ನೀವು “ಯೆಹೋವನ ಧರ್ಮಶಾಸ್ತ್ರದಲ್ಲಿ” ಆನಂದಪಡುತ್ತೀರೊ?
‘ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನು ಎಷ್ಟೋ ಧನ್ಯನು.’—ಕೀರ್ತನೆ 1:1, 2.
1. ನಾವು ಯೆಹೋವನ ಸೇವಕರಾಗಿ ಏಕೆ ಸಂತೋಷಿತರಾಗಿದ್ದೇವೆ?
ಯೆಹೋವನು ನಮ್ಮನ್ನು ತನ್ನ ನಿಷ್ಠಾವಂತ ಸೇವಕರಾಗಿ ಬೆಂಬಲಿಸಿ, ನಮಗೆ ಪ್ರತಿಫಲವನ್ನು ಕೊಡುತ್ತಾನೆ. ನಾವು ಅನೇಕ ಪರೀಕ್ಷೆಗಳನ್ನು ಎದುರಿಸುತ್ತೇವೆಂಬುದು ನಿಜ. ಆದರೆ ನಾವು ನಿಜ ಸಂತೋಷವನ್ನೂ ಅನುಭವಿಸುತ್ತೇವೆ. ಇದರಲ್ಲಿ ಆಶ್ಚರ್ಯವೇನೂ ಇಲ್ಲ, ಏಕೆಂದರೆ ನಾವು “ಸಂತೋಷದ ದೇವರನ್ನು” ಸೇವಿಸುತ್ತೇವೆ ಮಾತ್ರವಲ್ಲ ಆತನ ಪವಿತ್ರಾತ್ಮವು ನಮ್ಮ ಹೃದಯಗಳಲ್ಲಿ ಸಂತೋಷವನ್ನು ಫಲಿಸುತ್ತದೆ. (1 ತಿಮೊಥೆಯ 1:11, NW; ಗಲಾತ್ಯ 5:22) ಸಂತೋಷವು ನಿಜವಾದ ಸುಖದ ಸ್ಥಿತಿಯಾಗಿದೆ ಮತ್ತು ಅದು ಯಾವುದೊ ಒಳ್ಳೇ ವಿಷಯದ ನಿರೀಕ್ಷಣೆ ಅಥವಾ ಪಡೆಯುವಿಕೆಯಿಂದ ಬರುತ್ತದೆ. ಮತ್ತು ನಮ್ಮ ಸ್ವರ್ಗೀಯ ಪಿತನು ನಿಶ್ಚಯವಾಗಿಯೂ ನಮಗೆ ಒಳ್ಳೇ ದಾನಗಳನ್ನು ಕೊಡುತ್ತಾನೆ. (ಯಾಕೋಬ 1:17) ಆದಕಾರಣ, ನಾವು ಸಂತೋಷಿತರಾಗಿರುವುದರಲ್ಲಿ ಆಶ್ಚರ್ಯವಿಲ್ಲ!
2. ನಾವು ಯಾವ ಕೀರ್ತನೆಗಳನ್ನು ಚರ್ಚಿಸಲಿದ್ದೇವೆ?
2 ಕೀರ್ತನೆಗಳು ಪುಸ್ತಕದಲ್ಲಿ ಧನ್ಯ, ಅಂದರೆ ಸಂತೋಷಕ್ಕೆ ಪ್ರಾಧಾನ್ಯವನ್ನು ಕೊಡಲಾಗಿದೆ. ಉದಾಹರಣೆಗೆ, ಕೀರ್ತನೆ 1 ಮತ್ತು 2ನೆಯ ಅಧ್ಯಾಯಗಳ ವಿಷಯದಲ್ಲಿ ಇದು ಸತ್ಯ. ಯೇಸು ಕ್ರಿಸ್ತನ ಆದಿ ಹಿಂಬಾಲಕರು ಎರಡನೆಯ ಕೀರ್ತನೆಯನ್ನು ಇಸ್ರಾಯೇಲಿನ ರಾಜ ದಾವೀದನು ಬರೆದನೆಂದು ಹೇಳಿದರು. (ಅ. ಕೃತ್ಯಗಳು 4:25, 26) ಒಂದನೆಯ ಕೀರ್ತನೆಯ ಅನಾಮಧೇಯ ರಚಕನು ತನ್ನ ಪ್ರೇರಿತ ಕೀರ್ತನೆಯನ್ನು, “ದುಷ್ಟರ ಆಲೋಚನೆಯಂತೆ” ನಡೆಯದವನು “ಎಷ್ಟೋ ಧನ್ಯನು” ಎಂದು ತಿಳಿಸುತ್ತಾ ಆರಂಭಿಸುತ್ತಾನೆ. (ಕೀರ್ತನೆ 1:1, 2) ಆದುದರಿಂದ, ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ, ಕೀರ್ತನೆ 1 ಮತ್ತು 2ನೆಯ ಅಧ್ಯಾಯಗಳು ನಾವು ಹರ್ಷಿಸಲು ಹೇಗೆ ಕಾರಣಗಳನ್ನು ಕೊಡುತ್ತವೆ ಎಂಬುದನ್ನು ನೋಡೋಣ.
ಸಂತೋಷದ ರಹಸ್ಯ
3. ಕೀರ್ತನೆ 1:1ಕ್ಕನುಸಾರ, ದೇವಭಕ್ತಿಯುಳ್ಳ ಒಬ್ಬ ವ್ಯಕ್ತಿಯು ಸಂತೋಷಿತನಾಗಿರಲು ಕೆಲವು ಕಾರಣಗಳಾವುವು?
3 ದೇವಭಕ್ತಿಯುಳ್ಳ ಒಬ್ಬ ವ್ಯಕ್ತಿಯು ಸಂತೋಷಿತನಾಗಿರುವುದೇಕೆ ಎಂಬುದನ್ನು ಕೀರ್ತನೆ 1ನೇ ಅಧ್ಯಾಯವು ತೋರಿಸುತ್ತದೆ. ಇಂತಹ ಸಂತೋಷಕ್ಕೆ ಕೆಲವು ಕಾರಣಗಳನ್ನು ಕೊಡುತ್ತಾ ಕೀರ್ತನೆಗಾರನು “ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ ಧರ್ಮನಿಂದಕರೊಡನೆ ಕೂತುಕೊಳ್ಳದೆ” ಇರುತ್ತಾನೊ ಅವನು “ಧನ್ಯನು” ಎಂದು ಹಾಡುತ್ತಾನೆ.—ಕೀರ್ತನೆ 1:1, 2.
4. ಜಕರೀಯ ಮತ್ತು ಎಲಿಸಬೇತರು ಯಾವ ಆದರ್ಶಪ್ರಾಯ ಮಾರ್ಗಕ್ರಮವನ್ನು ಅನುಸರಿಸಿದರು?
4 ನಾವು ನಿಜವಾಗಿಯೂ ಸಂತೋಷಿತರಾಗಿರಬೇಕಾದರೆ ಯೆಹೋವನ ನೀತಿಯ ಆವಶ್ಯಕತೆಗಳಿಗೆ ತಕ್ಕಂತೆ ಜೀವಿಸಬೇಕು. ಸ್ನಾನಿಕನಾದ ಯೋಹಾನನ ಹೆತ್ತವರಾಗುವ ಹರ್ಷಕರ ಸುಯೋಗವಿದ್ದ ಜಕರೀಯ ಮತ್ತು ಎಲಿಸಬೇತರು, “ಕರ್ತನ [“ಯೆಹೋವನ,” NW] ಎಲ್ಲಾ ಆಜ್ಞೆಗಳನ್ನೂ ನೇಮನಿಷ್ಠೆಗಳನ್ನೂ ಕೈಕೊಂಡು ತಪ್ಪಿಲ್ಲದೆ ನಡಕೊಳ್ಳುತ್ತಾ ದೇವರ ದೃಷ್ಟಿಯಲ್ಲಿ ನೀತಿವಂತರಾಗಿದ್ದರು.” (ಲೂಕ 1:5, 6) ನಾವೂ ತದ್ರೀತಿಯ ಮಾರ್ಗಕ್ರಮವನ್ನು ಅನುಸರಿಸುತ್ತಾ, ‘ದುಷ್ಟರ ಆಲೋಚನೆಯಂತೆ ನಡೆಯುವುದನ್ನು’ ದೃಢತೆಯಿಂದ ನಿರಾಕರಿಸುವಲ್ಲಿ ಅಥವಾ ಅವರ ದುರಾಲೋಚನೆಯಿಂದ ನಡೆಸಲ್ಪಡದೆ ಇರುವಲ್ಲಿ ಸಂತೋಷಿತರಾಗಿರಬಲ್ಲೆವು.
5. “ಪಾಪಾತ್ಮರ ಮಾರ್ಗ”ದಿಂದ ದೂರವಿರಲು ನಮಗೆ ಏನು ಸಹಾಯಮಾಡಬಲ್ಲದು?
5 ದುಷ್ಟರ ಆಲೋಚನಾರೀತಿಯನ್ನು ನಾವು ತಳ್ಳಿಹಾಕುವಲ್ಲಿ, ನಾವು ‘ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ ಇದ್ದೇವೆ’ ಎಂದರ್ಥ. ವಾಸ್ತವದಲ್ಲಿ, ಅವರಿರುವ ಸ್ಥಳಗಳಲ್ಲಿ ಅಂದರೆ ಅನೈತಿಕ ಮನೋರಂಜನೆ ಇಲ್ಲವೆ ದುರಾಚಾರಕ್ಕಾಗಿ ಕುಖ್ಯಾತವಾಗಿರುವ ಸ್ಥಳಗಳಿಗೆ ಖಂಡಿತವಾಗಿ ನಾವೆಂದಿಗೂ ಹೋಗದಿರುವೆವು. ಆದರೆ, ಪಾಪಿಗಳ ಶಾಸ್ತ್ರಾಧಾರಿತವಲ್ಲದ ನಡತೆಯಲ್ಲಿ ಸೇರಿಕೊಳ್ಳುವಂತೆ ನಾವು ದುಷ್ಪ್ರೇರಣೆಗೆ ಒಳಗಾಗುವಲ್ಲಿ ಆಗೇನು? ಆಗ, “ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು?” ಎಂಬ ಅಪೊಸ್ತಲ ಪೌಲನ ಮಾತುಗಳಿಗೆ ಹೊಂದಿಕೆಯಲ್ಲಿ ವರ್ತಿಸಲು ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸೋಣ. (2 ಕೊರಿಂಥ 6:14) ನಾವು ದೇವರ ಮೇಲೆ ಹೊಂದಿಕೊಂಡು “ನಿರ್ಮಲಚಿತ್ತರು” ಆಗಿರುವಲ್ಲಿ, ಪಾಪಾತ್ಮರ ಮನೋಭಾವವನ್ನೂ ಜೀವನಶೈಲಿಯನ್ನೂ ತಿರಸ್ಕರಿಸುವೆವು. ಮಾತ್ರವಲ್ಲದೆ, ‘ನಿಷ್ಕಪಟವಾದ ನಂಬಿಕೆಯ’ ಜೊತೆಗೆ ಶುದ್ಧವಾದ ಪ್ರಚೋದನೆಗಳೂ ಅಪೇಕ್ಷೆಗಳೂ ನಮಗಿರುವವು.—ಮತ್ತಾಯ 5:8; 1 ತಿಮೊಥೆಯ 1:5.
6. ಧರ್ಮನಿಂದಕರ ವಿಷಯದಲ್ಲಿ ನಾವೇಕೆ ಎಚ್ಚರಿಕೆಯಿಂದಿರಬೇಕು?
6 ಯೆಹೋವನನ್ನು ಮೆಚ್ಚಿಸಬೇಕಾದರೆ ನಾವು “ಧರ್ಮನಿಂದಕರೊಡನೆ” ನಿಶ್ಚಯವಾಗಿಯೂ ‘ಕೂತುಕೊಳ್ಳಬಾರದು.’ ಕೆಲವರು ದೈವಭಕ್ತಿಯ ಬಗ್ಗೆ ನಿಂದಿಸುತ್ತಾರೆ. ಆದರೆ ಈ “ಕಡೇ ದಿವಸಗಳಲ್ಲಿ” ಮೊದಲು ಕ್ರೈಸ್ತರಾಗಿದ್ದು ನಂತರ ಧರ್ಮಭ್ರಷ್ಟರಾಗಿ ಪರಿಣಮಿಸಿರುವವರು ಅನೇಕವೇಳೆ ತಮ್ಮ ನಿಂದೆಯಲ್ಲಿ ವಿಶೇಷವಾಗಿ ತಿರಸ್ಕಾರವನ್ನು ತೋರಿಸುತ್ತಾರೆ. ಅಪೊಸ್ತಲ ಪೇತ್ರನು ಜೊತೆವಿಶ್ವಾಸಿಗಳನ್ನು ಎಚ್ಚರಿಸಿದ್ದು: “ಪ್ರಿಯರೇ, . . . ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ—ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆಹೊಂದಿದ ದಿನ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳಬೇಕು.” (2 ಪೇತ್ರ 3:1-4) ನಾವು ಎಂದಿಗೂ “ಧರ್ಮನಿಂದಕರೊಡನೆ ಕೂತುಕೊಳ್ಳದೆ” ಇರುವಲ್ಲಿ, ಅಂಥವರಿಗೆ ನಿಶ್ಚಯವಾಗಿಯೂ ಸಂಭವಿಸಲಿರುವ ವಿಪತ್ತಿನಿಂದ ತಪ್ಪಿಸಿಕೊಳ್ಳುವೆವು.—ಜ್ಞಾನೋಕ್ತಿ 1:22-27.
7. ಕೀರ್ತನೆ 1:1ರ ಮಾತುಗಳಿಗೆ ನಾವು ಏಕೆ ಲಕ್ಷ್ಯಕೊಡಬೇಕು?
7 ಕೀರ್ತನೆ 1ರ ಆರಂಭದ ಮಾತುಗಳಿಗೆ ನಾವು ಲಕ್ಷ್ಯಕೊಡದಿರುವಲ್ಲಿ, ಶಾಸ್ತ್ರಾಧ್ಯಯನದಿಂದ ನಾವು ಸಂಪಾದಿಸಿರುವ ಆಧ್ಯಾತ್ಮಿಕತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ವಾಸ್ತವದಲ್ಲಿ, ನಾವು ಕೆಟ್ಟಸ್ಥಿತಿಯಿಂದ ಇನ್ನೂ ಹೆಚ್ಚು ದುರವಸ್ಥೆಗೆ ಇಳಿಯಸಾಧ್ಯವಿದೆ. ನಮ್ಮ ಆಧ್ಯಾತ್ಮಿಕತೆಯನ್ನು ಕಳೆದುಕೊಳ್ಳುವ ದಿಕ್ಕಿನಲ್ಲಿ ನಾವು ತೆಗೆದುಕೊಳ್ಳುವ ಮೊದಲ ಹೆಜ್ಜೆಯು, ದುಷ್ಟರ ಸಲಹೆಯನ್ನು ಅನುಸರಿಸುವುದಾಗಿರಬಹುದು. ನಂತರ ನಾವು ಅವರೊಂದಿಗೆ ಕ್ರಮವಾಗಿ ಒಡನಾಟ ಮಾಡಬಹುದು, ಮತ್ತು ಸಕಾಲದಲ್ಲಿ ನಾವೇ ಅಂತಹ ನಂಬಿಕೆಹೀನ ಧರ್ಮಭ್ರಷ್ಟ ನಿಂದಕರಾಗಿ ಪರಿಣಮಿಸಬಹುದು. ದುಷ್ಟರೊಂದಿಗಿನ ಸ್ನೇಹವು ನಮ್ಮೊಳಗೆ ಅದೈವಿಕ ಮನೋಭಾವವನ್ನು ವರ್ಧಿಸಿ, ಯೆಹೋವ ದೇವರೊಂದಿಗೆ ನಮಗಿರುವ ಸುಸಂಬಂಧವನ್ನು ಕಡಿದು ನಾಶಗೊಳಿಸಬಲ್ಲದೆಂಬುದು ಸುವ್ಯಕ್ತ. (1 ಕೊರಿಂಥ 15:33; ಯಾಕೋಬ 4:4) ನಮಗೆ ಹಾಗಾಗುವಂತೆ ನಾವೆಂದಿಗೂ ಅನುಮತಿಸದಿರೋಣ!
8. ನಮ್ಮ ಮನಸ್ಸುಗಳನ್ನು ಆಧ್ಯಾತ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸಲು ನಮಗೆ ಯಾವುದು ಸಹಾಯಮಾಡುವುದು?
8 ಆಧ್ಯಾತ್ಮಿಕ ವಿಷಯಗಳ ಮೇಲೆ ನಾವು ಮನಸ್ಸನ್ನು ಕೇಂದ್ರೀಕರಿಸಲು ಮತ್ತು ದುಷ್ಟರ ಒಡನಾಟದಿಂದ ದೂರವಿರಲು ಪ್ರಾರ್ಥನೆಯು ನಮಗೆ ಸಹಾಯಮಾಡಬಲ್ಲದು. ಪೌಲನು ಬರೆದುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳುವಂತೆ ಈ ಅಪೊಸ್ತಲನು ಉತ್ತೇಜಿಸಿದನು. (ಫಿಲಿಪ್ಪಿ 4:6-8) ಆದಕಾರಣ ನಾವು ಪೌಲನ ಈ ಸಲಹೆಗೆ ಹೊಂದಿಕೆಯಲ್ಲಿ ವರ್ತಿಸಿ, ಎಂದಿಗೂ ದುಷ್ಟರ ಹೀನಮಟ್ಟಕ್ಕೆ ಇಳಿಯದಿರೋಣ.
9. ನಾವು ದುರಾಚಾರಗಳಿಂದ ದೂರವಿರುವುದಾದರೂ, ಎಲ್ಲಾ ರೀತಿಯ ಜನರಿಗೆ ಸಹಾಯಮಾಡಲು ಪ್ರಯತ್ನಿಸುವುದು ಹೇಗೆ?
9 ನಾವು ದುರಾಚಾರಗಳನ್ನು ತೊರೆಯುತ್ತೇವಾದರೂ, ಅಪೊಸ್ತಲ ಪೌಲನು ರೋಮನ್ ರಾಜ್ಯಪಾಲ ಫೇಲಿಕ್ಸನೊಂದಿಗೆ “ಸುನೀತಿ ದಮೆ ಮುಂದಣ ನ್ಯಾಯವಿಚಾರಣೆ ಇವುಗಳ ವಿಷಯವಾಗಿ” ಮಾತಾಡಿದಂತೆಯೇ, ನಾವು ಖಂಡಿತವಾಗಿಯೂ ಇತರರಿಗೆ ಸಮಯೋಚಿತ ನಯದಿಂದ ಸಾಕ್ಷಿಯನ್ನು ಕೊಡುತ್ತೇವೆ. (ಅ. ಕೃತ್ಯಗಳು 24:24, 25; ಕೊಲೊಸ್ಸೆ 4:6) ನಾವು ಸುವಾರ್ತೆಯನ್ನು ಎಲ್ಲಾ ರೀತಿಯ ಜನರಿಗೆ ಸಾರುತ್ತೇವೆ, ಮಾತ್ರವಲ್ಲ ಅವರೊಂದಿಗೆ ದಯಾಭಾವದಿಂದ ನಡೆದುಕೊಳ್ಳುತ್ತೇವೆ ಸಹ. ಆಗ “ನಿತ್ಯಜೀವಕ್ಕಾಗಿ ಸರಿಯಾದ ಪ್ರವೃತ್ತಿಯುಳ್ಳವರು” ವಿಶ್ವಾಸಿಗಳಾಗಿ, ದೇವರ ಧರ್ಮಶಾಸ್ತ್ರದಲ್ಲಿ ಆನಂದಪಡುವರೆಂಬ ಭರವಸೆ ನಮಗಿರುತ್ತದೆ.—ಅ. ಕೃತ್ಯಗಳು 13:48, NW.
ಅವನು ಧರ್ಮಶಾಸ್ತ್ರದಲ್ಲಿ ಆನಂದಪಡುತ್ತಾನೆ
10. ವೈಯಕ್ತಿಕ ಅಧ್ಯಯನದ ಸಮಯದಲ್ಲಿ ನಮ್ಮ ಹೃದಮನಗಳ ಮೇಲೆ ಅಚ್ಚಳಿಯದ ರೀತಿಯಲ್ಲಿ ಪರಿಣಾಮವನ್ನು ಬೀರಲು ಯಾವುದು ಸಹಾಯಮಾಡುವುದು?
10 ಆ ಸಂತೋಷಿತ ವ್ಯಕ್ತಿಯ ಕುರಿತು ಕೀರ್ತನೆಗಾರನು ಮುಂದಕ್ಕೆ, ಅವನು ‘ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನು’ ಇಲ್ಲವೆ ‘ತಗ್ಗು ಧ್ವನಿಯಲ್ಲಿ ಓದುವನು’ (NW) ಎಂದು ಸಹ ಹೇಳುತ್ತಾನೆ. (ಕೀರ್ತನೆ 1:2) ದೇವರ ಸೇವಕರಾದ ನಾವು, ‘ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುತ್ತೇವೆ.’ ಸಾಧ್ಯವಿರುವಾಗಲೆಲ್ಲಾ, ವೈಯಕ್ತಿಕ ಅಧ್ಯಯನ ಮತ್ತು ಧ್ಯಾನದ ಸಮಯದಲ್ಲಿ ನಾವು ಅದನ್ನು ತಗ್ಗು ಧ್ವನಿಯಲ್ಲಿ ಓದುತ್ತ, ಪದಗಳನ್ನು ಕೇಳಿಸುವಂತೆ ಉಚ್ಚರಿಸುತ್ತೇವೆ. ಶಾಸ್ತ್ರದ ಯಾವುದೇ ಭಾಗವನ್ನು ಓದುವಾಗ ಹೀಗೆ ಮಾಡುವುದು, ನಮ್ಮ ಹೃದಮನಗಳ ಮೇಲೆ ಅಚ್ಚಳಿಯದ ರೀತಿಯಲ್ಲಿ ಪರಿಣಾಮವನ್ನು ಬೀರಲು ಸಹಾಯಮಾಡುವುದು.
11. ನಾವು ಬೈಬಲನ್ನು “ಹಗಲಿರುಳು” ಏಕೆ ಓದಬೇಕು?
11 ನಾವು ಪ್ರತಿದಿನ ಬೈಬಲನ್ನು ಓದುವಂತೆ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ನಮ್ಮನ್ನು ಪ್ರೋತ್ಸಾಹಿಸಿಸುತ್ತದೆ. (ಮತ್ತಾಯ 24:45) ಮಾನವಕುಲಕ್ಕೆ ಯೆಹೋವನು ಕಳುಹಿಸಿರುವ ಸಂದೇಶದೊಂದಿಗೆ ಸುಪರಿಚಿತರಾಗುವ ಬಲವಾದ ಅಪೇಕ್ಷೆಯ ಕಾರಣ, ನಾವು “ಹಗಲಿರುಳು,” ಹೌದು, ಕಾರಣಾಂತರಗಳಿಂದ ನಮಗೆ ನಿದ್ದೆ ಬರದಿದ್ದಾಗಲೂ ಬೈಬಲನ್ನು ಓದುವುದು ಸೂಕ್ತ. “ಹಸುಮಕ್ಕಳಂತೆ ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸಿರಿ; ಅದರಿಂದ ಬೆಳೆಯುತ್ತಾ ರಕ್ಷಣೆಯನ್ನು ಹೊಂದುವಿರಿ” ಎಂದು ಪೇತ್ರನು ನಮ್ಮನ್ನು ಪ್ರೋತ್ಸಾಹಿಸಿದನು. (1 ಪೇತ್ರ 2:1, 2) ಬೈಬಲನ್ನು ದಿನಾಲೂ ಓದುವುದರಲ್ಲಿ ಮತ್ತು ದೇವರ ವಾಕ್ಯ ಹಾಗೂ ಉದ್ದೇಶಗಳ ಬಗ್ಗೆ ರಾತ್ರಿಹೊತ್ತು ಧ್ಯಾನಿಸುವುದರಲ್ಲಿ ನೀವು ಆನಂದಪಡುತ್ತೀರೊ? ಕೀರ್ತನೆಗಾರನು ಆನಂದಪಟ್ಟನು.—ಕೀರ್ತನೆ 63:6.
12. ಯೆಹೋವನ ಧರ್ಮಶಾಸ್ತ್ರದಲ್ಲಿ ನಾವು ಆನಂದಪಡುತ್ತಿರುವುದಾದರೆ ಏನು ಮಾಡುವೆವು?
12 ದೇವರ ಧರ್ಮಶಾಸ್ತ್ರದಲ್ಲಿ ನಾವು ಆನಂದಪಡುವುದರ ಮೇಲೆ ನಮ್ಮ ನಿತ್ಯಾನಂದವು ಹೊಂದಿಕೊಂಡಿದೆ. ಅದು ಲೋಪವಿಲ್ಲದ್ದೂ ನೀತಿಯುಳ್ಳದ್ದೂ ಆಗಿರುವುದಲ್ಲದೆ ಅದನ್ನು ಕೈಕೊಳ್ಳುವುದರಿಂದ ಬಹಳ ಫಲ ಉಂಟಾಗುತ್ತದೆ. (ಕೀರ್ತನೆ 19:7-11) ಶಿಷ್ಯ ಯಾಕೋಬನು ಬರೆದುದು: “ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು ವಾಕ್ಯವನ್ನು ಕೇಳಿ ಮರೆತುಹೋಗುವವನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ನಡತೆಯಿಂದ ಧನ್ಯನಾಗುವನು.” (ಯಾಕೋಬ 1:25) ನಾವು ಯೆಹೋವನ ಧರ್ಮಶಾಸ್ತ್ರದಲ್ಲಿ ನಿಜವಾಗಿಯೂ ಆನಂದಪಡುವವರಾದರೆ, ಆಧ್ಯಾತ್ಮಿಕ ವಿಷಯಗಳಿಗೆ ಪರಿಗಣನೆಯನ್ನು ಕೊಡದೆ ಒಂದು ದಿನವೂ ದಾಟದಂತೆ ನೋಡಿಕೊಳ್ಳುವೆವು. ಹೌದು, ಆಗ ನಾವು “ದೇವರ ಅಗಾಧವಾದ ವಿಷಯಗಳನ್ನು” ಪರಿಶೋಧಿಸುವಂತೆಯೂ ರಾಜ್ಯಾಭಿರುಚಿಗಳನ್ನು ಜೀವನದಲ್ಲಿ ಪ್ರಥಮವಾಗಿಡುವಂತೆಯೂ ಪ್ರಚೋದಿಸಲ್ಪಡುವೆವು.—1 ಕೊರಿಂಥ 2:10-13; ಮತ್ತಾಯ 6:33.
ಅವನು ಮರದ ಹಾಗಿರುತ್ತಾನೆ
13-15. ನಾವು ಯಾವ ಅರ್ಥದಲ್ಲಿ ಸಮೃದ್ಧ ಜಲಮೂಲದ ಪಕ್ಕದಲ್ಲಿ ನೆಡಲ್ಪಟ್ಟ ಮರದ ಹಾಗಿರಬಲ್ಲೆವು?
13 ಆ ಪ್ರಾಮಾಣಿಕ ವ್ಯಕ್ತಿಯನ್ನು ಇನ್ನೂ ಮುಂದಕ್ಕೆ ವರ್ಣಿಸುತ್ತ, ಕೀರ್ತನೆಗಾರನು ಹೇಳುವುದು: “ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.” (ಕೀರ್ತನೆ 1:3) ಅಪರಿಪೂರ್ಣರಾದ ಸಕಲ ಮಾನವರಂತೆ, ಯೆಹೋವನನ್ನು ಸೇವಿಸುವ ನಾವು ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತೇವೆ. (ಯೋಬ 14:1) ನಮಗೆ ನಮ್ಮ ನಂಬಿಕೆಯ ಸಂಬಂಧದಲ್ಲಿ ಹಿಂಸೆಯೊ ಇತರ ವಿವಿಧ ಪರೀಕ್ಷೆಗಳೊ ಬರಬಹುದು. (ಮತ್ತಾಯ 5:10-12) ಆದರೂ, ದೇವರ ಸಹಾಯದಿಂದ ನಾವು ಈ ಪರೀಕ್ಷೆಗಳನ್ನು, ಒಂದು ಆರೋಗ್ಯಕರ ಮರವು ಬಿರುಗಾಳಿಯನ್ನೂ ಹೇಗೆ ಎದುರಿಸಿ ನಿಲ್ಲುತ್ತದೋ ಹಾಗೆಯೇ ಯಶಸ್ವಿಕರವಾಗಿ ತಾಳಿಕೊಳ್ಳಲು ಶಕ್ತರಾಗುತ್ತೇವೆ.
14 ಬತ್ತಿಹೋಗದ ನೀರಿನ ಬಳಿ ನೆಡಲ್ಪಟ್ಟಿರುವ ಮರವು ಬಿಸಿಯಾದ ಹವೆಯ ಅಥವಾ ಅನಾವೃಷ್ಟಿಯ ಸಮಯದಲ್ಲಿ ಒಣಗಿಹೋಗುವುದಿಲ್ಲ. ಹಾಗೆಯೇ, ನಾವು ದೇವಭಯವುಳ್ಳ ವ್ಯಕ್ತಿಗಳಾಗಿರುವಲ್ಲಿ ನಮ್ಮ ಶಕ್ತಿಯು, ಬತ್ತಿಹೋಗದ ಶಕ್ತಿಯ ಮೂಲನಾದ ಯೆಹೋವ ದೇವರಿಂದಲೇ ಬರುತ್ತದೆ. ಪೌಲನು ಸಹಾಯಕ್ಕಾಗಿ ದೇವರ ಕಡೆಗೆ ನೋಡಿದ್ದರಿಂದ, “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ” ಎಂದು ಹೇಳಶಕ್ತನಾದನು. (ಫಿಲಿಪ್ಪಿ 4:13) ನಾವು ಯೆಹೋವನ ಪವಿತ್ರಾತ್ಮದಿಂದ ನಡೆಸಲ್ಪಟ್ಟು ಆಧ್ಯಾತ್ಮಿಕವಾಗಿ ಪೋಷಿಸಲ್ಪಡುವಾಗ, ನಾವು ಒಣಗಿಹೋಗುವುದೂ ಇಲ್ಲ, ಫಲರಹಿತರಾಗಿ ಇಲ್ಲವೆ ಆಧ್ಯಾತ್ಮಿಕವಾಗಿ ಸಾಯುವುದೂ ಇಲ್ಲ. ಬದಲಿಗೆ, ನಾವು ದೇವರ ಸೇವೆಯಲ್ಲಿ ಫಲಭರಿತರಾಗಿರುವೆವು ಮಾತ್ರವಲ್ಲ, ಆತನ ಆತ್ಮದ ಫಲಗಳನ್ನೂ ಫಲಿಸುತ್ತಿರುವೆವು.—ಯೆರೆಮೀಯ 17:7, 8; ಗಲಾತ್ಯ 5:22, 23.
15 “ಹಾಗಿರುವನು” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವನ್ನು ಉಪಯೋಗಿಸುವ ಮೂಲಕ, ಕೀರ್ತನೆಗಾರನು ಒಂದು ಉಪಮಾಲಂಕಾರವನ್ನು ಬಳಸುತ್ತಾನೆ. ಅವನು ಒಂದೇ ರೀತಿಯ ವಿಶೇಷ ಗುಣವುಳ್ಳ ಎರಡು ವಿಭಿನ್ನ ವಿಷಯಗಳನ್ನು ಹೋಲಿಸುತ್ತಿದ್ದಾನೆ. ಮನುಷ್ಯರು ಮರಗಳಿಂದ ಭಿನ್ನವಾಗಿದ್ದರೂ, ಸಮೃದ್ಧ ಜಲಮೂಲದ ಪಕ್ಕದಲ್ಲಿ ನೆಡಲ್ಪಟ್ಟ ಮರದ ಹಚ್ಚಹಸುರುತನ ಕೀರ್ತನೆಗಾರನಿಗೆ “ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದ”ಪಡುವವರ ಆಧ್ಯಾತ್ಮಿಕ ಸಮೃದ್ಧಿಯನ್ನು ನೆನಪಿಗೆ ತಂದಿರಬೇಕೆಂಬುದು ವ್ಯಕ್ತ. ನಾವು ದೇವರ ವಾಕ್ಯದಲ್ಲಿ ಆನಂದಪಡುವಲ್ಲಿ, ನಮ್ಮ ದಿನಗಳೂ ಆ ಮರದ ದಿನಗಳಂತಿರುವವು. ವಾಸ್ತವದಲ್ಲಿ, ನಾವು ಅನಂತಕಾಲ ಜೀವಿಸಬಲ್ಲೆವು.—ಯೋಹಾನ 17:3.
16. ‘ನಾವು ಮಾಡುವ ಸಕಲ ಕಾರ್ಯವೂ ಸಫಲಗೊಳ್ಳುವುದು’ ಏಕೆ ಮತ್ತು ಹೇಗೆ?
16 ನಾವು ಪ್ರಾಮಾಣಿಕವಾದ ಮಾರ್ಗವನ್ನು ಅನುಸರಿಸುತ್ತಿರುವಾಗ, ಪರೀಕ್ಷೆ ಮತ್ತು ಕಷ್ಟಗಳ ಒತ್ತಡವನ್ನು ತಾಳಿಕೊಳ್ಳುವಂತೆ ಯೆಹೋವನು ನಮಗೆ ಸಹಾಯಮಾಡುತ್ತಾನೆ. ನಾವು ದೇವರ ಸೇವೆಯಲ್ಲಿ ಸಂತೋಷಭರಿತರೂ ಫಲಭರಿತರೂ ಆಗಿರುತ್ತೇವೆ. (ಮತ್ತಾಯ 13:23; ಲೂಕ 8:15) ಯೆಹೋವನ ಚಿತ್ತವನ್ನು ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿರುವುದರಿಂದ, ‘ನಾವು ಮಾಡುವ ಸಕಲ ಕಾರ್ಯವೂ ಸಫಲಗೊಳ್ಳುವುದು.’ ಆತನ ಉದ್ದೇಶಗಳು ಸದಾ ಜಯ ಸಾಧಿಸುವ ಕಾರಣ ಮತ್ತು ಆತನ ಆಜ್ಞೆಗಳಲ್ಲಿ ನಾವು ಆನಂದಪಡುವ ಕಾರಣ, ನಾವು ಆಧ್ಯಾತ್ಮಿಕವಾಗಿ ಅಭ್ಯುದಯ ಹೊಂದುತ್ತೇವೆ. (ಆದಿಕಾಂಡ 39:23; ಯೆಹೋಶುವ 1:7, 8; ಯೆಶಾಯ 55:11) ಇದು ನಾವು ಆಪತ್ತುಗಳನ್ನು ಎದುರಿಸುವಾಗಲೂ ನಿಜವಾಗಿದೆ.—ಕೀರ್ತನೆ 112:1-3; 3 ಯೋಹಾನ 2.
ದುಷ್ಟರು ಏಳಿಗೆ ಹೊಂದುತ್ತಿರುವಂತೆ ಕಾಣುತ್ತದೆ
17, 18. (ಎ) ಕೀರ್ತನೆಗಾರನು ದುಷ್ಟರನ್ನು ಯಾವುದಕ್ಕೆ ಹೋಲಿಸುತ್ತಾನೆ? (ಬಿ) ದುಷ್ಟರು ಲೌಕಿಕವಾಗಿ ಏಳಿಗೆ ಹೊಂದಿದರೂ, ಅವರಿಗೆ ಬಾಳಿಕೆ ಬರುವ ಭದ್ರತೆ ಇಲ್ಲ ಏಕೆ?
17 ದುಷ್ಟರ ಪಾಡು ಮತ್ತು ನೀತಿವಂತರ ಪಾಡಿನ ಮಧ್ಯೆ ಎಂತಹ ವ್ಯತ್ಯಾಸ! ದುಷ್ಟರು ತುಸು ಸಮಯ ಲೌಕಿಕವಾಗಿ ಏಳಿಗೆ ಹೊಂದುತ್ತಿರುವಂತೆ ತೋರಿಬರಬಹುದು, ಆದರೆ ಆಧ್ಯಾತ್ಮಿಕವಾಗಿ ಅಲ್ಲ. ಕೀರ್ತನೆಗಾರನ ಮುಂದಿನ ಮಾತುಗಳಿಂದ ಇದು ಸ್ಪಷ್ಟವಾಗುತ್ತದೆ: “ದುಷ್ಟರೋ ಹಾಗಲ್ಲ; ಗಾಳಿ ಬಡುಕೊಂಡು ಹೋಗುವ ಹೊಟ್ಟಿನಂತಿದ್ದಾರೆ. ಆದದರಿಂದ ದುಷ್ಟರು ನ್ಯಾಯವಿಚಾರಣೆಯಲ್ಲೂ ಪಾಪಾತ್ಮರು ನೀತಿವಂತರ ಸಭೆಯಲ್ಲೂ ನಿಲ್ಲುವದಿಲ್ಲ.” (ಕೀರ್ತನೆ 1:4, 5) “ದುಷ್ಟರೋ ಹಾಗಲ್ಲ” ಎಂದು ಕೀರ್ತನೆಗಾರನು ಹೇಳುವುದನ್ನು ಗಮನಿಸಿರಿ. ಇದರರ್ಥ ಅವರು ಈಗ ತಾನೇ ಹೋಲಿಸಲ್ಪಟ್ಟ ಫಲಭರಿತ ಮತ್ತು ಬಹುಕಾಲ ಬಾಳುವ ಮರಗಳಂತಿರುವ ದೇವಭಕ್ತಿಯುಳ್ಳ ಜನರಂತೆ ಇಲ್ಲವೆಂದೇ.
18 ದುಷ್ಟರು ಲೌಕಿಕವಾಗಿ ಏಳಿಗೆ ಹೊಂದಿದರೂ, ಅವರಿಗೆ ಬಾಳಿಕೆ ಬರುವ ಭದ್ರತೆಯಿಲ್ಲ. (ಕೀರ್ತನೆ 37:16; 73:3, 12) ಅವರು, ಯೇಸು ಒಂದು ದೃಷ್ಟಾಂತದಲ್ಲಿ ಹೇಳಿದ, ವಿವೇಚನೆಯಿಲ್ಲದ ಐಶ್ವರ್ಯವಂತನಂತಿದ್ದಾರೆ. ಒಂದು ಪಿತ್ರಾರ್ಜಿತ ಆಸ್ತಿಯನ್ನು ಪಾಲುಮಾಡಿ ಕೊಡುವಂತೆ ಯೇಸುವಿಗೆ ಕೇಳಿಕೊಳ್ಳಲ್ಪಟ್ಟಾಗ ಅವನು ಈ ದೃಷ್ಟಾಂತವನ್ನು ತಿಳಿಸಿದ್ದನು. ಯೇಸು ನೆರೆದಿದ್ದವರಿಗೆ ಹೇಳಿದ್ದು: “ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.” ಇದನ್ನೇ ದೃಷ್ಟಾಂತಿಸುತ್ತಾ ಯೇಸು ಆ ಐಶ್ವರ್ಯವಂತನ ಬಗ್ಗೆ ಹೇಳಿದನು. ಅವನ ಭೂಮಿಯು ಚೆನ್ನಾಗಿ ಬೆಳೆಯಿತು. ಅದಕ್ಕೋಸ್ಕರ ಅವನು ತನ್ನ ಎಲ್ಲಾ ಸರಕುಗಳನ್ನು ತುಂಬಿಸಿಡಲಿಕ್ಕಾಗಿ ಹಳೆಯ ಕಣಜಗಳನ್ನು ಕೀಳಿಸಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸಲು ಯೋಜನೆಮಾಡಿದನು. ನಂತರ ಅವನು, ವಿಶ್ರಮಿಸಿ, ಊಟಮಾಡಿ, ಕುಡಿದು ಸುಖಪಡಬೇಕೆಂದು ಯೋಜನೆಹಾಕಿದನು. ಆದರೆ ದೇವರು ಅವನಿಗೆ ಹೇಳಿದ್ದು: “ಬುದ್ಧಿಹೀನನು ನೀನು! ಈ ಹೊತ್ತು ರಾತ್ರಿ ನಿನ್ನ ಪ್ರಾಣವನ್ನು ನಿನ್ನ ಕಡೆಯಿಂದ ಕೇಳುವರು; ಆಗ ನೀನು ಸಿದ್ಧಮಾಡಿಟ್ಟಿರುವದು ಯಾರಿಗಾಗುವದು”? ತನ್ನ ಪಾಠವನ್ನು ಒತ್ತಿಹೇಳುತ್ತ, ಯೇಸು ಕೂಡಿಸಿ ಹೇಳಿದ್ದು: “ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ.”—ಲೂಕ 12:13-21.
19, 20. (ಎ) ಹಿಂದಿನ ಕಾಲದ ತೆನೆ ಬಡಿಯುವ ಮತ್ತು ಜಳ್ಳು ತೆಗೆಯುವ ವಿಧಾನವನ್ನು ವರ್ಣಿಸಿರಿ. (ಬಿ) ದುಷ್ಟರನ್ನು ಹೊಟ್ಟಿಗೆ ಹೋಲಿಸಿರುವುದು ಏಕೆ?
19 ದುಷ್ಟರು ‘ದೇವರ ವಿಷಯದಲ್ಲಿ ಐಶ್ವರ್ಯವಂತರಲ್ಲ.’ ಆದಕಾರಣ ಅವರಿಗೆ ಹೊಟ್ಟಿಗೆ, ಅಂದರೆ ಕಾಳಿನ ಸಿಪ್ಪೆಗೆ ಇರುವಷ್ಟೇ ಭದ್ರತೆ ಹಾಗೂ ಸ್ಥಿರತೆ ಇದೆ. ಹಿಂದಿನ ಕಾಲಗಳಲ್ಲಿ, ಪೈರನ್ನು ಕೊಯ್ದ ಬಳಿಕ ಅದನ್ನು ತೆನೆಬಡಿಯುವ ಕಣಕ್ಕೆ ಒಯ್ಯಲಾಗುತ್ತಿತ್ತು. ಇದು ಸಾಮಾನ್ಯವಾಗಿ ಎತ್ತರದಲ್ಲಿರುವ ಸಮತಟ್ಟಾದ ಸ್ಥಳವಾಗಿರುತ್ತಿತ್ತು. ಅಲ್ಲಿ ಅಡಿಭಾಗದಲ್ಲಿ ಹರಿತವಾದ ಕಲ್ಲು ಅಥವಾ ಕಬ್ಬಿಣದ ಹಲ್ಲುಗಳಿರುವ ಬಂಡಿಯನ್ನು ಪಶುಗಳು ಎಳೆಯುತ್ತಿದ್ದು, ಇದು ದಂಟುಗಳನ್ನು ತುಂಡುತುಂಡು ಮಾಡಿ ಕಾಳನ್ನು ಹೊಟ್ಟಿನಿಂದ ಪ್ರತ್ಯೇಕಿಸುತ್ತಿದ್ದವು. ಬಳಿಕ ಒಂದು ಕವೇಕೋಲನ್ನು ಅಥವಾ ಜಳ್ಳುತೆಗೆಯುವ ಗುದ್ದಲಿಯನ್ನು ಉಪಯೋಗಿಸಿ ಈ ಇಡೀ ಮಿಶ್ರಣವನ್ನು ಎತ್ತಿ ಗಾಳಿಗೆ ತೂರಲಾಗುತ್ತಿತ್ತು. (ಯೆಶಾಯ 30:24) ಆಗ ಕಾಳುಗಳು ತೆನೆಬಡಿಯುವ ನೆಲಕ್ಕೆ ಬೀಳುತ್ತಿದ್ದವು ಮತ್ತು ಗಾಳಿಯು ಒಣಹುಲ್ಲನ್ನು ಒಂದು ಬದಿಗೆ ಬೀಳುವಂತೆ ಮಾಡಿ ಹೊಟ್ಟನ್ನು ಹೊಡೆದುಕೊಂಡು ಹೋಗುತ್ತಿತ್ತು. (ರೂತಳು 3:2) ಧಾನ್ಯವನ್ನು ಸೋಸುವ ಜಲ್ಲಡಿಯಲ್ಲಿ ಹಾಕಿ, ಕಲ್ಲುಚೂರು ಮುಂತಾದವುಗಳನ್ನು ತೆಗೆದ ಬಳಿಕ, ಅದು ಶೇಖರಣೆಗಾಗಿ ಅಥವಾ ಹಿಟ್ಟುಮಾಡಲಿಕ್ಕಾಗಿ ಸಿದ್ಧವಾಗಿರುತ್ತಿತ್ತು. (ಲೂಕ 22:31) ಆದರೆ ಹೊಟ್ಟು ತೊಲಗಿ ಹೋಗಿರುತ್ತಿತ್ತು.
20 ಹೊಟ್ಟು ಹಾರಿ ಹೋಗಿ ನೆಲಕ್ಕೆ ಬಿದ್ದ ಕಾಳನ್ನು ಹೇಗೆ ಸಂರಕ್ಷಿಸಿ ಶೇಖರಿಸಲಾಗುತ್ತಿತ್ತೊ ಹಾಗೆಯೇ ನೀತಿವಂತರು ಉಳಿಯುವಾಗ ದುಷ್ಟರಾದರೊ ತೆಗೆದುಹಾಕಲ್ಪಡುವರು. ಅಂತಹ ದುಷ್ಟರು ಸದಾಕಾಲಕ್ಕಾಗಿ ಬೇಗನೆ ಇಲ್ಲದೆ ಹೋಗುವುದರಿಂದ ನಾವು ಖಂಡಿತವಾಗಿಯೂ ಸಂತೋಷಿಸುತ್ತೇವೆ. ಅವರು ತೊಲಗಿಸಲ್ಪಟ್ಟಾಗ, ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವರಿಗೆ ಬಹು ಆಶೀರ್ವಾದಗಳು ದೊರೆಯುವವು. ಹೌದು, ವಿಧೇಯ ಮಾನವರು ಅಂತಿಮವಾಗಿ ದೇವರ ವರದಾನವಾದ ನಿತ್ಯಜೀವವನ್ನು ಪಡೆಯುವರು.—ಮತ್ತಾಯ 25:34-46; ರೋಮಾಪುರ 6:23.
“ನೀತಿವಂತರ” ಧನ್ಯ “ಮಾರ್ಗ”
21. ಯೆಹೋವನು ‘ನೀತಿವಂತರನ್ನು ಲಕ್ಷಿಸುವುದು’ ಹೇಗೆ?
21 ಮೊದಲನೆಯ ಕೀರ್ತನೆಯು ಹೀಗೆ ಅಂತ್ಯಗೊಳ್ಳುತ್ತದೆ: “ಯೆಹೋವನು ನೀತಿವಂತರ ಮಾರ್ಗವನ್ನು ಲಕ್ಷಿಸುವನು; ದುಷ್ಟರ ಮಾರ್ಗವೋ ನಾಶವಾಗುವದು.” (ಕೀರ್ತನೆ 1:6) ದೇವರು ‘ನೀತಿವಂತರನ್ನು ಲಕ್ಷಿಸುವುದು’ ಹೇಗೆ? ಹೇಗೆಂದರೆ, ನಾವು ಒಂದುವೇಳೆ ಪ್ರಾಮಾಣಿಕ ಮಾರ್ಗವನ್ನು ಅನುಸರಿಸುತ್ತಿರುವಲ್ಲಿ ನಮ್ಮ ಸ್ವರ್ಗೀಯ ಪಿತನು ನಮ್ಮ ದೈವಭಕ್ತ ಜೀವನವನ್ನು ಲಕ್ಷ್ಯಮಾಡಿ, ನಮ್ಮನ್ನು ಆತನ ಮನ್ನಣೆ ಪಡೆದ ಸೇವಕರೆಂದು ವೀಕ್ಷಿಸುತ್ತಾನೆಂಬ ನಿಶ್ಚಯ ನಮಗಿರಬಲ್ಲದು. ಆಗ ನಾವು, ಆತನು ನಿಜವಾಗಿಯೂ ನಮ್ಮ ಹಿತಚಿಂತನೆಯನ್ನು ಮಾಡುತ್ತಾನೆಂಬ ಭರವಸೆಯಿಂದ ನಮ್ಮ ಎಲ್ಲಾ ಚಿಂತಾಭಾರವನ್ನು ಆತನ ಮೇಲೆ ಹಾಕಬಲ್ಲೆವು ಮತ್ತು ಹಾಕಬೇಕು.—ಯೆಹೆಜ್ಕೇಲ 34:11; 1 ಪೇತ್ರ 5:6, 7.
22, 23. ದುಷ್ಟರಿಗೆ ಮತ್ತು ನೀತಿವಂತರಿಗೆ ಏನು ಸಂಭವಿಸುವುದು?
22 “ನೀತಿವಂತರ ಮಾರ್ಗ” ಸದಾ ಅಸ್ತಿತ್ವದಲ್ಲಿರುವುದು, ಆದರೆ ತಿದ್ದಲಾಗದಷ್ಟು ದುಷ್ಟರಾಗಿರುವವರು ಯೆಹೋವನ ಪ್ರತಿಕೂಲ ತೀರ್ಪಿನ ಕಾರಣ ನಾಶಗೊಳ್ಳುವರು. ಮತ್ತು ಅವರ “ಮಾರ್ಗ” ಇಲ್ಲವೆ ಜೀವನರೀತಿ ಅವರೊಂದಿಗೇ ಇಲ್ಲವಾಗಿ ಹೋಗುವುದು. ದಾವೀದನ ಈ ಮಾತುಗಳ ನೆರವೇರಿಕೆಯಲ್ಲಿ ನಾವು ಭರವಸೆಯಿಂದಿರಸಾಧ್ಯವಿದೆ: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು. ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:10, 11, 29.
23 ದುಷ್ಟರು ಇಲ್ಲದಿರುವ ಆ ಪರದೈಸ ಭೂಮಿಯಲ್ಲಿ ಜೀವಿಸುವ ಸದವಕಾಶವು ನಮಗೆ ದೊರೆಯುವಲ್ಲಿ ನಾವೆಷ್ಟು ಸಂತೋಷವನ್ನು ಅನುಭವಿಸುವೆವು! ಆಗ ದೀನರೂ ನೀತಿವಂತರೂ, ಸದಾ “ಯೆಹೋವನ ಧರ್ಮಶಾಸ್ತ್ರದಲ್ಲಿ” ಆನಂದಪಡುವುದರಿಂದ ನಿಜ ಶಾಂತಿಯನ್ನು ಅನುಭವಿಸುವರು. ಆದರೆ, ಅದಕ್ಕೆ ಮೊದಲಾಗಿ, “ಯೆಹೋವನ ಆಜ್ಞೆ” ಜಾರಿಗೆ ತರಲ್ಪಡಬೇಕು. (ಕೀರ್ತನೆ 2:7ಎ) ಆ ಆಜ್ಞೆ ಏನೆಂಬುದನ್ನು ಮತ್ತು ಅದು ನಮಗೂ ಇಡೀ ಮಾನವ ಕುಟುಂಬಕ್ಕೂ ಯಾವ ಅರ್ಥದಲ್ಲಿರುವುದು ಎಂಬುದನ್ನು ನೋಡಲು ಮುಂದಿನ ಲೇಖನವು ನಮಗೆ ಸಹಾಯಮಾಡುವುದು.
ನಿಮ್ಮ ಉತ್ತರವೇನು?
• ದೇವಭಕ್ತಿಯುಳ್ಳ ಒಬ್ಬ ವ್ಯಕ್ತಿಯು ಏಕೆ ಸಂತೋಷಿತನಾಗಿದ್ದಾನೆ?
• ನಾವು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುತ್ತೇವೆಂಬುದನ್ನು ಯಾವುದು ತೋರಿಸುತ್ತದೆ?
• ಒಬ್ಬ ವ್ಯಕ್ತಿಯು ಹೇಗೆ ತುಂಬ ನೀರು ದೊರೆಯುವ ಮರದಂತಿರಬಲ್ಲನು?
• ನೀತಿವಂತರ ಮಾರ್ಗ ದುಷ್ಟರ ಮಾರ್ಗಕ್ಕಿಂತ ಭಿನ್ನವಾಗಿರುವುದು ಹೇಗೆ?
[ಪುಟ 11ರಲ್ಲಿರುವ ಚಿತ್ರ]
ದುಷ್ಟರೊಂದಿಗೆ ಒಡನಾಟ ಮಾಡುವುದರಿಂದ ದೂರವಿರಲು ಪ್ರಾರ್ಥನೆಯು ನಮಗೆ ಸಹಾಯಮಾಡುವುದು
[ಪುಟ 12ರಲ್ಲಿರುವ ಚಿತ್ರ]
ನೀತಿವಂತನು ಏಕೆ ಒಂದು ಮರದಂತಿದ್ದಾನೆ?