ಬೈಬಲ್ ಓದಿ ಪೂರ್ಣ ಪ್ರಯೋಜನ ಪಡೆಯಿರಿ
“ನಾನು ದೇವರ ನಿಯಮದಲ್ಲಿ ನಿಜವಾಗಿಯೂ ಆನಂದಿಸುವವನಾಗಿದ್ದೇನೆ.”—ರೋಮ. 7:22.
1-3. ಬೈಬಲನ್ನು ಓದುವುದರಿಂದ ಮತ್ತು ಅನ್ವಯಿಸಿಕೊಳ್ಳುವುದರಿಂದ ಏನು ಪ್ರಯೋಜನ?
“ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಿರುವುದಕ್ಕಾಗಿ ನಾನು ಪ್ರತಿದಿನ ಮುಂಜಾನೆ ಯೆಹೋವನಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎನ್ನುತ್ತಾರೆ ಒಬ್ಬಾಕೆ ವೃದ್ಧ ಸಹೋದರಿ. ಈಗಾಗಲೇ 40 ಬಾರಿ ಅವರು ಬೈಬಲನ್ನು ಓದಿ ಮುಗಿಸಿದ್ದಾರೆ. ಇನ್ನೂ ಓದುತ್ತಲೇ ಇದ್ದಾರೆ. ಒಬ್ಬ ಯುವ ಸಹೋದರಿಗೆ ಬೈಬಲ್ ಓದುವುದರಿಂದ ಅನೇಕ ಪ್ರಯೋಜನಗಳಾಗಿವೆ. ಆಕೆಗೆ ಯೆಹೋವ ದೇವರನ್ನು ನಿಜವಾದ ವ್ಯಕ್ತಿಯಂತೆ ಪರಿಗಣಿಸಲು ಸಾಧ್ಯವಾಗಿದೆ. ಇದರಿಂದ ಆತನಿಗೆ ಹೆಚ್ಚು ಆಪ್ತಳಾಗಿದ್ದಾಳೆ. “ಈಗ ಇರುವಷ್ಟು ಖುಷಿ ನನಗೆ ಈ ಮುಂಚೆ ಇರಲಿಲ್ಲ” ಎನ್ನುತ್ತಾಳೆ ಅವಳು.
2 “ವಾಕ್ಯಕ್ಕೆ ಸಂಬಂಧಿಸಿದ ಕಲಬೆರಕೆಯಿಲ್ಲದ ಹಾಲಿಗಾಗಿ ಹಂಬಲವನ್ನು ಬೆಳೆಸಿಕೊಳ್ಳಿ” ಎಂದು ಅಪೊಸ್ತಲ ಪೇತ್ರನು ಎಲ್ಲರನ್ನೂ ಉತ್ತೇಜಿಸಿದನು. (1 ಪೇತ್ರ 2:2) ನಾವು ಬೈಬಲ್ ಅಧ್ಯಯನ ಮಾಡುವ ಮೂಲಕ ಆ ಹಂಬಲವನ್ನು ತಣಿಸಿಕೊಳ್ಳುವುದಾದರೆ ಹಾಗೂ ಕಲಿತದ್ದನ್ನು ಅನ್ವಯಿಸಿಕೊಳ್ಳುವುದಾದರೆ ನಮ್ಮಲ್ಲಿ ಶುದ್ಧ ಮನಸ್ಸಾಕ್ಷಿ ಇರುತ್ತದೆ, ನಮ್ಮ ಜೀವನಕ್ಕೆ ಉದ್ದೇಶ ಕಂಡುಕೊಳ್ಳುತ್ತೇವೆ. ಅಷ್ಟೆ ಅಲ್ಲ, ದೇವರನ್ನು ಆರಾಧಿಸುವ ಮತ್ತು ಪ್ರೀತಿಸುವ ಜನರೊಂದಿಗೆ ಬಾಳುವ ಸ್ನೇಹವನ್ನು ಬೆಳೆಸಿಕೊಳ್ಳುತ್ತೇವೆ. ‘ದೇವರ ನಿಯಮದಲ್ಲಿ ನಿಜವಾಗಿ ಆನಂದಿಸಲು’ ನಮಗೆ ಇಷ್ಟೆಲ್ಲ ಸಕಾರಣಗಳಿವೆ. (ರೋಮ. 7:22) ಬೈಬಲ್ ಓದುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಯಾವುವು ಅಂತೀರಾ?
3 ನೀವು ಯೆಹೋವನ ಬಗ್ಗೆ, ಆತನ ಮಗನಾದ ಯೇಸು ಕ್ರಿಸ್ತನ ಬಗ್ಗೆ ಎಷ್ಟು ಕಲಿಯುತ್ತೀರೋ ಅಷ್ಟೇ ಹೆಚ್ಚು ಅವರ ಮೇಲೆ ಮತ್ತು ಜೊತೆ ಮಾನವರ ಮೇಲೆ ಪ್ರೀತಿ ಬೆಳೆಯುತ್ತದೆ. ಬೈಬಲಿನ ನಿಷ್ಕೃಷ್ಟ ಜ್ಞಾನ ಪಡೆದುಕೊಳ್ಳುವಾಗ, ನಾಶನದ ಅಂಚಿನಲ್ಲಿರುವ ಈ ವ್ಯವಸ್ಥೆಯಿಂದ ದೇವರು ಮುಗ್ಧ ಜನರನ್ನು ಹೇಗೆ ಪಾರುಮಾಡುತ್ತಾನೆ ಎನ್ನುವುದನ್ನು ತಿಳಿಯುತ್ತೀರಿ. ಜನರಿಗೆ ಹೇಳಲು ನಿಮ್ಮ ಹತ್ರ ಸಂತೋಷದ ಸುದ್ದಿ ಇರುತ್ತದೆ. ದೇವರ ವಾಕ್ಯದಿಂದ ಕಲಿತದ್ದನ್ನು ಇತರರಿಗೆ ಕಲಿಸುವಾಗ ಯೆಹೋವನು ನಿಮ್ಮನ್ನು ಇನ್ನಷ್ಟು ಆಶೀರ್ವದಿಸುತ್ತಾನೆ.
ಓದಿ, ಓದಿದ್ದನ್ನು ಧ್ಯಾನಿಸಿ
4. ಬೈಬಲನ್ನು “ತಗ್ಗುದನಿಯಲ್ಲಿ” ಓದುವುದು ಅಂದರೇನು?
4 ನಾವು ಬೈಬಲನ್ನು ಬರಬರನೇ ಓದಿ ಮುಗಿಸಬೇಕೆಂದು ಯೆಹೋವನು ಬಯಸುವುದಿಲ್ಲ. ದೇವರು ಯೆಹೋಶುವನಿಗೆ ಏನೆಂದನು ಗೊತ್ತೆ? “ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸು [ತಗ್ಗುದನಿಯಲ್ಲಿ ಓದು, NW]” ಎಂದನು. (ಯೆಹೋ. 1:8; ಕೀರ್ತ. 1:2) ತಗ್ಗುದನಿಯಲ್ಲಿ ಓದು ಎನ್ನುವಾಗ ಅದರರ್ಥ ನಾವು ಆದಿಕಾಂಡದಿಂದ ಪ್ರಕಟನೆಯ ವರೆಗೆ ಎಲ್ಲವನ್ನು ನಿಧಾನವಾಗಿ, ಪಿಸುಗುಟ್ಟುವ ಧ್ವನಿಯಲ್ಲಿ ಓದಬೇಕೆಂದಾ? ಇಲ್ಲ. ಬದಲಿಗೆ ನಾವು ಬೈಬಲ್ ಓದುವ ವೇಗ ಹೇಗಿರಬೇಕೆಂದರೆ ನಾವು ಓದುತ್ತಾ ಇರುವಾಗ ಅದರಲ್ಲಿರುವ ವಿಷಯವನ್ನು ಧ್ಯಾನಿಸುವಷ್ಟು ಸಮಯಾವಕಾಶ ನಮಗೆ ಸಿಗಬೇಕು. ಹೀಗೆ ಓದಿದರೆ ನಿಮಗೆ ಸಹಾಯವಾಗುವ, ಉತ್ತೇಜನ ಕೊಡುವ ಭಾಗಗಳು ಬರುವಾಗ ಅದರ ಮೇಲೆ ಗಮನ ಕೇಂದ್ರೀಕರಿಸಲು ನಿಮ್ಮಿಂದಾಗುತ್ತದೆ. ಅಂಥ ಭಾಗಗಳನ್ನು ಅಂದರೆ ಪದಗಳು, ವಚನಗಳು, ವೃತ್ತಾಂತಗಳು ಬರುವಾಗ ನಿಧಾನವಾಗಿ, ಉಚ್ಚರಿಸಿ ಓದಿ. ಆಗ ಆ ವಚನಗಳಲ್ಲಿರುವ ಸಾರವು ನಿಮ್ಮ ಹೃದಯದಾಳಕ್ಕೆ ಇಳಿಯುತ್ತದೆ. ಹೀಗೆ ಮಾಡುವುದು ಏಕೆ ಪ್ರಾಮುಖ್ಯ? ಏಕೆಂದರೆ ಓದಿದ ವಿಷಯ ನಿಮಗೆ ಸರಿಯಾಗಿ ಅರ್ಥವಾದಾಗ ಅದಕ್ಕೆ ತಕ್ಕಂತೆ ನಡೆಯಬೇಕೆಂಬ ಬಲವಾದ ಪ್ರಚೋದನೆ ನಿಮಗಾಗುತ್ತೆ.
5-7. ಬೈಬಲನ್ನು ತಗ್ಗುದನಿಯಲ್ಲಿ ಓದುವುದು ಈ ಮುಂದಿನ ಮೂರು ಕ್ಷೇತ್ರಗಳಲ್ಲಿ ಹೇಗೆ ಸಹಾಯಕಾರಿ ಎಂದು ವಿವರಿಸಿ. (1) ನೈತಿಕವಾಗಿ ಶುದ್ಧರಾಗಿ ಉಳಿಯುವುದು (2) ಇತರರ ಕಡೆಗೆ ತಾಳ್ಮೆ ಹಾಗೂ ಪ್ರೀತಿ ತೋರಿಸುವುದು (3) ಕಷ್ಟ ಬಂದಾಗಲೂ ಯೆಹೋವನಲ್ಲಿ ಭರವಸೆಯಿಡುವುದು.
5 ಬೈಬಲಿನಲ್ಲಿ ಸ್ವಲ್ಪ ಕಷ್ಟವೆಂದೆನಿಸುವ ಪುಸ್ತಕಗಳನ್ನು ಓದುವಾಗ ತಗ್ಗುದನಿಯಲ್ಲಿ ಓದುವುದು ನಮಗೆ ಸಹಾಯಮಾಡುವುದು. ಇದನ್ನು ಅರ್ಥಮಾಡಿಕೊಳ್ಳಲು ಮೂರು ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳೋಣ. ಒಬ್ಬ ಯುವ ಸಹೋದರನು ಬೈಬಲ್ ಓದುತ್ತಾ ಓದುತ್ತಾ ಹೋಶೇಯ ಪುಸ್ತಕಕ್ಕೆ ಬಂದಿದ್ದಾನೆ. ಅಧ್ಯಾಯ 4ರ 11ರಿಂದ 13ನೇ ವಚನಗಳನ್ನು ತಗ್ಗುದನಿಯಲ್ಲಿ ಓದುತ್ತಾನೆ. ನಂತರ ಅವನು ತುಸು ನಿಲ್ಲಿಸುತ್ತಾನೆ. (ಹೋಶೇಯ 4:11-13 ಓದಿ.) ಏಕೆ? ಏಕೆಂದರೆ ಈ ವಚನಗಳು ಅವನನ್ನು ಯೋಚಿಸುವಂತೆ ಮಾಡಿವೆ. ಅವನಿಗೆ ಆಗಾಗ ಶಾಲೆಯಲ್ಲಿ ಅನೈತಿಕ ವಿಷಯಗಳಲ್ಲಿ ಒಳಗೂಡುವ ಒತ್ತಡ ಬರುತ್ತಿರುತ್ತದೆ. ಅದನ್ನು ಪ್ರತಿರೋಧಿಸಲು ಅವನು ಕಷ್ಟಪಡುತ್ತಿರುತ್ತಾನೆ. ಈಗ ಅವನು ಈ ವಚನಗಳ ಕುರಿತು ಧ್ಯಾನಿಸಿ ಹೀಗೆ ಯೋಚಿಸುತ್ತಾನೆ: ‘ಒಬ್ಬರೇ ಇರುವಾಗ ಕೆಟ್ಟದ್ದನ್ನು ಮಾಡಿದರೂ ಅದನ್ನು ಯೆಹೋವನು ನೋಡುತ್ತಾನೆ. ನಾನು ತಪ್ಪನ್ನು ಮಾಡಿ ದೇವರ ಮನಸ್ಸನ್ನು ನೋಯಿಸಲು ಬಯಸುವುದಿಲ್ಲ.’ ಹೀಗೆ, ಆ ಸಹೋದರನು ನೈತಿಕವಾಗಿ ಶುದ್ಧನಾಗಿ ಉಳಿಯಲೇಬೇಕೆಂಬ ನಿರ್ಧಾರ ಮಾಡುತ್ತಾನೆ.
6 ಇನ್ನೊಂದು ಸನ್ನಿವೇಶ ಹೀಗಿದೆ. ಒಬ್ಬ ಸಹೋದರಿ ಯೋವೇಲ ಪುಸ್ತಕವನ್ನು ಓದುತ್ತಿದ್ದಾರೆ. ಅವರು 2ನೇ ಅಧ್ಯಾಯದ 13ನೇ ವಚನಕ್ಕೆ ಬರುತ್ತಾರೆ. (ಯೋವೇಲ 2:13 ಓದಿ.) ಆ ವಚನವನ್ನು ತಗ್ಗುದನಿಯಲ್ಲಿ ಓದಿದ ನಂತರ ಯೆಹೋವನನ್ನು ತಾನು ಹೇಗೆ ಅನುಕರಿಸಬೇಕೆಂದು ಆಲೋಚಿಸುತ್ತಾರೆ: ಯೆಹೋವನು ‘ದಯೆಯೂ ಕನಿಕರವೂ ದೀರ್ಘಶಾಂತಿಯೂ ಮಹಾಕೃಪೆಯೂ ಉಳ್ಳವನು.’ ಹಾಗಾಗಿ ಇನ್ನುಮುಂದೆ ಆಕೆ ತನ್ನ ಪತಿಯೊಂದಿಗೆ ಹಾಗೂ ಇತರರೊಂದಿಗೆ ವ್ಯಂಗ್ಯವಾಗಿ ಮತ್ತು ಸಿಟ್ಟಿನಿಂದ ಮಾತನಾಡದೆ ದಯೆ, ಪ್ರೀತಿಯಿಂದ ಮಾತನಾಡಬೇಕೆಂದು ನಿರ್ಧರಿಸುತ್ತಾಳೆ.
7 ಮತ್ತೊಂದು ಸನ್ನಿವೇಶ ನೋಡೋಣ. ಒಬ್ಬ ಸಹೋದರನು ಕೆಲಸ ಕಳೆದುಕೊಂಡಿದ್ದಾನೆ. ತನ್ನ ಹೆಂಡತಿ, ಮಕ್ಕಳನ್ನು ನೋಡಿಕೊಳ್ಳುವುದು ಹೇಗೆಂಬುದು ಅವನ ಚಿಂತೆ. ಅವನು ನಹೂಮ 1:7ನ್ನು ತಗ್ಗುದನಿಯಲ್ಲಿ ಓದುತ್ತಾನೆ. ಅಲ್ಲಿ ಯೆಹೋವನು “ತನ್ನ ಮರೆಹೊಕ್ಕವರನ್ನು ಬಲ್ಲನು,” ತನ್ನ ಜನರಿಗೆ “ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ” ಎಂದು ಓದಿದಾಗ ಆ ಸಹೋದರನಿಗೆ ತುಂಬ ಉಪಶಮನ ಸಿಗುತ್ತದೆ. ತನ್ನ ಕುರಿತು ಯೆಹೋವನು ಎಷ್ಟು ಕಾಳಜಿವಹಿಸುತ್ತಾನೆ ಎಂದು ಗ್ರಹಿಸಿ ತನ್ನ ಪರಿಸ್ಥಿತಿಯ ಕುರಿತು ಅತಿಯಾಗಿ ಚಿಂತಿಸುವುದನ್ನು ಬಿಟ್ಟುಬಿಡುತ್ತಾನೆ. ನಂತರ ಅವನು 15ನೇ ವಚನವನ್ನು ತಗ್ಗುದನಿಯಲ್ಲಿ ಓದುತ್ತಾನೆ. (ನಹೂಮ 1:15 ಓದಿ.) ಕಷ್ಟದ ಸಮಯದಲ್ಲೂ ತಾನು ಸಾರುವ ಕೆಲಸವನ್ನು ಬೆಂಬಲಿಸುವಲ್ಲಿ ಯೆಹೋವನು ತನ್ನ ಆಶ್ರಯದುರ್ಗವಾಗಿದ್ದಾನೆ ಎಂದು ತೋರಿಸಿಕೊಟ್ಟಂತಾಗುತ್ತದೆ ಎಂದು ಅವನಿಗೆ ಅರ್ಥವಾಗುವುದು. ಆದ್ದರಿಂದ ಕೆಲಸ ಹುಡುಕುವುದರ ಜೊತೆಗೆ ಅವನು ವಾರಮಧ್ಯದ ಸೇವೆಗೂ ಕ್ರಮವಾಗಿ ಹೋಗಬೇಕೆಂದು ನಿರ್ಧರಿಸುತ್ತಾನೆ.
8. ಬೈಬಲ್ ಓದುವಿಕೆಯಲ್ಲಿ ನೀವು ಕಂಡುಕೊಂಡ ಅಮೂಲ್ಯ ವಜ್ರದಂತಿರುವ ವಿಷಯವನ್ನು ಸಂಕ್ಷಿಪ್ತವಾಗಿ ಹೇಳಿ.
8 ಇಲ್ಲಿವರೆಗೆ ನಾವು ನೋಡಿದ ವಚನಗಳೆಲ್ಲ ಬೈಬಲಿನ ಹೋಶೇಯ, ಯೋವೇಲ, ನಹೂಮ ಪುಸ್ತಕಗಳಿಂದ. ಈ ಪುಸ್ತಕಗಳನ್ನು ಅರ್ಥಮಾಡಿಕೊಳ್ಳಲು ಕಷ್ಟ ಎಂದು ಕೆಲವರು ನೆನಸುತ್ತಾರೆ. ಆದರೆ ಪ್ರಯೋಜನ ಪಡೆದುಕೊಳ್ಳುವ ಅಪೇಕ್ಷೆಯೊಂದಿಗೆ ಈ ಪುಸ್ತಕಗಳನ್ನು ಓದಲು ಆರಂಭಿಸಿದರೆ ಇನ್ನೂ ಓದುತ್ತಾ ಇರಬೇಕೆನಿಸುತ್ತದೆ. ಆ ವಚನಗಳನ್ನು ತಗ್ಗುದನಿಯಲ್ಲಿ ಓದುತ್ತಾ ಹೋದಂತೆ ವಿವೇಕ ಹಾಗೂ ಸಾಂತ್ವನದ ಭಂಡಾರವೇ ನಿಮಗೆ ಸಿಗುತ್ತದೆ! ಬೈಬಲಿನ ಇತರ ಪುಸ್ತಕಗಳ ಕುರಿತೇನು? ಇಡೀ ಬೈಬಲ್ ಅಸಂಖ್ಯಾತ ವಜ್ರಗಳು ಹುದುಗಿರುವ ಗಣಿಯಂತಿದೆ. ಆ ವಜ್ರಗಳು ಸಿಗಬೇಕಾದರೆ ಚೆನ್ನಾಗಿ ಅಗೆಯಬೇಕು. ದೇವರ ಮಾರ್ಗದರ್ಶನೆ ಹಾಗೂ ಆಶ್ವಾಸನೆಯ ಮಾತುಗಳು ಅಮೂಲ್ಯ ಹರಳುಗಳಂತಿವೆ. ಅವುಗಳನ್ನು ಹುಡುಕಿ ಕಂಡುಕೊಳ್ಳುವ ಉದ್ದೇಶದೊಂದಿಗೆ ಬೈಬಲನ್ನು ಓದಿ.
ತಿಳಿವಳಿಕೆ ಹೆಚ್ಚಿಸಿಕೊಳ್ಳಿ
9. ನಾವು ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಏನು ಮಾಡಬೇಕು?
9 ನಾವು ಪ್ರತಿದಿನ ಬೈಬಲನ್ನು ಓದುವುದು ಎಷ್ಟು ಮುಖ್ಯವೋ ಓದಿದ್ದನ್ನು ಅರ್ಥಮಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಆದ್ದರಿಂದ ಯಾವುದರ ಕುರಿತು ಓದುತ್ತೇವೋ ಆ ಜನರ, ಸ್ಥಳಗಳ, ಘಟನೆಗಳ ಹಿನ್ನೆಲೆ ಮಾಹಿತಿಯನ್ನು ಚೆನ್ನಾಗಿ ತಿಳಿದುಕೊಳ್ಳಿ. ಇದಕ್ಕಾಗಿ ಯೆಹೋವನ ಸಂಘಟನೆ ಕೊಟ್ಟಿರುವ ಪ್ರಕಾಶನಗಳನ್ನು ತಿರುವಿಹಾಕಿ ಸಂಶೋಧನೆ ಮಾಡಿ. ಬೈಬಲಿನಲ್ಲಿ ಹೇಳಿರುವ ಯಾವುದಾದರೂ ವಿಷಯ ನಿಮಗೆ ವೈಯಕ್ತಿಕವಾಗಿ ಹೇಗೆ ಅನ್ವಯಿಸುತ್ತದೆ ಎಂದು ಅರ್ಥವಾಗದಿದ್ದರೆ ನಿಮ್ಮ ಸಭೆಯ ಒಬ್ಬ ಹಿರಿಯರನ್ನೋ ಪ್ರೌಢ ಕ್ರೈಸ್ತರನ್ನೋ ಕೇಳಿ ತಿಳಿದುಕೊಳ್ಳಿ. ಹೀಗೆ ನಿಮ್ಮ ತಿಳಿವಳಿಕೆ ಹೆಚ್ಚಾಗುತ್ತದೆ. ಇದು ಎಷ್ಟು ಪ್ರಾಮುಖ್ಯ ಎಂದು ಅರ್ಥಮಾಡಿಕೊಳ್ಳಲು ಒಂದನೇ ಶತಮಾನದ ಒಬ್ಬ ಕ್ರೈಸ್ತನ ಕುರಿತು ನೋಡೋಣ. ಅವನು ಶಾಸ್ತ್ರವಚನಗಳ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದನು. ಅವನ ಹೆಸರು ಅಪೊಲ್ಲೋಸ.
10, 11. (1) ಸುವಾರ್ತೆ ಸಾರುವುದರಲ್ಲಿ ಪ್ರಗತಿ ಮಾಡಲು ಅಪೊಲ್ಲೋಸನಿಗೆ ಹೇಗೆ ನೆರವು ಸಿಕ್ಕಿತು? (2) ಅಪೊಲ್ಲೋಸನಿಂದ ನಮಗೆ ಯಾವ ಪಾಠವಿದೆ? (“ನಿಮ್ಮ ಬೈಬಲ್ ತಿಳಿವಳಿಕೆ ಹೇಗಿದೆ?” ಎಂಬ ಚೌಕ ನೋಡಿ.)
10 ಅಪೊಲ್ಲೋಸನು ಯೆಹೂದಿ ಕ್ರೈಸ್ತನಾಗಿದ್ದನು. ಅವನ ಕುರಿತು ಅಪೊಸ್ತಲರ ಕಾರ್ಯಗಳು ಪುಸ್ತಕದಲ್ಲಿ ಹೇಳಲಾಗಿದೆ. ‘ಪವಿತ್ರಾತ್ಮದಿಂದ ಪ್ರಜ್ವಲಿತನಾಗಿದ್ದ’ ಅವನು “ಶಾಸ್ತ್ರಗ್ರಂಥದಲ್ಲಿ ಪ್ರವೀಣನಾಗಿದ್ದನು.” ಅವನು “ಯೇಸುವಿನ ಕುರಿತಾದ ವಿಷಯಗಳನ್ನು ಸರಿಯಾಗಿ ತಿಳಿಸುತ್ತಾ ಬೋಧಿಸುತ್ತಾ ಇದ್ದನು; ಆದರೆ ಅವನಿಗೆ ಯೋಹಾನನು ಮಾಡಿಸುತ್ತಿದ್ದ ದೀಕ್ಷಾಸ್ನಾನದ ಪರಿಚಯ ಮಾತ್ರ ಇತ್ತು.” ಅಂದರೆ ಅಪೊಲ್ಲೋಸನು ತನಗೆ ಅರಿವಿಲ್ಲದೆ ದೀಕ್ಷಾಸ್ನಾನದ ಕುರಿತು ಹಳೆಯ ತಿಳವಳಿಕೆಯನ್ನೇ ಜನರಿಗೆ ಬೋಧಿಸುತ್ತಿದ್ದನು. ಅಪೊಲ್ಲೋಸನು ಎಫೆಸದಲ್ಲಿ ಹೀಗೆ ಬೋಧಿಸುತ್ತಾ ಇದ್ದದ್ದನ್ನು ನೋಡಿದ ಒಂದು ಕ್ರೈಸ್ತ ದಂಪತಿ ಅವನಿಗೆ ಸಹಾಯ ಮಾಡಲು ಮುಂದೆ ಬಂದರು. ಅವರ ಹೆಸರು ಅಕ್ವಿಲ ಮತ್ತು ಪ್ರಿಸ್ಕಿಲ್ಲ. ಅವರು “ದೇವರ ಮಾರ್ಗವನ್ನು ಅವನಿಗೆ ಇನ್ನೂ ಸರಿಯಾದ ರೀತಿಯಲ್ಲಿ ವಿವರಿಸಿದರು.” (ಅ. ಕಾ. 18:24-26) ಇದರಿಂದ ಅಪೊಲ್ಲೋಸನಿಗೆ ಯಾವ ಪ್ರಯೋಜನವಾಯಿತು?
11 ಎಫೆಸದಲ್ಲಿ ಸುವಾರ್ತೆ ಸಾರಿದ ನಂತರ ಅಪೊಲ್ಲೋಸನು ಅಖಾಯಕ್ಕೆ ಹೋದನು. “ಅವನು ಅಲ್ಲಿಗೆ ತಲಪಿದ ಬಳಿಕ, ದೇವರ ಅಪಾತ್ರ ದಯೆಯಿಂದಾಗಿ ನಂಬಿಕೆಯಿಟ್ಟಿದ್ದವರಿಗೆ ಬಹಳವಾಗಿ ಸಹಾಯಮಾಡಿದನು; ಮತ್ತು ಯೇಸುವೇ ಕ್ರಿಸ್ತನೆಂದು ಶಾಸ್ತ್ರಗ್ರಂಥದಿಂದ ತೋರಿಸಿಕೊಡುತ್ತಾ ಯೆಹೂದ್ಯರು ಮಾಡುತ್ತಿರುವುದು ತಪ್ಪೆಂದು ಎಲ್ಲರ ಮುಂದೆ ಬಲವಾದ ಮಾತುಗಳಲ್ಲಿ ಅವನು ಸಂಪೂರ್ಣವಾಗಿ ರುಜುಪಡಿಸಿದನು.” (ಅ. ಕಾ. 18:27, 28) ಈಗ ಅವನಿಗೆ ಕ್ರೈಸ್ತ ದೀಕ್ಷಾಸ್ನಾನದ ಕುರಿತು ಸರಿಯಾದ ತಿಳಿವಳಿಕೆಯಿತ್ತು. ಹಾಗಾಗಿ ಅದನ್ನು ನಿಷ್ಕೃಷ್ಟವಾಗಿ ಬೋಧಿಸಲು ಶಕ್ತನಾದನು. ಮತ್ತು ಹೊಸದಾಗಿ ಸತ್ಯ ಕಲಿತವರಿಗೆ ಪ್ರಗತಿಮಾಡಲು “ಬಹಳವಾಗಿ ಸಹಾಯಮಾಡಿದನು.” ಈ ವೃತ್ತಾಂತದಿಂದ ನಮಗೆ ಯಾವ ಪಾಠವಿದೆ? ಅಪೊಲ್ಲೋಸನಂತೆ ನಾವು ಸಹ ಬೈಬಲಿನ ಸರಿಯಾದ ತಿಳಿವಳಿಕೆಯನ್ನು ಪಡೆಯಲು ಶ್ರಮಪಡಬೇಕು. ಮತ್ತು ಬೋಧಿಸುವ ವಿಧದಲ್ಲಿ ಎಲ್ಲಿ ಪ್ರಗತಿ ಮಾಡಬೇಕೆಂದು ಅನುಭವಸ್ಥ ಕ್ರೈಸ್ತರು ಸಲಹೆ ಕೊಡುವಾಗ ಅದನ್ನು ದೀನತೆ ಹಾಗೂ ಕೃತಜ್ಞತೆಯಿಂದ ಸ್ವೀಕರಿಸಬೇಕು. ಹಾಗೆ ಮಾಡುವಲ್ಲಿ ನಾವು ಉತ್ತಮ ಬೋಧಕರಾಗುವೆವು.
ನಿಮ್ಮ ಬೈಬಲ್ ಜ್ಞಾನ ಇತರರಿಗೆ ನೆರವಾಗಲಿ
12, 13. ಬೈಬಲನ್ನು ಕೌಶಲದಿಂದ ಉಪಯೋಗಿಸಿ ಬೈಬಲ್ ವಿದ್ಯಾರ್ಥಿಗಳಿಗೆ ಹೇಗೆ ಸಹಾಯಮಾಡಬಹುದು ಎನ್ನುವುದಕ್ಕೆ ಉದಾಹರಣೆ ಕೊಡಿ.
12 ಅಕ್ವಿಲ, ಪ್ರಿಸ್ಕಿಲ್ಲ ಹಾಗೂ ಅಪೊಲ್ಲೋಸನಂತೆ ನಾವು ಸಹ ಇತರರಿಗೆ ಸಹಾಯಮಾಡಬಲ್ಲೆವು. ನೀವು ನೀಡಿದ ಉತ್ತೇಜನದಿಂದಾಗಿ ಒಬ್ಬ ಬೈಬಲ್ ವಿದ್ಯಾರ್ಥಿಯು ತಡೆಯನ್ನು ಜಯಿಸಿ ಆಧ್ಯಾತ್ಮಿಕ ಪ್ರಗತಿ ಮಾಡಿದಾಗ ನಿಮಗೆ ಹೇಗನಿಸುತ್ತದೆ? ಅಥವಾ ನೀವು ಒಬ್ಬ ಹಿರಿಯರಾಗಿದ್ದು, ಕಷ್ಟದ ಪರಿಸ್ಥಿತಿಯಲ್ಲಿರುವ ಒಬ್ಬರಿಗೆ ಸಲಹೆ ನೀಡಿದ್ದೀರಿ. ಅವರು ಅದರಿಂದ ಪ್ರಯೋಜನ ಪಡೆದು ಧನ್ಯವಾದ ಹೇಳುವಾಗ ನಿಮಗೆ ಸಂತೋಷವಾಗುವುದಿಲ್ಲವೇ? ಹೌದು, ಬೇರೆಯವರು ಪ್ರಗತಿಮಾಡಲು ಬೈಬಲಿನಿಂದ ಸಹಾಯ ಮಾಡುವಾಗ ನಮಗೆ ತೃಪ್ತಿ, ಆನಂದ ಸಿಗುತ್ತದೆ.a ನಾವಿದನ್ನು ಹೇಗೆ ಮಾಡಬಹುದು ಎಂದು ಈಗ ನೋಡೋಣ.
13 ಎಲೀಯನ ಸಮಯದ ಇಸ್ರಾಯೇಲ್ಯರು ಎರಡು ಮನಸ್ಸುಳ್ಳವರಾಗಿದ್ದರು. ಯೆಹೋವನನ್ನು ಆರಾಧಿಸಬೇಕೋ ಬಾಳನನ್ನೋ ಎಂಬ ವಿಷಯದಲ್ಲಿ ಅವರು ನಿರ್ಣಯ ಮಾಡಬೇಕಿತ್ತು. ಇಂದು ಸಹ ಕೆಲವು ಬೈಬಲ್ ವಿದ್ಯಾರ್ಥಿಗಳಲ್ಲಿ ಇಂಥ ಅನಿಶ್ಚಿತ ಮನಸ್ಸಿರುತ್ತದೆ. ಹಾಗಾಗಿ ಅವರು ಸತ್ಯಾರಾಧನೆಗಾಗಿ ಹೆಜ್ಜೆ ತಕ್ಕೊಳ್ಳಲು ಮುಂದೆ ಬಂದಿರುವುದಿಲ್ಲ. ಇಂಥವರಿಗೆ ನಾವು, ಎಲೀಯನು ಇಸ್ರಾಯೇಲ್ಯರಿಗೆ ಕೊಟ್ಟ ಸಲಹೆಯನ್ನು ಉಪಯೋಗಿಸಿ ಸಹಾಯಮಾಡಬಹುದು. (1 ಅರಸುಗಳು 18:21 ಓದಿ.) ಇನ್ನೊಂದು ಸನ್ನಿವೇಶ ಗಮನಿಸಿ: ಸ್ನೇಹಿತರು, ಕುಟುಂಬದವರು ಹೇಗೆ ಪ್ರತಿಕ್ರಿಯಿಸುತ್ತಾರೋ ಎಂದು ಬೈಬಲ್ ವಿದ್ಯಾರ್ಥಿಯೊಬ್ಬನು ಭಯಪಡುತ್ತಿದ್ದಾನೆ. ಆಗ ನಾವು ಯೆಶಾಯ 51:12, 13 (ಓದಿ) ಉಪಯೋಗಿಸಿ ಯೆಹೋವನನ್ನು ಆರಾಧಿಸುವ ಅವನ ನಿರ್ಧಾರವನ್ನು ಇನ್ನೂ ಬಲಗೊಳಿಸಬಹುದು.
14. ಬೇರೆಯವರಿಗೆ ಸಹಾಯಮಾಡಬೇಕಾದಾಗ ತಕ್ಕ ವಚನಗಳನ್ನು ನೆನಪಿಸಿಕೊಳ್ಳಲು ಯಾವುದು ನೆರವಾಗುತ್ತದೆ?
14 ನಮ್ಮನ್ನು ಉತ್ತೇಜಿಸುವ, ತಿದ್ದಿ ಸರಿಪಡಿಸುವ, ಬಲತುಂಬುವ ಅನೇಕ ವಚನಗಳು ಬೈಬಲಿನಲ್ಲಿವೆ. ಆದರೆ ‘ನನಗೆ ಬೇಕಾಗುವ ವಚನಗಳು ಎಲ್ಲಿವೆ ಅಂತ ಹೇಗೆ ಗೊತ್ತಾಗುತ್ತದೆ?’ ಎಂದು ನೀವು ಕೇಳಬಹುದು. ಅದಕ್ಕಾಗಿ ನೀವು ಬೈಬಲನ್ನು ಪ್ರತಿದಿನ ಓದಬೇಕು, ಓದಿದ್ದನ್ನು ಧ್ಯಾನಿಸಬೇಕು. ಆಗ ಅಂಥ ಅನೇಕ ವಚನಗಳ ಒಳ್ಳೆ ಪರಿಚಯ ನಿಮಗಾಗುವುದು. ಮತ್ತು ಅಗತ್ಯವಿರುವಾಗ ಪವಿತ್ರಾತ್ಮ ಶಕ್ತಿ ಆ ವಚನಗಳನ್ನು ನಿಮ್ಮ ನೆನಪಿಗೆ ತರುವುದು.—ಮಾರ್ಕ 13:11; ಯೋಹಾನ 14:26 ಓದಿ.b
15. ದೇವರ ವಾಕ್ಯವನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಯಾವುದು ಸಹಾಯಮಾಡುತ್ತದೆ?
15 ರಾಜ ಸೊಲೊಮೋನನಂತೆ ದೇವಪ್ರಭುತ್ವಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ವಿವೇಕವನ್ನು ಕೊಡುವಂತೆ ಯೆಹೋವನಲ್ಲಿ ಪ್ರಾರ್ಥಿಸಿ. (2 ಪೂರ್ವ. 1:7-10) ಪ್ರಾಚೀನ ಕಾಲದ ಪ್ರವಾದಿಗಳಂತೆ ದೇವರ ವಾಕ್ಯದಲ್ಲಿ “ಶ್ರದ್ಧಾಪೂರ್ವಕವಾಗಿ . . . ಜಾಗರೂಕತೆಯಿಂದ ಪರಿಶೋಧನೆಮಾಡಿ.” (1 ಪೇತ್ರ 1:10-12) ಆಗ ದೇವರ ಚಿತ್ತದ ನಿಷ್ಕೃಷ್ಟ ಜ್ಞಾನ ಪಡೆಯುವಿರಿ. ಅಪೊಸ್ತಲ ಪೌಲನು ತಿಮೊಥೆಯನಿಗೆ “ನಂಬಿಕೆಯ ಮತ್ತು ಉತ್ತಮವಾದ ಬೋಧನೆಯ ವಾಕ್ಯಗಳಿಂದ” ಪೋಷಿಸಲ್ಪಡುವಂತೆ ಪ್ರೋತ್ಸಾಹಿಸಿದನು. (1 ತಿಮೊ. 4:6) ನಾವು ಸಹ ಹಾಗೆ ಮಾಡುವುದಾದರೆ ಬೇರೆಯವರಿಗೆ ಸಹಾಯಮಾಡಲು ನಮ್ಮಿಂದಾಗುತ್ತದೆ ಮಾತ್ರವಲ್ಲ ನಮ್ಮ ನಂಬಿಕೆಯೂ ಸುದೃಢವಾಗಿರುತ್ತದೆ.
ಬೈಬಲ್ ಓದುವುದರಿಂದ ಸಿಗುವ ಸಂರಕ್ಷಣೆ
16. (1) “ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದ” ಕಾರಣ ಬೆರೋಯದವರಿಗೆ ಯಾವ ಪ್ರಯೋಜನ ಸಿಕ್ಕಿತು? (2) ಬೈಬಲನ್ನು ನಾವು ದಿನಾಲೂ ಓದುವುದು ಅಷ್ಟು ಮುಖ್ಯನಾ?
16 ಮಕೆದೋನ್ಯದ ಬೆರೋಯ ಪಟ್ಟಣದಲ್ಲಿದ್ದ ಯೆಹೂದ್ಯರು “ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದರು.” ಪೌಲನು ಅವರಿಗೆ ಸುವಾರ್ತೆ ತಿಳಿಸಿದಾಗ ತಾವು ಶಾಸ್ತ್ರಗ್ರಂಥದಿಂದ ಓದಿದ ವಿಷಯಗಳೊಂದಿಗೆ ಅವರದನ್ನು ಹೋಲಿಸಿ ನೋಡಿದರು. ಫಲಿತಾಂಶ? ಅವನು ಕಲಿಸುತ್ತಿದ್ದ ವಿಷಯ ಸತ್ಯವಾಗಿದೆ ಎಂದು ಅನೇಕರು ಮನಗಂಡರು ಮತ್ತು “ವಿಶ್ವಾಸಿಗಳಾದರು.” (ಅ. ಕಾ. 17:10-12) ಇದರಿಂದ ನಮಗೆ ತಿಳಿಯುತ್ತದೇನೆಂದರೆ ನಾವು ಪ್ರತಿದಿನ ಬೈಬಲ್ ಓದುವಾಗ ಅದು ಯೆಹೋವನ ಮೇಲೆ ಬಲವಾದ ನಂಬಿಕೆಯನ್ನು ಕಟ್ಟುತ್ತದೆ. ಇಂಥ ನಂಬಿಕೆ, ಅಂದರೆ “ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆ” ಇದ್ದರೆ ಮಾತ್ರ ನಾವು ನಾಶನವನ್ನು ಪಾರಾಗಿ ದೇವರು ತರಲಿರುವ ನೂತನ ಲೋಕದಲ್ಲಿ ಬಾಳಲು ಸಾಧ್ಯ.—ಇಬ್ರಿ. 11:1.
17, 18. (1) ಬಲವಾದ ನಂಬಿಕೆ ಮತ್ತು ಪ್ರೀತಿ ಹೇಗೆ ಕ್ರೈಸ್ತರ ಸಾಂಕೇತಿಕ ಹೃದಯವನ್ನು ಕಾಪಾಡುತ್ತದೆ? (2) ನಿರೀಕ್ಷೆ ನಮ್ಮನ್ನು ಹೇಗೆ ಅಪಾಯದಿಂದ ತಪ್ಪಿಸುತ್ತದೆ?
17 “ಹಗಲಿಗೆ ಸೇರಿದವರಾದ ನಾವು ಸ್ವಸ್ಥಚಿತ್ತರಾಗಿದ್ದು ನಂಬಿಕೆ ಮತ್ತು ಪ್ರೀತಿಯ ಎದೆಕವಚವನ್ನು ಧರಿಸಿಕೊಂಡಿರೋಣ ಹಾಗೂ ರಕ್ಷಣೆಯ ನಿರೀಕ್ಷೆಯನ್ನು ಶಿರಸ್ತ್ರಾಣವಾಗಿ ಹಾಕಿಕೊಂಡಿರೋಣ” ಎಂದು ಪೌಲ ಬರೆದದ್ದರ ಹಿಂದೆ ಬಲವಾದ ಕಾರಣವಿದೆ. (1 ಥೆಸ. 5:8) ಒಬ್ಬ ಸೈನಿಕನು ತನ್ನ ಹೃದಯಕ್ಕೆ ವೈರಿಯು ಹಾನಿಮಾಡದಂತೆ ಜಾಗ್ರತೆವಹಿಸಬೇಕಿತ್ತು. ಅದೇರೀತಿ ಒಬ್ಬ ಕ್ರೈಸ್ತನು ತನ್ನ ಸಾಂಕೇತಿಕ ಹೃದಯವನ್ನು ಪಾಪದ ಪ್ರಭಾವದಿಂದ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಅವನು ಆಧ್ಯಾತ್ಮಿಕ ಎದೆಕವಚ ಧರಿಸಬೇಕು. ಅದನ್ನು ಧರಿಸುವುದಾದರೂ ಹೇಗೆ? ದೇವರ ವಾಗ್ದಾನಗಳಲ್ಲಿ ಪೂರ್ಣ ಭರವಸೆಯಿಟ್ಟು ದೇವರ ಮೇಲೆ, ಜೊತೆ ಮಾನವರ ಮೇಲೆ ಪ್ರೀತಿ ಬೆಳೆಸಿಕೊಂಡರೆ ಅದೇ ಬಲವಾದ ಎದೆಕವಚ ಧರಿಸಿದಂತೆ. ಆಗ ನಾವು ದೇವರು ಮೆಚ್ಚದ ಕೆಲಸಗಳಿಗೆ ಕೈಹಾಕಲ್ಲ.
18 ಪೌಲನು “ರಕ್ಷಣೆಯ ನಿರೀಕ್ಷೆಯನ್ನು” ಶಿರಸ್ತ್ರಾಣಕ್ಕೆ ಹೋಲಿಸಿ ಮಾತಾಡಿದನು. ಆ ಕಾಲದ ಒಬ್ಬ ಸೈನಿಕನು ತನ್ನ ತಲೆಗೆ ಶಿರಸ್ತ್ರಾಣವನ್ನು ಹಾಕದೆ ಇದ್ದಲ್ಲಿ ಯುದ್ಧರಂಗದಲ್ಲಿ ಸುಲಭವಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿತ್ತು. ಅವನು ಶಿರಸ್ತ್ರಾಣ ಧರಿಸಿರುವಲ್ಲಿ ತಲೆಗೆ ಬೀಳುವ ಏಟುಗಳನ್ನು ತಪ್ಪಿಸಲು ಸಾಧ್ಯವಾಗುತ್ತಿತ್ತು. ಅದೇರೀತಿ ನಾವು ಬೈಬಲನ್ನು ಓದಿ ಅಧ್ಯಯನ ಮಾಡುತ್ತಾ ಹೋದಂತೆ, ಯೆಹೋವನು ನಮ್ಮನ್ನು ಕಾಪಾಡಬಲ್ಲನು ಎಂಬ ನಿರೀಕ್ಷೆಯನ್ನು ಬೆಳೆಸಿಕೊಳ್ಳುತ್ತೇವೆ. ಇಂಥ ನಿರೀಕ್ಷೆ ನಮ್ಮಲ್ಲಿರುವಾಗ ನಾವು ಧರ್ಮಭ್ರಷ್ಟರಿಂದ ದೂರವಿರುತ್ತೇವೆ. ಅವರ ಕೊಳಕು ಅಥವಾ “ಪೊಳ್ಳು ಮಾತುಗಳಿಗೆ” ಕಿವಿಗೊಡುವುದಿಲ್ಲ. (2 ತಿಮೊ. 2:16-19) ಮಾತ್ರವಲ್ಲ ಕೆಟ್ಟದ್ದನ್ನು ಮಾಡುವಂತೆ ಯಾರಾದರೂ ನಮ್ಮನ್ನು ಒತ್ತಾಯಿಸುವಲ್ಲಿ ಖಡಾಖಂಡಿತವಾಗಿ ನಿರಾಕರಿಸಲು ಈ ನಿರೀಕ್ಷೆ ನಮಗೆ ನೆರವಾಗುತ್ತದೆ.
ಬೈಬಲ್ ಓದುವುದರಿಂದ ಈಗಲೂ ಸಿಗುವ ಪ್ರಯೋಜನ
19, 20. (1) ದೇವರ ವಾಕ್ಯಕ್ಕೆ ನಾವೇಕೆ ಹೆಚ್ಚು ಮಾನ್ಯತೆ ಕೊಡಬೇಕು? (2) ನಾವು ದೇವರ ವಾಕ್ಯವನ್ನು ಗೌರವಿಸುತ್ತೇವೆಂದು ಹೇಗೆ ತೋರಿಸಬಹುದು? (‘ನನಗೆ ಅಗತ್ಯವಿರೋದನ್ನೇ ಯೆಹೋವನು ಕೊಡುತ್ತಾನೆ’ ಎಂಬ ಚೌಕ ನೋಡಿ.)
19 ಅಂತ್ಯ ಎಷ್ಟು ಹತ್ತಿರತ್ತಿರ ಆಗುತ್ತೋ ನಾವು ಅಷ್ಟೇ ಹೆಚ್ಚು ಯೆಹೋವನ ವಾಕ್ಯದ ಮೇಲೆ ಆತುಕೊಳ್ಳಬೇಕು. ಅದರಲ್ಲಿರುವ ಸಲಹೆಗಳನ್ನು ಅನ್ವಯಿಸುವಾಗ ಕೆಟ್ಟ ಹವ್ಯಾಸಗಳಿಂದ, ಪಾಪಕೃತ್ಯಗಳನ್ನು ಮಾಡುವ ಬಯಕೆಯಿಂದ ದೂರ ಸರಿಯಲು ಸಾಧ್ಯವಾಗುತ್ತದೆ. ಅದು ನೀಡುವ ಉತ್ತೇಜನ ಹಾಗೂ ಸಾಂತ್ವನವು ಸೈತಾನನಿಂದ ಮತ್ತು ಅವನ ಲೋಕದಿಂದ ಬರುವ ಸವಾಲುಗಳನ್ನು ಜಯಿಸಲು ನಮಗೆ ಸಹಾಯ ಮಾಡುತ್ತದೆ. ಅದು ಕೊಡುವ ಮಾರ್ಗದರ್ಶನ ನಾವು ಜೀವದ ಮಾರ್ಗದಲ್ಲಿ ನಡೆಯುತ್ತಾ ಇರಲು ಸಹಾಯಮಾಡುತ್ತದೆ.
20 “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು” ಎನ್ನುವುದು ದೇವರ ಚಿತ್ತವಾಗಿದೆ. ಈ “ಎಲ್ಲ ರೀತಿಯ” ಜನರಲ್ಲಿ ಯೆಹೋವನ ಸೇವಕರೂ ಸೇರಿದ್ದಾರೆ. ಮತ್ತು ನಾವು ಯಾರಿಗೆ ಸುವಾರ್ತೆ ಸಾರಿ ಸತ್ಯವನ್ನು ಕಲಿಸುತ್ತೇವೋ ಅವರೂ ಸೇರಿದ್ದಾರೆ. ಆದರೆ ಯಾರು ಅಂತ್ಯವನ್ನು ಪಾರಾಗಿ ರಕ್ಷಣೆ ಪಡೆಯಲು ಬಯಸುತ್ತಾರೋ ಅವರು “ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು.” (1 ತಿಮೊ. 2:4) ಹಾಗಾದರೆ ನಾವು ಈ ಕಡೇ ದಿವಸಗಳನ್ನು ಪಾರಾಗಬೇಕಾದರೆ ಬೈಬಲನ್ನು ಓದಿ ಓದಿದ್ದನ್ನು ಅನ್ವಯಿಸಿಕೊಳ್ಳಲೇಬೇಕು. ಹೌದು, ನಾವು ಬೈಬಲನ್ನು ದಿನಾಲೂ ಓದುವುದೇ ತೋರಿಸಿಕೊಡುತ್ತದೆ ಯೆಹೋವನ ಅಮೂಲ್ಯ ಮಾತುಗಳನ್ನು ನಾವೆಷ್ಟು ಗೌರವಿಸುತ್ತೇವೆಂದು.—ಯೋಹಾ. 17:17.
a ಇತರರನ್ನು ಒತ್ತಾಯಿಸಲು ಅಥವಾ ನಿಂದಿಸಲು ನಾವು ಬೈಬಲನ್ನು ಉಪಯೋಗಿಸುವುದಿಲ್ಲ. ಬದಲಿಗೆ ಯೆಹೋವನು ನಮ್ಮ ಜೊತೆ ಹೇಗೆ ತಾಳ್ಮೆ, ದಯೆಯಿಂದ ವ್ಯವಹರಿಸುತ್ತಾನೋ ಹಾಗೆಯೇ ನಾವು ಬೈಬಲ್ ವಿದ್ಯಾರ್ಥಿಯೊಂದಿಗೆ ವ್ಯವಹರಿಸಬೇಕು.—ಕೀರ್ತ. 103:8.
b ನಿಮಗೆ ವಚನದ ಕೆಲವು ಪದಗಳು ನೆನಪಿರಬಹುದು, ಆದರೆ ಅದು ಎಲ್ಲಿದೆ ಎಂದು ತಿಳಿದಿರಲಿಕ್ಕಿಲ್ಲ. ಆಗ ನೀವು ಬೈಬಲಿನ ಕೊನೆಯಲ್ಲಿರುವ ‘ಪದಗಳ ಸೂಚಿ’ಯಲ್ಲಿ ಹುಡುಕಬಹುದು. ಅಥವಾ ಅದರ ಇಂಗ್ಲಿಷ್ ಪದವನ್ನು ಬಳಸಿ ವಾಚ್ಟವರ್ ಲೈಬ್ರರಿಯಲ್ಲಿ ಹುಡುಕಬಹುದು.