ನಿಮ್ಮ ಆತ್ಮಿಕ ಅಗತ್ಯತೆಯನ್ನು ತೃಪ್ತಿಗೊಳಿಸುವುದು
1 “ತಮ್ಮ ಆತ್ಮಿಕ ಅಗತ್ಯತೆಗಳ ಪ್ರಜ್ಞೆಯುಳ್ಳವರು ಧನ್ಯರು” ಎಂದು ಯೇಸು ಹೇಳಿದ್ದಾನೆ.” (ಮತ್ತಾ. 5:3) ನಮ್ಮ ಆತ್ಮಿಕ ಅಗತ್ಯತೆಗಳ ಕುರಿತು ಪ್ರಜ್ಞೆಯಿಂದಿರುವುದು ಅಷ್ಟು ಮಹತ್ವದ್ದೇಕೆ? ಅದರ ಪ್ರಜ್ಞೆಯು ನಮಗಿದೆ ಎಂದು ನಾವು ಹೇಗೆ ತೋರಿಸುತ್ತೇವೆ? ಯಾವ ಅಪಾಯಗಳನ್ನು ನಾವು ಎದುರಿಸಬೇಕು ಮತ್ತು ಆತ್ಮಿಕ ಅಗತ್ಯತೆಗಳ ಪ್ರಜ್ಞೆ ಇರುವದರಿಂದ ಯಾವ ಆಶೀರ್ವಾದಗಳು ಫಲಿಸುವವು?
2 ನಮ್ಮ ಶಾರೀರಿಕ ಸೌಖ್ಯ ಮತ್ತು ಯೋಗ್ಯ ಆಹಾರದ ನಡುವಣ ಸಂಬಂಧವು ನಮಗೆಲ್ಲರಿಗೆ ತಿಳಿದದೆಂಬದಕ್ಕೆ ಸಂದೇಹವಿಲ್ಲ. ವ್ಯಕ್ತಿಯೊಬ್ಬನು ತನ್ನ ಶಾರೀರಿಕ ಅಗತ್ಯತೆಯನ್ನು ಸದಾ ಅಸಡ್ಡೆ ಮಾಡುತ್ತಾ ಬಂದರೆ, ದಿನದಿನವೂ ಗುಣಮಟ್ಟದ ಕೆಲ್ಸವನ್ನು ಮಾಡಲಾರನು. ಆತ್ಮಿಕವಾಗಿ ನಾವು ನಮ್ಮನ್ನು ಉಣಿಸಲು ಅಲಕ್ಷ ಮಾಡಿದಾಗಲೂ ಇದೇ ತತ್ವವು ಅನ್ವಯಿಸುತ್ತದೆ.—ಮತ್ತಾ. 4:4; ಯೋಹಾ. 17:3.
ಅಗತ್ಯತೆಗಳನ್ನು ತೃಪ್ತಿಗೊಳಿಸಲು ಕೂಟಗಳು ಸಹಾಯಕಾರಿ
3 ನಮ್ಮ ಆತ್ಮಿಕ ಸೌಖ್ಯ ಮತ್ತು ನಮ್ಮನ್ನು ಆತ್ಮಿಕವಾಗಿ ಉಣಿಸುವ ಕಾರ್ಯಕ್ರಮದ ನಡುವೆ ಒಂದು ನೇರವಾದ ಸಂಬಂಧವು ಇದೆ. ನಮ್ಮ ಕೂಟಗಳಲ್ಲಿ, “ನಂಬಿಗಸ್ತನೂ ವಿವೇಕಿಯೂ ಆದ ಅಳು” ನಮ್ಮ ಹಸಿವನ್ನು ತೃಪ್ತಿಗೊಳಿಸಲು ಉತ್ತಮವಾದ ಆತ್ಮಿಕ ಭೋಜನವನ್ನು ಒದಗಿಸುತ್ತಾನೆ. (ಮತ್ತಾ. 24:45-47) ಪ್ರತಿಯೊಂದು ಕೂಟವು ಒಂದು ವಿಶಿಷ್ಟ ಉದ್ದೇಶವನ್ನು ನಿರ್ವಹಿಸುತ್ತದೆ, ಮತ್ತು ಅದರಲ್ಲಿ ಯಾವುದನ್ನೂ ಅಸಡ್ಡೆಮಾಡಬಾರದು. ನೀವು ಎಲ್ಲಾ ಕೂಟಗಳಿಗಾಗಿ ತಯಾರಿಸುತ್ತೀರೋ ಮತ್ತು ಅವನ್ನು ಕ್ರಮವಾಗಿ ಹಾಜರಾಗುತ್ತೀರೋ?
4 ನಮ್ಮ ಐದು ಸಾಪ್ತಾಹಿಕ ಕೂಟಗಳಲ್ಲಿ ಕೇವಲ ಮೂರನ್ನು ನಾವೀಗ ಸಂಕ್ಷೇಪವಾಗಿ ಚರ್ಚಿಸೋಣ. ಸತ್ಯದ ಪ್ರಗತಿಪಥದಲ್ಲಿ ನಮ್ಮನ್ನು ಸಮನಾಗಿಡುವ ಮುಖ್ಯ ಕೂಟವೇ ಕಾವಲಿನಬುರುಜು ಅಭ್ಯಾಸ. ದೇವಪ್ರಭುತ್ವ ಶಾಲೆಯು ನಮಗೆ ನಿಪುಣ ಶುಶ್ರೂಷಕರಾಗುವಂತೆ ಸಹಾಯ ಕೊಡುತ್ತದೆ. ಸಭಾಪುಸ್ತಕಭ್ಯಾಸವು ವಿವಿಧ ಬೈಬಲ್ ವಿಷಯಗಳ ಜಾಗರೂಕತೆಯ ಅಧ್ಯಯನವನ್ನು ನಮಗೆ ಒದಗಿಸುತ್ತದೆ.
5 ಸಭಾಕೂಟಗಳಿಗೆ ನೀವು ತಯಾರಿಸುತ್ತೀರೋ? ಕೆಲವರು ಅಭ್ಯಾಸದ ಸಮಾಚಾರವನ್ನು ಮೇಲೆಮೇಲೆ ಓದುತ್ತಾ, ಬೇಗನೇ ಪ್ರಶ್ನೆಗಳ ಉತ್ತರಕ್ಕೆ ಅಡಿಗೆರೆ ಹಾಕಿಬಿಡುತ್ತಾರೆ, ಕೊಟ್ಟ ವಚನಗಳನ್ನು ತೆರೆದು ಓದುವುದಿಲ್ಲ. ಸ್ವಲ್ಪ ಮಟ್ಟಿಗೆ ಉತ್ತರ ಕೊಡಲು ಅವರು ತಯಾರಿರಬಹುದು ಆದರೆ, ದೊರೆಯುವ ಆತ್ಮಿಕ ಪೋಷಣೆಯನ್ನು ಅವರು ಪೂರ್ಣ ಪ್ರಮಾಣದಲ್ಲಿ ಪಡೆಯುತ್ತಾರೋ? ನೀವು ಮತ್ತು ನಿಮ್ಮ ಕುಟುಂಬವು ಕೂಟಗಳಿಗಾಗಿ ತಯಾರಿಸುವ ವಿಧಾನದಲ್ಲಿ ಪ್ರಗತಿಗೆ ಅವಕಾಶವಿದೆಯೇ?
ಸಮಯವನ್ನು ಖರೀದಿಸಿರಿ
6 ಕೂಟಗಳ ತಯಾರಿಗಾಗಿ ನೀವು ಸಮಯವನ್ನು ಬದಿಗಿಡುವಾಗ, ಟೀವೀ ಅಥವಾ ಬೇರೆಯಾವುದೇ ಅಲ್ಪ ಮಹತ್ವದ ಚಟುವಟಿಕೆ ನಿಮ್ಮ ಯೋಜನೆಗೆ ಅಡ್ಡಬರುವಂತೆ ಬಿಡಬೇಡಿ. ವಿಶೇಷವಾಗಿ ಕುಟುಂಬ ತಲೆಗಳು, ಕುಟುಂಬವು ಬೈಬಲ್ ಅಧ್ಯಯನ, ಕೂಟಗಳ ತಯಾರಿ, ಮತ್ತು ಕ್ಷೇತ್ರಸೇವೆಯ ಒಂದು ಕ್ರಮದ ಕಾರ್ಯಕ್ರಮಕ್ಕೆ ಅಂಟಿಕೊಳ್ಳುವಂತೆ ನೋಡಿಕೊಳ್ಳಬೇಕು. ‘ಸಮಯವನ್ನು ಬೆಲೆಯುಳ್ಳದೆಂದು ಉಪಯೋಗಿಸಲು’ ಅಪೋಸ್ತಲ ಪೌಲನು ಕೊಟ್ಟ ಸೂಚನೆಯನ್ನು ಎಲ್ಲರೂ ಗಂಭೀರವಾಗಿ ತಕ್ಕೊಂಡು ನಮ್ಮ ಆತ್ಮಿಕತೆಗೆ ಪ್ರಥಮತೆಯನ್ನು ಕೊಡತಕ್ಕದ್ದು.—ಎಫೆ. 5:15-17.
7 ನಮ್ಮ ಆತ್ಮಿಕ ಅಗತ್ಯತೆಯ ಪ್ರಜ್ಞೆಯುಳ್ಳವರಾಗುವ ಮೂಲಕ, ಔದಾಸೀನ್ಯತೆ ಅಥವಾ ಸ್ವಸಂತುಷ್ಟಿಯೆಂಬ ಜಾಲದೊಳಗೆ ಬೀಳುವುದನ್ನು ನಾವು ತಡೆಯುವೆವು. : ಮತ್ತು ಕುಟುಂಬವಾಗಿ ನಮಗೆ ನಿಜ ಆತ್ಮಿಕ ಅಗತ್ಯತೆಗಳಿರುವವು. ನಮ್ಮ ಆತ್ಮಿಕ ಅಗತ್ಯತೆಗಳನ್ನು ತೃಪ್ತಿಗೊಳಿಸಲು ನಾವು ಹಾಕುವ ಪ್ರಯತ್ನಗಳ ಮೇಲೆ ನಮ್ಮ ನಿತ್ಯ ಸಂತೋಷವು ಆಧರಿಸಿದೆ.