ದೇವರನ್ನು ಘನಪಡಿಸುವವರು ಧನ್ಯರು
“ಕರ್ತನೇ, [“ಓ ಯೆಹೋವನೇ,” Nw] . . . ಎಲ್ಲಾ ಜನಾಂಗಗಳು ಬಂದು ನಿನಗೆ ಅಡ್ಡಬಿದ್ದು ನಿನ್ನ ನಾಮವನ್ನು ಘನಪಡಿಸುವವು.”—ಕೀರ್ತನೆ 86:9.
1. ನಾವು ನಿರ್ಜೀವ ಸೃಷ್ಟಿಯನ್ನು ಮೀರಿಸುವಂಥ ರೀತಿಗಳಲ್ಲಿ ದೇವರನ್ನು ಘನಪಡಿಸಲು ಏಕೆ ಶಕ್ತರಾಗಿದ್ದೇವೆ?
ಯೆಹೋವನು ತನ್ನ ಸರ್ವ ಸೃಷ್ಟಿಯಿಂದಲೂ ಸ್ತುತಿಯನ್ನು ಪಡೆಯಲು ಅರ್ಹನು. ಆತನ ನಿರ್ಜೀವ ಸೃಷ್ಟಿಯು ಆತನಿಗೆ ಮೌನವಾಗಿ ಘನತೆ ಸಲ್ಲಿಸುತ್ತದೆ. ಆದರೆ, ಮಾನವರಾದ ನಮಗೆ ವಿವೇಚಿಸುವ, ಗ್ರಹಿಸುವ, ಮಾನ್ಯತೆ ತೋರಿಸುವ ಮತ್ತು ಆರಾಧಿಸುವ ಸಾಮರ್ಥ್ಯವಿದೆ. ಆದುದರಿಂದ, “ಸರ್ವಭೂನಿವಾಸಿಗಳೇ, ದೇವರಿಗೆ ಜಯಧ್ವನಿ ಮಾಡಿರಿ. ಆತನ ನಾಮದ ಮಹತ್ತನ್ನು ಕೀರ್ತಿಸಿರಿ; ಆತನ ಪ್ರಭಾವವನ್ನು ವರ್ಣಿಸುತ್ತಾ ಕೊಂಡಾಡಿರಿ” ಎಂದು ಕೀರ್ತನೆಗಾರನು ಹೇಳುವುದು ನಮಗೇ.—ಕೀರ್ತನೆ 66:1, 2.
2. ದೇವರ ನಾಮಕ್ಕೆ ಘನವನ್ನು ಸಲ್ಲಿಸುವ ಆಜ್ಞೆಗೆ ಯಾರು ಪ್ರತಿವರ್ತನೆ ತೋರಿಸಿದ್ದಾರೆ, ಮತ್ತು ಏಕೆ?
2 ಮಾನವಕುಲದಲ್ಲಿ ಹೆಚ್ಚಿನವರು ದೇವರನ್ನು ಒಪ್ಪಿಕೊಳ್ಳಲು ಅಥವಾ ಆತನನ್ನು ಘನಪಡಿಸಲು ನಿರಾಕರಿಸುತ್ತಾರೆ. ಆದರೂ, 235 ದೇಶಗಳಲ್ಲಿ, 60 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಯೆಹೋವನ ಸಾಕ್ಷಿಗಳು, ದೇವರು ನಿರ್ಮಿಸಿರುವ ವಿಷಯಗಳ ಮೂಲಕ ತಾವು ‘ಕಣ್ಣಿಗೆ ಕಾಣದಿರುವ’ ದೇವರ ‘ಗುಣಲಕ್ಷಣಗಳನ್ನು’ ನೋಡುತ್ತೇವೆಂದೂ ಸೃಷ್ಟಿಯ ಮೌನಸಾಕ್ಷಿಯನ್ನು ‘ಕೇಳಿಸಿಕೊಳ್ಳು’ತ್ತೇವೆಂದೂ ತೋರಿಸುತ್ತಾರೆ. (ರೋಮಾಪುರ 1:20; ಕೀರ್ತನೆ 19:2, 3) ಅವರು ಬೈಬಲಿನ ಅಧ್ಯಯನವನ್ನು ಮಾಡುವ ಮೂಲಕ ಯೆಹೋವನ ಬಗ್ಗೆ ತಿಳಿಯಲೂ, ಮತ್ತು ಆತನನ್ನು ಪ್ರೀತಿಸಲೂ ಆರಂಭಿಸಿದ್ದಾರೆ. ಕೀರ್ತನೆ 86:9, 10 ಮುಂತಿಳಿಸಿದ್ದು: “ಕರ್ತನೇ, [“ಓ ಯೆಹೋವನೇ,” NW] ನಿನ್ನಿಂದುಂಟಾದ ಎಲ್ಲಾ ಜನಾಂಗಗಳು ಬಂದು ನಿನಗೆ ಅಡ್ಡಬಿದ್ದು ನಿನ್ನ ನಾಮವನ್ನು ಘನಪಡಿಸುವವು. ಮಹೋನ್ನತನೂ ಮಹತ್ಕಾರ್ಯಗಳನ್ನು ನಡಿಸುವವನೂ ನೀನು; ದೇವರು ನೀನೊಬ್ಬನೇ.”
3. “ಮಹಾ ಸಮೂಹವು” ‘ಹಗಲಿರುಳು ಸೇವೆ’ಮಾಡುವುದು ಹೇಗೆ?
3 ಅದೇ ರೀತಿಯಲ್ಲಿ ಪ್ರಕಟನೆ 7:9, 15, ಆರಾಧಕರ ಒಂದು “ಮಹಾಸಮೂಹವು” “[ದೇವರ] ಆಲಯದಲ್ಲಿ ಹಗಲಿರುಳು ಆತನ ಸೇವೆಮಾಡುತ್ತಾ” ಇರುವುದನ್ನು ವರ್ಣಿಸುತ್ತದೆ. ಇದರ ಅರ್ಥವು, ದೇವರು ಅವರಿಂದ ಅಕ್ಷರಾರ್ಥವಾಗಿ ಎಡೆಬಿಡದ ಸ್ತುತಿಯನ್ನು ತಗಾದೆ ಮಾಡಿ ಕೇಳುತ್ತಾನೆಂದಾಗಿರುವುದಿಲ್ಲ ಬದಲಿಗೆ, ಆತನ ಆರಾಧಕರು ಒಂದು ಭೌಗೋಳಿಕ ಸಂಸ್ಥೆಯಾಗಿದ್ದಾರೆಂದಾಗಿದೆ. ಆದುದರಿಂದ, ಕೆಲವು ದೇಶಗಳಲ್ಲಿ ರಾತ್ರಿಯಾಗಿರುವಾಗ, ಭೂಗೋಳದ ಇನ್ನೊಂದು ಭಾಗದಲ್ಲಿರುವ ದೇವರ ಸೇವಕರು ಸಾಕ್ಷಿಕಾರ್ಯದಲ್ಲಿ ಕಾರ್ಯಮಗ್ನರಾಗಿರುತ್ತಾರೆ. ಈ ಕಾರಣದಿಂದ, ಯೆಹೋವನಿಗೆ ಘನಸಲ್ಲಿಸುವವರ ಮೇಲೆ ಸೂರ್ಯನು ಅಸ್ತಮಿಸುವುದೇ ಇಲ್ಲವೆಂದು ಹೇಳಸಾಧ್ಯವಿದೆ. ಬೇಗನೆ, “ಶ್ವಾಸವಿರುವದೆಲ್ಲವೂ” ಯೆಹೋವನ ಸುತ್ತಿಯಲ್ಲಿ ಧ್ವನಿಯನ್ನೆತ್ತುವುದು. (ಕೀರ್ತನೆ 150:6) ಆದರೆ ಈ ಮಧ್ಯೆ, ದೇವರನ್ನು ಘನಪಡಿಸುವುದರಲ್ಲಿ ವ್ಯಕ್ತಿಪರವಾಗಿ ನಾವೇನು ಮಾಡಬಲ್ಲೆವು? ನಮ್ಮ ಮುಂದೆ ಯಾವ ಕಷ್ಟಗಳು ಎದುರಾಗಬಹುದು? ಮತ್ತು ದೇವರನ್ನು ಘನಪಡಿಸುವವರಿಗೆ ಯಾವ ಆಶೀರ್ವಾದಗಳು ಕಾದಿರುತ್ತವೆ? ಇದಕ್ಕೆ ಉತ್ತರವಾಗಿ, ಇಸ್ರಾಯೇಲ್ಯರ ಗಾದ್ ಕುಲದ ಸಂಬಂಧದಲ್ಲಿರುವ ಒಂದು ಬೈಬಲ್ ವೃತ್ತಾಂತವನ್ನು ನಾವು ಪರಿಗಣಿಸೋಣ.
ಪ್ರಾಚೀನಕಾಲದ ಒಂದು ಪಂಥಾಹ್ವಾನ
4. ಗಾದ್ ಕುಲದವರು ಯಾವ ಪಂಥಾಹ್ವಾನವನ್ನು ಎದುರಿಸಿದರು?
4 ವಾಗ್ದತ್ತ ದೇಶವನ್ನು ಪ್ರವೇಶಿಸುವ ಮೊದಲು, ಇಸ್ರಾಯೇಲ್ಯರ ಗಾದ್ ಕುಲದ ಸದಸ್ಯರು ತಮಗೆ ನೆಲೆಸಲು ಯೊರ್ದನಿನ ಪೂರ್ವಭಾಗದಲ್ಲಿರುವ ಹುಲ್ಲುಗಾವಲು ಪ್ರದೇಶ ಬೇಕೆಂದು ಕೇಳಿಕೊಂಡರು. (ಅರಣ್ಯಕಾಂಡ 32:1-5) ಆದರೆ ಅಲ್ಲಿ ಜೀವಿಸಲು ಗಂಭೀರವಾದ ಪಂಥಾಹ್ವಾನಗಳನ್ನು ನಿಭಾಯಿಸಬೇಕಾಗುತ್ತಿತ್ತು. ಯೊರ್ದನಿನ ಪಶ್ಚಿಮ ದಿಕ್ಕಿನಲ್ಲಿದ್ದ ಕುಲಗಳಿಗೆ ಸೈನ್ಯಾಕ್ರಮಣಕ್ಕೆ ನೈಸರ್ಗಿಕ ರೀತಿಯಲ್ಲಿ ತಡೆಯಾಗಿದ್ದ ಯೊರ್ದನ್ ಕಣಿವೆಯ ಸಂರಕ್ಷಣೆಯಿತ್ತು. (ಯೆಹೋಶುವ 3:13-17) ಆದರೆ ಯೊರ್ದನಿನ ಪೂರ್ವದಲ್ಲಿದ್ದ ಪ್ರದೇಶಗಳ ವಿಷಯದಲ್ಲಿ ಜಾರ್ಜ್ ಆ್ಯಡಮ್ ಸ್ಮಿಥ್‌ರವರ ಪರಿಶುದ್ಧ ದೇಶದ ಐತಿಹಾಸಿಕ ಭೂಗೋಳಶಾಸ್ತ್ರ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “[ಅವು] ಹೆಚ್ಚುಕಡಿಮೆ ಯಾವದೇ ತಡೆಯಿಲ್ಲದೆ ಮಹಾ ಅರೇಬಿಯನ್ ಪ್ರಸ್ಥಭೂಮಿಯಲ್ಲಿ ಸಮತಲವಾಗಿ ಹರಡಿಕೊಂಡಿವೆ. ಹೀಗಿರುವುದರಿಂದ ಅವು ಎಲ್ಲ ಯುಗಗಳಲ್ಲಿಯೂ, ಮೇವಿಗಾಗಿ ಹಸಿದಿರುವ, ಪ್ರತಿ ವರ್ಷವೂ ಹುಲ್ಲುಗಾವಲುಗಳನ್ನು ಆಕ್ರಮಿಸುವ ಪಶುಪಾಲ ಕುಲಗಳವರ ಆಕ್ರಮಣಕ್ಕೆ ತುತ್ತಾಗುತ್ತಿದ್ದವು.”
5. ಗಾದ್ ಕುಲದವರು ಆಕ್ರಮಿಸಲ್ಪಡುವಾಗ ಏನು ಮಾಡುವಂತೆ ಯಾಕೋಬನು ಪ್ರೋತ್ಸಾಹಿಸಿದನು?
5 ಇಂತಹ ಎಡೆಬಿಡದ ಒತ್ತಡವನ್ನು ಗಾದ್ ಕುಲದವರು ಹೇಗೆ ನಿಭಾಯಿಸಾರು? ಅವರ ಮೂಲಪಿತನಾದ ಯಾಕೋಬನು ತನ್ನ ಮರಣಶಯ್ಯೆಯ ಪ್ರವಾದನೆಯಲ್ಲಿ, “ಗಾದನ ಸಂಗತಿ—ಸುಲಿಗೆಮಾಡುವವರು ದಂಡೆತ್ತಿ ಅವನ ಮೇಲೆ ಬೀಳಲು ಇವನು ಅವರನ್ನು ಹಿಮ್ಮೆಟ್ಟಿಕೊಂಡು ಹೋಗುವನು” ಎಂದು ಮುಂತಿಳಿಸಿದ್ದನು. (ಆದಿಕಾಂಡ 49:19) ಒಮ್ಮೆ ಕಣ್ಣಾಡಿಸುವಲ್ಲಿ, ಆ ಮಾತುಗಳು ನಿರಾಶಾಜನಕವಾಗಿ ತೋರಬಹುದು. ಆದರೆ ವಾಸ್ತವದಲ್ಲಿ, ಅವು ಗಾದ್ ಕುಲದವರು ಏಟಿಗೆ ಏಟು ಕೊಡುವಂತೆ ನೀಡಲಾದ ಒಂದು ಆಜ್ಞೆಯನ್ನು ಸೂಚಿಸುತ್ತಿದ್ದವು. ಹಾಗೆ ಮಾಡುವಲ್ಲಿ ಆ ಲೂಟಿಗಾರರು ಅವಮಾನಿತರಾಗಿ ಹಿಮ್ಮೆಟ್ಟುವರೆಂದೂ ಗಾದನ ಕುಲದವರು ಅವರ ಹಿಂದಿನಿಂದ ಬೆನ್ನಟ್ಟಿಕೊಂಡುಹೋಗುವರೆಂದೂ ಯಾಕೋಬನು ಆಶ್ವಾಸನೆ ನೀಡಿದನು.
ಇಂದು ನಮ್ಮ ಆರಾಧನೆಗಿರುವ ಸವಾಲುಗಳು
6, 7. ಇಂದಿನ ಕ್ರೈಸ್ತರ ಸನ್ನಿವೇಶವು ಹೇಗೆ ಗಾದ್ ಕುಲದವರ ಸನ್ನಿವೇಶದಂತಿದೆ?
6 ಗಾದ್ ಕುಲದವರಂತೆಯೇ ಇಂದು ಕ್ರೈಸ್ತರು ಸೈತಾನನ ವ್ಯವಸ್ಥೆಯ ಒತ್ತಡ ಮತ್ತು ಪ್ರತಿಬಂಧಗಳಿಗೆ ಒಡ್ಡಲ್ಪಡುತ್ತಾರೆ. ಆದರೆ ಅವುಗಳೊಂದಿಗೆ ಸೆಣಸಾಡುವುದರಿಂದ ತಪ್ಪಿಸುವ ಯಾವುದೇ ಚಮತ್ಕಾರದ ಸಂರಕ್ಷಣೆಯೂ ನಮಗಿರುವುದಿಲ್ಲ. (ಯೋಬ 1:10-12) ನಮ್ಮಲ್ಲಿ ಅನೇಕರಿಗೆ ಶಾಲೆಗೆ ಹಾಜರಾಗುವ, ಜೀವನಕ್ಕಾಗಿ ದುಡಿಯುವ ಮತ್ತು ಮಕ್ಕಳನ್ನು ಬೆಳೆಸುವ ಒತ್ತಡಗಳನ್ನು ನಿಭಾಯಿಸಲೇ ಬೇಕಾಗುತ್ತದೆ. ಅಷ್ಟುಮಾತ್ರವಲ್ಲದೆ, ವೈಯಕ್ತಿಕವೂ ಆಂತರಿಕವೂ ಆದ ಒತ್ತಡಗಳೂ ಇವೆ. ಕೆಲವರು ಗಂಭೀರವಾದ ದೌರ್ಬಲ್ಯ ಅಥವಾ ವ್ಯಾಧಿಯ ರೂಪದಲ್ಲಿ ‘ಶರೀರದಲ್ಲಿನ ಶೂಲ’ವನ್ನು ಸಹಿಸಿಕೊಳ್ಳಬೇಕಾಗುತ್ತದೆ. (2 ಕೊರಿಂಥ 12:7-10) ಇನ್ನಿತರರು ತಮ್ಮ ಬಗ್ಗೆ ಇರುವ ಕೀಳರಿಮೆಯ ಭಾವನೆಗಳಿಂದ ಬಾಧಿಸಲ್ಪಡುತ್ತಾರೆ. ವೃದ್ಧ ಕ್ರೈಸ್ತರನ್ನು ವೃದ್ಧಾಪ್ಯದ “ಕಷ್ಟದ ದಿನಗಳು,” ಒಂದುಕಾಲದಲ್ಲಿ ಅವರಿಗಿದ್ದಂಥ ಚೈತನ್ಯದಿಂದ ಸೇವೆಮಾಡುವುದನ್ನು ತಡೆಯಬಹುದು.—ಪ್ರಸಂಗಿ 12:1.
7 “ನಾವು ಹೋರಾಡುವದು . . . ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆ”ಯೊಂದಿಗೆ ಎಂದು ಅಪೊಸ್ತಲ ಪೌಲನು ನಮಗೆ ಜ್ಞಾಪಕ ಹುಟ್ಟಿಸುತ್ತಾನೆ. (ಎಫೆಸ 6:12) ನಾವು ಸತತವಾಗಿ ‘ಪ್ರಾಪಂಚಿಕ ಆತ್ಮಕ್ಕೆ’, ಅಂದರೆ ಸೈತಾನನೂ ಅವನ ದೆವ್ವಗಳೂ ಪ್ರೋತ್ಸಾಹಿಸುವ ದಂಗೆಯ ಮನೋಭಾವ ಮತ್ತು ನೈತಿಕ ಭ್ರಷ್ಟತೆಗೆ ಒಡ್ಡಲ್ಪಡುತ್ತಿದ್ದೇವೆ. (1 ಕೊರಿಂಥ 2:12; ಎಫೆಸ 2:2, 3) ದೇವಭಯವಿದ್ದ ಲೋಟನಂತೆ ನಾವು ಸಹ ನಮ್ಮ ಸುತ್ತಮುತ್ತಲಿನ ಜನರು ನುಡಿಯುವ ಮತ್ತು ಮಾಡುವ ಅನೈತಿಕ ವಿಷಯಗಳಿಂದ ವ್ಯಥೆಗೊಳ್ಳಬಹುದು. (2 ಪೇತ್ರ 2:7) ನಾವು ಸೈತಾನನ ನೇರವಾದ ಆಕ್ರಮಣಕ್ಕೂ ಬಲಿಬೀಳುತ್ತೇವೆ. ಸೈತಾನನು “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು” ಹೇಳುವ ಅಭಿಷಿಕ್ತರ ಉಳಿಕೆಯವರ ಮೇಲೆ ಯುದ್ಧ ಮಾಡುತ್ತಿದ್ದಾನೆ. (ಪ್ರಕಟನೆ 12:17) ಯೇಸುವಿನ “ಬೇರೆ ಕುರಿಗಳು” ಸಹ ನಿಷೇಧ ಮತ್ತು ಹಿಂಸೆಗಳ ರೂಪದಲ್ಲಿ ಸೈತಾನನ ಆಕ್ರಮಣವನ್ನು ಅನುಭವಿಸುತ್ತಿದ್ದಾರೆ.—ಯೋಹಾನ 10:16.
ಬಿಟ್ಟುಕೊಡಬೇಕೊ ಅಥವಾ ಅದಕ್ಕೆ ವಿರುದ್ಧವಾಗಿ ಹೋರಾಡಬೇಕೊ?
8. ನಾವು ಸೈತಾನನ ಆಕ್ರಮಣಗಳಿಗೆ ಹೇಗೆ ಪ್ರತಿವರ್ತಿಸಬೇಕು, ಮತ್ತು ಏಕೆ?
8 ಸೈತಾನನ ಆಕ್ರಮಣಗಳಿಗೆ ನಮ್ಮ ಪ್ರತಿವರ್ತನೆ ಏನಾಗಿರಬೇಕು? ನಾವು ಪ್ರಾಚೀನಕಾಲದ ಗಾದ್ ಕುಲದವರಂತೆ ಆಧ್ಯಾತ್ಮಿಕವಾಗಿ ಬಲಾಢ್ಯರಾಗಿದ್ದು, ದೇವರ ನಿರ್ದೇಶನಗಳ ಮೇರೆಗೆ ಅವುಗಳನ್ನು ಎದುರಿಸಿ ಹೋರಾಡಬೇಕು. ಆದರೆ ವಿಷಾದಕರವಾಗಿ, ಕೆಲವರು ಜೀವನದ ಒತ್ತಡಗಳಿಗೆ ಮಣಿಯಲಾರಂಭಿಸಿ, ಆಧ್ಯಾತ್ಮಿಕ ಜವಾಬ್ದಾರಿಗಳನ್ನು ಅಸಡ್ಡೆ ಮಾಡುತ್ತಿದ್ದಾರೆ. (ಮತ್ತಾಯ 13:20-22) ಒಬ್ಬ ಸಾಕ್ಷಿಯು ತನ್ನ ಸಭೆಯಲ್ಲಿ ಕೂಟಗಳ ಹಾಜರಿ ಕಡಮೆಯಾಗಿರುವುದಕ್ಕೆ ಕಾರಣವು, “ಸಹೋದರರು ನಿಜವಾಗಿಯೂ ದಣಿದಿರುತ್ತಾರೆ. ಅವರೆಲ್ಲರೂ ವಿಪರೀತ ಒತ್ತಡದ ಕೆಳಗಿದ್ದಾರೆ” ಎಂದು ಹೇಳಿ ವಿವರಿಸಿದನು. ನಿಜ, ಇಂದು ಜನರು ಅನೇಕ ಕಾರಣಗಳಿಂದಾಗಿ ದಣಿಯುತ್ತಾರೆ. ಆದುದರಿಂದ, ದೇವರ ಆರಾಧನೆಯನ್ನು ಇನ್ನೊಂದು ಒತ್ತಡವಾಗಿ, ಹೊರೆದಾಯಕ ಹಂಗಾಗಿ ವೀಕ್ಷಿಸುವುದು ಸುಲಭ. ಆದರೆ ಅದು ಸ್ವಸ್ಥವಾದ ಇಲ್ಲವೆ ಸರಿಯಾದ ದೃಷ್ಟಿಕೋನವೊ?
9. ಕ್ರಿಸ್ತನ ನೊಗವನ್ನು ತೆಗೆದುಕೊಳ್ಳುವುದು ವಿಶ್ರಾಂತಿಗೆ ಹೇಗೆ ನಡೆಸುತ್ತದೆ?
9 ಯೇಸು ತನ್ನ ದಿನಗಳಲ್ಲಿ, ಜೀವನದ ಒತ್ತಡಗಳಿಂದ ತೀರ ಬಳಲಿದ್ದ ಜನರಿಗೆ, “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು” ಎಂದು ಹೇಳಿದ್ದರ ಕುರಿತು ಪರಿಗಣಿಸಿರಿ. ವಿಶ್ರಾಂತಿಯು ದೇವರ ಸೇವೆಯನ್ನು ಕಡಿಮೆ ಮಾಡುವುದರಿಂದ ಬರುತ್ತದೆಂದು ಯೇಸು ಹೇಳಿದನೊ? ಇಲ್ಲ, ಬದಲಾಗಿ ಅವನಂದದ್ದು: “ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ. ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು.” ಒಂದು ನೊಗವು, ಮರ ಅಥವಾ ಲೋಹದಿಂದ ಮಾಡಲ್ಪಟ್ಟಿರುವ ಜೋಡಣೆಯಾಗಿದ್ದು, ಮನುಷ್ಯ ಅಥವಾ ಮೃಗವು ಭಾರವಾದ ಹೊರೆಯನ್ನು ಸಾಗಿಸುವಂತೆ ಸಾಧ್ಯಮಾಡುತ್ತದೆ. ಹಾಗಾದರೆ, ಅಂತಹ ಒಂದು ನೊಗವನ್ನು ಒಬ್ಬನು ತೆಗೆದುಕೊಳ್ಳಬಯಸುವುದಾದರೂ ಏಕೆ? ನಾವು ಈಗಾಗಲೇ ‘ಹೊರೆಹೊತ್ತಿರುವವರು’ ಆಗಿದ್ದೇವಲ್ಲವೆ? ಹೌದು, ಆದರೆ ಗ್ರೀಕ್ ಗ್ರಂಥಪಾಠವನ್ನು ಹೀಗೂ ಓದಸಾಧ್ಯವಿದೆ: “ನನ್ನೊಂದಿಗೆ ನನ್ನ ನೊಗದಡಿಗೆ ಬನ್ನಿರಿ.” ಸ್ವಲ್ಪ ಆಲೋಚಿಸಿರಿ: ನಮ್ಮ ಹೊರೆಯನ್ನು ನಮ್ಮೊಂದಿಗೆ ಎಳೆಯಲು ಯೇಸು ಸಹಾಯ ನೀಡುತ್ತಾನೆ! ಅಂದರೆ, ನಮ್ಮ ಸ್ವಂತ ಶಕ್ತಿಯಿಂದ ನಾವು ಅದನ್ನು ಹೊತ್ತುಕೊಳ್ಳಬೇಕೆಂದಿಲ್ಲ.—ಮತ್ತಾಯ 9:36; 11:28, 29, NW ಪಾದಟಿಪ್ಪಣಿ; 2 ಕೊರಿಂಥ 4:7.
10. ದೇವರನ್ನು ಘನಪಡಿಸುವ ನಮ್ಮ ಪ್ರಯತ್ನಗಳಿಂದ ಏನು ಫಲಿಸುತ್ತದೆ?
10 ನಾವು ಶಿಷ್ಯತ್ವದ ನೊಗವನ್ನು ತೆಗೆದುಕೊಳ್ಳುವಾಗ ಸೈತಾನನ ವಿರುದ್ಧ ಹೋರಾಡುತ್ತಿದ್ದೇವೆ. “ಸೈತಾನನನ್ನು ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು,” ಎಂದು ಯಾಕೋಬ 4:7 ತಿಳಿಸುತ್ತದೆ. ಅಂದರೆ ಹಾಗೆ ಮಾಡುವುದು ಸುಲಭವೆಂದು ಇದರ ಅರ್ಥವಲ್ಲ. ದೇವರ ಸೇವೆ ಮಾಡುವುದು ಗಣನೀಯ ಪ್ರಯತ್ನವನ್ನು ಅಗತ್ಯಪಡಿಸುತ್ತದೆ. (ಲೂಕ 13:24) ಆದರೆ ಕೀರ್ತನೆ 126:5ರಲ್ಲಿ ಬೈಬಲ್ ಈ ವಚನವನ್ನೀಯುತ್ತದೆ: “ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು.” ಹೌದು, ನಾವು ಆರಾಧಿಸುವಂಥ ದೇವರು ಕೃತಘ್ನನಲ್ಲ. ಆತನು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು” ಕೊಡುವವನು, ಮತ್ತು ತನ್ನನ್ನು ಘನಪಡಿಸುವವರನ್ನು ಆಶೀರ್ವದಿಸುವವನು ಆಗಿದ್ದಾನೆ.—ಇಬ್ರಿಯ 11:6.
ರಾಜ್ಯವನ್ನು ಸಾರುವವರೋಪಾದಿ ದೇವರನ್ನು ಘನಪಡಿಸುವುದು
11. ಕ್ಷೇತ್ರ ಶುಶ್ರೂಷೆಯು ಸೈತಾನನ ಆಕ್ರಮಣಗಳ ವಿರುದ್ಧ ಪ್ರತಿರಕ್ಷಣೆಯನ್ನು ಹೇಗೆ ಒದಗಿಸುತ್ತದೆ?
11 “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂದು ಯೇಸು ಆಜ್ಞಾಪಿಸಿದನು. ಸಾರುವ ಕೆಲಸವೇ ನಾವು ದೇವರಿಗೆ “ಸ್ತೋತ್ರಯಜ್ಞ”ವನ್ನು ಅರ್ಪಿಸುವ ಪ್ರಧಾನ ರೀತಿಯಾಗಿದೆ. (ಮತ್ತಾಯ 28:19; ಇಬ್ರಿಯ 13:15) “ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿ”ಕೊಳ್ಳುವುದು ಸಹ, ಸೈತಾನನ ಆಕ್ರಮಣಗಳ ವಿರುದ್ಧ ಪ್ರತಿರಕ್ಷಣೆಯಾಗಿರುವ ನಮ್ಮ “ಸರ್ವಾಯುಧಗಳ” ಆವಶ್ಯಕ ಭಾಗವಾಗಿದೆ. (ಎಫೆಸ 6:11-15) ಕ್ಷೇತ್ರ ಶುಶ್ರೂಷೆಯಲ್ಲಿ ದೇವರನ್ನು ಸ್ತುತಿಸುವುದು ನಮ್ಮ ನಂಬಿಕೆಯನ್ನು ಪೋಷಿಸುವ ಒಂದು ಅತ್ಯುಷ್ಕೃಷ್ಟ ವಿಧಾನವಾಗಿದೆ. (2 ಕೊರಿಂಥ 4:13) ನಕಾರಾತ್ಮಕ ಯೋಚನೆಗಳು ನಮ್ಮ ಮನಸ್ಸನ್ನು ಕಾಡಿಸದಿರುವಂತೆ ಇದು ಸಹಾಯ ಮಾಡುತ್ತದೆ. (ಫಿಲಿಪ್ಪಿ 4:8) ಕ್ಷೇತ್ರ ಶುಶ್ರೂಷೆಯಲ್ಲಿನ ನಮ್ಮ ಭಾಗವಹಿಸುವಿಕೆಯಿಂದ ನಾವು ಜೊತೆ ಆರಾಧಕರೊಂದಿಗೆ ಭಕ್ತಿವರ್ಧಕ ಸಹವಾಸದಲ್ಲಿ ಆನಂದಿಸುವ ಅವಕಾಶ ನಮಗೆ ದೊರೆಯುತ್ತದೆ.
12, 13. ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವುದು ಕುಟುಂಬಗಳಿಗೆ ಹೇಗೆ ಪ್ರಯೋಜನ ನೀಡಬಲ್ಲದು? ದೃಷ್ಟಾಂತಿಸಿರಿ.
12 ಸಾರುವ ಕೆಲಸವು ಒಂದು ಹಿತಕರವಾದ ಕುಟುಂಬ ಚಟುವಟಿಕೆಯೂ ಆಗಿರಬಲ್ಲದು. ಎಳೆಯರಿಗೆ ಸಮತೋಲನವುಳ್ಳ ವಿನೋದವಿಹಾರವು ಅಗತ್ಯವೆಂಬುದು ನಿಜ. ಆದರೂ, ಕ್ಷೇತ್ರ ಶುಶ್ರೂಷೆಯಲ್ಲಿ ಕುಟುಂಬವಾಗಿ ಕಳೆಯುವಂಥ ಸಮಯವು ಇಷ್ಟವಿಲ್ಲದೆ ಬಲವಂತವಾಗಿ ಮಾಡುವ ಸಮಯವಾಗಿರಬೇಕೆಂದಿಲ್ಲ. ಮಕ್ಕಳು ಶುಶ್ರೂಷೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವಂತೆ ತರಬೇತುನೀಡುವ ಮೂಲಕ ಹೆತ್ತವರು ಆ ಸಮಯವನ್ನು ಹೆಚ್ಚು ಆನಂದದಾಯಕವಾಗಿ ಮಾಡಬಲ್ಲರು. ತಮಗೆ ಕೊಡಲ್ಪಟ್ಟ ಕೆಲಸವನ್ನು ಚೆನ್ನಾಗಿ ಮಾಡುವಾಗ ಅದರಲ್ಲಿ ಸಂತೋಷಪಡುವ ಪ್ರವೃತ್ತಿ ಚಿಕ್ಕವರಿಗಿರುತ್ತದಲ್ಲವೆ? ಹೆತ್ತವರು ಸಮತೋಲನವನ್ನು ತೋರಿಸುತ್ತಾ ಮಕ್ಕಳು ಅವರ ಮಿತಿಗಿಂತಲೂ ಹೆಚ್ಚನ್ನು ಮಾಡುವಂತೆ ಒತ್ತಾಯಿಸದಿರುವ ಮೂಲಕ ಸೇವೆಯಲ್ಲಿ ಅವರು ಆನಂದಿಸುವಂತೆ ಸಹಾಯಮಾಡಬಲ್ಲರು.—ಆದಿಕಾಂಡ 33:13, 14.
13 ಇದಲ್ಲದೆ, ದೇವರನ್ನು ಕೂಡಿ ಸ್ತುತಿಸುವ ಕುಟುಂಬವು ಆಪ್ತ ಬಂಧಗಳನ್ನು ಬೆಸೆದುಕೊಳ್ಳುತ್ತದೆ. ಒಬ್ಬ ಸಹೋದರಿಯ ಬಗ್ಗೆ ಯೋಚಿಸಿರಿ. ಅವಳ ಅವಿಶ್ವಾಸಿ ಗಂಡನು ಅವಳನ್ನೂ, ಅವಳೊಂದಿಗೆ ಐದು ಮಂದಿ ಮಕ್ಕಳನ್ನು ತೊರೆದು ಹೋದನು. ಉದ್ಯೋಗಮಾಡಿ ಮಕ್ಕಳಿಗೆ ಭೌತಿಕವಾಗಿ ಒದಗಿಸುವ ಸವಾಲು ಈಗ ಆಕೆಯ ಮುಂದೆ ಬಂದು ನಿಂತಿತು. ಇದರಿಂದಾಗಿ ಆಕೆ ಪೂರ್ತಿ ದಣಿದು ಮಕ್ಕಳ ಆಧ್ಯಾತ್ಮಿಕ ಅಭಿರುಚಿಗಳನ್ನು ಅಸಡ್ಡೆ ಮಾಡಿದಳೊ? ಆಕೆ ಜ್ಞಾಪಿಸಿಕೊಳ್ಳುವುದು: “ನಾನು ಬೈಬಲನ್ನು ಮತ್ತು ಬೈಬಲ್ ಸಾಹಿತ್ಯಗಳನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನಮಾಡಿದೆ ಮತ್ತು ಓದಿದ್ದನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸಿದೆ. ನಾನು ಮಕ್ಕಳನ್ನು ಕೂಟಗಳಿಗೂ ಮನೆಮನೆಯ ಸೇವೆಗೂ ಕ್ರಮವಾಗಿ ಕರೆದುಕೊಂಡು ಹೋದೆ. ನನ್ನ ಪ್ರಯತ್ನಗಳ ಫಲವೊ? ನನ್ನ ಎಲ್ಲಾ ಐದು ಮಂದಿ ಮಕ್ಕಳೂ ದೀಕ್ಷಾಸ್ನಾನ ಹೊಂದಿದ್ದಾರೆ.” ತದ್ರೀತಿಯಲ್ಲಿ, ಸೇವೆಯಲ್ಲಿ ಪೂರ್ಣ ರೀತಿಯಲ್ಲಿ ಪಾಲ್ಗೊಳ್ಳುವುದು, ನಿಮ್ಮ ಮಕ್ಕಳನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆ”ಯಲ್ಲಿ ಬೆಳೆಸಲು ನೀವು ಮಾಡುವ ಪ್ರಯತ್ನಗಳಲ್ಲಿ ಸಹಾಯಮಾಡಬಲ್ಲದು.—ಎಫೆಸ 6:4, NW.
14. (ಎ) ಎಳೆಯರು ಶಾಲೆಯಲ್ಲಿ ಹೇಗೆ ದೇವರನ್ನು ಘನಪಡಿಸಬಲ್ಲರು? (ಬಿ) ಯುವಜನರು ‘ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳದಂತೆ’ ಏನು ಸಹಾಯಮಾಡಬಲ್ಲದು?
14 ಯುವಜನರೇ, ಸರಕಾರದ ಕಾನೂನು ಶಾಲೆಯಲ್ಲಿ ಸಾಕ್ಷಿನೀಡುವುದನ್ನು ಅನುಮತಿಸುವಂಥ ದೇಶದಲ್ಲಿ ನೀವು ಜೀವಿಸುತ್ತಿರುವಲ್ಲಿ, ಶಾಲೆಯಲ್ಲಿ ಸಾಕ್ಷಿನೀಡಿ ದೇವರನ್ನು ಘನಪಡಿಸುತ್ತೀರೊ ಇಲ್ಲವೆ ಮನುಷ್ಯನ ಭಯವು ನಿಮ್ಮನ್ನು ಹೀಗೆ ಮಾಡುವುದರಿಂದ ತಡೆದು ಹಿಡಿಯುತ್ತದೊ? (ಜ್ಞಾನೋಕ್ತಿ 29:25) ಪೋರ್ಟರೀಕೊ ದೇಶದ 13 ವಯಸ್ಸಿನ ಒಬ್ಬ ಸಾಕ್ಷಿ ಬರೆಯುವುದು: “ಇದು ಸತ್ಯವೆಂದು ನನಗೆ ತಿಳಿದಿರುವುದರಿಂದ ಶಾಲೆಯಲ್ಲಿ ಸಾರುವುದರ ಬಗ್ಗೆ ನನಗೆ ಎಂದೂ ನಾಚಿಕೆಯಾಗಿಲ್ಲ. ಕ್ಲಾಸಿನಲ್ಲಿ ನಾನು ಯಾವಾಗಲೂ ಕೈಯೆತ್ತಿ, ಬೈಬಲಿನಿಂದ ಕಲಿತಿರುವ ವಿಷಯಗಳನ್ನು ತಿಳಿಸುತ್ತೇನೆ. ವಿರಾಮದ ಸಮಯದಲ್ಲಿ ನಾನು ಲೈಬ್ರರಿಗೆ ಹೋಗಿ ಯುವಜನರ ಪ್ರಶ್ನೆಗಳು ಪುಸ್ತಕವನ್ನು ಓದುತ್ತೇನೆ.”a ಯೆಹೋವನು ಆಕೆಯ ಪ್ರಯತ್ನಗಳನ್ನು ಹರಸಿದ್ದಾನೊ? ಆಕೆಯು ಹೇಳುವುದು: “ಕೆಲವು ಸಲ ನನ್ನ ಸಹಪಾಠಿಗಳು ನನಗೆ ಪ್ರಶ್ನೆಗಳನ್ನು ಕೇಳುತ್ತಾರಲ್ಲದೆ ಪುಸ್ತಕದ ಪ್ರತಿಯನ್ನೂ ಕೇಳಿ ಪಡೆಯುತ್ತಾರೆ.” ಈ ಸಂಬಂಧದಲ್ಲಿ ನೀವು ಇಷ್ಟರ ವರೆಗೆ ಹಿಂಜರಿದಿರುವಲ್ಲಿ, ಪ್ರಾಯಶಃ ನೀವು ಶ್ರದ್ಧಾಪೂರ್ವಕವಾದ ವೈಯಕ್ತಿಕ ಅಧ್ಯಯನದ ಮೂಲಕ “ಉತ್ತಮವೂ ಸ್ವೀಕರಣೀಯವೂ ದೇವರ ಪರಿಪೂರ್ಣ ಚಿತ್ತವೂ” ಏನೆಂಬದನ್ನು ನಿಮಗೆ ನೀವೇ ಸಾಬೀತು ಮಾಡಿ ತೋರಿಸಬೇಕಾಗಿರುವುದು. (ರೋಮಾಪುರ 12:2, NW) ನೀವು ಏನು ಕಲಿತಿರುತ್ತೀರೊ ಅದು ಸತ್ಯವೆಂದು ನಿಮಗೆ ನಿಶ್ಚಯವಾಗಿರುವಲ್ಲಿ, ನೀವೆಂದಿಗೂ “ಸುವಾರ್ತೆಯ ವಿಷಯದಲ್ಲಿ ನಾಚಿ”ಕೊಳ್ಳುವುದಿಲ್ಲ.—ರೋಮಾಪುರ 1:15.
ಸೇವೆಯ “ಮಹಾಸಂದರ್ಭ”
15, 16. ಕೆಲವು ಕ್ರೈಸ್ತರು “ಕಾರ್ಯಕ್ಕೆ ಅನುಕೂಲವಾದ” ಯಾವ “ಮಹಾಸಂದರ್ಭ”ವನ್ನು ಸದುಪಯೋಗಿಸಿಕೊಂಡಿದ್ದಾರೆ, ಮತ್ತು ಇದು ಯಾವ ಆಶೀರ್ವಾದಗಳಲ್ಲಿ ಫಲಿಸಿದೆ?
15 “ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭವು ನನಗುಂಟು,” ಎಂದು ಅಪೊಸ್ತಲ ಪೌಲನು ಬರೆದನು. (1 ಕೊರಿಂಥ 16:9) ಇಂತಹ ಒಂದು ಕಾರ್ಯಕ್ಕೆ ಅನುಕೂಲವಾದ ಸಂದರ್ಭವನ್ನು ಸದ್ವಿನಿಯೋಗಿಸಲು ನಿಮ್ಮ ಸನ್ನಿವೇಶಗಳು ಅನುಮತಿಸುತ್ತವೊ? ಉದಾಹರಣೆಗೆ, ರೆಗ್ಯುಲರ್ ಅಥವಾ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಬೇಕಾದರೆ ಪ್ರತಿ ತಿಂಗಳು ಸಾರುವ ಕೆಲಸದಲ್ಲಿ 70 ಅಥವಾ 50 ತಾಸುಗಳನ್ನು ವ್ಯಯಿಸಬೇಕಾಗುತ್ತದೆ. ಆದುದರಿಂದ ಪಯನೀಯರರ ನಂಬಿಗಸ್ತ ಸೇವೆಯನ್ನು ಜೊತೆ ಕ್ರೈಸ್ತರು ಮಾನ್ಯ ಮಾಡುವುದು ಸ್ವಾಭಾವಿಕ. ಆದರೆ ಅವರು ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆಂಬ ಸಂಗತಿಯು ಅವರು ತಮ್ಮನ್ನೇ ಇತರ ಸೋದರಸೋದರಿಯರಿಗಿಂತ ಹೆಚ್ಚು ಶ್ರೇಷ್ಠರೆಂದು ಭಾವಿಸುವಂತೆ ಮಾಡುವುದಿಲ್ಲ. ಬದಲಿಗೆ ಅವರು, “ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ” ಎಂದು ಯೇಸು ಪ್ರೋತ್ಸಾಹಿಸಿದ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ.—ಲೂಕ 17:10.
16 ಪಯನೀಯರ್ ಸೇವೆಯು ಸ್ವಶಿಸ್ತು, ವೈಯಕ್ತಿಕ ಸಂಘಟನೆ ಮತ್ತು ತ್ಯಾಗಗಳನ್ನು ಮಾಡುವ ಸಿದ್ಧಮನಸ್ಸನ್ನು ಅಗತ್ಯಪಡಿಸುತ್ತದೆ. ಆದರೆ ದೊರೆಯುವಂಥ ಆಶೀರ್ವಾದಗಳೊ ಅಪಾರ. ಟಾಮೀಕಾ ಎಂಬ ಹೆಸರಿನ ಯುವ ಪಯನೀಯರ್ ಸಹೋದರಿ ಹೇಳುವುದು: “ದೇವರ ಸತ್ಯವಾಕ್ಯವನ್ನು ಸರಿಯಾಗಿ ಉಪಯೋಗಿಸಲು ಶಕ್ತರಾಗುವುದು ನಿಜಾಶೀರ್ವಾದವೇ ಸರಿ. ಪಯನೀಯರ್ ಸೇವೆಯಲ್ಲಿ ನಾವು ಪದೇಪದೇ ಬೈಬಲನ್ನು ಉಪಯೋಗಿಸುತ್ತೇವೆ. ನಾನೀಗ ಮನೆಮನೆಗೆ ಹೋಗುವಾಗ ಪ್ರತಿಯೊಬ್ಬ ಮನೆಯವನಿಗೆ ತಕ್ಕದಾಗಿರುವ ಶಾಸ್ತ್ರವಚನಗಳ ಕುರಿತು ಯೋಚಿಸಬಲ್ಲೆ.” (2 ತಿಮೊಥೆಯ 2:15) ಮೈಕ ಎಂಬ ಪಯನೀಯರ್ ಸಹೋದರಿ ಹೇಳುವುದು: “ಸತ್ಯವು ಜನರ ಜೀವಿತದ ಮೇಲೆ ಹೇಗೆ ಪರಿಣಾಮ ಬೀರುತ್ತದೆಂಬುದನ್ನು ನೋಡುವುದು ಇನ್ನೊಂದು ಆಶ್ಚರ್ಯಕರವಾದ ಆಶೀರ್ವಾದವಾಗಿದೆ.” ಮ್ಯಾಥ್ಯೂ ಎಂಬ ಯುವಕನು ಸಹ, “ಒಬ್ಬನು ಸತ್ಯದೊಳಕ್ಕೆ ಬರುವುದನ್ನು ನೋಡುವ” ಸಂತೋಷದ ಕುರಿತು ಮಾತಾಡಿ, “ಈ ಸಂತೋಷವನ್ನು ಬೇರಾವುದೇ ಸಂತೋಷವು ಭರ್ತಿಮಾಡದು” ಎಂದು ಹೇಳುತ್ತಾನೆ.
17. ಪಯನೀಯರ್ ಸೇವೆಯ ಬಗ್ಗೆ ಒಬ್ಬ ಕ್ರೈಸ್ತಳು ತನಗಿದ್ದ ನಕಾರಾತ್ಮಕ ಭಾವನೆಗಳನ್ನು ಹೇಗೆ ಜಯಿಸಿದಳು?
17 ನೀವು ಪಯನೀಯರ್ ಸೇವೆಯನ್ನು ಆರಂಭಿಸುವ ವಿಷಯವನ್ನು ಪರಿಗಣಿಸಬಲ್ಲಿರೊ? ನೀವು ಇದನ್ನು ಮಾಡಲು ಇಷ್ಟಪಡುವುದಾದರೂ ಒಂದುವೇಳೆ ನೀವು ಇದಕ್ಕೆ ಯೋಗ್ಯರಲ್ಲ ಎಂದೆಣಿಸಬಹುದು. ಕೆನ್ಯಾಟ ಎಂಬ ಯುವ ಸಹೋದರಿ ಹೇಳುವುದು: “ಪಯನೀಯರ್ ಸೇವೆಯ ಬಗ್ಗೆ ನನಗೆ ನಕಾರಾತ್ಮಕ ಅನಿಸಿಕೆಗಳಿದ್ದವು. ನಾನು ಸಮರ್ಥಳಲ್ಲ ಎಂದೆಣಿಸುತ್ತಿದ್ದೆ. ನನಗೆ ಪೀಠಿಕೆಗಳನ್ನು ತಯಾರಿಸುವ ವಿಧವಾಗಲಿ ಶಾಸ್ತ್ರಗಳಿಂದ ತರ್ಕಿಸುವ ವಿಧವಾಗಲಿ ತಿಳಿದಿರಲಿಲ್ಲ.” ಆದರೆ ಹಿರಿಯರು ಈಕೆಯೊಂದಿಗೆ ಸೇವೆಮಾಡಲು ಒಬ್ಬ ಪ್ರೌಢ ಪಯನೀಯರ್ ಸಹೋದರಿಯನ್ನು ನೇಮಿಸಿದರು. ಕೆನ್ಯಾಟ ಜ್ಞಾಪಿಸಿಕೊಳ್ಳುವುದು: “ಅವರೊಂದಿಗೆ ಸೇವೆಮಾಡುವುದು ವಿನೋದಕರವಾಗಿತ್ತು. ನಾನು ಪಯನೀಯರ್ ಸೇವೆಗೆ ಇಳಿಯಲೇಬೇಕೆಂದು ಬಯಸುವಂತೆ ಅದು ಮಾಡಿತು.” ತುಸು ಪ್ರೋತ್ಸಾಹ ಮತ್ತು ತರಬೇತು ದೊರೆಯುವುದರಿಂದ ಪ್ರಾಯಶಃ ನೀವೂ ಪಯನೀಯರ್ ಸೇವೆಯನ್ನು ಮಾಡಲು ಬಯಸುವಿರಿ.
18. ಮಿಷನೆರಿ ಸೇವೆಯನ್ನು ಆರಂಭಿಸುವವರಿಗೆ ಯಾವ ಆಶೀರ್ವಾದಗಳು ದೊರಕಬಹುದು?
18 ಪಯನೀಯರ್ ಸೇವೆಯು, ಇತರ ಸೇವಾಸುಯೋಗಗಳಿಗೂ ದಾರಿಯನ್ನು ತೆರೆಯಬಹುದು. ಉದಾಹರಣೆಗೆ, ಕೆಲವು ವಿವಾಹಿತ ದಂಪತಿಗಳು ವಿದೇಶದಲ್ಲಿ ಸಾರುವಂತೆ ಮಿಷನೆರಿ ತರಬೇತನ್ನು ಪಡೆಯಲು ಯೋಗ್ಯತೆಯುಳ್ಳವರಾಗಬಹುದು. ಮಿಷನೆರಿಗಳು ಹೊಸ ದೇಶಕ್ಕೆ, ಪ್ರಾಯಶಃ ಹೊಸ ಭಾಷೆ, ಹೊಸ ಸಂಸ್ಕೃತಿ ಮತ್ತು ಹೊಸ ಆಹಾರಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಆದರೆ ದೊರೆಯುವ ಆಶೀರ್ವಾದಗಳು ಅಂತಹ ಅನಾನುಕೂಲಗಳನ್ನು ನಿಕೃಷ್ಟವಾಗಿಸುತ್ತವೆ. ಮೆಕ್ಸಿಕೊ ದೇಶದಲ್ಲಿರುವ ಮಿಲ್ಡ್ರೆಡ್ ಎಂಬ ಅನುಭವಸ್ಥ ಮಿಷನೆರಿಯು ಹೇಳುವುದು: “ಒಬ್ಬ ಮಿಷನೆರಿಯಾಗಬೇಕೆಂದು ನಾನು ಮಾಡಿದ ನಿರ್ಣಯದ ಬಗ್ಗೆ ನಾನೆಂದೂ ವಿಷಾದಪಟ್ಟಿಲ್ಲ. ನಾನು ಚಿಕ್ಕ ಹುಡುಗಿಯಾಗಿದ್ದಾಗಿನಿಂದ ಅದು ನನ್ನ ಬಯಕೆಯಾಗಿತ್ತು.” ಅವರು ಯಾವ ಆಶೀರ್ವಾದಗಳನ್ನು ಪಡೆದರು? “ನನ್ನ ಸ್ವದೇಶದಲ್ಲಿ ಒಂದು ಬೈಬಲ್ ಅಧ್ಯಯನವನ್ನು ಪಡೆಯುವುದು ಸಹ ಕಷ್ಟಕರವಾಗಿತ್ತು. ಆದರೆ ಇಲ್ಲಿ, ಕೆಲವು ಸಲ ಒಮ್ಮೆಗೆ ನಾಲ್ವರು ಬೈಬಲ್ ವಿದ್ಯಾರ್ಥಿಗಳು ಕ್ಷೇತ್ರ ಸೇವೆಯಲ್ಲಿ ತೊಡಗಿದ ಅನುಭವ ನನಗಿದೆ!”
19, 20. ಬೆತೆಲ್ ಸೇವೆ, ಅಂತಾರಾಷ್ಟ್ರೀಯ ಸೇವೆ, ಮತ್ತು ಮಿನಿಸ್ಟೀರಿಯಲ್ ಟ್ರೇನಿಂಗ್ ಸ್ಕೂಲ್ ಅನೇಕರಿಗೆ ಹೇಗೆ ಆಶೀರ್ವಾದಗಳನ್ನು ತಂದಿದೆ?
19 ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸುಗಳಲ್ಲಿ ಬೆತೆಲ್ ಸೇವೆ ಮಾಡುತ್ತಿರುವವರಿಗೂ ಅನೇಕ ಆಶೀರ್ವಾದಗಳು ಬರುತ್ತವೆ. ಜರ್ಮನಿಯಲ್ಲಿ ಸೇವೆ ಮಾಡುವ ಸ್ವೆನ್ ಎಂಬ ಯುವ ಸಹೋದರನೊಬ್ಬನು ತನ್ನ ಬೆತೆಲ್ ಸೇವೆಯ ಕುರಿತು ಹೇಳುವುದು: “ನಾನು ಮಾಡುತ್ತಿರುವ ಸೇವೆಯು ಶಾಶ್ವತ ಮೌಲ್ಯವಿರುವ ಸೇವೆ ಎಂದು ನನ್ನ ಎಣಿಕೆ. ನನ್ನ ಕೌಶಲಗಳನ್ನು ನಾನು ಲೋಕದಲ್ಲಿ ಉಪಯೋಗಿಸಬಹುದಿತ್ತು. ಆದರೆ ಅದು, ಇನ್ನೇನು ದಿವಾಳಿಯಾಗಲಿರುವ ಬ್ಯಾಂಕಿನಲ್ಲಿ ಠೇವಣಾತಿ ಇಟ್ಟಂತಾಗುತ್ತಿತ್ತು.” ಹೌದು, ಸಂಬಳವಿಲ್ಲದ ಸ್ವಯಂ ಸೇವಕನಾಗಿ ಸೇವೆಮಾಡುವುದರಲ್ಲಿ ತ್ಯಾಗವು ಅಡಗಿದೆ. ಆದರೆ ಸ್ವೆನ್ ಹೇಳುವುದು: “ನೀವು ಮನೆ ಸೇರುವಾಗ, ನೀವು ಅಂದು ಮಾಡಿದ್ದೆಲ್ಲವೂ ಯೆಹೋವನಿಗಾಗಿ ಎಂಬ ಅರಿವು ನಿಮಗಿರುತ್ತದೆ. ಮತ್ತು ಅದು ನಿಮಗೆ ಒಂದು ‘ಸೂಪರ್’ ಅನಿಸಿಕೆಯನ್ನು ಕೊಡುತ್ತದೆ.”
20 ಕೆಲವು ಮಂದಿ ಸಹೋದರರು ವಿದೇಶಗಳಲ್ಲಿ ಬ್ರಾಂಚ್ ಕಟ್ಟಡ ರಚನೆಗಳಲ್ಲಿ ಕೆಲಸಮಾಡುತ್ತಾ ಅಂತಾರಾಷ್ಟ್ರೀಯ ಸೇವೆಯ ಆಶೀರ್ವಾದಗಳನ್ನು ಪಡೆದಿದ್ದಾರೆ. ಎಂಟು ವಿದೇಶೀ ನೇಮಕಗಳಲ್ಲಿ ಸೇವೆಮಾಡಿದ ಒಂದು ದಂಪತಿ ಹೇಳಿದ್ದು: “ಇಲ್ಲಿರುವ ಸಹೋದರರು ಅತ್ಯುತ್ತಮರು. ಇವರನ್ನು ಬಿಟ್ಟು ಹೋಗುವಾಗ ನಮ್ಮ ಹೃದಯವು ಒಡೆಯುವುದು—ಇದು ನಮ್ಮ ಹೃದಯ ‘ಒಡೆದಿರುವ’ ಎಂಟನೆಯ ಬಾರಿ ಆಗಿರುವುದು. ಎಂತಹ ಉತ್ಕೃಷ್ಟ ಅನುಭವ ನಮಗಾಗಿದೆ!” ಈಗ ಮಿನಿಸ್ಟೀರಿಯಲ್ ಟ್ರೇನಿಂಗ್ ಸ್ಕೂಲನ್ನು ತೆಗೆದುಕೊಳ್ಳಿ. ಇದು ಅರ್ಹರಾದ ಅವಿವಾಹಿತ ಸಹೋದರರಿಗೆ ಆಧ್ಯಾತ್ಮಿಕ ತರಬೇತನ್ನು ಕೊಡುತ್ತದೆ. ಈ ಶಾಲೆಯ ಒಬ್ಬ ಪದವೀಧರನು ಬರೆದುದು: “ನಿಮಗೆ ಯಾವ ರೀತಿಯಲ್ಲಿ ಉಪಕಾರಹೇಳಲೆಂದು ಮಾತುಗಳಿಗಾಗಿ ತಡಕಾಡುತ್ತಿದ್ದೇನೆ. ಇನ್ನಾವ ಸಂಸ್ಥೆಯು ತಾನೇ ಇಂತಹ ತರಬೇತನ್ನು ಕೊಡಲು ಇಷ್ಟೊಂದು ಪ್ರಯತ್ನವನ್ನು ಮಾಡೀತು?”
21. ಎಲ್ಲಾ ಕ್ರೈಸ್ತರು ದೇವರ ಸೇವೆಯಲ್ಲಿ ಯಾವ ಪಂಥಾಹ್ವಾನವನ್ನು ಎದುರಿಸುತ್ತಾರೆ?
21 ಹೌದು, ಕಾರ್ಯಕ್ಕೆ ಅನುಕೂಲವಾದ ಅನೇಕ ಮಹಾಸಂದರ್ಭಗಳು ನಮ್ಮ ಮುಂದಿವೆ. ನಮ್ಮಲ್ಲಿ ಹೆಚ್ಚಿನವರು ಬೆತೆಲಿನಲ್ಲಿ ಅಥವಾ ವಿದೇಶಗಳಲ್ಲಿ ಸೇವೆಮಾಡಲು ಅಶಕ್ತರೆಂಬುದು ನಿಜವೇ. ಯೇಸು ತಾನೇ ಅದನ್ನು ಒಪ್ಪಿಕೊಂಡನು. ವಿಭಿನ್ನ ಸನ್ನಿವೇಶಗಳ ಕಾರಣ ಕ್ರೈಸ್ತರು ವಿಭಿನ್ನ ಮೊತ್ತದ “ಫಲ”ವನ್ನು ಫಲಿಸುವರೆಂದು ಅವನಂದನು. (ಮತ್ತಾಯ 13:23) ಆದಕಾರಣ ಕ್ರೈಸ್ತರೋಪಾದಿ ನಮ್ಮ ಮುಂದಿರುವ ಪಂಥಾಹ್ವಾನವು, ನಮ್ಮ ಸನ್ನಿವೇಶಗಳನ್ನು ಅತಿ ಉಪಯುಕ್ತಕರವಾಗಿ ವಿನಿಯೋಗಿಸುವುದೇ, ಅಂದರೆ ನಮ್ಮ ಸನ್ನಿವೇಶಗಳು ಅನುಮತಿಸುವ ಪ್ರಕಾರ ಯೆಹೋವನ ಸೇವೆಯಲ್ಲಿ ನಮ್ಮಿಂದ ಸಾಧ್ಯವಾಗುವಷ್ಟು ದೊಡ್ಡ ಪಾಲನ್ನು ಹೊಂದುವುದೇ. ನಾವು ಹಾಗೆ ಮಾಡುವಾಗ ಯೆಹೋವನನ್ನು ಘನಪಡಿಸುತ್ತಿದ್ದೇವೆ, ಮತ್ತು ಆತನು ಇದನ್ನು ತುಂಬ ಮೆಚ್ಚುವನೆಂಬ ಆಶ್ವಾಸನೆ ನಮಗಿರಬಲ್ಲದು. ವೃದ್ಧರ ನರ್ಸಿಂಗ್ ಹೋಮ್‌ನಲ್ಲಿರುವ ಎಥಲ್ ಎಂಬ ಸಹೋದರಿಯನ್ನು ತೆಗೆದುಕೊಳ್ಳಿ. ಅವರು ಕ್ರಮವಾಗಿ ಆ ನರ್ಸಿಂಗ್ ಹೋಮ್‌ನಲ್ಲಿರುವ ಜೊತೆ ನಿವಾಸಿಗಳಿಗೆ ಸಾಕ್ಷಿ ನೀಡುವುದಲ್ಲದೆ ಟೆಲಿಫೋನ್ ಸಾಕ್ಷಿ ಸೇವೆಯಲ್ಲಿಯೂ ಭಾಗವಹಿಸುತ್ತಾರೆ. ಅವರಿಗೆ ಇತಿಮಿತಿಗಳಿರುವುದಾದರೂ ಅವರ ಸೇವೆ ಪೂರ್ಣ ಪ್ರಾಣದ್ದಾಗಿದೆ.—ಮತ್ತಾಯ 22:37.
22. (ಎ) ಇನ್ನೂ ಯಾವ ವಿಧಗಳಲ್ಲಿ ನಾವು ದೇವರಿಗೆ ಘನವನ್ನು ತರಬಲ್ಲೆವು? (ಬಿ) ನಮಗಾಗಿ ಯಾವ ಆಶ್ಚರ್ಯಕರ ಸಮಯವು ಕಾದಿರುತ್ತದೆ?
22 ಆದರೆ ಸಾರುವ ಕೆಲಸವು, ನಾವು ಯೆಹೋವನಿಗೆ ಘನತೆ ತರುವ ಕೇವಲ ಒಂದು ವಿಧವೆಂಬುದು ನೆನಪಿರಲಿ. ನಮ್ಮ ಉದ್ಯೋಗ, ಶಾಲೆ ಮತ್ತು ಮನೆಯಲ್ಲಿ ನಾವು ನಡತೆಯಲ್ಲಿಯೂ ತೋರಿಕೆಯಲ್ಲಿಯೂ ಮಾದರಿಗಳಾಗಿರುವಾಗ, ಯೆಹೋವನ ಹೃದಯವನ್ನು ಸಂತೋಷಪಡಿಸುತ್ತೇವೆ. (ಜ್ಞಾನೋಕ್ತಿ 27:11) “ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು” ಎಂದು ಜ್ಞಾನೋಕ್ತಿ 28:20 ಮಾತುಕೊಡುತ್ತದೆ. ಆದಕಾರಣ, ನಾವು ದೇವರ ಸೇವೆಯಲ್ಲಿ ‘ಹೆಚ್ಚಾಗಿ ಬಿತ್ತಬೇಕು,’ ಏಕೆಂದರೆ ಆಗ ನಾವು ಹೆಚ್ಚಾದ ಆಶೀರ್ವಾದಗಳನ್ನು ಕೊಯ್ಯುವೆವು ಎಂಬ ಅರಿವು ನಮಗಿದೆ. (2 ಕೊರಿಂಥ 9:6) ಹಾಗೆ ಮಾಡುವಲ್ಲಿ, ಯಾವುದಕ್ಕೆ ಯೆಹೋವನು ನಿಜವಾಗಿಯೂ ಅರ್ಹನಾಗಿದ್ದಾನೊ ಆ ಘನತೆಯನ್ನು “ಶ್ವಾಸವಿರುವದೆಲ್ಲವೂ” ಕೊಡುವ ಆ ಆಶ್ಚರ್ಯಕರವಾದ ಸಮಯದಲ್ಲಿ ಬದುಕಿ ಉಳಿಯುವ ಸದವಕಾಶವು ನಮ್ಮದಾಗಿರುವುದು!—ಕೀರ್ತನೆ 150:6.
[ಪಾದಟಿಪ್ಪಣಿ]
a ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕವು ಯೆಹೋವನ ಸಾಕ್ಷಿಗಳ ಪ್ರಕಾಶನ.
ನೀವು ಮರುಜ್ಞಾಪಿಸಬಲ್ಲಿರೊ?
• ದೇವಜನರು “ಹಗಲಿರುಳು” ಯೆಹೋವನ ಸೇವೆಮಾಡುವುದು ಹೇಗೆ?
• ಗಾದ್ ಕುಲದವರ ಮುಂದೆ ಯಾವ ಪಂಥಾಹ್ವಾನವಿತ್ತು, ಮತ್ತು ಇಂದು ಅದು ಕ್ರೈಸ್ತರಿಗೆ ಏನನ್ನು ಕಲಿಸುತ್ತದೆ?
• ಕ್ಷೇತ್ರ ಶುಶ್ರೂಷೆಯು, ಸೈತಾನನ ಆಕ್ರಮಣಗಳ ವಿರುದ್ಧ ಹೇಗೆ ಒಂದು ಸಂರಕ್ಷಣೆಯಾಗಿದೆ?
• ಕೆಲವರು ಯಾವ ‘ಮಹಾಸಂದರ್ಭವನ್ನು’ ಸದುಪಯೋಗಿಸಿದ್ದಾರೆ, ಮತ್ತು ಅವರು ಯಾವ ಆಶೀರ್ವಾದಗಳಲ್ಲಿ ಆನಂದಿಸಿದ್ದಾರೆ?
[ಪುಟ 15ರಲ್ಲಿರುವ ಚಿತ್ರ]
ಲೂಟಿಗಾರರ ಗುಂಪುಗಳೊಂದಿಗೆ ಗಾದ್ ಕುಲದವರು ಹೋರಾಡಿದಂತೆಯೆ, ಕ್ರೈಸ್ತರು ಸೈತಾನನ ಆಕ್ರಮಣಗಳ ವಿರುದ್ಧ ಹೋರಾಡಲೇಬೇಕು
[ಪುಟ 17ರಲ್ಲಿರುವ ಚಿತ್ರ]
ಕ್ಷೇತ್ರ ಶುಶ್ರೂಷೆಯಲ್ಲಿ ನಾವು ಭಕ್ತಿವರ್ಧಕ ಸಹವಾಸದಲ್ಲಿ ಆನಂದಿಸುತ್ತೇವೆ
[ಪುಟ 18ರಲ್ಲಿರುವ ಚಿತ್ರ]
ಪಯನೀಯರ್ ಸೇವೆಯು ಇನ್ನಿತರ ಸೇವಾ ಸುಯೋಗಗಳಿಗೆ ಅವಕಾಶವನ್ನು ಕೊಡಬಹುದು. ಆ ಸುಯೋಗಗಳಲ್ಲಿ ಇವು ಸೇರಿವೆ:
1. ಅಂತಾರಾಷ್ಟ್ರೀಯ ಸೇವೆ
2. ಬೆತೆಲ್ ಸೇವೆ
3. ಮಿಷನೆರಿ ಸೇವೆ