ನಿಮ್ಮ ಸ್ವಂತ ಪತ್ರಿಕಾ ನಿರೂಪಣೆಯನ್ನು ತಯಾರಿಸಿರಿ
1 ಲೋಕದ ವಿವಾದಾಂಶಗಳಿಂದ ಹಿಡಿದು “ದೇವರ ಅಗಾಧವಾದ ವಿಷಯಗಳ” ವರೆಗೆ ಪ್ರತಿಯೊಂದು ವಿಷಯವನ್ನೂ ಆವರಿಸುವ ಅವುಗಳ ಸಮಯೋಚಿತ ಮತ್ತು ಬೋಧಪ್ರದ ಲೇಖನಗಳಿಗಾಗಿ ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಗಣ್ಯಮಾಡುತ್ತೇವೆ. (1 ಕೊರಿಂ. 2:10) ಸತ್ಯವನ್ನು ಪ್ರಗತಿಪರವಾಗಿ ಪ್ರಕಟಪಡಿಸುವುದರಲ್ಲಿ ಯೆಹೋವನು ಉಪಯೋಗಿಸುತ್ತಿರುವ, ಈ ಪತ್ರಿಕೆಗಳಲ್ಲಿ ನಾವು ಓದಿರುವಂತಹ ಅನೇಕ ಹೊಸ ಮತ್ತು ಭಕ್ತಿವರ್ಧಕ ವಿಷಯಗಳನ್ನು ನಾವೆಲ್ಲರೂ ಜ್ಞಾಪಿಸಿಕೊಳ್ಳುತ್ತೇವೆ. (ಜ್ಞಾನೋ. 4:18) ಪ್ರತಿಯೊಂದು ಸಂದರ್ಭದಲ್ಲಿ ಬಿಡಿ ಪ್ರತಿಗಳು ಮತ್ತು ಚಂದಾಗಳನ್ನು ನೀಡುವ ಮೂಲಕ, ನಾವು ಅವುಗಳನ್ನು ಸಾಧ್ಯವಿರುವಷ್ಟು ವಿಸ್ತಾರವಾಗಿ ವಿತರಿಸಲಿಕ್ಕಾಗಿ ಆತುರರಾಗಿರಲು ಬಯಸುತ್ತೇವೆ.
2 ನಿಮ್ಮ ಟೆರಿಟೊರಿಯನ್ನು ವಿಶ್ಲೇಷಿಸಿರಿ: ನಿಮ್ಮ ಕ್ಷೇತ್ರದಲ್ಲಿ ಯಾವ ರೀತಿಯ ಜನರು ಜೀವಿಸುತ್ತಾರೆ? ಅವರು ಯಾವಾಗಲೂ ತರಾತುರಿಯಲ್ಲಿರುವುದಾದರೆ, ನೀವು ಸಂಕ್ಷಿಪ್ತವೂ, ಚುಟುಕೂ ಆಗಿರುವ ಒಂದು ನಿರೂಪಣೆಯನ್ನು ತಯಾರಿಸುವ ಅಗತ್ಯ ಇರಬಹುದು. ಜೀವನದ ಗತಿಯು ಕಡಿಮೆ ತರಾತುರಿಯದ್ದಾಗಿರುವ ಟೆರಿಟೊರಿ ನಿಮಗಿರುವಲ್ಲಿ, ನೀವು ಹೆಚ್ಚನ್ನು ಹೇಳಲು ಶಕ್ತರಾಗಿರಬಹುದು. ಹೆಚ್ಚಿನ ಮನೆಯವರು ದಿನದ ಸಮಯದಲ್ಲಿ ಕೆಲಸ ಮಾಡುತ್ತಿರುವುದಾದರೆ, ನೀವು ಮಧ್ಯಾಹ್ನದಲ್ಲಿ ತಡವಾಗಿ ಅಥವಾ ಸಂಜೆಯ ಆರಂಭದಲ್ಲಿ ಅವರ ಮನೆಗಳಿಗೆ ಭೇಟಿನೀಡುವುದರಿಂದ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳಬಹುದು. ನೀವು ಕೆಲವರನ್ನು ಬೀದಿ ಸಾಕ್ಷಿಕಾರ್ಯ ಅಥವಾ ಅಂಗಡಿಯಿಂದ ಅಂಗಡಿಯ ಕಾರ್ಯದ ಮೂಲಕ ದಿನದ ಸಮಯದಲ್ಲಿ ಸಂಪರ್ಕಿಸಬಹುದು. ಬಸ್ಸು ನಿಲ್ದಾಣಗಳು ಅಥವಾ ರೈಲ್ವೇ ಸ್ಟೇಷನ್ನುಗಳ ಹತ್ತಿರ ಮತ್ತು ಉದ್ಯಾನಗಳಲ್ಲಿ ಜನರನ್ನು ಅನೌಪಚಾರಿಕವಾಗಿ ಸಮೀಪಿಸುವ ಮೂಲಕ ಕೆಲವು ಪ್ರಚಾರಕರು ಒಳ್ಳೆಯ ಫಲಿತಾಂಶಗಳನ್ನು ಪಡೆಯುತ್ತಾರೆ.
3 ಸ್ವತಃ ಪತ್ರಿಕೆಗಳೊಂದಿಗೆ ಪರಿಚಿತರಾಗಿರಿ: ನೀವು ಪ್ರತಿಯೊಂದು ಸಂಚಿಕೆಯನ್ನು ಪಡೆದ ಕೂಡಲೆ ಅದನ್ನು ಓದಿರಿ. ನಿಮ್ಮ ಟೆರಿಟೊರಿಯಲ್ಲಿರುವ ಜನರನ್ನು ಆಕರ್ಷಿಸಬಹುದೆಂದು ನಿಮಗನಿಸುವ ಲೇಖನಗಳನ್ನು ಆರಿಸಿಕೊಳ್ಳಿರಿ. ಅವರಿಗೆ ಯಾವ ವಿಷಯಗಳು ಆಸ್ಥೆಯುಳ್ಳದ್ದಾಗಿವೆ? ನೀವು ಪ್ರದರ್ಶಿಸಲು ಯೋಜಿಸುವ ಲೇಖನದಿಂದ ನೀವು ಉಲ್ಲೇಖಿಸಸಾಧ್ಯವಿರುವ ಒಂದು ನಿರ್ದಿಷ್ಟ ಅಂಶಕ್ಕಾಗಿ ಹುಡುಕಿರಿ. ಆಸಕ್ತಿಯನ್ನು ಉದ್ರೇಕಿಸಲು ನೀವು ಎಬ್ಬಿಸಸಾಧ್ಯವಿರುವ ಒಂದು ಪ್ರಶ್ನೆಯ ಕುರಿತಾಗಿ ಯೋಚಿಸಿರಿ. ನಿಮಗೆ ಸಂದರ್ಭ ಸಿಗುವಲ್ಲಿ, ಮನೆಯವನಿಗೆ ಓದಿಹೇಳಲಿಕ್ಕಾಗಿ ಒಂದು ಸಮಯೋಚಿತ ಶಾಸ್ತ್ರವಚನವನ್ನು ಆರಿಸಿಕೊಳ್ಳಿರಿ. ಒಂದು ಚಂದಾವನ್ನು ಸ್ವೀಕರಿಸಲಿಕ್ಕಾಗಿ ಮನೆಯವನನ್ನು ಪ್ರಚೋದಿಸಲು ನೀವು ಏನನ್ನು ಹೇಳಬಹುದು ಮತ್ತು ಒಂದು ಪುನರ್ಭೇಟಿಗಾಗಿ ನೀವು ತಳಪಾಯವನ್ನು ಹೇಗೆ ಹಾಕಬಲ್ಲಿರೆಂಬುದರ ಕುರಿತಾಗಿ ಯೋಚಿಸಿರಿ.
4 ನಿಮ್ಮ ಆರಂಭದ ಮಾತುಗಳನ್ನು ತಯಾರಿಸಿರಿ: ನಿಮ್ಮನ್ನು ಪರಿಚಯಪಡಿಸಿಕೊಳ್ಳಲು ಮತ್ತು ಒಂದು ಸಂಭಾಷಣೆಯನ್ನು ಆರಂಭಿಸಲು ನೀವು ಉಪಯೋಗಿಸಲು ಯೋಜಿಸುತ್ತಿರುವ ಮಾತುಗಳನ್ನು ಜಾಗರೂಕತೆಯಿಂದ ಆಯ್ದುಕೊಳ್ಳಿರಿ. ಈ ಆರಂಭದ ಹೇಳಿಕೆಯಲ್ಲಿ ಕೆಲವರು ಯಶಸ್ಸನ್ನು ಕಂಡುಕೊಂಡಿದ್ದಾರೆ: “ಈ ಪತ್ರಿಕೆಯಲ್ಲಿ ನಾನು ಒಂದು ಆಕರ್ಷಕ ಲೇಖನವನ್ನು ಓದಿದ್ದೇನೆ, ಮತ್ತು ನಾನು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.” ಅನೇಕರು, ತಾವು ಉಪಯೋಗಿಸಲು ಯೋಜಿಸುತ್ತಿರುವ ಮಾತಾಡಬಹುದಾದ ಅಂಶದ ಮೇಲೆ ಕೇಂದ್ರೀಕರಿಸುವ ಒಂದು ಪ್ರಶ್ನೆಯೊಂದಿಗೆ ಆರಂಭಿಸುತ್ತಾರೆ. ಉದಾಹರಣೆಗಾಗಿ:
5 ಪಾತಕದ ಚಾಲ್ತಿಯ ಕುರಿತಾದ ಒಂದು ಲೇಖನವನ್ನು ಎತ್ತಿತೋರಿಸುತ್ತಿರುವಲ್ಲಿ, ನೀವು ಹೀಗೆ ಕೇಳಬಲ್ಲಿರಿ:
◼ “ಕಳವು ಮಾಡಲ್ಪಡುವ ಅಥವಾ ಹಾನಿಗೊಳಿಸಲ್ಪಡುವ ಭಯವಿಲ್ಲದೆ ರಾತ್ರಿಯಲ್ಲಿ ಮಲಗುವಂತೆ ನಾವು ಶಕ್ತರಾಗಲು ಯಾವುದು ಆವಶ್ಯಕ?” ಈ ಸಮಸ್ಯೆಗೆ ಒಂದು ಪರಿಹಾರದ ಕುರಿತಾಗಿ ನಿಮ್ಮಲ್ಲಿ ಸ್ವಲ್ಪ ಮಾಹಿತಿಯಿದೆಯೆಂಬುದನ್ನು ವಿವರಿಸಿರಿ. ಆ ಪರಿಹಾರವು ಬೇಗನೆ ಪ್ರತಿಯೊಂದು ಬೇರೆ ವಿಧದ ಸಾಮಾಜಿಕ ಅವ್ಯವಸ್ಥೆಯನ್ನೂ ನಿರ್ಮೂಲಗೊಳಿಸುವುದು. ಅಂತಹ ಒಂದು ನಿರೀಕ್ಷೆಯನ್ನು ನೀಡುವ ಪತ್ರಿಕೆಯಲ್ಲಿನ ಯಾವುದೊ ವಿಷಯಕ್ಕೆ ನಿರ್ದೇಶಿಸಿರಿ. ನೀವು ಹಿಂದಿರುಗಿ ಹೋಗುವಾಗ, ಜ್ಞಾನ ಪುಸ್ತಕದ 1ನೆಯ ಅಧ್ಯಾಯಕ್ಕೆ ನೀವು ಮನೆಯವನ ಗಮನವನ್ನು ಸೆಳೆಯಸಾಧ್ಯವಿದೆ.
6 ಕುಟುಂಬ ಜೀವಿತದ ವಿಷಯದಲ್ಲಿ ಒಂದು ಲೇಖನವನ್ನು ನೀಡುತ್ತಿರುವಾಗ, ನೀವು ಇದನ್ನು ಹೇಳಬಹುದು:
◼ “ಹೆಚ್ಚಿನ ಹೆತ್ತವರು, ಈ ದಿನಗಳಲ್ಲಿ ಒಂದು ಕುಟುಂಬವನ್ನು ಪೋಷಿಸುವುದನ್ನು ಒಂದು ನಿಜವಾದ ಪಂಥಾಹ್ವಾನವಾಗಿ ಕಂಡುಕೊಳ್ಳುತ್ತಾರೆ. ಈ ವಿಷಯದ ಮೇಲೆ ಅನೇಕ ಪುಸ್ತಕಗಳು ಬರೆಯಲ್ಪಟ್ಟಿವೆ, ಆದರೆ ಪರಿಣತರು ಸಹ ಏಕಭಿಪ್ರಾಯದಿಂದಿಲ್ಲ. ವಿಶ್ವಾಸಾರ್ಹವಾದ ಮಾರ್ಗದರ್ಶನೆಯನ್ನು ಒದಗಿಸಬಲ್ಲವರು ಯಾರಾದರೂ ಇದ್ದಾರೊ?” ಬೈಬಲಿನಲ್ಲಿ ಕಂಡುಬರುವ ವಿವೇಕಯುತವಾದ ಸಲಹೆಯನ್ನು ಪ್ರದರ್ಶಿಸುವ, ಪತ್ರಿಕೆಯಲ್ಲಿನ ಒಂದು ನಿರ್ದಿಷ್ಟವಾದ ಹೇಳಿಕೆಯನ್ನು ಹಂಚಿಕೊಳ್ಳಿರಿ. ನೀವು ಪುನರ್ಭೇಟಿಯನ್ನು ಮಾಡುವಾಗ, ಜ್ಞಾನ ಪುಸ್ತಕದ ಪುಟಗಳು 145-8 ರಲ್ಲಿ ಆವರಿಸಲ್ಪಟ್ಟಿರುವ, ಮಕ್ಕಳನ್ನು ಬೆಳೆಸುವ ಕುರಿತಾದ ಶಾಸ್ತ್ರೀಯ ವಿಚಾರಗಳನ್ನು ಚರ್ಚಿಸಿರಿ.
7 ಸಾಮಾಜಿಕ ಸಮಸ್ಯೆಯ ಕುರಿತಾಗಿರುವ ಒಂದು ಲೇಖನವನ್ನು ತೋರಿಸುವಾಗ, ನೀವು ಹೀಗೆ ಹೇಳಬಲ್ಲಿರಿ:
◼ “ನಾವು ಜೀವಿಸುತ್ತಿರುವ ಒತ್ತಡಭರಿತ ಸಮಯಗಳ ಕಾರಣದಿಂದ ಅನೇಕ ಜನರು ತಾವು ಒತ್ತಡದ ಕೆಳಗಿದ್ದೇವೆಂದು ಭಾವಿಸುತ್ತಾರೆ. ನಾವು ಈ ರೀತಿಯಲ್ಲಿ ಜೀವಿಸುವಂತೆ ದೇವರು ಉದ್ದೇಶಿಸಿದನೆಂಬುದಾಗಿ ನೀವು ನೆನಸುತ್ತೀರೊ?” ಇಂದಿನ ಸಮಸ್ಯೆಗಳನ್ನು ನಿಭಾಯಿಸುವ ವಿಧ ಅಥವಾ ಚಿಂತೆಯಿಂದ ಮುಕ್ತವಾಗಿರಲಿರುವ ಒಂದು ಭವಿಷ್ಯತ್ತಿನ ಕಡೆಗೆ ನೋಡಲು ಕಾರಣಗಳನ್ನು ಕೊಡುವ ಒಂದು ಲೇಖನವನ್ನು ತೋರಿಸಿರಿ. ನಿಮ್ಮ ಮುಂದಿನ ಭೇಟಿಯಲ್ಲಿ, ಜ್ಞಾನ ಪುಸ್ತಕದ 4-5ನೆಯ ಪುಟಗಳಲ್ಲಿರುವ ಚಿತ್ರ ಮತ್ತು ವಿವರಣೆಯಬರಹವನ್ನು ಚರ್ಚಿಸಿ, ಅನಂತರ ನೇರವಾಗಿ ಒಂದು ಮನೆ ಬೈಬಲಭ್ಯಾಸಕ್ಕೆ ನಡಿಸಿರಿ.
8 ಮನೆಯವನಿಗೆ ಹೊಂದಿಕೊಳ್ಳಿರಿ: ವಿಭಿನ್ನ ಆಸಕ್ತಿಗಳು ಮತ್ತು ಹಿನ್ನೆಲೆಗಳಿರುವ ಜನರನ್ನು ನೀವು ಭೇಟಿಯಾಗುವಿರಿ. ಪ್ರತಿಯೊಬ್ಬ ಮನೆಯವನಿಗೆ ನೀವು ಅಳವಡಿಸಸಾಧ್ಯವಿರುವ ಒಂದು ಮೂಲಭೂತ ನಿರೂಪಣೆಯನ್ನು ತಯಾರಿಸಿರಿ. ನೀವು ಏನನ್ನು ಹೇಳುತ್ತೀರೊ ಅದನ್ನು ಒಬ್ಬ ಪುರುಷನಿಗೆ, ಒಬ್ಬ ಸ್ತ್ರೀಗೆ, ಒಬ್ಬ ವೃದ್ಧ ವ್ಯಕ್ತಿಗೆ, ಅಥವಾ ಒಬ್ಬ ಯುವಕನಿಗೆ ನೀವು ಹೊಂದಿಸಬಹುದಾದ ವಿಧವನ್ನು ಮನಸ್ಸಿನಲ್ಲಿಡಿರಿ. ನೀವು ಏನನ್ನು ಹೇಳಬೇಕು ಎಂಬುದರ ಕುರಿತಾಗಿ ಯಾವುದೇ ಕಟ್ಟುನಿಟ್ಟಾದ ನಿಯಮಗಳಿಲ್ಲ. ನಿಮಗೆ ಅನುಕೂಲಕರವಾಗಿರುವ ಮತ್ತು ಫಲಿತಾಂಶಗಳನ್ನು ತರುವ ಯಾವುದೇ ವಿಷಯವನ್ನು ಉಪಯೋಗಿಸಿರಿ. ಆದರೂ, ಉತ್ಸಾಹಭರಿತರಾಗಿರಿ, ಹೃತ್ಪೂರ್ವಕವಾಗಿ ಮಾತಾಡಿರಿ ಮತ್ತು ಒಬ್ಬ ಒಳ್ಳೆಯ ಕೇಳುಗರಾಗಿರ್ರಿ. “ಯೋಗ್ಯ ಪ್ರವೃತ್ತಿಯುಳ್ಳ”ವರು (NW), ನಿಮ್ಮ ಪ್ರಾಮಾಣಿಕತೆಯನ್ನು ಗ್ರಹಿಸಿ, ಅನುಕೂಲಕರವಾಗಿ ಪ್ರತಿಕ್ರಿಯಿಸುವರು.—ಅ. ಕೃ. 13:48.
9 ಒಬ್ಬರಿಗೊಬ್ಬರು ನೆರವು ನೀಡಿರಿ: ಒಬ್ಬರಿಗೊಬ್ಬರು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ, ನಾವು ನಮ್ಮನ್ನೇ ವ್ಯಕ್ತಪಡಿಸಿಕೊಳ್ಳುವ ಹೊಸ ವಿಧಗಳನ್ನು ಕಲಿಯುತ್ತೇವೆ. ಜೊತೆಯಾಗಿ ನಮ್ಮ ನಿರೂಪಣೆಗಳನ್ನು ಅಭ್ಯಾಸ ಮಾಡುವುದು, ನಮಗೆ ಅನುಭವ ಮತ್ತು ಆತ್ಮವಿಶ್ವಾಸವನ್ನು ಕೊಡುತ್ತದೆ. (ಜ್ಞಾನೋ. 27:17) ನೀವು ಏನನ್ನು ಹೇಳಲಿದ್ದೀರೊ ಅದನ್ನು ಪೂರ್ವಾಭಿನಯಿಸಿದರೆ, ಬಾಗಿಲಲ್ಲಿ ನಿಮಗೆ ಹೆಚ್ಚು ಆರಾಮವಾದ ಅನಿಸಿಕೆಯಾಗುವುದು. ತಮ್ಮ ಮಕ್ಕಳಿಗೆ ತಯಾರಿಸುವಂತೆ ಸಹಾಯ ಮಾಡಲು, ಅವರು ತಮ್ಮ ನಿರೂಪಣೆಯನ್ನು ಅಭ್ಯಾಸಮಾಡುತ್ತಿರುವಾಗ ಕಿವಿಗೊಡಲು, ಮತ್ತು ಅಭಿವೃದ್ಧಿಗಾಗಿ ಸಲಹೆಗಳನ್ನು ನೀಡಲು ಹೆತ್ತವರು ಸಮಯವನ್ನು ವ್ಯಯಿಸುವುದು ಅತಿ ಮುಖ್ಯ. ಹೆಚ್ಚು ಅನುಭವಸ್ಥರಾದ ಪ್ರಚಾರಕರೊಂದಿಗೆ ಕೆಲಸ ಮಾಡುವ ಮೂಲಕ ಹೊಸಬರು ಪ್ರಯೋಜನಪಡೆದುಕೊಳ್ಳಸಾಧ್ಯವಿದೆ.
10 ನಿಮ್ಮ ಸ್ವಂತ ಪತ್ರಿಕಾ ನಿರೂಪಣೆಯನ್ನು ತಯಾರಿಸುವುದು ಕಷ್ಟಕರವಾಗಿರುವ ಅಗತ್ಯವಿಲ್ಲ. ಅದು ಕೇವಲ ಹೇಳಲು ಮತ್ತು ಅನಂತರ ಅದನ್ನು ಒಂದು ಆಕರ್ಷಕ ವಿಧದಲ್ಲಿ ವ್ಯಕ್ತಪಡಿಸಲಿಕ್ಕಾಗಿ ಮನಸ್ಸಿನಲ್ಲಿ ಒಂದು ನಿರ್ದಿಷ್ಟ ವಿಷಯವನ್ನು ಇಟ್ಟುಕೊಳ್ಳುವ ಸಂಗತಿಯಾಗಿದೆ. ಆರಂಭದ ಹೆಜ್ಜೆ ಮತ್ತು ಮುಂದಾಲೋಚನೆಯೊಂದಿಗೆ, ಒಂದು ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆಯುವ ಒಂದು ಉತ್ತಮ ನಿರೂಪಣೆಯನ್ನು ನೀವು ತಯಾರಿಸಬಲ್ಲಿರಿ.
11 ಪತ್ರಿಕಾ ವಿತರಣೆಯು, ರಾಜ್ಯ ಸಂದೇಶವನ್ನು ನಾವು ಲೋಕವ್ಯಾಪಕವಾಗಿ ಹಬ್ಬಿಸುವ ಪ್ರಮುಖ ವಿಧಗಳಲ್ಲಿ ಒಂದಾಗಿದೆ. ಪ್ರಾಮಾಣಿಕ ಜನರೊಂದಿಗೆ ನೀವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ಅಥವಾ ಚಂದಾಗಳನ್ನು ನೀಡಲು ಸಾಧ್ಯವಿರುವಲ್ಲಿ, ಪತ್ರಿಕೆಗಳು ತಮ್ಮ ಪರವಾಗಿ ಮಾತಾಡಬಲ್ಲವು. ಯಾವಾಗಲೂ ಅವುಗಳ ಮೌಲ್ಯವನ್ನು ಮತ್ತು ಅವುಗಳ ಸಂದೇಶವು ಜೀವಗಳನ್ನು ರಕ್ಷಿಸಬಲ್ಲ ವಿಧವನ್ನು ನೆನಪಿನಲ್ಲಿಡಿರಿ. ಈ ರೀತಿಯ ‘ಒಳ್ಳೆಯ ಕೆಲಸ ಮತ್ತು ಇತರರೊಂದಿಗೆ ವಿಷಯಗಳ ಹಂಚಿಕೊಳ್ಳುವಿಕೆಯೇ,’ ಯೆಹೋವನನ್ನು ತೀರ ಹೆಚ್ಚಾಗಿ ಪ್ರಸನ್ನಗೊಳಿಸುವ ವಿಷಯವಾಗಿದೆ.—ಇಬ್ರಿ. 13:16, NW.