ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w06 1/1 ಪು. 30
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಅನುರೂಪ ಮಾಹಿತಿ
  • ಸಕಾರಾತ್ಮಕ ನೋಟವನ್ನು ಯಾವಾಗಲೂ ಇಟ್ಟುಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ನಮ್ಮ ದಿನಗಳನ್ನು ಎಣಿಸುವ ವಿಧವನ್ನು ಯೆಹೋವನು ತೋರಿಸುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ನಾವು ಶಾಶ್ವತವಾಗಿ ಜೀವಿಸಬಹುದು!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಕೀರ್ತನೆಗಳ ತೃತೀಯ ಮತ್ತು ಚತುರ್ಥ ಭಾಗಗಳ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
w06 1/1 ಪು. 30

ವಾಚಕರಿಂದ ಪ್ರಶ್ನೆಗಳು

ಭೂಮ್ಯಾಕಾಶಗಳು “ನಾಶವಾಗುವವು” ಎಂದು ಕೀರ್ತನೆ 102:26 ತಿಳಿಸುತ್ತದೆ. ಹಾಗಾದರೆ ಭೂಗ್ರಹವು ನಾಶಗೊಳಿಸಲ್ಪಡುವುದು ಎಂಬುದು ಆ ಹೇಳಿಕೆಯ ಅರ್ಥವಾಗಿದೆಯೋ?

ಯೆಹೋವನಿಗೆ ಪ್ರಾರ್ಥಿಸುತ್ತಾ ಕೀರ್ತನೆಗಾರನು ಹೇಳಿದ್ದು: “ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದಿ; ಗಗನಮಂಡಲವು ನಿನ್ನ ಕೈಕೆಲಸವಾಗಿದೆ. ಅವು ನಾಶವಾಗುವವು; ಆದರೆ ನೀನು ಶಾಶ್ವತವಾಗಿರುತ್ತೀ. ಅವೆಲ್ಲವೂ ವಸ್ತ್ರದಂತೆ ಹಳೆಯವಾಗುವವು. ಉಡುಪಿನಂತೆ ಅವುಗಳನ್ನು ಬದಲಿಸುತ್ತೀ; ಅವು ಮಾರ್ಪಡುವವು.” (ಕೀರ್ತನೆ 102:25, 26) ಈ ವಚನಗಳು ಭೂಮಿಯ ನಾಶನದ ಬಗ್ಗೆ ಅಲ್ಲ, ಬದಲಿಗೆ ದೇವರ ನಿತ್ಯತೆಯ ಕುರಿತು ಮಾತಾಡುತ್ತಿವೆ ಎಂದು ಪೂರ್ವಪರ ವಚನಗಳು ತೋರಿಸುತ್ತವೆ. ದೇವರ ಸೇವಕರಿಗೆ ಈ ಪ್ರಾಮುಖ್ಯ ಸತ್ಯವು ಏಕೆ ಸಾಂತ್ವನದಾಯಕವಾಗಿರಬಲ್ಲದು ಎಂಬುದನ್ನೂ ಪೂರ್ವಾಪರ ವಚನಗಳು ತೋರಿಸುತ್ತವೆ.

ಪ್ರಾಯಶಃ ಬಾಬೆಲಿನ ಬಂಧಿವಾಸದಲ್ಲಿರುವ ಕೀರ್ತನೆಗಾರನು ತನಗೆ ದುಃಖವನ್ನುಂಟುಮಾಡುತ್ತಿರುವ ವಿಷಯಗಳ ಕುರಿತು ತಿಳಿಸುವ ಮೂಲಕ ಆರಂಭಿಸುತ್ತಾನೆ. ತನ್ನ ಜೀವಮಾನವು “ಹೊಗೆಯಂತೆ” ಮಾಯವಾಗುವಂಥದ್ದಾಗಿದೆ ಎಂದವನು ಪ್ರಲಾಪಿಸುತ್ತಾನೆ. ತೀವ್ರವಾದ ಮಾನಸಿಕ ಯಾತನೆಯು ಅವನ ದೇಹವನ್ನು ವ್ಯಥೆಗೊಳಿಸುತ್ತಾ, ಅವನ ಎಲುಬುಗಳು ‘ಕೊಳ್ಳಿಯಂತೆ ಸುಟ್ಟುಹೋಗುವಂತೆ’ ಮಾಡುತ್ತದೆ. ಅವನು ‘ಹುಲ್ಲಿನಂತೆ ಬಾಡಿದವನಾಗಿ’ ದಣಿದುಹೋಗಿದ್ದಾನೆ ಮತ್ತು ಅವನಿಗೆ “ಮನೆಮಾಳಿಗೆ ಮೇಲಿರುವ ಒಂಟಿಯಾದ ಪಕ್ಷಿ”ಯಂತಿರುವ ಅನಿಸಿಕೆಯಾಗುತ್ತದೆ. ಅವನು ಎದುರಿಸುತ್ತಿರುವ ಪರೀಕ್ಷೆಗಳು ಅವನಿಂದ ಹಸಿವೆಯನ್ನು ತೆಗೆದುಬಿಟ್ಟಿವೆ ಮತ್ತು ಅವನ ದಿನಗಳು ಬರೀ ಗೋಳಾಟದಿಂದ ತುಂಬಿವೆ. (ಕೀರ್ತನೆ 102:3-11) ಇಷ್ಟು ಸಂಭವಿಸಿರುವುದಾದರೂ, ಕೀರ್ತನೆಗಾರನು ನಂಬಿಕೆಯನ್ನು ಕಳೆದುಕೊಂಡಿಲ್ಲ. ಯಾಕೆ? ಯೆಹೋವನು ಚೀಯೋನ್‌ಗೆ ಅಥವಾ ಯೆರೂಸಲೇಮಿಗೆ ಏನನ್ನು ಮಾಡುವೆನೆಂದು ವಾಗ್ದಾನಿಸಿದ್ದಾನೋ ಅದರಿಂದಲೇ.

ಚೀಯೋನ್‌ ಧ್ವಂಸಗೊಳಿಸಲ್ಪಟ್ಟಿರುವುದಾದರೂ, ಅದು ಪುನಃಸ್ಥಾಪಿಸಲ್ಪಡುವುದು ಎಂದು ಯೆಹೋವನು ಮಾತುಕೊಟ್ಟಿದ್ದಾನೆ. (ಯೆಶಾಯ 66:8) ಆದುದರಿಂದ ಕೀರ್ತನೆಗಾರನು ಯೆಹೋವನಿಗೆ ದೃಢಭರವಸೆಯಿಂದ ಹೇಳುವುದು: ‘ನೀನು ಚೀಯೋನನ್ನು ಕರುಣಿಸುವಿ. ಅದಕ್ಕೆ ಕೃಪೆತೋರಿಸುವ ಸಮಯ ಇದೇ; ನಿಯಮಿತಕಾಲವು ಬಂದದೆ. ಆತನು ಚೀಯೋನನ್ನು ತಿರಿಗಿ ಕಟ್ಟಿಸುವನು.’ (ಕೀರ್ತನೆ 102:13, 16) ಅನಂತರ ಕೀರ್ತನೆಗಾರನು ಪುನಃ ತನ್ನ ವೈಯಕ್ತಿಕ ಯಾತನೆಯ ಕುರಿತು ತಿಳಿಸಲಾರಂಭಿಸುತ್ತಾನೆ. ವಾಸ್ತವದಲ್ಲಿ ದೇವರ ಶಕ್ತಿಯಿಂದ ಧ್ವಂಸಗೊಳಿಸಲ್ಪಟ್ಟ ಯೆರೂಸಲೇಮ್‌ ಪುನಃಸ್ಥಾಪಿಸಲ್ಪಡಲು ಸಾಧ್ಯವಿರುವುದಾದರೆ, ಯೆಹೋವನು ಕೀರ್ತನೆಗಾರನನ್ನು ಸಹ ಅವನ ಶೋಚನೀಯ ಪರಿಸ್ಥಿತಿಯಿಂದ ಖಂಡಿತ ಕಾಪಾಡಬಲ್ಲನು ಎಂದವನು ತರ್ಕಿಸುತ್ತಾನೆ. (ಕೀರ್ತನೆ 102:17, 20, 23) ಮತ್ತು ಬೇರೊಂದು ವಿಷಯವು ಯೆಹೋವನಲ್ಲಿ ಪೂರ್ಣ ಭರವಸೆಯನ್ನಿಡುವಂತೆ ಕೀರ್ತನೆಗಾರನನ್ನು ಪ್ರಚೋದಿಸುತ್ತದೆ. ಅದು ಯಾವುದು? ದೇವರು ನಿತ್ಯನು ಎಂಬ ವಾಸ್ತವಾಂಶವೇ.

ಯೆಹೋವನ ನಿತ್ಯತೆಯ ಅಸ್ತಿತ್ವವನ್ನು ಕೀರ್ತನೆಗಾರನ ಅಲ್ಪಕಾಲದ ಜೀವನಕ್ಕೆ ಹೋಲಿಸುವಾಗ ಅದು ಎಷ್ಟುಮಾತ್ರವೂ ತುಲನೆಗೆ ಬಾರದಂಥದ್ದಾಗಿದೆ. “ನಿನ್ನ ವರುಷಗಳು ತಲತಲಾಂತರಕ್ಕೂ ಇರುತ್ತವೆ” ಎಂದವನು ಯೆಹೋವನಿಗೆ ಹೇಳುತ್ತಾನೆ. (ಕೀರ್ತನೆ 102:24) ಕೀರ್ತನೆಗಾರನು ನಂತರ ಹೇಳುವುದು: “ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದಿ; ಗಗನಮಂಡಲವು ನಿನ್ನ ಕೈಕೆಲಸವಾಗಿದೆ.”​—ಕೀರ್ತನೆ 102:25.

ಆದರೂ, ಭೂಮ್ಯಾಕಾಶಗಳ ದೀರ್ಘಾಯುಷ್ಯವು ಸಹ ಯೆಹೋವನ ನಿತ್ಯತೆಯ ಅಸ್ತಿತ್ವದೊಂದಿಗೆ ಹೋಲಿಸಲ್ಪಡಲು ಸಾಧ್ಯವಿಲ್ಲ. ಕೀರ್ತನೆಗಾರನು ಕೂಡಿಸಿ ಹೇಳುವುದು: “ಅವು [ಭೂಮ್ಯಾಕಾಶಗಳು] ನಾಶವಾಗುವವು; ಆದರೆ ನೀನು ಶಾಶ್ವತವಾಗಿರುತ್ತೀ.” (ಕೀರ್ತನೆ 102:26) ಭೌತಿಕವಾದ ಭೂಮಿ ಮತ್ತು ಆಕಾಶಗಳು ನಶ್ವರವಾಗಿವೆ. ಅವು ಶಾಶ್ವತವಾಗಿ ನಿಲ್ಲುವವು ಎಂದು ಯೆಹೋವನು ಬೇರೆ ಕಡೆಯಲ್ಲಿ ತಿಳಿಸಿರುವುದು ನಿಜ. (ಕೀರ್ತನೆ 119:90; ಪ್ರಸಂಗಿ 1:4) ಆದರೆ, ದೇವರ ಚಿತ್ತವಿರುವುದಾದರೆ ಅವು ನಾಶಗೊಳಿಸಲ್ಪಡಲು ಸಾಧ್ಯವಿದೆ. ಇದಕ್ಕೆ ವಿರುದ್ಧವಾಗಿ, ದೇವರು ಮರಣವನ್ನಪ್ಪಲು ಸಾಧ್ಯವಿಲ್ಲ. ದೇವರು ಭೌತಿಕ ಸೃಷ್ಟಿಗಳನ್ನು ಕಾಪಾಡುತ್ತಿರುವುದರಿಂದಲೇ ಅವು ‘ಯುಗಯುಗಾಂತರಕ್ಕೂ ಸ್ಥಾಪಿಸಲ್ಪಟ್ಟಿವೆ.’ (ಕೀರ್ತನೆ 148:6) ಒಂದುವೇಳೆ ಯೆಹೋವನು ಭೌತಿಕ ಸೃಷ್ಟಿಗಳನ್ನು ನವೀಕರಿಸುವುದನ್ನು ನಿಲ್ಲಿಸುವುದಾದರೆ, “ಅವೆಲ್ಲವೂ ವಸ್ತ್ರದಂತೆ ಹಳೆಯವಾಗುವವು.” (ಕೀರ್ತನೆ 102:26) ಹೇಗೆ ಒಬ್ಬ ಮನುಷ್ಯನು ತಾನು ಧರಿಸುವ ವಸ್ತ್ರಗಳ ಉಪಯುಕ್ತ ಕಾಲಕ್ಕಿಂತ ಹೆಚ್ಚು ಕಾಲ ಜೀವಿಸುತ್ತಾನೋ ಹಾಗೆಯೇ ಯೆಹೋವನು​—ಆತನು ಇಷ್ಟಪಡುವುದಾದರೆ​—ತನ್ನ ಸೃಷ್ಟಿಗಿಂತ ಹೆಚ್ಚು ಕಾಲ ಬದುಕಬಲ್ಲನು. ಆದರೆ, ಇದು ಆತನ ಚಿತ್ತವಾಗಿರುವುದಿಲ್ಲ ಎಂಬುದನ್ನು ಇತರ ವಚನಗಳು ತೋರಿಸುತ್ತವೆ ಎಂಬುದು ನಮಗೆ ತಿಳಿದಿದೆ. ಅಕ್ಷರಶಃವಾದ ಭೂಮಿ ಮತ್ತು ಆಕಾಶವು ಸದಾಕಾಲ ಇರಬೇಕೆಂದು ಯೆಹೋವನು ದೃಢತೀರ್ಮಾನ ಮಾಡಿದ್ದಾನೆ ಎಂದು ದೇವರ ವಾಕ್ಯವು ಆಶ್ವಾಸನೆ ನೀಡುತ್ತದೆ.​—ಕೀರ್ತನೆ 104:5.

ಯೆಹೋವನು ಯಾವಾಗಲೂ ತನ್ನ ವಾಗ್ದಾನಗಳನ್ನು ಪೂರೈಸುವನು ಎಂಬುದನ್ನು ತಿಳಿದುಕೊಳ್ಳುವುದು ಸಾಂತ್ವನದ ಸಂಗತಿಯಾಗಿದೆ. ನಾವು ಯಾವುದೇ ಪರೀಕ್ಷೆಗಳನ್ನು ಎದುರಿಸುತ್ತಿರುವುದಾದರೂ, ನಾವು ಆತನಿಗೆ ಮೊರೆಯಿಡುವಾಗ ಆತನು ‘ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸುವನೆಂಬ’ ದೃಢಭರವಸೆಯಿಂದಿರಬಲ್ಲೆವು. (ಕೀರ್ತನೆ 102:15) ಹೌದು, ಕೀರ್ತನೆ 102ರಲ್ಲಿ ಯೆಹೋವನು ನಮಗೆ ಆಧಾರವಾಗಿ ನಿಲ್ಲುವನು ಎಂಬ ಆತನ ಆಶ್ವಾಸನೆಯು, ನಾವು ಜೀವಿಸುತ್ತಿರುವ ಈ ಭೂಮಿಗಿಂತ ಹೆಚ್ಚು ಸ್ಥಿರವಾದದ್ದಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ