ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w16 ಅಕ್ಟೋಬರ್‌ ಪು. 3-7
  • ಒಳ್ಳೇ ಮಾದರಿಗಳನ್ನು ಅನುಕರಿಸಲು ಪ್ರಯತ್ನಿಸಿದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಳ್ಳೇ ಮಾದರಿಗಳನ್ನು ಅನುಕರಿಸಲು ಪ್ರಯತ್ನಿಸಿದೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನನಗೆ ಪ್ರೋತ್ಸಾಹ ಕೊಟ್ಟ ಮಾದರಿಗಳು
  • ಬೇರೆ ಬೇರೆ ಕಡೆ ಸೇವೆ
  • ಮರೆಯಲಾಗದ ಆಮಂತ್ರಣಗಳು
  • ಹೊಸ ನೇಮಕ
  • ಬದಲಾವಣೆಗೆ ತಕ್ಕಂತೆ ಬದಲಾದೆವು
  • ಮರೆಯಲಾಗದ ಮತ್ತೊಂದು ಆಮಂತ್ರಣ
  • ಯೆಹೋವ ತೋರಿಸಿದ ಜೀವನದ ದಾರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ನೂರು ವರ್ಷ ಆಗ್ತಿದ್ರೂ ಕಲೀತಾ ಇದ್ದೀನಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಯೆಹೂದ್ಯನೊಬ್ಬನ ಸೆರಗನ್ನು ಎಪ್ಪತ್ತು ವರ್ಷಗಳಿಂದ ಹಿಡಿದುಕೊಂಡೇ ಇದ್ದೇನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ‘ನಾವು ಮಾಡಬೇಕಾದದ್ದನ್ನೇ ಮಾಡಿದ್ದೇವೆ’
    ಕಾವಲಿನಬುರುಜು—1998
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
w16 ಅಕ್ಟೋಬರ್‌ ಪು. 3-7

ಜೀವನ ಕಥೆ

ಒಳ್ಳೇ ಮಾದರಿಗಳನ್ನು ಅನುಕರಿಸಲು ಪ್ರಯತ್ನಿಸಿದೆ

ಥಾಮಸ್‌ ಮಕ್ಲೇನ್‌ ಹೇಳಿದಂತೆ

“ನನಗೀಗ ಎಷ್ಟು ವಯಸ್ಸು ಅಂತ ನಿಮಗೆ ಗೊತ್ತಾ?” ಅಂತ ನಾನು ಈಸಾಕ್‌ ಮರೇ ಅವರನ್ನು ಕೇಳಿದೆ. “ನಿನಗೆಷ್ಟು ವಯಸ್ಸು ಅಂತ ನನಗೆ ಚೆನ್ನಾಗಿ ಗೊತ್ತು” ಅಂದರು ಅವರು. ಇದು ನ್ಯೂಯಾರ್ಕಿನ ಪ್ಯಾಟರ್‌ಸನಲ್ಲಿದ್ದ ಅವರ ಮತ್ತು ಕೊಲರಾಡೊದಲ್ಲಿದ್ದ ನನ್ನ ನಡುವೆ ನಡೆದ ಮಾತುಕತೆ. ಈ ಮಾತುಕತೆ ಹೇಗೆ ಶುರುವಾಯಿತು ಅಂತ ಹೇಳುತ್ತೇನೆ, ಬನ್ನಿ.

ಥಾಮಸ್‌ ಮತ್ತು ಬೆತೆಲ್‌ ಮಕ್ಲೇನ್‌

ನಾನು ಅಮೆರಿಕದ ಕ್ಯಾನ್‌ಸಸ್‌ನ ವಿಚಿಟ್ಟ ಎಂಬ ನಗರದಲ್ಲಿ, 1936⁠ರ ಡಿಸೆಂಬರ್‌ 10⁠ರಂದು ಹುಟ್ಟಿದೆ. ನಾವು ನಾಲ್ಕು ಜನ ಮಕ್ಕಳಲ್ಲಿ ನಾನೇ ದೊಡ್ಡವನು. ನನ್ನ ಅಪ್ಪಅಮ್ಮನ ಹೆಸರು ವಿಲ್ಯಮ್‌ ಮತ್ತು ಜೀನ್‌. ಅವರಿಗೆ ಯೆಹೋವನ ಮೇಲೆ ತುಂಬ ಭಯಭಕ್ತಿ ಇತ್ತು. ನನ್ನ ಅಪ್ಪ ಸಭೆಯಲ್ಲಿ ಕಂಪನಿ ಸೇವಕ ಆಗಿದ್ದರು, ಆಗೆಲ್ಲ ಸಭೆಯಲ್ಲಿ ಮುಂದಾಳತ್ವ ವಹಿಸುವವರನ್ನು ಕಂಪನಿ ಸೇವಕ ಅಂತ ಕರೆಯುತ್ತಿದ್ದರು. ನನ್ನ ಅಮ್ಮನಿಗೆ ಬೈಬಲ್‌ ಸತ್ಯವನ್ನು ಕಲಿಸಿದ್ದು ಅವರ ಅಮ್ಮ. ಅವರ ಹೆಸರು ಎಮಾ ವಾಗ್ನರ್‌. ಇವರು ತುಂಬ ಜನರಿಗೆ ಸತ್ಯ ಕಲಿಸಿದ್ದರು. ಅವರಲ್ಲಿ ಒಬ್ಬರು ಗರ್‌ಟ್ರೂಡ್‌ ಸ್ಟೀಲ್‌. ಇವರು ಪೋರ್ಟರೀಕೊ ಎಂಬಲ್ಲಿ ತುಂಬ ವರ್ಷ ಮಿಷನರಿಯಾಗಿ ಸೇವೆ ಮಾಡಿದ್ದಾರೆ.a ಇವರೆಲ್ಲ ನನಗೆ ಅನುಕರಿಸಲು ಒಳ್ಳೇ ಮಾದರಿಗಳಾಗಿದ್ದರು.

ನನಗೆ ಪ್ರೋತ್ಸಾಹ ಕೊಟ್ಟ ಮಾದರಿಗಳು

ಥಾಮಸ್‌ ಮಕ್ಲೇನ್‌ರವರ ತಂದೆ ರಸ್ತೆಯ ಮೂಲೆಯೊಂದರಲ್ಲಿ ನಿಂತು ಪತ್ರಿಕೆ ನೀಡುತ್ತಿದ್ದಾರೆ

ನನ್ನ ಅಪ್ಪ ರಸ್ತೆಯ ಮೂಲೆಯೊಂದರಲ್ಲಿ ನಿಂತು ದಾರಿಹೋಕರಿಗೆ ಪತ್ರಿಕೆಗಳನ್ನು ತೋರಿಸುತ್ತಿದ್ದಾರೆ

ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಮಯ. ನನಗೆ ಆಗ ಐದು ವರ್ಷ. ಒಂದಿನ ಶನಿವಾರ ಸಾಯಂಕಾಲ ನಾನು ಮತ್ತು ಅಪ್ಪ ರಸ್ತೆ ಬದಿಯಲ್ಲಿ ನಿಂತು ಕಾವಲಿನಬುರುಜು ಮತ್ತು ಕನ್‌ಸೋಲೇಷನ್‌ (ಈಗ ಎಚ್ಚರ!) ಪತ್ರಿಕೆಗಳನ್ನು ಕೊಡುತ್ತಾ ಸೇವೆ ಮಾಡುತ್ತಿದ್ದೆವು. ಒಬ್ಬ ಡಾಕ್ಟರ್‌ ಕಂಠಪೂರ್ತಿ ಕುಡಿದು ನನ್ನ ಅಪ್ಪನನ್ನು ಬಾಯಿಗೆ ಬಂದ ಹಾಗೆ ಬೈಯಲು ಶುರುಮಾಡಿದ. ನನ್ನ ಅಪ್ಪ ಸೈನ್ಯಕ್ಕೆ ಸೇರದಿದ್ದ ಕಾರಣ ಅವರನ್ನು “ಹೆದರುಪುಕ್ಕಲ” ಅಂತ ಹೇಳಿ ಕೂಗಾಡುತ್ತಿದ್ದ. ಅದನ್ನು ನೋಡಿ ನನಗೆ ಭಯ ಆಯಿತು. ಆದರೆ ಅಪ್ಪನನ್ನು ನೋಡಿ ಆಶ್ಚರ್ಯ ಆಯಿತು. ಯಾಕೆಂದರೆ ಅಪ್ಪ ಹೆದರದೆ ಜನರಿಗೆ ಪತ್ರಿಕೆಗಳನ್ನು ಕೊಡುತ್ತಾ ಇದ್ದರು. ಆಗಲೇ ಅಲ್ಲಿಗೆ ಒಬ್ಬ ಸೈನಿಕ ಬಂದ. ಅವನ ಎದುರಲ್ಲೂ ಆ ಡಾಕ್ಟರ್‌ ಅಪ್ಪನನ್ನು ಬೈಯುತ್ತಿದ್ದ. ಡಾಕ್ಟರ್‌ ಕುಡಿದಿರುವುದನ್ನು ಗಮನಿಸಿದ ಸೈನಿಕ “ಮನೆಗ್‌ ಹೋಗು” ಅಂತ ಹೇಳಿ ಕಳುಹಿಸಿದ. ಅಪ್ಪ ಅವತ್ತು ತೋರಿಸಿದ ಧೈರ್ಯವನ್ನು ನೆನಸಿದರೆ ಅವರ ಮೇಲೆ ನನಗೆ ಈಗಲೂ ಗೌರವ ಮೂಡುತ್ತದೆ. ಯೆಹೋವನೇ ಅವರಿಗೆ ಆ ಧೈರ್ಯವನ್ನು ಕೊಟ್ಟಿದ್ದನು. ಅಪ್ಪನಿಗೆ ವಿಚಿಟ್ಟ ನಗರದಲ್ಲಿ ಎರಡು ಕ್ಷೌರದ ಅಂಗಡಿ ಇದ್ದವು. ಅಲ್ಲಿಗೆ ಆ ಡಾಕ್ಟರ್‌ ಯಾವಾಗಲೂ ಬರುತ್ತಿದ್ದ!

1940⁠ರ ಸಮಯದಲ್ಲಿ ಥಾಮಸ್‌ ಮಕ್ಲೇನ್‌ ತನ್ನ ಹೆತ್ತವರ ಜೊತೆ

1940⁠ರಲ್ಲಿ ವಿಚಿಟ್ಟದಲ್ಲಿ ನಡೆದ ಅಧಿವೇಶನಕ್ಕೆ ಹೋಗಲು ಸಿದ್ಧರಾಗಿ ನಿಂತ ನಾನು, ಅಪ್ಪ, ಅಮ್ಮ

ನಾನು ಎಂಟು ವರ್ಷದವನಿದ್ದಾಗ ನನ್ನ ಹೆತ್ತವರು ಆ ಅಂಗಡಿಗಳನ್ನು ಮತ್ತು ಮನೆಯನ್ನು ಮಾರಿ ಒಂದು ಮೋಟಾರು ಮನೆಯನ್ನು ಕಟ್ಟಿದರು. ನಂತರ ನಾವು ಹೆಚ್ಚು ಸೇವೆ ಮಾಡಲು ಕೊಲರಾಡೊ ಪ್ರಾಂತ್ಯಕ್ಕೆ ಹೋಗಿ ಗ್ರ್ಯಾಂಡ್‌ ಜಂಕ್ಷನ್‌ ಎನ್ನುವ ಜಾಗದ ಹತ್ತಿರ ವಾಸಮಾಡಿದೆವು. ಅಪ್ಪಅಮ್ಮ ಹೊಲದಲ್ಲಿ ಮತ್ತು ಪ್ರಾಣಿ ಸಾಕುವ ಕೇಂದ್ರದಲ್ಲಿ ಅರೆಕಾಲಿಕ ಕೆಲಸ ಮಾಡಿದರು. ಹುರುಪಿನಿಂದ ಪಯನೀಯರ್‌ ಸೇವೆ ಮಾಡುತ್ತಿದ್ದರು. ಯೆಹೋವನ ಆಶೀರ್ವಾದದಿಂದ ಅಲ್ಲೊಂದು ಸಭೆ ಆರಂಭವಾಯಿತು. 1948⁠ರ ಜೂನ್‌ 20⁠ರಂದು ಅಪ್ಪ ನನಗೆ ದೀಕ್ಷಾಸ್ನಾನ ಮಾಡಿಸಿದರು. ಅವತ್ತು ತುಂಬ ಜನ ದೀಕ್ಷಾಸ್ನಾನ ಪಡೆದುಕೊಂಡರು. ಅವರಲ್ಲಿ ಬಿಲೀ ನಿಕಲ್ಸ್‌ ಮತ್ತು ಅವರ ಪತ್ನಿ ಕೂಡ ಇದ್ದರು. ಇವರು ನಂತರ ಸಂಚರಣ ಕೆಲಸಕ್ಕೆ ಹೋದರು. ಇವರಂತೆ ಇವರ ಮಗ ಮತ್ತು ಸೊಸೆ ಕೂಡ ಸಂಚರಣ ಕೆಲಸ ಮಾಡಿದರು.

ತುಂಬ ಹುರುಪಿನಿಂದ ದೇವರ ಸೇವೆ ಮಾಡುತ್ತಿದ್ದ ಅನೇಕ ಸಹೋದರ ಸಹೋದರಿಯರ ಜೊತೆ ಮಾತಾಡುವ ಮತ್ತು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚರ್ಚಿಸುವ ಅವಕಾಶ ಸಿಕ್ಕಿತ್ತು. ಅವರಲ್ಲಿ ಸಹೋದರ ಸ್ಟೀಲ್‌ ಕುಟುಂಬ ಅಂದರೆ ಡಾನ್‌ ಮತ್ತು ಅರ್‌ಲೀನ್‌, ಡೇವ್‌ ಮತ್ತು ಜೂಲ್ಯಾ, ಸೈ ಮತ್ತು ಮಾರ್ಥ ನನ್ನನ್ನು ತುಂಬ ಪ್ರಭಾವಿಸಿದರು. ಆಧ್ಯಾತ್ಮಿಕ ವಿಷಯಗಳಿಗೆ ಮೊದಲ ಸ್ಥಾನ ಕೊಡುವುದಾದರೆ ಜೀವನದಲ್ಲಿ ಎಷ್ಟು ಸಂತೋಷ, ತೃಪ್ತಿ ಇರುತ್ತದೆ ಅಂತ ತೋರಿಸಿಕೊಟ್ಟರು.

ಬೇರೆ ಬೇರೆ ಕಡೆ ಸೇವೆ

ಪಯನೀಯರ್‌ ಸೇವೆ ಮಾಡುತ್ತಿದ್ದ ಬಡ್‌ ಹೇಸ್ಟೀ ಎಂಬ ನಮ್ಮ ಕುಟುಂಬದ ಆಪ್ತರೊಬ್ಬರು ಅಮೆರಿಕದ ದಕ್ಷಿಣ ಭಾಗದಲ್ಲಿ ತಮ್ಮ ಜೊತೆ ಸೇವೆ ಮಾಡಲು ನನ್ನನ್ನು ಕರೆದರು. ಆಗ ನನಗೆ 19 ವರ್ಷ. ಲೂಯ್ಸಿಯಾನದ ರಸ್ಟನ್‌ ಎಂಬ ಸ್ಥಳಕ್ಕೆ ಹೋಗಿ ಸೇವೆಮಾಡುವಂತೆ ಸಂಚರಣ ಮೇಲ್ವಿಚಾರಕ ನಮಗೆ ಹೇಳಿದರು. ಅಲ್ಲಿ ಹಲವಾರು ಸಾಕ್ಷಿಗಳು ನಿಷ್ಕ್ರಿಯರಾಗಿದ್ದರು. ಯಾರು ಬರಲಿ ಬರದಿರಲಿ ಪ್ರತಿವಾರ ಎಲ್ಲಾ ಕೂಟಗಳನ್ನು ನಡೆಸುವಂತೆ ಸಂಚರಣ ಮೇಲ್ವಿಚಾರಕ ಹೇಳಿದರು. ಹಾಗಾಗಿ ನಾವು ಒಂದು ಸೂಕ್ತ ಜಾಗ ಹುಡುಕಿ ಕೂಟಗಳನ್ನು ಆರಂಭಿಸಿದೆವು. ಸ್ವಲ್ಪ ಸಮಯದ ತನಕ ಕೂಟಕ್ಕೆ ಬರೀ ನಾವಿಬ್ಬರೇ ಹಾಜರಾಗುತ್ತಿದ್ದೆವು. ಒಂದು ಕೂಟವನ್ನೂ ತಪ್ಪಿಸದೆ ನಡೆಸುತ್ತಿದ್ದೆವು. ನಾನು ಒಂದು ಕೂಟ ನಡೆಸಿದರೆ ಇನ್ನೊಂದು ಕೂಟವನ್ನು ಸಹೋದರ ಬಡ್‌ ನಡೆಸುತ್ತಿದ್ದರು. ಒಬ್ಬರು ಕೂಟ ನಡೆಸುತ್ತಿದ್ದಾಗ ಇನ್ನೊಬ್ಬರೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹೇಳುತ್ತಿದ್ದರು. ಅಭಿನಯ ಇದ್ದಾಗ ನಾವಿಬ್ಬರೂ ವೇದಿಕೆ ಮೇಲೆ ನಿಂತು ಅಭಿನಯ ಮಾಡುತ್ತಿದ್ದರೆ ಸಭಿಕರು ಒಬ್ಬರೂ ಇರುತ್ತಿರಲಿಲ್ಲ! ಸ್ವಲ್ಪ ಸಮಯದ ನಂತರ ಒಬ್ಬ ವಯಸ್ಸಾದ ಸಹೋದರಿ ಕೂಟಕ್ಕೆ ಬರಲು ಶುರುಮಾಡಿದರು. ಹೋಗುತ್ತಾ ಹೋಗುತ್ತಾ ನಮ್ಮ ಬೈಬಲ್‌ ವಿದ್ಯಾರ್ಥಿಗಳು ಮತ್ತು ಕೆಲವು ನಿಷ್ಕ್ರಿಯ ಪ್ರಚಾರಕರು ಬಂದರು. ಆಮೇಲೆ, ಅದೊಂದು ತುಂಬಿದ ಸಭೆಯಾಗಿ ಬದಲಾಯಿತು.

ಒಂದಿನ ನಾನು ಮತ್ತು ಬಡ್‌ ಸೇವೆ ಮಾಡುತ್ತಿದ್ದಾಗ ಚರ್ಚ್‌ ಆಫ್‌ ಕ್ರೈಸ್ಟ್‌ನ ಪಾದ್ರಿಯೊಬ್ಬರು ಸಿಕ್ಕಿದರು. ಅವರು ಹೇಳಿದ ಬೈಬಲ್‌ ವಚನಗಳು ನನಗೆ ಗೊತ್ತೇ ಇರಲಿಲ್ಲ. ನಾನು ನಂಬುತ್ತಿರುವುದು ಸತ್ಯನಾ ಅಂತ ಸಂಶಯ ಬಂತು. ಒಂದುವಾರ ಇಡೀ ಕಣ್ಣಿಗೆ ಎಣ್ಣೆ ಬಿಟ್ಟು ಆ ವ್ಯಕ್ತಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿದೆ. ಇದು ನಿಜವಾಗಲೂ ನಾನು ಸತ್ಯವನ್ನು ನನ್ನದಾಗಿ ಮಾಡಿಕೊಳ್ಳಲು ಸಹಾಯ ಮಾಡಿತು. ಇನ್ನೊಬ್ಬ ಪಾದ್ರಿ ಸಿಗಲಿ ಅಂತ ಕಾಯುತ್ತಿದ್ದೆ.

ಸ್ವಲ್ಪ ಸಮಯದಲ್ಲೇ ಸಂಚರಣ ಮೇಲ್ವಿಚಾರಕ ನನಗೆ ಆರ್‌ಕಾನ್‌ಸಾಸ್‌ ಪ್ರಾಂತ್ಯದ ಎಲ್‌ ಡರಾಡೋ ಎಂಬ ಸ್ಥಳಕ್ಕೆ ಹೋಗಿ ಅಲ್ಲಿನ ಸಭೆಗೆ ಸಹಾಯ ಮಾಡಲು ಹೇಳಿದರು. ಅಲ್ಲಿಗೆ ಹೋದೆ. ಆದರೆ ನಾನು ಅಲ್ಲಿಂದ ಕೊಲರಾಡೊಗೆ ಆಗಾಗ ಹೋಗಿ ಸೇನೆಗೆ ಜನರನ್ನು ಸೇರಿಸಿಕೊಳ್ಳುವ ಕಮಿಟಿಯ ಮುಂದೆ ಹಾಜರಾಗಬೇಕಿತ್ತು. ಹೀಗೆ ಒಂದು ಸಲ ಹೋದಾಗ ಟೆಕ್ಸಸ್‌ ಅನ್ನೋ ಜಾಗದಲ್ಲಿ ಅಪಘಾತ ಆಯಿತು. ಆಗ ನನ್ನ ಕಾರಿನಲ್ಲಿ ಇನ್ನೂ ಕೆಲವು ಪಯನೀಯರರು ಇದ್ದರು. ನನ್ನ ಕಾರು ನಜ್ಜುಗುಜ್ಜಾಯಿತು. ನಾವು ಒಬ್ಬ ಸಹೋದರನಿಗೆ ಫೋನ್‌ ಮಾಡಿದೆವು. ಅವರು ಬಂದು ನಮ್ಮನ್ನು ಅವರ ಮನೆಗೆ, ನಂತರ ಕೂಟಕ್ಕೆ ಕರೆದುಕೊಂಡು ಹೋದರು. ಕೂಟದಲ್ಲಿ ನಮಗಾದ ಅಪಘಾತದ ಬಗ್ಗೆ ಪ್ರಕಟಣೆ ಮಾಡಲಾಯಿತು. ಹಾಗಾಗಿ ಅಲ್ಲಿನ ಸಹೋದರರು ನಮಗೆ ಹಣಸಹಾಯ ಮಾಡಿದರು. ನನ್ನ ಕಾರನ್ನು 25 ಡಾಲರ್‌ಗೆ ಮಾರುವ ಏರ್ಪಾಡನ್ನೂ ಆ ಸಹೋದರ ಮಾಡಿದರು.

ಅಲ್ಲಿಂದ ವಿಚಿಟ್ಟಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿ ಇ. ಎಫ್‌. “ಡಾಕ್‌” ಮಕಾರ್ಟ್‌ನಿ ಎಂಬ ಸಹೋದರ ಪಯನೀಯರ್‌ ಸೇವೆ ಮಾಡುತ್ತಿದ್ದರು. ಅವರು ನಮ್ಮ ಕುಟುಂಬದ ಮಿತ್ರರಾಗಿದ್ದರು. ಅಷ್ಟೇ ಅಲ್ಲ, ಅವರಿಗೆ ಫ್ರಾಂಕ್‌ ಮತ್ತು ಫ್ರಾನ್ಸಸ್‌ ಅಂತ ಅವಳಿ ಗಂಡುಮಕ್ಕಳಿದ್ದರು. ಅವರು ನನ್ನ ಆಪ್ತ ಗೆಳೆಯರಾಗಿದ್ದರು. ಅವರು ತಮ್ಮ ಹಳೇ ಕಾರನ್ನು ನನಗೆ 25 ಡಾಲರ್‌ಗೆ ಮಾರಿದರು!! ಆಧ್ಯಾತ್ಮಿಕ ವಿಷಯಗಳಿಗೆ ಮೊದಲ ಸ್ಥಾನ ಕೊಟ್ಟಿದ್ದರಿಂದ ಯೆಹೋವ ದೇವರು ನನ್ನ ಅಗತ್ಯವನ್ನು ಪೂರೈಸುತ್ತಾನೆ ಅನ್ನೋದನ್ನು ಜೀವನದಲ್ಲಿ ಮೊದಲನೇ ಸಲ ಸ್ವತಃ ಅನುಭವಿಸಿದೆ. ಆ ಗೆಳೆಯರು ನನಗೆ ಬೆತೆಲ್‌ ಕ್ರೇನ್‌ ಎಂಬ ಒಬ್ಬ ಒಳ್ಳೇ ಸಹೋದರಿಯ ಪರಿಚಯ ಮಾಡಿಸಿದರು. ಅವಳ ತಾಯಿ ರೂತ್‌ ಕ್ಯಾನ್‌ಸನ್‌ನ ವೆಲಿಂಗ್ಟನ್‌ನಲ್ಲಿ ಹುರುಪಿನಿಂದ ಸೇವೆಮಾಡುತ್ತಿದ್ದರು. ಅವರು 90⁠ರ ವಯಸ್ಸಿನಲ್ಲೂ ಪಯನೀಯರ್‌ ಸೇವೆ ನಿಲ್ಲಿಸಲಿಲ್ಲ. ಒಂದು ವರ್ಷದೊಳಗೆ ಅಂದರೆ 1958⁠ರಲ್ಲಿ ನಾನು ಮತ್ತು ಬೆತೆಲ್‌ ಮದುವೆ ಆದೆವು. ಎಲ್‌ ಡರಾಡೋದಲ್ಲಿ ಅವಳು ನನ್ನ ಜೊತೆ ಪಯನೀಯರ್‌ ಸೇವೆ ಶುರುಮಾಡಿದಳು.

ಮರೆಯಲಾಗದ ಆಮಂತ್ರಣಗಳು

ನಾವು ಯಾರ ಮಾದರಿಯನ್ನು ಅನುಕರಿಸುತ್ತಿದ್ದೆವೋ ಅವರಂತೆ ನಾವು ಕೂಡ ಯೆಹೋವನ ಸಂಘಟನೆ ನಮ್ಮಿಂದ ಏನೇ ಕೇಳಿದರೂ ಮಾಡಲು ಸಿದ್ಧರಾಗಿರಬೇಕು ಎಂಬ ತೀರ್ಮಾನ ಮಾಡಿದೆವು. ನಮಗೆ ಆರ್‌ಕಾನ್‌ಸಾಸ್‌ ಪ್ರಾಂತ್ಯದ ವಾಲ್‌ನಟ್‌ ರಿಜ್‌ ಎಂಬಲ್ಲಿ ವಿಶೇಷ ಪಯನೀಯರ್‌ ಸೇವೆ ಮಾಡುವ ನೇಮಕ ಸಿಕ್ಕಿತು. 1962⁠ರಲ್ಲಿ 37⁠ನೇ ಗಿಲ್ಯಡ್‌ ಶಾಲೆಗೆ ಆಮಂತ್ರಣ ಸಿಕ್ಕಿತು! ಈ ಖುಶಿಯ ಜೊತೆಗೆ ಇನ್ನೊಂದು ಖುಶಿಯ ಸಂಗತಿ ನಡೆಯಿತು. ಅದೇನೆಂದರೆ, ಡಾನ್‌ ಸ್ಟೀಲ್‌ ಕೂಡ ಅದೇ ಕ್ಲಾಸಿನಲ್ಲಿದ್ದರು. ಪದವಿ ಪಡೆದ ಮೇಲೆ ನನಗೂ ಬೆತೆಲ್‌ಗೂ ಕೆನ್ಯದ ನೈರೋಬಿಯಲ್ಲಿ ನೇಮಕ ಸಿಕ್ಕಿತು. ನ್ಯೂಯಾರ್ಕ್‌ನಿಂದ ಹೊರಡುವಾಗ ತುಂಬ ಬೇಜಾರಾಯಿತು. ಆದರೆ ನೈರೋಬಿ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಸಹೋದರರನ್ನು ಭೇಟಿಯಾದ ತಕ್ಷಣ ಆ ದುಃಖವೆಲ್ಲ ಮಾಯವಾಯಿತು!

ಥಾಮಸ್‌ ಮತ್ತು ಬೆತೆಲ್‌ ಮಕ್ಲೇನ್‌ ಕೆನ್ಯದ ನೈರೋಬಿಯಲ್ಲಿ ಮೇರಿ ಮತ್ತು ಕ್ರಿಸ್‌ ಕನೈಯರ ಜೊತೆ

ನೈರೋಬಿಯಲ್ಲಿ ಸೇವೆಮಾಡುತ್ತಿದ್ದಾಗ ಮೇರಿ ಮತ್ತು ಕ್ರಿಸ್‌ ಕನೈಯರ ಜೊತೆ

ಕೆನ್ಯ ನಮಗೆ ತುಂಬ ಇಷ್ಟವಾಯಿತು. ತುಂಬ ಆನಂದದಿಂದ ಸೇವೆಮಾಡಿದೆವು. ನಮ್ಮ ಮೊದಲ ಬೈಬಲ್‌ ವಿದ್ಯಾರ್ಥಿಗಳು ಕ್ರಿಸ್‌ ಮತ್ತು ಮೇರಿ ಕನೈಯ. ಅಲ್ಲಿ ಅವರು ಈಗಲೂ ಪೂರ್ಣಸಮಯದ ಸೇವೆ ಮಾಡುತ್ತಿದ್ದಾರೆ. ಮುಂದಿನ ವರ್ಷವೇ ನಮಗೆ ಯುಗಾಂಡದ ಕಾಂಪಾಲಾಗೆ ಹೋಗುವಂತೆ ಹೇಳಿದರು. ನಾವೇ ಆ ದೇಶಕ್ಕೆ ಹೋದ ಮೊದಲ ಮಿಷನರಿಗಳು. ಅಲ್ಲಿಯಂತೂ ತುಂಬ ಖುಶಿಯಿಂದ ಸೇವೆ ಮಾಡಿದೆವು. ಅಲ್ಲಿ ತುಂಬ ಜನರು ಆಸಕ್ತಿಯಿಂದ ಬೈಬಲ್‌ ಸತ್ಯಗಳನ್ನು ಕಲಿತು ಸಾಕ್ಷಿಗಳಾದರು. ಆಫ್ರಿಕಾದಲ್ಲಿ ನಾವು ಮೂರೂವರೆ ವರ್ಷ ಇದ್ದೆವು. ನಂತರ ನಮ್ಮ ಮಕ್ಕಳನ್ನು ಬೆಳೆಸಲಿಕ್ಕಾಗಿ ನಾವು ಅಮೆರಿಕಗೆ ಹಿಂದಿರುಗಿದೆವು. ಆಫ್ರಿಕಾದಿಂದ ಬರುವಾಗ ನಮಗೆ ತುಂಬ ದುಃಖವಾಯಿತು. ಅಲ್ಲಿನ ಜನರನ್ನು ನಾವು ತುಂಬ ಪ್ರೀತಿಸುತ್ತಿದ್ದೆವು. ಅಲ್ಲಿಗೆ ಪುನಃ ಹೋಗುವ ಆಸೆ ಮನಸ್ಸಲ್ಲಿತ್ತು.

ಹೊಸ ನೇಮಕ

ನಾವು ಕೊಲರಾಡೊದ ಪಶ್ಚಿಮಭಾಗದಲ್ಲಿ ಮನೆಮಾಡಿದೆವು. ಅಲ್ಲಿ ನನ್ನ ಹೆತ್ತವರಿದ್ದರು. ಅಲ್ಲಿ ನಮ್ಮ ಮೊದಲ ಮಗಳು ಕಿಂಬರ್ಲೀ ಹುಟ್ಟಿದಳು. 17 ತಿಂಗಳ ನಂತರ ಸ್ಟೆಫನೀ ಹುಟ್ಟಿದಳು. ಇವರಿಬ್ಬರನ್ನು ಬೆಳೆಸುವ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡೆವು. ನಮ್ಮ ಮುದ್ದು ಮಕ್ಕಳಿಗೆ ಸತ್ಯ ಕಲಿಸಲು ನಮ್ಮಿಂದಾದ ಎಲ್ಲವನ್ನೂ ಮಾಡಿದೆವು. ಒಳ್ಳೇ ಮಾದರಿಗಳನ್ನು ಅನುಕರಿಸುವುದನ್ನು ಮುಂದುವರಿಸಿದೆವು. ನಮ್ಮ ಒಳ್ಳೇ ಮಾದರಿ ಮಕ್ಕಳ ಮೇಲೆ ಒಳ್ಳೇ ಪರಿಣಾಮ ಬೀರಬಹುದಾದರೂ, ಅವರು ಬೆಳೆದು ದೊಡ್ಡವರಾದಾಗ ಸತ್ಯದಲ್ಲೇ ಇರುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ ಅಂತ ನಮಗೆ ಗೊತ್ತಿತ್ತು. ಯಾಕೆಂದರೆ, ನನ್ನ ಅಪ್ಪಅಮ್ಮ ಒಳ್ಳೇ ಮಾದರಿ ಇಟ್ಟರೂ ನನ್ನ ತಮ್ಮ ಮತ್ತು ತಂಗಿ ಸತ್ಯ ಬಿಟ್ಟುಹೋದರು. ಅವರು ಮತ್ತೆ ವಾಪಸ್ಸು ಬರಬಹುದು ಅಂತ ಭರವಸೆ ಇಟ್ಟುಕೊಂಡಿದ್ದೇನೆ.

ಮಕ್ಕಳನ್ನು ಬೆಳೆಸುವ ನಮ್ಮ ಜವಾಬ್ದಾರಿಯನ್ನು ಸಂತೋಷದಿಂದ ಮಾಡಿದೆವು. ಏನೇ ಕೆಲಸ ಮಾಡಿದರೂ ಮಕ್ಕಳನ್ನು ಸೇರಿಸಿಕೊಳ್ಳುತ್ತಿದ್ದೆವು. ಕೊಲರಾಡೊದ ಪ್ರಸಿದ್ಧ ಸ್ಕೀಯಿಂಗ್‌ ರೆಸಾರ್ಟ್‌ (ಹಿಮದಲ್ಲಿ ಜಾರುವಾಟ ಆಡುವ ಸ್ಥಳ) ಇರುವ ಆಸ್ಪೆನ್‌ ಎಂಬ ಸ್ಥಳದ ಹತ್ತಿರದಲ್ಲೇ ನಾವು ಇದ್ದದರಿಂದ ಸ್ಕೀಯಿಂಗ್‌ ಕಲಿತೆವು. ಹೀಗೆ ನಾಲ್ಕು ಜನ ಸೇರಿ ಸ್ಕೀಯಿಂಗ್‌ ಮಾಡುತ್ತಿದ್ದಾಗ ಮಕ್ಕಳ ಜೊತೆ ಮಾತಾಡಲು ಒಳ್ಳೇ ಅವಕಾಶ ಸಿಗುತ್ತಿತ್ತು. ಅವರ ಜೊತೆ ಕ್ಯಾಂಪ್‌ಗೆ ಹೋಗುತ್ತಿದ್ದೆವು. ಬೆಂಕಿ ಹೊತ್ತಿಸಿಕೊಂಡು ಸುತ್ತಲೂ ಕೂತು ಮಾತಾಡುತ್ತಿದ್ದೆವು. “ದೊಡ್ಡವರಾದ ಮೇಲೆ ಏನು ಮಾಡಬೇಕು?” “ಯಾರನ್ನು ಮದುವೆ ಆಗಬೇಕು?” ಅಂತ ಚಿಕ್ಕವಯಸ್ಸಲ್ಲೇ ಕೇಳುತ್ತಿದ್ದರು. ಆಗ ಯೆಹೋವನ ನಿಯಮಗಳನ್ನು ಅವರ ಮನಸ್ಸಲ್ಲಿ ಬೇರೂರಿಸಲು ಪ್ರಯತ್ನಿಸುತ್ತಿದ್ದೆವು. ಪೂರ್ಣಸಮಯದ ಸೇವೆ ಮಾಡುವ ಗುರಿ ಇಡುವಂತೆ ಮತ್ತು ಅದೇ ಗುರಿ ಇಟ್ಟವರನ್ನೇ ಮದುವೆಯಾಗುವಂತೆ ಹೇಳುತ್ತಿದ್ದೆವು. ತುಂಬ ಬೇಗ ಮದುವೆ ಆಗಬಾರದು ಅಂತ ಅವರಿಗೆ ಅರ್ಥಮಾಡಿಸುತ್ತಿದ್ದೆವು. “23 ಆದಮೇಲೆ ಮದುವೆ ಆಗಬೇಕು” ಅಂತ ಕಿವಿಮಾತು ಹೇಳುತ್ತಿದ್ದೆವು.

ನಾವು ನಮ್ಮ ಹೆತ್ತವರನ್ನೇ ಅನುಕರಿಸಿದೆವು. ಅಂದರೆ ಕೂಟಗಳಿಗೆ ತಪ್ಪದೆ ಹೋಗುವ ಮತ್ತು ಇಡೀ ಕುಟುಂಬವಾಗಿ ಸೇವೆಗೆ ಹೋಗುವ ರೂಢಿ ಬೆಳೆಸಿಕೊಂಡೆವು. ಪೂರ್ಣ ಸಮಯದ ಸೇವಕರನ್ನು ಆಗಾಗ ನಮ್ಮ ಮನೆಯಲ್ಲಿ ಇರಿಸಿಕೊಳ್ಳುತ್ತಿದ್ದೆವು. ನಮ್ಮ ಮಿಷನರಿ ಸೇವೆಯಲ್ಲಿ ನಮಗೆ ಸಿಕ್ಕಿದ ಆನಂದದ ಬಗ್ಗೆ ಮಾತಾಡುತ್ತಿದ್ದೆವು. ನಾಲ್ಕು ಜನ ಸೇರಿ ಆಫ್ರಿಕಾಗೆ ಹೋಗಬೇಕು ಅನ್ನೋ ಆಸೆ ಬಗ್ಗೆ ಹೇಳುತ್ತಿದ್ದೆವು. ನಮ್ಮ ಮಕ್ಕಳಲ್ಲೂ ಆ ಆಸೆ ಬೆಳೆಯಿತು.

ತಪ್ಪದೇ ಕುಟುಂಬ ಅಧ್ಯಯನ ಮಾಡುತ್ತಿದ್ದೆವು. ಶಾಲೆಯಲ್ಲಿ ಬರುವ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬೇಕು, ಹೇಗೆ ಉತ್ತರಕೊಡಬೇಕೆಂದು ಪ್ರ್ಯಾಕ್ಟಿಸ್‌ ಮಾಡುತ್ತಿದ್ದೆವು. ಇದರಿಂದ ಅವರಲ್ಲಿ ಧೈರ್ಯ ತುಂಬುತ್ತಿತ್ತು, ಮಾತ್ರವಲ್ಲ ಕುಟುಂಬ ಅಧ್ಯಯನ ಅವರಿಗೆ ಬೋರ್‌ ಆಗುತ್ತಿರಲಿಲ್ಲ. ಆದರೂ ಅವರು ಬೆಳೆಯುತ್ತಾ ಇದ್ದಾಗ ಕೆಲವೊಮ್ಮೆ ಕುಟುಂಬ ಅಧ್ಯಯನದ ಬಗ್ಗೆ ಗೊಣಗುತ್ತಿದ್ದರು. ಒಂದಿನ ಅವರ ಗಲಾಟೆಗೆ ಕೋಪ ಬಂದು ‘ಇವತ್ತು ಕುಟುಂಬ ಅಧ್ಯಯನ ಬೇಡ’ ಅಂತ ಹೇಳಿದೆ. ಅದಕ್ಕೆ ಮಕ್ಕಳು ಅಳಲು ಶುರುಮಾಡಿದರು, ‘ನಮಗೆ ಅಧ್ಯಯನ ಬೇಕು’ ಅಂದರು. ಇದರಿಂದ, ಮಕ್ಕಳಿಗೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಗೌರವ ಇದೆ ಅಂತ ನಮಗೆ ಅರ್ಥವಾಯಿತು. ಹೋಗುತ್ತಾ ಹೋಗುತ್ತಾ ಅವರು ಅಧ್ಯಯನವನ್ನು ತುಂಬ ಇಷ್ಟಪಟ್ಟರು. ಅವರ ಭಾವನೆಗಳನ್ನು ಮುಚ್ಚುಮರೆಯಿಲ್ಲದೆ ಹೇಳಲು ಅವಕಾಶ ಕೊಟ್ಟೆವು. ಕೆಲವೊಮ್ಮೆ, ಅವರು ಬೈಬಲಿನ ಕೆಲವು ವಿಷಯಗಳನ್ನು ಒಪ್ಪುವುದಿಲ್ಲ ಅಂತ ಹೇಳುತ್ತಿದ್ದಾಗ ನಮಗೆ ಕಷ್ಟವಾಗುತ್ತಿತ್ತು. ಆದರೆ ಅವರು ಹಾಗೆ ಹೇಳುತ್ತಿದ್ದರಿಂದ ಅವರ ಮನಸ್ಸಲ್ಲಿ ಏನಿದೆ ಅಂತ ನಮಗೆ ಗೊತ್ತಾಗುತ್ತಿತ್ತು. ಆಗ ನಾವು ಕಾರಣಗಳನ್ನು ಕೊಟ್ಟಾಗ ಯೆಹೋವನ ಯೋಚನಾರೀತಿಯನ್ನು ಅವರು ಅರ್ಥಮಾಡಿಕೊಳ್ಳುತ್ತಿದ್ದರು.

ಬದಲಾವಣೆಗೆ ತಕ್ಕಂತೆ ಬದಲಾದೆವು

ವರ್ಷಗಳು ಹೇಗೆ ಉರುಳಿದವೋ ಗೊತ್ತೇ ಆಗಲಿಲ್ಲ. ಹುಡುಗಿಯರು ಬೆಳೆದು ದೊಡ್ಡವರಾದರು. ಅವರನ್ನು ದೇವರ ಸಂಘಟನೆ ಕೊಟ್ಟ ಮಾರ್ಗದರ್ಶನೆಗೆ ತಕ್ಕಂತೆ ಬೆಳೆಸಿದೆವು. ಯೆಹೋವನನ್ನು ಪ್ರೀತಿಸಲು ಕಲಿಸಿದೆವು. ತಮ್ಮ ಹೈಸ್ಕೂಲ್‌ ಮುಗಿದ ಕೂಡಲೇ ಇಬ್ಬರೂ ಪಯನೀಯರ್‌ ಸೇವೆ ಆರಂಭಿಸಿದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. ತಮ್ಮ ಕಾಲ ಮೇಲೆ ನಿಂತುಕೊಳ್ಳಲು ಬೇಕಾದ ಕೆಲಸವನ್ನೂ ಕಲಿತುಕೊಂಡರು. ಟೆನೆಸೀ ಪ್ರಾಂತ್ಯದ ಕ್ಲೀವ್‌ಲ್ಯಾಂಡ್‌ ನಗರಕ್ಕೆ ಹೋಗಿ ಪಯನೀಯರ್‌ ಸೇವೆ ಆರಂಭಿಸಿದರು. ಅವರ ಜೊತೆ ಇನ್ನೂ ಇಬ್ಬರು ಸಹೋದರಿಯರು ಇದ್ದರು. ನಮಗೆ ಮಕ್ಕಳ ನೆನಪು ತುಂಬ ಕಾಡುತ್ತಿತ್ತು. ಆದರೆ ಅವರು ಪೂರ್ಣಸಮಯದ ಸೇವೆ ಮಾಡುತ್ತಿದ್ದದನ್ನು ನೆನಪಿಸಿಕೊಂಡು ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುತ್ತಿದ್ದೆವು. ನಾನೂ ಬೆತೆಲ್‌ ಮತ್ತೆ ಪಯನೀಯರ್‌ ಸೇವೆ ಆರಂಭಿಸಿದೆವು. ನಂತರ ಸಂಚರಣ ಕೆಲಸ ಮತ್ತು ಅಧಿವೇಶನ ಕೆಲಸ ಮಾಡುವ ಅವಕಾಶ ಸಿಕ್ಕಿತು.

ನಮ್ಮ ಮಕ್ಕಳು ಟೆನೆಸೀಗೆ ಹೋಗುವ ಮುಂಚೆ ಲಂಡನ್‌ ಬ್ರಾಂಚ್‌ ಆಫೀಸಿಗೆ ಹೋದರು. ಆಗ ಸ್ಟೆಫನೀಗೆ 19 ವರ್ಷ. ಅಲ್ಲಿ ಅವಳಿಗೆ ಪೌಲ್‌ ನಾರ್ಟನ್‌ ಅನ್ನೋ ಯುವ ಸಹೋದರನ ಪರಿಚಯವಾಯಿತು. ಆ ಬ್ರಾಂಚಿಗೆ ಇನ್ನೊಮ್ಮೆ ಹೋದಾಗ ಕಿಂಬರ್ಲೀಗೆ ಬ್ರಾಯನ್‌ ಲವೆಲಿನ್‌ ಅನ್ನೋ ಸಹೋದರನ ಪರಿಚಯವಾಯಿತು. ಪೌಲ್‌ ಮತ್ತು ಬ್ರಾಯನ್‌ ಒಟ್ಟಿಗೆ ಕೆಲಸಮಾಡುತ್ತಿದ್ದರು. ಸ್ಟೆಫನೀಗೆ 23 ವಯಸ್ಸಾದ ಮೇಲೆ ಪೌಲನ್ನು ಮದುವೆಯಾದಳು. ಅದರ ಮುಂದಿನ ವರ್ಷ ಕಿಂಬರ್ಲೀ ಬ್ರಾಯನ್‌ನನ್ನು ಮದುವೆಯಾದಳು. ಆಗ ಕಿಂಬರ್ಲೀಗೆ 25 ವರ್ಷ. ಹೀಗೆ ಅವರು “23 ಆದಮೇಲೆ ಮದುವೆ ಆಗಬೇಕು” ಎನ್ನುವ ಮಾತನ್ನು ಪಾಲಿಸಿದರು. ಒಳ್ಳೇ ಹುಡುಗರನ್ನು ಆರಿಸಿಕೊಂಡ ಅವರ ಮದುವೆಗೆ ನಾವಿಬ್ಬರೂ ಮನಸಾರೆ ಒಪ್ಪಿಗೆ ನೀಡಿದೆವು.

ಥಾಮಸ್‌ ಮತ್ತು ಬೆತೆಲ್‌ ಮಕ್ಲೇನ್‌ ತಮ್ಮ ಮಕ್ಕಳು ಮತ್ತು ಅಳಿಯಂದಿರ ಜೊತೆ

ಪೌಲ್‌, ಸ್ಟೆಫನೀ, ಕಿಂಬರ್ಲೀ, ಬ್ರಾಯನ್‌ ಜೊತೆ ಮಲಾವಿ ಬ್ರಾಂಚ್‌ನಲ್ಲಿ, 2002

ನಮ್ಮ ಮಕ್ಕಳಿಗೆ ಹಣಕಾಸಿನ ತೊಂದರೆ ಬಂದಾಗಲೂ ‘ಮೊದಲು ರಾಜ್ಯವನ್ನು ಹುಡುಕಿ’ ಎಂಬ ಯೇಸುವಿನ ಸಲಹೆಯನ್ನು ಪಾಲಿಸಿದರು. (ಮತ್ತಾ. 6:33) ಇದಕ್ಕೆ ನಾವು ಮತ್ತು ನಮ್ಮ ಅಪ್ಪಅಮ್ಮ ಇಟ್ಟ ಮಾದರಿ ಸಹಾಯ ಮಾಡಿದೆ ಅನ್ನುತ್ತಾರೆ ಮಕ್ಕಳು. 1998⁠ರ ಏಪ್ರಿಲ್‌ನಲ್ಲಿ ಪೌಲ್‌ ಮತ್ತು ಸ್ಟೆಫನೀಗೆ 105⁠ನೇ ಗಿಲ್ಯಡ್‌ ಶಾಲೆಗೆ ಆಮಂತ್ರಣ ಸಿಕ್ಕಿತು. ನಂತರ ಆಫ್ರಿಕಾದ ಮಲಾವಿಗೆ ನೇಮಕ ಸಿಕ್ಕಿತು. ಅದೇ ಸಮಯದಲ್ಲಿ ಬ್ರಾಯನ್‌ ಮತ್ತು ಕಿಂಬರ್ಲೀಯನ್ನು ಲಂಡನ್‌ ಬೆತೆಲಲ್ಲಿ ಕೆಲಸ ಮಾಡಲು ಕರೆಯಲಾಯಿತು. ಅಲ್ಲಿಂದ ಅವರನ್ನು ಮಲಾವಿ ಬೆತೆಲಿಗೆ ಕಳುಹಿಸಲಾಯಿತು. ನಮ್ಮ ಮಕ್ಕಳು ಯುವಪ್ರಾಯದಲ್ಲೇ ಯೆಹೋವನಿಗೋಸ್ಕರ ತಮ್ಮ ಜೀವನವನ್ನು ಮುಡಿಪಾಗಿಟ್ಟದ್ದನ್ನು ನೋಡಿದಾಗ ನಮಗೆ ಎಲ್ಲಿಲ್ಲದ ಸಂತೋಷ!

ಮರೆಯಲಾಗದ ಮತ್ತೊಂದು ಆಮಂತ್ರಣ

2001⁠ರ ಜನವರಿಯಲ್ಲಿ ನಾನು ಈ ಲೇಖನದ ಆರಂಭದಲ್ಲಿ ಹೇಳಿದ ಘಟನೆ ನಡೆಯಿತು. ಟ್ರಾನ್ಸ್‌ಲೇಷನ್‌ ಸರ್ವಿಸಸ್‌ ಡಿಪಾರ್ಟ್‌ಮೆಂಟ್‌ನ ಮೇಲ್ವಿಚಾರಕರಾದ ಸಹೋದರ ಮರೇ ನನಗೆ ಫೋನ್‌ ಮಾಡಿದರು. ಪ್ರಪಂಚದೆಲ್ಲೆಡೆ ಇರುವ ನಮ್ಮ ಭಾಷಾಂತರಕಾರರಿಗೆ ಇಂಗ್ಲಿಷನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುವಂಥ ಒಂದು ಕ್ಲಾಸನ್ನು ನಡೆಸಲು ಯೋಜಿಸುತ್ತಿದ್ದರು. ಆ ಕ್ಲಾಸನ್ನು ನಡೆಸುವ ಶಿಕ್ಷಕರಲ್ಲಿ ಒಬ್ಬನಾಗಿ ನನ್ನನ್ನು ತರಬೇತಿಗೊಳಿಸಲು ಸಹೋದರ ಮರೇ ಬಯಸಿದರು. ಆಗ ನನಗೆ 64 ವರ್ಷ ವಯಸ್ಸು. ಬೆತೆಲ್‌ ಮತ್ತು ನಾನು ಇದರ ಬಗ್ಗೆ ಚೆನ್ನಾಗಿ ಪ್ರಾರ್ಥನೆ ಮಾಡಿ, ನಮ್ಮ ಅಮ್ಮಂದಿರ ಹತ್ತಿರ ಮಾತಾಡಿದೆವು. ಅವರಿಬ್ಬರಿಗೂ ತುಂಬಾ ವಯಸ್ಸಾಗಿತ್ತು. ಆದರೂ ನಾವು ಹೋಗಬೇಕೆನ್ನುವುದು ಅವರ ಆಸೆ ಆಗಿತ್ತು. ನಂತರ ನಾನು ಸಹೋದರ ಮರೇಗೆ ಫೋನ್‌ ಮಾಡಿ ಈ ಅದ್ಭುತ ಸುಯೋಗವನ್ನು ಸ್ವೀಕರಿಸುತ್ತೇನೆ ಅಂತ ಹೇಳಿದೆ.

ಅಷ್ಟರಲ್ಲಿ ನನ್ನಮ್ಮನಿಗೆ ಕ್ಯಾನ್ಸರ್‌ ಇರುವುದು ಗೊತ್ತಾಯಿತು. ಆಗ “ನಾನು ಹೋಗೋದಿಲ್ಲ, ನಾನಿದ್ದರೆ ನಿಮ್ಮನ್ನು ನೋಡಿಕೊಳ್ಳಲು ನನ್ನ ತಂಗಿ ಲಿಂಡಾಗೆ ಸಹಾಯ ಆಗುತ್ತೆ” ಅಂತ ಅಮ್ಮನಿಗೆ ಹೇಳಿದೆ. ಅದಕ್ಕೆ ಅಮ್ಮ, “ಅದೆಲ್ಲ ಬೇಡ, ನೀನು ಹೋಗದಿದ್ದರೆ ನನ್ನ ಕಾಯಿಲೆ ಜಾಸ್ತಿ ಆಗುತ್ತೆ” ಅಂದರು. ನಾವು ಹೊಸ ನೇಮಕಕ್ಕೆ ಹೋಗಬೇಕೆನ್ನುವುದೇ ಲಿಂಡಾಳ ಆಸೆಯೂ ಆಗಿತ್ತು. ನಿಸ್ವಾರ್ಥ ಪ್ರೀತಿ ತೋರಿಸಿದ ಅಮ್ಮ, ಲಿಂಡಾ ಮತ್ತು ಸಭೆಯ ಸಹೋದರರನ್ನು ನಾವು ಯಾವತ್ತೂ ಮರೆಯಲ್ಲ! ವಾಚ್‌ಟವರ್‌ ಎಜುಕೇಶನಲ್‌ ಸೆಂಟರ್‌ ಇನ್‌ ಪ್ಯಾಟರ್‌ಸನ್‌ಗೆ ಹೋದ ಮಾರನೇ ದಿನವೇ ಲಿಂಡಾಳಿಂದ ಫೋನ್‌ ಬಂತು. ಅಮ್ಮ ತೀರಿ ಹೋದರು. ಅಮ್ಮನ ಆಸೆಯಂತೆ ನಾವು ಈ ಹೊಸ ಕೆಲಸವನ್ನು ಚೆನ್ನಾಗಿ ಮಾಡಿದೆವು.

ನಮ್ಮನ್ನು ಮೊದಲು ಮಲಾವಿ ಬ್ರಾಂಚ್‌ಗೆ ಕಳುಹಿಸಿದರು. ಅಲ್ಲೇ ನಮ್ಮ ಮಕ್ಕಳೂ ಅಳಿಯಂದಿರೂ ಕೆಲಸಮಾಡುತ್ತಿದ್ದದರಿಂದ ನಮಗೆ ತುಂಬ ಸಂತೋಷವಾಯಿತು! ಅಲ್ಲಿಂದ ಜಿಂಬಾಬ್ವೆ ಮತ್ತು ಜಾಂಬಿಯಕ್ಕೆ ಹೋದೆವು. ಮೂರೂವರೆ ವರ್ಷ ಈ ಕ್ಲಾಸನ್ನು ನಡೆಸಿದ ನಂತರ ಮಲಾವಿಗೆ ಹೋಗಿ ಅಲ್ಲಿನ ಸಹೋದರರು ದೇವರಿಗೆ ನಿಷ್ಠೆ ತೋರಿಸದ್ದಕ್ಕಾಗಿ ಪಟ್ಟ ಕಷ್ಟಗಳ ಬಗ್ಗೆ ಅನುಭವಗಳನ್ನು ಶೇಖರಿಸುವಂತೆ ಹೇಳಿದರು.b

ಥಾಮಸ್‌ ಮತ್ತು ಬೆತೆಲ್‌ ಮಕ್ಲೇನ್‌ ತಮ್ಮ ಮೊಮ್ಮಕ್ಕಳ ಜೊತೆ ಸೇವೆ ಮಾಡುತ್ತಿದ್ದಾರೆ

ಸೇವೆಯಲ್ಲಿ ಮೊಮ್ಮಕ್ಕಳ ಜೊತೆ

2005⁠ರಲ್ಲಿ ಆಫ್ರಿಕಾವನ್ನು ಬಿಟ್ಟು ಬರುವಾಗ ತುಂಬ ದುಃಖವಾಯಿತು. ಕೊಲರಾಡೊದ ಬಾಸಲ್ಟ್‌ಗೆ ಬಂದು ಪಯನೀಯರ್‌ ಸೇವೆ ಮುಂದುವರಿಸಿದೆವು. 2006⁠ರಲ್ಲಿ ಬ್ರಾಯನ್‌ ಮತ್ತು ಕಿಂಬರ್ಲೀ ನಮ್ಮ ಮನೆಯ ಹತ್ತಿರವೇ ಮನೆ ಮಾಡಿದರು. ಅವರಿಗೂ ಇಬ್ಬರು ಹೆಣ್ಣಮಕ್ಕಳು ಮೆಕೆನ್‌ಜಿ ಮತ್ತು ಎಲಿಜಬೆತ್‌. ಪೌಲ್‌ ಮತ್ತು ಸ್ಟೆಫನೀ ಮಲಾವಿಯಲ್ಲೇ ಇದ್ದಾರೆ. ಪೌಲ್‌ ಅಲ್ಲಿನ ಬ್ರಾಂಚ್‌ ಕಮಿಟಿಯಲ್ಲಿ ಕೆಲಸಮಾಡುತ್ತಾನೆ. ನನಗೀಗ 80 ವರ್ಷ ಆಗುತ್ತಾ ಬಂತು. ನಾನು ನಿರ್ವಹಿಸುತ್ತಿದ್ದ ಜವಾಬ್ದಾರಿಗಳನ್ನು ಈಗ ಯುವ ಸಹೋದರರು ಮಾಡುವುದನ್ನು ನೋಡುವಾಗ ತುಂಬ ಖುಶಿಯಾಗುತ್ತದೆ. ಇನ್ನೂ ಹೆಚ್ಚು ಸಂತೋಷ ತಂದ ವಿಷಯ ಏನೆಂದರೆ, ನಾವು ಒಳ್ಳೇ ಮಾದರಿಯನ್ನು ಅನುಕರಿಸುತ್ತಾ ಇರಲು ಪ್ರಯತ್ನಿಸಿದರಿಂದ ಇಂದು ನಮ್ಮ ಮಕ್ಕಳೂ ಮೊಮ್ಮಕ್ಕಳೂ ಪ್ರಯೋಜನ ಪಡೆಯುತ್ತಿದ್ದಾರೆ.

a ಸಹೋದರ ಸ್ಟೀಲ್‌ ಅವರ ಕುಟುಂಬ ಮಾಡಿದ ಮಿಷನರಿ ಸೇವೆಯ ಬಗ್ಗೆ ತಿಳಿಯಲು 1956 ಮೇ 1⁠ರ ಕಾವಲಿನಬುರುಜುವಿನ (ಇಂಗ್ಲಿಷ್‌) ಪುಟ 269⁠ರಿಂದ 272 ಮತ್ತು 1971 ಮಾರ್ಚ್‌ 15⁠ರ ಕಾವಲಿನಬುರುಜುವಿನ (ಇಂಗ್ಲಿಷ್‌) ಪುಟ 186⁠ರಿಂದ 190⁠ನ್ನು ಓದಿ.

b 2015⁠ರ ಏಪ್ರಿಲ್‌ ಕಾವಲಿನಬುರುಜುವಿನ ಪುಟ 14-18⁠ರಲ್ಲಿ ಟ್ರಾಫಿಮ್‌ ಸ್ಸಾಂಬಾ ಎಂಬವರ ಜೀವನ ಕಥೆ ಓದಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ