ಸುವಾರ್ತೆಯನ್ನು ಪ್ರಕಟಿಸುವುದರಲ್ಲಿ ನಿಲುಗಡೆಯಿಲ್ಲ
1 ಆದಿ ಕ್ರೈಸ್ತರು ತಮ್ಮ ಶುಶ್ರೂಷೆಯನ್ನು ಬಹು ಗಂಭೀರವಾಗಿ ಎಣಿಸಿದರು. ಲೂಕನು ವರದಿಸಿದ್ದು: “ಪ್ರತಿ ದಿನ ದೇವಾಲಯದಲ್ಲಿ ಮತ್ತು ಮನೆಯಿಂದ ಮನೆಗೆ ಕ್ರಿಸ್ತ ಯೇಸುವಿನ ಕುರಿತಾದ ಸುವಾರ್ತೆಯನ್ನು ಕಲಿಸುವುದರಲ್ಲಿ ಮತ್ತು ಪ್ರಕಟಿಸುವುದರಲ್ಲಿ ಅವರು ನಿಲುಗಡೆಯಿಲ್ಲದೆ ಮುಂದುವರಿದರು.” (ಅ. ಕೃ. 5:42, NW) ಯಾವುದೇ ವಿಷಯವು, ಹಿಂಸೆಯು ಕೂಡ, ಅವರನ್ನು ತಡೆಯಸಾಧ್ಯವಿರಲಿಲ್ಲ! (ಅ. ಕೃ. 8:4) ಅವರು ಪ್ರತಿ ದಿನ ಇತರರೊಂದಿಗೆ ಸತ್ಯದ ಕುರಿತು ಮಾತಾಡಿದರು.
2 ನಮ್ಮ ಕುರಿತಾಗಿ ಏನು? ನೀವೇ ಕೇಳಿಕೊಳ್ಳಿರಿ: ‘ಸಮಯಗಳ ತುರ್ತನ್ನು ನಾನು ಗ್ರಹಿಸುತ್ತೇನೋ? ನಿಲುಗಡೆಯಿಲ್ಲದೆ ಸುವಾರ್ತೆಯ ಪ್ರಕಟಿಸುವಿಕೆಯನ್ನು ಮುಂದುವರಿಸಲು ನಾನು ಒಲವುಳ್ಳವನಾಗಿದ್ದೇನೋ?’
3 ನಿಲುಗಡೆಯಿಲ್ಲದೆ ಸಾರುವುದರ ಆಧುನಿಕ ದಿನದ ಮಾದರಿಗಳು: ಪಾರ್ಶ್ವರೋಗಕ್ಕೆ ಬಲಿಯಾದ ಸಹೋದರಿಯೊಬ್ಬಳು, ಕಬ್ಬಿಣದ ಶ್ವಾಸಕೋಶವೊಂದಕ್ಕೆ ನಿರ್ಬಂಧಿಸಲ್ಪಟ್ಟಿದ್ದಳು. ಅವಳು ರಾಜ್ಯ ಸಭಾಗೃಹಕ್ಕೆ ಹೋಗಲು ಅಥವಾ ಸಮ್ಮೇಳನವೊಂದನ್ನು ಹಾಜರಾಗಲು ಅಸಮರ್ಥಳಾಗಿದ್ದಳು. ಆದರೆ ಅವಳು ಸುವಾರ್ತೆಯನ್ನು ಪ್ರಕಟಿಸುವುದರಲ್ಲಿ ತೀವ್ರವಾಗಿ ಒಳಗೂಡಿದ್ದಳು. ಅವಳ 37 ವರ್ಷ ನಿರ್ಬಂಧದ ಅವಧಿಯಲ್ಲಿ, 17 ಜನರು ಸತ್ಯವನ್ನು ಕಲಿಯುವಂತೆ ಸಹಾಯಮಾಡಲು ಅವಳು ಸಮರ್ಥಳಾಗಿದ್ದಳು! ಅವಳು ಅದನ್ನು ಹೇಗೆ ಮಾಡಿದಳು? ಬಾಗಿಲಿಂದ ಬಾಗಿಲಿಗೆ ಹೋಗಲು ಅಶಕ್ತಳಾಗಿದ್ದರೂ, ಪ್ರತಿ ದಿನ ಅವಳ ಸಂಪರ್ಕಕ್ಕೆ ಬಂದವರೊಡನೆ ಅನೌಪಚಾರಿಕವಾಗಿ ಸಾಕ್ಷಿನೀಡಲು ಅವಳು ಒಂದು ವಿಧವನ್ನು ಕಂಡುಕೊಂಡಳು.
4 ಬಾಸ್ನಿಯದಲ್ಲಿರುವ ನಮ್ಮ ಸಹೋದರರು ಯುದ್ಧ ಮತ್ತು ನಷ್ಟದೊಂದಿಗೆ ನಿಭಾಯಿಸಬೇಕಾಗಿರುತ್ತದೆ. ಹಾಗಿದ್ದರೂ, ಅವರು ಇತರರಿಗೆ ಸಾರುವುದನ್ನು ಕ್ರಮವಾಗಿ ಮುಂದುವರಿಸುತ್ತಾರೆ. ಸಾರಯೆವೊದಲ್ಲಿ ಪ್ರಚಾರಕರು ಸುವಾರ್ತೆಯ ಕುರಿತು ಇತರರೊಂದಿಗೆ ಮಾತಾಡುತ್ತಾ ಪ್ರತಿ ತಿಂಗಳು ಸರಾಸರಿ 20 ತಾಸುಗಳನ್ನು ವ್ಯಯಿಸುತ್ತಿದ್ದಾರೆ, ಹಾಗೂ ಅವರು ಪ್ರತಿಯೊಬ್ಬರು ಸರಾಸರಿ ಎರಡು ಬೈಬಲ್ ಅಭ್ಯಾಸಗಳನ್ನು ನಡೆಸುತ್ತಾರೆ. ತಮ್ಮ ದುಸ್ಸಹವಾದ ಪರಿಸ್ಥಿತಿಗಳ ಹೊರತೂ, ಅವರು ನಿಲುಗಡೆಯಿಲ್ಲದೆ ಸಾರುತ್ತಾರೆ ಮತ್ತು ಕಲಿಸುತ್ತಾರೆ.
5 ಎಳೆಯರೂ ಶುಶ್ರೂಷೆಗಾಗಿ ಹುರುಪನ್ನು ಪ್ರದರ್ಶಿಸುತ್ತಾರೆ. ರುಆಂಡದಲ್ಲಿನ ಸಾಕ್ಷಿಗಳ ಒಂದು ಕುಟುಂಬವನ್ನು ಒಂದು ಕೋಣೆಯಲ್ಲಿ ಹಾಕಲಾಯಿತು. ಅಲ್ಲಿ ಸೈನಿಕರು ಅವರನ್ನು ಕೊಲ್ಲಲು ತಯಾರಾದರು. ಕುಟುಂಬವು ಮೊದಲು ಪ್ರಾರ್ಥನೆಮಾಡಲಿಕ್ಕೆ ಅನುಮತಿಯನ್ನು ಕೇಳಿಕೊಂಡಿತು. ಇದು ಅನುಮತಿಸಲ್ಪಟ್ಟಿತು, ಮತ್ತು ಎಳೆಯ ಪುತ್ರಿಯಾದ, ಡೆಬೊರ ಜೋರಾಗಿ ಪ್ರಾರ್ಥಿಸಿದ್ದು: “ಯೆಹೋವನೇ, ಈ ವಾರ ಪಪ್ಪ ಮತ್ತು ನಾನು ಐದು ಪತ್ರಿಕೆಗಳನ್ನು ನೀಡಿದೆವು. ಈ ಜನರಿಗೆ ಸತ್ಯವನ್ನು ಕಲಿಸಲು ಮತ್ತು ಅವರಿಗೆ ಜೀವವನ್ನು ಗಳಿಸಲು ಸಹಾಯಮಾಡುವಂತೆ ನಾವು ಹೇಗೆ ಅವರಲ್ಲಿಗೆ ಹಿಂದಿರುಗಿ ಹೋಗಬಲ್ಲೆವು?” ಅವಳ ಬಲವಾದ ನಂಬಿಕೆ ಮತ್ತು ಶುಶ್ರೂಷೆಗಾಗಿನ ಅವಳ ಪ್ರೀತಿಯ ಕಾರಣದಿಂದ, ಇಡೀ ಕುಟುಂಬವು ಉಳಿಸಲ್ಪಟ್ಟಿತು.
6 ಇಂದು, ಇತರರಿಗೆ ಸಾಕ್ಷಿನೀಡಲು ಅವಕಾಶಗಳಿಗಾಗಿ ನಿಗಾವಣೆಯನ್ನಿಡುವ ಮತ್ತು “ನಿತ್ಯಜೀವಕ್ಕಾಗಿ ಯುಕ್ತ ಪ್ರವೃತ್ತಿ”ಯಿರುವವರನ್ನು ಅನ್ವೇಷಿಸುವ ಅಗತ್ಯವಿದೆ. (ಅ. ಕೃ. 13:48, NW) ಸ್ಥಳಿಕ ಸಂದರ್ಭಗಳಿಗನುಸಾರವಾಗಿ, ಬೆಳಗ್ಗೆ, ಅಪರಾಹ್ಣ, ಅಥವಾ ಸಾಯಂಕಾಲಗಳಲ್ಲಿಯಾಗಲಿ, ಅನುಕೂಲಕರ ಸಮಯಗಳಲ್ಲಿ ಗುಂಪು ಸಾಕ್ಷಿಕಾರ್ಯಕ್ಕಾಗಿ ಏರ್ಪಾಡುಗಳನ್ನು ಸಭಾ ಹಿರಿಯರು ಮಾಡುತ್ತಾರೆ. ನಮ್ಮ ರಾಜ್ಯದ ಸೇವೆಯಲ್ಲಿನ ಲೇಖನಗಳು ಮತ್ತು ಸೇವಾ ಕೂಟಗಳು, ಸರ್ಕಿಟ್ ಸಮ್ಮೇಳನಗಳು, ಮತ್ತು ಜಿಲ್ಲಾ ಅಧಿವೇಶನಗಳಲ್ಲಿನ ಭಾಗಗಳು, ರಾಜ್ಯ ಸಾಕ್ಷಿನೀಡುವಿಕೆಯ ವಿವಿಧ ಹಾದಿಗಳಲ್ಲಿ ಪಾಲುತೆಗದುಕೊಳ್ಳಲು ಸಮಯೋಚಿತವಾದ ಸೂಚನೆಗಳನ್ನು ಮತ್ತು ಉತ್ತೇಜನವನ್ನು ನೀಡುತ್ತವೆ. ಇದಕ್ಕೆ ಕೂಡಿಸಿ, ಸರ್ಕಿಟ್ ಮತ್ತು ಜಿಲ್ಲಾ ಮೇಲ್ವಿಚಾರಕರು ಪ್ರಚಾರಕರಿಗೆ ರಸ್ತೆಬದಿಯ ಸಾಕ್ಷಿನೀಡುವಿಕೆಯಲ್ಲಿ ತರಬೇತಿ ನೀಡುತ್ತಾರೆ, ವ್ಯಾಪಾರ ಟೆರಿಟೊರಿಯಲ್ಲಿ ಕೆಲಸಮಾಡುವ ವಿಧವನ್ನು ತೋರಿಸುತ್ತಾರೆ, ಮತ್ತು ಎಲ್ಲೆಲ್ಲಿ ಜನರು ಕಂಡುಬರುತ್ತಾರೋ ಅಲ್ಲಿ ಸಾಕ್ಷಿಯನ್ನು ನೀಡುವುದಕ್ಕೆ ಇರುವ ಇತರ ವಿಧಗಳನ್ನು ನಿರ್ದೇಶಿಸುತ್ತಾರೆ. ಇದೆಲ್ಲವೂ ಸುವಾರ್ತೆಯನ್ನು ಪ್ರಕಟಿಸುವುದರಲ್ಲಿ ನಿಲುಗಡೆಯಿಲ್ಲವೆಂಬುದನ್ನು ಒತ್ತಿಹೇಳುತ್ತದೆ!
7 ಯೇಸುವಿನ ಅಪೊಸ್ತಲರು ಧೈರ್ಯವಾಗಿ ಪ್ರಕಟಿಸಿದ್ದು: “ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು.” ಎಲ್ಲ ಅಡೆತಡೆಗಳ ಹೊರತೂ ಅವರು ಹೇಗೆ ಪಟ್ಟುಹಿಡಿದರು? ತಮಗೆ ಸಹಾಯಮಾಡುವಂತೆ ಅವರು ಯೆಹೋವನನ್ನು ಕೇಳಿಕೊಂಡರು; ಆತನು ಸಹಾಯಮಾಡಿದನು, ಮತ್ತು “ಅವರೆಲ್ಲರು ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳುವವರಾದರು.” (ಅ. ಕೃ. 4:20, 29, 31) ಪ್ರತಿಯೊಬ್ಬರೂ ಶುಶ್ರೂಷೆಯಲ್ಲಿ ಗಮನಾರ್ಹವಾದ ಅನುಭವಗಳೊಂದಿಗೆ ಆಶೀರ್ವದಿಸಲ್ಪಡದಿರಬಹುದು, ಆದರೆ ನಾವು ನಿಲುಗಡೆಯಿಲ್ಲದೆ ಸುವಾರ್ತೆಯನ್ನು ಪ್ರಕಟಿಸಲು ನಿಜವಾಗಿಯೂ ಬಯಸುವುದಾದರೆ ಮತ್ತು ದಿನನಿತ್ಯವೂ ಹಾಗೆ ಮಾಡಲು ನಾವು ಪ್ರಯತ್ನವನ್ನು ಮುಂದಿಡುವುದಾದರೆ ಯೆಹೋವನು ನಮಗೆ ಸಹಾಯಮಾಡುವನು.