“ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ”
“ಕ್ರೈಸ್ತ ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ.”—ರೋಮಾಪುರ 12:10, Nw.
1, 2. ಒಬ್ಬ ಆಧುನಿಕ ದಿನದ ಮಿಷನೆರಿ ಮತ್ತು ಅಪೊಸ್ತಲ ಪೌಲನು ತಮ್ಮ ಸಹೋದರರೊಂದಿಗೆ ಯಾವ ಸಂಬಂಧದಲ್ಲಿ ಆನಂದಿಸಿದರು?
ದೂರ ಪ್ರಾಚ್ಯದಲ್ಲಿ ಮಿಷನೆರಿಯಾಗಿ ಸೇವೆ ಸಲ್ಲಿಸಿದ್ದ 43 ವರ್ಷಗಳಾದ್ಯಂತ, ಡಾನ್ ತಾವು ಸೇವೆಮಾಡುತ್ತಿದ್ದವರಿಗಾಗಿ ಹೊಂದಿದ್ದ ಹಾರ್ದಿಕತೆಗೆ ಹೆಸರುವಾಸಿಯಾಗಿದ್ದರು. ಅವರಿಗೆ ಮರಣವನ್ನು ತಂದೊಡ್ಡಿದ ರೋಗದಿಂದಾಗಿ ಕೊನೆಯ ಬಾರಿ ಹಾಸಿಗೆಹಿಡಿದಾಗ, ಅವರ ಮಾಜಿ ವಿದ್ಯಾರ್ಥಿಗಳಲ್ಲಿ ಕೆಲವರು ಸಾವಿರಾರು ಮೈಲಿ ಪ್ರಯಾಣಿಸಿ, ಅವರ ಬಳಿ ಬಂದು “ಕಾಮ್ಸಾಹಾಮ್ನೀಡಾ, ಕಾಮ್ಸಾಹಾಮ್ನೀಡಾ!” ಎಂದು ಕೊರಿಯನ್ ಭಾಷೆಯಲ್ಲಿ “ಉಪಕಾರ, ತುಂಬ ಉಪಕಾರ” ಎಂದು ಹೇಳಿದರು. ಡಾನ್ರವರ ಕೋಮಲ ಮಮತೆಯು ಅವರ ಹೃದಯಗಳನ್ನು ಸ್ಪರ್ಶಿಸಿತ್ತು.
2 ಈ ರೀತಿ ಕೋಮಲಭಾವವನ್ನು ತೋರಿಸಿದವರು ಡಾನ್ ಒಬ್ಬರೇ ಅಲ್ಲ. ಪ್ರಥಮ ಶತಮಾನದಲ್ಲಿ ಅಪೊಸ್ತಲ ಪೌಲನು, ತಾನು ಸೇವೆ ಸಲ್ಲಿಸಿದವರಿಗೆ ಗಾಢವಾದ ಮಮತೆಯನ್ನು ವ್ಯಕ್ತಪಡಿಸಿದನು. ಪೌಲನು ಈ ವಿಷಯದಲ್ಲಿ ತನ್ನನ್ನೇ ಕೊಟ್ಟುಕೊಂಡನು. ಅವನು ದೃಢಸಂಕಲ್ಪವುಳ್ಳ ವ್ಯಕ್ತಿಯಾಗಿದ್ದನಾದರೂ, “ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ” ಕೋಮಲಭಾವವನ್ನು ಮತ್ತು ಕಾಳಜಿಯನ್ನು ವ್ಯಕ್ತಪಡಿಸಿದನು. ಥೆಸಲೋನಿಕದಲ್ಲಿದ್ದ ಸಭೆಗೆ ಅವನು ಬರೆದದ್ದು: “ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು.” (1 ಥೆಸಲೋನಿಕ 2:7, 8) ಅನಂತರ, ಪೌಲನು ಎಫೆಸದಲ್ಲಿದ್ದ ತನ್ನ ಸಹೋದರರಿಗೆ, ಅವರು ಇನ್ನು ಮೇಲೆ ತನ್ನನ್ನು ನೋಡಸಾಧ್ಯವಿಲ್ಲ ಎಂದು ಹೇಳಿದಾಗ, “ಅವರೆಲ್ಲರು ಬಹಳವಾಗಿ ಅತ್ತರು . . . ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು.” (ಅ. ಕೃತ್ಯಗಳು 20:25, 37, 38) ಪೌಲ ಮತ್ತು ಅವನ ಸಹೋದರರ ಮಧ್ಯೆಯಿದ್ದ ಸಂಬಂಧವು ಕೇವಲ ಅವರು ಒಂದೇ ನಂಬಿಕೆಯನ್ನು ಹೊಂದಿದ್ದಾರೆ ಎಂಬುದಕ್ಕಿಂತಲೂ ಹೆಚ್ಚಿನದ್ದಾಗಿತ್ತು ಎಂಬುದು ಸ್ಪಷ್ಟ. ಅವರಿಗೆ ಪರಸ್ಪರರಲ್ಲಿ ಕೋಮಲ ಮಮತೆಯಿತ್ತು.
ಕೋಮಲ ಮಮತೆ ಮತ್ತು ಪ್ರೀತಿ
3. ಬೈಬಲಿನಲ್ಲಿ ಮಮತೆ ಮತ್ತು ಪ್ರೀತಿಗಾಗಿ ಉಪಯೋಗಿಸಲ್ಪಟ್ಟಿರುವ ಪದಗಳು ಹೇಗೆ ಒಂದಕ್ಕೊಂದು ಸಂಬಂಧಿಸಿವೆ?
3 ಶಾಸ್ತ್ರವಚನಗಳಲ್ಲಿ ಕೋಮಲ ಮಮತೆ, ಸಹಾನುಭೂತಿ, ಮತ್ತು ಕರುಣೆಯು ಕ್ರೈಸ್ತ ಗುಣಗಳಲ್ಲೇ ಅತಿ ಉದಾತ್ತವಾದ ಪ್ರೀತಿಯೊಂದಿಗೆ ನಿಕಟವಾಗಿ ಜೋಡಿಸಲ್ಪಟ್ಟಿದೆ. (1 ಥೆಸಲೋನಿಕ 2:8; 2 ಪೇತ್ರ 1:7) ಒಂದು ಸುಂದರವಾದ ವಜ್ರದ ವಿಭಿನ್ನ ಮುಖಗಳಂತೆ, ಈ ಎಲ್ಲಾ ದೈವಿಕ ಗುಣಗಳು ಒಂದಕ್ಕೊಂದು ಬೆಂಬಲವನ್ನಿತ್ತು ಪೂರಕಗಳಾಗಿ ಕಾರ್ಯನಡೆಸುತ್ತವೆ. ಇವು ಕ್ರೈಸ್ತರನ್ನು ಪರಸ್ಪರ ಹತ್ತಿರಕ್ಕೆ ಸೆಳೆಯುತ್ತವೆ ಮಾತ್ರವಲ್ಲ ಅವರ ಸ್ವರ್ಗೀಯ ತಂದೆಯ ಸಮೀಪಕ್ಕೂ ಸೆಳೆಯುತ್ತವೆ. ಆದುದರಿಂದ, ಅಪೊಸ್ತಲ ಪೌಲನು ತನ್ನ ಜೊತೆ ವಿಶ್ವಾಸಿಗಳನ್ನು ಉತ್ತೇಜಿಸಿದ್ದು: “ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. . . . ಕ್ರೈಸ್ತ ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ.”—ರೋಮಾಪುರ 12:9, 10, NW.
4. “ಕೋಮಲ ಮಮತೆ” ಎಂಬ ಅಭಿವ್ಯಕ್ತಿಯ ಅರ್ಥವೇನು?
4 ಪೌಲನು “ಕೋಮಲ ಮಮತೆ”ಗಾಗಿ ಉಪಯೋಗಿಸಿದ ಗ್ರೀಕ್ ಶಬ್ದದಲ್ಲಿ ಎರಡು ಭಾಗಗಳಿವೆ—ಒಂದು ಸ್ನೇಹವನ್ನೂ ಮತ್ತೊಂದು ಸ್ವಾಭಾವಿಕ ಮಮತೆಯನ್ನೂ ಅರ್ಥೈಸುತ್ತದೆ. ಒಬ್ಬ ಬೈಬಲ್ ವಿದ್ವಾಂಸನು ವಿವರಿಸುವಂತೆ, ಇದರ ಅರ್ಥ ಕ್ರೈಸ್ತರು “ಪ್ರೀತಿಭರಿತ, ಅನ್ಯೋನ್ಯ, ಮತ್ತು ಪರಸ್ಪರ ಬೆಂಬಲಿಸುವ ಕುಟುಂಬ ಸದಸ್ಯರ ಮಧ್ಯೆಯಿರುವ ನಿಷ್ಠೆಯ ಗುಣಲಕ್ಷಣದಿಂದ ಗುರುತಿಸಲ್ಪಡಬೇಕು.” ನಿಮ್ಮ ಕ್ರೈಸ್ತ ಸಹೋದರ ಸಹೋದರಿಯರ ಬಗ್ಗೆ ನಿಮಗೆ ಹಾಗೆ ಅನಿಸುತ್ತದೋ? ಕ್ರೈಸ್ತ ಸಭೆಯಲ್ಲಿ ಬೆಚ್ಚಗಿನ ವಾತಾವರಣವು—ಹತ್ತಿರದ ಬಾಂಧವ್ಯದ ಅನಿಸಿಕೆಯು—ವ್ಯಾಪಕವಾಗಿ ಹರಡಿಕೊಂಡಿರಬೇಕು. (ಗಲಾತ್ಯ 6:10) ಆದುದರಿಂದ, ನಮ್ಮ ಕನ್ನಡ ಬೈಬಲು ರೋಮಾಪುರ 12:10ನ್ನು, “ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ” ಎಂದು ತರ್ಜುಮೆಮಾಡುತ್ತದೆ. ಮತ್ತು ಪರಿಶುದ್ಧ ಬೈಬಲ್ ಹೀಗೆ ಭಾಷಾಂತರಿಸುತ್ತದೆ: “ಸಹೋದರ ಸಹೋದರಿಯರೆಂಬ ಅನ್ಯೋನ್ಯಭಾವದಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ.”a ಹೌದು, ಕ್ರೈಸ್ತರು ಒಬ್ಬರಿಗೊಬ್ಬರು ತೋರಿಸುವ ಪ್ರೀತಿಯಲ್ಲಿ, ನ್ಯಾಯಸಮ್ಮತತೆ ಅಥವಾ ಕರ್ತವ್ಯಪ್ರಜ್ಞೆಗಿಂತಲೂ ಹೆಚ್ಚಿನದ್ದು ಒಳಗೂಡಿದೆ. “ನಿಷ್ಕಪಟವಾದ ಸಹೋದರಸ್ನೇಹವುಳ್ಳವರಾಗಿ” ನಾವು “ಒಬ್ಬರನ್ನೊಬ್ಬರು ಹೃದಯಪೂರ್ವಕವಾಗಿ . . . ಪ್ರೀತಿ”ಸಬೇಕು.—1 ಪೇತ್ರ 1:22.
“ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು . . . ದೇವರಿಂದ ಹೊಂದಿ”ದ್ದೇವೆ
5, 6. (ಎ) ಕ್ರೈಸ್ತ ಮಮತೆಯ ಕುರಿತು ತನ್ನ ಜನರಿಗೆ ಉಪದೇಶಿಸಲಿಕ್ಕಾಗಿ ಯೆಹೋವನು ಅಂತಾರಾಷ್ಟ್ರೀಯ ಅಧಿವೇಶನಗಳನ್ನು ಹೇಗೆ ಉಪಯೋಗಿಸಿದ್ದಾನೆ? (ಬಿ) ಒಂದಷ್ಟು ಕಾಲ ಸಂದಂತೆ ನಮ್ಮ ಸಹೋದರರ ಮಧ್ಯೆಯಿರುವ ಬಂಧವು ಹೇಗೆ ಗಟ್ಟಿಯಾಗುತ್ತದೆ?
5 ಈ ಲೋಕದಲ್ಲಿ “ಬಹುಜನರ ಪ್ರೀತಿಯು ತಣ್ಣಗಾಗಿ” ಹೋಗುತ್ತಿರುವುದಾದರೂ, ಯೆಹೋವನು ತನ್ನ ಆಧುನಿಕ ದಿನದ ಜನರಿಗೆ “ಒಬ್ಬರನ್ನೊಬ್ಬರು ಪ್ರೀತಿಸ”ಬೇಕೆಂದು ಉಪದೇಶಿಸುತ್ತಿದ್ದಾನೆ. (ಮತ್ತಾಯ 24:12; 1 ಥೆಸಲೋನಿಕ 4:9) ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನಗಳು ಈ ತರಬೇತಿಯನ್ನು ಪಡೆದುಕೊಳ್ಳಲು ಅತ್ಯುತ್ತಮವಾದ ಸಂದರ್ಭಗಳಾಗಿವೆ. ಈ ಅಧಿವೇಶನಗಳಲ್ಲಿ, ಸ್ಥಳಿಕ ಸಾಕ್ಷಿಗಳು ದೂರದ ದೇಶಗಳಿಂದ ಬರುವ ಸಹೋದರರನ್ನು ಭೇಟಿಯಾಗುತ್ತಾರೆ, ಮತ್ತು ಅನೇಕರು ವಿದೇಶೀ ಪ್ರತಿನಿಧಿಗಳಿಗಾಗಿ ತಮ್ಮ ಮನೆಗಳನ್ನು ಲಭ್ಯಗೊಳಿಸಿದ್ದಾರೆ. ಇತ್ತೀಚೆಗೆ ನಡೆಸಲ್ಪಟ್ಟ ಇಂತಹ ಒಂದು ಅಧಿವೇಶನಕ್ಕೆ, ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಸ್ವಲ್ಪ ಹಿಂಜರಿಯುವಂಥ ದೇಶಗಳಿಂದ ಕೆಲವು ಜನರು ಬಂದಿದ್ದರು. “ಈ ಪ್ರತಿನಿಧಿಗಳು ಮೊದಲು ಬಂದಿಳಿದಾಗ ತುಂಬ ಅಂಜಿಕೆಯುಳ್ಳವರಾಗಿದ್ದರು ಮತ್ತು ತುಂಬ ನಾಚುತ್ತಿದ್ದರು” ಎಂದು ವಸತಿಸೌಕರ್ಯವನ್ನು ಪಡೆದುಕೊಳ್ಳುವುದರಲ್ಲಿ ಅವರಿಗೆ ಸಹಾಯಮಾಡಿದ ಒಬ್ಬ ಕ್ರೈಸ್ತನು ವಿವರಿಸುತ್ತಾನೆ. “ಆದರೆ ಕೇವಲ ಆರು ದಿನಗಳ ಅನಂತರ ಅವರು ವಿದಾಯ ಹೇಳುತ್ತಿದ್ದಾಗ, ಅವರು ಮತ್ತು ಅವರ ಆತಿಥೇಯರು ಒಬ್ಬರನ್ನೊಬ್ಬರು ಆಲಿಂಗಿಸಿ ಅಳುತ್ತಿದ್ದರು. ಅವರು ಎಂದಿಗೂ ಮರೆಯಲಸಾಧ್ಯವಾದ ಒಂದು ರೀತಿಯ ಕ್ರೈಸ್ತ ಪ್ರೀತಿಯಲ್ಲಿ ತೋಯಿಸಲ್ಪಟ್ಟಿದ್ದರು.” ನಮ್ಮ ಸಹೋದರರ ಹಿನ್ನೆಲೆಯ ಹೊರತೂ ಅವರಿಗೆ ಅತಿಥಿಸತ್ಕಾರವನ್ನು ತೋರಿಸುವುದು, ಅತಿಥಿಯಲ್ಲಿಯೂ ಆತಿಥೇಯನಲ್ಲಿಯೂ ಇರುವ ಅತ್ಯುತ್ತಮ ಗುಣಗಳನ್ನು ಪ್ರದರ್ಶಿಸುವಂತೆ ಸಾಧ್ಯಗೊಳಿಸಬಲ್ಲದು.—ರೋಮಾಪುರ 12:13.
6 ಇಂತಹ ಅಧಿವೇಶನದ ಅನುಭವಗಳು ನಮ್ಮನ್ನು ಪುಳಕಿತಗೊಳಿಸುವಂತೆಯೇ, ಕ್ರೈಸ್ತರು ಒಂದಷ್ಟು ಕಾಲ ಜೊತೆಯಾಗಿ ಯೆಹೋವನಿಗೆ ಸೇವೆ ಸಲ್ಲಿಸುವಾಗ ಇನ್ನೂ ಹೆಚ್ಚು ಆಪ್ತವಾದ ಸಂಬಂಧಗಳು ಬೆಸೆಯಲ್ಪಡುತ್ತವೆ. ನಾವು ನಮ್ಮ ಸಹೋದರರ ಸುಪರಿಚಯ ಮಾಡಿಕೊಳ್ಳುವಾಗ, ಅವರ ಆಕರ್ಷಣೀಯ ಗುಣಗಳನ್ನು—ಅವರ ಸತ್ಯಾರ್ಥತೆ, ಭರವಸಾರ್ಹತೆ, ನಿಷ್ಠೆ, ದಯೆ, ಉದಾರತೆ, ಪರಿಗಣನೆ, ಕರುಣೆ, ಮತ್ತು ನಿಸ್ವಾರ್ಥಭಾವವನ್ನು—ಹೆಚ್ಚು ಪೂರ್ಣವಾಗಿ ಗಣ್ಯಮಾಡಲು ಸಾಧ್ಯವಾಗುವುದು. (ಕೀರ್ತನೆ 15:3-5; ಜ್ಞಾನೋಕ್ತಿ 19:22) ಪೂರ್ವ ಆಫ್ರಿಕದಲ್ಲಿ ಮಿಷನೆರಿಯಾಗಿ ಸೇವೆ ಸಲ್ಲಿಸಿದ ಮಾರ್ಕ್ ಹೇಳುವುದು: “ನಮ್ಮ ಸಹೋದರರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸಮಾಡುವುದು ಮುರಿಯಲ್ಪಡದ ಒಂದು ಬಂಧವನ್ನು ಬೆಸೆಯುತ್ತದೆ.”
7. ನಾವು ಸಭೆಯಲ್ಲಿ ಕ್ರೈಸ್ತ ಮಮತೆಯಲ್ಲಿ ಆನಂದಿಸಬೇಕಾದರೆ ಏನು ಅವಶ್ಯ?
7 ಒಂದು ಸಭೆಯಲ್ಲಿ ಇಂತಹ ಬಂಧವನ್ನು ಬೆಳೆಸಿ ಕಾಪಾಡಿಕೊಳ್ಳಲಿಕ್ಕಾಗಿ, ಅದರ ಸದಸ್ಯರು ಪರಸ್ಪರ ಸಮೀಪವಾಗಬೇಕು. ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮೂಲಕ, ನಮ್ಮ ಸಹೋದರ ಸಹೋದರಿಯರೊಂದಿಗಿನ ನಂಟನ್ನು ನಾವು ಬಲಗೊಳಿಸುತ್ತೇವೆ. ನಾವು ಕೂಟಗಳಲ್ಲಿ ಉಪಸ್ಥಿತರಿದ್ದು ಕೂಟಗಳಿಗೆ ಮುಂಚೆ ಮತ್ತು ಅನಂತರ ಸಹವಾಸಿಸಿ ಅವುಗಳಲ್ಲಿ ಪಾಲ್ಗೊಳ್ಳುವ ಮೂಲಕ, ಒಬ್ಬರನ್ನೊಬ್ಬರು “ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ” ಉತ್ತೇಜಿಸಿ, ಪ್ರೇರೇಪಿಸುತ್ತೇವೆ. (ಇಬ್ರಿಯ 10:24, 25) ಯುನೈಟಡ್ ಸ್ಟೇಟ್ಸ್ನಲ್ಲಿರುವ ಒಬ್ಬ ಹಿರಿಯನು ವಿವರಿಸುವುದು: “ನಾನು ಮಗುವಾಗಿದ್ದಾಗ, ಸ್ನೇಹಪರ ಹಾಗೂ ಅರ್ಥಭರಿತ ಸಂಭಾಷಣೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಕಾಲ ಆನಂದಿಸುತ್ತಾ ಸಭಾಗೃಹದಿಂದ ಹೊರಬರುತ್ತಿದ್ದ ಕೊನೆಯವರಲ್ಲಿ ನನ್ನ ಕುಟುಂಬವು ಒಂದಾಗಿತ್ತು ಎಂಬುದು ನನ್ನ ಸವಿನೆನಪುಗಳಲ್ಲಿ ಒಂದಾಗಿದೆ.”
ನೀವು “ವಿಶಾಲ”ಗೊಳ್ಳುವ ಅಗತ್ಯವಿದೆಯೋ?
8. (ಎ) ಪೌಲನು ಕ್ರೈಸ್ತರನ್ನು “ವಿಶಾಲ”ಗೊಳ್ಳಬೇಕೆಂದು ಉತ್ತೇಜಿಸಿದಾಗ ಏನನ್ನು ಅರ್ಥೈಸಿದನು? (ಬಿ) ಸಭೆಯಲ್ಲಿ ಮಮತೆಯನ್ನು ಪ್ರವರ್ಧಿಸಲಿಕ್ಕಾಗಿ ನಾವೇನು ಮಾಡಬಲ್ಲೆವು?
8 ಇಂತಹ ಮಮತೆಯಲ್ಲಿ ಸಂಪೂರ್ಣವಾಗಿ ಪಾಲಿಗರಾಗಬೇಕಾದರೆ, ನಾವು ನಮ್ಮ ಹೃದಯಗಳಲ್ಲಿ “ವಿಶಾಲ”ಗೊಳ್ಳಬೇಕಾಗಿರುವುದು. ಕೊರಿಂಥದಲ್ಲಿದ್ದ ಸಭೆಗೆ ಅಪೊಸ್ತಲ ಪೌಲನು ಬರೆದದ್ದು: “ನಮ್ಮ ಹೃದಯವು ನಿಮ್ಮ ವಿಷಯದಲ್ಲಿ ವಿಶಾಲವಾಯಿತು. ನಿಮ್ಮ ಮೇಲಿರುವ ನಮ್ಮ ಪ್ರೀತಿ ಸಂಕೋಚವಾದದ್ದಲ್ಲ.” ಇದಕ್ಕೆ ಪ್ರತಿಯಾಗಿ ಅವರು ಸಹ ತಮ್ಮ ಪ್ರೀತಿಯಲ್ಲಿ “ವಿಶಾಲ”ಗೊಳ್ಳುವಂತೆ ಪೌಲನು ಉತ್ತೇಜಿಸಿದನು. (2 ಕೊರಿಂಥ 6:11-13) ನೀವು ಸಹ ನಿಮ್ಮ ಮಮತೆಯಲ್ಲಿ “ವಿಶಾಲ”ಗೊಳ್ಳಬಲ್ಲಿರೋ? ಇತರರು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಲಿ ಎಂದು ಕಾದುಕೊಂಡಿರಬೇಡಿ. ರೋಮಾಪುರದವರಿಗೆ ಬರೆದ ತನ್ನ ಪತ್ರದಲ್ಲಿ, ಕೋಮಲ ಮಮತೆಯನ್ನು ಹೊಂದಿರುವುದನ್ನು ಪೌಲನು ಈ ಬುದ್ಧಿವಾದದೊಂದಿಗೆ ಜೋಡಿಸುತ್ತಾನೆ: “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮಾಪುರ 12:10) ಇತರರಿಗೆ ಮಾನಮರ್ಯಾದೆಯನ್ನು ತೋರಿಸಲಿಕ್ಕಾಗಿ, ಕೂಟಗಳಲ್ಲಿ ಅವರನ್ನು ವಂದಿಸಲು ನೀವು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಬಹುದು. ಅವರು ನಿಮ್ಮೊಂದಿಗೆ ಕ್ಷೇತ್ರ ಶುಶ್ರೂಷೆಯಲ್ಲಿ ಅಥವಾ ಕೂಟಕ್ಕೆ ತಯಾರಿಸುವುದರಲ್ಲಿ ನಿಮ್ಮ ಜೊತೆಗೂಡುವಂತೆ ನೀವು ಅವರನ್ನು ಆಮಂತ್ರಿಸಬಹುದು. ಹೀಗೆ ಮಾಡುವುದು ಕೋಮಲ ಮಮತೆಯು ಬೆಳೆಯುವಂತೆ ದಾರಿಮಾಡಿಕೊಡುತ್ತದೆ.
9. ಜೊತೆ ಕ್ರೈಸ್ತರೊಂದಿಗೆ ಆಪ್ತ ಸ್ನೇಹಿತರಾಗಲು ಕೆಲವರು ಯಾವ ಹೆಜ್ಜೆಗಳನ್ನು ತೆಗೆದುಕೊಂಡಿದ್ದಾರೆ? (ಯಾವುದೇ ಸ್ಥಳಿಕ ಅನುಭವಗಳನ್ನು ಸೇರಿಸಿಕೊಳ್ಳಿ.)
9 ಸಭೆಯಲ್ಲಿರುವ ಕುಟುಂಬಗಳು ಮತ್ತು ವ್ಯಕ್ತಿಗಳು, ಒಬ್ಬರನ್ನೊಬ್ಬರು ಭೇಟಿಮಾಡುವ ಮೂಲಕ, ಪ್ರಾಯಶಃ ಈ ಸಮಯದಲ್ಲಿ ಜೊತೆಯಾಗಿ ಒಂದು ಸರಳ ಊಟವನ್ನು ಮಾಡುವ ಮೂಲಕ, ಮತ್ತು ಹಿತಕರವಾದ ಚಟುವಟಿಕೆಗಳಲ್ಲಿ ಜೊತೆಯಾಗಿ ಪಾಲ್ಗೊಳ್ಳುವ ಮೂಲಕ “ವಿಶಾಲ”ಗೊಳ್ಳಬಹುದು. (ಲೂಕ 10:42; 14:12-14) ಹಾಕೋಪನು ಆಗಿಂದಾಗ್ಗೆ ಸಣ್ಣಸಣ್ಣ ಗುಂಪುಗಳಿಗಾಗಿ ಪಿಕ್ನಿಕ್ಗಳನ್ನು ಏರ್ಪಡಿಸುತ್ತಿದ್ದನು. ಅವನು ಹೇಳುವುದು: “ಎಲ್ಲಾ ವಯಸ್ಸಿನವರು ಹಾಜರಿರುತ್ತಾರೆ, ಮತ್ತು ಇವರಲ್ಲಿ ಒಂಟಿ ಹೆತ್ತವರು ಸಹ ಇರುತ್ತಾರೆ. ಪ್ರತಿಯೊಬ್ಬರೂ ಮನೆಗೆ ಹಿಂದಿರುಗುವಾಗ ಸವಿನೆನಪುಗಳನ್ನು ಕೊಂಡೊಯ್ಯುತ್ತಾರೆ, ಮತ್ತು ಅವರಿಗೆ ಪರಸ್ಪರ ಹತ್ತಿರವಾದ ಅನಿಸಿಕೆಯಾಗುತ್ತದೆ.” ಕ್ರೈಸ್ತರೋಪಾದಿ, ನಾವು ಜೊತೆ ವಿಶ್ವಾಸಿಗಳಾಗಿರಲು ಮಾತ್ರವಲ್ಲದೆ, ನಿಜ ಸ್ನೇಹಿತರಾಗಿರಲು ಸಹ ಹೆಣಗಾಡಬೇಕು.—3 ಯೋಹಾನ 14.
10. ಸಂಬಂಧಗಳು ಕಠಿಣಕರವಾಗಿ ತೋರುವಾಗ ನಾವೇನು ಮಾಡಬಲ್ಲೆವು?
10 ಆದರೂ ಕೆಲವೊಮ್ಮೆ, ಸ್ನೇಹ ಮತ್ತು ಮಮತೆಯನ್ನು ಬೆಳೆಸಿಕೊಳ್ಳುವುದರಲ್ಲಿ ಅಪರಿಪೂರ್ಣತೆಗಳು ಅಡ್ಡಗಾಲು ಹಾಕಬಹುದು. ಆಗ ನಾವೇನು ಮಾಡಬಹುದು? ಮೊದಲು, ನಾವು ನಮ್ಮ ಸಹೋದರರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿರುವುದರ ಬಗ್ಗೆ ಪ್ರಾರ್ಥಿಸಬೇಕು. ತನ್ನ ಸೇವಕರು ಒಬ್ಬರಿಗೊಬ್ಬರು ಸ್ನೇಹಪರರಾಗಿರಬೇಕು ಎಂಬುದು ದೇವರ ಚಿತ್ತವಾಗಿದೆ, ಮತ್ತು ಇಂತಹ ಪ್ರಾಮಾಣಿಕ ಪ್ರಾರ್ಥನೆಗಳಿಗೆ ಆತನು ಖಂಡಿತ ಉತ್ತರ ಕೊಡುವನು. (1 ಯೋಹಾನ 4:20, 21; 5:14, 15) ನಾವು ನಮ್ಮ ಪ್ರಾರ್ಥನೆಗಳಿಗೆ ತಕ್ಕ ಹಾಗೆ ಕ್ರಿಯೆಗೈಯಬೇಕು ಕೂಡ. ಪೂರ್ವ ಆಫ್ರಿಕದಲ್ಲಿರುವ ರಿಕ್ ಎಂಬ ಸಂಚರಣ ಶುಶ್ರೂಷಕರು, ಒಬ್ಬ ಸಹೋದರನ ಒರಟು ಸ್ವಭಾವದಿಂದಾಗಿ ಅವನೊಂದಿಗೆ ವ್ಯವಹರಿಸುವುದು ಕಷ್ಟಕರವಾಗಿದ್ದ ಒಂದು ಅನುಭವದ ಬಗ್ಗೆ ಜ್ಞಾಪಿಸಿಕೊಳ್ಳುತ್ತಾರೆ. ರಿಕ್ ವಿವರಿಸುವುದು: “ಆ ಸಹೋದರನನ್ನು ದೂರವಿಡುವ ಬದಲಿಗೆ, ಅವನ ಹೆಚ್ಚು ಪರಿಚಯಮಾಡಿಕೊಳ್ಳಲು ನಾನು ತೀರ್ಮಾನಿಸಿದೆ. ಆಗಲೇ ಈ ಸಹೋದರನ ತಂದೆ ಒಬ್ಬ ಕಠಿಣ ಶಿಸ್ತುಗಾರರಾಗಿದ್ದರೆಂದು ಗೊತ್ತಾಯಿತು. ಈ ಹಿನ್ನೆಲೆಯ ಪ್ರಭಾವವನ್ನು ಪ್ರತಿಭಟಿಸಲು ಈ ಸಹೋದರನು ಎಷ್ಟು ಹೆಣಗಾಡಿದ್ದನು ಮತ್ತು ಎಷ್ಟು ಪ್ರಗತಿಯನ್ನು ಮಾಡಿದ್ದನು ಎಂಬುದನ್ನು ನಾನು ಅರ್ಥಮಾಡಿಕೊಂಡಾಗ, ಅವನನ್ನು ಗೌರವದಿಂದ ನೋಡಲಾರಂಭಿಸಿದೆ. ನಾವು ಒಳ್ಳೇ ಸ್ನೇಹಿತರಾದೆವು.”—1 ಪೇತ್ರ 4:8.
ಮನಬಿಚ್ಚಿ ಮಾತಾಡಿರಿ!
11. (ಎ) ಸಭೆಯಲ್ಲಿ ಮಮತೆಯು ಬೆಳೆಯಬೇಕಾದರೆ ಏನು ಅಗತ್ಯ? (ಬಿ) ಇತರರಿಗೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸದೆ ಇರುವುದು ಏಕೆ ಆಧ್ಯಾತ್ಮಿಕವಾಗಿ ಹಾನಿಕರವಾಗಿರಬಲ್ಲದು?
11 ಇಂದು, ಅನೇಕರು ಯಾರೊಂದಿಗೂ ಒಂದು ಆಪ್ತ ಸ್ನೇಹವನ್ನು ಬೆಳೆಸಿಕೊಳ್ಳದೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇದು ಎಷ್ಟು ದುಃಖಕರ ಸಂಗತಿ! ಕ್ರೈಸ್ತ ಸಭೆಯಲ್ಲಿ ಇಂತಹ ಪರಿಸ್ಥಿತಿ ಇರಬೇಕಾಗಿಲ್ಲ ಮತ್ತು ಇರಕೂಡದು. ನಿಜವಾದ ಸಹೋದರ ಪ್ರೀತಿಯು ಕೇವಲ ಸೌಜನ್ಯಭರಿತ ಸಂಭಾಷಣೆ ಮತ್ತು ಸಭ್ಯ ವರ್ತನೆ ಆಗಿರುವುದಿಲ್ಲ; ಅಥವಾ ಇತರರ ಕಡೆಗೆ ವಿಪರೀತವಾಗಿ ಪ್ರೀತಿಯ ಅಭಿವ್ಯಕ್ತಿಗಳ ಮಳೆಗೆರೆಯುವುದೂ ಅಲ್ಲ. ಬದಲಿಗೆ, ನಾವು ನಮ್ಮ ಮನಬಿಚ್ಚಿ ಮಾತಾಡಲು ಸಿದ್ಧರಾಗಿರಬೇಕು, ಮತ್ತು ಪೌಲನು ಕೊರಿಂಥದವರಿಗೆ ಮಾಡಿದಂತೆ, ನಾವು ನಮ್ಮ ಜೊತೆ ವಿಶ್ವಾಸಿಗಳ ಹಿತಕ್ಷೇಮದ ಬಗ್ಗೆ ನಿಜವಾಗಿಯೂ ಚಿಂತಿಸುತ್ತೇವೆ ಎಂದು ತೋರಿಸಬೇಕು. ಎಲ್ಲರೂ ಸ್ವಾಭಾವಿಕವಾಗಿಯೇ ಸಹವಾಸಪ್ರಿಯರೂ ಮಾತಾಳಿಗಳೂ ಆಗಿರಲಿಕ್ಕಿಲ್ಲವಾದರೂ, ನಮ್ಮನ್ನು ತೀರ ಪ್ರತ್ಯೇಕಿಸಿಕೊಳ್ಳುವುದು ಹಾನಿಕರವಾಗಿರಬಲ್ಲದು. “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು” ಎಂದು ಬೈಬಲ್ ಹೇಳುತ್ತದೆ.—ಜ್ಞಾನೋಕ್ತಿ 18:1.
12. ಸಭೆಯಲ್ಲಿ ಆಪ್ತ ಸಂಬಂಧಗಳನ್ನು ಹೊಂದಿರಲು ಒಳ್ಳೆಯ ಸಂವಾದ ಏಕೆ ಆವಶ್ಯಕವಾಗಿದೆ?
12 ನಿಜ ಸ್ನೇಹಕ್ಕೆ ಸಾಚಾ ಸಂವಾದ ಬುನಾದಿಯಂತಿದೆ. (ಯೋಹಾನ 15:15) ನಮ್ಮ ಅಂತರಾಳದ ಆಲೋಚನೆಗಳು ಮತ್ತು ಅನಿಸಿಕೆಗಳನ್ನು ಹಂಚಿಕೊಳ್ಳಲಿಕ್ಕಾಗಿ ನಮಗೆಲ್ಲರಿಗೂ ಸ್ನೇಹಿತರ ಅಗತ್ಯವಿದೆ. ಮಾತ್ರವಲ್ಲದೆ, ನಾವು ಒಬ್ಬರನ್ನೊಬ್ಬರು ಎಷ್ಟು ಹೆಚ್ಚಾಗಿ ಪರಿಚಯಮಾಡಿಕೊಳ್ಳುತ್ತೇವೋ, ಅಷ್ಟೇ ಹೆಚ್ಚಾಗಿ ಒಬ್ಬರು ಮತ್ತೊಬ್ಬರ ಅಗತ್ಯಗಳನ್ನು ಪೂರೈಸಲು ಸುಲಭವಾಗುತ್ತದೆ. ನಾವು ಒಬ್ಬರು ಇನ್ನೊಬ್ಬರ ಆಸಕ್ತಿಗಳಲ್ಲಿ ಅಕ್ಕರೆ ವಹಿಸುವಾಗ, ಕೋಮಲ ಮಮತೆಯನ್ನು ಪ್ರವರ್ಧಿಸುತ್ತೇವೆ, ಮತ್ತು “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಎಂಬ ಯೇಸುವಿನ ಮಾತುಗಳ ಸತ್ಯಾರ್ಥವನ್ನು ಅನುಭವಿಸುವೆವು.—ಅ. ಕೃತ್ಯಗಳು 20:35; ಫಿಲಿಪ್ಪಿ 2:1-4.
13. ನಮಗೆ ನಮ್ಮ ಸಹೋದರರಿಗಾಗಿ ನಿಜ ಮಮತೆಯಿದೆ ಎಂಬುದನ್ನು ತೋರಿಸಲು ನಾವೇನು ಮಾಡಬಲ್ಲೆವು?
13 ನಮ್ಮ ಮಮತೆಯಿಂದ ಅತಿ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ನಾವು ಅದನ್ನು ವ್ಯಕ್ತಪಡಿಸಬೇಕಾಗಿದೆ. (ಜ್ಞಾನೋಕ್ತಿ 27:5) ನಮ್ಮ ಮಮತೆಯು ನಿಜವಾಗಿರುವಾಗ, ನಮ್ಮ ಮುಖದಲ್ಲಿ ಅದು ಕಂಡುಬರುವುದು, ಮತ್ತು ಇದಕ್ಕೆ ಸ್ಪಂದಿಸುವಂತೆ ಇತರರನ್ನು ಪ್ರಚೋದಿಸಬಹುದು. “ಕಣ್ಣಿಗೆ ಬಿದ್ದ ಬೆಳಕು ಹೃದಯಕ್ಕೆ ಆನಂದ” ಎಂದು ವಿವೇಕಿಯು ಬರೆದನು. (ಜ್ಞಾನೋಕ್ತಿ 15:30) ಆಲೋಚನಾಭರಿತ ಕೃತ್ಯಗಳು ಸಹ ಕೋಮಲ ಮಮತೆಯನ್ನು ಪ್ರವರ್ಧಿಸುತ್ತವೆ. ಯಾರಿಂದಲೂ ನಿಜ ಮಮತೆಯನ್ನು ಖರೀದಿಸಲು ಸಾಧ್ಯವಿಲ್ಲವಾದರೂ, ಮನಃಪೂರ್ವಕವಾಗಿ ಕೊಡಲ್ಪಟ್ಟ ಒಂದು ಉಡುಗೊರೆಯು ತುಂಬ ಅರ್ಥಭರಿತವಾಗಿರಬಲ್ಲದು. ಒಂದು ಗ್ರೀಟಿಂಗ್ ಕಾರ್ಡ್, ಒಂದು ಪತ್ರ, ಮತ್ತು “ಸಮಯೋಚಿತವಾದ ಮಾತು”ಗಳೆಲ್ಲವೂ ಗಾಢವಾದ ಮಮತೆಯನ್ನು ವ್ಯಕ್ತಪಡಿಸಬಲ್ಲವು. (ಜ್ಞಾನೋಕ್ತಿ 25:11; 27:9) ನಾವು ಒಮ್ಮೆ ಇತರರ ಸ್ನೇಹವನ್ನು ಗಳಿಸಿದ ಮೇಲೆ, ನಿಸ್ವಾರ್ಥ ಮಮತೆಯನ್ನು ತೋರಿಸುತ್ತಾ ಮುಂದುವರಿಯುವ ಮೂಲಕ ನಾವದನ್ನು ಕಾಪಾಡಿಕೊಳ್ಳಬೇಕು. ವಿಶೇಷವಾಗಿ ಅಗತ್ಯದ ಸಮಯಗಳಲ್ಲಿ ನಾವು ನಮ್ಮ ಸ್ನೇಹಿತರ ಪಕ್ಕದಲ್ಲಿರಲು ಬಯಸುವೆವು. ಬೈಬಲ್ ಹೇಳುವುದು: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.”—ಜ್ಞಾನೋಕ್ತಿ 17:17.
14. ಯಾರಾದರೂ ನಾವು ತೋರಿಸುವ ಮಮತೆಗೆ ಸ್ಪಂದಿಸದಿರುವಂತೆ ತೋರುವಲ್ಲಿ ನಾವೇನು ಮಾಡಬಲ್ಲೆವು?
14 ವಾಸ್ತವಿಕವಾಗಿ, ಸಭೆಯಲ್ಲಿರುವ ಪ್ರತಿಯೊಬ್ಬರೊಂದಿಗೂ ಆಪ್ತರಾಗಿರಬೇಕೆಂದು ನಾವು ಬಯಸಸಾಧ್ಯವಿಲ್ಲ. ಸ್ವಾಭಾವಿಕವಾಗಿ ನಾವು ಕೆಲವರೊಂದಿಗೆ ಆಪ್ತರಾಗಿರುವಾಗ ಇತರರೊಂದಿಗೆ ಹಾಗಿರಲಿಕ್ಕಿಲ್ಲ. ಆದುದರಿಂದ, ನೀವು ಬಯಸಿದಷ್ಟು ಒಬ್ಬರು ನಿಮ್ಮೊಂದಿಗೆ ಸ್ನೇಹಪರವಾಗಿ ವರ್ತಿಸಲಿಲ್ಲವಾದರೆ, ನಿಮ್ಮಲ್ಲಿ ಅಥವಾ ಆ ವ್ಯಕ್ತಿಯಲ್ಲಿ ಏನೋ ದೋಷವಿದೆ ಎಂದು ಒಡನೆಯೇ ತೀರ್ಮಾನಿಸಿಬಿಡಬೇಡಿ. ಮತ್ತು ಅವರೊಂದಿಗೆ ಒಂದು ಆಪ್ತ ಸಂಬಂಧವನ್ನು ಹೊಂದಲಿಕ್ಕಾಗಿ ಒತ್ತಾಯವನ್ನು ಹಾಕಬೇಡಿ. ಕೇವಲ ಆ ವ್ಯಕ್ತಿ ಅನುಮತಿಸುವಷ್ಟು ಸ್ನೇಹಪರತೆಯನ್ನು ನೀವು ತೋರಿಸುತ್ತಾ ಮುಂದುವರಿಯುವಲ್ಲಿ, ಭವಿಷ್ಯತ್ತಿನಲ್ಲಿ ಆಪ್ತ ಸಂಬಂಧಗಳನ್ನು ಬೆಸೆಯುವ ದಾರಿಯನ್ನು ತೆರೆದೇ ಇಡಲು ನೀವು ಸಹಾಯಮಾಡುತ್ತಿದ್ದೀರಿ.
“ನಿನ್ನನ್ನು ನಾನು ಮೆಚ್ಚಿದ್ದೇನೆ”
15. ಶ್ಲಾಘಿಸುವುದು ಅಥವಾ ಶ್ಲಾಘಿಸದಿರುವುದು ಇತರರ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ?
15 ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ, “ನಿನ್ನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯನ್ನು ಪರಲೋಕದಿಂದ ಕೇಳಿಸಿಕೊಂಡಾಗ ಯೇಸು ಎಷ್ಟು ಆನಂದಿಸಿರಬೇಕು! (ಮಾರ್ಕ 1:11) ತನ್ನ ತಂದೆಗೆ ತನ್ನ ಮೇಲೆ ಮಮತೆಯಿದೆ ಎಂಬ ಯೇಸುವಿನ ದೃಢನಿಶ್ಚಯವನ್ನು, ಅಂಗೀಕಾರದ ಈ ಅಭಿವ್ಯಕ್ತಿಯು ಇನ್ನಷ್ಟು ಗಾಢಗೊಳಿಸಿರಬೇಕು. (ಯೋಹಾನ 5:20) ದುಃಖಕರವಾಗಿ, ಕೆಲವರು ತಾವು ಗೌರವಿಸುವಂಥ ಮತ್ತು ಪ್ರೀತಿಸುವಂಥ ವ್ಯಕ್ತಿಗಳಿಂದ ಇಂತಹ ಶ್ಲಾಘನೆಯನ್ನು ಎಂದಿಗೂ ಕೇಳಿಸಿಕೊಳ್ಳುವುದಿಲ್ಲ. ಆ್ಯನ್ ಹೇಳುವುದು: “ನನ್ನಂತೆಯೇ ಅನೇಕ ಯುವ ಜನರಿಗೆ ತಮ್ಮ ಕ್ರೈಸ್ತ ನಂಬಿಕೆಗಳನ್ನು ಸ್ವೀಕರಿಸಿರುವ ಕುಟುಂಬ ಸದಸ್ಯರಿರುವುದಿಲ್ಲ. ಮನೆಯಲ್ಲಿ ನಾವು ಕೇಳಿಸಿಕೊಳ್ಳುವುದೆಲ್ಲಾ ಬರೀ ಟೀಕೆಯೇ. ಇದು ನಮ್ಮನ್ನು ತುಂಬ ದುಃಖಪಡಿಸುತ್ತದೆ.” ಆದರೆ, ಅವರು ಸಭೆಯ ಭಾಗವಾಗುವಾಗ, ಕ್ರಿಸ್ತನಂಬಿಕೆಯಲ್ಲಿರುವ ತಂದೆತಾಯಂದಿರು, ಅಣ್ಣತಮ್ಮಂದಿರು ಹಾಗೂ ಅಕ್ಕತಂಗಿಯರಿಂದ ಕೂಡಿದ ಒಂದು ಬೆಂಬಲಾತ್ಮಕ, ಕಾಳಜಿಭರಿತ ಆಧ್ಯಾತ್ಮಿಕ ಕುಟುಂಬದ ಪ್ರೀತಿವಾತ್ಸಲ್ಯವನ್ನು ಅವರು ಅನುಭವಿಸುತ್ತಾರೆ.—ಮಾರ್ಕ 10:29, 30; ಗಲಾತ್ಯ 6:10.
16. ಇತರರ ಬಗ್ಗೆ ಟೀಕಾತ್ಮಕ ಮನೋಭಾವವನ್ನು ತೋರಿಸುವುದು ಏಕೆ ಸಹಾಯಕಾರಿಯಾಗಿರಲಾರದು?
16 ಕೆಲವು ಸಂಸ್ಕೃತಿಗಳಲ್ಲಿ, ಎಳೆಯರನ್ನು ಹೊಗಳುವುದು ಅವರನ್ನು ಸೋಮಾರಿಗಳನ್ನಾಗಿ ಅಥವಾ ಅಹಂಕಾರಿಗಳನ್ನಾಗಿ ಮಾಡಬಹುದು ಎಂದು ಯೋಚಿಸುತ್ತಾ, ಹೆತ್ತವರು, ವೃದ್ಧರು, ಮತ್ತು ಶಿಕ್ಷಕರು ಯುವ ಜನರನ್ನು ಹೃತ್ಪೂರ್ವಕವಾಗಿ ಶ್ಲಾಘಿಸುವುದು ತೀರ ವಿರಳ. ಇಂತಹ ಆಲೋಚನೆಯು ಕ್ರೈಸ್ತ ಕುಟುಂಬಗಳು ಮತ್ತು ಸಭೆಯಲ್ಲಿಯೂ ನುಸುಳಬಹುದು. ಒಂದು ಭಾಷಣ ಅಥವಾ ಬೇರೊಂದು ಕೆಲಸದ ಬಗ್ಗೆ ವೃದ್ಧರು ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ, “ಒಳ್ಳೇದಿತ್ತು, ಆದರೆ ನೀನು ಇನ್ನೂ ಉತ್ತಮವಾಗಿ ಮಾಡಬಲ್ಲೆ!” ಎಂದು ಹೇಳಬಹುದು. ಅಥವಾ ಬೇರೊಂದು ವಿಧದಲ್ಲಿ ಅವರು ಎಳೆಯವರ ಮೇಲೆ ಅಸಮಾಧಾನವನ್ನು ಸಹ ವ್ಯಕ್ತಪಡಿಸಬಹುದು. ಹೀಗೆ ಮಾಡುವ ಮೂಲಕ, ಎಳೆಯರು ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸುವಂತೆ ತಾವು ಪ್ರೋತ್ಸಾಹಿಸುತ್ತಿದ್ದೇವೆ ಎಂದು ಕೆಲವರು ನಂಬುತ್ತಾರೆ. ಆದರೆ ಈ ರೀತಿಯ ಸಮೀಪಿಸುವಿಕೆಯು ಅನೇಕವೇಳೆ ಉದ್ದೇಶಿಸಿದ್ದಕ್ಕೆ ವಿರುದ್ಧವಾದ ಪರಿಣಾಮವನ್ನು ತಂದೊಡ್ಡುತ್ತದೆ, ಏಕೆಂದರೆ ಎಳೆಯರು ಮುದುರಿಕೊಳ್ಳಬಹುದು ಅಥವಾ ಅಪೇಕ್ಷಿತ ಮಟ್ಟವನ್ನು ತಲಪಲು ಅಸಾಧ್ಯವಾದ ಸ್ಥಿತಿಯಲ್ಲಿ ತಮ್ಮನ್ನು ಕಂಡುಕೊಳ್ಳಬಹುದು.
17. ಇತರರನ್ನು ಶ್ಲಾಘಿಸಲು ಅವಕಾಶಗಳಿಗಾಗಿ ನಾವು ಏಕೆ ಹುಡುಕಬೇಕು?
17 ಆದರೂ, ಶ್ಲಾಘನೆಯನ್ನು, ಬುದ್ಧಿವಾದವನ್ನು ಕೊಡುವುದಕ್ಕೆ ಮುಂಚಿನ ಪೀಠಿಕೆಯಾಗಿ ಮಾತ್ರ ಉಪಯೋಗಿಸಬಾರದು. ಪ್ರಾಮಾಣಿಕ ಶ್ಲಾಘನೆಯು ಕುಟುಂಬದಲ್ಲಿ ಮತ್ತು ಸಭೆಯಲ್ಲಿ ಕೋಮಲ ಮಮತೆಯನ್ನು ಪ್ರವರ್ಧಿಸುತ್ತದೆ, ಮತ್ತು ಹೀಗೆ ಯುವ ಜನರು ಸಲಹೆಗಾಗಿ ಅನುಭವಸ್ಥ ಸಹೋದರ ಸಹೋದರಿಯರನ್ನು ಸಮೀಪಿಸುವಂತೆ ಪ್ರೋತ್ಸಾಹಿಸುತ್ತದೆ. ನಾವು ಇತರರನ್ನು ಉಪಚರಿಸುವ ರೀತಿಯ ಮೇಲೆ ಸಂಸ್ಕೃತಿಯು ಹತೋಟಿಯನ್ನು ಸಾಧಿಸುವಂತೆ ಬಿಡುವ ಬದಲು, “ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳ [ಹೊಸ ವ್ಯಕ್ತಿತ್ವವನ್ನು]” ಧರಿಸಿಕೊಳ್ಳೋಣ. ಯೆಹೋವನು ಶ್ಲಾಘಿಸುವಂತೆ ಶ್ಲಾಘಿಸಿರಿ.—ಎಫೆಸ 4:24.
18. (ಎ) ಯುವ ಜನರೇ, ವಯೋವೃದ್ಧರಿಂದ ಕೊಡಲ್ಪಡುವ ಬುದ್ಧಿವಾದವನ್ನು ನೀವು ಹೇಗೆ ವೀಕ್ಷಿಸಬೇಕು? (ಬಿ) ವಯೋವೃದ್ಧರು ತಾವು ಹೇಗೆ ಬುದ್ಧಿವಾದವನ್ನು ನೀಡಬೇಕು ಎಂಬುದರ ಬಗ್ಗೆ ಆಲೋಚಿಸಿ ನೋಡುತ್ತಾರೆ ಏಕೆ?
18 ಮತ್ತೊಂದು ಬದಿಯಲ್ಲಿ, ಯುವ ಜನರೇ, ವೃದ್ಧರು ನಿಮಗೆ ತಿದ್ದುಪಾಟನ್ನು ಅಥವಾ ಬುದ್ಧಿವಾದವನ್ನು ನೀಡುವುದಾದರೆ, ಅವರಿಗೆ ನಿಮ್ಮನ್ನು ಕಂಡರೆ ಇಷ್ಟವಿಲ್ಲ ಎಂದು ತೀರ್ಮಾನಿಸಬೇಡಿ. (ಪ್ರಸಂಗಿ 7:9) ಅದು ನಿಜವಲ್ಲ! ಅವರು ನಿಮ್ಮ ಬಗ್ಗೆ ಕಾಳಜಿ ಮತ್ತು ಗಾಢ ಮಮತೆಯನ್ನು ಹೊಂದಿರುವುದರಿಂದ ಹೀಗೆ ಮಾಡುತ್ತಾರೆ. ಇಲ್ಲವಾದರೆ, ಒಂದು ವಿಷಯವನ್ನು ತಂದು ಅದರ ಬಗ್ಗೆ ನಿಮ್ಮೊಂದಿಗೆ ಮಾತನಾಡುವ ಗೊಡವೆಗೆ ಅವರು ಯಾಕೆ ಹೋಗಬೇಕು? ಮಾತುಗಳು ಬೀರಬಲ್ಲ ಪರಿಣಾಮವನ್ನು ಅರಿತವರಾಗಿರುವುದರಿಂದ, ವಯೋವೃದ್ಧರು—ವಿಶೇಷವಾಗಿ ಸಭಾ ಹಿರಿಯರು—ತಾವು ಕೊಡಲಿರುವ ಬುದ್ಧಿವಾದದ ಬಗ್ಗೆ ಆಲೋಚಿಸುವುದರಲ್ಲಿ ಮತ್ತು ಪ್ರಾರ್ಥಿಸುವುದರಲ್ಲಿ ಅನೇಕವೇಳೆ ಹೆಚ್ಚು ಸಮಯವನ್ನು ವ್ಯಯಿಸುತ್ತಾರೆ. ಏಕೆಂದರೆ ಅವರು ಒಳ್ಳೇದನ್ನೇ ಮಾಡಲು ಬಯಸುತ್ತಾರೆ.—1 ಪೇತ್ರ 5:5.
‘[ಯೆಹೋವನು] ಕರುಣಾಸಾಗರನು’
19. ಆಶಾಭಂಗವನ್ನು ಅನುಭವಿಸಿರುವವರು ಬೆಂಬಲಕ್ಕಾಗಿ ಯೆಹೋವನತ್ತ ನೋಡಬಲ್ಲರು ಏಕೆ?
19 ಕೋಮಲ ಮಮತೆಯನ್ನು ತೋರಿಸಿ ಕಹಿಯಾದ ಪ್ರತಿಫಲಗಳನ್ನು ಪಡೆದುಕೊಂಡವರು, ಕೋಮಲ ಮಮತೆಯನ್ನು ತೋರಿಸುವುದು ಹೆಚ್ಚೆಚ್ಚು ಆಶಾಭಂಗಕ್ಕೇ ನಡಿಸುವುದು ಎಂಬ ತೀರ್ಮಾನಕ್ಕೆ ಬಂದಿರಬಹುದು. ಅವರಿಗೆ ಮತ್ತೊಮ್ಮೆ ಇತರರೊಂದಿಗೆ ಮನಬಿಚ್ಚಿ ಮಾತಾಡಬೇಕಾದರೆ ಅದು ಧೈರ್ಯ ಮತ್ತು ಬಲವಾದ ನಂಬಿಕೆಯನ್ನು ಕೇಳಿಕೊಳ್ಳುತ್ತದೆ. ಆದರೆ ಯೆಹೋವನು “ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ” ಎಂಬುದನ್ನು ಅವರು ಎಂದಿಗೂ ಮರೆಯಬಾರದು. ತನ್ನ ಸಮೀಪಕ್ಕೆ ಬರುವಂತೆ ಆತನು ಆಮಂತ್ರಿಸುತ್ತಾನೆ. (ಅ. ಕೃತ್ಯಗಳು 17:27; ಯಾಕೋಬ 4:8) ನೋಯಿಸಲ್ಪಡಬಹುದೆಂಬ ಭಯ ನಮಗಿದೆ ಎಂಬುದನ್ನು ಸಹ ಆತನು ಅರ್ಥಮಾಡಿಕೊಳ್ಳುತ್ತಾನೆ, ಮತ್ತು ನಮ್ಮ ಪಕ್ಕ ನಿಂತು ನಮಗೆ ಸಹಾಯವನ್ನು ನೀಡುವ ವಾಗ್ದಾನವನ್ನು ಆತನು ಮಾಡುತ್ತಾನೆ. ಕೀರ್ತನೆಗಾರನಾದ ದಾವೀದನು ನಮಗೆ ಆಶ್ವಾಸನೆಯನ್ನು ನೀಡುವುದು: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.”—ಕೀರ್ತನೆ 34:18.
20, 21. (ಎ) ನಾವು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಹೊಂದಿರಬಲ್ಲೆವು ಎಂಬುದು ನಮಗೆ ಹೇಗೆ ತಿಳಿದಿದೆ? (ಬಿ) ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಹೊಂದಿರಲಿಕ್ಕಾಗಿ ಏನು ಕೇಳಿಕೊಳ್ಳಲ್ಪಡುತ್ತದೆ?
20 ಯೆಹೋವನೊಂದಿಗೆ ಆಪ್ತ ಸ್ನೇಹವನ್ನು ಹೊಂದಿರುವುದೇ ನಾವು ಬೆಳೆಸಿಕೊಳ್ಳಬಲ್ಲ ಅತಿ ಪ್ರಾಮುಖ್ಯವಾದ ಸಂಬಂಧವಾಗಿದೆ. ಆದರೆ ಇಂತಹ ಬಂಧವು ನಿಜವಾಗಿಯೂ ಸಾಧ್ಯವೋ? ಹೌದು. ನಂಬಿಗಸ್ತ ಸ್ತ್ರೀಪುರುಷರು ನಮ್ಮ ಸ್ವರ್ಗೀಯ ತಂದೆಯೊಂದಿಗೆ ಎಷ್ಟು ಹತ್ತಿರವಿರುವ ಅನಿಸಿಕೆಯುಳ್ಳವರಾಗಿದ್ದರು ಎಂಬುದನ್ನು ಬೈಬಲು ತಿಳಿಸುತ್ತದೆ. ಅವರ ಹೃದಯದಾಳದ ಅಭಿವ್ಯಕ್ತಿಗಳು, ನಾವು ಸಹ ಯೆಹೋವನ ಸಮೀಪಕ್ಕೆ ಬರಬಲ್ಲೆವು ಎಂಬ ದೃಢಸಂಕಲ್ಪವನ್ನು ನಮ್ಮಲ್ಲಿ ಮೂಡಿಸಲಿಕ್ಕಾಗಿ ಕಾಪಾಡಿಡಲ್ಪಟ್ಟಿವೆ.—ಕೀರ್ತನೆ 23, 34, 139; ಯೋಹಾನ 16:27; ರೋಮಾಪುರ 15:4.
21 ಯೆಹೋವನೊಂದಿಗೆ ಆಪ್ತತೆಯನ್ನು ಸಂಪಾದಿಸಿಕೊಳ್ಳಲು ಆತನು ಕೇಳಿಕೊಳ್ಳುವ ವಿಷಯಗಳು ಎಲ್ಲರ ಕೈಗೆ ಎಟಕುವಷ್ಟು ಸಮೀಪದಲ್ಲಿವೆ. “ಯೆಹೋವನೇ, ನಿನ್ನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾವನು?” ಎಂದು ದಾವೀದನು ಕೇಳಿದನು. “ಅವನು ಸಜ್ಜನನೂ ನೀತಿವಂತನೂ ಮನಃಪೂರ್ವಕವಾಗಿ ಸತ್ಯವಚನವನ್ನಾಡುವವನೂ ಆಗಿರಬೇಕು.” (ಕೀರ್ತನೆ 15:1, 2; 25:14) ದೇವರನ್ನು ಸೇವಿಸುವುದು ಒಳ್ಳೆಯ ಫಲವನ್ನು ಉತ್ಪಾದಿಸುತ್ತದೆ ಮತ್ತು ಆತನ ಮಾರ್ಗದರ್ಶನವನ್ನು ಮತ್ತು ಸಂರಕ್ಷಣೆಯನ್ನು ಗಳಿಸುವಂತೆ ಮಾಡುತ್ತದೆ ಎಂಬುದನ್ನು ನಾವು ನೋಡುವಾಗ, ‘[ಯೆಹೋವನು] ಕರುಣಾಸಾಗರನು’ ಅಥವಾ ಅತಿ ಕೋಮಲ ಮಮತೆಯನ್ನು ತೋರಿಸುವವನು ಆಗಿದ್ದಾನೆ ಎಂಬುದನ್ನು ಕಂಡುಕೊಳ್ಳುವೆವು.—ಯಾಕೋಬ 5:11.
22. ತನ್ನ ಜನರು ಯಾವ ರೀತಿಯ ಸಂಬಂಧದಲ್ಲಿ ಆನಂದಿಸುವಂತೆ ಯೆಹೋವನು ಇಚ್ಚಿಸುತ್ತಾನೆ?
22 ಯೆಹೋವನು ಅಪರಿಪೂರ್ಣ ಮಾನವರೊಂದಿಗೆ ಇಂತಹ ವೈಯಕ್ತಿಕ ಸಂಬಂಧವನ್ನು ಹೊಂದಿರಲು ಬಯಸುತ್ತಾನೆ ಎಂಬ ವಿಚಾರವೇ ನಮ್ಮನ್ನೆಷ್ಟು ಆಶೀರ್ವಾದಿತರನ್ನಾಗಿ ಮಾಡುತ್ತದೆ! ಹಾಗಾದರೆ ನಾವು ಒಬ್ಬರಿಗೊಬ್ಬರು ಕೋಮಲ ಮಮತೆಯನ್ನು ತೋರಿಸಬಾರದೋ? ಯೆಹೋವನ ಸಹಾಯದಿಂದ, ಕ್ರೈಸ್ತ ಸಭೆಯ ವೈಶಿಷ್ಟ್ಯವಾಗಿರುವ ಕೋಮಲ ಮಮತೆಗೆ ನಾವು ಹೆಚ್ಚನ್ನು ಕೂಡಿಸಬಲ್ಲೆವು ಮತ್ತು ಅದರಲ್ಲಿ ಆನಂದಿಸಬಲ್ಲೆವು. ದೇವರ ರಾಜ್ಯದ ಕೆಳಗೆ, ಭೂಮಿಯಲ್ಲಿರುವ ಸಕಲರೂ ಈ ಕೋಮಲ ಮಮತೆಯನ್ನು ಅನುಭವಿಸುವರು.
[ಪಾದಟಿಪ್ಪಣಿ]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
ವಿವರಿಸಬಲ್ಲಿರಾ?
• ಯಾವ ರೀತಿಯ ವಾತಾವರಣವು ಕ್ರೈಸ್ತ ಸಭೆಯಲ್ಲಿರಬೇಕು?
• ಸಭೆಯಲ್ಲಿ ಕೋಮಲ ಮಮತೆಯು ತೋರಿಸಲ್ಪಡುವುದಕ್ಕೆ ನಮ್ಮಲ್ಲಿ ಪ್ರತಿಯೊಬ್ಬರು ಹೇಗೆ ಹೆಚ್ಚನ್ನು ಕೂಡಿಸಬಲ್ಲೆವು?
• ಪ್ರಾಮಾಣಿಕ ಶ್ಲಾಘನೆಯು ಹೇಗೆ ಕ್ರೈಸ್ತ ಮಮತೆಯನ್ನು ಪ್ರವರ್ಧಿಸುತ್ತದೆ?
• ಯೆಹೋವನ ಕೋಮಲ ಮಮತೆ ನಮ್ಮನ್ನು ಬೆಂಬಲಿಸಿ ಪೋಷಿಸುವುದು ಹೇಗೆ?
[ಪುಟ 15ರಲ್ಲಿರುವ ಚಿತ್ರ]
ಕ್ರೈಸ್ತರ ಮಧ್ಯೆಯಿರುವ ಪ್ರೀತಿ ಕರ್ತವ್ಯಪ್ರಜ್ಞೆಗಿಂತ ಹೆಚ್ಚಿನದ್ದಾಗಿದೆ
[ಪುಟ 16, 17ರಲ್ಲಿರುವ ಚಿತ್ರಗಳು]
ನೀವು ನಿಮ್ಮ ಮಮತೆಯಲ್ಲಿ “ವಿಶಾಲ”ಗೊಳ್ಳಬಲ್ಲಿರೋ?
[ಪುಟ 18ರಲ್ಲಿರುವ ಚಿತ್ರ]
ನೀವು ಟೀಕಿಸುವವರೋ ಅಥವಾ ಪ್ರೋತ್ಸಾಹಿಸುವವರೋ?