ಈ ಸೇವಾ ವರ್ಷದಲ್ಲಿ ನಾವು ಏನನ್ನು ಸಾಧಿಸುವೆವು?
1 ಸಪ್ಟಂಬರ 1ರಂದು 1994ರ ಸೇವಾ ವರ್ಷದ ಆರಂಭದೊಂದಿಗೆ, ಯೆಹೋವನ ಜನರೋಪಾದಿ, ನಾವು ವ್ಯಕ್ತಿಗಳೋಪಾದಿ ಮತ್ತು ಒಂದು ಸಂಸ್ಥೆಯೋಪಾದಿ ಈ ಹೊಸ ಸೇವಾ ವರ್ಷದಲ್ಲಿ ಏನನ್ನು ಸಾಧಿಸ ಬಯಸುತ್ತೇವೊ, ಅದನ್ನು ನಮ್ಮ ಮನಸ್ಸುಗಳಲ್ಲಿ ಸ್ಪಷ್ಟವಾಗಿಗಿ ಸ್ಥಾಪಿಸಲು, ಇದು ಈಗ ನಮ್ಮೆಲ್ಲರಿಗೆ ಸೂಕ್ತವಾದ ಸಮಯವಾಗಿದೆ.
2 ಆತ್ಮಿಕವಾಗಿ ಬೆಳೆಯುತ್ತಾ ಇರ್ರಿ: ನಾವು ಸತ್ಯದೊಂದಿಗೆ ಹೊಸದಾಗಿ ಸಹವಸಿಸುತ್ತಿದ್ದರೆ, ನಂಬಿಕೆಯಲ್ಲಿ ಬಲಗೊಳ್ಳಲು ನಾವು ಬಯಸಬೇಕು. (ಇಬ್ರಿ. 6:1-3) ನಾವು ಈಗಾಗಲೇ ಆತ್ಮಿಕವಾಗಿ ಬಲಿಷ್ಠರಾಗಿದ್ದರೆ, ಕ್ರಿಸ್ತೀಯ ಜೀವನದಲ್ಲಿ ಅಗತ್ಯವಿರುವ ಎಲ್ಲಾ ಬೈಬಲ್ ಜ್ಞಾನ ಮತ್ತು ಅನುಭವ ನಮಗಿದೆ ಎಂಬುದಾಗಿ ಎಂದೂ ಎಣಿಸಿಕೊಳ್ಳದೆ, ನಾವು ಹೊಸಬರನ್ನು ಮತ್ತು ಇತರರನ್ನು ಸಹಾಯ ಮಾಡಬೇಕು ಮಾತ್ರವಲ್ಲ, ನಮ್ಮ ಸ್ವಂತ ಆತ್ಮಿಕತೆಯ ಕಡೆಗೂ ನಾವು ಗಮನ ಕೊಡಬೇಕು. ನೀವು ದೈನಿಕ ವಚನವನ್ನು ಪರಿಗಣಿಸಿ, ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್ನಲ್ಲಿ ಕೊಡಲಾದ ಬೈಬಲ್ ವಾಚನ ಕಾರ್ಯಕ್ರಮದೊಂದಿಗೆ ಏಕರೀತಿಯಾಗಿದ್ದು, ಸಭಾ ಪುಸ್ತಕ ಅಭ್ಯಾಸ ಮತ್ತು ಕಾವಲಿನಬುರುಜು ಅಭ್ಯಾಸಕ್ಕೆ ತಯಾರಿಸುತ್ತಿರೊ? ಅದು ನಮ್ಮೆಲ್ಲರಿಗಾಗಿಯೂ ಕನಿಷ್ಠವಾದ ಗುರಿಯಾಗಿರಬೇಕು. ಈ ದುಷ್ಟ ವಿಷಯಗಳ ವ್ಯವಸ್ಥೆಯ ನಾಶನವನ್ನು ನಾವು ಪಾರಾಗಬೇಕಾದರೆ ಮತ್ತು ದೇವರ ಹೊಸ ಲೋಕದೊಳಗೆ ಜೀವಂತವಾಗಿ ಉಳಿಯಬೇಕಾದರೆ, ನಾವು ಆತ್ಮಿಕವಾಗಿ ಬೆಳೆಯುತ್ತಾ ಇರಬೇಕು.—ಫಿಲಿಪ್ಪಿ 3:12-16 ಹೋಲಿಸಿ.
3 ಆತ್ಮಿಕವಾಗಿ ಶುದ್ಧರಾಗಿ ಉಳಿಯಿರಿ: ಯೆಹೋವನ ಮುಂದೆ ಸಂಪೂರ್ಣವಾಗಿ ಸ್ವೀಕಾರಯೋಗ್ಯವಾಗಬೇಕಾದರೆ, “ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ” ಶುದ್ಧರಾಗಿರಬೇಕು. (2 ಕೊರಿಂ. 7:1) ಒಮ್ಮೆ ನಾವು ಶುದ್ಧರಾದ ಮೇಲೆ, ಈ ದುಷ್ಟ ಹಳೆಯ ಲೋಕದ ‘ಕೆಸರಿನಲ್ಲಿ ಹೊರಳುವದಕ್ಕೆ’ ಮತ್ತೆ ಬಯಸುವುದು ಏಕೆ? (2 ಪೇತ್ರ 2:22 ಹೋಲಿಸಿ.) ನಾವು ಆತ್ಮಿಕವಾಗಿ ಬಲಿಷ್ಠರಾಗಿಯೂ, ಶುದ್ಧರಾಗಿಯೂ ಉಳಿಯಲು ದೃಢನಿಶ್ಚಯವುಳ್ಳರಾಗಿರಬೇಕು. ಆಗ ನಾವು ಪಾಪದಲ್ಲಿ ಬಿದ್ದು, ಯೆಹೋವನ ಅನುಗ್ರಹದಿಂದ ದೂರವಾಗುತ್ತಾ, ಸೈತಾನನ ದುಷ್ಟ ತಂತ್ರಗಳ ಅರಿವಿಲ್ಲದವರಾಗುವುದಿಲ್ಲ ಮತ್ತು ಸೋಲಿಸಲ್ಪಡುವುದಿಲ್ಲ.—2 ಕೊರಿಂ. 2:11.
4 ವಿವೇಕವುಳ್ಳ ಸಲಹೆಗೆ ಕಿವಿಗೊಡಿರಿ: “ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು,” ಎಂಬುದಾಗಿ ಜ್ಞಾನೋಕ್ತಿ 15:22 ಸೂಚಿಸುತ್ತದೆ. ಈ ಮಾತುಗಳನ್ನಾಡಿದ ಮನುಷ್ಯನು, ಸೊಲೊಮೋನನು, ತದನಂತರ, ವಿದೇಶೀ ಪತ್ನಿಯರನ್ನು ತೆಗೆದುಕೊಳ್ಳಬಾರದೆಂಬ ದೇವರ ಬುದ್ಧಿವಾದಕ್ಕೆ ಕಿವಿಗೊಡಲು ತಪ್ಪಿಹೋದ ಕಾರಣ, ‘ಅವನ ಪತ್ನಿಯರು ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸುವಂತೆ’ ಅನುಮತಿಸಿದನೆಂದು ಜ್ಞಾಪಿಸಿಕೊಳ್ಳಿ. (1 ಅರ. 11:1-4) ಆದುದರಿಂದ ವೈಯಕ್ತಿಕವಾಗಿ ನಾವು ವಿವೇಕದ ಬುದ್ಧಿವಾದಕ್ಕೆ ಕಿವಿಗೊಡದೆ ಇದ್ದರೆ, ಯೆಹೋವನ ಸೇವೆಯಲ್ಲಿ ಪರಿಣಾಮಕಾರಿಗಳಾಗಲು ಅಥವಾ ಅನುಸರಿಸಲು ಯೋಗ್ಯವಾದ ಮಾದರಿಯನ್ನು ಇಡಲು ನಾವು ಹೇಗೆ ನಿರೀಕ್ಷಿಸಬಲ್ಲೆವು? (1 ತಿಮೊ. 4:15) ನಮ್ಮ ಹೃದಯವನ್ನು ಕಾಪಾಡಿಕೊಳ್ಳುವಂತೆ ಬೈಬಲಿನ ಸಲಹೆಯು ನಮಗೆ ಸಹಾಯ ಮಾಡುವುದು. (ಜ್ಞಾನೋ. 4:23) ಯೆಹೋವನು ಪ್ರೀತಿಸುವುದನ್ನು ಪ್ರೀತಿಸುವುದು, ಆತನು ದ್ವೇಷಿಸುವುದನ್ನು ದ್ವೇಷಿಸುವುದು, ಆತನ ಮಾರ್ಗದರ್ಶನವನ್ನು ಸಂತತವಾಗಿ ಹುಡುಕುವುದು ಮತ್ತು ಆತನನ್ನು ಯಾವುದು ಮೆಚ್ಚಿಸುತ್ತದೊ ಅದನ್ನು ಮಾಡುವುದು ನಿಶ್ಚಯವಾದ ಸಂರಕ್ಷಣೆಯಾಗಿದೆ.—ಜ್ಞಾನೋ. 8:13; ಯೋಹಾ. 8:29; ಇಬ್ರಿ. 1:9.
5 ಯೆಹೋವನಿಗಾಗಿರುವ ನಮ್ಮ ಆರಾಧನೆಯು ಯಾಂತ್ರಿಕವಾದದ್ದಲ್ಲ, ಲೋಕದ ಹೆಸರುಮಾತ್ರದ ಕ್ರೈಸ್ತರಂಥ ದೈವಿಕ ಭಕ್ತಿಯ ಒಂದು ವೇಷವಲ್ಲ, ಆದರೆ ದೇವರ ವಾಕ್ಯದಲ್ಲಿ ಕಂಡುಕೊಳ್ಳಲ್ಪಟ್ಟಂತೆ ಉತ್ಸಾಹವುಳ್ಳದ್ದು, ಸಕ್ರಿಯವಾದದ್ದು, ಮತ್ತು ಸತ್ಯಕ್ಕೆ ತಕ್ಕ ಹಾಗೆ ಸಜೀವವಾದದ್ದು ಆಗಿರುತ್ತದೆ.—ಯೋಹಾ. 4:23, 24.
6 ದೇವರ ಚಿತ್ತವನ್ನು ಮಾಡಲು ಇರುವ ನಮ್ಮ ನಿರ್ಧಾರವು ದಿನನಿತ್ಯವೂ ಪರೀಕೆಗ್ಷೆ ಒಳಗಾಗಬಹುದು. ನಮ್ಮ ಸಹೋದರರ ‘ಇಡೀ ಬಳಗವು’ ತದ್ರೀತಿಯ ಪರೀಕ್ಷೆಗಳನ್ನು ಎದುರಿಸುತ್ತಿದೆ ಮತ್ತು ಯೆಹೋವನೇ ನಮ್ಮನ್ನು ಬಲಗೊಳಿಸುವನು ಎಂಬ ಜ್ಞಾನದಿಂದ ನಾವು ಹುರಿದುಂಬಿಸಲ್ಪಡತಕ್ಕದ್ದು. (1 ಪೇತ್ರ 5:9, 10) ಹೀಗೆ 1994ರ ಸೇವಾ ವರ್ಷದಲ್ಲಿ ನಾವು ನಮ್ಮ ಶುಶ್ರೂಷೆಯನ್ನು ಸಂಪೂರ್ಣವಾಗಿ ಸಾಧಿಸಲು ಶಕ್ತರಾಗುವೆವು.—2 ತಿಮೊ. 4:5.