ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w17 ಫೆಬ್ರವರಿ ಪು. 31-32
  • “ಯಾವ ರಸ್ತೆಯೂ ಕಷ್ಟವಲ್ಲ, ಯಾವ ಸ್ಥಳವೂ ದೂರವಲ್ಲ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಯಾವ ರಸ್ತೆಯೂ ಕಷ್ಟವಲ್ಲ, ಯಾವ ಸ್ಥಳವೂ ದೂರವಲ್ಲ”
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಉಪಶೀರ್ಷಿಕೆಗಳು
  • ಪಯನೀಯರರು ದಾರಿ ಸಿದ್ಧಪಡಿಸುತ್ತಾರೆ
  • ಸಮಸ್ಯೆಗಳನ್ನು ಜಯಿಸಿದರು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
w17 ಫೆಬ್ರವರಿ ಪು. 31-32
1933⁠ರಲ್ಲಿ ಆಸ್ಟೆಲಿಯದ ನಾರ್ದನ್‌ ಟೆರಿಟರಿಯಲ್ಲಿ ಜಾರ್ಜ್‌ ರೋಲ್ಸ್‌ಟನ್‌ ಮತ್ತು ಆರ್ಥರ್‌ ವಿಲಿಸ್‌ ತಮ್ಮ ಕಾರಿನ ರೇಡಿಯೇಟರ್‌ನಲ್ಲಿ ನೀರು ತುಂಬಿಸುತ್ತಿದ್ದಾರೆ

ಪಯನೀಯರರಾದ ಜಾರ್ಜ್‌ ರೋಲ್ಸ್‌ಟನ್‌ ಮತ್ತು ಆರ್ಥರ್‌ ವಿಲಿಸ್‌ ತಮ್ಮ ಕಾರಿನ ರೇಡಿಯೇಟರ್‌ನಲ್ಲಿ ನೀರು ತುಂಬಿಸುತ್ತಿದ್ದಾರೆ.—ನಾರ್ದನ್‌ ಟೆರಿಟರಿ, 1933

ನಮ್ಮ ಸಂಗ್ರಹಾಲಯ

“ಯಾವ ರಸ್ತೆಯೂ ಕಷ್ಟವಲ್ಲ, ಯಾವ ಸ್ಥಳವೂ ದೂರವಲ್ಲ”

ಮಾರ್ಚ್‌ 26, 1937. ಧೂಳು ಹಿಡಿದ ಒಂದು ಟ್ರಕ್ಕು ನಿಧಾನವಾಗಿ ಆಸ್ಟ್ರೇಲಿಯದ ಸಿಡ್ನಿ ನಗರವನ್ನು ಪ್ರವೇಶಿಸಿತು. ಅದನ್ನು ಚಲಾಯಿಸುತ್ತಿದ್ದ ಇಬ್ಬರು ಪುರುಷರು ಪ್ರಯಾಣ ಮಾಡಿ ಸುಸ್ತಾಗಿದ್ದರು. ಒಂದು ವರ್ಷದ ಹಿಂದೆ ಈ ನಗರದಿಂದ ಹೊರಟಿದ್ದ ಇವರು ಆಸ್ಟ್ರೇಲಿಯ ಖಂಡದಲ್ಲಿ ಸುಮಾರು 19,300 ಕಿ.ಮೀ. ಪ್ರಯಾಣಿಸಿದ್ದರು. ತುಂಬ ದೂರ ದೂರದ, ಒಡ್ಡೊಡ್ಡಾದ ಪ್ರದೇಶಗಳಿಗೆ ಹೋಗಿದ್ದರು. ಇವರು ಹೊಸಹೊಸ ಪ್ರದೇಶಗಳನ್ನು ಕಂಡುಹಿಡಿಯಲಿಕ್ಕಾಗಿ ಹೋಗಿರಲಿಲ್ಲ ಅಥವಾ ಏನೋ ಸಾಹಸ ಮಾಡಲಿಕ್ಕಂತ ಹೋಗಿರಲೂ ಇಲ್ಲ. ಇವರು ಹುರುಪಿನ ಪಯನೀಯರರಾಗಿದ್ದರು. ದೇವರ ರಾಜ್ಯದ ಸುವಾರ್ತೆಯನ್ನು ಆಸ್ಟ್ರೇಲಿಯದ ವಿಶಾಲವಾದ ಹಿನ್ನಾಡಿನಲ್ಲಿ ಸಾರಬೇಕೆಂಬ ದೃಢಮನಸ್ಸು ಇವರಿಗಿತ್ತು. ಇವರ ಹೆಸರು ಆರ್ಥರ್‌ ವಿಲಿಸ್‌ ಮತ್ತು ಬಿಲ್‌ ನ್ಯೂಲಂಡ್ಸ್‌. ಇವರಂತೆ ಬೇರೆ ಪಯನೀಯರರೂ ಹುರುಪಿನಿಂದ ಸಾರಿದರು.

ಆಸ್ಟ್ರೇಲಿಯದಲ್ಲಿದ್ದ ಬೈಬಲ್‌ ವಿದ್ಯಾರ್ಥಿಗಳa ಚಿಕ್ಕ ಗುಂಪು 1920⁠ರ ದಶಕದ ಕೊನೆ ಭಾಗದ ತನಕ ಕರಾವಳಿ ತೀರದಲ್ಲಿದ್ದ ದೊಡ್ಡ ನಗರಗಳಲ್ಲಿ, ಚಿಕ್ಕ ಪಟ್ಟಣಗಳಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸಾರಿತ್ತು. ಯೇಸುವಿನ ಹಿಂಬಾಲಕರಾದ ಈ ಸಹೋದರರಿಗೆ ‘ಭೂಮಿಯ ಕಟ್ಟಕಡೆಯ ವರೆಗೂ’ ಆತನ ಬಗ್ಗೆ ಸಾಕ್ಷಿಕೊಡಬೇಕೆಂದೂ ಗೊತ್ತಿತ್ತು. (ಅ. ಕಾ. 1:8) ಇದರರ್ಥ ಅವರು ದೂರದಲ್ಲಿರುವ ಆಸ್ಟ್ರೇಲಿಯದ ಹಿನ್ನಾಡಿನಲ್ಲೂ ಸಾರಬೇಕಿತ್ತು. ಆಸ್ಟ್ರೇಲಿಯದ ಹಿನ್ನಾಡು ಆ ಖಂಡದ ಒಳನಾಡಿನ ಪ್ರದೇಶವಾಗಿದ್ದು, ಅಲ್ಲಿ ಜನ ತೀರ ಕಡಿಮೆ, ಮನೆಗಳೂ ತುಂಬ ದೂರದೂರ. ಇದೊಂದು ಒಣಪ್ರದೇಶ. ಭಾರತಕ್ಕಿಂತ ಸುಮಾರು ಎರಡು ಪಟ್ಟು ದೊಡ್ಡದು. ಆದರೆ ಇಷ್ಟು ದೊಡ್ಡ ಪ್ರದೇಶದಲ್ಲಿ ಅವರು ಸಾರುವ ಕೆಲಸವನ್ನು ಮಾಡುವುದು ಹೇಗೆ? ಯೆಹೋವನು ತಮ್ಮ ಪ್ರಯತ್ನವನ್ನು ಆಶೀರ್ವದಿಸುವನೆಂಬ ಪೂರ್ಣ ನಂಬಿಕೆಯಿಂದ ಅವರು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡುವ ದೃಢನಿರ್ಣಯ ಮಾಡಿದರು.

ಪಯನೀಯರರು ದಾರಿ ಸಿದ್ಧಪಡಿಸುತ್ತಾರೆ

1929⁠ರಲ್ಲಿ ಕ್ವೀನ್ಸ್‌ಲ್ಯಾಂಡ್‌ ಮತ್ತು ಪಶ್ಚಿಮ ಆಸ್ಟ್ರೇಲಿಯದಲ್ಲಿದ್ದ ಸಭೆಗಳ ಸಹೋದರರು ದೂರದೂರದ ಪ್ರದೇಶಗಳಿಗೆ ಹೋಗಿ ಸಾರಲು ಬೇಕಾದ ವ್ಯವಸ್ಥೆ ಇದ್ದ ಮೋಟಾರ್‌ ವ್ಯಾನ್‌ಗಳನ್ನು ಸಿದ್ಧಪಡಿಸಿದರು. ಈ ವ್ಯಾನ್‌ಗಳನ್ನು ಓಡಿಸುತ್ತಿದ್ದವರು ಗಟ್ಟಿಮುಟ್ಟಾದ ಪಯನೀಯರರಾಗಿದ್ದರು. ಅವರು ಹೋಗಬೇಕಾಗಿದ್ದ ಸ್ಥಳಗಳಲ್ಲಿನ ಕಷ್ಟಕರ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಶಕ್ತರಾಗಿದ್ದರು. ಅವರು ಬಳಸುತ್ತಿದ್ದ ವಾಹನಗಳು ಕೆಟ್ಟುಹೋದಾಗ ಅದನ್ನು ರಿಪೇರಿ ಮಾಡಲೂ ಅವರಿಗೆ ಗೊತ್ತಿತ್ತು. ಹಿಂದೆ ಯಾವತ್ತೂ ಸಾಕ್ಷಿಗಳು ಹೋಗಿರದಂಥ ಅನೇಕ ಸ್ಥಳಗಳಿಗೆ ಹೋಗಿ ಸಾರಿದರು.

ವಾಹನ ಕೊಂಡುಕೊಳ್ಳಲು ಹಣ ಇಲ್ಲದಿದ್ದ ಪಯನೀಯರರು ದೂರದ ಪ್ರದೇಶಗಳಿಗೆ ಸೈಕಲಲ್ಲಿ ಹೋಗಿ ಸಾರಿದರು. ಉದಾಹರಣೆಗೆ, 1932⁠ರಲ್ಲಿ 23 ವರ್ಷದ ಬೆನೆಟ್‌ ಬ್ರಿಕಲ್‌ ಎಂಬವರು ಕ್ವೀನ್ಸ್‌ಲ್ಯಾಂಡ್‌ ರಾಜ್ಯದ ರಾಕ್‌ಹ್ಯಾಂಪ್ಟನ್‌ನಿಂದ ಸೈಕಲಲ್ಲಿ ಹೊರಟರು. ಆ ರಾಜ್ಯದ ಉತ್ತರ ಭಾಗದಲ್ಲಿನ ದೂರದ ಪ್ರದೇಶದಲ್ಲಿ 5 ತಿಂಗಳ ವರೆಗೆ ಸಾರಬೇಕೆಂಬ ಉದ್ದೇಶ ಅವರದ್ದಾಗಿತ್ತು. ಸೈಕಲಲ್ಲಿ ಕಂಬಳಿಗಳು, ಬಟ್ಟೆಬರೆ, ಆಹಾರ, ಪುಸ್ತಕಗಳನ್ನು ಹೇರಿಕೊಂಡು ಹೊರಟರು. ಟೈರು ಸವೆದುಹೋದಾಗಲೂ ತಮ್ಮ ಕೆಲಸ ನಿಲ್ಲಿಸದೆ ಮುಂದೆ ಸಾಗಿದರು. ಯೆಹೋವನು ತನ್ನನ್ನು ಮಾರ್ಗದರ್ಶಿಸುವನೆಂಬ ದೃಢಭರವಸೆ ಅವರಿಗಿತ್ತು. ಅವರ ಆ ಸಾರುವ ಸಂಚಾರದ ಕೊನೆಯ 320 ಕಿ.ಮೀ. ಸೈಕಲ್‌ ತಳ್ಳಿಕೊಂಡೇ ಹೋದರು. ಅವರು ದಾಟಿಬಂದ ಆ ಕ್ಷೇತ್ರದಲ್ಲಿ ಹಿಂದೆ ಎಷ್ಟೋ ಮಂದಿ ಬಾಯಾರಿಕೆಯಿಂದ ಸತ್ತುಹೋಗಿದ್ದರು! ಮುಂದಿನ 30 ವರ್ಷಗಳಲ್ಲಿ ಸಹೋದರ ಬ್ರಿಕಲ್‌ ಇಡೀ ಆಸ್ಟ್ರೇಲಿಯ ಖಂಡದಲ್ಲಿ ಸೈಕಲು, ಬೈಕು, ಕಾರು ಬಳಸಿ ಸಾವಿರಾರು ಕಿಲೊಮೀಟರ್‌ ದೂರ ಪ್ರಯಾಣಮಾಡಿ ಸಾರಿದರು. ಆಸ್ಟ್ರೇಲಿಯದ ಆದಿವಾಸಿಗಳ ಪ್ರದೇಶಗಳಲ್ಲೂ ಸಾರುವ ಕೆಲಸವನ್ನು ಶುರುಮಾಡಿದರು. ಅಲ್ಲಿ ಹೊಸ ಸಭೆಗಳನ್ನು ಸ್ಥಾಪಿಸಲು ಸಹಾಯಮಾಡಿದರು. ಆದ್ದರಿಂದ ಆ ಹಿನ್ನಾಡಿನಲ್ಲಿ ಅವರೆಂದರೆ ಎಲ್ಲರಿಗೂ ಪರಿಚಯ. ಎಲ್ಲರಿಗೂ ತುಂಬ ಗೌರವ.

ಸಮಸ್ಯೆಗಳನ್ನು ಜಯಿಸಿದರು

ಲೋಕದಲ್ಲಿ ತುಂಬ ಕಡಿಮೆ ಜನಸಂಖ್ಯೆಯಿರುವ ದೇಶಗಳಲ್ಲಿ ಆಸ್ಟ್ರೇಲಿಯ ಒಂದು. ಹಿನ್ನಾಡಿನಲ್ಲಂತೂ ತೀರ ಕಡಿಮೆ ಜನರಿದ್ದಾರೆ. ಅವರನ್ನು ಹುಡುಕಿಕೊಂಡು ಹೋಗಿ ಸಾರಲು ಯೆಹೋವನ ಜನರು ದೃಢಮನಸ್ಸು ತೋರಿಸಿದರು.

ಇಂಥ ದೃಢಮನಸ್ಸನ್ನು ಸ್ಟೂವರ್ಟ್‌ ಕೆಲ್ಟೀ ಮತ್ತು ವಿಲ್ಯಮ್‌ ಟೊರಿಂಗ್ಟನ್‌ ಎಂಬ ಪಯನೀಯರರೂ ತೋರಿಸಿದರು. 1933⁠ರಲ್ಲಿ ಅವರು ಆಸ್ಟ್ರೇಲಿಯ ಖಂಡದ ಮಧ್ಯಭಾಗದಲ್ಲಿರುವ ಆ್ಯಲಿಸ್‌ ಸ್ಪ್ರಿಂಗ್ಸ್‌ ಎಂಬ ಪಟ್ಟಣದಲ್ಲಿ ಸಾರಲಿಕ್ಕಾಗಿ ಮರಳುದಿಬ್ಬಗಳಿಂದ ತುಂಬಿದ್ದ ವಿಶಾಲವಾದ ಸಿಂಪ್ಸನ್‌ ಮರುಭೂಮಿಯನ್ನು ದಾಟಬೇಕಾಯಿತು! ಅವರ ಚಿಕ್ಕ ಕಾರು ಕೆಟ್ಟುಹೋದಾಗ ಅದನ್ನು ಅಲ್ಲೇ ಬಿಟ್ಟುಬಿಟ್ಟರು. ಸಹೋದರ ಕೆಲ್ಟೀಯವರಿಗೆ ಮರದ ಕಾಲಿದ್ದರೂ ಒಂಟೆ ಮೇಲೆ ಪ್ರಯಾಣಿಸುತ್ತಾ ಸಾರುವ ಕೆಲಸವನ್ನು ಮುಂದುವರಿಸಿದರು! ಈ ಪಯನೀಯರರ ಪ್ರಯತ್ನಗಳಿಗೆ ಪ್ರತಿಫಲ ಸಿಕ್ಕಿತು. ಅವರು ದೂರದ ಪ್ರದೇಶವೊಂದರಲ್ಲಿನ ರೈಲ್ವೇ ನಿಲ್ದಾಣವಾದ ವಿಲ್ಯಮ್‌ ಕ್ರೀಕ್‌ ಎಂಬಲ್ಲಿ ಹೋಟೆಲ್‌ ಮಾಲೀಕರಾದ ಚಾರ್ಲ್ಸ್‌ ಬರ್ನಾಟರನ್ನು ಭೇಟಿಮಾಡಿದರು. ಈ ಚಾರ್ಲ್ಸ್‌ ಸ್ವಲ್ಪ ಸಮಯದ ನಂತರ ಸತ್ಯವನ್ನು ಸ್ವೀಕರಿಸಿದರು. ತಮ್ಮ ಹೋಟೆಲನ್ನು ಮಾರಿ, 15 ವರ್ಷ ಒಬ್ಬರೇ ಪಯನೀಯರ್‌ ಸೇವೆ ಮಾಡಿದರು. ಇವರು ಆಸ್ಟ್ರೇಲಿಯದಲ್ಲಿ ಅತಿ ಶುಷ್ಕವಾದ ಮತ್ತು ತಲಪಲು ತುಂಬ ಕಷ್ಟವಾದ ದೂರದ ಪ್ರದೇಶಗಳಿಗೆ ಹೋಗಿ ಸಾರಿದರು.

1936⁠ರಲ್ಲಿ ಆರ್ಥರ್‌ ವಿಲಿಸ್‌ ಆಸ್ಟೆಲಿಯದ ಹಿನ್ನಾಡಿನಲ್ಲಿ ಸಾರುವ ಸಂಚಾರಕ್ಕೆ ಹೊರಡಲು ತಯಾರಾಗುತ್ತಿದ್ದಾರೆ

ಆರ್ಥರ್‌ ವಿಲಿಸ್‌ ಆಸ್ಟ್ರೇಲಿಯದ ಹಿನ್ನಾಡಿನಲ್ಲಿ ಸಾರುವ ಸಂಚಾರಕ್ಕೆ ಹೊರಡಲು ತಯಾರಾಗುತ್ತಿದ್ದಾರೆ.—ಪರ್ತ್‌, ಪಶ್ಚಿಮ ಆಸ್ಟ್ರೇಲಿಯ, 1936

ಆ ಕಾಲದ ಪಯನೀಯರರಿಗೆ ಎದುರಾದ ಅನೇಕ ಸಮಸ್ಯೆಗಳನ್ನು ಜಯಿಸಲು ಖಂಡಿತವಾಗಿ ಧೈರ್ಯ ಮತ್ತು ಛಲ ಬೇಕಿತ್ತು. ಲೇಖನದ ಆರಂಭದಲ್ಲಿ ತಿಳಿಸಲಾದ ಆರ್ಥರ್‌ ವಿಲಿಸ್‌ ಮತ್ತು ಬಿಲ್‌ ನ್ಯೂಲಂಡ್ಸ್‌ ಆಸ್ಟ್ರೇಲಿಯದ ಹಿನ್ನಾಡಿನಲ್ಲಿ ಒಮ್ಮೆ ಬರೀ 32 ಕಿ.ಮೀ. ಪ್ರಯಾಣ ಮಾಡಲಿಕ್ಕೆ ಎರಡು ವಾರ ಹಿಡಿಯಿತು! ಭಾರೀ ಮಳೆಯಿಂದಾಗಿ ಆ ಮರುಭೂಮಿಯು ಕಣ್ಣು ಹಾಯಿಸುವಷ್ಟು ದೂರದ ವರೆಗೆ ಕೆಸರುಕೆಸರಾಗಿತ್ತು. ಒಮ್ಮೊಮ್ಮೆ ಅವರು ಸುಡುಸುಡು ಬಿಸಿಲಲ್ಲಿ ಬೆವರು ಸುರಿಸುತ್ತಾ, ಕಷ್ಟಪಡುತ್ತಾ ಟ್ರಕ್ಕನ್ನು ದೊಡ್ಡದೊಡ್ಡ ಮರಳುದಿಬ್ಬಗಳ ಮೇಲೆ ದೂಡಿಕೊಂಡು ಹೋಗಬೇಕಾಗುತ್ತಿತ್ತು. ಬಂಡೆಗಳಿಂದ ತುಂಬಿದ್ದ ಕಣಿವೆಗಳನ್ನು ಹಾಗೂ ಮರಳುತುಂಬಿದ್ದ ನದೀತಳವನ್ನು ದಾಟಬೇಕಿತ್ತು. ಅವರ ಟ್ರಕ್ಕು ಆಗಾಗ ಕೆಟ್ಟುಹೋಗುತ್ತಿತ್ತು. ಎಷ್ಟೋ ದಿನಗಳ ವರೆಗೆ ನಡೆದುಕೊಂಡು ಅಥವಾ ಸೈಕಲಿನಲ್ಲಿ ಹತ್ತಿರದ ಪಟ್ಟಣಕ್ಕೆ ಹೋಗುತ್ತಿದ್ದರು. ಅಲ್ಲಿ ಅವರು ಹೊಸ ಬಿಡಿಭಾಗಗಳಿಗಾಗಿ ಅನೇಕ ವಾರಗಳ ತನಕ ಕಾಯಬೇಕಾಗುತ್ತಿತ್ತು. ಇಷ್ಟೆಲ್ಲ ಕಷ್ಟಗಳಿದ್ದರೂ ಪಯನೀಯರರು ಸಕಾರಾತ್ಮಕ ಮನೋಭಾವ ಇಟ್ಟುಕೊಂಡರು. ದ ಗೋಲ್ಡನ್‌ ಏಜ್‌ ಪತ್ರಿಕೆಯಲ್ಲಿ ಬಂದಂಥ ಒಂದು ಹೇಳಿಕೆಯ ಸಾರಾಂಶವನ್ನು ಆರ್ಥರ್‌ ವಿಲಿಸ್‌ ಈ ಮಾತುಗಳಲ್ಲಿ ಹೇಳಿದರು: “ಆತನ ಸಾಕ್ಷಿಗಳಿಗೆ ಯಾವ ರಸ್ತೆಯೂ ಕಷ್ಟವಲ್ಲ, ಯಾವ ಸ್ಥಳವೂ ದೂರವಲ್ಲ.”

ತುಂಬ ಸಮಯದಿಂದ ಪಯನೀಯರ್‌ ಆಗಿರುವ ಚಾರ್ಲ್ಸ್‌ ಹ್ಯಾರಿಸ್‌ ಎಂಬವರೂ ಹಿನ್ನಾಡಿನಲ್ಲಿ ಸೇವೆಮಾಡಿದ್ದರು. ಅಲ್ಲಿದ್ದಾಗ ಅವರಿಗಾಗುತ್ತಿದ್ದ ಒಂಟಿ ಭಾವನೆ ಮತ್ತು ಪಡಬೇಕಾದ ಶ್ರಮದಿಂದ ಅವರು ಯೆಹೋವನಿಗೆ ಹೆಚ್ಚು ಆಪ್ತರಾದರು ಎಂದು ವಿವರಿಸಿದರು. ಅವರು ಹೀಗೂ ಹೇಳಿದರು: “ಹೆಚ್ಚು ಆಸ್ತಿಪಾಸ್ತಿ ಇಲ್ಲದಿದ್ದರೆ ಜೀವನ ಚೆನ್ನಾಗಿರುತ್ತದೆ. ಅಗತ್ಯಬಿದ್ದರೆ ಯೇಸು ಬಯಲಿನಲ್ಲಿ ಮಲಗಲೂ ಸಿದ್ಧನಿದ್ದನು. ನಮ್ಮ ನೇಮಕ ಅಗತ್ಯಪಡಿಸಿದರೆ ನಾವೂ ಅದನ್ನು ಮಾಡಲು ಸಿದ್ಧರಿರಬೇಕಲ್ಲವಾ?” ಅನೇಕ ಪಯನೀಯರರು ಇದನ್ನೇ ಮಾಡಿದರು. ಅವರು ಪಟ್ಟುಬಿಡದೆ ಮಾಡಿದಂಥ ಕೆಲಸದಿಂದಾಗಿ ಇಂದು ಆ ಖಂಡದ ಮೂಲೆಮೂಲೆಗೂ ಸುವಾರ್ತೆ ತಲಪಿದೆ. ಲೆಕ್ಕವಿಲ್ಲದಷ್ಟು ಮಂದಿ ದೇವರ ರಾಜ್ಯದ ಪಕ್ಷ ಸೇರಲು ಸಾಧ್ಯವಾಗಿದೆ.

a ಬೈಬಲ್‌ ವಿದ್ಯಾರ್ಥಿಗಳು ‘ಯೆಹೋವನ ಸಾಕ್ಷಿಗಳು’ ಎಂಬ ಹೆಸರನ್ನು 1931⁠ರಲ್ಲಿ ಸ್ವೀಕರಿಸಿದರು.—ಯೆಶಾ. 43:10.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ