ನೀತಿಗಾಗಿ ತವಕಪಡುವುದು ನಮ್ಮನ್ನು ಸಂರಕ್ಷಿಸುವುದು
‘ಹೀಗಿರುವದರಿಂದ, ನೀವು ಮೊದಲು . . . [ದೇವರ] ನೀತಿಗಾಗಿ ತವಕಪಡಿರಿ.’—ಮತ್ತಾಯ 6:33.
1, 2. ಒಬ್ಬ ಯುವ ಕ್ರೈಸ್ತಳು ಯಾವ ನಿರ್ಣಯವನ್ನು ಮಾಡಿದಳು, ಮತ್ತು ಅವಳು ಆ ನಿರ್ಣಯವನ್ನು ಮಾಡಿದ್ದಕ್ಕೆ ಕಾರಣವೇನು?
ಏಷ್ಯಾದ ಒಬ್ಬ ಕ್ರೈಸ್ತ ಸ್ತ್ರೀ ಸರಕಾರಿ ಕಛೇರಿಯೊಂದರಲ್ಲಿ ಸೆಕ್ರಿಟರಿಯಾಗಿ ಕೆಲಸಮಾಡುತ್ತಿದ್ದಳು. ಅವಳು ಶ್ರದ್ಧಾಪೂರ್ವಕ ಕೆಲಸಗಾರ್ತಿಯಾಗಿದ್ದು ಸಮಯಕ್ಕೆ ಮುಂಚಿತವಾಗಿ ಕೆಲಸಕ್ಕೆ ಬರುತ್ತಿದ್ದಳು ಮತ್ತು ತನ್ನ ಕೆಲಸವನ್ನು ಮಾಡುವುದರಲ್ಲಿ ಮೈಗಳ್ಳತನವನ್ನು ತೋರಿಸುತ್ತಿರಲಿಲ್ಲ. ಆದರೂ, ಅವಳ ಹುದ್ದೆಯು ತಾತ್ಕಾಲಿಕವಾಗಿದ್ದುದರಿಂದ, ಅವಳನ್ನು ಕಾಯಂ ಕೆಲಸಗಾರ್ತಿಯನ್ನಾಗಿ ಮಾಡುವುದೋ ಎಂಬುದರ ಬಗ್ಗೆ ಚರ್ಚೆ ನಡೆಯಿತು. ಅವಳ ಇಲಾಖೆಯ ಮುಖ್ಯಸ್ಥನು, ತನ್ನೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟುಕೊಳ್ಳಲು ಅನುಮತಿಸುವುದಾದರೆ ಅವಳನ್ನು ಕಾಯಂ ಕೆಲಸಗಾರ್ತಿಯನ್ನಾಗಿ ಮಾಡುವೆನೆಂದು ಮತ್ತು ಉನ್ನತ ಸ್ಥಾನವನ್ನೂ ಕೊಡುವೆನೆಂದು ಈ ಯುವ ಸ್ತ್ರೀಗೆ ಹೇಳಿದನು. ಇದರಿಂದ ತನ್ನ ಕೆಲಸವನ್ನು ಕಳೆದುಕೊಳ್ಳಬಹುದು ಎಂದು ಯೋಚಿಸುತ್ತಾ ನಿಲ್ಲುವ ಬದಲಿಗೆ ಈ ಪ್ರಸ್ತಾಪವನ್ನು ಅವಳು ನೇರವಾಗಿ ನಿರಾಕರಿಸಿದಳು.
2 ಆ ಯುವ ಕ್ರೈಸ್ತ ಸ್ತ್ರೀಯು ಅವ್ಯಾವಹಾರಿಕ ರೀತಿಯಲ್ಲಿ ವರ್ತಿಸಿದಳೋ? ಇಲ್ಲ, ಅವಳು ಯೇಸುವಿನ ಈ ಮಾತುಗಳನ್ನು ಜಾಗರೂಕವಾಗಿ ಪಾಲಿಸುತ್ತಿದ್ದಳು: ‘ಹೀಗಿರುವದರಿಂದ, ನೀವು ಮೊದಲು . . . [ದೇವರ] ನೀತಿಗಾಗಿ ತವಕಪಡಿರಿ.’ (ಮತ್ತಾಯ 6:33) ಅವಳಿಗೆ, ಲೈಂಗಿಕ ಅನೈತಿಕತೆಯಲ್ಲಿ ತೊಡಗುವ ಮೂಲಕ ಲಾಭವನ್ನು ಪಡೆದುಕೊಳ್ಳುವುದಕ್ಕಿಂತ ನೀತಿಭರಿತ ಮೂಲತತ್ತ್ವಗಳನ್ನು ಹಿಂಬಾಲಿಸುವುದು ಹೆಚ್ಚು ಪ್ರಾಮುಖ್ಯವಾಗಿತ್ತು.—1 ಕೊರಿಂಥ 6:18.
ನೀತಿಯ ಪ್ರಮುಖತೆ
3. ನೀತಿ ಎಂದರೇನು?
3 “ನೀತಿ” ಎಂಬುದು ನೈತಿಕ ಸಮಗ್ರತೆ ಮತ್ತು ಪ್ರಾಮಾಣಿಕತೆಯ ಸ್ಥಿತಿಯನ್ನು ಸೂಚಿಸುತ್ತದೆ. ಬೈಬಲಿನಲ್ಲಿ, ನೀತಿಗಾಗಿರುವ ಗ್ರೀಕ್ ಮತ್ತು ಹೀಬ್ರು ಪದಗಳು “ಒಳ್ಳೆಯ ನಡತೆ” ಅಥವಾ “ನೇರವಾದ ನಡವಳಿಕೆ” ಎಂಬ ಅರ್ಥಗಳನ್ನು ಕೊಡುತ್ತವೆ. ಇದು ಒಬ್ಬನು ತನ್ನ ಸ್ವಂತ ಮಟ್ಟಗಳ ಪ್ರಕಾರ ತನ್ನನ್ನೇ ಸಮರ್ಥಿಸಿಕೊಳ್ಳುವ ಸ್ವನೀತಿಗೆ ಸೂಚಿತವಾಗಿರುವುದಿಲ್ಲ. (ಲೂಕ 16:15) ಇದು ಯೆಹೋವನ ಮಟ್ಟಗಳಿಗನುಸಾರವಾದ ನೇರವಾದ ನಡವಳಿಕೆಯಾಗಿದೆ. ಇದು ದೇವರ ನೀತಿಯಾಗಿದೆ.—ರೋಮಾಪುರ 1:17; 3:21.
4. ನೀತಿಯು ಒಬ್ಬ ಕ್ರೈಸ್ತನಿಗೆ ಏಕೆ ಪ್ರಾಮುಖ್ಯವಾಗಿದೆ?
4 ನೀತಿಯು ಏಕೆ ಪ್ರಾಮುಖ್ಯವಾಗಿದೆ? ಏಕೆಂದರೆ, “ನೀತಿಸ್ವರೂಪನಾದ ಯೆಹೋವನು” ತನ್ನ ಜನರು ನೀತಿಯನ್ನು ನಡಿಸುವಾಗ ಅವರಿಗೆ ಅನುಗ್ರಹವನ್ನು ನೀಡುತ್ತಾನೆ. (ಕೀರ್ತನೆ 11:7; ಜ್ಞಾನೋಕ್ತಿ 2:20-22; ಹಬಕ್ಕೂಕ 1:13) ಅನೀತಿಯನ್ನು ನಡಿಸುವ ಯಾರೊಬ್ಬನೂ ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಹೊಂದಿರಲು ಸಾಧ್ಯವಿಲ್ಲ. (ಜ್ಞಾನೋಕ್ತಿ 15:8) ಆದುದರಿಂದಲೇ ಅಪೊಸ್ತಲ ಪೌಲನು ತಿಮೊಥೆಯನಿಗೆ, ‘ಯೌವನದ ಇಚ್ಛೆಗಳಿಗೆ ದೂರವಾಗಿರುವಂತೆ ಮತ್ತು ನೀತಿ’ಯೊಂದಿಗೆ ಇತರ ಅವಶ್ಯ ಗುಣಗಳನ್ನು ಬೆಳೆಸಿಕೊಳ್ಳಲು ‘ಪ್ರಯಾಸಪಡುವಂತೆ’ ಉತ್ತೇಜಿಸಿದನು. (2 ತಿಮೊಥೆಯ 2:22) ಮತ್ತು ಪೌಲನು ನಮ್ಮ ಆಧ್ಯಾತ್ಮಿಕ ಸರ್ವಾಯುಧಗಳ ಬೇರೆ ಬೇರೆ ಭಾಗಗಳನ್ನು ಪಟ್ಟಿಮಾಡಿದಾಗ “ನೀತಿಯೆಂಬ ವಜ್ರಕವಚವನ್ನು” ಸೇರಿಸಿದ್ದೂ ಈ ಕಾರಣಕ್ಕಾಗಿಯೇ.—ಎಫೆಸ 6:14.
5. ಅಪರಿಪೂರ್ಣ ಜೀವಿಗಳು ಹೇಗೆ ನೀತಿಗಾಗಿ ತವಕಪಡಸಾಧ್ಯವಿದೆ?
5 ವಾಸ್ತವದಲ್ಲಿ, ಯಾವೊಬ್ಬ ಮನುಷ್ಯನೂ ಸಂಪೂರ್ಣಾರ್ಥದಲ್ಲಿ ನೀತಿವಂತನಲ್ಲ. ಎಲ್ಲರೂ ಆದಾಮನಿಂದ ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದಿದ್ದಾರೆ ಮತ್ತು ಎಲ್ಲರೂ ಪಾಪಪೂರ್ಣರಾಗಿರುವುದರಿಂದ ಹುಟ್ಟಿದಂದಿನಿಂದಲೇ ಅನೀತಿಯುಳ್ಳವರಾಗಿದ್ದಾರೆ. ಹಾಗಿದ್ದರೂ ನಾವು ನೀತಿಗಾಗಿ ತವಕಪಡಬೇಕು ಎಂದು ಯೇಸು ಹೇಳಿದನು. ಅದು ಹೇಗೆ ಸಾಧ್ಯ? ಸಾಧ್ಯವಿದೆ, ಏಕೆಂದರೆ ಯೇಸು ತನ್ನ ಪರಿಪೂರ್ಣ ಜೀವವನ್ನು ನಮಗೋಸ್ಕರ ಪ್ರಾಯಶ್ಚಿತ್ತ ಯಜ್ಞವಾಗಿ ಕೊಟ್ಟನು ಮತ್ತು ನಾವು ಆ ಯಜ್ಞದಲ್ಲಿ ನಂಬಿಕೆಯಿಡುವುದಾದರೆ ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸಲು ಸಿದ್ಧನಾಗಿದ್ದಾನೆ. (ಮತ್ತಾಯ 20:28; ಯೋಹಾನ 3:16; ರೋಮಾಪುರ 5:8, 9, 12, 18) ಆ ಆಧಾರದ ಮೇಲೆ, ನಮ್ಮ ದೌರ್ಬಲ್ಯಗಳನ್ನು ಜಯಿಸಲು ಸಹಾಯಕ್ಕಾಗಿ ಪ್ರಾರ್ಥಿಸುತ್ತಾ, ಯೆಹೋವನ ನೀತಿಯುತ ಮಟ್ಟಗಳನ್ನು ತಿಳಿದುಕೊಂಡು ಅವುಗಳನ್ನು ಪಾಲಿಸಲು ನಮ್ಮಿಂದಾದಷ್ಟು ಪ್ರಯತ್ನವನ್ನು ಮಾಡುವುದಾದರೆ ಯೆಹೋವನು ನಮ್ಮ ಆರಾಧನೆಯನ್ನು ಸ್ವೀಕರಿಸುತ್ತಾನೆ. (ಕೀರ್ತನೆ 1:6; ರೋಮಾಪುರ 7:19-25; ಪ್ರಕಟನೆ 7:9, 14) ಅದೆಷ್ಟು ಸಾಂತ್ವನದಾಯಕವಾಗಿದೆ!
ಅನೀತಿಯುತ ಲೋಕದಲ್ಲಿ ನೀತಿವಂತರು
6. ಆದಿ ಕ್ರೈಸ್ತರಿಗೆ ಈ ಲೋಕವು ಒಂದು ಅಪಾಯಕರ ಸ್ಥಳವಾಗಿತ್ತು ಏಕೆ?
6 “ಭೂಲೋಕದ ಕಟ್ಟಕಡೆಯವರೆಗೂ” ಯೇಸುವಿಗೆ ಸಾಕ್ಷಿಗಳಾಗಿರಬೇಕು ಎಂಬ ಆಜ್ಞೆಯನ್ನು ಅವನ ಶಿಷ್ಯರು ಪಡೆದುಕೊಂಡಾಗ, ಅವರ ಮುಂದೆ ಒಂದು ಕಷ್ಟಕರ ಸನ್ನಿವೇಶವು ಎದ್ದಿತು. (ಅ. ಕೃತ್ಯಗಳು 1:8) ಅವರಿಗೆ ನೇಮಿಸಲ್ಪಟ್ಟ ಎಲ್ಲ ಟೆರಿಟೊರಿಯು “ಕೆಡುಕನ” ಅಂದರೆ ಸೈತಾನನ ‘ವಶದಲ್ಲಿ ಬಿದ್ದಿತ್ತು.’ (1 ಯೋಹಾನ 5:19) ಲೋಕವು ಸೈತಾನನು ಪ್ರವರ್ಧಿಸುವಂಥ ದುಷ್ಟ ಆತ್ಮದಿಂದ ಸೋಂಕಿತವಾಗಿತ್ತು ಮತ್ತು ಕ್ರೈಸ್ತರು ಆ ಭ್ರಷ್ಟಗೊಳಿಸುವ ಪ್ರಭಾವವನ್ನು ಎದುರಿಸಬೇಕಾಗಿತ್ತು. (ಎಫೆಸ 2:2) ಈ ಲೋಕವು ಅವರಿಗೆ ಒಂದು ಅಪಾಯಕರ ಸ್ಥಳವಾಗಿತ್ತು. ಮೊದಲು ದೇವರ ನೀತಿಯನ್ನು ಹುಡುಕುವ ಮೂಲಕವಾಗಿ ಮಾತ್ರ ಅವರು ತಮ್ಮ ಸಮಗ್ರತೆಯನ್ನು ಸಂಪೂರ್ಣವಾಗಿ ಕಾಪಾಡಿಕೊಳ್ಳಲು ಸಾಧ್ಯವಿತ್ತು. ಅನೇಕರು ತಾಳಿಕೊಂಡರು, ಆದರೆ ಕೆಲವರು “ನೀತಿಯ ಮಾರ್ಗ”ದಿಂದ ವಿಮುಖರಾದರು.—ಜ್ಞಾನೋಕ್ತಿ 12:28, ಪರಿಶುದ್ಧ ಬೈಬಲ್;a 2 ತಿಮೊಥೆಯ 4:10.
7. ಒಬ್ಬ ಕ್ರೈಸ್ತನು ಭ್ರಷ್ಟಗೊಳಿಸುವ ಪ್ರಭಾವಗಳನ್ನು ಪ್ರತಿರೋಧಿಸುವಂತೆ ಯಾವ ಜವಾಬ್ದಾರಿಗಳು ಅವಶ್ಯಪಡಿಸುತ್ತವೆ?
7 ಈ ಲೋಕವು ಇಂದು ಕ್ರೈಸ್ತರಿಗೆ ಸುರಕ್ಷಿತವಾದ ಸ್ಥಳವಾಗಿದೆಯೋ? ಖಂಡಿತವಾಗಿಯೂ ಇಲ್ಲ! ಪ್ರಥಮ ಶತಮಾನದಲ್ಲಿದ್ದುದಕ್ಕಿಂತಲೂ ಈಗ ಅದು ಹೆಚ್ಚು ಭ್ರಷ್ಟಗೊಂಡಿದೆ. ಮಾತ್ರವಲ್ಲದೆ, ಸೈತಾನನು ಭೂಮಿಗೆ ದೊಬ್ಬಲ್ಪಟ್ಟಿದ್ದಾನೆ ಮತ್ತು ಅವನು “ಸ್ತ್ರೀಯ . . . ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು” ಹೇಳುವ ಅಭಿಷಿಕ್ತ ಕ್ರೈಸ್ತರ ವಿರುದ್ಧ ಕ್ರೂರವಾದ ಯುದ್ಧವನ್ನು ಮಾಡುತ್ತಾನೆ. (ಪ್ರಕಟನೆ 12:12, 17) ಹಾಗೂ ಯಾರು ಆ ‘ಸಂತಾನವನ್ನು’ ಬೆಂಬಲಿಸುತ್ತಾರೋ ಅವರ ಮೇಲೆಯೂ ಸೈತಾನನು ಆಕ್ರಮಣ ಮಾಡುತ್ತಾನೆ. ಆದರೂ, ಕ್ರೈಸ್ತರು ಈ ಲೋಕದಿಂದ ತಮ್ಮನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ಈ ಲೋಕದ ಭಾಗವಾಗಿಲ್ಲದೆ ಇರುವುದಾದರೂ, ಅವರು ಈ ಲೋಕದಲ್ಲೇ ಜೀವಿಸಬೇಕಾಗಿದೆ. (ಯೋಹಾನ 17:15, 16) ಮತ್ತು ಸಹೃದಯದ ಜನರನ್ನು ಕಂಡುಕೊಂಡು ಕ್ರಿಸ್ತನ ಶಿಷ್ಯರಾಗುವಂತೆ ಅವರಿಗೆ ಬೋಧಿಸಲಿಕ್ಕಾಗಿ ಈ ಲೋಕದಲ್ಲಿ ಅವರು ಸಾರುವ ಕೆಲಸವನ್ನು ಮಾಡಬೇಕಾಗಿದೆ. (ಮತ್ತಾಯ 24:14; 28:19, 20) ಆದುದರಿಂದ, ಕ್ರೈಸ್ತರು ಈ ಲೋಕದ ಭ್ರಷ್ಟಗೊಳಿಸುವ ಪ್ರಭಾವಗಳಿಂದ ಸಂಪೂರ್ಣವಾಗಿ ದೂರವಿರಲು ಸಾಧ್ಯವಿಲ್ಲದ ಕಾರಣ ಅವನ್ನು ಪ್ರತಿರೋಧಿಸಬೇಕಾಗಿದೆ. ನಾವು ಇವುಗಳಲ್ಲಿ ನಾಲ್ಕು ಪ್ರಭಾವಗಳನ್ನು ಪರಿಗಣಿಸೋಣ.
ಅನೈತಿಕತೆ ಎಂಬ ಪಾಶ
8. ಇಸ್ರಾಯೇಲ್ಯರು ಮೋವಾಬ್ಯ ದೇವರುಗಳನ್ನು ಆರಾಧಿಸಲಾರಂಭಿಸಿದ್ದೇಕೆ?
8 ಇಸ್ರಾಯೇಲ್ಯರ 40 ವರ್ಷಗಳ ಅರಣ್ಯವಾಸವು ಕೊನೆಗೊಳ್ಳಲಿಕ್ಕಿರುವಾಗ, ಅವರಲ್ಲಿನ ದೊಡ್ಡ ಸಂಖ್ಯೆಯ ಜನರು ನೀತಿಯ ಮಾರ್ಗದಿಂದ ದೂರಸರಿದರು. ಅವರು ಯೆಹೋವನ ಅನೇಕ ವಿಮೋಚನಾ ಕೃತ್ಯಗಳನ್ನು ನೋಡಿದ್ದರು ಮತ್ತು ಬಲುಬೇಗನೆ ವಾಗ್ದತ್ತ ದೇಶವನ್ನು ಪ್ರವೇಶಿಸಲಿಕ್ಕಿದ್ದರು. ಆದರೂ, ಆ ನಿರ್ಣಾಯಕ ಸಮಯದಲ್ಲಿ ಅವರು ಮೋಬಾವ್ಯ ದೇವರುಗಳನ್ನು ಆರಾಧಿಸಲಾರಂಭಿಸಿದರು. ಏಕೆ? ಅವರು ತಮ್ಮ ‘ಶರೀರದಾಶೆಗೆ’ ಬಲಿಯಾದರು. (1 ಯೋಹಾನ 2:16) ವರದಿಯು ತಿಳಿಸುವುದು: “ಅವರು . . . ಮೋವಾಬ್ ಸ್ತ್ರೀಯರೊಡನೆ ಲೈಂಗಿಕ ಪಾಪಗಳನ್ನು ಮಾಡತೊಡಗಿದರು.”—ಅರಣ್ಯಕಾಂಡ 25:1, ಪರಿಶುದ್ಧ ಬೈಬಲ್.*
9, 10. ತಪ್ಪಾದ ಶಾರೀರಿಕ ಬಯಕೆಗಳ ಭ್ರಷ್ಟಕಾರಕ ಶಕ್ತಿಯ ಕುರಿತು ಸದಾ ಎಚ್ಚರವಹಿಸುವಂತೆ ಇಂದಿನ ಯಾವ ಸ್ಥಿತಿಯು ಅವಶ್ಯಪಡಿಸುತ್ತದೆ?
9 ಜಾಗ್ರತೆ ವಹಿಸದಿರುವವರನ್ನು ತಪ್ಪಾದ ಶಾರೀರಿಕ ಬಯಕೆಗಳು ಹೇಗೆ ಭ್ರಷ್ಟಗೊಳಿಸಬಲ್ಲವು ಎಂಬುದನ್ನು ಆ ವೃತ್ತಾಂತವು ದೃಷ್ಟಾಂತಿಸುತ್ತದೆ. ವಿಶೇಷವಾಗಿ ಇಂದು ಅನೈತಿಕತೆಯನ್ನು ಹೆಚ್ಚಿನ ಜನರು ಸ್ವೀಕಾರಾರ್ಹವಾದ ಜೀವನಶೈಲಿ ಎಂದು ವೀಕ್ಷಿಸಲಾರಂಭಿಸಿರುವ ಈ ಸಮಯದಲ್ಲಿ ನಾವು ಇಸ್ರಾಯೇಲ್ಯರ ಕುರಿತಾದ ವೃತ್ತಾಂತದಿಂದ ಪಾಠವನ್ನು ಕಲಿಯುವುದು ಒಳ್ಳೇದು. (1 ಕೊರಿಂಥ 10:6, 8) ಯುನೈಟೆಡ್ ಸ್ಟೇಟ್ಸ್ನ ಒಂದು ವರದಿಯು ತಿಳಿಸುವುದು: “1970ರ ತನಕ ಕೂಡುಬಾಳ್ವೆ [ಅವಿವಾಹಿತ ದಂಪತಿಯು ಒಟ್ಟಾಗಿ ಜೀವಿಸುವ ಪದ್ಧತಿ]ಯು ಅಮೆರಿಕದ ಎಲ್ಲ ರಾಜ್ಯಗಳಲ್ಲೂ ಕಾನೂನುಬಾಹಿರವಾಗಿತ್ತು. ಈಗ ಅದು ಸರ್ವಸಾಮಾನ್ಯವಾಗಿಬಿಟ್ಟಿದೆ. ಪ್ರಥಮ ಬಾರಿಗೆ ಮದುವೆ ಮಾಡಿಕೊಳ್ಳುವ 50 ಪ್ರತಿಶತಕ್ಕಿಂತ ಹೆಚ್ಚಿನ ದಂಪತಿಗಳು ತಮ್ಮ ವಿವಾಹಕ್ಕಿಂತ ಮುಂಚೆ ಕೂಡುಬಾಳ್ವೆ ಮಾಡಿದವರಾಗಿರುತ್ತಾರೆ.” ಇಂತಹ ಮತ್ತು ತದ್ರೀತಿಯ ಸಡಿಲು ನಡತೆಯ ಆಚರಣೆಗಳು ಕೇವಲ ಒಂದು ದೇಶಕ್ಕೆ ಸೀಮಿತವಾಗಿರುವುದಿಲ್ಲ. ಅವನ್ನು ಇಡೀ ಲೋಕದಲ್ಲಿ ಕಾಣಸಾಧ್ಯವಿದೆ, ಮತ್ತು ದುಃಖಕರವಾಗಿ ಕೆಲವು ಕ್ರೈಸ್ತರು ಸಹ ಇಂತಹ ಪ್ರವೃತ್ತಿಗೆ ಬಲಿಬಿದ್ದು ಕ್ರೈಸ್ತ ಸಭೆಯಲ್ಲಿರುವ ತಮ್ಮ ನಿಲುವನ್ನೂ ನಷ್ಟಪಡಿಸಿಕೊಂಡಿದ್ದಾರೆ.—1 ಕೊರಿಂಥ 5:11.
10 ಮಾತ್ರವಲ್ಲದೆ, ಅನೈತಿಕತೆಯನ್ನು ಎತ್ತಿಹಿಡಿಯುವ ಮಾತು ಎಲ್ಲೆಡೆಯೂ ಹಬ್ಬಿಕೊಂಡಿರುವಂತೆ ತೋರುತ್ತದೆ. ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳು, ವಿವಾಹಕ್ಕಿಂತ ಮುಂಚೆ ಯುವ ಜನರು ಲೈಂಗಿಕತೆಯಲ್ಲಿ ತೊಡಗುವುದರಲ್ಲಿ ಯಾವುದೇ ತಪ್ಪಿಲ್ಲವೆಂದು ಸೂಚಿಸುತ್ತವೆ. ಸಲಿಂಗಕಾಮವು ಸಹಜವಾದದ್ದು ಎಂದು ಚಿತ್ರಿಸಲಾಗುತ್ತದೆ. ಮತ್ತು ಅನೇಕ ಕಾರ್ಯಕ್ರಮಗಳು ಲೈಂಗಿಕ ಕೃತ್ಯಗಳನ್ನು ಹೆಚ್ಚು ವಿಶದವಾಗಿಯೂ ಮುಚ್ಚುಮರೆಯಿಲ್ಲದೆಯೂ ತೋರಿಸುತ್ತವೆ. ಇಂತಹ ದೃಶ್ಯಗಳು ಇಂಟರ್ನೆಟ್ನಲ್ಲೂ ತೀರ ಸುಲಭದಲ್ಲಿ ಕಾಣಸಿಗುತ್ತವೆ. ಉದಾಹರಣೆಗೆ, ವಾರ್ತಾಪತ್ರಿಕೆಯ ಅಂಕಣಗಾರನೊಬ್ಬನು ತನ್ನ ಏಳು ವರ್ಷ ಪ್ರಾಯದ ಮಗನು ಶಾಲೆಯಿಂದ ಹಿಂದಿರುಗಿದಾಗ ಅವನ ಶಾಲಾ ಸ್ನೇಹಿತನೊಬ್ಬನು ಬೆತ್ತಲೆಯಾದ ಸ್ತ್ರೀಯರು ಲೈಂಗಿಕ ಕೃತ್ಯಗಳಲ್ಲಿ ತೊಡಗಿರುವುದನ್ನು ತೋರಿಸುವ ಇಂಟರ್ನೆಟ್ ಸೈಟ್ ಅನ್ನು ನೋಡಿದನಂತೆ ಎಂದು ಉತ್ಸಾಹದಿಂದ ತನಗೆ ತಿಳಿಸಿದ್ದರ ಕುರಿತು ವರದಿಸಿದನು. ಈ ತಂದೆ ಬೆಚ್ಚಿಬಿದ್ದನು, ಆದರೆ ತಮ್ಮ ಹೆತ್ತವರಿಗೆ ತಿಳಿಸದೆ ಇನ್ನೆಷ್ಟೋ ಮಕ್ಕಳು ಇಂತಹ ವೆಬ್ಸೈಟ್ಗಳನ್ನು ವೀಕ್ಷಿಸುತ್ತಾರೆ. ಮಾತ್ರವಲ್ಲದೆ, ತಮ್ಮ ಮಕ್ಕಳು ಆಡುವಂಥ ವಿಡಿಯೋ ಆಟಗಳಲ್ಲಿ ಏನು ಅಡಕವಾಗಿದೆ ಎಂಬುದು ಎಷ್ಟು ಮಂದಿ ಹೆತ್ತವರಿಗೆ ತಿಳಿದಿರುತ್ತದೆ? ಹೆಸರುವಾಸಿಯಾದ ಅನೇಕ ಆಟಗಳು ಹೇಯವಾದ ಅನೈತಿಕತೆಯನ್ನು ಹಾಗೂ ಭೂತಪ್ರೇತಗಳಿಗೆ ಸಂಬಂಧಿಸಿದ ವಿಚಾರಗಳೊಂದಿಗೆ ಹಿಂಸಾಕೃತ್ಯಗಳನ್ನು ಪ್ರದರ್ಶಿಸುತ್ತವೆ.
11. ಈ ಲೋಕದ ಅನೈತಿಕತೆಯಿಂದ ಒಂದು ಕುಟುಂಬವನ್ನು ಹೇಗೆ ಸಂರಕ್ಷಿಸಸಾಧ್ಯವಿದೆ?
11 ಮನೋರಂಜನೆ ಎಂದು ಕರೆಯಲ್ಪಡುವ ಇಂತಹ ರೀತಿಯ ಕೀಳ್ಮಟ್ಟದ ವಿನೋದಾವಳಿಯನ್ನು ಒಂದು ಕುಟುಂಬವು ಹೇಗೆ ಪ್ರತಿರೋಧಿಸಸಾಧ್ಯವಿದೆ? ಮೊದಲು ದೇವರ ನೀತಿಗಾಗಿ ಹುಡುಕುತ್ತಾ ಅನೈತಿಕವಾದ ಯಾವುದೇ ವಿಚಾರದಲ್ಲಿ ತೊಡಗುವುದನ್ನು ನಿರಾಕರಿಸುವ ಮೂಲಕ ಇದನ್ನು ಪ್ರತಿರೋಧಿಸಸಾಧ್ಯವಿದೆ. (2 ಕೊರಿಂಥ 6:14; ಎಫೆಸ 5:3) ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ಯೋಗ್ಯವಾದ ನಿಗವನ್ನು ಇಡುವ ಮತ್ತು ಅವರಲ್ಲಿ ಯೆಹೋವನಿಗಾಗಿಯೂ ಆತನ ನೀತಿಯುತ ನಿಯಮಗಳಿಗಾಗಿಯೂ ಪ್ರೀತಿಯನ್ನು ತುಂಬಿಸುವ ಹೆತ್ತವರು, ತಮ್ಮ ಮಕ್ಕಳನ್ನು ಅಶ್ಲೀಲ ಸಾಹಿತ್ಯ, ಅಶ್ಲೀಲವಾದ ವಿಡಿಯೋ ಆಟಗಳು, ಅನೈತಿಕ ಚಲನಚಿತ್ರಗಳು ಮತ್ತು ಇನ್ನಿತರ ಅನೀತಿಯುತ ಪ್ರಲೋಭನೆಗಳನ್ನು ಎದುರಿಸಿ ನಿಲ್ಲುವಂತೆ ಸಿದ್ಧಪಡಿಸುತ್ತಾರೆ.—ಧರ್ಮೋಪದೇಶಕಾಂಡ 6:4-9.b
ಸಮಾಜದಿಂದ ಬರುವ ಒತ್ತಡದಲ್ಲಿ ಒಳಗೂಡಿರುವ ಅಪಾಯ
12. ಪ್ರಥಮ ಶತಮಾನದಲ್ಲಿ ಯಾವ ಸಮಸ್ಯೆಯು ತಲೆದೋರಿತು?
12 ಪೌಲನು ಏಷ್ಯಾ ಮೈನರ್ನ ಲುಸ್ತ್ರದಲ್ಲಿದ್ದಾಗ ಒಬ್ಬ ಮನುಷ್ಯನನ್ನು ಅದ್ಭುತಕರವಾಗಿ ಗುಣಪಡಿಸಿದನು. ವೃತ್ತಾಂತವು ತಿಳಿಸುವುದು: “ಪೌಲನು ಮಾಡಿದ್ದನ್ನು ಗುಂಪು ಕೂಡಿದ್ದ ಜನರು ನೋಡಿ—ದೇವತೆಗಳು ಮನುಷ್ಯರ ರೂಪದಿಂದ ನಮ್ಮ ಬಳಿಗೆ ಇಳಿದುಬಂದರು ಎಂದು ಲುಕವೋನ್ಯಭಾಷೆಯಲ್ಲಿ ಕೂಗಾಡಿದರು. ಬಾರ್ನಬನನ್ನು ದ್ಯೌಸ್ದೇವರೆಂತಲೂ ಪೌಲನು ಮಾತಾಡುವದರಲ್ಲಿ ಮುಖ್ಯನಾದ್ದರಿಂದ ಅವನನ್ನು ಹೆರ್ಮೆದೇವರೆಂತಲೂ ಅಂದುಕೊಂಡರು.” (ಅ. ಕೃತ್ಯಗಳು 14:11, 12) ಅನಂತರ ಅದೇ ಗುಂಪಿನವರು ಪೌಲಬಾರ್ನಬರನ್ನು ಕೊಲ್ಲಲು ಬಯಸಿದರು. (ಅ. ಕೃತ್ಯಗಳು 14:19) ಆ ಜನರು ತೀರ ಸುಲಭವಾಗಿ ಸಮಾಜದ ಒತ್ತಡಕ್ಕೆ ಒಳಗಾದರು ಎಂಬುದು ಸ್ಪಷ್ಟ. ಆ ಕ್ಷೇತ್ರದಲ್ಲಿದ್ದ ಕೆಲವರು ಕ್ರೈಸ್ತರಾದಾಗ, ಅವರು ತಮ್ಮ ಮೂಢನಂಬಿಕೆಗಳಿಗೆ ಸಂಬಂಧಿಸಿದ ಪ್ರವೃತ್ತಿಗಳನ್ನು ಇನ್ನೂ ಬಿಟ್ಟಿರಲಿಲ್ಲ ಎಂದು ತೋರುತ್ತದೆ. ಏಕೆಂದರೆ ಕೊಲೊಸ್ಸೆಯ ಕ್ರೈಸ್ತರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು, “ದೇವದೂತರ ಪೂಜೆಯ” ಬಗ್ಗೆ ಎಚ್ಚರಿಸಿದನು.—ಕೊಲೊಸ್ಸೆ 2:18.
13. ಒಬ್ಬ ಕ್ರೈಸ್ತನು ದೂರವಿರಿಸಬೇಕಾದ ಕೆಲವು ಆಚರಣೆಗಳು ಯಾವುವು, ಮತ್ತು ಇದನ್ನು ಮಾಡಲು ಬಲವನ್ನು ಅವನು ಹೇಗೆ ಕಂಡುಕೊಳ್ಳಸಾಧ್ಯವಿದೆ?
13 ಇಂದು, ಸತ್ಯ ಕ್ರೈಸ್ತರು ಸಹ ಸುಳ್ಳು ಧಾರ್ಮಿಕ ವಿಚಾರಗಳ ಮೇಲೆ ಆಧರಿಸಿರುವ ಮತ್ತು ಕ್ರೈಸ್ತ ಮೂಲತತ್ತ್ವಗಳನ್ನು ಉಲ್ಲಂಘಿಸುವಂಥ ಜನಪ್ರಿಯವಾದ ಆಚರಣೆಗಳಿಂದ ದೂರವಿರುವುದು ಅವಶ್ಯ. ಉದಾಹರಣೆಗೆ, ಕೆಲವು ದೇಶಗಳು ಜನನಮರಣಗಳ ಸುತ್ತಲೂ ಅನೇಕ ಆಚರಣೆಗಳನ್ನು ಹಮ್ಮಿಕೊಂಡಿವೆ. ಈ ಆಚರಣೆಗಳು, ಮೃತಪಟ್ಟಾಗ ನಮ್ಮ ದೇಹದಿಂದ ಯಾವುದೋ ಒಂದು ಭಾಗವು ನಮ್ಮನ್ನು ಬಿಟ್ಟುಹೋಗುತ್ತದೆ ಎಂಬ ಸುಳ್ಳಿನ ಮೇಲೆ ಆಧರಿಸಿವೆ. (ಪ್ರಸಂಗಿ 9:5, 10) ಬೇರೆ ಕೆಲವು ದೇಶಗಳಲ್ಲಿ ಯುವಪ್ರಾಯದ ಹುಡುಗಿಯರನ್ನು ಸ್ತ್ರೀ ಜನನೇಂದ್ರಿಯ ಛೇದನಕ್ಕೆ ಒಳಪಡಿಸುವ ಆಚರಣೆಯೂ ಉಂಟು.c ಇದೊಂದು ಕ್ರೂರವಾದ ಅನಾವಶ್ಯಕ ರೂಢಿಯಾಗಿದ್ದು, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ನೀಡಬೇಕಾದ ಪ್ರೀತಿಭರಿತ ಕಾಳಜಿಗೆ ತದ್ವಿರುದ್ಧವಾದದ್ದಾಗಿದೆ. (ಧರ್ಮೋಪದೇಶಕಾಂಡ 6:6, 7; ಎಫೆಸ 6:4) ಕ್ರೈಸ್ತರು ಇಂತಹ ಸಮಾಜ ಒತ್ತಡಗಳನ್ನು ಪ್ರತಿರೋಧಿಸುವುದು ಮತ್ತು ಇಂತಹ ರೂಢಿಗಳನ್ನು ತ್ಯಜಿಸುವುದು ಹೇಗೆ? ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಡುವ ಮೂಲಕವೇ. (ಕೀರ್ತನೆ 31:6) ಯಾರು ತಮ್ಮ ಹೃದಯದಾಳದಿಂದ, “ನೀನೇ ನನ್ನ ಶರಣನು ನನ್ನ ದುರ್ಗವು ನಾನು ಭರವಸವಿಟ್ಟಿರುವ ನನ್ನ ದೇವರು” ಎಂದು ಹೇಳುತ್ತಾರೋ ಅಂಥವರನ್ನು ನೀತಿಯುತ ದೇವರಾದ ಯೆಹೋವನು ಬಲಪಡಿಸಿ ಕಾಪಾಡುವನು.—ಕೀರ್ತನೆ 91:2; ಜ್ಞಾನೋಕ್ತಿ 29:25.
ಯೆಹೋವನನ್ನು ಮರೆಯಬೇಡಿರಿ
14. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕಿಂತ ತುಸು ಮುಂಚೆ ಯೆಹೋವನು ಅವರಿಗೆ ಯಾವ ಎಚ್ಚರಿಕೆಯನ್ನು ಕೊಟ್ಟನು?
14 ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕಿಂತ ತುಸು ಮುಂಚೆ ಯೆಹೋವನು ಅವರಿಗೆ ತನ್ನನ್ನು ಮರೆಯಬಾರದು ಎಂದು ಎಚ್ಚರಿಸಿದನು. ಆತನು ಹೇಳಿದ್ದು: “ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಯೆಹೋವನ ಆಜ್ಞಾವಿಧಿನಿರ್ಣಯಗಳನ್ನು ಕೈಕೊಳ್ಳದವರೂ ಆತನನ್ನು ಮರೆಯುವವರೂ ಆಗಬೇಡಿರಿ, ನೋಡಿರಿ. ನೀವು ಹೊಟ್ಟೆತುಂಬಾ ಉಂಡು ಸುಖವಾಗಿದ್ದು ಒಳ್ಳೇ ಮನೆಗಳನ್ನು ಕಟ್ಟಿಸಿಕೊಂಡು ಅವುಗಳಲ್ಲಿ ವಾಸವಾಗಿರುವ ಕಾಲದಲ್ಲಿ ನಿಮ್ಮ ದನಗಳೂ ಆಡುಕುರಿಗಳೂ ನಿಮ್ಮ ಬೆಳ್ಳಿಬಂಗಾರವೂ ಆಸ್ತಿಯೆಲ್ಲವೂ ಹೆಚ್ಚುತ್ತಿರುವಾಗ ಒಂದು ವೇಳೆ ನೀವು ಮದಿಸಿ ನಿಮ್ಮ ದೇವರಾದ ಯೆಹೋವನನ್ನು ಮರೆತೀರಿ.”—ಧರ್ಮೋಪದೇಶಕಾಂಡ 8:11-14.
15. ನಾವು ಯೆಹೋವನನ್ನು ಮರೆಯುತ್ತಿಲ್ಲ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು?
15 ಇಂತಹದ್ದೇ ಸಂಗತಿಯು ಇಂದು ಸಂಭವಿಸಲು ಸಾಧ್ಯವಿದೆಯೋ? ನಾವು ತಪ್ಪಾದ ಆದ್ಯತೆಗಳನ್ನಿಟ್ಟಿರುವುದಾದರೆ ಸಂಭವಿಸಸಾಧ್ಯವಿದೆ. ಆದರೆ, ನಾವು ಮೊದಲು ದೇವರ ನೀತಿಗಾಗಿ ತವಕಪಡುವುದಾದರೆ, ಶುದ್ಧಾರಾಧನೆಯು ನಮ್ಮ ಜೀವನದಲ್ಲಿ ಅತಿ ಪ್ರಾಮುಖ್ಯ ವಿಷಯವಾಗಿರುವುದು. ಪೌಲನು ಪ್ರೋತ್ಸಾಹಿಸಿದಂತೆ ನಾವು “ಸಮಯವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ”ಕೊಳ್ಳುವೆವು ಮತ್ತು ನಮ್ಮ ಶುಶ್ರೂಷೆಯ ಬಗ್ಗೆ ತುರ್ತುಪ್ರಜ್ಞೆಯನ್ನು ಹೊಂದಿರುವೆವು. (ಕೊಲೊಸ್ಸೆ 4:5; 2 ತಿಮೊಥೆಯ 4:2) ಒಂದುವೇಳೆ ಆರಾಮಮಾಡುವುದು ಅಥವಾ ಸುಖಭೋಗಗಳಲ್ಲಿ ಆನಂದಿಸಲಿಕ್ಕಾಗಿರುವ ವಿಧಾನಗಳು ಕೂಟದ ಹಾಜರಿ ಮತ್ತು ಕ್ಷೇತ್ರ ಸೇವೆಗಿಂತ ಹೆಚ್ಚು ಪ್ರಾಮುಖ್ಯವಾಗುವುದಾದರೆ, ನಾವು ಯೆಹೋವನನ್ನು ನಮ್ಮ ಜೀವನಗಳಲ್ಲಿ ಎರಡನೆಯ ಸ್ಥಾನದಲ್ಲಿಡುವಂತಾಗಿ ನಾವು ಆತನನ್ನು ಮರೆತುಹೋಗುವ ಸಾಧ್ಯತೆಯಿದೆ. ಕಡೇ ದಿವಸಗಳಲ್ಲಿ ಜನರು “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವ”ರಾಗಿರುವರು ಎಂದು ಅಪೊಸ್ತಲ ಪೌಲನು ಹೇಳಿದನು. (2 ತಿಮೊಥೆಯ 3:4) ತಾವು ಅಂತಹ ರೀತಿಯ ಯೋಚನೆಯಿಂದ ಬಾಧಿಸಲ್ಪಟ್ಟಿಲ್ಲ ಎಂದು ಪ್ರಾಮಾಣಿಕ ಕ್ರೈಸ್ತರು ಕ್ರಮವಾಗಿ ತಮ್ಮನ್ನು ಪರಿಶೋಧಿಸಿ ಖಚಿತಪಡಿಸಿಕೊಳ್ಳುತ್ತಾರೆ.—2 ಕೊರಿಂಥ 13:5.
ಸ್ವತಂತ್ರ ಮನೋಭಾವದ ಬಗ್ಗೆ ಜಾಗ್ರತೆ ವಹಿಸಿ
16. ಯಾವ ತಪ್ಪಾದ ಮನೋಭಾವವನ್ನು ಹವ್ವಳು ಮತ್ತು ಪೌಲನ ದಿನದಲ್ಲಿದ್ದ ಕೆಲವರು ತೋರಿಸಿದರು?
16 ಏದೆನಿನಲ್ಲಿ, ತಾನು ಸ್ವತಂತ್ರಳಾಗಿರಬೇಕು ಎಂಬ ಹವ್ವಳ ಸ್ವಾರ್ಥಪರ ಆಶೆಯನ್ನು ಸೈತಾನನು ಯಶಸ್ವಿಕರವಾಗಿ ಬಳಸಿಕೊಂಡನು. ಹವ್ವಳು ಸರಿ ಮತ್ತು ತಪ್ಪಿನ ಕುರಿತಾದ ತನ್ನ ಸ್ವಂತ ನಿರ್ಣಯಗಳನ್ನು ಮಾಡಲು ಬಯಸಿದಳು. (ಆದಿಕಾಂಡ 3:1-6) ಪ್ರಥಮ ಶತಮಾನದಲ್ಲಿ, ಕ್ರೈಸ್ತ ಸಭೆಯಲ್ಲಿದ್ದ ಕೆಲವರಿಗೆ ತದ್ರೀತಿಯ ಸ್ವತಂತ್ರ ಮನೋಭಾವವಿತ್ತು. ತಮಗೆ ಪೌಲನಿಗಿಂತ ಹೆಚ್ಚು ತಿಳಿದಿದೆ ಎಂದವರು ಭಾವಿಸಿದರು, ಮತ್ತು ಪೌಲನು ಅವರನ್ನು ವ್ಯಂಗ್ಯವಾಗಿ ಅತಿಶ್ರೇಷ್ಠರಾದ ಅಪೊಸ್ತಲರು ಎಂದು ಕರೆದನು.—2 ಕೊರಿಂಥ 11:3-5; 1 ತಿಮೊಥೆಯ 6:3-5.
17. ಸ್ವತಂತ್ರ ಮನೋಭಾವವನ್ನು ಬೆಳೆಸಿಕೊಳ್ಳುವುದನ್ನು ನಾವು ಹೇಗೆ ತ್ಯಜಿಸಬಲ್ಲೆವು?
17 ಇಂದು ಲೋಕದಲ್ಲಿ ಅನೇಕರು “ದುಡುಕಿನವರೂ ಉಬ್ಬಿಕೊಂಡವರೂ” ಆಗಿದ್ದಾರೆ ಮತ್ತು ಕೆಲವು ಕ್ರೈಸ್ತರು ಇಂತಹ ರೀತಿಯ ಆಲೋಚನೆಯಿಂದ ಪ್ರಭಾವಿತರಾಗಿದ್ದಾರೆ. ಕೆಲವರು ಸತ್ಯವನ್ನು ವಿರೋಧಿಸುವವರೂ ಆಗಿ ಪರಿಣಮಿಸಿದ್ದಾರೆ. (2 ತಿಮೊಥೆಯ 3:4; ಫಿಲಿಪ್ಪಿ 3:18) ಶುದ್ಧಾರಾಧನೆಗೆ ಸಂಬಂಧಪಟ್ಟ ವಿಚಾರಗಳಲ್ಲಿ ನಾವು ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ನೋಡುವುದು ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಹಾಗೂ ಸಭಾ ಹಿರಿಯರೊಂದಿಗೆ ಸಹಕರಿಸುವುದು ಪ್ರಾಮುಖ್ಯ. ನೀತಿಗಾಗಿ ತವಕಪಡುವ ಒಂದು ವಿಧವು ಇದಾಗಿದೆ, ಮತ್ತು ಸ್ವತಂತ್ರ ಮನೋಭಾವವನ್ನು ಬೆಳೆಸಿಕೊಳ್ಳುವುದರಿಂದ ಇದು ನಮ್ಮನ್ನು ಸಂರಕ್ಷಿಸುತ್ತದೆ. (ಮತ್ತಾಯ 24:45-47; ಕೀರ್ತನೆ 25:9, 10; ಯೆಶಾಯ 30:21) ಅಭಿಷಿಕ್ತರ ಸಭೆಯು “ಸತ್ಯಕ್ಕೆ ಸ್ತಂಭವೂ ಆಧಾರವೂ” ಆಗಿದೆ. ಯೆಹೋವನು ಇದನ್ನು ನಮ್ಮ ಸಂರಕ್ಷಣೆ ಮತ್ತು ಮಾರ್ಗದರ್ಶನಕ್ಕಾಗಿ ನೀಡಿದ್ದಾನೆ. (1 ತಿಮೊಥೆಯ 3:15) ಅದರ ಪಾತ್ರವನ್ನು ಗ್ರಹಿಸುವುದು, ‘ಯಾವದನ್ನೂ ಒಣಹೆಮ್ಮೆಯಿಂದ ಮಾಡದೆ’ ಯೆಹೋವನ ನೀತಿಯುತ ಚಿತ್ತಕ್ಕೆ ನಮ್ರತೆಯಿಂದ ಅಧೀನಪಡಿಸಿಕೊಳ್ಳುವಂತೆ ನಮಗೆ ಸಹಾಯಮಾಡುವುದು.—ಫಿಲಿಪ್ಪಿ 2:2-4; ಜ್ಞಾನೋಕ್ತಿ 3:4-6.
ಯೇಸುವನ್ನು ಅನುಕರಿಸುವವರಾಗಿರ್ರಿ
18. ನಾವು ಯೇಸುವನ್ನು ಯಾವ ವಿಧಗಳಲ್ಲಿ ಅನುಕರಿಸುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದೇವೆ?
18 ಯೇಸುವಿನ ಕುರಿತು ಬೈಬಲ್ ಪ್ರವಾದನಾರೂಪವಾಗಿ ಹೇಳುವುದು: “ನೀನು ನೀತಿಯನ್ನು ಪ್ರೀತಿಮಾಡುತ್ತೀ; ದುಷ್ಟತನವನ್ನು ದ್ವೇಷಮಾಡುತ್ತೀ.” (ಕೀರ್ತನೆ 45:7, NIBV; ಇಬ್ರಿಯ 1:9, NIBV) ಅನುಕರಿಸಲು ಎಷ್ಟು ಉತ್ತಮವಾದ ಮನೋಭಾವವಿದು! (1 ಕೊರಿಂಥ 11:1) ಯೇಸು ಬರೀ ಯೆಹೋವನ ನೇರವಾದ ಮಟ್ಟಗಳನ್ನು ತಿಳುಕೊಂಡಿದ್ದದ್ದು ಮಾತ್ರವಲ್ಲ, ಅವನ್ನು ಪ್ರೀತಿಸಿದನು ಕೂಡ. ಆದುದರಿಂದ ಸೈತಾನನು ಅವನನ್ನು ಅರಣ್ಯದಲ್ಲಿ ಶೋಧನೆಗೊಳಪಡಿಸಿದಾಗ, ‘ನೀತಿಯ ದಾರಿಯಿಂದ’ ದೂರಸರಿಯುವುದನ್ನು ಯೇಸು ದೃಢವಾದ ಮಾತುಗಳಲ್ಲಿ ನಿರಾಕರಿಸಲು ಸಾಧ್ಯವಾಯಿತು.—ಜ್ಞಾನೋಕ್ತಿ 8:20; ಮತ್ತಾಯ 4:3-11.
19, 20. ನೀತಿಗಾಗಿ ತವಕಪಡುವುದರ ಒಳ್ಳೆಯ ಫಲಿತಾಂಶಗಳಾವುವು?
19 ಶರೀರದ ಅನೀತಿಯುತ ಆಶೆಗಳು ಬಲವಾಗಿರಬಲ್ಲವು ಎಂಬುದು ನಿಜವೇ. (ರೋಮಾಪುರ 7:19, 20) ಆದರೂ, ನೀತಿಯು ನಮಗೆ ಅಮೂಲ್ಯವಾಗಿರುವುದಾದರೆ, ಇದು ನಮ್ಮನ್ನು ದುಷ್ಟತನವನ್ನು ಎದುರಿಸಿ ನಿಲ್ಲುವಂತೆ ಬಲಪಡಿಸುವುದು. (ಕೀರ್ತನೆ 119:165) ನೀತಿಗಾಗಿರುವ ಗಾಢವಾದ ಪ್ರೀತಿಯು, ನಾವು ಯಾವುದೇ ತಪ್ಪಾದ ವಿಷಯವನ್ನು ಎದುರಿಸುವಾಗ ನಮ್ಮನ್ನು ಅದರಿಂದ ಕಾಪಾಡುವುದು. (ಜ್ಞಾನೋಕ್ತಿ 4:4-6) ನಾವು ಯಾವಾಗೆಲ್ಲ ಪ್ರಲೋಭನೆಗೆ ಬಲಿಯಾಗುತ್ತೇವೋ ಆಗೆಲ್ಲ ಸೈತಾನನಿಗೆ ಜಯವನ್ನು ಕೊಡುತ್ತಿದ್ದೇವೆ ಎಂಬುದನ್ನು ಮರೆಯದಿರಿ. ಅದೇ ಸೈತಾನನನ್ನು ಎದುರಿಸಿ ನಿಂತು ಯೆಹೋವನಿಗೆ ಜಯವನ್ನು ಕೊಡುವುದು ಎಷ್ಟು ಉತ್ತಮವಾಗಿರುವುದು!—ಜ್ಞಾನೋಕ್ತಿ 27:11; ಯಾಕೋಬ 4:7, 8.
20 ಸತ್ಯ ಕ್ರೈಸ್ತರು ನೀತಿಗಾಗಿ ತವಕಪಡುವುದರಿಂದ, ಅವರು ‘ಯೇಸು ಕ್ರಿಸ್ತನ ಮೂಲಕವಾಗಿರುವ ಸುನೀತಿಯೆಂಬ ಫಲದಿಂದ ತುಂಬಿದವರಾಗಿ ಕಾಣಿಸಿಕೊಂಡು ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ತರುತ್ತಾರೆ.’ (ಫಿಲಿಪ್ಪಿ 1:10, 11) ಅವರು “ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿ” ಇರುವ “ನೂತನ ವ್ಯಕ್ತಿತ್ವವನ್ನು” (NW) ಧರಿಸಿಕೊಳ್ಳುತ್ತಾರೆ. (ಎಫೆಸ 4:23, 24) ಅವರು ಯೆಹೋವನಿಗೆ ಸೇರಿದವರಾಗಿದ್ದಾರೆ ಮತ್ತು ಅವರು ತಮ್ಮನ್ನು ಸಂತೋಷಪಡಿಸಿಕೊಳ್ಳಲಿಕ್ಕೋಸ್ಕರವಲ್ಲ ಯೆಹೋವನ ಸೇವೆಮಾಡಲಿಕ್ಕೋಸ್ಕರ ಜೀವಿಸುತ್ತಾರೆ. (ರೋಮಾಪುರ 14:8; 1 ಪೇತ್ರ 4:2) ಅವರ ಆಲೋಚನೆಗಳು ಮತ್ತು ಕೃತ್ಯಗಳ ಮೇಲೆ ಹತೋಟಿಯನ್ನು ಸಾಧಿಸುವಂಥದ್ದು ಈ ಅಂಶವೇ ಆಗಿದೆ. ಅವರು ತಮ್ಮ ಸ್ವರ್ಗೀಯ ತಂದೆಗೆ ಎಷ್ಟು ಸಂತೋಷವನ್ನು ತರುತ್ತಾರೆ!—ಜ್ಞಾನೋಕ್ತಿ 23:24.
[ಪಾದಟಿಪ್ಪಣಿಗಳು]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
b ಹೆತ್ತವರು ಕುಟುಂಬವನ್ನು ಅನೈತಿಕ ಪ್ರಭಾವಗಳಿಂದ ಸಂರಕ್ಷಿಸಸಾಧ್ಯವಿರುವ ಅಮೂಲ್ಯವಾದ ಸಲಹೆಗಳು, ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕದಲ್ಲಿ ಕಂಡುಬರುತ್ತವೆ.
c ಸ್ತ್ರೀ ಜನನೇಂದ್ರಿಯ ಛೇದನವನ್ನು ಸ್ತ್ರೀಯರ ಸುನ್ನತಿ ಎಂದು ಕರೆಯಲಾಗುತ್ತಿತ್ತು.
ನೀವು ವಿವರಿಸಬಲ್ಲಿರೋ?
• ನೀತಿಗಾಗಿ ತವಕಪಡುವುದು ಏಕೆ ಪ್ರಾಮುಖ್ಯವಾಗಿದೆ?
• ಅಪರಿಪೂರ್ಣ ಕ್ರೈಸ್ತರಾದ ನಾವು ಹೇಗೆ ನೀತಿಗಾಗಿ ತವಕಪಡಸಾಧ್ಯವಿದೆ?
• ಈ ಲೋಕದಲ್ಲಿರುವ ಯಾವ ಕೆಲವು ವಿಷಯಗಳನ್ನು ಒಬ್ಬ ಕ್ರೈಸ್ತನು ತ್ಯಜಿಸಬೇಕು?
• ನೀತಿಗಾಗಿ ತವಕಪಡುವುದು ಹೇಗೆ ನಮ್ಮನ್ನು ಸಂರಕ್ಷಿಸಬಲ್ಲದು?
[ಪುಟ 26ರಲ್ಲಿರುವ ಚಿತ್ರ]
ಯೇಸುವಿನ ಹಿಂಬಾಲಕರಿಗೆ ಈ ಲೋಕವು ಒಂದು ಅಪಾಯಕರ ಸ್ಥಳವಾಗಿತ್ತು
[ಪುಟ 27ರಲ್ಲಿರುವ ಚಿತ್ರ]
ಯೆಹೋವನನ್ನು ಪ್ರೀತಿಸಲು ಕಲಿಸಲ್ಪಡುವ ಮಕ್ಕಳು ಅನೈತಿಕತೆಯನ್ನು ಎದುರಿಸಿ ನಿಲ್ಲುವಂತೆ ಬಲಪಡಿಸಲ್ಪಡುತ್ತಾರೆ
[ಪುಟ 28ರಲ್ಲಿರುವ ಚಿತ್ರ]
ಕೆಲವು ಇಸ್ರಾಯೇಲ್ಯರು ವಾಗ್ದತ್ತ ದೇಶದಲ್ಲಿ ಸಂಪತ್ಸಮೃದ್ಧಿಯನ್ನು ಪಡೆದುಕೊಂಡಾಗ ಯೆಹೋವನನ್ನು ಮರೆತುಬಿಟ್ಟರು
[ಪುಟ 29ರಲ್ಲಿರುವ ಚಿತ್ರ]
ಯೇಸುವಿನಂತೆ, ಕ್ರೈಸ್ತರು ಅನೀತಿಯನ್ನು ದ್ವೇಷಿಸುತ್ತಾರೆ