ನಮ್ಮ ಶುಶ್ರೂಷೆಯನ್ನು ಎಡೆಬಿಡದೆ ಮಂದರಿಸುವುದು
1 ಅಂತ್ಯಕಾಲದೊಳಗೆ ನಾವು ಆಳವಾಗಿ ಮುಂದರಿಯುವಾಗ ಈ ಲೋಕದ ತೋರಿಕೆಯು ತೀವ್ರವಾಗಿ ಬದಲಾಗುತ್ತಲಿದೆ. (1 ಕೊರಿ. 7:31) ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ ಲೋಕಕಂಪನೆಯ ಘಟನೆಗಳು ಸಂಭವಿಸುತ್ತಾ ಇವೆ. ನಮ್ಮ ಸುತ್ತಲಿನ ಲೋಕದಲ್ಲಿ ಮತ್ತು ದೇವಪ್ರಭುತ್ವ ಸಂಸ್ಥೆಯೊಳಗೆ ಏನೆಲ್ಲಾ ಸಂಭವಿಸುತ್ತಿದೆಂದು ನಾವು ನೋಡುವಾಗ, ರಾಜ್ಯದ “ಸುವಾರ್ತೆಯನ್ನು” ನಾವು ಸಾರುವುದೆಷ್ಟು ಜರೂರಿಯದ್ದೆಂಬದನ್ನು ಗಣ್ಯಮಾಡಬಲ್ಲೆವು.—ಮಾರ್ಕ 13:10.
2 ಶಿಷ್ಯರನ್ನಾಗಿ ಮಾಡಲು ನಮಗೆ ಆಜ್ನೆಯನ್ನು ಕೊಟ್ಟಾತನು ನಮ್ಮ ನಾಯಕನೂ ಮಾದರಿಯೂ ಆದ ಯೇಸು ಕ್ರಿಸ್ತನೇ. “ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂಬ ವಚನವನ್ನು ಕೊಟ್ಟ ಮೂಲಕ ಆ ಕಾರ್ಯದ ಸಾಫಲ್ಯಕ್ಕೆ ಆತನು ಆಧಾರಕೊಟ್ಟಿರುವನು. (ಮತ್ತಾ. 28:19, 20) ಯೇಸುವಿನ ಶಿಷ್ಯರು ಆತನ ಮಾತುಗಳನ್ನು ಗಂಭೀರವಾಗಿ ತಕ್ಕೊಂಡರು ಮತ್ತು ತೀವ್ರ ವಿರೋಧದ ಎದುರಲ್ಲೂ “ಎಡೆಬಿಡದೆ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವಾರ್ತೆಯನ್ನು ಸಾರುತ್ತಾ ಇದ್ದರು.” (ಅಪೋ. 5:42) ಎಂತಹ ಉತ್ತಮ ಮಾದರಿಯನ್ನು ಅವರು ನಮಗಾಗಿ ಇಟ್ಟಿರುವರು!
3 1990ರ ವರ್ಷಪುಸ್ತಕ ವನ್ನು ನಾವು ಓದುವಾಗ, ಯೆಹೋವನು ನಮ್ಮ ಕಾರ್ಯವನ್ನು ಹೊಸ ಶಿಷ್ಯರಲ್ಲಿ ಒಳ್ಳೇ ವೃದ್ಧಿಯನ್ನು ಕೊಟ್ಟ ಮೂಲಕ ಆಶೀರ್ವದಿಸಿರುವನೆಂಬದು ವ್ಯಕ್ತ. ಕೆಲವು ದೇಶಗಳಲ್ಲಾದರೋ ನಿಜವಾಗಿ ಕೌತುಕಕಾರಿಯಾದ ವೃದ್ಧಿಯು ವರದಿಯಾಗಿದೆ. ಲೋಕವ್ಯಾಪಕ ವೃದ್ಧಿಯು ಕೇವಲ ಕೆಲವೇ ವರ್ಷಗಳ ಹಿಂದೆ ನಾವು ಯಾರೇ ಊಹಿಸಿದ್ದಕ್ಕಿಂತ ಎಷ್ಟೋ ಮಿಗಿಲಾಗಿದೆ. (ಯೆಶಾ. 60:22) ಆದರೆ ನಮ್ಮ ಸ್ಥಳೀಕ ಕ್ಷೇತ್ರದ ವಿಷಯದಲ್ಲೇನು? ಮತ್ತು ನಮ್ಮ ವೈಯಕ್ತಿಕ ಶುಶ್ರೂಷೆಯ ಕುರಿತೇನು? ಎಲ್ಲೆಲ್ಲಿಯೂ ಇರುವ ನಮ್ಮ ಜತೆ ಕೆಲಸಗಾರರ ಸಂಘಟಿತ ಸೇವೆಯಲ್ಲಿ ಹರ್ಷಿಸುವ ಹಾಗೆ ನಮ್ಮ ಸೇವೆಯಲ್ಲೂ ನಾವು ಹರ್ಷಿಸುತ್ತೇವೋ? ನಾವು ಶುಶ್ರೂಷೆಯಲ್ಲಿ ನಮ್ಮ ಪ್ರಯತ್ನವನ್ನು ಎಡೆಬಿಡದೆ ಮುಂದರಿಸುತ್ತೇವೋ?
ನಮ್ಮ ವೈಯಕ್ತಿಕ ಪಾಲು
4 ಎಲ್ಲಾ ಕ್ಷೇತ್ರಗಳೂ ಒಂದೇ ಸಮಾನ ಫಲಕೊಡುವುದಿಲ್ಲವೆಂಬದು ತೀರಾ ವ್ಯಕ್ತವು. (ಮತ್ತಾಯ 13:23 ಹೋಲಿಸಿ.) ಅಯರ್ಲೆಂಡ್ ಮತ್ತು ಕ್ವಿಬೆಕ್ ನಂತಹ ಕೆಲವು ಕ್ಷೇತ್ರಗಳು, ಉತ್ಸಾಹೀ ಶುಶ್ರೂಷಕರ ಅನೇಕ ವರ್ಷಗಳ ಪರಿಶ್ರಮದ ಸೇವೆಯ ನಂತರವೇ ಫಲಕಾರಿಯಾದವೆಂಬದೂ ಸತ್ಯ. ಕೆಲವು ಕ್ಷೇತ್ರಗಳಲ್ಲಿ ತುಂಬಾ ವಿರೋಧಕರಿದ್ದಾರೆ, ಮತ್ತು ಬೇರೆ ಕಡೆಗಳಲ್ಲಿ ಜನರು ರಾಜ್ಯದ ಸಂದೇಶದ ಕಡೆಗೆ ನಿರಾಸಕ್ತಿ ಮತ್ತು ಅಪ್ರತಿಕ್ರಿಯೆ ತೋರಿಸುತ್ತಾರೆ. ಇನ್ನೂ ಕೆಲವೆಡೆಗಳಲ್ಲಿ ಕ್ಷೇತ್ರತುಂಬಾ ಕೆಲಸಗಾರರಿರುವದರಿಂದ ಸೇವೆಮಾಡಲು ಸ್ವಲ್ಪವೇ ಟೆರಿಟೆರಿ ಸಿಗುತ್ತದೆ. ಆದರೆ ಯಾವ ರೀತಿಯ ಕ್ಷೇತ್ರವೇ ನಮಗಿರಲಿ, ನಮ್ಮ ಉತ್ಸಾಹವೆಂದೂ ಕುಂದಬಾರದು. “ಒಳ್ಳೇದನ್ನು ಮಾಡುವುದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದೆ ಇದ್ದರೆ ತಕ್ಕ ಕಾಲದಲ್ಲಿ ಬೆಳೆಯನ್ನು ಕೊಯ್ಯುವೆವು” ಎಂದು ಅಪೋಸ್ತಲ ಪೌಲನು ಬರೆದಿದ್ದಾನೆ. (ಗಲಾ. 6:9) ಅವನ ಬುದ್ಧಿವಾದವು ಕ್ರೈಸ್ತರೆಲ್ಲರಿಗೆ ಅನ್ವಯಿಸುತ್ತದೆ. ನಾವದನ್ನು ಹೇಗೆ ಮಾಡಶಕ್ತರು? ನಮ್ಮ ಶುಶ್ರೂಷೆಯನ್ನು ಎಡೆಬಿಡದೆ ಮುಂದರಿಸುವಂತೆ ನಮಗೇನು ಸಹಾಯ ಮಾಡುವುದು?
5 ನಾವು ಯೆಹೋವನಲ್ಲಿ ಭರವಸವಿಡುವುದಾದರೆ ಮತ್ತು ಬಲಕ್ಕಾಗಿ ಆತನ ಶಕ್ತಿಯಲ್ಲಿ ಆತುಕೊಳ್ಳುವುದಾದರೆ ನಾವು ಕ್ರಿಯಾಶೀಲರಾಗಿ ಉಳಿಯುವೆವು ಮತ್ತು ನಮ್ಮ ಶುಶ್ರೂಷೆಯಲ್ಲಿ ಸಾಫಲ್ಯ ಪಡೆಯುವೆವು. (1 ಕೊರಿ. 3:6) ಸಹಾಯಕ್ಕಾಗಿ ನಾವು ಮಾಡುವ ಪ್ರಾರ್ಥನೆಗೆ ಉತ್ತರವಾಗಿ ಯೆಹೋವನು ನಮಗೆ ಸೂಚನೆ, ವ್ಯಾವಹಾರ್ಯ ಸಲಹೆ, ಮತ್ತು ನಮ್ಮ ವೈಯಕ್ತಿಕ ಉಪಯೋಗಕ್ಕಾಗಿ ಹಾಗೂ ಆತನನ್ನು ತಿಳಿಯಲು ಇತರರ ಸಹಾಯಕ್ಕಾಗಿ ಹೇರಳವಾದ ಬೈಬಲ್ ಸಾಹಿತ್ಯವನ್ನು ಒದಗಿಸುತ್ತಾನೆ. ಈ ಒದಗಿಸುವಿಕೆಗಳ ಪೂರ್ಣ ಉಪಯೋಗವನ್ನು ನಾವು ಮಾಡುತ್ತಿದ್ದೇವೋ?
ಯೋಗ್ಯ ಮನೋಭಾವವನ್ನು ಇಡಿರಿ
6 ನಕಾರಾತ್ಮಕ ಭಾವವು ನಮಲ್ಲಿದ್ದರೆ ಅದು ನಮ್ಮ ಫಲದಾಯಕ ಶುಶ್ರೂಷೆಗೆ ದೊಡ್ಡ ವಿಘ್ನವಾಗಬಲ್ಲದು. ನಮ್ಮ ಕ್ಷೇತ್ರದ ಜನರ ಹಿಂದಣ ನಿರಾಸಕ್ತಿಯ ಆಧಾರದ ಮೇಲೆ ಅವರ ಕಡೆಗೆ ದುರಭಿಪ್ರಾಯವನ್ನು ನಾವು ತಾಳಿದ್ದಲ್ಲಿ, ಆ ಭಾವನೆಯು ನಮ್ಮ ಸರ್ವದಲ್ಲಿ, ಮುಖಭಾವದಲ್ಲಿ, ಮತ್ತು ಕ್ಷೇತ್ರಸೇವೆಗಾಗಿ ಒಳ್ಳೇ ತಯಾರಿಯ ಕೊರತೆಯಲ್ಲಿ ತೋರಿಬರುವುದು. ಸಾರುವ ಮತ್ತು ಕಲಿಸುವ ನಿಯೋಗವು ನಮಗಿದೆ, ಮತ್ತು ಆ ಕೆಲಸವು ಕೊನೆಗೊಂಡಿದೆಂದು ನಮಗೆ ಹೇಳಲ್ಪಟ್ಟಿಲ್ಲ. ದೈವಿಕ ಮಾರ್ಗದರ್ಶನೆಗೆ ನಮ್ಮ ವಿಧೇಯತೆ ಮತ್ತು ಅಧೀನತೆಯು ನಮ್ಮ ಶುಶ್ರೂಷೆಯನ್ನು ಎಡೆಬಿಡದೆ ಮುಂದರಿಸಲು ನಮ್ಮನ್ನು ಪ್ರೇರಿಸಬೇಕು.
7 ದುಷ್ಟರನ್ನು ಎಚ್ಚರಿಸುವ ಮತ್ತು ಶಿಷ್ಯರನ್ನು ಒಟ್ಟುಗೂಡಿಸುವ ಕುರಿತಾದ ಯೆಹೋವನ ಉದ್ದೇಶವು ಅಂತ್ಯವು ಬರುವ ಮಂಚಿತವಾಗಿ ಪೂರೈಸಲ್ಪಡುವುದು. ಹೀಗೆ ನಾವು ನಮ್ಮ ಶುಶ್ರೂಷೆಯನ್ನು ಎಡೆಬಿಡದೆ ಮುಂದರಿಸುವ ಮೂಲಕ ನಮ್ಮ ನಂಬಿಕೆ ಮತ್ತು ಪ್ರೀತಿಯನ್ನು ತೋರಿಸುವುದಾದರೆ, ನಾವೀಗ ನಮ್ಮ ಶುಶ್ರೂಷೆಯ ಆನಂದದಲ್ಲಿ ಪಾಲಿಗರಾಗುವೆವು ಮತ್ತು ದೇವಜನರೊಂದಿಗೆ ಅನಂತ ಆಶೀರ್ವಾದಗಳನ್ನು ಮುನ್ನೋಡಬಲ್ಲೆವು.