ಹೆಚ್ಚಿನ ಪ್ರಮುಖ ಧರ್ಮಗಳವರು ಮಾನವರಿಗೆ ಅಮರ ಆತ್ಮ ಇದೆ ಎಂದು ನಂಬುತ್ತಾರೆ
ಮುಖಪುಟ ಲೇಖನ | ಜೀವನ ಮತ್ತು ಮರಣ ಇದರ ಬಗ್ಗೆ ಬೈಬಲಿನ ದೃಷ್ಟಿಕೋನ
ಒಗಟಿನಂಥ ಪ್ರಶ್ನೆ
ಸಾವು ಮತ್ತು ಬದುಕಿನ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯ ಇದೆ. ಕೆಲವರ ಪ್ರಕಾರ ಒಬ್ಬ ವ್ಯಕ್ತಿ ಸತ್ತ ಮೇಲೂ ಬೇರೆ ಯಾವುದೋ ರೂಪದಲ್ಲಿ ಅಥವಾ ಯಾವುದೋ ಜಾಗದಲ್ಲಿ ಜೀವಿಸುತ್ತಾನೆ. ಇನ್ನು ಕೆಲವರು, ಒಬ್ಬ ವ್ಯಕ್ತಿ ಸತ್ತ ಮೇಲೆ ಅವನು ಪುನರ್ಜನ್ಮ ಪಡೆಯುತ್ತಾನೆ ಅನ್ನುತ್ತಾರೆ. ಆದರೆ ಸಾವು ಅನ್ನೋದೇ ಕೊನೆ ಅನ್ನೋ ಜನರೂ ಇದ್ದಾರೆ.
ನೀವು ಬೆಳೆದು ಬಂದ ಸಮಾಜ ಮತ್ತು ಸಂಸ್ಕೃತಿಗನುಸಾರ ಸಾವಿನ ನಂತರ ಏನಾಗುತ್ತೆ ಅನ್ನೋದರ ಬಗ್ಗೆ ನಿಮಗೆ ನಿಮ್ಮದೇ ಆದ ಅಭಿಪ್ರಾಯ ಇರಬಹುದು. ಒಗಟಿನಂತಿರುವ ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ಥರ ಹೇಳುತ್ತಿರುವುದರಿಂದ ಸತ್ಯ ಏನೆಂದು ಯಾರಿಂದ ಅಥವಾ ಎಲ್ಲಿ ತಿಳಿದುಕೊಳ್ಳಬಹುದು?
ಅನೇಕ ಶತಮಾನಗಳಿಂದ ಧಾರ್ಮಿಕ ಮುಖಂಡರು ಅಮರ ಆತ್ಮದ ಸಿದ್ಧಾಂತವನ್ನು ಕಲಿಸುತ್ತಾ ಬಂದಿದ್ದಾರೆ. ಕ್ರೈಸ್ತ, ಹಿಂದು, ಯೆಹೂದಿ, ಇಸ್ಲಾಂ ಮತ್ತು ಇತರ ಪ್ರಮುಖ ಧರ್ಮಗಳವರು ಅಮರ ಆತ್ಮವನ್ನು ನಂಬುತ್ತಾರೆ. ಸತ್ತ ನಂತರ ವ್ಯಕ್ತಿಯ ಆತ್ಮವು ಆತನ ದೇಹವನ್ನು ಬಿಟ್ಟು ಇನ್ನೂ ಜೀವಿಸುತ್ತಾ ಇರುತ್ತದೆ ಎನ್ನುವುದು ಅವರ ನಂಬಿಕೆ. ಬೌದ್ಧ ಧರ್ಮದಲ್ಲಿ, ಒಬ್ಬ ವ್ಯಕ್ತಿ ಅನೇಕ ಜನ್ಮಗಳನ್ನು ತಾಳುತ್ತಾ ಅವನ ಶಕ್ತಿ ಅಥವಾ ಮನಸ್ಸು ಸಂತೋಷದ ಸ್ಥಿತಿಗೆ ಅಂದರೆ ನಿರ್ವಾಣ ಸ್ಥಿತಿಗೆ ತಲುಪುತ್ತದೆ ಎಂಬ ನಂಬಿಕೆ ಇದೆ.
ಈ ಎಲ್ಲಾ ಬೋಧನೆಗಳಿಂದಾಗಿ ಹೆಚ್ಚಿನ ಜನರು ಸಾವು ಅನ್ನೋದು ಮತ್ತೊಂದು ಜೀವನಕ್ಕೆ ದಾರಿಯಾಗಿದೆ ಅಂತ ನಂಬುತ್ತಾರೆ. ಹಾಗಾಗಿ ಸಾವು ಜೀವನದಲ್ಲಿ ಒಂದು ಪ್ರಾಮುಖ್ಯ ಹಂತ ಮತ್ತು ಅದು ದೇವರ ಚಿತ್ತ ಎಂದು ನೆನೆಸುತ್ತಾರೆ. ಆದರೆ ಇದರ ಬಗ್ಗೆ ಬೈಬಲ್ ಏನು ಹೇಳುತ್ತದೆ? ಉತ್ತರಕ್ಕಾಗಿ ಮುಂದಿನ ಲೇಖನ ಓದಿ. ಉತ್ತರ ತಿಳಿದರೆ ನಿಮಗೆ ಖಂಡಿತ ಆಶ್ಚರ್ಯ ಆಗುತ್ತೆ.