗೆ ಕೇಳಿದರು. ನಾನು ದೇವರ ಚಿತ್ತವನ್ನು ಮಾಡಲು ನ್ಯಾಯಸಮ್ಮತ ಸಮರ್ಪಣೆಯನ್ನು ಮಾಡಿಕೊಂಡಿದ್ದೇನೆಂದು ನನಗೆ ಅನಿಸಿದ್ದರಿಂದ, ಸೇಬು ಹಣ್ಣಿನ ದೊಡ್ಡ ತೋಟದ ಹತ್ತಿರವಿರುವ ತೊರೆಯಲ್ಲಿ ಅದೇ ದಿನ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಅನುಮತಿಯು ನನಗೆ ಸಿಕ್ಕಿತು. ಬಟ್ಟೆಗಳನ್ನು ಬದಲಾಯಿಸುವ ಉದ್ದೇಶಕ್ಕಾಗಿ ಸಹೋದರರು ಕಟ್ಟಿದ್ದ ಒಂದು ಡೇರೆಯಲ್ಲಿ ನನ್ನ ಬಟ್ಟೆಗಳನ್ನು ಬದಲಾಯಿಸಿಕೊಂಡೆ ಮತ್ತು ಹಳೆಯ, ದಪ್ಪಗಿನ ನೈಟ್ ಡ್ರೆಸ್ನಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡೆ.
ಸೆಪ್ಟೆಂಬರ್ 1919ರಲ್ಲಿ ನನ್ನ ಹೆತ್ತವರು ಮತ್ತು ನಾನು ಲೇಕ್ ಎರಿಯಲ್ಲಿರುವ ಓಹಾಯೋದ ಸ್ಯಾಂಡಸ್ಕಿ ಪಟ್ಟಣಕ್ಕೆ ರೈಲಿನಲ್ಲಿ ಬಂದೆವು. ಅನಂತರ ದೋಣಿಯಲ್ಲಿ ಪ್ರಯಾಣಿಸಿದ ಸ್ವಲ್ಪ ಸಮಯದಲ್ಲೇ ನಾವು ಸೀಡರ್ ಪಾಯಿಂಟ್ಗೆ ಬಂದು ತಲಪಿದೆವು, ಮತ್ತು ಇಲ್ಲಿಯೇ ನಮ್ಮ ಸ್ಮರಣೀಯ ಅಧಿವೇಶನವು ನಡೆಯಲಿಕ್ಕಿತ್ತು. ದೋಣಿಯಿಂದ ಹೊರಗೆ ಬಂದಾಗ, ಹಡಗುಕಟ್ಟೆಯ ಬಳಿ ಸಣ್ಣದೊಂದು ಉಪಾಹಾರ ಗೃಹವಿತ್ತು. ನಾನು ಆ ದಿನಗಳಲ್ಲಿ ನಿಜವಾಗಿಯೂ ತುಂಬ ಬೆಲೆಯ ಆಹಾರವಾಗಿದ್ದ ಹ್ಯಾಮ್ಬರ್ಗ್ರನ್ನು ಖರೀದಿಸಿದೆ. ಅದು ತುಂಬ ಸ್ವಾದಿಷ್ಟವಾಗಿತ್ತು! ನಮ್ಮ ಎಂಟು ದಿನದ ಅಧಿವೇಶನದ ಉಚ್ಚಾಂಕ ಹಾಜರಿಯು 7,000 ಆಗಿತ್ತು. ಸಾರ್ವಜನಿಕರಿಗಾಗಿ ಧ್ವನಿವ್ಯವಸ್ಥೆಯಿಲ್ಲದಿದ್ದ ಕಾರಣ, ನಾನು ಬಹಳ ಜಾಗ್ರತೆಯಿಂದ ಆಲಿಸಬೇಕಾಗಿತ್ತು.
ಈ ಅಧಿವೇಶನದಲ್ಲಿಯೇ ವಾಚ್ ಟವರ್ ಪತ್ರಿಕೆಯ ಜೊತೆಗೆ ಬರುವ ದ ಗೋಲ್ಡನ್ ಏಜ್ (ಈಗ ಎಚ್ಚರ!) ಎಂಬ ಶೀರ್ಷಿಕೆಯುಳ್ಳ ಪತ್ರಿಕೆಯು ಬಿಡುಗಡೆಗೊಳಿಸಲ್ಪಟ್ಟಿತು. ಆ ಅಧಿವೇಶನಕ್ಕೆ ಹಾಜರಾಗಲು, ನಾನು ಒಂದು ವಾರ ಶಾಲೆಗೆ ಗೈರುಹಾಜರಾಗಬೇಕಾಯಿತಾದರೂ ಆ ಪ್ರಯತ್ನವು ಸಾರ್ಥಕವಾಗಿತ್ತು. ಸೀಡರ್ ಪಾಯಿಂಟ್ ರಜಾದಿನಗಳಿಗಾಗಿರುವ ಪ್ರವಾಸಿತಾಣವಾಗಿತ್ತು ಮತ್ತು ರೆಸ್ಟೊರೆಂಟ್ನಲ್ಲಿ ಪ್ರತಿನಿಧಿಗಳಿಗೆ ಅಡಿಗೆ ಮಾಡುವವರಿದ್ದರು. ಆದರೆ ಯಾವುದೋ ಕಾರಣಕ್ಕಾಗಿ ಅಡಿಗೆ ಮಾಡುವವರು ಮತ್ತು ಪರಿಚಾರಿಕೆಯರು ಕೆಲಸಕ್ಕೆ ಮುಷ್ಕರವನ್ನು ಹೂಡಿದರು, ಆದುದರಿಂದ ಅಡಿಗೆ ಮಾಡಲು ತಿಳಿದಿದ್ದ ಕ್ರೈಸ್ತ ಸಹೋದರರು ಪ್ರತಿನಿಧಿಗಳಿಗೆ ಆಹಾರವನ್ನು ತಯಾರಿಸಿದರು. ಅಂದಿನಿಂದ ಅನೇಕ ದಶಕಗಳ ವರೆಗೆ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಯೆಹೋವನ ಜನರು ತಮ್ಮ ಸ್ವಂತ ಊಟಗಳನ್ನು ತಯಾರಿಸುತ್ತಿದ್ದರು.
ಇಸವಿ 1922ರ ಸೆಪ್ಟೆಂಬರ್ನಲ್ಲಿ ಸೀಡರ್ ಪಾಯಿಂಟ್ಗೆ ಒಂಬತ್ತು ದಿನಗಳ ಅಧಿವೇಶನಕ್ಕಾಗಿ ಮತ್ತೆ ಹೋಗುವ ಸುಯೋಗವು ಸಹ ನಮಗೆ ಸಿಕ್ಕಿತು ಮತ್ತು ಈ ಅಧಿವೇಶನದ ಹಾಜರಿಯು 18,000ಕ್ಕಿಂತಲೂ ಹೆಚ್ಚಿನ ಉಚ್ಚಾಂಕವನ್ನು ಮುಟ್ಟಿತು. ಈ ಅಧಿವೇಶನದಲ್ಲೇ, “ರಾಜನನ್ನೂ, ಆತನ ರಾಜ್ಯವನ್ನೂ ಘೋಷಿಸಿರಿ, ಘೋಷಿಸಿರಿ, ಘೋಷಿಸಿರಿ” ಎಂಬ ಕರೆಯಿಂದ ಸಹೋದರ ರಧರ್ಫರ್ಡ್ ನಮ್ಮನ್ನು ಉತ್ತೇಜಿಸಿದ್ದರು. ಟ್ರ್ಯಾಕ್ಟ್ಗಳನ್ನು ಮತ್ತು ದ ಗೋಲ್ಡನ್ ಏಜ್ ಪತ್ರಿಕೆಯನ್ನು ಹಂಚುವ ಮೂಲಕ ನನ್ನ ವೈಯಕ್ತಿಕ ಶುಶ್ರೂಷೆಯನ್ನು ನಾನು ಬಹಳ ವರ್ಷಗಳ ಹಿಂದೆಯೇ ಆರಂಭಿಸಿದ್ದೆ.
ಶುಶ್ರೂಷೆಗಾಗಿ ಗಣ್ಯತೆ
ಇಸವಿ 1918ರ ಆದಿಭಾಗದಲ್ಲಿ, ಬಾಬೆಲಿನ ಪತನ (ಇಂಗ್ಲಿಷ್) ಎಂಬ ಶೀರ್ಷಿಕೆಯಿದ್ದ ಟ್ರ್ಯಾಕ್ಟನ್ನು ಸುತ್ತಮುತ್ತಲಿನ ಫಾರ್ಮ್ಗಳಿಗೆ ಹಂಚುವುದರಲ್ಲಿ ನಾನು ಭಾಗವಹಿಸಿದೆ. ತಣ್ಣನೆಯ ಹವಾಮಾನದ ಕಾರಣದಿಂದಾಗಿ, ಒಂದು ಸೋಪ್ಸ್ಟೋನನ್ನು ಮನೆಯಲ್ಲಿದ್ದ ಉರುವಲಿನ ಒಲೆಯಲ್ಲಿ ಬಿಸಿಮಾಡಿ, ನಮ್ಮ ಪಾದಗಳನ್ನು ಬೆಚ್ಚಗಿರಿಸಲು ಅದನ್ನು ಬಗ್ಗಿಯಲ್ಲಿಯೇ ತೆಗೆದುಕೊಂಡು ಹೋಗುತ್ತಿದ್ದೆವು. ನಾವು ಭಾರವಾದ ಕೋಟುಗಳನ್ನು ಮತ್ತು ಹ್ಯಾಟುಗಳನ್ನು ಧರಿಸುತ್ತಿದ್ದೆವು. ಯಾಕೆಂದರೆ ನಾವು ಪ್ರಯಾಣಿಸಲು ಉಪಯೋಗಿಸುತ್ತಿದ್ದ ಬಗ್ಗಿಗೆ ಕೇವಲ ಮೇಲ್ಛಾವಣಿ ಮತ್ತು ಎರಡು ಬದಿಗಳಲ್ಲಿ ಪರದೆಗಳು ಇದ್ದವು, ಆದರೆ ಬೆಚ್ಚಗಿರಿಸಲು ಯಾವುದೇ ಹೀಟರ್ ಇರಲಿಲ್ಲ. ಇಂತಹ ಪರಿಸ್ಥಿತಿಗಳ ಮಧ್ಯೆಯೂ ನಾವು ಸಂತೋಷಿತರಾಗಿದ್ದೆವು.
ಇಸವಿ 1920ರಲ್ಲಿ, ದ ಫಿನಿಷ್ಡ್ ಮಿಸ್ಟರಿ ಎಂಬ ವಿಶೇಷ ಮುದ್ರಣವನ್ನು ಪತ್ರಿಕೆಯ ರೂಪದಲ್ಲಿ ತಯಾರಿಸಲಾಯಿತು ಮತ್ತು ಈ ಪುಸ್ತಕವನ್ನು ZG ಎಂದು ಕರೆಯಲಾಗುತ್ತಿತ್ತು.a ನನ್ನ ಹೆತ್ತವರು ಮತ್ತು ನಾನು ಈ ಪ್ರಕಾಶನದೊಂದಿಗೆ ಆ್ಯಲಿಯನ್ಸ್ನ ಕ್ಷೇತ್ರಕ್ಕೆ ಹೋದೆವು. ಆ ದಿನಗಳಲ್ಲಿ ಪ್ರತಿಯೊಬ್ಬರು ಒಂಟಿಯಾಗಿಯೇ ಜನರ ಮನೆಬಾಗಿಲಿಗೆ ಹೋಗುತ್ತಿದ್ದರು. ಹಾಗಾಗಿ, ನಾನು ಅನೇಕ ಜನರು ಕುಳಿತುಕೊಂಡಿದ್ದ ವೆರಾಂಡವನ್ನು ಆತಂಕದಿಂದಲೇ ಹತ್ತಿದೆ. ನಾನು ನನ್ನ ನಿರೂಪಣೆಯನ್ನು ಕೊಟ್ಟಾದ ಮೇಲೆ, ಒಬ್ಬ ಸ್ತ್ರೀಯು ಹೀಗೆ ಹೇಳಿದಳು: “ಇವಳು ಒಂದು ಚಿಕ್ಕ ಭಾಷಣವನ್ನು ಎಷ್ಟು ಚೆನ್ನಾಗಿ ಕೊಡುತ್ತಿದ್ದಾಳೆ, ಅಲ್ಲವೇ?” ಮತ್ತು ಆ ಸ್ತ್ರೀಯು ಪ್ರಕಾಶನವನ್ನು ಸ್ವೀಕರಿಸಿದಳು. ನಾನು ಆ ದಿನ 13 ZGಗಳನ್ನು ನೀಡಿದೆ. ಇದೆಲ್ಲಾ ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ ದೀರ್ಘವಾದ ಔಪಚಾರಿಕ ನಿರೂಪಣೆಯನ್ನು ಮೊದಲ ಬಾರಿ ಕೊಟ್ಟಿದ್ದಕ್ಕಾಗಿಯೇ.
ನಾನು ಒಂಬತ್ತನೇ ತರಗತಿಯಲ್ಲಿದ್ದಾಗ ತಾಯಿಯು ನ್ಯುಮೋನಿಯ ಜ್ವರಕ್ಕೆ ತುತ್ತಾದರು ಮತ್ತು ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ಹಾಸಿಗೆಹಿಡಿದರು. ನನ್ನ ಕಿರಿಯ ತಂಗಿ ಹೇಜಲ್ ಇನ್ನೂ ಮಗುವಾಗಿದ್ದಳು, ಆದುದರಿಂದ ಫಾರ್ಮಿನ ಕೆಲಸದಲ್ಲಿ ಸಹಾಯವನ್ನು ಮಾಡಿ, ಮಕ್ಕಳನ್ನು ನೋಡಿಕೊಳ್ಳಬೇಕಾದುದರಿಂದ ನಾನು ಶಾಲೆಯನ್ನು ಬಿಟ್ಟುಬಿಟ್ಟೆ. ಆದರೂ, ನಮ್ಮ ಕುಟುಂಬವು ಬೈಬಲ್ ಸತ್ಯವನ್ನು ಗಂಭೀರವಾಗಿ ತೆಗೆದುಕೊಂಡಿತು ಮತ್ತು ನಾವು ಕ್ರಮವಾಗಿ ಎಲ್ಲ ಸಭಾ ಕೂಟಗಳಿಗೆ ಹಾಜರಾಗುತ್ತಿದ್ದೆವು.
ಇಸವಿ 1928ರಲ್ಲಿ, ಕ್ರಿಸ್ತನ ಮರಣದ ಜ್ಞಾಪಕಾಚರಣೆಯಲ್ಲಿ, “ಒಂಬತ್ತು ಮಂದಿ ಎಲ್ಲಿ?” (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಟ್ರ್ಯಾಕ್ಟ್ ಅನ್ನು ಹಾಜರಿದ್ದವರಿಗೆಲ್ಲಾ ಕೊಡಲಾಯಿತು. ಶುದ್ಧಗೊಳಿಸಲ್ಪಟ್ಟಿದ್ದ ಹತ್ತು ಕುಷ್ಠರೋಗಿಗಳಲ್ಲಿ, ಅದ್ಭುತಕರವಾದ ವಾಸಿಮಾಡುವಿಕೆಗಾಗಿ ಅವರಲ್ಲಿ ಕೇವಲ ಒಬ್ಬನು ದೈನ್ಯವಾಗಿ ಯೇಸುವಿಗೆ ಉಪಕಾರಸಲ್ಲಿಸಲು ಹಿಂದಿರುಗಿ ಬಂದ ದಾಖಲೆಯನ್ನು ತಿಳಿಯಪಡಿಸುವ ಲೂಕ 17:11-19ನ್ನು ಆ ಟ್ರ್ಯಾಕ್ಟ್ ಚರ್ಚಿಸಿತು. ಅದು ನನ್ನ ಹೃದಯವನ್ನು ಸ್ಪರ್ಶಿಸಿತು. ನಾನು ಸ್ವತಃ ಹೀಗೆ ಕೇಳಿಕೊಂಡೆ, “ನಾನು ಎಷ್ಟು ಗಣ್ಯತೆಯುಳ್ಳವಳಾಗಿದ್ದೇನೆ?”
ಮನೆಯಲ್ಲಿ ವಿಷಯಗಳು ಈಗ ಉತ್ತಮಗೊಳ್ಳುತ್ತಿದ್ದುದರಿಂದ ಹಾಗೂ ನಾನು ಆರೋಗ್ಯವಂತಳಾಗಿದ್ದುದರಿಂದ, ಮತ್ತು ಪೂರ್ಣ ಸಮಯದ ಶುಶ್ರೂಷೆಯೆಂದು ಕರೆಯಲಾಗುತ್ತಿದ್ದ ಪಯನೀಯರ್ ಸೇವೆಯನ್ನು ಪ್ರವೇಶಿಸಲು ತಡೆಯುವ ಯಾವುದೇ ಜವಾಬ್ದಾರಿಗಳು ನನಗಿಲ್ಲದಿದ್ದ ಕಾರಣ ನಾನು ಮನೆ ಬಿಟ್ಟು ಹೋಗಿ, ಪಯನಿಯರ್ ಸೇವೆಯನ್ನು ಮಾಡಲು ನಿರ್ಧರಿಸಿದೆ. ಹಾಗೆ ಮಾಡುವಂತೆ ನನ್ನ ಹೆತ್ತವರು ನನ್ನನ್ನು ಉತ್ತೇಜಿಸಿದರು. ಹೀಗೆ, ನಾನು ಮತ್ತು ನನ್ನ ಸಂಗಾತಿಯಾದ ಆ್ಯಗ್ನಿಸ್ ಎಲೆಟ ನಮ್ಮ ನೇಮಕವನ್ನು ಪಡೆದುಕೊಂಡೆವು ಮತ್ತು ಆಗಸ್ಟ್ 28, 1928ರಂದು ಬೆಳಗ್ಗೆ 9 ಗಂಟೆಗೆ ರೈಲನ್ನು ಹತ್ತಿದೆವು. ನಮ್ಮಲ್ಲಿ ಪ್ರತಿಯೊಬ್ಬರ ಬಳಿ ಒಂದು ಸೂಟ್ಕೇಸ್ ಮತ್ತು ಬೈಬಲ್ ಸಾಹಿತ್ಯವನ್ನು ಕೊಂಡೊಯ್ಯಲು ಒಂದು ಸಣ್ಣ ಚೀಲವಿತ್ತು. ರೈಲು ನಿಲ್ದಾಣದಲ್ಲಿ, ನನ್ನ ಅಕ್ಕ-ತಂಗಿಯರು ಮತ್ತು ನನ್ನ ಹೆತ್ತವರು ಅಳುತ್ತಿದ್ದರು ಮತ್ತು ನಾವು ಸಹ ಅತ್ತೆವು. ನಾನು ಅವರನ್ನು ಪುನಃ ಎಂದೂ ನೋಡಲಾರೆನೆಂದು ನೆನಸಿದೆ, ಯಾಕೆಂದರೆ ಅರ್ಮಗೆದೋನ್ ಹತ್ತಿರದಲ್ಲೇ ಇದೆ ಎಂದು ನಾವು ನಂಬಿದ್ದೆವು. ಮರುದಿನ ಬೆಳಗ್ಗೆ ನಾವು ಕೆಂಟಕಿಯಲ್ಲಿರುವ ಬ್ರೂಕ್ಸ್ವಿಲ್ಲೇ ಎಂಬ ನಮ್ಮ ನೇಮಕದ ಸ್ಥಳಕ್ಕೆ ಬಂದು ತಲಪಿದೆವು.
ಒಂದು ವಸತಿಗೃಹದಲ್ಲಿ ಸಣ್ಣ ಕೋಣೆಯೊಂದನ್ನು ಬಾಡಿಗೆಗೆ ತೆಗೆದುಕೊಂಡೆವು ಮತ್ತು ಸ್ಪೆಗೆಟಿಯ ಕ್ಯಾನುಗಳನ್ನು (ಮುಚ್ಚಿಡಲ್ಪಟ್ಟ ಡಬ್ಬಿಗಳು) ಖರೀದಿಸಿದೆವು ಮತ್ತು ನಾವೇ ಸ್ಯಾಂಡ್ವಿಚ್ಗಳನ್ನು ಮಾಡಿಕೊಂಡೆವು. ಪ್ರತಿಯೊಂದು ದಿನ ನಾವು ಬೇರೆ ಬೇರೆ ದಿಕ್ಕಿನಲ್ಲಿ ನಡೆದುಹೋಗುತ್ತಿದ್ದೆವು, ಕ್ಷೇತ್ರದಲ್ಲಿ ಒಬ್ಬರಾಗಿಯೇ ಕೆಲಸಮಾಡುತ್ತಿದ್ದೆವು ಮತ್ತು 1.98 ಡಾಲರ್ ಕಾಣಿಕೆಗೆ ರಟ್ಟುಹಾಕಿದ ಐದು ಪುಸ್ತಕಗಳನ್ನು ಮನೆಯವರಿಗೆ ನೀಡುತ್ತಿದ್ದೆವು. ಬೈಬಲಿನಲ್ಲಿ ಆಸಕ್ತಿಯನ್ನು ತೋರಿಸುತ್ತಿದ್ದ ಅನೇಕ ಜನರನ್ನು ಭೇಟಿಮಾಡುತ್ತಾ, ಹೀಗೆ ಕ್ರಮೇಣವಾಗಿ ಪಟ್ಟಣವನ್ನು ಆವರಿಸಿದೆವು.
ಸುಮಾರು ಮೂರು ತಿಂಗಳುಗಳಲ್ಲಿ, ನಾವು ಬ್ರೂಕ್ಸ್ವಿಲ್ಲೇ ಮಾತ್ರವಲ್ಲ ಅಗಸ್ಟ ಪಟ್ಟಣದಲ್ಲಿ ಮತ್ತು ಅದರ ಸುತ್ತುಮುತ್ತಲಿರುವ ಸ್ಥಳಗಳಲ್ಲಿರುವ ಪ್ರತಿಯೊಬ್ಬರನ್ನು ಭೇಟಿಮಾಡಿದ್ದೆವು. ಆದುದರಿಂದ ನಾವು ಮೇಸ್ವಿಲ್, ಪ್ಯಾರಿಸ್ ಮತ್ತು ರಿಚ್ಮಂಡ್ ಪಟ್ಟಣಗಳಲ್ಲಿ ಕೆಲಸಮಾಡಲು ಹೋದೆವು. ಮುಂದಿನ ಮೂರು ವರ್ಷಗಳಲ್ಲಿ, ನಾವು ಸಭೆಗಳೇ ಇರದ ಕೆಂಟಕಿಯ ಅನೇಕ ಪ್ರಾಂತಗಳನ್ನು ಆವರಿಸಿದೆವು. ಓಹಾಯೋದಿಂದ ಅಲ್ಲಿಗೆ ಬಂದು ಒಂದು ವಾರ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಶುಶ್ರೂಷೆಯಲ್ಲಿ ಭಾಗವಹಿಸುತ್ತಿದ್ದ ನಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದಲೂ ನಮಗೆ ಅನೇಕ ವೇಳೆ ಸಹಾಯವು ದೊರಕುತ್ತಿತ್ತು.
ಇತರ ಸ್ಮರಣೀಯ ಅಧಿವೇಶನಗಳು
1931ರ ಜುಲೈ 24-30ರ ವರೆಗೆ ಓಹಾಯೋದ ಕೊಲಂಬಸ್ನಲ್ಲಿ ನಡೆದ ಅಧಿವೇಶನವು ನಿಜವಾಗಿಯೂ ಸ್ಮರಣೀಯವಾಗಿತ್ತು. ನಾವು ಯೆಹೋವನ ಸಾಕ್ಷಿಗಳೆಂಬ ಬೈಬಲ್ ಆಧಾರಿತ ಹೆಸರಿನಿಂದ ಇನ್ನು ಮುಂದೆ ಗುರುತಿಸಲ್ಪಡುವೆವು ಎಂಬ ಪ್ರಕಟನೆಯು ಇದೇ ಅಧಿವೇಶನದಲ್ಲಿ ಮಾಡಲ್ಪಟ್ಟಿತು. (ಯೆಶಾಯ 43:12) ಇದಕ್ಕೂ ಮುಂಚೆ, ನಮ್ಮ ಧರ್ಮವು ಯಾವುದು ಎಂದು ಜನರು ನಮ್ಮನ್ನು ಕೇಳಿದರೆ, ನಾವು ಅವರಿಗೆ, “ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳು” ಎಂದು ಹೇಳುತ್ತಿದ್ದೆವು. ಆದರೆ ಇದು ನಮ್ಮನ್ನು ನಿಜವಾಗಿಯೂ ಸರಿಯಾಗಿ ಗುರುತಿಸಲಿಲ್ಲ. ಯಾಕೆಂದರೆ ಬೇರೆ ಬೇರೆ ಧಾರ್ಮಿಕ ಗುಂಪುಗಳೊಂದಿಗೆ ನಿಕಟವಾಗಿ ಸಂಬಂಧವನ್ನು ಹೊಂದಿದ್ದ ಇತರ ಬೈಬಲ್ ವಿದ್ಯಾರ್ಥಿಗಳು ಸಹ ಇದ್ದರು.
ನನ್ನ ಜೊತೆ ಕೆಲಸಮಾಡುತ್ತಿದ್ದ ಸಂಗಾತಿಯಾದ ಆ್ಯಗ್ನಿಸ್ ಮದುವೆಯಾದರು ಮತ್ತು ನಾನು ಒಬ್ಬೊಂಟಿಗಳಾದೆ. ಆದುದರಿಂದ, ಪಯನೀಯರ್ ಸಂಗಾತಿಗಾಗಿ ಹುಡುಕುತ್ತಿರುವವರು ನಿರ್ದಿಷ್ಟ ಸ್ಥಳಕ್ಕೆ ಬರಬೇಕೆಂದು ತಿಳಿಸಲಾದಾಗ ನಾನು ರೋಮಾಂಚಿತಳಾದೆ. ಅಲ್ಲಿ ನಾನು ಬ್ಯಾರ್ಥ ಮತ್ತು ಎಲ್ಸಿ ಗರ್ಟಿ ಹಾಗೂ ಬೆಸ್ಸಿ ಎನ್ಸಿಂಗರ್ ಎಂಬುವವರನ್ನು ಭೇಟಿಯಾದೆ. ಅವರ ಬಳಿ ಎರಡು ಕಾರುಗಳು ಇದ್ದವು ಮತ್ತು ಅವರೊಂದಿಗೆ ಕೆಲಸಮಾಡಲು ನಾಲ್ಕನೇ ಪಯನೀಯರ್ ಸಹೋದರಿಯೊಬ್ಬಳನ್ನು ಅವರು ಎದುರುನೋಡುತ್ತಿದ್ದರು. ಈ ಮುಂಚೆ ನಾವು ಅವರನ್ನೆಂದೂ ಭೇಟಿಯಾಗಿರದಿದ್ದರೂ ಸಹ ಅಧಿವೇಶನ ಸ್ಥಳವನ್ನು ನಾವು ಒಟ್ಟಿಗೆ ಬಿಟ್ಟೆವು.
ಬೇಸಿಗೆ ತಿಂಗಳಿನಲ್ಲಿ ನಾವು ಪೆನ್ಸಿಲ್ವೇನಿಯದಲ್ಲೆಲ್ಲಾ ಕೆಲಸಮಾಡಿದೆವು. ಅನಂತರ, ಚಳಿಗಾಲ ಹತ್ತಿರವಾಗುತ್ತಿದ್ದಂತೆ, ನಾವು ಬೆಚ್ಚಗಿರುವ ದಕ್ಷಿಣ ರಾಜ್ಯಗಳಾದ ಉತ್ತರ ಕರೋಲಿನಾ, ವರ್ಜೀನಿಯಾ ಮತ್ತು ಮೇರಿಲ್ಯಾಂಡ್ನಲ್ಲಿ ಕೆಲಸಮಾಡಲು ನಮ್ಮನ್ನು ನೇಮಿಸುವಂತೆ ವಿನಂತಿಸಿಕೊಂಡೆವು. ವಸಂತ ಋತುವಿನಲ್ಲಿ ದಕ್ಷಿಣಕ್ಕೆ ಹಿಂದಿರುಗುತ್ತಿದ್ದೆವು. ಹೀಗೆ ಮಾಡುವುದು ಆಗಿನ ಪಯನೀಯರರ ರೂಢಿಯಾಗಿತ್ತು. 1934ರಲ್ಲಿ, ಈ ರೂಢಿಯನ್ನು ಅನುಸರಿಸಿದ ಜಾನ್ ಬೂತ್ ಮತ್ತು ರೂಡಲ್ಫ್ ಅಬ್ಬುಲ್ ಎಂಬುವರು ರಾಲ್ಫ್ ಮೋಯರ್ ಮತ್ತು ಅವರ ಕಿರಿಯ ಸಹೋದರನಾದ ವಿಲ್ಲರ್ಡ್ರೊಂದಿಗೆ ಕೆಂಟಕಿಯ ಹಾಜರ್ಡ್ಗೆ ಬಂದರು.
ನಾನು ಅನೇಕ ಸಂದರ್ಭಗಳಲ್ಲಿ ರಾಲ್ಫ್ ಅನ್ನು ಭೇಟಿಯಾಗಿದ್ದೆ ಮತ್ತು 1935ರಲ್ಲಿ ಮೇ 30ರಿಂದ ಜೂನ್ 3ರ ವರೆಗೆ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ದೊಡ್ಡ ಅಧಿವೇಶನದ ಸಮಯದಲ್ಲಿ ನಾವು ಇನ್ನೂ ಹೆಚ್ಚು ಪರಿಚಿತರಾದೆವು. “ಮಹಾ ಜನಸ್ತೋಮ,” ಅಥವಾ “ಮಹಾ ಸಮೂಹ”ದ ವಿಷಯದ ಮೇಲೆ ಭಾಷಣವು ಸಾದರಪಡಿಸಲ್ಪಟ್ಟಾಗ, ರಾಲ್ಫ್ ಮತ್ತು ನಾನು ಒಟ್ಟಿಗೆ ಬಾಲ್ಕನಿಯಲ್ಲಿ ಕುಳಿತುಕೊಂಡಿದ್ದೆವು. (ಪ್ರಕಟನೆ 7:9-14) ಆ ಸಮಯದ ವರೆಗೂ ಮಹಾ ಜನಸ್ತೋಮದವರು 1,44,000ಕ್ಕಿಂತಲೂ ಕಡಿಮೆ ನಂಬಿಗಸ್ತರಾಗಿರುವ ಸ್ವರ್ಗೀಯ ವರ್ಗದ ಸದಸ್ಯರಾಗಿದ್ದಾರೆ ಎಂದು ನಾವು ನಂಬಿದ್ದೆವು. (ಪ್ರಕಟನೆ 14:1-3) ಆದುದರಿಂದ ನಾನು ಅವರಲ್ಲಿ ಒಬ್ಬಳಾಗಲು ಬಯಸಲಿಲ್ಲ!
ಮಹಾ ಜನಸ್ತೋಮದವರು, ಅರ್ಮಗೆದೋನನ್ನು ಪಾರಾಗುವ ನಂಬಿಗಸ್ತ ಭೂವರ್ಗದವರಾಗಿದ್ದಾರೆಂಬ ವಿಷಯವನ್ನು ಸಹೋದರ ರಧರ್ಫರ್ಡ್ ವಿವರಿಸಿದಾಗ, ಅನೇಕರು ಆಶ್ಚರ್ಯಚಕಿತರಾದರು. ಮಹಾ ಜನಸ್ತೋಮದವರಾಗಿರುವವರೆಲ್ಲರು ಎದ್ದುನಿಲ್ಲುವಂತೆ ಅವರು ಕೇಳಿಕೊಂಡರು. ನಾನಂತೂ ಎದ್ದುನಿಲ್ಲಲಿಲ್ಲ, ಆದರೆ ರಾಲ್ಫ್ ಎದ್ದುನಿಂತರು. ನಂತರ, ವಿಷಯಗಳು ನನಗೆ ಸ್ಪಷ್ಟವಾದವು. ಹೀಗಾಗಿ 1935ನೇ ವರ್ಷವೇ, ಕ್ರಿಸ್ತನ ಮರಣದ ಜ್ಞಾಪಕಾಚರಣೆಯ ಕುರುಹಿನ ರೊಟ್ಟಿ ಮತ್ತು ದ್ರಾಕ್ಷಾರಸದಲ್ಲಿ ಪಾಲುತೆಗೆದುಕೊಂಡ ಕೊನೆಯ ವರ್ಷವಾಯಿತು. ಆದಾಗ್ಯೂ, ನನ್ನ ತಾಯಿಯವರು 1957ರ ನವೆಂಬರ್ ತಿಂಗಳ ವರೆಗೆ, ಅಂದರೆ ಅವರ ಮರಣದ ತನಕವೂ ಆ ಕುರುಹುಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದರು.
ಒಬ್ಬ ಕಾಯಂ ಸಂಗಾತಿ
ರಾಲ್ಫ್ ಮತ್ತು ನಾನು ಪತ್ರವ್ಯವಹಾರಮಾಡುವುದನ್ನು ಮುಂದುವರಿಸಿದೆವು. ನ್ಯೂ ಯಾರ್ಕ್ನ ಲೇಕ್ ಪ್ಲ್ಯಾಸಿಡ್ ಪಟ್ಟಣದಲ್ಲಿ ನಾನು ಸೇವೆಸಲ್ಲಿಸುತ್ತಿದ್ದೆ ಮತ್ತು ಅವರು ಪೆನ್ಸಿಲ್ವೇನಿಯದಲ್ಲಿ ಸೇವೆಸಲ್ಲಿಸುತ್ತಿದ್ದರು. 1936ರಲ್ಲಿ ಅವರು ಒಂದು ಸಣ್ಣ ಟ್ರೇಲರನ್ನು ನಿರ್ಮಿಸಿದರು ಮತ್ತು ಇದನ್ನು ಅವರು ಕಾರಿನ ಸಹಾಯದಿಂದ ಎಳೆಯಸಾಧ್ಯವಿತ್ತು. ಅಕ್ಟೋಬರ್ 16-18ರ ವರೆಗೆ ನಡೆಯಲಿದ್ದ ಅಧಿವೇಶನಕ್ಕಾಗಿ ಅವರು ಅದನ್ನು ಪೆನ್ಸಿಲ್ವೇನಿಯದ ಪಾಟ್ಸ್ಟೌನ್ದಿಂದ ನ್ಯೂ ಜೆರ್ಸಿಯ ನ್ಯೂ ಯಾರ್ಕ್ ನಗರಕ್ಕೆ ಸ್ಥಳಾಂತರಿಸಿದರು. ಕಾರ್ಯಕ್ರಮದ ನಂತರ ಒಂದು ಸಂಜೆಯಂದು, ನಮ್ಮ ಪಯನೀಯರರಲ್ಲಿ ಅನೇಕರು ರಾಲ್ಫ್ರ ಹೊಸ ಟ್ರೇಲರನ್ನು ನೋಡಲು ಹೋದರು. ಟ್ರೇಲರ್ನೊಳಗೆ ಕಟ್ಟಲಾಗಿದ್ದ ಸಣ್ಣ ಸಿಂಕಿನ ಬಳಿ ಅವರು ಮತ್ತು ನಾನು ನಿಂತುಕೊಂಡಿದ್ದೆವು. ಆಗ ಅವರು ನನಗೆ “ಈ ಟ್ರೇಲರ್ ನಿನಗೆ ಇಷ್ಟವಾಯಿತೇ?” ಎಂದು ಕೇಳಿದರು.
ನಾನು ಹೌದೆಂದು ಸೂಚಿಸಿದಾಗ, ಅವರು ಕೇಳಿದ್ದು, “ನೀನು ಇದರಲ್ಲಿ ಜೀವನ ನಡೆಸಲು ಬಯಸುತ್ತೀಯಾ?”
ನಾನು “ಹೌದು” ಎಂದು ಉತ್ತರಿಸಿದೆ. ಆಗ ಅವರು ನನಗೆ ಕೋಮಲವಾದ ಒಂದು ಮುತ್ತನ್ನು ಕೊಟ್ಟರು ಮತ್ತು ಅದನ್ನು ನಾನು ಎಂದಿಗೂ ಮರೆಯಲಾರೆ. ಕೆಲವು ದಿನಗಳ ನಂತರ, ನಾವು ವಿವಾಹದ ಲೈಸನ್ಸನ್ನು ಪಡೆದುಕೊಂಡೆವು. ಅಕ್ಟೋಬರ್ 19ರಂದು, ಅಂದರೆ ಅಧಿವೇಶನ ಮುಗಿದ ಮರುದಿನವೇ, ನಾವು ಬ್ರೂಕ್ಲಿನ್ಗೆ ಹೋದೆವು ಮತ್ತು ವಾಚ್ ಟವರ್ ಸೊಸೈಟಿಯ ಮುದ್ರಣ ಕಾರ್ಯಾಲಯವನ್ನು ನೋಡಿದೆವು. ಆಮೇಲೆ ನಾವು ಕ್ಷೇತ್ರದಲ್ಲಿ ಕೆಲಸಮಾಡುವ ನೇಮಕವನ್ನು ಕೇಳಿಕೊಂಡೆವು. ಗ್ರ್ಯಾಂಟ್ ಸ್ಯೂಟರ್ ಅವರು ಕ್ಷೇತ್ರದ ಮೇಲ್ವಿಚಾರಣೆಯನ್ನು ಮಾಡುತ್ತಿದ್ದರು ಮತ್ತು ಕ್ಷೇತ್ರದಲ್ಲಿ ಕೆಲಸಮಾಡಲು ಯಾರು ಬಯಸುತ್ತೀರೆಂದು ಕೇಳಿದರು. ಆಗ ರಾಲ್ಫ್ ಹೇಳಿದ್ದು, “ನಾವು ಮದುವೆಯಾಗಲು ಸಾಧ್ಯವಿರುವುದಾದರೆ, ನಾವು ಕ್ಷೇತ್ರದಲ್ಲಿ ಕೆಲಸಮಾಡಲು ಬಯಸುವೆವು.”
“ನೀವು ಸಂಜೆ 5ಗಂಟೆಗೆ ಇಲ್ಲಿಗೆ ಪುನಃ ಬರುವುದಾದರೆ, ನಾವು ಅದನ್ನು ಏರ್ಪಡಿಸಬಹುದು” ಎಂದು ಸಹೋದರ ಸ್ಯೂಟರ್ ನಮಗೆ ಹೇಳಿದರು. ಹೀಗೆ ಅದೇ ಸಂಜೆ ಬ್ರೂಕ್ಲಿನ್ ಹೈಟ್ಸ್ನಲ್ಲಿರುವ ಒಬ್ಬ ಸಾಕ್ಷಿಯ ಮನೆಯಲ್ಲಿ ನಾವಿಬ್ಬರೂ ಮದುವೆಯಾದೆವು. ನಾವು ಕೆಲವು ಸ್ನೇಹಿತರೊಂದಿಗೆ ಅಲ್ಲಿಯೇ ಹತ್ತಿರದಲ್ಲಿರುವ ರೆಸ್ಟೊರೆಂಟ್ನಲ್ಲಿ ಊಟ ಮಾಡಿದೆವು ಮತ್ತು ಇದಾದ ನಂತರ ನ್ಯೂ ಜೆರ್ಸಿಯ ನ್ಯೂ ಯಾರ್ಕ್ನಲ್ಲಿರುವ ರಾಲ್ಫ್ನ ಟ್ರೇಲರಿಗೆ ಹೋಗಲು ಸಾರ್ವಜನಿಕ ವಾಹನವನ್ನು ಉಪಯೋಗಿಸಿದೆವು.
ಇದಾದ ಸ್ವಲ್ಪದರಲ್ಲೇ, ನಾವು ನಮ್ಮ ಮೊದಲ ಪಯನೀಯರ್ ನೇಮಕಕ್ಕೆ ಜೊತೆಯಾಗಿಯೇ ವರ್ಜೀನಿಯಾದ ಹೇಟ್ಸ್ವಿಲ್ಗೆ ಹೊರಟೆವು. ನಾವು ಮೊದಲು ನಾರ್ತಂಬರ್ಲ್ಯಾಂಡ್ ಪ್ರಾಂತ್ಯದಲ್ಲಿ ಕೆಲಸಮಾಡಿದೆವು ಮತ್ತು ಆಮೇಲೆ ಪೆನ್ಸಿಲ್ವೇನಿಯದಲ್ಲಿರುವ ಫಲ್ಟನ್ ಮತ್ತು ಫ್ರಾಂಕ್ಲಿನ್ ಪ್ರಾಂತ್ಯಗಳಲ್ಲಿ ಕೆಲಸಮಾಡಿದೆವು. 1939ರಲ್ಲಿ, ರಾಲ್ಫ್ ಝೋನ್ ಕೆಲಸಕ್ಕಾಗಿ ಆಮಂತ್ರಿಸಲ್ಪಟ್ಟರು. ಸರದಿಯ ಪ್ರಕಾರ ಅನೇಕ ಸಭೆಗಳನ್ನು ಭೇಟಿಮಾಡುವ ಚಟುವಟಿಕೆಯು ಇದಾಗಿತ್ತು. ಟೇನಿಸ್ಸಿ ರಾಜ್ಯದಲ್ಲಿರುವ ಸಭೆಗಳಲ್ಲಿ ನಾವು ಸೇವೆಸಲ್ಲಿಸಿದೆವು. ಅದರ ಮುಂದಿನ ವರ್ಷವೇ ನಮ್ಮ ಮಗನಾದ ಆ್ಯಲನ್ ಜನಸಿದನು ಮತ್ತು 1941ರಲ್ಲಿ ಝೋನ್ ಕೆಲಸವು ನಿಲ್ಲಿಸಲ್ಪಟ್ಟಿತು. ಇದಾದ ನಂತರ ನಮಗೆ ವರ್ಜೀನಿಯಾದ ಮಾರಿಯೋನ್ಗೆ ವಿಶೇಷ ಪಯನೀಯರರಾಗಿ ಸೇವೆಸಲ್ಲಿಸುವ ನೇಮಕವು ಸಿಕ್ಕಿತು. ಆ ದಿನಗಳಲ್ಲಿ, ನಾವು ಶುಶ್ರೂಷೆಯಲ್ಲಿ ತಿಂಗಳಿಗೆ 200 ತಾಸುಗಳನ್ನು ವ್ಯಯಿಸಬೇಕೆಂಬುದೇ ಇದರ ಅರ್ಥವಾಗಿತ್ತು.
ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು
ಇಸವಿ 1943ರಲ್ಲಿ, ವಿಶೇಷ ಪಯನೀಯರ್ ಶುಶ್ರೂಷೆಯನ್ನು ಬಿಟ್ಟುಕೊಡುವುದು ನನಗೆ ಅವಶ್ಯವೆಂದು ತೋರಿತು. ಸಣ್ಣ ಟ್ರೇಲರ್ನಲ್ಲಿ ವಾಸಿಸುವುದು, ಒಂದು ಚಿಕ್ಕ ಮಗುವನ್ನು ನೋಡಿಕೊಳ್ಳುವುದು, ಊಟವನ್ನು ತಯಾರಿಸುವುದು, ನಾವೆಲ್ಲರೂ ಸ್ವಚ್ಛವಾದ ಉಡುಪುಗಳನ್ನು ಧರಿಸುವಂತೆ ನೋಡಿಕೊಳ್ಳುವುದು ಮತ್ತು ಪ್ರತಿ ತಿಂಗಳು ಶುಶ್ರೂಷೆಯಲ್ಲಿ ಸುಮಾರು 60 ತಾಸುಗಳಷ್ಟನ್ನು ವ್ಯಯಿಸುವುದು, ಇಷ್ಟನ್ನೇ ನನಗೆ ಮಾಡಲು ಸಾಧ್ಯವಿತ್ತು. ಆದರೆ ರಾಲ್ಫ್ ವಿಶೇಷ ಪಯನೀಯರರಾಗಿ ಮುಂದುವರಿದರು.
ಒಂಬತ್ತು ವರ್ಷಗಳಿಂದಲೂ ನಮಗೆ ಮನೆಯಾಗಿದ್ದ ಟ್ರೇಲರನ್ನು ಮಾರಿ, ನಾವು 1945ರಲ್ಲಿ ಓಹಿಯೋದ ಆ್ಯಲಿಯನ್ಸ್ಗೆ ಹಿಂದಿರುಗಿ, ಅಲ್ಲಿ ನನ್ನ ಹೆತ್ತವರೊಂದಿಗೆ ಫಾರ್ಮ್ ಮನೆಗೆ ಸ್ಥಳಾಂತರಿಸಿದೆವು. ಇಲ್ಲಿಯೇ ಮುಂಭಾಗದ ದ್ವಾರಮಂಟಪದಲ್ಲಿಯೇ ನಮ್ಮ ಮಗಳಾದ ರಿಬೆಕ್ಕ ಹುಟ್ಟಿದಳು. ರಾಲ್ಫ್ ಪಟ್ಟಣದಲ್ಲಿ ಪಾರ್ಟ್ ಟೈಮ್ ಕೆಲಸವನ್ನು ಮಾಡತೊಡಗಿದರು. ಮತ್ತು ಒಬ್ಬ ರೆಗ್ಯುಲರ್ ಪಯನೀಯರರಾಗಿ ಮುಂದುವರಿದರು. ನಾನು ಫಾರ್ಮಿನಲ್ಲಿ ಕೆಲಸಮಾಡಿದೆ ಮತ್ತು ಅವರು ಪಯನೀಯರ್ ಸೇವೆಯನ್ನು ಮುಂದುವರಿಸಲು ಸಾಧ್ಯವಾಗುವಂತೆ ನನ್ನಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಿದೆ. ನನ್ನ ಕುಟುಂಬವು ನಮಗೆ ಭೂಮಿಯನ್ನು ಮತ್ತು ಒಂದು ಮನೆಯನ್ನು ಪುಕ್ಕಟೆಯಾಗಿ ನೀಡಲು ಮುಂದೆ ಬಂದಿತಾದರೂ, ರಾಲ್ಫ್ ಅದನ್ನು ನಿರಾಕರಿಸಿದರು. ರಾಜ್ಯದ ಅಭಿರುಚಿಗಳನ್ನು ಹೆಚ್ಚು ಪೂರ್ಣವಾಗಿ ಬೆನ್ನಟುವುದರಲ್ಲಿ ಯಾವುದೂ ತನ್ನನ್ನು ಪ್ರತಿಬಂಧಿಸಲು ಅವರು ಬಯಸಲಿಲ್ಲ.
1950ರಲ್ಲಿ ನಾವು ಪೆನ್ಸಿಲ್ವೇನಿಯದ ಪಾಟ್ಸ್ಟೌನ್ ಎಂಬಲ್ಲಿಗೆ ಪುನಃ ಸ್ಥಳಾಂತರಿಸಿ, ಅಲ್ಲಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡೆವು; ಅದಕ್ಕೆ ಪ್ರತಿ ತಿಂಗಳು 25 ಡಾಲರುಗಳನ್ನು ಕೊಡಬೇಕಾಗಿತ್ತು. ಮುಂದಿನ 30 ವರ್ಷಗಳಲ್ಲಿ, ಬಾಡಿಗೆಯು ಕೇವಲ 75 ಡಾಲರುಗಳಿಗೆ ಏರಿತು. ನಮ್ಮ ಜೀವನವನ್ನು ಸರಳವಾಗಿರಿಸಲು ಯೆಹೋವನು ನಮಗೆ ಸಹಾಯ ಮಾಡುತ್ತಿದ್ದಾನೆಂದು ನಮಗೆ ಅನಿಸಿತು. (ಮತ್ತಾಯ 6:31-33) ರಾಲ್ಫ್ ವಾರದಲ್ಲಿ ಮೂರು ದಿನ ಕ್ಷೌರಿಕನ ಕೆಲಸಮಾಡಿದರು. ಪ್ರತಿ ವಾರ ನಾವು ನಮ್ಮ ಇಬ್ಬರು ಮಕ್ಕಳೊಂದಿಗೆ ಬೈಬಲನ್ನು ಅಭ್ಯಾಸಿಸಿದೆವು, ಸಭಾ ಕೂಟಗಳಿಗೆ ಹಾಜರಾದೆವು ಮತ್ತು ಕುಟುಂಬವಾಗಿ ರಾಜ್ಯದ ಸುವಾರ್ತೆಯನ್ನು ಸಾರಿದೆವು. ರಾಲ್ಫ್ ಸ್ಥಳೀಯ ಸಭೆಯಲ್ಲಿ ಅಧ್ಯಕ್ಷ ಮೇಲ್ವಿಚಾರಕರಾಗಿ ಸೇವೆಸಲ್ಲಿಸಿದರು. ನಮ್ಮ ಜೀವನವನ್ನು ಸರಳವಾಗಿ ಇಡುವ ಮೂಲಕ, ನಮಗೆ ಯೆಹೋವನ ಸೇವೆಯಲ್ಲಿ ಬಹಳಷ್ಟನ್ನು ಮಾಡಲು ಸಾಧ್ಯವಾಯಿತು.
ನನ್ನ ಪ್ರಿಯ ಸಂಗಾತಿಯ ಮರಣ
ಮೇ 17, 1981ರಂದು ನಾವು ರಾಜ್ಯ ಸಭಾಗೃಹದಲ್ಲಿ ಕುಳಿತುಕೊಂಡು ಸಾರ್ವಜನಿಕ ಭಾಷಣವೊಂದನ್ನು ಆಲಿಸುತ್ತಿದ್ದೆವು. ಆಗ ರಾಲ್ಫ್ ಅಸ್ವಸ್ಥರಾದರು, ಕೂಡಲೇ ಕುರ್ಚಿಯಿಂದ ಎದ್ದು ಹಿಂದೆ ಹೋಗಿ, ಅಟೆಂಡೆಂಟ್ನ ಕೈಯಲ್ಲಿ ತಾನು ಮನೆಗೆ ಹೋಗುತ್ತಿರುವೆನೆಂದು ಚೀಟಿಯನ್ನು ಬರೆದು ನನಗೆ ಕಳುಹಿಸಿದರು. ರಾಲ್ಫ್ ಈ ಹಿಂದೆ ಎಂದೂ ಹೀಗೆ ಮಾಡಿರಲಿಲ್ಲ. ಹಾಗಾಗಿ ಅವರು ಹಾಗೆ ಮಾಡಿದ್ದು ನನಗೆ ವಿಚಿತ್ರವೆನಿಸಿತು. ನನ್ನನ್ನು ತಕ್ಷಣವೇ ಮನೆಗೆ ಕರೆದೊಯ್ಯುವಂತೆ ಒಬ್ಬರಲ್ಲಿ ಕೇಳಿಕೊಂಡೆ. ಒಂದು ತಾಸಿನೊಳಗೆ ರಾಲ್ಫ್ ತೀವ್ರಮಸ್ತಿಷ್ಕ ಆಘಾತದಿಂದ ತೀರಿಹೋದರು. ಆ ಬೆಳಗ್ಗಿನ ಕಾವಲಿನಬುರುಜು ಅಭ್ಯಾಸವು ಮುಗಿಯುವುದರೊಳಗಾಗಿ ಅವರು ಮರಣಪಟ್ಟರೆಂಬ ಸುದ್ದಿಯನ್ನು ಸಭೆಗೆ ಪ್ರಕಟಿಸಲಾಯಿತು.
ಈಗಾಗಲೇ ಆ ತಿಂಗಳಿನಲ್ಲಿ ರಾಲ್ಫ್ 50 ತಾಸುಗಳಿಗಿಂತಲೂ ಹೆಚ್ಚಿನ ಸಮಯವನ್ನು ಶುಶ್ರೂಷೆಯಲ್ಲಿ ಕಳೆದಿದ್ದರು. ಪಯನೀಯರರಾಗಿ ಅವರ ಪೂರ್ಣ ಸಮಯದ ಸೇವೆಯು 46 ವರ್ಷಕ್ಕಿಂತಲೂ ಹೆಚ್ಚು ಕಾಲ ಮುಂದುವರಿದಿತ್ತು. ಅವರು ನೂರಕ್ಕಿಂತಲೂ ಹೆಚ್ಚು ಜನರೊಂದಿಗೆ ಬೈಬಲ್ ಅಭ್ಯಾಸಗಳನ್ನು ನಡೆಸಿದ್ದರು ಮತ್ತು ಅವರಲ್ಲಿ ಕ್ರಮೇಣವಾಗಿ ಎಲ್ಲರೂ ಯೆಹೋವನ ದೀಕ್ಷಾಸ್ನಾನಿತ ಸಾಕ್ಷಿಗಳಾದರು. ವರ್ಷಗಳಿಂದಲೂ ನಾವು ಮಾಡಿರುವ ಯಾವುದೇ ತ್ಯಾಗಕ್ಕಿಂತಲೂ ನಾವು ಪಡೆದುಕೊಂಡಿರುವ ಆತ್ಮಿಕ ಪ್ರಯೋಜನಗಳು ಹೆಚ್ಚು ಸಾರ್ಥಕವಾಗಿದ್ದವು.
ನನ್ನ ಸುಯೋಗಗಳಿಗಾಗಿ ಕೃತಜ್ಞಳು
ಕಳೆದ 18 ವರ್ಷಗಳಿಂದಲೂ, ನಾನು ಒಬ್ಬೊಂಟಿಗಳಾಗಿ ಜೀವಿಸುತ್ತಿದ್ದೇನೆ, ಕೂಟಗಳಿಗೆ ಹಾಜರಾಗುತ್ತಿದ್ದೇನೆ, ನನ್ನಿಂದ ಸಾಧ್ಯವಾಗುವಾಗಲೆಲ್ಲಾ ಇತರರಿಗೆ ಸುವಾರ್ತೆಯನ್ನು ಸಾರುತ್ತೇನೆ ಮತ್ತು ದೇವರ ವಾಕ್ಯವನ್ನು ಅಭ್ಯಾಸಿಸುತ್ತಿದ್ದೇನೆ. ಈಗ ನಾನು ನಿವೃತ್ತಿಹೊಂದಿರುವವರ ಆಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದೇನೆ. ಕೆಲವೇ ಪೀಠೋಪಕರಣಗಳಿವೆ ಮತ್ತು ಟೆಲಿವಿಷನನ್ನು ಮಾರಿಬಿಟ್ಟಿದ್ದೇನೆ. ಆದರೆ ನನ್ನ ಜೀವನವು ಸಂತೃಪ್ತವಾಗಿದೆ ಮತ್ತು ಆತ್ಮಿಕವಾಗಿ ಸಂಪದ್ಭರಿತವಾಗಿದೆ. ನನ್ನ ಹೆತ್ತವರು ಮತ್ತು ನನ್ನ ಇಬ್ಬರು ಸಹೋದರರು ತಮ್ಮ ಮರಣದ ವರೆಗೆ ನಂಬಿಗಸ್ತರಾಗಿ ಉಳಿದಿದ್ದರು ಮತ್ತು ನನ್ನ ಇಬ್ಬರು ಸಹೋದರಿಯರು ಸತ್ಯದ ಮಾರ್ಗದಲ್ಲಿ ನಂಬಿಗಸ್ತಿಕೆಯಿಂದ ಮುಂದುವರಿಯುತ್ತಿದ್ದಾರೆ.
ನನ್ನ ಮಗನಾದ ಆ್ಯಲನ್ ಒಬ್ಬ ಕ್ರೈಸ್ತ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದಾನೆಂಬುದು ನನಗೆ ಸಂತೋಷವನ್ನು ತರುತ್ತದೆ. ಅನೇಕ ವರ್ಷಗಳ ವರೆಗೆ ಅವನು ರಾಜ್ಯ ಸಭಾಗೃಹ ಮತ್ತು ಅಸೆಂಬ್ಲಿ ಹಾಲ್ಗಳಲ್ಲಿ ಮಾತ್ರವಲ್ಲ, ಬೇಸಿಗೆಕಾಲದ ಅಧಿವೇಶನಗಳಿಗಾಗಿಯೂ ಧ್ವನಿ ವ್ಯವಸ್ಥೆಗಳನ್ನು ಅಳವಡಿಸುವ ಕೆಲಸಮಾಡಿದ್ದಾನೆ. ಅವನ ಹೆಂಡತಿಯು ದೇವರ ನಿಷ್ಠಾವಂತ ಸೇವಕಳಾಗಿದ್ದಾಳೆ ಮತ್ತು ಅವರ ಇಬ್ಬರು ಮಕ್ಕಳು ಹಿರಿಯರಾಗಿ ಸೇವೆಸಲ್ಲಿಸುತ್ತಿದ್ದಾರೆ. ನನ್ನ ಮಗಳಾದ ರಿಬೆಕ್ಕ ಕ್ಯಾರೆಸ್, ಪೂರ್ಣ ಸಮಯದ ಶುಶ್ರೂಷೆಯಲ್ಲಿ 35 ವರ್ಷಗಳಿಗಿಂತಲೂ ಹೆಚ್ಚಿನ ಸಮಯವನ್ನು ಕಳೆದಿದ್ದಾಳೆ. ಇದರಲ್ಲಿ ನಾಲ್ಕು ವರ್ಷಗಳನ್ನು ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದಲ್ಲಿ ಸೇವೆಸಲ್ಲಿಸಿದ್ದು ಸಹ ಸೇರಿದೆ. ಅವಳು ಮತ್ತು ಅವಳ ಗಂಡನು ಅಮೆರಿಕದ ಬೇರೆ ಬೇರೆ ಕಡೆಗಳಲ್ಲಿ ಸಂಚಾರ ಕೆಲಸದಲ್ಲಿ 25 ವರ್ಷಗಳನ್ನು ಕಳೆದಿದ್ದಾರೆ.
ರಾಜ್ಯವು ಕಂಡುಹಿಡಿಯಸಾಧ್ಯವಿರುವ ಹೂಳಿಟ್ಟ ದ್ರವ್ಯದಂತೆ ಇದೆಯೆಂದು ಯೇಸು ಹೇಳಿದ್ದನು. (ಮತ್ತಾಯ 13:44) ನನ್ನ ಕುಟುಂಬವು ಆ ದ್ರವ್ಯವನ್ನು ಎಷ್ಟೋ ವರ್ಷಗಳ ಹಿಂದೆಯೇ ಕಂಡುಕೊಂಡಿತ್ತೆಂಬುದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಸುಮಾರು 80 ವರ್ಷಗಳಿಗಿಂತಲೂ ಹೆಚ್ಚು ಸಮಯದ ವರೆಗೆ ಯಾವುದೇ ವಿಷಾದವಿಲ್ಲದೆ ದೇವರಿಗೆ ಮಾಡಿರುವ ಸಮರ್ಪಿತ ಸೇವೆಯನ್ನು ನೋಡುವಾಗ, ಅದೆಂಥ ಮಹಾ ಸುಯೋಗವಾಗಿದೆ! ನನಗೆ ನನ್ನ ಜೀವನವನ್ನು ಪುನಃ ಒಮ್ಮೆ ಜೀವಿಸಲು ಸಾಧ್ಯವಾದರೆ, ನಾನು ಅದೇ ರೀತಿಯಲ್ಲಿ ಜೀವಿಸಲು ಬಯಸುವೆ, ಯಾಕೆಂದರೆ “ದೇವರ ಪ್ರೀತಿದಯೆಯು ಜೀವಕ್ಕಿಂತಲೂ ಶ್ರೇಷ್ಠ.”—ಕೀರ್ತನೆ 63:3, NW.
[ಪಾದಟಿಪ್ಪಣಿಗಳು]
a ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ ಎಂಬ ಪುಸ್ತಕದ ಶೀರ್ಷಿಕೆಯುಳ್ಳ ಸಂಪುಟಗಳ ಸರಣಿಗಳಲ್ಲಿ ದ ಫಿನಿಷ್ಡ್ ಮಿಸ್ಟರಿ ಏಳನೆಯದಾಗಿತ್ತು. ಮೊದಲ ಆರು ಸಂಚಿಕೆಗಳು ಚಾರ್ಲ್ಸ್ ಟೇಸ್ ರಸಲ್ರಿಂದ ಬರೆಯಲ್ಪಟ್ಟಿದ್ದವು. ದ ಫಿನಿಷ್ಡ್ ಮಿಸ್ಟರಿಯು ರಸಲ್ರ ಮರಣದ ನಂತರ ಪ್ರಕಾಶಿಸಲ್ಪಟ್ಟಿತು.
[ಪುಟ 23ರಲ್ಲಿರುವ ಚಿತ್ರ]
ನಾವು ಸಹೋದರ ರಧರ್ಫರ್ಡ್ರ ಭಾಷಣವನ್ನು ಓಹಾಯೋದ ಆ್ಯಲಿಯನ್ಸ್ನಲ್ಲಿ ಕೇಳಿಸಿಕೊಂಡೆವು
[ಪುಟ 23ರಲ್ಲಿರುವ ಚಿತ್ರ]
ರಾಲ್ಫ್ ನಿರ್ಮಿಸಿದ ಟ್ರೇಲರ್ನ ಮುಂದೆ ಅವರೊಂದಿಗೆ ನಿಂತಿರುವುದು
[ಪುಟ 24ರಲ್ಲಿರುವ ಚಿತ್ರ]
ಇಂದು ನನ್ನ ಇಬ್ಬರು ಮಕ್ಕಳೊಂದಿಗೆ