ಯುಕ್ತವಾದ ಶಬ್ದಗಳು ತಪ್ಪಾದ ಬೋಧನೆಗಳನ್ನು ಉರುಳಿಸುತ್ತವೆ
(There is no corresponding article in English)
1 ಹವ್ವಳಿಗೆ, ಅವಳು ‘ಹೇಗೂ ಸಾಯುವುದಿಲ್ಲ’ ಎಂದು ಹೇಳುವ ಮೂಲಕ ಏದೆನ್ ತೋಟದಲ್ಲಿ ಸೈತಾನನು ಪ್ರಥಮವಾಗಿ ಸುಳ್ಳನ್ನು ಹೇಳಿದಂದಿನಿಂದ, ಅವನು ಮೃತರ ಸ್ಥಿತಿಯ ಕುರಿತು ಅನಿಶ್ಚಿತತೆ ಮತ್ತು ಗೊಂದಲವನ್ನು ಹಬ್ಬಿಸುತ್ತಾ ಇದ್ದಾನೆ. (ಆದಿ. 3:4) ಮಾನವರ ಮರಣವು, ಸೈತಾನನನ್ನು ಒಬ್ಬ ಸುಳ್ಳುಗಾರನನ್ನಾಗಿ ರುಜುಪಡಿಸುತ್ತದಾದರೂ, ಮನುಷ್ಯನ ಪ್ರಜ್ಞಾಪೂರ್ವಕವಾದ ಯಾವುದೋ ಭಾಗವು ಜೀವಿಸುತ್ತಾ ಮುಂದುವರಿಯುತ್ತದೆ ಎಂಬುದನ್ನು, ಮಾನವಕುಲದ ತೀರ ಅಧಿಕಾಂಶ ಜನರು ನಂಬುವಂತೆ ಮಾಡಿ, ಸುಳ್ಳು ಧಾರ್ಮಿಕ ಬೋಧನೆಗಳ ಮೂಲಕ ಅವನು ಅವರನ್ನು ದಾರಿತಪ್ಪಿಸಿದ್ದಾನೆ.
2 ದೇವರ ವಾಕ್ಯವಾದ ಬೈಬಲಿನಿಂದ ಸತ್ಯವನ್ನು ತಿಳಿದುಕೊಳ್ಳಲು ನಾವೆಷ್ಟು ಸಂತೋಷಿಸುತ್ತೇವೆ. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ತನ್ನ ಹೀಬ್ರು ಮತ್ತು ಗ್ರೀಕ್ ಶಬ್ದಗಳನ್ನು ಭಾಷಾಂತರಿಸುವುದರಲ್ಲಿ ಸುಸಂಗತವಾಗಿರುವುದರಿಂದ, ಅದನ್ನು ಉಪಯೋಗಿಸುವ ಮೂಲಕ ನಾವು ತಪ್ಪಾದ ಬೋಧನೆಗಳನ್ನು ಪರಿಣಾಮಕಾರಿಯಾಗಿ ಉರುಳಿಸಬಲ್ಲೆವು. ಹೀಬ್ರು ಶಬ್ದವಾದ ನೆಫೆಶ್ ಮತ್ತು ಗ್ರೀಕ್ ಶಬ್ದವಾದ ಸೈಖೆ, ಯಾವಾಗಲೂ ಇಂಗ್ಲಿಷ್ ಭಾಷೆಯಲ್ಲಿ ಸೋಲ್ (ಪ್ರಾಣ) ಎಂಬ ಶಬ್ದದಿಂದ ಭಾಷಾಂತರಿಸಲ್ಪಡುತ್ತವೆ, ಆದರೆ ರುಆಕ್ ಎಂಬ ಹೀಬ್ರು ಶಬ್ದವನ್ನು ಮತ್ತು ನ್ಯೂಮ ಎಂಬ ಗ್ರೀಕ್ ಶಬ್ದವನ್ನು ಭಾಷಾಂತರಿಸಲು, ಸ್ಪಿರಿಟ್ (ಆತ್ಮ) ಎಂಬ ಇಂಗ್ಲಿಷ್ ಶಬ್ದವು ಉಪಯೋಗಿಸಲ್ಪಡುತ್ತದೆ.
3 ಹಾಗಿದ್ದರೂ, ಸುಳ್ಳು ಧಾರ್ಮಿಕ ಬೋಧನೆಗಳ ಪ್ರಭಾವದ ಕಾರಣದಿಂದ, ದೇಶೀಯ ಬೈಬಲುಗಳಲ್ಲಿ ಅಂತಹ ಸುಸಾಂಗತ್ಯವು ಯಾವಾಗಲೂ ಕಂಡುಬರುವುದಿಲ್ಲ. ಸತ್ಯವನ್ನು ನಿಷ್ಕೃಷ್ಟತೆಯಿಂದ ಕಲಿಸುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡಲಿಕ್ಕಾಗಿ, ದೇಶೀಯ ಭಾಷೆಗಳನ್ನು ಉಪಯೋಗಿಸುವಾಗ, ನಾವು ನಮ್ಮ ದೇವಪ್ರಭುತ್ವ ಪರಿಭಾಷೆಯಲ್ಲಿ ಮತ್ತು ನಮ್ಮ ಪ್ರಕಾಶನಗಳಲ್ಲಿ ಬೈಬಲ್ ಶಬ್ದಗಳ ಭಾಷಾಂತರದಲ್ಲಿ ಹೆಚ್ಚು ಸುಸಾಂಗತ್ಯದ ಕಡೆಗೆ ನಾವು ಕಾರ್ಯನಡಿಸುತ್ತಿದ್ದೇವೆ.
4 ಭಾರತದ ಹೆಚ್ಚಿನ ಭಾಷೆಗಳು ಸಂಸ್ಕೃತ ಭಾಷೆಯ ಮೇಲೆ ಆಧಾರಿಸಿವೆ ಅಥವಾ ದ್ರಾವಿಡಭಾಷೆಗಳಾಗಿವೆ. ಈ ಮೂಲ ಭಾಷೆಗಳಲ್ಲಿ ಆತ್ಮ ಎಂಬ ಮೂಲ ಶಬ್ದವು, ಅದೃಶ್ಯವಾದ ಯಾವುದೋ ವಿಷಯವನ್ನು, ಬಲ ಅಥವಾ ಶಕ್ತಿಯನ್ನು ಸೂಚಿಸುತ್ತದೆ, ಮತ್ತು ಆತ್ಮಕ್ಕೆ ಸಂಬಂಧಿಸಿದ ಶಬ್ದಗಳು, ಅಧಿಕಾಂಶ ದೇಶೀಯ ಬೈಬಲುಗಳಲ್ಲಿ ಪವಿತ್ರಾತ್ಮ ಮತ್ತು ಸ್ವರ್ಗದಲ್ಲಿರುವ ಆತ್ಮ ವ್ಯಕ್ತಿಗಳಿಗಾಗಿ ಉಪಯೋಗಿಸಲ್ಪಡುತ್ತವೆ. ಇದು ರುಆಕ್ ಮತ್ತು ನ್ಯೂಮ ಎಂಬ ಶಬ್ದಗಳ ಅರ್ಥವನ್ನು ಉತ್ತಮವಾಗಿ ಭಾಷಾಂತರಿಸುತ್ತದೆ. ಬೈಬಲು, ಎಲ್ಲ ಸಜೀವ ಜೀವಿಗಳಲ್ಲಿರುವ ಜೀವ ಶಕ್ತಿಗೆ ಅವೇ ಶಬ್ದಗಳನ್ನು ಉಪಯೋಗಿಸುವುದರಿಂದ, ಸ್ಪಿರಿಟ್ ಎಂಬ ಶಬ್ದವನ್ನು ಅದರ ಎಲ್ಲಾ ಪ್ರಯೋಗಗಳಲ್ಲಿ ಭಾಷಾಂತರಿಸಲಿಕ್ಕಾಗಿ ಆತ್ಮ ಎಂಬ ಶಬ್ದವನ್ನು ಪ್ರಮಾಣನಿಷ್ಕರ್ಷೆ ಮಾಡುವುದು ಸೂಕ್ತವಾಗಿರಸಾಧ್ಯವಿದೆ.
5 ಮಾನವರಲ್ಲಿರುವ ಜೀವ ಶಕ್ತಿಯನ್ನು ವರ್ಣಿಸಲಿಕ್ಕಾಗಿ, ಸಂಸ್ಕೃತ ಶಬ್ದವಾದ ಪ್ರಾಣಕ್ಕೆ ಸಂಬಂಧಿಸಿದ ಶಬ್ದವೊಂದನ್ನು ಉಪಯೋಗಿಸುತ್ತಿದ್ದ ತೆಲುಗು ಮತ್ತು ಕನ್ನಡ ಭಾಷೆಗಳಿಗೆ, ಈ ಬದಲಾವಣೆಯು ಪ್ರಮುಖವಾಗಿ ಪ್ರಭಾವ ಬೀರುವುದು. ಆದರೆ ಅವು ಈಗ ಸ್ಪಿರಿಟ್ ಎಂಬ ಶಬ್ದಕ್ಕೆ ಸುಸಂಗತವಾಗಿ ಆತ್ಮ ಎಂಬ ಶಬ್ದವನ್ನು ಉಪಯೋಗಿಸುವವು.
6 ಅನೇಕ ದೇಶೀಯ ಬೈಬಲ್ ಭಾಷಾಂತರಗಳು, ನೆಫೆಶ್ ಮತ್ತು ಸೈಖೆಯನ್ನು ಭಾಷಾಂತರಿಸಲು, ಪ್ರಾಣ ಅಥವಾ ಜೀವ ಎಂಬ ಶಬ್ದಗಳನ್ನು ಉಪಯೋಗಿಸುತ್ತವೆ. ಪ್ರಾಣ ಎಂಬುದು ಬದುಕುವ ಜೀವಿ, ಮನುಷ್ಯ ಅಥವಾ ಪ್ರಾಣಿ, ಅಥವಾ ಅವರು ಅನುಭವಿಸುವಂತಹ ಜೀವಸ್ವರೂಪಕ್ಕೆ ಸಂಬಂಧಿಸಿರುವುದರಿಂದ, ಇದು ಸೂಕ್ತವಾಗಿದೆ. ಬೈಬಲ್ ವಿದ್ಯಾರ್ಥಿಗಳಿಗೆ ಕಲಿಸುವಾಗ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನಲ್ಲಿ ಉಪಯೋಗಿಸಲ್ಪಟ್ಟಿರುವಂತೆ ಮತ್ತು ಸಂಸ್ಥೆಯ ಪ್ರಕಾಶನಗಳಲ್ಲಿ ವಿಶದೀಕರಿಸಲ್ಪಟ್ಟಿರುವಂತೆ, ಸೋಲ್ ಶಬ್ದಕ್ಕಾಗಿ ಕನ್ನಡದಲ್ಲಿ ಸುಸಂಗತವಾಗಿ ಪ್ರಾಣ ಎಂಬ ಶಬ್ದವನ್ನು ಉಪಯೋಗಿಸುವುದು ಸಮರ್ಪಕವಾಗಿರುತ್ತದೆ. ಪ್ರಾಣವು ಸಾಯಬಲ್ಲದು ಎಂದು ಬೈಬಲ್ ಹೇಳುವಾಗ, ಕೆಲವು ಬೈಬಲ್ ಭಾಷಾಂತರಕಾರರು ಪ್ರಾಣಿ ಎಂಬ ಶಬ್ದವನ್ನು ಉಪಯೋಗಿಸುವ ಮೂಲಕ, ಪ್ರಾಣದ ಅರ್ಥವನ್ನು ಸಂದೇಹಾಸ್ಪದಗೊಳಿಸಿದ್ದಾರೆ, ಆದುದರಿಂದ ನಾವು ಸುಸಂಗತವಾಗಿರುವ ಅಗತ್ಯವಿದೆ.—ದಯವಿಟ್ಟು ನಿಮ್ಮ ದೇಶೀಯ ಭಾಷೆಯ ಬೈಬಲಿನಲ್ಲಿರುವ ಯೆಹೆಜ್ಕೇಲ 18:4ರ ಭಾಷಾಂತರವನ್ನು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನ ಭಾಷಾಂತರದೊಂದಿಗೆ ಹೋಲಿಸಿರಿ.
7 ಗುಜರಾಥಿ ಮತ್ತು ಮರಾಠಿ ಭಾಷೆಗಳಲ್ಲಿ ನಾವು ಜೀವ ಎಂಬ ಶಬ್ದವನ್ನು ಉಪಯೋಗಿಸುವುದನ್ನು ಮುಂದುವರಿಸುತ್ತೇವೆ, ಆದರೆ ಮಲೆಯಾಳಂ ಭಾಷೆಯು ಸೋಲ್ಗೆ ದೇಹಿ ಎಂಬ ಶಬ್ದವನ್ನು ಉಪಯೋಗಿಸುವುದು. ತಮಿಳು ಭಾಷೆಯು ಒಂದು ಗಮನಾರ್ಹ ವಿನಾಯಿತಿಯಾಗಿದೆ, ಹೇಗೆಂದರೆ, ಆತ್ಮಕ್ಕಾಗಿರುವ ಸಂಸ್ಕೃತ ಸಂಬಂಧಿತ ಶಬ್ದವನ್ನು ಶಬ್ದನಿಘಂಟುಗಳು ಇತರ ಭಾರತೀಯ ಭಾಷೆಗಳಂತೆಯೇ ಅರ್ಥನಿರೂಪಿಸುವುದಾದರೂ ಅದನ್ನು ಒಬ್ಬ ವ್ಯಕ್ತಿಯನ್ನು ಅರ್ಥೈಸಲಿಕ್ಕೂ ಬಳಸಲಾಗಿದೆ. ಅವನ ಎಲ್ಲಾ ಮಾನಸಿಕ ಹಾಗೂ ಶಾರೀರಿಕ ಗುಣಗಳೊಂದಿಗೆ ಸಜೀವ ಮನುಷ್ಯನನ್ನು ಸೂಚಿಸಲಿಕ್ಕಾಗಿ, ತಮಿಳು ಬೈಬಲು ಆತ್ಮ ಎಂಬ ಶಬ್ದವನ್ನು ಸುಸಂಗತವಾಗಿ ಉಪಯೋಗಿಸುತ್ತದೆ, ಆದರೆ ಮನುಷ್ಯ, ದೇವದೂತರು, ಮತ್ತು ದೇವರ ಕಾರ್ಯಕಾರಿ ಶಕ್ತಿಯಲ್ಲಿರುವ ಜೀವ ಶಕ್ತಿಗೆ ಸೂಚಕವಾಗಿರುವ ರುಆಕ್ ಅನ್ನು ಭಾಷಾಂತರಿಸಲು, ಆವಿ ಎಂಬ ಇನ್ನೊಂದು ಶಬ್ದವು ಉಪಯೋಗಿಸಲ್ಪಡುತ್ತದೆ.
8 ಅಮರತ್ವದ ಬೋಧನೆಯನ್ನು ಚರ್ಚಿಸುವಾಗ, ಪ್ರಾಣ ಅಥವಾ ಜೀವ ಎಂಬ ಶಬ್ದಗಳನ್ನು ಉಪಯೋಗಿಸುವುದು, ಆರಂಭದಲ್ಲಿ ಅಸಾಮಾನ್ಯವಾದದ್ದಾಗಿ ತೋರಬಹುದು, ಆದರೆ ಮೂಲ ಭಾಷೆಯ ಶಬ್ದಗಳ ಅರ್ಥವನ್ನು ನಾವು ವಿವರಿಸಿದಂತೆ, ಮತ್ತು ಬೈಬಲು ತಾನೇ ಮಾತಾಡುವಂತೆ ಬಿಟ್ಟುಕೊಡುವಾಗ, ಪ್ರಾಮಾಣಿಕ ವ್ಯಕ್ತಿಗಳು ಸತ್ಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವರು. ಆದುದರಿಂದ, ತಪ್ಪಾದ ಬೋಧನೆಗಳನ್ನು ಉರುಳಿಸಲಿಕ್ಕಾಗಿ ಮತ್ತು ಕುರಿಸದೃಶ ಜನರನ್ನು ಸುಳ್ಳು ಧರ್ಮದ ದಾಸತ್ವದಿಂದ ಸ್ವತಂತ್ರಗೊಳಿಸಲಿಕ್ಕಾಗಿ, ನಾವು ಯುಕ್ತವಾದ ಶಬ್ದಗಳನ್ನು ಉಪಯೋಗಿಸೋಣ.—ಯೋಹಾನ 8:32.