ಅವರು ಸಾಕ್ಷಿಕೊಡುವುದರಿಂದ ಹಿಮ್ಮೆಟ್ಟಿರುವುದಿಲ್ಲ
1 ಯೆಹೋವನ ಸಾಕ್ಷಿಗಳು ಎಂಬ ನಮ್ಮ ಹೆಸರು ನಮ್ಮನ್ನು ಗುರುತಿಸುತ್ತದೆ ಮತ್ತು ನಾವೇನನ್ನು ಮಾಡುತ್ತೇವೆಂಬುದನ್ನು ವರ್ಣಿಸುತ್ತದೆ. ನಮ್ಮ ದೇವರಾದ ಯೆಹೋವನ ಉತ್ಕೃಷ್ಟತೆಗಳ ಕುರಿತು ನಾವು ಸಾಕ್ಷಿನೀಡುತ್ತೇವೆ. (ಯೆಶಾ. 43:10, 12) ಪ್ರತಿಯೊಬ್ಬನು ಸಭೆಯ ಸದಸ್ಯನಾಗಿ ಪರಿಣಮಿಸಬೇಕಾದರೆ, ಅವನು ಈ ಸಾಕ್ಷಿಯನ್ನು ಕೊಡುವುದರಲ್ಲಿ ಭಾಗವಹಿಸಲೇ ಬೇಕು. ಸಾಕ್ಷಿ ಕಾರ್ಯವು ಪ್ರಧಾನವಾಗಿ, ಮನೆಯಿಂದ ಮನೆಗೆ ಭೇಟಿನೀಡುವುದು, ರಸ್ತೆಯ ಸಾಕ್ಷಿಸೇವೆ ಮಾಡುವುದು, ಪುನರ್ಭೇಟಿಗಳನ್ನು ಮಾಡುವುದು, ಮತ್ತು ಬೈಬಲ್ ಅಧ್ಯಯನಗಳನ್ನು ನಡೆಸುವುದನ್ನು ಒಳಗೊಂಡಿರುವ ನಮ್ಮ ಸಾರ್ವಜನಿಕ ಶುಶ್ರೂಷೆಯ ಮೂಲಕ ಮಾಡಲ್ಪಡುತ್ತದೆ. ಯುಕ್ತವಾಗಿಯೇ ಸಂಪೂರ್ಣವಾದ ಒಂದು ಭಾಗವಹಿಸುವಿಕೆಗಾಗಿ ಎಟಕಿಸಿಕೊಳ್ಳುವಂತೆ ನಾವೆಲ್ಲರೂ ಒತ್ತಾಯಿಸಲ್ಪಡುತ್ತೇವೆ.—1 ಕೊರಿಂ. 15:58.
2 ಆದಾಗ್ಯೂ, ಸಭೆಯ ಕೆಲವು ಸದಸ್ಯರು, ಅವರು ಮಾಡಶಕ್ತರಿರುವುದರಲ್ಲಿ ಮಿತಿಯುಳ್ಳವರಾಗಿರುತ್ತಾರೆ. ಗಂಭೀರವಾದ ಅಸ್ವಸ್ಥತೆ ಅಥವಾ ದೌರ್ಬಲ್ಯವು ಅವರನ್ನು ನಿರ್ಬಂಧದಲ್ಲಿಡಬಹುದು. ವಿರೋಧಿಸುವ ಸಂಬಂಧಿಕರು ಎದುರಿಸಲಾಗದ ವಿಘ್ನಗಳನ್ನು ಎಬ್ಬಿಸಬಹುದು. ಯುವ ವ್ಯಕ್ತಿಯೊಬ್ಬನು ಅವಿಶ್ವಾಸಿ ಹೆತ್ತವನೊಬ್ಬನಿಂದ ನಿರ್ಬಂಧಿಸಲ್ಪಡಬಹುದು. ಪ್ರತ್ಯೇಕ ಕ್ಷೇತ್ರಗಳಲ್ಲಿ ವಾಹನ ಸೌಕರ್ಯವಿಲ್ಲದೆ ಜೀವಿಸುತ್ತಿರುವ ವ್ಯಕ್ತಿಗಳು ಸಾಕ್ಷಿನೀಡುವುದನ್ನು ಬಹುಮಟ್ಟಿಗೆ ಅಸಾಧ್ಯವೆಂದು ಭಾವಿಸಬಹುದು. ಸ್ವಭಾವಸಿದ್ಧವಾದ ನಾಚಿಕೆಯು ಅಂಜುಬುರುಕರನ್ನು ಹಿಂಜರಿಯುವಂತೆ ಮಾಡಬಹುದು. ಇಂತಹ ಅಥವಾ ತದ್ರೀತಿಯ ಸನ್ನಿವೇಶಗಳಲ್ಲಿ ತಮ್ಮನ್ನು ಕಂಡುಕೊಳ್ಳುವ ಕೆಲವು ಪ್ರಚಾರಕರು, ತಾವು ಏನನ್ನು ಮಾಡಲು ಶಕ್ತರಾಗಿದ್ದಾರೊ ಅದು ಇತರರು ಏನನ್ನು ಮಾಡುತ್ತಾರೊ ಅದಕ್ಕಿಂತ ತೀರ ಕಡಿಮೆಯಾಗಿದೆ ಮತ್ತು ವಾಸ್ತವವಾಗಿ ತಾವು ಮಾಡಲು ಅಪೇಕ್ಷಿಸುವುದಕ್ಕಿಂತಲೂ ಕಡಿಮೆಯಾಗಿರುವುದರಿಂದ ತಾವು ಕ್ರೈಸ್ತರೋಪಾದಿ ಅರ್ಹತೆಗಳನ್ನು ಪಡೆದಿಲ್ಲವೆಂದು ಭಾವಿಸಬಹುದು. ತಮ್ಮ ಸ್ವಂತ ಪ್ರಯತ್ನಗಳನ್ನು ಅಲ್ಪವಾಗಿ ಎಣಿಸಲು ಅವರಿಗೆ ಕಾರಣವಿಲ್ಲ. (ಗಲಾ. 6:4) ಅವರು ತಾವಿರುವ ಯಾವುದೇ ಸನ್ನಿವೇಶದಲ್ಲಿ ಅತ್ಯುತ್ತಮವಾದುದನ್ನು ಕೊಡುವಾಗ, ಯೆಹೋವನು ಸಂತೋಷಿಸುತ್ತಾನೆಂದು ತಿಳಿಯುವುದರಲ್ಲಿ ಅವರು ಸಮಾಧಾನವನ್ನು ಹೊಂದಬಲ್ಲರು.—ಲೂಕ 21:1-4.
3 ಪಾಲ್ಗೊಳ್ಳಲು ಮಾರ್ಗವನ್ನು ಹುಡುಕುವುದು: ಕಷ್ಟದ ಪರಿಸ್ಥಿತಿಗಳಲ್ಲಿ ಹೇಗೆ ವ್ಯಕ್ತಿಗಳು ತಮ್ಮನ್ನು ಸಾಕ್ಷಿಕಾರ್ಯದಿಂದ ವಿಘ್ನಗಳು ತಡೆಗಟ್ಟುವಂತೆ ಅನುಮತಿಸಲಿಲ್ಲ ಎಂಬುದನ್ನು ತೋರಿಸುವ ಸಾವಿರಾರು ಅನುಭವಗಳು ವಿವರಿಸಲ್ಪಟ್ಟಿವೆ. ತಮ್ಮ ಸಾಮರ್ಥ್ಯವನ್ನು ಉಪಯೋಗಿಸಿ, ಅನೌಪಚಾರಿಕ ಸಾಕ್ಷಿಕಾರ್ಯವನ್ನು ಮಾಡಲಿಕ್ಕಾಗಿ ಅವರು ಭಾರಿ ವೈವಿಧ್ಯದ ವಿಧಾನಗಳನ್ನು ರಚಿಸಿದ್ದಾರೆ. ಮನೆಯಲ್ಲಿ ಉಳಿಯಬೇಕಾದವರು ಸಾಕ್ಷಿಕಾರ್ಯಕ್ಕಾಗಿ ಮಹಾ ಸಂದರ್ಭವನ್ನು ತೆರೆಯಲಿಕ್ಕಾಗಿ ಟೆಲಿಫೋನನ್ನು ಉಪಯೋಗಿಸಿದ್ದಾರೆ. ಪ್ರತಿಯೊಬ್ಬ ಭೇಟಿಕಾರನೂ ಭಾವೀ ಕೇಳುಗನಾಗಿ ವೀಕ್ಷಿಸಲ್ಪಡುತ್ತಾನೆ. ವಿರೋಧಿಸುವ ಕುಟುಂಬವಿರುವ ಹೆಂಡತಿಯೊಬ್ಬಳು ಮನೆಯಲ್ಲಿ ಸಾಕ್ಷಿ ನೀಡಲು ಅಸಮರ್ಥಳಾಗಿದ್ದಾಗ್ಯೂ, ತನ್ನ ನಿತ್ಯದ ನಿಯತಕ್ರಮದಲ್ಲಿ ಭೇಟಿಯಾಗುವ ನೆರೆಯವರಿಗೆ ಮತ್ತು ಇತರರಿಗೆ ಮಾತಾಡುವ ಸಂದರ್ಭಗಳನ್ನು ಅವಳು ಉಪಯೋಗಿಸುತ್ತಾಳೆ.
4 ಯುವ ವ್ಯಕ್ತಿಯೊಬ್ಬನು ನಮ್ಮ ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಭಾಗವಹಿಸುವುದು, ಅವಿಶ್ವಾಸಿ ಹೆತ್ತವನೊಬ್ಬನಿಂದ ನಿಷೇಧಿಸಲ್ಪಡಬಹುದು. ಅದನ್ನು ಒಂದು ಜಯಿಸಲಾಗದ ವಿಘ್ನವೆಂದು ಅಂಗೀಕರಿಸುವುದಕ್ಕೆ ಬದಲಾಗಿ, ತನ್ನ ಸಹಪಾಠಿಗಳನ್ನು ಮತ್ತು ಶಿಕ್ಷಕರನ್ನು ತನ್ನ ವೈಯಕ್ತಿಕ “ಟೆರಿಟೊರಿ” ಯಂತೆ ಅವನು ಅವಲೋಕಿಸಬಹುದು ಮತ್ತು ಅತ್ಯುತ್ತಮವಾದ ಒಂದು ಸಾಕ್ಷಿಯನ್ನು ನೀಡಲು ಶಕ್ತನಾಗಬಹುದು ಹಾಗೂ ಬೈಬಲ್ ಅಧ್ಯಯನಗಳನ್ನು ಸಹ ನಡೆಸಬಹುದು. ಬಹುದೂರದ ಸ್ಥಳಗಳಲ್ಲಿ ಜೀವಿಸುತ್ತಿರುವ ಅನೇಕರು ಪತ್ರಗಳನ್ನು ಬರೆಯುವ ಮೂಲಕ ಪಾಲ್ಗೊಳ್ಳಲು ಶಕ್ತರಾಗಿದ್ದಾರೆ. ಕ್ರೈಸ್ತ ಹುರುಪಿನಿಂದ ಪ್ರಚೋದಿಸಲ್ಪಟ್ಟಿರುವವರು ಯಾವಾಗಲೂ “ನಮ್ಮ ಕರ್ತನಾದ ಯೇಸು ಕ್ರಿಸ್ತನ ಸಂಬಂಧವಾದ ನಿಷ್ಕೃಷ್ಟವಾದ ಜ್ಞಾನದ ವಿಷಯದಲ್ಲಿ ಆಲಸ್ಯಗಾರರೂ ನಿಷ್ಫಲರೂ ಆಗದಂತೆ” ತಡೆಯಲಿಕ್ಕಾಗಿ ಯಾವುದಾದರೊಂದು ದಾರಿಯನ್ನು ಕಂಡುಕೊಳ್ಳುವರು.—2 ಪೇತ್ರ 1:8, NW.
5 ಸಾಕ್ಷಿ ಕಾರ್ಯದಲ್ಲಿ ನಮ್ಮ ಭಾಗವಹಿಸುವಿಕೆಯ ಕುರಿತು, ಯೆಹೋವನು ಎಲ್ಲರಿಗಾಗಿ ಏಕಪ್ರಕಾರದ ಒಂದು ಮಟ್ಟವನ್ನು ಇಟ್ಟಿದ್ದಾನೆ, ಅದೇನಂದರೆ, ನಾವು “ಮನಃಪೂರ್ವಕವಾಗಿ” ಮಾಡುವವರಾಗಿರಬೇಕು. (ಕೊಲೊ. 3:23) ನಾವು ವ್ಯಯಿಸುವ ತಾಸುಗಳ ಪ್ರಮಾಣ ಮತ್ತು ನಾವು ಪೂರೈಸುವಂತಹ ಕೆಲಸದಲ್ಲಿ ವ್ಯತ್ಯಾಸವಾಗುವುದಾದರೂ, ಮೂಲಭೂತವಾದ ಪ್ರಚೋದನೆಯು ಒಂದೇ ಆಗಿರುತ್ತದೆ—“ಸಂಪೂರ್ಣ ಹೃದಯ” ದಿಂದ ಹೊರಡುವ ನೈಜ ಪ್ರೀತಿಯೇ. (1 ಪೂರ್ವ. 28:9; 1 ಕೊರಿಂ. 16:14) ನಮ್ಮಿಂದ ಅತ್ಯುತ್ಕೃಷವ್ಟಾದುದನ್ನು ನಾವು ಕೊಡುತ್ತಿರುವುದಾದರೆ, ನಾವು ಮಾಡಶಕ್ತರಾಗಿರುವುದು ಅಲ್ಪವಾಗಿರುವುದರಿಂದ ಸಭೆಯ ಸದಸ್ಯರೋಪಾದಿ ನಿಷ್ಪ್ರಯೋಜಕರಾಗಿದ್ದೇವೆ ಅಥವಾ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಭಾವಿಸಲು ನಮಗೆ ಎಂದಿಗೂ ಕಾರಣವಿರುವುದಿಲ್ಲ. ಪೌಲನಂತೆ, ‘ಹಿತಕರವಾದ ವಿಷಯಗಳನ್ನು ಹೇಳುವುದರಿಂದಲೂ ಸಾರ್ವಜನಿಕವಾಗಿ ಬೋಧಿಸುವುದರಿಂದಲೂ ನಾವು ಹಿಮ್ಮೆಟ್ಟಿರುವುದಿಲ್ಲ,’ ಎಂದು ನಾವು ಸತ್ಯವಾಗಿ ಹೇಳಬಲ್ಲೆವು.—ಅ. ಕೃ. 20:20.