ಯೆಹೋವನು ತನ್ನ ವೃದ್ಧ ಸೇವಕರನ್ನು ಕೋಮಲವಾಗಿ ಪರಾಮರಿಸುತ್ತಾನೆ
“ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”—ಇಬ್ರಿ. 6:10.
1, 2. (ಎ) ಬೆಳ್ಳಗಿನ ಕೂದಲಿರುವ ವೃದ್ಧರನ್ನು ನೋಡುವಾಗ ನಿಮಗೆ ಯಾವುದರ ನೆನಪಾಗಬಹುದು? (ಬಿ) ವೃದ್ಧ ಕ್ರೈಸ್ತರ ಕಡೆಗೆ ಯೆಹೋವನ ನೋಟವೇನು?
ಸಭೆಯಲ್ಲಿ ಬೆಳ್ಳಗಿನ ಕೂದಲಿನ ವೃದ್ಧರನ್ನು ನೋಡುವಾಗ ನಿಮಗೆ ಬೈಬಲಿನ ದಾನಿಯೇಲ ಪುಸ್ತಕದ ವೃತ್ತಾಂತವು ನೆನಪಿಗೆ ಬರುತ್ತದೋ? ಯೆಹೋವನು ದಾನಿಯೇಲನಿಗೆ ಕೊಟ್ಟ ದರ್ಶನದಲ್ಲಿ ತನ್ನನ್ನು ಬಿಳಿ ಕೂದಲಿರುವ ವೃದ್ಧನಾಗಿ ತೋರಿಸಿಕೊಂಡಿದ್ದಾನೆ. ದಾನಿಯೇಲನು ಬರೆದದ್ದು: “ನಾನು ನೋಡುತ್ತಿದ್ದ ಹಾಗೆ ನ್ಯಾಯಾಸನಗಳು ಹಾಕಲ್ಪಟ್ಟವು, ಮಹಾವೃದ್ಧನೊಬ್ಬನು ಆಸೀನನಾದನು; ಆತನ ಉಡುಪು ಹಿಮದಂತೆ ಶುಭ್ರವಾಗಿತ್ತು, ಆತನ ತಲೆಯ ಕೂದಲು ನಿರ್ಮಲವಾದ ಬಿಳಿಯ ಉಣ್ಣೆಯಂತಿತ್ತು.”—ದಾನಿ. 7:9.
2 ಬಿಳಿಯ ಕೂದಲು ಮತ್ತು ‘ಮಹಾವೃದ್ಧನು’ ಎಂಬ ಬಿರುದು ಯೆಹೋವನ ದೀರ್ಘಾಯಸ್ಸು ಮತ್ತು ಅಪಾರ ವಿವೇಕವನ್ನು ಸೂಚಿಸುತ್ತದೆ. ಈ ಕಾರಣಗಳಿಂದಲೇ ಆತನು ಅತ್ಯುತ್ಕೃಷ್ಟ ಮಟ್ಟದ ಗೌರವಕ್ಕೆ ಅರ್ಹನು. ಹಾಗಾದರೆ ಮಹಾವೃದ್ಧನಾದ ಯೆಹೋವನು ನಂಬಿಗಸ್ತ ವೃದ್ಧ ಸ್ತ್ರೀಪುರುಷರನ್ನು ಹೇಗೆ ದೃಷ್ಟಿಸುತ್ತಾನೆ? ದೇವರ ವಾಕ್ಯ ಹೇಳುವುದು: “ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು.” (ಜ್ಞಾನೋ. 16:31) ಹೌದು, ಒಬ್ಬ ನಂಬಿಗಸ್ತ ಕ್ರೈಸ್ತನ ಕೂದಲು ಬೆಳ್ಳಗಾಗಿರುವಲ್ಲಿ ಅಂಥ ಪ್ರೌಢ ತೋರಿಕೆಯು ದೇವರ ದೃಷ್ಟಿಯಲ್ಲಿ ಸುಂದರವಾಗಿದೆ. ವೃದ್ಧ ಸಹೋದರ ಸಹೋದರಿಯರ ಕಡೆಗೆ ಯೆಹೋವನಿಗಿರುವ ಈ ನೋಟ ನಿಮಗೂ ಇದೆಯೋ?
ಅಷ್ಟು ಅಮೂಲ್ಯರೇಕೆ?
3. ವೃದ್ಧ ಜೊತೆ ವಿಶ್ವಾಸಿಗಳು ನಮಗೆ ಅಮೂಲ್ಯರೇಕೆ?
3 ಈ ವೃದ್ಧ ಸೇವಕರಲ್ಲಿ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರು, ಹಾಲಿ ಮತ್ತು ಮಾಜಿ ಸಂಚರಣಾ ಮೇಲ್ವಿಚಾರಕರು, ಹುರುಪಿನ ಪಯನೀಯರರು, ಪ್ರೌಢ ರಾಜ್ಯ ಘೋಷಕರು, ಹೀಗೆ ನಮ್ಮ ಸಭೆಗಳಲ್ಲಿ ನಂಬಿಗಸ್ತಿಕೆಯಿಂದ ಸೇವೆ ಸಲ್ಲಿಸುತ್ತಿರುವ ಸಹೋದರ ಸಹೋದರಿಯರೆಲ್ಲರೂ ಸೇರಿದ್ದಾರೆ. ಹಲವಾರು ದಶಕಗಳಿಂದ ಸುವಾರ್ತೆಯನ್ನು ಹುರುಪಿನಿಂದ ಸಾರುತ್ತಿರುವ ಕೆಲವರ ಪರಿಚಯ ನಿಮಗೂ ಇರಬಹುದು. ಅವರ ಉತ್ತಮ ಮಾದರಿ ಯುವ ಜನರಿಗೆ ಸ್ಫೂರ್ತಿ ಕೊಟ್ಟಿದೆ ಮತ್ತು ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತೆ ಸಹಾಯ ಮಾಡಿದೆ. ಕೆಲವು ವೃದ್ಧ ಜೊತೆ ವಿಶ್ವಾಸಿಗಳು ಭಾರಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ ಮತ್ತು ಸುವಾರ್ತೆಗೋಸ್ಕರ ಹಿಂಸೆಯನ್ನೂ ತಾಳಿಕೊಂಡಿದ್ದಾರೆ. ಅವರು ಹಿಂದೆ ಸಲ್ಲಿಸಿರುವ ಮತ್ತು ಈಗಲೂ ಸಲ್ಲಿಸುತ್ತಿರುವ ಸೇವೆಯನ್ನು ಯೆಹೋವನು ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಬಹಳ ಗಣ್ಯಮಾಡುತ್ತಾರೆ.—ಮತ್ತಾ. 24:45.
4. ನಾವು ವೃದ್ಧ ಕ್ರೈಸ್ತರನ್ನು ಯಾಕೆ ಸನ್ಮಾನಿಸಬೇಕು ಮತ್ತು ಅವರಿಗಾಗಿ ಏಕೆ ಪ್ರಾರ್ಥಿಸಬೇಕು?
4 ಈ ನಂಬಿಗಸ್ತ ವೃದ್ಧ ಸಾಕ್ಷಿಗಳು, ಯೆಹೋವನ ಇತರ ಸೇವಕರ ಕೃತಜ್ಞತೆ ಮತ್ತು ಗೌರವಕ್ಕೆ ಖಂಡಿತ ಅರ್ಹರು. ವೃದ್ಧರಿಗೆ ಪರಿಗಣನೆ ತೋರಿಸಿ ಅವರನ್ನು ಸನ್ಮಾನಿಸುವುದಕ್ಕೂ ದೇವಭಯಕ್ಕೂ ಸಂಬಂಧವಿದೆ ಎಂಬುದನ್ನು ಮೋಶೆಯ ಮೂಲಕ ಕೊಡಲಾದ ಧರ್ಮಶಾಸ್ತ್ರದಲ್ಲಿ ತಿಳಿಸಲಾಗಿದೆ. (ಯಾಜ. 19:32) ಈ ನಂಬಿಗಸ್ತ ಸೇವಕರಿಗೋಸ್ಕರ ನಾವು ಕ್ರಮವಾಗಿ ಪ್ರಾರ್ಥಿಸಬೇಕು ಮತ್ತು ಅವರ ಪ್ರೀತಿಪೂರ್ವಕ ಪ್ರಯಾಸಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಬೇಕು. ಅಪೊಸ್ತಲ ಪೌಲನು ಯುವ ಪ್ರಾಯದ ಮತ್ತು ವೃದ್ಧರಾದ ತನ್ನ ಪ್ರಿಯ ಜೊತೆ ಸೇವಕರಿಗಾಗಿ ಪ್ರಾರ್ಥಿಸಿದನು.—1 ಥೆಸಲೊನೀಕ 1:2, 3 ಓದಿ.
5. ಯೆಹೋವನನ್ನು ಆರಾಧಿಸುವ ವೃದ್ಧರೊಂದಿಗೆ ಸಹವಸಿಸುವ ಮೂಲಕ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
5 ವೃದ್ಧ ಕ್ರೈಸ್ತರೊಂದಿಗೆ ಸಹವಸಿಸುವ ಮೂಲಕವೂ ಸಭೆಯಲ್ಲಿರುವ ಎಲ್ಲರೂ ಪ್ರಯೋಜನ ಪಡೆಯಸಾಧ್ಯವಿದೆ. ಯೆಹೋವನನ್ನು ಆರಾಧಿಸುವ ನಂಬಿಗಸ್ತ ವೃದ್ಧರು ಅಧ್ಯಯನ, ಅವಲೋಕನ ಮತ್ತು ಅನುಭವದಿಂದ ಬೆಲೆಕಟ್ಟಲಾಗದಷ್ಟು ಜ್ಞಾನವನ್ನು ಸಂಪಾದಿಸಿಕೊಂಡಿದ್ದಾರೆ. ತಾಳ್ಮೆ ಹಾಗೂ ಅನುಕಂಪವನ್ನು ತೋರಿಸಲು ಅವರು ಕಲಿತುಕೊಂಡಿದ್ದಾರೆ ಮತ್ತು ಕಲಿತದ್ದನ್ನು ಮುಂದಿನ ಪೀಳಿಗೆಗೆ ದಾಟಿಸುವುದರಿಂದ ಅವರಿಗೆ ಆನಂದ ಹಾಗೂ ಸಂತೃಪ್ತಿ ಸಿಗುತ್ತದೆ. (ಕೀರ್ತ. 71:18) ಆದುದರಿಂದ ವಿವೇಕಿಗಳಾಗಿ, ಆಳವಾದ ಬಾವಿಯಿಂದ ನೀರನ್ನು ಸೇದುವಂತೆಯೇ ಜ್ಞಾನದ ಒಂದು ಮೂಲವಾಗಿರುವ ವೃದ್ಧರಿಂದ ಪೂರ್ಣ ಪ್ರಯೋಜನ ಪಡೆದುಕೊಳ್ಳೋಣ.—ಜ್ಞಾನೋ. 20:5.
6. ನೀವು ವೃದ್ಧರನ್ನು ನಿಜವಾಗಿ ಮಾನ್ಯಮಾಡುತ್ತೀರಿ ಎಂಬುದನ್ನು ಹೇಗೆ ತೋರಿಸಸಾಧ್ಯವಿದೆ?
6 ಯೆಹೋವನಂತೆಯೇ ನೀವು ಸಹ ವೃದ್ಧರನ್ನು ಮಾನ್ಯಮಾಡುತ್ತೀರಿ ಎಂಬುದನ್ನು ಅವರಿಗೆ ವ್ಯಕ್ತಪಡಿಸುತ್ತೀರೋ? ಇದನ್ನು ಮಾಡುವ ಒಂದು ವಿಧ, ಅವರ ನಂಬಿಗಸ್ತಿಕೆಗಾಗಿ ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಹಾಗೂ ಅವರ ಅಭಿಪ್ರಾಯಗಳನ್ನು ಎಷ್ಟು ಗಣ್ಯಮಾಡುತ್ತೀರಿ ಎಂಬುದನ್ನು ಅವರಿಗೆ ಹೇಳುವುದೇ ಆಗಿದೆ. ಅಲ್ಲದೇ, ಅವರಿಂದ ಕಲಿತ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ಅವರೆಡೆಗಿನ ನಿಮ್ಮ ಗೌರವ ಯಥಾರ್ಥವಾದದ್ದು ಎಂಬುದನ್ನು ತೋರಿಸಿರಿ. ಅನೇಕ ವೃದ್ಧ ಕ್ರೈಸ್ತರು ತಾವು ಈ ಹಿಂದೆ ನಂಬಿಗಸ್ತ ವೃದ್ಧ ಸಾಕ್ಷಿಗಳಿಂದ ಪಡೆದ ವಿವೇಕಯುತ ಸಲಹೆಗಳನ್ನು ಕಾರ್ಯರೂಪಕ್ಕೆ ಹಾಕಿದ್ದು, ಹೇಗೆ ಜೀವನವಿಡೀ ಪ್ರಯೋಜನ ತಂದಿದೆ ಎಂಬುದನ್ನು ಈಗ ನೆನಪಿಸಿಕೊಳ್ಳುತ್ತಾರೆ.a
ಪ್ರಾಯೋಗಿಕ ವಿಧಾನಗಳಲ್ಲಿ ಕೋಮಲ ಪರಿಗಣನೆ ತೋರಿಸಿ
7. ವೃದ್ಧರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಯೆಹೋವನು ಪ್ರಧಾನವಾಗಿ ಯಾರಿಗೆ ಕೊಟ್ಟಿದ್ದಾನೆ?
7 ವೃದ್ಧರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ದೇವರು ಪ್ರಧಾನವಾಗಿ ಕುಟುಂಬದ ಸದಸ್ಯರಿಗೆ ಕೊಟ್ಟಿದ್ದಾನೆ. (1 ತಿಮೊಥೆಯ 5:3, 8 ಓದಿ.) ವೃದ್ಧ ಸದಸ್ಯರನ್ನು ನೋಡಿಕೊಳ್ಳುವ ತಮ್ಮ ಕರ್ತವ್ಯವನ್ನು ಕುಟುಂಬದವರು ಪೂರೈಸುವಾಗ ಯೆಹೋವನಿಗೆ ಸಂತೋಷವಾಗುತ್ತದೆ. ಹೀಗೆ ಅವರು, ಯೆಹೋವನಂತೆಯೇ ತಮಗೂ ವೃದ್ಧರ ಕುರಿತು ಕಾಳಜಿಯಿದೆ ಎಂಬುದನ್ನು ತೋರಿಸುತ್ತಾರೆ. ಇಂಥ ಕುಟುಂಬಗಳನ್ನು ದೇವರು ಬೆಂಬಲಿಸುತ್ತಾನೆ ಮತ್ತು ಅವರ ಪ್ರಯತ್ನ ಹಾಗೂ ತ್ಯಾಗಗಳನ್ನು ಆಶೀರ್ವದಿಸುತ್ತಾನೆ.b
8. ಸಭಾ ಸದಸ್ಯರು ವೃದ್ಧ ಕ್ರೈಸ್ತರ ಮುತುವರ್ಜಿವಹಿಸಬೇಕು ಏಕೆ?
8 ಅದೇ ರೀತಿಯಲ್ಲಿ ನಂಬಿಗಸ್ತ ವೃದ್ಧ ಕ್ರೈಸ್ತರ ಕುಟುಂಬ ಸದಸ್ಯರು ಅವಿಶ್ವಾಸಿಗಳಾಗಿರುವಲ್ಲಿ ಅಥವಾ ಅವರನ್ನು ತೊರೆದಿರುವಲ್ಲಿ ಸ್ಥಳಿಕ ಸಭೆಗಳು ಅಂಥವರಿಗೆ ನೆರವಾಗುವಾಗ ಯೆಹೋವನಿಗೆ ಸಂತೋಷವಾಗುತ್ತದೆ. (1 ತಿಮೊ. 5:3-5, 9, 10) ಈ ಮೂಲಕ ಸಭಾ ಸದಸ್ಯರು ತಾವು ‘ಪರರ ಸುಖದುಃಖಗಳಲ್ಲಿ ಸೇರುವವರು, ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸುವವರು ಮತ್ತು ಕರುಣೆಯೂ ದೀನಭಾವವೂ ಉಳ್ಳವರು’ ಎಂಬುದನ್ನು ತೋರಿಸಸಾಧ್ಯವಿದೆ. (1 ಪೇತ್ರ 3:8) ಸಭೆಯಲ್ಲಿರುವ ವೃದ್ಧರ ಕಡೆಗೆ ಅವರು ವಹಿಸಬೇಕಾದ ಮುತುವರ್ಜಿಯನ್ನು ಪೌಲನು ಉತ್ತಮವಾಗಿ ಉದಾಹರಿಸುತ್ತಾನೆ. ದೇಹದ ಒಂದು ಅಂಗಕ್ಕೆ ನೋವಾದರೆ “ಎಲ್ಲಾ ಅಂಗಗಳಿಗೂ ನೋವಾಗುತ್ತದೆ” ಎಂದವನು ಹೇಳಿದನು. (1 ಕೊರಿಂ. 12:26) ಪ್ರಾಯೋಗಿಕ ಹಾಗೂ ದಯಾಭರಿತ ವಿಧಗಳಲ್ಲಿ ವೃದ್ಧರಿಗೆ ಸಹಾಯ ಮಾಡುವಾಗ “ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ; ಹೀಗೆ ಕ್ರಿಸ್ತನ ನಿಯಮವನ್ನು ನೆರವೇರಿಸಿರಿ” ಎಂದು ಪೌಲನು ಕೊಟ್ಟ ಸಲಹೆಯಲ್ಲಿರುವ ಮೂಲತತ್ತ್ವವನ್ನು ಪ್ರದರ್ಶಿಸಿದಂತಾಗುವುದು.—ಗಲಾ. 6:2.
9. ಇಳಿವಯಸ್ಸು ಒಬ್ಬ ವ್ಯಕ್ತಿಯ ಮೇಲೆ ಯಾವ ಭಾರಗಳನ್ನು ಹೇರುತ್ತದೆ?
9 ವೃದ್ಧರು ಯಾವೆಲ್ಲ ಭಾರಗಳನ್ನು ಹೊರಬೇಕಾಗುತ್ತದೆ? ಅನೇಕರಿಗೆ ಬೇಗನೆ ಸುಸ್ತಾಗುತ್ತದೆ. ಅವರಿಗೆ ವೈದ್ಯರ ಬಳಿ ಹೋಗುವುದು, ಬಿಲ್ ಕಟ್ಟುವುದು, ಮನೆ ಶುಚಿಮಾಡುವುದು, ಅಡುಗೆ ಮಾಡುವುದು ಇಂತಹ ಸಾಮಾನ್ಯ ಕೆಲಸಗಳೂ ಕಷ್ಟಕರವೆನಿಸಬಹುದು. ಪ್ರಾಯಸಂದಂತೆ ಹಸಿವೆಬಾಯಾರಿಕೆಗಳು ಕಡಿಮೆಯಾಗುತ್ತ ಹೋಗುವುದರಿಂದ ತಾವು ಹೆಚ್ಚೇನೂ ತಿನ್ನಬೇಕಾಗಿಲ್ಲ ಅಥವಾ ಕುಡಿಯಬೇಕಾಗಿಲ್ಲ ಎಂದವರು ನೆನಸಬಹುದು. ಆಧ್ಯಾತ್ಮಿಕ ಆಹಾರದ ಸಂಬಂಧದಲ್ಲೂ ಅವರಿಗೆ ಹೀಗನಿಸಬಹುದು. ಕಣ್ಣುಗಳು ಮೊಬ್ಬಾಗಿ ಕಿವಿಗಳು ಮಂದವಾಗುವುದರಿಂದ ಓದಲು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಕಿವಿಗೊಡಲು ಕಷ್ಟವಾಗಬಹುದು. ಕ್ರೈಸ್ತ ಕೂಟಗಳಿಗೆ ಹೋಗಲು ಸಿದ್ಧರಾಗುವುದು ಸಹ ಅವರನ್ನು ದಣಿಸಬಹುದು. ಅಂಥವರಿಗಾಗಿ ಇತರರು ಯಾವ ಸಹಾಯಮಾಡಬಲ್ಲರು?
ನೀವು ಹೇಗೆ ಸಹಾಯ ನೀಡಬಹುದು?
10. ವೃದ್ಧರಿಗೆ ಪ್ರಾಯೋಗಿಕ ಸಹಾಯ ನೀಡಲಾಗುತ್ತಿದೆ ಎಂಬುದನ್ನು ಹಿರಿಯರು ಹೇಗೆ ಖಚಿತಪಡಿಸಿಕೊಳ್ಳಬಹುದು?
10 ಅನೇಕ ಸಭೆಗಳಲ್ಲಿ ವೃದ್ಧರನ್ನು ತುಂಬ ಉತ್ತಮ ವಿಧದಲ್ಲಿ ನೋಡಿಕೊಳ್ಳಲಾಗುತ್ತದೆ. ಅಂಗಡಿಯಿಂದ ಸಾಮಾನು ತಂದುಕೊಡಲು, ಅಡುಗೆ ಮಾಡಲು ಮತ್ತು ಶುಚಿಗೊಳಿಸಲು ಸಹೋದರ ಸಹೋದರಿಯರು ಅವರಿಗೆ ಪ್ರೀತಿಯಿಂದ ಸಹಾಯ ನೀಡುತ್ತಾರೆ. ಅಧ್ಯಯನ ಮಾಡಲು, ಕೂಟಗಳಿಗೆ ಹೋಗುವುದಕ್ಕೆ ಸಿದ್ಧರಾಗಲು ಮತ್ತು ಕ್ರಮವಾಗಿ ಶುಶ್ರೂಷೆಗೆ ತೆರಳಲು ಅವರು ವೃದ್ಧರಿಗೆ ಸಹಾಯ ಮಾಡುತ್ತಾರೆ. ಇಂಥ ಸಂದರ್ಭಗಳಲ್ಲಿ ಯುವ ಪ್ರಾಯದ ಸಾಕ್ಷಿಗಳು ಅವರೊಟ್ಟಿಗಿದ್ದು ಅವರಿಗಾಗಿ ಸಾರಿಗೆಯ ಏರ್ಪಾಡು ಮಾಡುತ್ತಾರೆ. ವೃದ್ಧರು ಒಂದು ವೇಳೆ ಮನೆಯಿಂದ ಹೊರಬರಲು ಅಶಕ್ತರಾಗಿರುವುದಾದರೆ ಟೆಲಿಫೋನಿನ ಮೂಲಕ ಕೂಟಗಳನ್ನು ಕೇಳಿಸಿಕೊಳ್ಳುವಂತೆ ಅಥವಾ ಕೂಟಗಳ ರೆಕಾರ್ಡಿಂಗ್ ಕೇಳಿಸಿಕೊಳ್ಳುವಂತೆ ಏರ್ಪಾಡು ಮಾಡಲಾಗುತ್ತದೆ. ಸಾಧ್ಯವಿರುವಲ್ಲೆಲ್ಲ ಹಿರಿಯರು ತಮ್ಮ ಸಭೆಯಲ್ಲಿರುವ ವೃದ್ಧರಿಗೆ ಪ್ರಾಯೋಗಿಕ ವಿಧಗಳಲ್ಲಿ ಸಹಾಯ ನೀಡಲಾಗುವಂತೆ ನೋಡಿಕೊಳ್ಳುತ್ತಾರೆ.c
11. ಒಂದು ಕುಟುಂಬವು ಒಬ್ಬ ವೃದ್ಧ ಸಹೋದರನಿಗೆ ಹೇಗೆ ಸಹಾಯ ನೀಡಿತು ಎಂಬುದನ್ನು ವಿವರಿಸಿ.
11 ಕ್ರೈಸ್ತರು ವ್ಯಕ್ತಿಗತವಾಗಿಯೂ ಅತಿಥಿಸತ್ಕಾರ ಮತ್ತು ಔದಾರ್ಯ ತೋರಿಸಬಲ್ಲರು. ಒಬ್ಬ ವೃದ್ಧ ಸಹೋದರನ ಹೆಂಡತಿ ಸಾವನ್ನಪ್ಪಿದ ಬಳಿಕ ಅವನಿಗೆ ಮನೆ ಬಾಡಿಗೆಯನ್ನು ಕೊಡಲು ಕಷ್ಟವಾಯಿತು. ಏಕೆಂದರೆ ಇಷ್ಟು ದಿವಸ ಹೆಂಡತಿಯ ಪಿಂಚಣಿ ಸಿಗುತ್ತಿತ್ತು. ಈ ಸಹೋದರನು ಮತ್ತು ಆತನ ಹೆಂಡತಿಯು ಈ ಹಿಂದೆ, ಗಂಡಹೆಂಡತಿ ಹಾಗೂ ಇಬ್ಬರು ಹದಿವಯಸ್ಸಿನ ಹೆಣ್ಣು ಮಕ್ಕಳಿದ್ದ ಒಂದು ಕುಟುಂಬದೊಂದಿಗೆ ಬೈಬಲ್ ಅಧ್ಯಯನ ನಡೆಸಿದ್ದರು. ಅವರು ಈ ಸಹೋದರನಿಗೆ ತಮ್ಮ ದೊಡ್ಡ ಮನೆಯಲ್ಲಿ ಎರಡು ಕೋಣೆಗಳನ್ನು ಕೊಟ್ಟರು. ಆತನು ಅವರ ಕುಟುಂಬದ ಭಾಗವಾಗಿದ್ದು 15 ವರ್ಷಗಳ ತನಕ ಅವರೆಲ್ಲರೂ ಸುಖದುಃಖಗಳನ್ನು ಸಮಾನವಾಗಿ ಹಂಚಿಕೊಂಡರು. ಈ ಕುಟುಂಬದವರು ಈ ಸಹೋದರನ ನಂಬಿಕೆ ಮತ್ತು ಅಪಾರ ಅನುಭವದಿಂದ ಬಹಳಷ್ಟನ್ನು ಕಲಿತರು ಮತ್ತು ಅವರ ಆನಂದಭರಿತ ಸಹವಾಸದಿಂದ ಆತನೂ ಪ್ರಯೋಜನ ಪಡೆದನು. ಈ ಸಹೋದರನು 89ರ ಪ್ರಾಯದಲ್ಲಿ ಕೊನೆಯುಸಿರೆಳೆಯುವ ತನಕ ಅವರೊಂದಿಗೇ ಇದ್ದನು. ಈ ಸಹೋದರನೊಂದಿಗಿನ ಸಹವಾಸದಿಂದ ಪಡೆದ ಅನೇಕ ಆಶೀರ್ವಾದಗಳಿಗಾಗಿ ಆ ಕುಟುಂಬ ಈಗಲೂ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದೆ. ಯೇಸು ಕ್ರಿಸ್ತನ ಶಿಷ್ಯರಲ್ಲಿ ಒಬ್ಬನಾದ ಈ ಸಹೋದರನಿಗೆ ಸಹಾಯ ಮಾಡಿದ್ದಕ್ಕಾಗಿ ಅವರಿಗೆ “ಪ್ರತಿಫಲ” ಖಂಡಿತ ಸಿಗುವುದು.—ಮತ್ತಾ. 10:42.d
12. ಇಳಿವಯಸ್ಸಿನ ಸಹೋದರ ಸಹೋದರಿಯರಿಗೆ ನೀವು ಹೇಗೆ ಕೋಮಲ ಪರಿಗಣನೆ ತೋರಿಸಬಲ್ಲಿರಿ?
12 ವೃದ್ಧ ಸಹೋದರ ಸಹೋದರಿಯರಿಗೆ ಈ ಕುಟುಂಬವು ಮಾಡಿದಂಥ ರೀತಿಯಲ್ಲೇ ಸಹಾಯಮಾಡಲು ನಿಮಗೆ ಸಾಧ್ಯವಿರಲಿಕ್ಕಿಲ್ಲ. ಆದರೆ ಅವರನ್ನು ಕೂಟಗಳಿಗೆ ಮತ್ತು ಕ್ಷೇತ್ರ ಸೇವೆಗೆ ಕರೆದುಕೊಂಡು ಹೋಗಲು ನಿಮಗೆ ಸಾಧ್ಯವಾಗಬಹುದು. ನೀವು ಅವರನ್ನು ನಿಮ್ಮ ಮನೆಗೆ ಆಮಂತ್ರಿಸಬಹುದು ಇಲ್ಲವೇ ವಿಹಾರಕ್ಕೆಂದು ಹೋಗುವಾಗ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬಹುದು. ಅವರ ಆರೋಗ್ಯ ಕೆಟ್ಟಿರುವಾಗ ಇಲ್ಲವೇ ಅವರು ಮನೆಯಿಂದ ಹೊರಬರಲು ಅಶಕ್ತರಾಗಿರುವಾಗ ಅವರನ್ನು ಭೇಟಿಮಾಡಬಹುದು. ಇನ್ನೂ ಹೆಚ್ಚಾಗಿ ಅವರನ್ನು ಯಾವಾಗಲೂ ಪ್ರೌಢ ವಯಸ್ಕರಂತೆ ಉಪಚರಿಸಬೇಕು. ಅವರ ಮಾನಸಿಕ ಸಾಮರ್ಥ್ಯ ಉತ್ತಮವಾಗಿರುವಷ್ಟು ಸಮಯ ಅವರಿಗೆ ಸಂಬಂಧಪಟ್ಟ ಯಾವುದೇ ನಿರ್ಣಯಗಳನ್ನು ಮಾಡುವಾಗ ಅವರನ್ನೂ ಒಳಗೂಡಿಸಬೇಕು. ಬಹುಮಟ್ಟಿನ ಮಾನಸಿಕ ಸಾಮರ್ಥ್ಯ ಕಳೆದುಕೊಂಡವರು ಸಹ ತಮ್ಮನ್ನು ಗೌರವಿಸಲಾಗುತ್ತಿದೆಯೋ ಇಲ್ಲವೋ ಎಂಬುದನ್ನು ಗ್ರಹಿಸಬಲ್ಲರು.
ಯೆಹೋವನು ನಿಮ್ಮ ಕೆಲಸವನ್ನು ಮರೆಯನು
13. ವೃದ್ಧ ಕ್ರೈಸ್ತರ ಭಾವನೆಗಳಿಗೆ ಪರಿಗಣನೆ ತೋರಿಸುವುದು ಪ್ರಾಮುಖ್ಯವೇಕೆ?
13 ವೃದ್ಧರ ಭಾವನೆಗಳಿಗೆ ಪರಿಗಣನೆ ತೋರಿಸುವುದು ಅಗತ್ಯ. ವೃದ್ಧರು ತಾವು ಯುವಪ್ರಾಯದಲ್ಲಿ ಆರೋಗ್ಯದಿಂದಿದ್ದಾಗ ಮಾಡಿದ ಕೆಲಸಗಳನ್ನು ಈಗ ಮಾಡಲು ಅಶಕ್ತರಾಗಿರುವುದಕ್ಕಾಗಿ ಕೊರಗುತ್ತಿರುವುದು ಸಾಮಾನ್ಯ. ಉದಾಹರಣೆಗೆ, ರೆಗ್ಯುಲರ್ ಪಯನೀಯರ್ ಆಗಿದ್ದ ಒಬ್ಬಾಕೆ ಸಹೋದರಿಯನ್ನು ಪರಿಗಣಿಸಿ. ಆಕೆ 50 ವರ್ಷಗಳ ತನಕ ಯೆಹೋವನನ್ನು ಕ್ರಿಯಾಶೀಲವಾಗಿ ಸೇವಿಸಿದ್ದಳು. ಆದರೆ ಸಮಯಾನಂತರ ಆಕೆ, ದೇಹವನ್ನು ದುರ್ಬಲಗೊಳಿಸುವ ಒಂದು ಕಾಯಿಲೆಗೆ ತುತ್ತಾದಳು ಮತ್ತು ಇದರಿಂದ ಆಕೆ ಕೂಟಗಳಿಗೆ ಹಾಜರಾಗಲೂ ಬಹಳ ಕಷ್ಟಪಡಬೇಕಾಯಿತು. ತನ್ನ ಸದ್ಯದ ಸ್ಥಿತಿಯನ್ನು ತಾನು ಈ ಹಿಂದೆ ಮಾಡುತ್ತಿದ್ದ ಸೇವೆಯೊಂದಿಗೆ ಹೋಲಿಸಿ ಅಳಲಾರಂಭಿಸಿದಳು. ಆಕೆ ತಲೆತಗ್ಗಿಸಿ ಅಳುತ್ತಾ ಹೇಳಿದ್ದು: “ನಾನೀಗ ಏನೂ ಮಾಡುತ್ತಿಲ್ಲ.”
14. ಯೆಹೋವನನ್ನು ಸೇವಿಸುವ ವೃದ್ಧರು ಕೀರ್ತನೆಗಳಿಂದ ಯಾವ ಉತ್ತೇಜನ ಪಡೆಯಬಲ್ಲರು?
14 ನೀವು ವೃದ್ಧರಾಗಿರುವಲ್ಲಿ, ಎಂದಾದರೂ ಹೀಗೆ ನೊಂದುಕೊಂಡಿದ್ದೀರೋ? ಇಲ್ಲವೇ ಯೆಹೋವನು ನಿಮ್ಮನ್ನು ತೊರೆದಿದ್ದಾನೆ ಎಂದು ಕೆಲವೊಮ್ಮೆ ಅನಿಸಿದೆಯೋ? ವೃದ್ಧಾಪ್ಯದಲ್ಲಿ ಕೀರ್ತನೆಗಾರನಿಗೂ ಇಂಥ ಭಾವನೆಗಳಿದ್ದಿರಬಹುದು. ಆತನು ಯೆಹೋವನಲ್ಲಿ ಬೇಡಿದ್ದು: “ವೃದ್ಧಾಪ್ಯದಲ್ಲಿ ನನ್ನನ್ನು ಧಿಕ್ಕರಿಸಬೇಡ; ನನ್ನ ಬಲವು ಕುಂದಿದಾಗ ಕೈಬಿಡಬೇಡ. . . . ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ.” (ಕೀರ್ತ. 71:9, 18) ನಿಶ್ಚಯವಾಗಿ ಯೆಹೋವನು ಈ ಕೀರ್ತನೆಯ ರಚಕನನ್ನು ತೊರೆಯಲಿಲ್ಲ. ಅಂತೆಯೇ ಆತನು ಖಂಡಿತವಾಗಿ ನಿಮ್ಮನ್ನೂ ತೊರೆಯುವುದಿಲ್ಲ. ದಾವೀದನು ಇನ್ನೊಂದು ಕೀರ್ತನೆಯಲ್ಲಿ, ದೇವರು ತನ್ನನ್ನು ಬೆಂಬಲಿಸುವನೆಂಬ ಭರವಸೆಯನ್ನು ವ್ಯಕ್ತಪಡಿಸಿದನು. (ಕೀರ್ತನೆ 68:19 ಓದಿ.) ನೀವು ನಂಬಿಗಸ್ತ ವೃದ್ಧ ಕ್ರೈಸ್ತರಾಗಿರುವಲ್ಲಿ, ಯೆಹೋವನು ನಿಮ್ಮೊಂದಿಗಿದ್ದಾನೆ ಮತ್ತು ಅನುದಿನವೂ ನಿಮಗೆ ಆಸರೆಯಾಗಿರುವನು ಎಂಬ ಆಶ್ವಾಸನೆ ನಿಮಗಿರಲಿ.
15. ಸಕಾರಾತ್ಮಕ ಹೊರನೋಟವನ್ನು ಇಟ್ಟುಕೊಳ್ಳಲು ವೃದ್ಧರಿಗೆ ಯಾವುದು ಸಹಾಯ ಮಾಡಬಲ್ಲದು?
15 ವೃದ್ಧ ಸಾಕ್ಷಿಗಳಾದ ನೀವು ದೇವರನ್ನು ಮಹಿಮೆಪಡಿಸಲಿಕ್ಕಾಗಿ ಈ ಹಿಂದೆ ಪಟ್ಟ ಪ್ರಯಾಸ ಮತ್ತು ಈಗಲೂ ಮಾಡುತ್ತಿರುವ ಸಂಗತಿಗಳು ದೇವರ ನೆನಪಿನಲ್ಲಿ ಹಚ್ಚಹಸುರಾಗಿ ಉಳಿಯುವವು. ಬೈಬಲ್ ತಿಳಿಸುವುದು: “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” (ಇಬ್ರಿ. 6:10) ನೀವು ವೃದ್ಧರಾಗಿರುವುದರಿಂದ ಈಗ ಯೆಹೋವನಿಗೆ ಯಾವುದೇ ಪ್ರಯೋಜನಕ್ಕೆ ಬಾರದವರು ಎಂಬ ನಕಾರಾತ್ಮಕ ನೋಟ ಬೆಳೆಸಿಕೊಳ್ಳಬೇಡಿ. ಖಿನ್ನಗೊಳಿಸುವ ನಕಾರಾತ್ಮಕ ಆಲೋಚನೆಗಳನ್ನು ತೆಗೆದು ಸಕಾರಾತ್ಮಕ ಆಲೋಚನೆಗಳನ್ನು ತುಂಬಲು ಪ್ರಯತ್ನಿಸಿ. ನಿಮಗಿರುವ ಆಶೀರ್ವಾದಗಳಲ್ಲಿ ಮತ್ತು ಭವಿಷ್ಯತ್ತಿಗಾಗಿರುವ ನಿರೀಕ್ಷೆಯಲ್ಲಿ ಹರ್ಷಿಸಿರಿ! ಯಾಕೆಂದರೆ ನಮಗಿರುವ ‘ಭವಿಷ್ಯವೂ ನಿರೀಕ್ಷೆಯೂ’ ಅತ್ಯುತ್ತಮವಾದದ್ದಾಗಿದೆ ಮತ್ತು ಅದಕ್ಕೆ ನಮ್ಮ ಸೃಷ್ಟಿಕರ್ತನೇ ಆಧಾರ ಕೊಟ್ಟಿದ್ದಾನೆ. (ಯೆರೆ. 29:11, 12, NIBV; ಅ. ಕೃ. 17:31; 1 ತಿಮೊ. 6:18, 19) ಹೀಗಿರುವುದರಿಂದ ನಿಮ್ಮ ನಿರೀಕ್ಷೆಯ ಕುರಿತು ಧ್ಯಾನಿಸಿರಿ, ಹೃದಮನಗಳಲ್ಲಿ ಸದಾ ಯೌವನಸ್ಥರಾಗಿರಲು ಕ್ರಿಯೆಗೈಯಿರಿ ಮತ್ತು ಸಭಾ ಕೂಟಗಳಲ್ಲಿ ನಿಮ್ಮ ಉಪಸ್ಥಿತಿಯನ್ನು ಬೇರೆಯವರು ಎಷ್ಟು ಅಮೂಲ್ಯವೆಂದೆಣಿಸುತ್ತಾರೆ ಎಂಬುದನ್ನು ಎಂದೂ ಕಡಿಮೆ ಅಂದಾಜುಮಾಡದಿರಿ.e
16. ಒಬ್ಬ ವೃದ್ಧ ಸಹೋದರನು ತಾನು ಹಿರಿಯನಾಗಿ ಮುಂದುವರಿಯಲಾರೆ ಎಂದು ಎಣಿಸಿದ್ದೇಕೆ, ಮತ್ತು ಹಿರಿಯರ ಮಂಡಲಿ ಆ ಸಹೋದರನನ್ನು ಹೇಗೆ ಉತ್ತೇಜಿಸಿತು?
16 ಯೋಹಾನ್ ಎಂಬ 80ರ ಪ್ರಾಯದ ಸಹೋದರನನ್ನು ಪರಿಗಣಿಸಿ. ಪತ್ನಿ ಸೇನಿ ಈಗ ಹಾಸಿಗೆ ಹಿಡಿದಿರುವುದರಿಂದ ಯೋಹಾನ್ರೇ ಅವರ ಚಾಕರಿ ಮಾಡುತ್ತಾರೆ.f ಯೋಹಾನ್ ಕೂಟಗಳಿಗೆ ಮತ್ತು ಕ್ಷೇತ್ರಸೇವೆಗೆ ಹೋಗುವಂತೆ ಇತರ ಸಹೋದರಿಯರು ಸರದಿಗನುಸಾರ ಮನೆಗೆ ಬಂದು ಸೇನಿಯ ಆರೈಕೆ ಮಾಡುತ್ತಾರೆ. ಆದಾಗ್ಯೂ, ಇತ್ತೀಚೆಗೆ ಯೋಹಾನ್ರಿಗೆ ತಾನು ಇನ್ನೇನು ಭಾವನಾತ್ಮಕವಾಗಿ ಕುಸಿಯಲಿದ್ದೇನೆಂದು ಅನಿಸಿತು. ಆದುದರಿಂದ ತಾನು ಇನ್ನು ಮುಂದೆ ಸಭಾ ಹಿರಿಯನಾಗಿ ಮುಂದುವರಿಯಲಾರೆ ಎಂದು ಯೋಚಿಸತೊಡಗಿದರು. “ನಾನು ಹಿರಿಯನಾಗಿದ್ದು ಏನು ಪ್ರಯೋಜನ? ಸಭೆಗಾಗಿ ನನ್ನಿಂದ ಏನೂ ಮಾಡಲಾಗುತ್ತಿಲ್ಲ” ಎಂದು ಹೇಳುವಾಗ ಅವರಿಗೆ ದುಃಖ ಉಮ್ಮಳಿಸಿ ಬಂತು. ಆದರೆ ಅವರಿಗಿರುವ ಅನುಭವ ಮತ್ತು ವಿವೇಚನೆಗೆ ಬೆಲೆಕಟ್ಟಲಾಗದು ಎಂದು ಜೊತೆ ಹಿರಿಯರು ಯೋಹಾನ್ರಿಗೆ ಆಶ್ವಾಸನೆ ಕೊಟ್ಟರು. ಹೆಚ್ಚನ್ನು ಮಾಡಲಾಗದಿದ್ದರೂ ಹಿರಿಯನಾಗಿ ಮುಂದುವರಿಯಬೇಕೆಂದು ಅವರಲ್ಲಿ ಕೇಳಿಕೊಂಡರು. ಇದರಿಂದ ಬಹಳ ಉತ್ತೇಜಿತರಾದ ಯೋಹಾನ್ ಈಗಲೂ ಹಿರಿಯರಾಗಿ ಸೇವೆಸಲ್ಲಿಸುತ್ತಿದ್ದಾರೆ ಮತ್ತು ಇದರಿಂದ ಸಭೆಗೆ ಪ್ರಯೋಜನವಾಗುತ್ತಿದೆ.
ಯೆಹೋವನು ನಿಜವಾಗಿಯೂ ಪರಾಮರಿಸುತ್ತಾನೆ
17. ವೃದ್ಧ ಕ್ರೈಸ್ತರಿಗೆ ಬೈಬಲ್ ಯಾವ ಆಶ್ವಾಸನೆಗಳನ್ನು ಕೊಡುತ್ತದೆ?
17 ವೃದ್ಧಾಪ್ಯದ ಸಮಸ್ಯೆಗಳಿದ್ದರೂ ವೃದ್ಧರು ಆಧ್ಯಾತ್ಮಿಕವಾಗಿ ಏಳಿಗೆಹೊಂದಬಲ್ಲರು ಎಂಬುದನ್ನು ಬೈಬಲ್ ಸ್ಪಷ್ಟಪಡಿಸುತ್ತದೆ. ಕೀರ್ತನೆಗಾರನು ಹೇಳಿದ್ದು: “ಯೆಹೋವನ ಆಲಯದಲ್ಲಿ [ಸಸಿಗಳಂತೆ] ನೆಡಲ್ಪಟ್ಟವರು . . . ಮುಪ್ಪಿನಲ್ಲಿಯೂ ಫಲಿಸುವರು; ಪುಷ್ಟಿಯಾಗಿದ್ದು ಶೋಭಿಸುವರು.” (ಕೀರ್ತ. 92:13, 14) ಅಪೊಸ್ತಲ ಪೌಲನಿಗೂ ಶಾರೀರಿಕ ಬೇನೆಯಿದ್ದಿರಬಹುದು. ಅವನ ‘ದೇಹವು ನಾಶವಾಗುತ್ತಾ ಇದ್ದರೂ ಅವನು ಧೈರ್ಯಗೆಡಲಿಲ್ಲ.’—2 ಕೊರಿಂಥ 4:16-18 ಓದಿ.
18. ವೃದ್ಧ ಜೊತೆ ವಿಶ್ವಾಸಿಗಳಿಗೆ ಹಾಗೂ ಅವರ ಆರೈಕೆ ಮಾಡುವವರಿಗೆ ಇತರರ ನೆರವು ಏಕೆ ಬೇಕು?
18 ವೃದ್ಧರೂ ‘ಫಲಿಸುತ್ತಾ’ ಇರಬಲ್ಲರೆಂದು ಆಧುನಿಕ ದಿನದ ಅನೇಕ ಉದಾಹರಣೆಗಳು ತೋರಿಸುತ್ತವೆ. ಆದರೆ ಅನಾರೋಗ್ಯ ಹಾಗೂ ವೃದ್ಧಾಪ್ಯದಿಂದ ಉಂಟಾಗುವ ಸಮಸ್ಯೆಗಳು, ವೃದ್ಧರನ್ನು ಪ್ರೀತಿಯಿಂದ ಆರೈಕೆ ಮಾಡುವ ಕುಟುಂಬ ಸದಸ್ಯರಿಗೂ ಸವಾಲಾಗಿರಬಲ್ಲವು. ವೃದ್ಧರ ಆರೈಕೆ ಮಾಡುವಾಗ ಅವರು ಬಳಲಿಹೋಗಬಹುದು. ವೃದ್ಧರು ಹಾಗೂ ಅವರ ಆರೈಕೆ ಮಾಡುವವರ ಕಡೆಗೆ ತಮ್ಮ ಪ್ರೀತಿಯನ್ನು ಕಾರ್ಯದಲ್ಲಿ ತೋರಿಸುವ ಸುಯೋಗ ಹಾಗೂ ಜವಾಬ್ದಾರಿ ಸಭೆಗಿದೆ. (ಗಲಾ. 6:10) ಇಂಥ ಪ್ರಾಯೋಗಿಕ ಸಹಾಯ ನೀಡುವ ಮೂಲಕ, “ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆ ತುಂಬಿಸಿಕೊಳ್ಳಿ” ಎಂದು ಬರೀ ಹೇಳುವವರು ನಾವಲ್ಲ ಎಂಬುದನ್ನು ತೋರಿಸಿಕೊಡುವೆವು.—ಯಾಕೋ. 2:15-17.
19. ನಂಬಿಗಸ್ತ ವೃದ್ಧ ಕ್ರೈಸ್ತರು ಭರವಸೆಯಿಂದ ಭವಿಷ್ಯತ್ತನ್ನು ಎದುರುನೋಡಬಲ್ಲರೇಕೆ?
19 ಮುಪ್ಪಿನಲ್ಲಿ ಒಬ್ಬನ ಕ್ರೈಸ್ತ ಚಟುವಟಿಕೆಗಳು ಕಡಿಮೆಯಾದರೂ ಯೆಹೋವನಿಗೆ ತನ್ನ ನಿಷ್ಠಾವಂತ ವೃದ್ಧ ಸೇವಕರ ಮೇಲಿರುವ ಪ್ರೀತಿ ಎಂದೂ ಬತ್ತಿಹೋಗುವುದಿಲ್ಲ. ಬದಲಾಗಿ ಈ ಎಲ್ಲಾ ನಂಬಿಗಸ್ತ ಕ್ರೈಸ್ತರು ಆತನ ದೃಷ್ಟಿಯಲ್ಲಿ ಅಮೂಲ್ಯರಾಗಿದ್ದಾರೆ ಮತ್ತು ಆತನೆಂದೂ ಅವರ ಕೈಬಿಡನು. (ಕೀರ್ತ. 37:28; ಯೆಶಾ. 46:4) ಯೆಹೋವನು ಅವರ ವೃದ್ಧಾಪ್ಯದಲ್ಲೂ ಆಸರೆಯಾಗಿದ್ದು ಅವರನ್ನು ನಡಿಸುವನು.—ಕೀರ್ತ. 48:14.
[ಪಾದಟಿಪ್ಪಣಿಗಳು]
a 2007, ಜೂನ್ 1ರ ಕಾವಲಿನಬುರುಜು ಪತ್ರಿಕೆಯಲ್ಲಿರುವ “ವಯೋವೃದ್ಧರು ಎಳೆಯರಿಗೆ ಆಶೀರ್ವಾದ” ಎಂಬ ಲೇಖನ ನೋಡಿ.
b 1994, ಫೆಬ್ರವರಿ 8ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯ ಪುಟ 3-10ನ್ನು ನೋಡಿ.
c ಕೆಲವೊಂದು ದೇಶಗಳಲ್ಲಿ, ವೃದ್ಧರಿಗೆ ಸರಕಾರದಿಂದ ಸಿಗುವ ನೆರವನ್ನು ಪಡೆಯುವಂತೆ ಸಹಾಯ ಮಾಡುವುದೂ ಇದರಲ್ಲಿ ಸೇರಿದೆ. 2006, ಜೂನ್ 1ರ ಕಾವಲಿನಬುರುಜು ಪತ್ರಿಕೆಯಲ್ಲಿರುವ “ದೇವರು ವೃದ್ಧರ ಕಾಳಜಿವಹಿಸುತ್ತಾನೆ” ಎಂಬ ಲೇಖನ ನೋಡಿ.
d 2003, ಸೆಪ್ಟೆಂಬರ್ 1ರ ಕಾವಲಿನಬುರುಜು ಪತ್ರಿಕೆಯಲ್ಲಿರುವ “ಯೆಹೋವನು ಯಾವಾಗಲೂ ನಮ್ಮನ್ನು ಪರಿಪಾಲಿಸುತ್ತಾನೆ” ಎಂಬ ಲೇಖನವನ್ನು ನೋಡಿ.
e 1993, ಮಾರ್ಚ್ 15ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯಲ್ಲಿರುವ “ಬೆಳ್ಳಗಿನ ಕೂದಲನ್ನು ಹೊಂದಿರುವವರ ವೈಭವ” ಎಂಬ ಲೇಖನವನ್ನು ನೋಡಿ.
f ಹೆಸರುಗಳನ್ನು ಬದಲಾಯಿಸಲಾಗಿದೆ.
ನೀವು ಹೇಗೆ ಉತ್ತರಿಸುವಿರಿ?
• ನೀವು ನಂಬಿಗಸ್ತ ವೃದ್ಧ ಕ್ರೈಸ್ತರನ್ನು ಬಹು ಅಮೂಲ್ಯರೆಂದು ಪರಿಗಣಿಸುವುದೇಕೆ?
• ವೃದ್ಧ ಜೊತೆ ಆರಾಧಕರಿಗೆ ನಾವು ಹೇಗೆ ಕೋಮಲ ಪರಿಗಣನೆ ತೋರಿಸಸಾಧ್ಯವಿದೆ?
• ಯೆಹೋವನನ್ನು ಸೇವಿಸುವ ವೃದ್ಧರು ಸಕಾರಾತ್ಮಕ ಹೊರನೋಟ ಇಟ್ಟುಕೊಳ್ಳುವಂತೆ ಯಾವುದು ಸಹಾಯ ಮಾಡಬಲ್ಲದು?
[ಪುಟ 18ರಲ್ಲಿರುವ ಚಿತ್ರಗಳು]
ಸಭೆಯ ಸದಸ್ಯರು ವೃದ್ಧರನ್ನು ಬಹಳ ಮಾನ್ಯ ಮಾಡುತ್ತಾರೆ