ಕೂಟಗಳನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿರಿ ಮತ್ತು ಮುಗಿಸಿರಿ
1 ಎಲ್ಲಾ ಸಭಾಕೂಟಗಳನ್ನು, ಕ್ಷೇತ್ರ ಸೇವೆಗಾಗಿ ಕೂಡುವಿಕೆಗಳನ್ನು ಸಹಾ, ಸರಿಯಾದ ಸಮಯಕ್ಕೆ ಆರಂಭಿಸಬೇಕು ಮತ್ತು ಮುಗಿಸಬೇಕು. ಏಕೆ? ಸಮಯಕ್ಕೆ ಸರಿಯಾಗಿರುವುದು ಕ್ರಮಬದ್ಧತೆಯನ್ನು ತೋರಿಸುತ್ತದೆ ಮತ್ತು ಕೂಟಗಳಿಗೆ ಹಾಜರಾಗುವ ಮತ್ತು ಪಾಲಿಗರಾಗುವ ಎಲ್ಲರಿಗೆ ಪರಿಗಣನೆಯನ್ನು ಸೂಚಿಸುತ್ತದೆ. (ಪ್ರಸಂ. 3:17ಬಿ; 1 ಕೊರಿ. 14:33) ಕೆಳಗಿನ ಮಾರ್ಗದರ್ಶಕಗಳನ್ನು ಪಾಲಿಸುವ ಮೂಲಕ, ಕೂಟಗಳನ್ನು ಸರಿಯಾದ ಸಮಯಕ್ಕೆ ಆರಂಭಿಸುವ ಮತ್ತು ಮುಗಿಸುವ ಕಡೆಗೆ ತಪ್ಪದೆ ಗಮನ ಕೊಡ ಸಾಧ್ಯವಿದೆ.
2 ಇತರರನ್ನು ಭೇಟಿಯಾಗಲು, ಆವಶ್ಯಕ ವಿಷಯಗಳನ್ನು ನಿರ್ವಹಿಸಲು ಮತ್ತು ಪ್ರಾರಂಭದ ಪ್ರಾರ್ಥನೆ ಮತ್ತು ಸಂಗೀತದಲ್ಲಿ ಪಾಲಿಗರಾಗಲು, ನಾವು ಯಾವಾಗಲೂ ಸಾಕಷ್ಟು ಮುಂಚಿತವಾಗಿಯೇ ಕೂಟಗಳಿಗೆ ಬರುವಂತೆ ಪ್ರಯತ್ನಿಸಬೇಕು. ಸಾಮಾನ್ಯವಾಗಿ ಸಂಗೀತ ಮತ್ತು ಪ್ರಾರ್ಥನೆಗಾಗಿ ಐದು ನಿಮಿಷವನ್ನು ಕೊಡಲಾಗುತ್ತದೆ. ಸಭೆಯನ್ನು ಪ್ರಾರ್ಥನೆಯ ಮೂಲಕ ಪ್ರತಿನಿಧಿಸುವವರು, ಕೂಟದ ಈ ಉದ್ದೇಶವನ್ನು ಮನಸ್ಸಿನಲ್ಲಿಡತಕ್ಕದ್ದು ಮತ್ತು ಅದನ್ನು ತಮ್ಮ ಆರಂಭದ ಮತ್ತು ಸಮಾಪ್ತಿಯ ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಬೇಕು. ಅಂಥ ಪ್ರಾರ್ಥನೆಗಳು ಉದ್ದವಾಗಿರಬೇಕಾದ ಅಗತ್ಯವಿಲ್ಲ.
3 ಬಹಿರಂಗ ಭಾಷಣ: ಬಹಿರಂಗ ಭಾಷಣಗಳು 45 ನಿಮಿಷಗಳಿಗೆ ಸೀಮಿತ. ಈ ಸಮಯವನ್ನು ಮೀರಿದರೆ, ಹಿಂಬಾಲಿಸುವ ಕಾವಲಿನಬುರುಜು ಅಭ್ಯಾಸದ ಮೇಲೆ ಪರಿಣಾಮವಾಗುವುದು. ಈ ಎರಡೂ ಕೂಟಗಳು, ಸಂಗೀತ ಮತ್ತು ಪ್ರಾರ್ಥನೆಗಳೂ ಸೇರಿ, ಎರಡು ತಾಸುಗಳಲ್ಲಿ ಮುಗಿಯಬೇಕು. ಬಹಿರಂಗ ಭಾಷಕರು ಸೊಸೈಟಿಯ ಹೊರಮೇರೆಯಲ್ಲಿ ಸೂಚಿತವಾದ ಸಮಯವನ್ನು ಪಾಲಿಸಬೇಕು ಮತ್ತು ವಂದನೆಗಳ ತಿಳಿಸುವಿಕೆಯೇ ಮುಂತಾದ ಬಾಹ್ಯ ವಿಚಾರಗಳನ್ನು ಸೇರಿಸಬಾರದು. ಭಾಷಕನಿಗೆ ರಾಜ್ಯಸಭಾಗೃಹ ಇರುವ ಸ್ಥಳ ಗೊತ್ತಿರದಿದ್ದರೆ, ಮಾರ್ಗದರ್ಶನೆಗಾಗಿ ಮತ್ತು ಪ್ರಯಾಣಕ್ಕೆ ತಗಲುವ ಸಮಯದ ಅಂದಾಜನ್ನು ಅತಿಥೇಯ ಸಭೆಯಿಂದ ಕೇಳಿ ತಿಳಿಯಬೇಕು.
4 “ಕಾವಲಿನಬುರುಜು” ಅಭ್ಯಾಸ: ಕಾವಲಿನಬುರುಜು ಅಭ್ಯಾಸಕ್ಕೆ ಒಂದು ತಾಸನ್ನು ಕೊಡಲಾಗುತ್ತದೆ, ಇದರಲ್ಲಿ ಎಲ್ಲಾ ಪರಿಚ್ಛೇದಗಳು ಓದಲ್ಪಡುತ್ತವೆ ಮತ್ತು ಪರಾಮರ್ಶೆಯ ಪ್ರಶ್ನೆಗಳು ಗಮನಿಸಲ್ಪಡುತ್ತವೆ. ಅಭ್ಯಾಸ ನಿರ್ವಾಹಕನ ಸಂಕ್ಷಿಪ್ತ, ಚುಟುಕಾದ ಪೀಠಿಕಾ ಮಾತುಗಳು ಆಸಕ್ತಿಯನ್ನೆಬ್ಬಿಸಿ, ಪಾಠದೆಡೆಗೆ ನಡಿಸಬೇಕು. ಅಭ್ಯಾಸದ ಸಮಯದಲ್ಲಿ ಅವನ ಹೇಳಿಕೆಗಳು ಮತ್ತು ವೀಕ್ಷಣೆಗಳು ಮಿತವಾಗಿರಬೇಕು. ಸಮಾಚಾರವನ್ನು ವೇಳೆಗೆ ಸರಿಯಾಗಿ ಪಾಲುಮಾಡುವ ಮೂಲಕ, ಅವನು ಮೊದಲರ್ಧದಲ್ಲಿ ಹೆಚ್ಚು ವೇಳೆ ತಕ್ಕೊಂಡು ಅನಂತರ ಕೊನೆಯರ್ಧದಲ್ಲಿ ಅಭ್ಯಾಸವನ್ನು ಓಡಿಸದಂತೆ ಸಹಾಯವಾಗುವುದು.
5 ದೇವಪ್ರಭುತ್ವ ಶುಶ್ರೂಷೆ ಶಾಲೆ: ಇದು 45 ನಿಮಿಷಗಳ ಕೂಟ. ಉಪದೇಶ ಭಾಷಣ ಮತ್ತು ಬೈಬಲ್ ವಾಚನದ ಮುಖ್ಯಾಂಶ ಭಾಷಣಗಳು ವೇಳೆ ಮೀರುವಾಗ ನಿಲ್ಲಿಸಲ್ಪಡದಿದ್ದರೂ, ಈ ನೇಮಕಗಳಿರುವ ಸಹೋದರರು ತಮಗಿರುವ ಸಮಯದೊಳಗೇ ಅವನ್ನು ಮುಗಿಸತಕ್ಕದ್ದು. ಇದನ್ನು ಮಾಡದಾಗ, ಖಾಸಗಿ ಸೂಚನೆಯನ್ನು ಅವರಿಗೆ ಕೊಡಬೇಕು. ಅಲ್ಲದೆ, ಶಾಲಾ ಮೇಲ್ವಿಚಾರಕನಿಂದ ಸೂಚನೆ ಮತ್ತು ಹೇಳಿಕೆಗಳು, ನೇಮಿತ ಸಮಯದೊಳಗೆ ಮುಗಿಯಬೇಕು. ಎಲ್ಲಾ ವಿದ್ಯಾರ್ಥಿಗಳು ವೇದಿಕೆಯ ಸಮೀಪ ಕೂತಿರುವುದಾದರೆ ಮತ್ತು ಪ್ರತಿಯೊಬ್ಬನು ತನಗಿರುವ ವೇಳೆಗೆ ಸರಿಯಾಗಿ ತನ್ನ ಭಾಷಣವನ್ನು ಮುಗಿಸುವುದಾದರೆ ಸಮಯದ ಉಳಿತಾಯವಾಗುವುದು.—1991ರ ದೇವಪ್ರಭುತ್ವ ಶುಶ್ರೂಷೆ ಶಾಲಾ ಶೆಡ್ಯೂಲ್ ನೋಡಿರಿ.
6 ಸೇವಾ ಕೂಟ: ಇದು ಕೂಡಾ 45 ನಿಮಿಷಗಳ ಕೂಟ. ಇದು ಮತ್ತು ದೇವಪ್ರಭುತ್ವ ಶಾಲೆ ಹಾಗೂ ಸಂಗೀತ ಮತ್ತು ಪ್ರಾರ್ಥನೆಗಳ ಇಡೀ ಕಾರ್ಯಕ್ರಮವು, ಒಂದು ತಾಸು 45 ನಿಮಿಷಗಳನ್ನು ಮೀರಿ ಹೋಗಬಾರದು. ಸೇವಾ ಕೂಟದಲ್ಲಿ ಭಾಗವಿರುವ ಸಹೋದರರು ತಮಗಿರುವ ಸಮಯದೊಳಗೇ ಅದನ್ನು ಮುಗಿಸಬೇಕು. ಪ್ರಶ್ನೋತ್ತರಗಳಿಂದ ಆವರಿಸಲ್ಪಡುವ ಭಾಗಗಳಿಗೆ ಕೇವಲ ಸಂಕ್ಷಿಪ್ತ ಪೀಠಿಕೆ ಸಾಕು. ವಿಸ್ತಾರವಾದ ಪೀಠಿಕಾ ಸಮಾಚಾರವನ್ನು ಕೂಡಿಸುವ ಅಗತ್ಯವಿಲ್ಲ. ದೃಶ್ಯಗಳು ಚೆನ್ನಾಗಿ ಪೂರ್ವಾಭಿನಯಿಸಲ್ಪಡಬೇಕು, ಮತ್ತು ಇರುವ ಸಮಯದ ಸದುಪಯೋಗ ಮಾಡುವರೇ, ಪಾತ್ರದಾರಿಗಳು ತಕ್ಕ ಸ್ಥಳದಲ್ಲಿರಬೇಕು ಮತ್ತು ಸಿದ್ಧರಾಗಿರಬೇಕು.
7 ಸಭಾ ಪುಸ್ತಕ ಅಧ್ಯಯನ: ಇದು ಆರಂಭದ ಮತ್ತು ಸಮಾಪ್ತಿ ಪ್ರಾರ್ಥನೆಯೂ ಕೂಡಿ ಒಂದು ತಾಸಿನ ಕೂಟ. ಎಲ್ಲಾ ಪರಿಚ್ಛೇದಗಳು ಓದಲ್ಪಡಬೇಕು. ಕೂಟವನ್ನು ಸಮಯಕ್ಕೆ ಸರಿಯಾಗಿ ಮುಗಿಸುವಂತೆ ಅಭ್ಯಾಸ ನಿರ್ವಾಹಕನು ಸಮಾಚಾರವನ್ನು ವೇಳೆಗನುಸಾರ ಪಾಲುಮಾಡುವುದಾದರೆ, ಪಾಠದ ಕೊನೆಯಲ್ಲಿ ಅವಸರ ಮಾಡುವ ಇಲ್ಲವೇ ಸಮಯಕ್ಕೆ ಮುಂಚೆಯೇ ಮುಗಿಸಿಬಿಡುವ ಸಮಸ್ಯೆ ಉಂಟಾಗದು. ಪ್ರತಿ ಪರಿಚ್ಛೇದಕ್ಕೆ ಎಷ್ಟು ಸಮಯ ಕೊಡಬೇಕೆಂದು ವಿವೇಚಿಸುವ ಅಗತ್ಯ ಅಭ್ಯಾಸ ಚಾಲಕನಿಗಿದೆ. ಮುಖ್ಯ ವಿಷಯಗಳು ಸ್ಪಷ್ಟವಾಗಿ ಅರ್ಥೈಸಬೇಕು. ಅಭ್ಯಾಸ ನಿರ್ವಾಹಕನ ಕಲಿಸುವ ಕಲೆಯು, ಈ ವಿಷಯವಾದ ಯಾವುದೇ ಪಂಥಾಹ್ವಾನವನ್ನು ಎದುರಿಸಲು ಅವನನ್ನು ಶಕ್ತನನ್ನಾಗಿ ಮಾಡುವುದು.—ತೀತ 1:9.
8 ಕ್ಷೇತ್ರಸೇವೆಗಾಗಿ ಕೂಟಗಳು: ಇದು, ಟೆರಿಟೆರಿಯ ನೇಮಕಗಳು ಮತ್ತು ಸಮಾಪ್ತಿ ಪ್ರಾರ್ಥನೆಯೂ ಸೇರಿ 15 ನಿಮಿಷಗಳಿಗಿಂತ ಹೆಚ್ಚಾಗಬಾರದು. ಸೇವೆಗೆ ಹೋಗುವವರು ತಮ್ಮ ಕ್ಷೇತ್ರ ಸೇವಾ ಚಟುವಟಿಕೆಯನ್ನು ಆದಷ್ಟು ಬೇಗ ಆರಂಭಿಸ ಬಯಸುತ್ತಾರೆ. ನಿರ್ವಾಹಕನು ಕೂಟವನ್ನು ಸರೀ ಸಮಯಕ್ಕೆ ಆರಂಭಿಸುವನು, ದೊಡ್ಡ ಗುಂಪು ಬರುವ ತನಕ ಕಾಯಬಾರದು. ಅಲ್ಲದೆ, ಒಮ್ಮೆ ಟೆರಿಟೆರಿ ನೇಮಕ ಕೊಟ್ಟು ಪ್ರಾರ್ಥನೆಯಿಂದ ಮುಗಿಸಿದ ಮೇಲೆ, ಗುಂಪು ಆ ಕೂಡಲೇ ಕ್ಷೇತ್ರಕ್ಕೆ ತೆರಳಬೇಕು. ಅಲ್ಲಿರಬಹುದಾದ ಪಯನೀಯರರಿಗಾಗಿ ಇದು ವಿಶೇಷ ಮಹತ್ವದ್ದು.
9 ಸರೀ ಸಮಯಕ್ಕೆ ಆರಂಭಿಸುವ ಮತ್ತು ಮುಗಿಯುವ ಕೂಟಗಳಿಂದ ನಾವೆಲ್ಲರೂ ಪ್ರಯೋಜನ ಹೊಂದಬಲ್ಲೆವು. ನಂಬದ ಜೊತೆಗಳಿರುವವರಿಂದ ಇದು ವಿಶೇಷವಾಗಿ ಗಣ್ಯ ಮಾಡಲ್ಪಡುವುದು ಯಾಕಂದರೆ ಒಂದು ನಿರ್ದಿಷ್ಟ ಸಮಯದೊಳಗೆ ಮನೆಗೆ ಬರುವಂತೆ ಅವರಿಂದ ಅಪೇಕ್ಷಿಸಲ್ಪಡುತ್ತದೆ. ಕೂಟಕ್ಕೆ ಹೋಗಿ ಬರಲು ವಾಹನಾದಿಗಳನ್ನು ಏರ್ಪಡಿಸುವಾಗ ಮತ್ತು ತಾವು ಮನೆಗೆ ಹಿಂತಿರುಗುವ ಸಮಯವನ್ನು ತಿಳಿಸುವಾಗ, ವಿಭಜಿತ ಕುಟುಂಬದವರು, ಕೂಟದ ಮುಂಚೆ ಮತ್ತು ನಂತರದ ಸಹವಾಸಕ್ಕಾಗಿ, ಲಿಟ್ರೇಚರ್ ಮುಂತಾದವುಗಳನ್ನು ತಕ್ಕೊಳ್ಳಲಿಕ್ಕಾಗಿ ಬೇಕಾಗುವ ಸಮಯವನ್ನೂ ಪರಿಗಣನೆಗೆ ತರುವ ಅಗತ್ಯವಿದೆ. ಕೂಟಗಳನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿ ಕೊನೆಗೊಳಿಸುವದು, “ಮರ್ಯಾದೆಯಿಂದಲೂ ಕ್ರಮದಿಂದಲೂ” ಎಲ್ಲವೂ ನಡಿಯುವಂತೆ ಸಾಧ್ಯಮಾಡುವುದು.—1 ಕೊರಿ. 14:40.