ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w00 10/1 ಪು. 30-31
  • “ಅಂದವಾದ ಬೆಟ್ಟದ ಮೇಕೆ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಅಂದವಾದ ಬೆಟ್ಟದ ಮೇಕೆ”
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
w00 10/1 ಪು. 30-31

“ಅಂದವಾದ ಬೆಟ್ಟದ ಮೇಕೆ”

ಒಂದು ಮೇಕೆಯನ್ನು ವರ್ಣಿಸಲಿಕ್ಕಾಗಿ ನಮ್ಮಲ್ಲಿ ಹೆಚ್ಚಿನವರು ಅಂದವಾದದ್ದು ಎಂಬ ಗುಣವಾಚಕವನ್ನು ಉಪಯೋಗಿಸಲಾರೆವು. ಮೇಕೆಗಳ ಬಗ್ಗೆ ಹೇಳುವಾಗ ನಾವು, ಅವು ಉಪಯೋಗಕ್ಕೆ ಬರುವಂತಹ ಪ್ರಾಣಿಗಳು, ಅವು ಏನನ್ನು ಬೇಕಾದರೂ ತಿನ್ನುತ್ತವೆ, ಅವುಗಳಿಂದ ನಮಗೆ ರುಚಿಕರವಾದ ಮಾಂಸ ದೊರಕುತ್ತದೆ ಮತ್ತು ಅವು ಪೌಷ್ಟಿಕಾಂಶಗಳಿಂದ ಕೂಡಿರುವ ಹಾಲನ್ನು ಕೊಡುತ್ತವೆ ಎಂದು ನೆನಸಬಹುದಾದರೂ, ಅವುಗಳನ್ನು ಅಂದವಾದವುಗಳೆಂದು ನಾವು ಕರೆಯುವುದೇ ಇಲ್ಲ ಅಲ್ಲವೇ?

ಆದರೆ, ಬೈಬಲು ಒಬ್ಬ ಪತ್ನಿಯನ್ನು “ಮನೋಹರವಾದ ಒಂದು ಜಿಂಕೆ ಹಾಗೂ ಅಂದವಾದ ಬೆಟ್ಟದ ಮೇಕೆ” (NW) ಎಂದು ವರ್ಣಿಸುತ್ತದೆ. (ಜ್ಞಾನೋಕ್ತಿ 5:​18, 19) ಜ್ಞಾನೋಕ್ತಿ ಪುಸ್ತಕದ ಬರಹಗಾರನಾದ ಸೊಲೊಮೋನನು, ಇಸ್ರಾಯೇಲಿನ ವನ್ಯಜೀವಿಗಳನ್ನು ಸೂಕ್ಷ್ಮವಾಗಿ ಗಮನಿಸಿದವನಾಗಿದ್ದನು. ಆದುದರಿಂದ, ಈ ರೂಪಕಾಲಂಕಾರವನ್ನು ಉಪಯೋಗಿಸುವುದಕ್ಕೆ ಅವನಿಗೆ ಸಕಾರಣವಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ. (1 ಅರಸು 4:​30-33) ಏಕೆಂದರೆ, ತನ್ನ ತಂದೆಯಾಗಿದ್ದ ದಾವೀದನಂತೆಯೇ, ಮೃತ ಸಮುದ್ರದ ತೀರದ ಬಳಿಯಿರುವ ಏಂಗೆದಿಯ ಸುತ್ತಲಿನ ಕ್ಷೇತ್ರಕ್ಕೆ ಆಗಾಗ್ಗೆ ಬರುತ್ತಿದ್ದ ಬೆಟ್ಟದ ಮೇಕೆಗಳನ್ನು ಅವನು ಗಮನಿಸಿದ್ದಿರಬಹುದು.

ಹತ್ತಿರದಲ್ಲಿದ್ದ ಯೂದಾಯದ ಮರುಭೂಮಿಯಲ್ಲಿ ವಾಸಿಸುತ್ತಿದ್ದ ಬೆಟ್ಟದ ಮೇಕೆಗಳ ಚಿಕ್ಕ ಮಂದೆಗಳು, ಏಂಗೆದಿಯ ನೀರಿನ ಒರತೆಯ ಬಳಿಗೆ ದಿನಾಲೂ ಭೇಟಿ ನೀಡುತ್ತವೆ. ಈ ಬಂಜರು ಭೂಮಿಯಲ್ಲಿ ಏಂಗೆದಿಯ ನೀರಿನ ಒರತೆಯು ಏಕಮಾತ್ರ ನೀರಿನ ಮೂಲವಾಗಿರುವುದರಿಂದ, ಅನೇಕ ಶತಮಾನಗಳಿಂದಲೂ ಏಂಗೆದಿಯು ಬೆಟ್ಟದ ಮೇಕೆಗಳ ಅಚ್ಚುಮೆಚ್ಚಿನ ನೀರಿನ ತಾಣವಾಗಿದೆ. ವಾಸ್ತವದಲ್ಲಿ, ಏಂಗೆದಿ ಎಂಬುದರ ಅರ್ಥ, “ಆಡಿನ ಮರಿಯ ಬುಗ್ಗೆ” ಎಂದಾಗಿರಬಹುದು. ಇದು ಈ ಕ್ಷೇತ್ರದಲ್ಲಿ ಆಡಿನ ಮರಿಗಳು ಕ್ರಮವಾಗಿ ಭೇಟಿ ನೀಡುತ್ತಿರುವುದಕ್ಕೆ ಒಂದು ಪುರಾವೆಯಾಗಿದೆ. ಅರಸನಾದ ಸೌಲನು ದಾವೀದನಿಗೆ ಹಿಂಸೆ ಕೊಡುತ್ತಿದ್ದಾಗ, ದಾವೀದನು ಈ ‘ಕಾಡುಗುರಿ ಬಂಡೆಗಳಲ್ಲಿ’ ಒಬ್ಬ ನಿರಾಶ್ರಿತನಂತೆ ವಾಸಿಸಬೇಕಾಯಿತು. ಮತ್ತು ದಾವೀದನು ಇಲ್ಲಿ ಸುರಕ್ಷಿತವಾದ ಆಶ್ರಯವನ್ನು ಕಂಡುಕೊಂಡನು.​—⁠1 ಸಮುವೇಲ 24:​1, 2.

ಏಂಗೆದಿಯಲ್ಲಿ, ಒಂದು ಹೆಣ್ಣು ಆಡು ಅಥವಾ ಬೆಟ್ಟದ ಮೇಕೆಯು, ಹುಷಾರಾಗಿ ಹೆಜ್ಜೆಯಿಡುತ್ತಾ, ಕಲ್ಲುಬಂಡೆಗಳುಳ್ಳ ಕಮರಿಯಲ್ಲಿ ಒಂದು ಗಂಡು ಮೇಕೆಯನ್ನು ಹಿಂಬಾಲಿಸುತ್ತಾ ನೀರಿನ ಒರತೆಯ ಬಳಿಗೆ ಹೋಗುತ್ತಿರುವುದನ್ನು ಈಗಲೂ ನೀವು ನೋಡಸಾಧ್ಯವಿದೆ. ಇದನ್ನು ನೋಡುವಾಗ, ಒಬ್ಬ ನಿಷ್ಠಾವಂತ ಹೆಂಡತಿಯನ್ನು ಒಂದು ಹೆಣ್ಣು ಆಡಿಗೆ ಏಕೆ ಹೋಲಿಸಲಾಗಿದೆ ಎಂಬುದನ್ನು ನೀವೇ ಗ್ರಹಿಸಲು ಆರಂಭಿಸುತ್ತೀರಿ. ಆ ಹೆಣ್ಣು ಮೇಕೆಯ ಶಾಂತ ಸ್ವಭಾವ ಹಾಗೂ ನಯನಾಜೂಕಿನ ವರ್ತನೆಯು ಸಹ ಹೆಣ್ತನದ ಸದ್ಗುಣಗಳನ್ನು ತೋರ್ಪಡಿಸುತ್ತದೆ. “ಅಂದ” ಎಂಬ ಶಬ್ದವು, ಬೆಟ್ಟದ ಮೇಕೆಯ ಚೆಲುವು ಹಾಗೂ ಗಾಂಭೀರ್ಯದಿಂದ ಕೂಡಿದ ಹೊರತೋರಿಕೆಯನ್ನು ಸೂಚಿಸುತ್ತದೆ ಎಂಬುದು ಸುಸ್ಪಷ್ಟ.a

ಹೆಣ್ಣು ಆಡು ಕಷ್ಟತೊಂದರೆಗಳನ್ನು ತಾಳಿಕೊಳ್ಳುವಷ್ಟು ಗಡುಸಾಗಿರಬೇಕು ಮತ್ತು ಅದೇ ಸಮಯದಲ್ಲಿ ನಯನಾಜೂಕಿನದ್ದಾಗಿರಬೇಕು. ಯೆಹೋವನು ಯೋಬನಿಗೆ ತಿಳಿಸಿದಂತೆ, ಬೆಟ್ಟದ ಮೇಕೆಯು ಕಡಿದಾದ ಕಲ್ಲುಬಂಡೆಗಳಲ್ಲಿ, ಅಂದರೆ ದುರ್ಗಮವಾದ ಬಂಡೆಗಳ ಮಧ್ಯೆ ಮರಿಗಳಿಗೆ ಜನ್ಮನೀಡುತ್ತದೆ. ಈ ಸ್ಥಳಗಳಲ್ಲಿ ಆಹಾರ ಸಿಗುವುದು ಸಹ ಅಪರೂಪ ಮತ್ತು ಉಷ್ಣತೆಯು ಸಹ ವಿಪರೀತವಾಗಿರುತ್ತದೆ. (ಯೋಬ 39:⁠1) ಈ ಎಲ್ಲ ತೊಡಕುಗಳು ಇರುವುದಾದರೂ, ಬೆಟ್ಟದ ಮೇಕೆಯು ತನ್ನ ಮರಿಗಳನ್ನು ತುಂಬ ಜೋಪಾನವಾಗಿ ಕಾಪಾಡುತ್ತದೆ. ಅಷ್ಟುಮಾತ್ರವಲ್ಲ, ತನ್ನ ಮರಿಗಳಿಗೆ ತನ್ನಷ್ಟೇ ಚುರುಕಾಗಿ ಬಂಡೆಗಳನ್ನು ಹತ್ತಲು ಹಾಗೂ ಬಂಡೆಗಳ ನಡುವೆ ಕುಪ್ಪಳಿಸಲು ಕಲಿಸುತ್ತದೆ. ಇದಲ್ಲದೆ, ಬೆಟ್ಟದ ಮೇಕೆಯು ನಿರ್ಭಯವಾಗಿ ತನ್ನ ಮರಿಗಳನ್ನು ಮಾಂಸಾಹಾರಿ ಪ್ರಾಣಿಗಳಿಂದ ಸಂರಕ್ಷಿಸುತ್ತದೆ. ಒಂದು ಬೆಟ್ಟದ ಮೇಕೆಯು ಅರ್ಧ ತಾಸಿನ ವರೆಗೆ ಒಂದು ಹದ್ದಿನೊಂದಿಗೆ ಸೆಣಸಾಡುತ್ತಿದ್ದದ್ದನ್ನು ಮತ್ತು ಅದರ ಮರಿಯು ಸಂರಕ್ಷಣೆಗಾಗಿ ತಾಯಿಯ ಕೆಳಗೆ ಮುದುರಿಕೊಂಡಿದ್ದನ್ನು ಒಬ್ಬ ವೀಕ್ಷಕನು ನೋಡಿದನು.

ತದ್ರೀತಿಯಲ್ಲಿ, ಕ್ರೈಸ್ತ ಪತ್ನಿಯರು ಹಾಗೂ ತಾಯಂದಿರು ತಮ್ಮ ಮಕ್ಕಳನ್ನು ಪ್ರತಿಕೂಲ ಸನ್ನಿವೇಶಗಳ ಕೆಳಗೆ ಬೆಳೆಸಬೇಕಾಗಿದೆ. ಬೆಟ್ಟದ ಮೇಕೆಯಂತೆ, ಈ ತಾಯಂದಿರು ಸಹ ತಮ್ಮ ದೇವದತ್ತ ಜವಾಬ್ದಾರಿಯನ್ನು ಪೂರೈಸುವುದರಲ್ಲಿ ಸಮರ್ಪಣಾ ಮನೋಭಾವ ಹಾಗೂ ನಿಸ್ವಾರ್ಥಭಾವವನ್ನು ತೋರಿಸುತ್ತಾರೆ. ಮತ್ತು ತಮ್ಮ ಮಕ್ಕಳನ್ನು ಆತ್ಮಿಕ ಅಪಾಯಗಳಿಂದ ಕಾಪಾಡಲಿಕ್ಕಾಗಿ ಧೈರ್ಯದಿಂದ ಹೋರಾಡುತ್ತಾರೆ. ಆದುದರಿಂದ, ಬೆಟ್ಟದ ಮೇಕೆ ಎಂಬ ರೂಪಕಾಲಂಕಾರದಿಂದ ಸೊಲೊಮೋನನು ಸ್ತ್ರೀಯರನ್ನು ಕಡೆಗಣಿಸಿ ಮಾತಾಡುತ್ತಿಲ್ಲ. ಬದಲಾಗಿ, ಸೊಲೊಮೋನನು ಒಬ್ಬ ಸ್ತ್ರೀಯ ಲಾವಣ್ಯ ಹಾಗೂ ಸೌಂದರ್ಯದ ಕಡೆಗೆ, ಅಂದರೆ ಅತ್ಯಂತ ಕಷ್ಟಕರವಾದ ಸನ್ನಿವೇಶಗಳ ಕೆಳಗೂ ಎದ್ದುಕಾಣುವಂತಹ ಅವರ ಆತ್ಮಿಕ ಗುಣಗಳ ಕಡೆಗೆ ಗಮನ ಸೆಳೆಯುತ್ತಿದ್ದನೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

[ಪಾದಟಿಪ್ಪಣಿ]

a ದ ನ್ಯೂ ಬ್ರೌನ್‌-ಡ್ರೈವರ್‌-ಬ್ರಿಗ್ಸ್‌-ಜೆಸಿನಿಯಸ್‌ ಹೀಬ್ರು ಆ್ಯಂಡ್‌ ಇಂಗ್ಲಿಷ್‌ ಲೆಕ್ಸಿಕನ್‌ಗನುಸಾರ, ಈ ಭಾಗದಲ್ಲಿ “ಅಂದ” ಎಂದು ಭಾಷಾಂತರಿಸಲ್ಪಟ್ಟಿರುವ ಚೆನ್‌ ಎಂಬ ಹೀಬ್ರು ಶಬ್ದದ ಅರ್ಥ, ‘ರೂಪ ಅಥವಾ ತೋರಿಕೆಯಲ್ಲಿ ಚೆಲವು ಹಾಗೂ ಗಾಂಭೀರ್ಯ’ ಎಂದಾಗಿದೆ.

[ಪುಟ 30, 31ರಲ್ಲಿರುವ ಚಿತ್ರಗಳು]

ಒಬ್ಬ ಕ್ರೈಸ್ತ ಪತ್ನಿ ಹಾಗೂ ತಾಯಿಯು, ತನ್ನ ದೇವದತ್ತ ಜವಾಬ್ದಾರಿಗಳನ್ನು ಪೂರೈಸುವಾಗ, ಸುಂದರವಾದ ಆತ್ಮಿಕ ಗುಣಗಳನ್ನು ತೋರ್ಪಡಿಸುತ್ತಾಳೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ