ಮುಖಪುಟ ವಿಷಯ | ದೇವರ ಸರ್ಕಾರ: ಯೇಸುವಿಗೆ ಎಷ್ಟು ಪ್ರಾಮುಖ್ಯವಾಗಿತ್ತು?
ದೇವರ ಸರ್ಕಾರ—ಯೇಸುವಿಗೆ ಎಷ್ಟು ಪ್ರಾಮುಖ್ಯವಾಗಿತ್ತು?
ಯೇಸು ಭೂಮಿಯಲ್ಲಿದ್ದಾಗ ಅನೇಕ ವಿಷಯಗಳ ಬಗ್ಗೆ ಮಾತಾಡಿದನು. ಉದಾಹರಣೆಗೆ ಹೇಗೆ ಪ್ರಾರ್ಥನೆ ಮಾಡಬೇಕು, ದೇವರನ್ನ ಮೆಚ್ಚಿಸೋದು ಹೇಗೆ ಮತ್ತು ಖುಷಿಯಾಗಿ ಇರಬೇಕಾದರೆ ಏನು ಮಾಡಬೇಕು ಅಂತೆಲ್ಲಾ ಶಿಷ್ಯರಿಗೆ ಕಲಿಸಿದನು. (ಮತ್ತಾಯ 6:5-13; ಮಾರ್ಕ 12:17; ಲೂಕ 11:28) ಆದ್ರೆ ಯೇಸು ತನಗೆ ತುಂಬ ಇಷ್ಟವಾಗಿದ್ದ ದೇವರ ಆಳ್ವಿಕೆಯ ಬಗ್ಗೆನೇ ಯಾವಾಗಲೂ ಮಾತಾಡುತ್ತಿದ್ದನು.—ಲೂಕ 6:45.
ಯೇಸುವಿನ ಜೀವನದಲ್ಲಿ ತುಂಬ ಪ್ರಾಮುಖ್ಯವಾದ ವಿಷಯ ‘ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ’ ಸಾರೋದೇ ಆಗಿತ್ತು ಅಂತ ಹಿಂದಿನ ಲೇಖನದಲ್ಲಿ ಕಲಿತ್ವಿ. (ಲೂಕ 8:1) ಯೇಸು ಇಡೀ ಇಸ್ರಾಯೇಲಿನಲ್ಲಿ ನೂರಾರು ಕಿಲೋಮೀಟರ್ ನಡೆದುಕೊಂಡು ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಸಾರಿದನು. ಆತನು ಮಾಡಿದ ಸೇವೆ ಬಗ್ಗೆ ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿವೆ. ಈ ಪುಸ್ತಕಗಳಲ್ಲಿ ದೇವರ ಆಳ್ವಿಕೆ ಬಗ್ಗೆ ಸುಮಾರು ನೂರಕ್ಕಿಂತ ಹೆಚ್ಚಿನ ಸಲ ಹೇಳಲಾಗಿದೆ. ಅದರಲ್ಲಿ ಹೆಚ್ಚಿನದ್ದು ಯೇಸುವಿನ ಮಾತುಗಳೇ ಆಗಿವೆ. ಅಷ್ಟೇ ಅಲ್ಲ ಈ ಪುಸ್ತಕಗಳಲ್ಲಿ ಯೇಸು ಹೇಳಿದ ಕೆಲವು ವಿಷಯಗಳು ಮಾತ್ರ ಇರೋದು.—ಯೋಹಾನ 21:25.
ದೇವರ ಆಳ್ವಿಕೆ ಬಗ್ಗೆ ಹೇಳೋದು ಯೇಸುವಿಗೆ ಯಾಕೆ ಪ್ರಾಮುಖ್ಯವಾಗಿತ್ತು? ದೇವರ ಸರಕಾರದಲ್ಲಿ ತಾನೇ ರಾಜನಾಗಿ ಇರ್ತೀನಿ ಅಂತ ಯೇಸುವಿಗೆ ಗೊತ್ತಿತ್ತು. (ಯೆಶಾಯ 9:6; ಲೂಕ 22:28-30) ಆದ್ರೆ ಯೇಸುವಿನ ಗಮನ ತನಗೆ ಸಿಗೋ ಅಧಿಕಾರದ ಮೇಲಾಗಲಿ ಅಥವಾ ಮಹಿಮೆ ಮೇಲಾಗಲಿ ಇರಲಿಲ್ಲ. (ಮತ್ತಾಯ 11:29; ಮಾರ್ಕ 10:17, 18) ಅಷ್ಟೇ ಅಲ್ಲ ತಮ್ಮ ಸ್ವಾರ್ಥಕ್ಕೋಸ್ಕರನೂ ದೇವರ ಆಳ್ವಿಕೆಯ ಬಗ್ಗೆ ಮಾತಾಡಲಿಲ್ಲ. ದೇವರ ಆಳ್ವಿಕೆಯ ಬಗ್ಗೆ ಹೇಳೋದು ಯೇಸುವಿಗೆ ಯಾಕೆ ಪ್ರಾಮುಖ್ಯವಾಗಿತ್ತು ಅಂದ್ರೆ ಅದರಿಂದ ತನ್ನ ತಂದೆಗೆ ಮಹಿಮೆ ಸಿಗುತ್ತಿತ್ತು ಮತ್ತು ಎಲ್ಲಾ ನಂಬಿಗಸ್ತರಿಗೆ ಪ್ರಯೋಜನ ಆಗ್ತಿತ್ತು.
ಯೇಸುವಿನ ತಂದೆಗಾಗಿ ಈ ಆಳ್ವಿಕೆ ಏನು ಮಾಡುತ್ತೆ?
ಯೇಸುವಿಗೆ ಸ್ವರ್ಗದಲ್ಲಿರೋ ಅಪ್ಪ ಅಂದ್ರೆ ತುಂಬ ಪ್ರೀತಿ. (ಜ್ಞಾನೋಕ್ತಿ 8:30; ಯೋಹಾನ 14:31) ಯೆಹೋವನ ಗುಣಗಳಾಗಿರೋ ಪ್ರೀತಿ, ಅನುಕಂಪ, ನ್ಯಾಯ ಇವೆಲ್ಲಾ ಯೇಸು ತುಂಬ ಇಷ್ಟಪಡುತ್ತಾನೆ. (ಧರ್ಮೋಪದೇಶಕಾಂಡ 32:4; ಯೆಶಾಯ 49:15; 1 ಯೋಹಾನ 4:8) ಯೆಹೋವನಲ್ಲಿ ಬರೀ ಒಳ್ಳೇ ಗುಣಗಳೇ ಇದ್ರೂ ಆತನ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಜನರು ಹೇಳುವಾಗ ಯೇಸುವಿಗೆ ತುಂಬ ಬೇಜಾರಾಗುತ್ತೆ. ಉದಾಹರಣೆಗೆ ದೇವರೇ ನಮಗೆ ಕಷ್ಟ ಕೊಡ್ತಿದ್ದಾನೆ ಅಂತ ಜನರು ಹೇಳ್ತಾರೆ. ಹಾಗಾಗಿ ಜನರು ಹೇಳೋ ಸುಳ್ಳನ್ನ ಬಟ್ಟಬಯಲು ಮಾಡೋಕೆ, ತಂದೆಯ ಹೆಸರಿಗೆ ಬಂದಿರೋ ಕಳಂಕವನ್ನ ತೆಗೆದು ಹಾಕೋಕೆ ದೇವರ ಆಳ್ವಿಕೆಯ ಈ ಸಿಹಿಸುದ್ದಿಯನ್ನ ಯೇಸು ಸಾರುತ್ತಿದ್ದಾನೆ. (ಮತ್ತಾಯ 4:23; 6:9, 10) ದೇವರ ಆಳ್ವಿಕೆ ಇದನ್ನೆಲ್ಲಾ ಹೇಗೆ ಮಾಡುತ್ತೆ?
ದೇವರು ತನ್ನ ಆಳ್ವಿಕೆಯ ಮೂಲಕ ನಮಗೆ ಒಳ್ಳೊಳ್ಳೆ ಆಶೀರ್ವಾದ ಕೊಡಲಿದ್ದಾನೆ. “ದೇವರು [ನಂಬಿಗಸ್ತ ಸೇವಕರ] ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ.” ಅವರ ಕಣ್ಣೀರಿಗೆ ಕಾರಣವಾದ ವಿಷಯಗಳನ್ನು ತೆಗೆದು ಹಾಕ್ತಾನೆ. “ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ.” (ಪ್ರಕಟನೆ 21:3, 4) ಈ ಆಳ್ವಿಕೆಯ ಮೂಲಕ ಮನುಷ್ಯರ ಎಲ್ಲ ಸಮಸ್ಯೆಗಳನ್ನ ತೆಗೆದು ಹಾಕ್ತಾನೆ.a
ದೇವರ ಆಳ್ವಿಕೆಯ ಬಗ್ಗೆ ಯೇಸು ಯಾಕೆ ಅಷ್ಟು ಪ್ರೀತಿಯಿಂದ ಹೇಳಿದ ಅಂತ ನಮಗೀಗ ಅರ್ಥ ಆಯ್ತು ಅಲ್ವಾ? ಇದರಿಂದ ತನ್ನ ತಂದೆ ಎಷ್ಟು ಶಕ್ತಿಶಾಲಿ ಮತ್ತು ಕರುಣಾಮಯಿ ಅನ್ನೋದು ಜನರಿಗೆ ಗೊತ್ತಾಗುತ್ತೆ ಅಂತ ಯೇಸು ಅರ್ಥ ಮಾಡಿಕೊಂಡಿದ್ದನು. (ಯಾಕೋಬ 5:11) ಅಷ್ಟೇ ಅಲ್ಲ ದೇವರಿಗೆ ವಿಧೇಯತೆ ತೋರಿಸೋ ಜನರಿಗೆ ದೇವರ ಆಳ್ವಿಕೆಯಿಂದ ಪ್ರಯೋಜನ ಸಿಗುತ್ತೆ ಅಂತನೂ ಆತನಿಗೆ ಗೊತ್ತಿತ್ತು.
ನಂಬಿಗಸ್ತ ಮನುಷ್ಯರಿಗೋಸ್ಕರ ದೇವರ ಆಳ್ವಿಕೆ ಏನು ಮಾಡುತ್ತೆ?
ಭೂಮಿಗೆ ಬರೋದಕ್ಕಿಂತ ಮುಂಚೆ ಎಷ್ಟೋ ವರ್ಷಗಳು ಯೇಸು ತನ್ನ ಅಪ್ಪನ ಜೊತೆ ಇದ್ದನು. ಆಕಾಶ, ಭೂಮಿ, ನಕ್ಷತ್ರಗಳು, ಗ್ಯಾಲಕ್ಸಿಗಳು, ಪ್ರಾಣಿ ಪಕ್ಷಿಗಳನ್ನೆಲ್ಲ ಸೃಷ್ಟಿಮಾಡೋಕೆ ಯೆಹೋವ ದೇವರು ತನ್ನ ಮಗನಾದ ಯೇಸು ಕ್ರಿಸ್ತನನ್ನ ಉಪಯೋಗಿಸಿದನು. (ಕೊಲೊಸ್ಸೆ 1:15, 16) ಆದರೆ ಈ ಎಲ್ಲ ಸೃಷ್ಟಿಗಳಲ್ಲಿ ಯೇಸುವಿಗೆ ‘ಮನುಷ್ಯರಂದ್ರೆ ಪಂಚಪ್ರಾಣ.’—ಜ್ಞಾನೋಕ್ತಿ 8:31.
ಯೇಸುವಿಗೆ ಮನುಷ್ಯರ ಮೇಲೆ ಎಷ್ಟು ಪ್ರೀತಿ ಇತ್ತು ಅಂತ ಆತನು ಮಾಡಿದ ಸೇವೆಯಿಂದಾನೇ ಗೊತ್ತಾಗುತ್ತೆ. ತಾನು ‘ಸಿಹಿಸುದ್ದಿಯನ್ನ’ ಸಾರಲಿಕ್ಕೆ ಬಂದಿದ್ದೀನಿ ಅಂತ ಮೊದಲಿಂದಾನೇ ಹೇಳಿದ್ದಾನೆ. (ಲೂಕ 4:18) ಜನರಿಗೆ ಸಹಾಯ ಮಾಡಬೇಕು ಅಂತ ಯೇಸು ಬಾಯಿಮಾತಲ್ಲಿ ಹೇಳಿದ್ದಷ್ಟೇ ಅಲ್ಲ ಅವರ ಮೇಲೆ ತನಗೆ ಪ್ರೀತಿ ಇದೆ ಅಂತ ಯಾವಾಗಲೂ ಕ್ರಿಯೆಯಲ್ಲಿ ತೋರಿಸುತ್ತಾ ಇದ್ದನು. ಉದಾಹರಣೆಗೆ ಯೇಸು ಭಾಷಣ ಕೊಡೋದನ್ನ ಕೇಳಿಸಿಕೊಳ್ಳೋಕೆ ತುಂಬ ಜನ ಬಂದಿದ್ದರು. “ಅವ್ರನ್ನ ನೋಡಿ ಕನಿಕರಪಟ್ಟು ರೋಗಿಗಳನ್ನ ವಾಸಿಮಾಡಿದನು.” (ಮತ್ತಾಯ 14:14) ಒಮ್ಮೆ ಒಬ್ಬ ಕುಷ್ಠರೋಗಿ ಬಂದು ಯೇಸು ಹತ್ತಿರ ‘ಸ್ವಾಮಿ ನಿಂಗೆ ಇಷ್ಟ ಇದ್ರೆ ನನ್ನನ್ನ ವಾಸಿ ಮಾಡು’ ಅಂತ ಕೇಳಿಕೊಂಡ. ಆಗ ಯೇಸು ಕನಿಕರ, ಪ್ರೀತಿಯಿಂದ “ನಿನ್ನನ್ನ ವಾಸಿಮಾಡೋಕೆ ನಂಗಿಷ್ಟ” ಅಂದನು. ತಕ್ಷಣ ಅವನ ಕುಷ್ಠ ವಾಸಿ ಆಯ್ತು. (ಲೂಕ 5:12, 13) ಲಾಜರ ಸತ್ತಾಗ ಮತ್ತು ಯೇಸುವಿನ ಸ್ನೇಹಿತೆ ಮರಿಯ ಅಳೋದನ್ನ ನೋಡಿದಾಗ “ಯೇಸು ಒಳಗೊಳಗೇ ನೊಂದ್ಕೊಂಡು ದುಃಖಪಟ್ಟನು” ಮತ್ತು “ಕಣ್ಣೀರು ಸುರಿಸಿದನು.” (ಯೋಹಾನ 11:32-36) ನಂತರ ಸತ್ತು ನಾಲ್ಕು ದಿನ ಆಗಿರೋ ಲಾಜರನನ್ನ ಯೇಸು ಮತ್ತೆ ಜೀವಂತ ಎಬ್ಬಿಸಿದನು. ಎಂಥ ಅದ್ಭುತ ಅಲ್ವಾ!—ಯೋಹಾನ 11:38-44.
ಯೇಸು ಮಾಡಿದ ಈ ಅದ್ಭುತಗಳೆಲ್ಲ ಜನರಿಗೆ ತಾತ್ಕಾಲಿಕ ಆಶ್ವಾಸನೆ ಕೊಡ್ತು ಅಂತ ಆತನಿಗೆ ಗೊತ್ತಿತ್ತು. ತಾನು ವಾಸಿ ಮಾಡಿದವರಿಗೆ ಮತ್ತೆ ಕಾಯಿಲೆ ಬರುತ್ತೆ, ತಾನು ಜೀವಂತವಾಗಿ ಎಬ್ಬಿಸಿದವರು ಮತ್ತೆ ಸತ್ತು ಹೋಗುತ್ತಾರೆ ಅನ್ನೋದು ಯೇಸುವಿಗೆ ಗೊತ್ತಿತ್ತು. ಎಲ್ಲ ಸಮಸ್ಯೆಗಳಿಗೂ ದೇವರ ಆಳ್ವಿಕೆಯಿಂದ ಮಾತ್ರ ಶಾಶ್ವತ ಪರಿಹಾರ ಸಿಗುತ್ತೆ ಅನ್ನೋದು ಯೇಸುವಿಗೆ ಗೊತ್ತಿತ್ತು. ಅದಕ್ಕೆ ಯೇಸು ಬರೀ ಅದ್ಭುತಗಳನ್ನ ಮಾಡಿ ಸುಮ್ಮನಿರದೆ ‘ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ’ ಕೂಡ ಜನರಿಗೆ ಸಾರುತ್ತಾನೆ. (ಮತ್ತಾಯ 9:35) ದೇವರ ಆಳ್ವಿಕೆಯಲ್ಲಿ ನಮ್ಮ ಜೀವನ ಹೇಗಿರುತ್ತೆ ಅಂತ ತೋರಿಸಿ ಕೊಡೋಕೆನೇ ಯೇಸು ಅದ್ಭುತಗಳನ್ನ ಮಾಡಿದ್ದು. ಮುಂದೆ ನಮಗೆ ಯಾವ ಆಶೀರ್ವಾದ ಸಿಗಲಿಕ್ಕಿದೆ ಅಂತ ನಾವೀಗ ನೋಡೋಣ.
ಯಾರಿಗೂ ಕಾಯಿಲೆ ಇರಲ್ಲ.
“ಆ ಸಮಯದಲ್ಲಿ ಕುರುಡನಿಗೆ ಕಣ್ಣು ಕಾಣಿಸುತ್ತೆ, ಕಿವುಡನಿಗೆ ಕಿವಿ ಕೇಳಿಸುತ್ತೆ. ಆ ಸಮಯದಲ್ಲಿ ಕುಂಟ ಜಿಂಕೆ ತರ ಜಿಗಿತಾನೆ, ಮೂಕ ಖುಷಿಯಿಂದ ಕೂಗ್ತಾನೆ.” ಅಷ್ಟೇ ಅಲ್ಲ “ದೇಶದಲ್ಲಿ ಒಬ್ಬನೂ “ನನಗೆ ಹುಷಾರಿಲ್ಲ” ಅಂತ ಹೇಳಲ್ಲ.—ಯೆಶಾಯ 33:24; 35:5, 6.
ಯಾರೂ ಸಾಯಲ್ಲ.
“ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.”—ಕೀರ್ತನೆ 37:29.
“ಆತನು ಮರಣವನ್ನ ಶಾಶ್ವತವಾಗಿ ನುಂಗಿಹಾಕ್ತಾನೆ, ವಿಶ್ವದ ರಾಜ ಯೆಹೋವ ಪ್ರತಿಯೊಬ್ಬರ ಕಣ್ಣೀರನ್ನ ಒರಸಿಬಿಡ್ತಾನೆ.”—ಯೆಶಾಯ 25:8.
ಸತ್ತಿರುವವರು ಮತ್ತೆ ಜೀವಂತ ಎದ್ದು ಬರ್ತಾರೆ.
“ಸಮಾಧಿಗಳಲ್ಲಿ ಇರೋರೆಲ್ಲ ಆತನ ಸ್ವರ ಕೇಳಿ ಜೀವಂತ ಎದ್ದು ಬರ್ತಾರೆ.”—ಯೋಹಾನ 5:28, 29.
ಜನರು “ಮತ್ತೆ ಬದುಕೋ ತರ ದೇವರು ಮಾಡ್ತಾನೆ.”—ಅಪೊಸ್ತಲರ ಕಾರ್ಯ 24:15.
ಎಲ್ಲರಿಗೂ ಮನೆ ಇರುತ್ತೆ, ಎಲ್ಲರಿಗೂ ಕೆಲಸ ಇರುತ್ತೆ.
“ಅವರು ಮನೆ ಕಟ್ಕೊಂಡು ವಾಸ ಮಾಡ್ತಾರೆ, ದ್ರಾಕ್ಷಿತೋಟ ಮಾಡಿ ಅದ್ರ ಫಲ ತಿಂತಾರೆ. ಅವರು ಕಟ್ಟಿದ ಮನೆಯಲ್ಲಿ ಬೇರೆಯವರು ಬಂದು ಇರಲ್ಲ, ಅವರು ಮಾಡಿದ ತೋಟದ ಫಲವನ್ನ ಬೇರೆಯವರು ಬಂದು ಕಿತ್ಕೊಳ್ಳಲ್ಲ. . . . ನಾನು ಆರಿಸ್ಕೊಂಡಿರೋ ಜನ್ರು ಚೆನ್ನಾಗಿ ದುಡಿದು ಖುಷಿಖುಷಿಯಾಗಿ ಇರ್ತಾರೆ.”—ಯೆಶಾಯ 65:21, 22.
ಯುದ್ಧ ಇರಲ್ಲ.
“ಆತನು ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ.”—ಕೀರ್ತನೆ 46:9.
“ಜನಾಂಗ ಜನಾಂಗಕ್ಕೆ ವಿರುದ್ಧ ಕತ್ತಿ ಎತ್ತಲ್ಲ, ಇನ್ನು ಯಾವತ್ತೂ ಅವರು ಯುದ್ಧ ಮಾಡೋಕೆ ಕಲಿಯಲ್ಲ.”—ಯೆಶಾಯ 2:4.
ಎಲ್ಲರಿಗೂ ಹೊಟ್ಟೆ ತುಂಬ ಊಟ ಸಿಗುತ್ತೆ.
“ಭೂಮಿ ಅದ್ರ ಬೆಳೆಯನ್ನ ಕೊಡುತ್ತೆ, ದೇವರು, ನಮ್ಮ ದೇವರು ನಮ್ಮನ್ನ ಆಶೀರ್ವದಿಸ್ತಾನೆ.”—ಕೀರ್ತನೆ 67:6.
“ಭೂಮಿ ಮೇಲೆ ಬೆಳೆ ಸಮೃದ್ಧವಾಗಿ ಇರುತ್ತೆ, ಪರ್ವತ ಶಿಖರಗಳ ಮೇಲೆ ಧಾನ್ಯ ತುಂಬಿತುಳುಕುತ್ತೆ.”—ಕೀರ್ತನೆ 72:16.
ಬಡತನ ಇರೋದಿಲ್ಲ.
“ಬಡವರನ್ನ ದೇವರು ಯಾವತ್ತೂ ಮರಿಯಲ್ಲ.”—ಕೀರ್ತನೆ 9:18.
“ಯಾಕಂದ್ರೆ ಅವನು ಸಹಾಯಕ್ಕಾಗಿ ಮೊರೆ ಇಡೋ ಬಡವ್ರನ್ನ ಕಾಪಾಡ್ತಾನೆ, ದೀನರನ್ನ, ಸಹಾಯಕ್ಕಾಗಿ ಯಾರೂ ಇಲ್ಲದವ್ರನ್ನ ರಕ್ಷಿಸ್ತಾನೆ. ದೀನರ ಮೇಲೆ, ಬಡಬಗ್ಗರ ಮೇಲೆ ಅವನಿಗೆ ಕನಿಕರ ಇರುತ್ತೆ, ಬಡವರ ಜೀವವನ್ನ ಕಾಪಾಡ್ತಾನೆ.”—ಕೀರ್ತನೆ 72:12, 13.
ದೇವರ ಆಳ್ವಿಕೆಯಲ್ಲಿ ಇಷ್ಟೆಲ್ಲ ಆಶೀರ್ವಾದ ಸಿಗುತ್ತೆ ಅಂತ ಯೇಸುವಿಗೆ ಚೆನ್ನಾಗಿ ಗೊತ್ತಿರೋದ್ರಿಂದಾನೇ ಆತನು ಅದರ ಬಗ್ಗೆ ಸಾರೋಕೆ ತುದಿಗಾಲಲ್ಲಿ ನಿಂತಿದ್ದ ಅಂತ ಗೊತ್ತಾಗುತ್ತಲ್ವಾ? ದೇವರ ಆಳ್ವಿಕೆ ಮಾತ್ರ ಮನುಷ್ಯರ ಎಲ್ಲ ಕಷ್ಟ ಸಂಕಟಗಳನ್ನ ತೆಗೆದುಹಾಕಲಿಕ್ಕೆ ಸಾಧ್ಯ ಅಂತ ಯೇಸುವಿಗೆ ಗೊತ್ತಿತ್ತು. ಹಾಗಾಗಿ ದೇವರ ಆಳ್ವಿಕೆಯ ಈ ಸಿಹಿಸುದ್ದಿಯನ್ನು ಬಿಡದೇ ಸಾರಿದನು.
ದೇವರ ಆಳ್ವಿಕೆ ಬಗ್ಗೆ ಬೈಬಲಲ್ಲಿರೋ ವಿಷಯಗಳು ನಿಮಗೆ ಇಷ್ಟ ಆಯ್ತಾ? ಇಷ್ಟ ಆದರೆ ದೇವರ ಆಳ್ವಿಕೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ಹೇಗೆ ತಿಳಿದುಕೊಳ್ಳಬಹುದು? ಈ ಆಶೀರ್ವಾದಗಳು ನಿಮಗೆ ಸಿಗಬೇಕಾದರೆ ಏನು ಮಾಡಬೇಕು? ಇದಕ್ಕೆಲ್ಲ ಉತ್ತರ ಈ ಸರಣಿಯ ಕೊನೇ ಲೇಖನದಲ್ಲಿ ಇದೆ.
a ಮನುಷ್ಯರಿಗೆ ಯಾಕೆ ಕಷ್ಟ ಇದೆ ಅಂತ ತಿಳಿದುಕೊಳ್ಳೋಕೆ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್ ನಮಗೆ ಏನು ಕಲಿಸುತ್ತದೆ? ಅನ್ನೋ ಪುಸ್ತಕದ ಅಧ್ಯಾಯ 1 ನೋಡಿ. ಇದು www.jw.org ವೆಬ್ಸೈಟಿನಲ್ಲೂ ಲಭ್ಯವಿದೆ.