ನಿಮ್ಮ ಬೈಬಲ್ ವಿದ್ಯಾರ್ಥಿಯ ಹೃದಯವನ್ನು ತಲಪಿರಿ
1 ತಾನು ಏನನ್ನು ಕಲಿಯುತ್ತಿರುವನೊ ಅದರ ಪ್ರಕಾರ ನಿಮ್ಮ ಬೈಬಲ್ ವಿದ್ಯಾರ್ಥಿಯು ಕ್ರಿಯೆಗೈಯುವಂತೆ ನೀವು ಬಯಸುತ್ತೀರೊ? ತಾನು ಸಂಪಾದಿಸುತ್ತಿರುವ ಜ್ಞಾನದಿಂದ ಪ್ರಯೋಜನವನ್ನು ಪಡೆಯಬೇಕಾದರೆ, ಅವನು ಹಾಗೆ ಮಾಡಬೇಕು. ನಿಮ್ಮ ಬೈಬಲ್ ವಿದ್ಯಾರ್ಥಿಯನ್ನು ಕ್ರಿಯೆಗೆ ಪ್ರಚೋದಿಸುವ ಸಲುವಾಗಿ, ನೀವು ಅವನ ಹೃದಯವನ್ನು ತಲಪಬೇಕು. ಸಾ.ಶ. 33ರ ಪಂಚಾಶತ್ತಮದ ದಿನದಂದು, ಅಪೊಸ್ತಲ ಪೇತ್ರನ ಪ್ರಚೋದಿಸುವ ಭಾಷಣವು, “ಅವನ ಮಾತಿಗೆ ಒಪ್ಪಿಕೊಂಡ” ಆ ದಿನ ದೀಕ್ಷಾಸ್ನಾನ ಪಡೆದ ಸುಮಾರು 3,000 ಜನರ “ಹೃದಯದಲ್ಲಿ ಅಲಗು ನೆಟ್ಟಂತೆ” ಆಗಿತ್ತು. (ಅ. ಕೃ. 2:37, 41) ನಿಮ್ಮ ಬೈಬಲ್ ವಿದ್ಯಾರ್ಥಿಯ ಹೃದಯವನ್ನು ನೀವು ಹೇಗೆ ತಲಪಬಲ್ಲಿರಿ?
2 ಕೂಲಂಕಷವಾಗಿ ತಯಾರಿಸಿರಿ: ಮಾಹಿತಿಯ ಮೇಲೆ ವಿದ್ಯಾರ್ಥಿಯೊಂದಿಗೆ ವಿವೇಚಿಸಲು ಕಡಿಮೆ ಸಮಯವು ಲಭ್ಯವಾಗುವಂತೆ ಬಹಳಷ್ಟು ವಿಷಯವನ್ನು ಆವರಿಸಲು ಪ್ರಯತ್ನಿಸಬೇಡಿರಿ. ನೀವು ಎತ್ತಿತೋರಿಸಲಿರುವ ಅಂಶಗಳನ್ನು ಮುಂಚಿತವಾಗಿಯೇ ನಿಶ್ಚಯಿಸಿಕೊಳ್ಳಿರಿ, ಮತ್ತು ಶಾಸ್ತ್ರವಚನಗಳನ್ನು ನೀವು ಅರ್ಥಮಾಡಿಕೊಂಡು ಅವುಗಳನ್ನು ಪರಿಣಾಮಕಾರಿಯಾಗಿ ಅನ್ವಯಿಸಬಲ್ಲಿರೋ ಎಂಬುದನ್ನು ಖಚಿತಮಾಡಿಕೊಳ್ಳಿರಿ. ಅವನ ಹಿನ್ನೆಲೆಯ ಕಾರಣದಿಂದ ವಿದ್ಯಾರ್ಥಿಯ ಮನಸ್ಸಿನಲ್ಲಿ ಏಳಬಹುದಾದ ಪ್ರಶ್ನೆಗಳನ್ನು ಮುಂಗಡವಾಗಿಯೇ ಪರಿಗಣಿಸಿರಿ. ನಿಮ್ಮ ವಿದ್ಯಾರ್ಥಿಯ ಒಳ್ಳೆಯ ಪರಿಚಯ ನಿಮಗೆ ಇರುವುದಾದರೆ, ವಿಶೇಷವಾಗಿ ಅವನಿಗೇ ಸರಿಯಾಗಿ ಹೊಂದುವ ಮಾಹಿತಿಯೊಂದಿಗೆ ತಯಾರಾಗಿರಲು ಈ ಜ್ಞಾನವು ನಿಮಗೆ ಸಹಾಯ ಮಾಡುವುದು.
3 ಯೇಸುವಿನ ಬೋಧನಾ ವಿಧಾನವನ್ನು ಅನುಕರಿಸಿರಿ: ಕಠಿನ ಅಂಶಗಳನ್ನು ಸುಲಭ ಮಾಡಲು ಮತ್ತು ಒಂದು ಸನ್ನಿವೇಶದ ಅರ್ಥವನ್ನು ಮತ್ತು ಭಾವನೆಯ ಅನಿಸಿಕೆಯನ್ನು ತನ್ನ ವಿದ್ಯಾರ್ಥಿಗಳು ಪಡೆಯುವಂತೆ ಸಹಾಯ ಮಾಡಲು, ಯೇಸು ದೃಷ್ಟಾಂತಗಳನ್ನು ಉಪಯೋಗಿಸಿದನು. (ಲೂಕ 10:29-37) ಅದೇ ರೀತಿಯಲ್ಲಿ, ನಿಮ್ಮ ದೃಷ್ಟಾಂತಗಳನ್ನು ಸರಳವಾಗಿಡುತ್ತಾ, ಅವುಗಳನ್ನು ಜೀವಿತದ ಸಾಮಾನ್ಯ ವಿಷಯಗಳಿಂದ ತೆಗೆದುಕೊಳ್ಳುತ್ತಾ, ಮತ್ತು ನಿರ್ದಿಷ್ಟವಾಗಿ ವಿದ್ಯಾರ್ಥಿಯ ಸಂದರ್ಭಗಳಿಗೆ ಅವುಗಳನ್ನು ಅನ್ವಯಿಸುತ್ತಾ, ನಿಮ್ಮ ಬೈಬಲ್ ವಿದ್ಯಾರ್ಥಿಯ ಹೃದಯದ ಮೇಲೆ ಉತ್ತಮವಾದ ಬೋಧನೆಗಳನ್ನು ನೀವು ಮನದಟ್ಟು ಮಾಡಬಲ್ಲಿರಿ.
4 ಯೇಸು ಅನೇಕ ವೇಳೆ ಪ್ರದರ್ಶಿಸಿದಂತೆ, ಬೈಬಲ್ ವಿದ್ಯಾರ್ಥಿಗಳ ಹೃದಯಗಳನ್ನು ತಲಪುವುದರಲ್ಲಿ ಪ್ರಶ್ನೆಗಳು ವಿಶೇಷವಾಗಿ ಸಹಾಯಕಾರಿಯಾಗಿವೆ. (ಲೂಕ 10:36) ವಿದ್ಯಾರ್ಥಿಯು ಉತ್ತರವನ್ನು ಸುಮ್ಮನೆ ಪುಸ್ತಕದಿಂದ ಓದಿದರೆ, ತೃಪ್ತರಾಗಬೇಡಿರಿ. ಅವನು ಹಿಂದೆ ಪರಿಗಣಿಸದೇ ಇರಬಹುದಾದ ಸಮಾಪ್ತಿಗೆ ಅವನ ಮನಸ್ಸನ್ನು ನಿರ್ದೇಶಿಸಲು, ಮಾರ್ಗದರ್ಶಕ ಪ್ರಶ್ನೆಗಳನ್ನು ಉಪಯೋಗಿಸಿರಿ. ಈ ಪ್ರಕ್ರಿಯೆಯು, ವಿದ್ಯಾರ್ಥಿಯ ಯೋಚನಾ ಸಾಮರ್ಥ್ಯವನ್ನು ವಿಕಸಿಸಲು ಕೂಡ ಸಹಾಯ ಮಾಡುತ್ತದೆ. ಒಂದು ವಿಷಯದ ಕುರಿತು ಅವನು ವೈಯಕ್ತಿಕವಾಗಿ ಏನನ್ನು ನಂಬುತ್ತಾನೆ ಎಂಬುದನ್ನು ಕಂಡುಹಿಡಿಯಲು ದೃಷ್ಟಿಕೋನ ಪ್ರಶ್ನೆಗಳನ್ನು ಕೇಳಿರಿ. ಆಗ ನೀವು, ಸಹಾಯವು ಬೇಕಾಗಿರುವ ಕ್ಷೇತ್ರಗಳನ್ನು ಗುರುತಿಸಬಹುದು, ಮತ್ತು ಹೆಚ್ಚಿನ ನಿರ್ದಿಷ್ಟವಾದ ಸಹಾಯದೊಂದಿಗೆ ನೀವು ಮುಂದುವರಿಯಬಲ್ಲಿರಿ.
5 ಒಬ್ಬ ಬೈಬಲ್ ವಿದ್ಯಾರ್ಥಿಯು ಪ್ರಗತಿಯನ್ನು ಮಾಡದೆ ಇರುವಲ್ಲಿ, ಕಾರಣಗಳು ಏನೆಂಬುದನ್ನು ನೀವು ಅವನಿಂದ ಹೊರಗೆಳೆಯಬೇಕು. ಕ್ರಮವಾದ ಅಧ್ಯಯನದ ಅವಧಿಗಿಂತ ಬೇರೆಯಾದ ಒಂದು ಸಮಯದಲ್ಲಿ ಭೇಟಿ ಮಾಡುವುದನ್ನು ಇದು ಒಳಗೊಳ್ಳಬಹುದು. ಕ್ರಿಯೆಗೈಯಲು ಅವನು ಯಾಕೆ ಹಿಂಜರಿಯುತ್ತಾನೆ? ಅವನಿಗೆ ಅರ್ಥವಾಗದ ಶಾಸ್ತ್ರವಚನಕ್ಕೆ ಸಂಬಂಧವಾದ ಯಾವುದಾದರೂ ಅಂಶವಿದೆಯೆ? ಅವನ ಜೀವಿತದ ರೀತಿಯಲ್ಲಿ ಕೊಂಚ ಹೊಂದಾಣಿಕೆಗಳನ್ನು ಮಾಡಲು ಅವನು ಮನಸ್ಸಿಲ್ಲದೆ ಇದ್ದಾನೊ? ಒಬ್ಬ ಬೈಬಲ್ ವಿದ್ಯಾರ್ಥಿಯು ‘ಎರಡು ಮನಸ್ಸುಳ್ಳವನಾಗಿರಲು’ ಪ್ರಯತ್ನಿಸುತ್ತಿದ್ದರೆ, ಹಾಗೆ ಮಾಡುವುದರಲ್ಲಿ ಇರುವ ಅಪಾಯವನ್ನು ಗುರುತಿಸಲು ಅವನಿಗೆ ನೆರವು ನೀಡಿರಿ.—1 ಅರಸು 18:21.
6 ಬೈಬಲ್ ಸತ್ಯಗಳನ್ನು ಆಸಕ್ತಿ ಇರುವ ಜನರಿಗೆ ಕಲಿಸುವುದು, ಜೀವರಕ್ಷಣೆಯ ಕೆಲಸವಾಗಿದೆ ಎಂಬುದನ್ನು ಅಪೊಸ್ತಲ ಪೌಲನು ಗ್ರಹಿಸಿದರಿಂದ, ಎಲ್ಲಾ ಕ್ರೈಸ್ತರು ‘ತಮ್ಮ ಉಪದೇಶದ ವಿಷಯದಲ್ಲಿ ಎಚ್ಚರಿಕೆಯಿಂದಿರುವಂತೆ’ ಅವನು ಸಲಹೆ ನೀಡಿದನು. (1 ತಿಮೊ. 4:16) ನೀವು ಯಾರೊಂದಿಗೆ ಬೈಬಲ್ ಅಧ್ಯಯನಗಳನ್ನು ನಡೆಸುತ್ತೀರೊ, ಅವರು ಬೈಬಲ್ ಮತ್ತು ಲೋಕ ಘಟನೆಗಳ ಕುರಿತು ಕೇವಲ ಸತ್ಯಾಂಶಗಳಿಗಿಂತ ಹೆಚ್ಚಿನದನ್ನು ತೆಗೆದುಕೊಳ್ಳಬೇಕು. ಯೆಹೋವ ಮತ್ತು ಯೇಸುವಿನ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಅವರು ಸಂಪಾದಿಸಬೇಕು ಮತ್ತು ಅವರೊಂದಿಗೆ ಒಂದು ಆದರದ ವೈಯಕ್ತಿಕ ಸಂಬಂಧವನ್ನು ವಿಕಸಿಸಲು ಸಹಾಯಿಸಲ್ಪಡಬೇಕು. ಹಾಗೆ ಮಾಡುವ ಮೂಲಕ ಮಾತ್ರ, ಕ್ರಿಯೆಗಳ ಮೂಲಕ ಅವರ ನಂಬಿಕೆಯನ್ನು ಪ್ರದರ್ಶಿಸಲು ಅವರು ಪ್ರೇರೇಪಿಸಲ್ಪಡುವರು. (ಯಾಕೊ. 2:17, 21, 22) ವಿದ್ಯಾರ್ಥಿಯ ಹೃದಯವು ತಲಪಲ್ಪಟ್ಟಾಗ, ಯೆಹೋವನನ್ನು ಮಹಿಮೆ ಪಡಿಸುವ ಹಾಗೂ ಅವನ ಸ್ವಂತ ಜೀವಿತವನ್ನು ಸಂರಕ್ಷಿಸುವ ಮಾರ್ಗವನ್ನು ಹಿಂಬಾಲಿಸುವಂತೆ ಅವನು ಪ್ರಚೋದಿಸಲ್ಪಡುವನು.—ಜ್ಞಾನೋ. 2:20-22.