ವೈಯಕ್ತಿಕ ಅಭ್ಯಾಸವು ಆತ್ಮಿಕ ಪ್ರಗತಿಗೆ ನಡೆಸುತ್ತದೆ
1 ಯೆಹೋವನು ಒಬ್ಬ ಪ್ರಗತಿಪರ ದೇವರಾಗಿದ್ದಾನೆ. ಭೂಮಿಯ ಸೃಷ್ಟಿಯಲ್ಲಿ ಇದು ಸುವ್ಯಕ್ತವಾಗಿತ್ತು. ಸೃಷ್ಟಿಯ ಪ್ರತಿಯೊಂದು ಅವಧಿಯು, ಮಾನವಕುಲದ ನಿತ್ಯ ಅಸ್ತಿತ್ವಕ್ಕಾಗಿ ಒಂದು ಸುಂದರವಾದ ಗ್ರಹವನ್ನು ಒದಗಿಸುವುದರ ಕಡೆಗೆ ಪ್ರಗತಿಯನ್ನು ಕಂಡಿತು. ಮನುಷ್ಯನು ಅವಿಧೇಯತೆಯಿಂದ ಶುದ್ಧ ಆರಾಧನೆಯನ್ನು ತೊರೆದಾಗಲೂ, ಭೂಮಿಯ ಮೇಲೆ ಪ್ರಮೋದವನವನ್ನು ಕಟ್ಟಕಡೆಗೆ ಪುನಃಸ್ಥಾಪಿಸಲು ಒಂದು ಪ್ರಗತಿಪರ ಏರ್ಪಾಡನ್ನು ಪ್ರಾರಂಭಿಸುವಂತೆ ಪ್ರೀತಿಯು ಯೆಹೋವನನ್ನು ಪ್ರಚೋದಿಸಿತು.—ಆದಿ. 3:15.
2 ಮಾನವನು ಮೂಲತಃ ದೇವರ ಸ್ವರೂಪದಲ್ಲಿ ಮಾಡಲ್ಪಟ್ಟಿದ್ದು, ಅವನಲ್ಲಿ ಒಂದು ಪ್ರಗತಿಪರ ಪ್ರಕೃತಿಯು ಹಾಕಲ್ಪಟ್ಟಿದೆ. ಆದರೂ ಇಂದು ಅನೇಕರು ಪ್ರಗತಿಯನ್ನು, ಕೇವಲ ಭೌತಿಕ ಸಂಪತ್ತುಗಳ ವೃದ್ಧಿಯ ಪರಿಭಾಷೆಯಿಂದ ವೀಕ್ಷಿಸುತ್ತಾರೆ. ಈ ಸಮಯದಲ್ಲಿ ಯೆಹೋವನು ತನ್ನ ಸೇವಕರಲ್ಲಿ ಮುನ್ನೋಡುವಂತಹ ರೀತಿಯ ಪ್ರಗತಿ ಇದೇ ಆಗಿದೆಯೊ? ನಿಮ್ಮ ಜೀವಿತದಲ್ಲಿ ಯಾವ ರೀತಿಯ ಪ್ರಗತಿಯು ಗಮನಾರ್ಹವಾಗಿ ವ್ಯಕ್ತವಾಗುತ್ತದೆ?
3 ದೇವರ ಮತ್ತು ನೆರೆಯವನ ಕಡೆಗಿರುವ ಪ್ರೀತಿಯು ಆತ್ಮಿಕ ಪ್ರಗತಿಯನ್ನು ಪ್ರಚೋದಿಸುತ್ತದೆ: ತಮ್ಮ ಕುಟುಂಬದ ಅಗತ್ಯಗಳಿಗಾಗಿ ಪರ್ಯಾಪ್ತವಾಗಿ ಒದಗಿಸುವ ಆವಶ್ಯಕತೆಯನ್ನು ಕ್ರೈಸ್ತರು ಗಣ್ಯಮಾಡಬೇಕಾದರೂ, ಇದು ತಮ್ಮ ಗಮನದ ಮುಖ್ಯ ಕೇಂದ್ರಬಿಂದುವಾಗಿರಬಾರದು ಎಂಬುದನ್ನೂ ಅವರು ಗ್ರಹಿಸಬೇಕು. ಒಬ್ಬ ಯುವ ಪುರುಷನಾಗಿ, ಯೇಸು ಆತ್ಮಿಕ ಪ್ರಗತಿಯನ್ನು ಜೀವಿತದಲ್ಲಿನ ಅತಿ ಪ್ರಾಮುಖ್ಯ ಗುರಿಯಾಗಿ ಪರಿಗಣಿಸಿದನು. (ಲೂಕ 2:52) ಜೀವಿತದಲ್ಲಿ ತದನಂತರ, ಮಾರ್ಕ 12:29-31ರಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳನ್ನು ಅವನು ಹೇಳಿದಾಗ, ಅವನು ತನ್ನ ಆತ್ಮಿಕ ಪ್ರಗತಿಯ ಹಿಂದೆ ಇದ್ದ ಪ್ರಚೋದನೆಯನ್ನು ರೇಖಿಸಿದನು.
4 ನಾವು ಮಾಡುತ್ತಿರುವ ಆತ್ಮಿಕ ಪ್ರಗತಿಯ ಕುರಿತಾಗಿ ಯೋಚಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿರಿ. ನಾವು ಯೆಹೋವ ಮತ್ತು ಆತನ ವ್ಯಕ್ತಿತ್ವದ ಕುರಿತಾಗಿ ಪ್ರಥಮವಾಗಿ ಕಲಿಯಲು ಪ್ರಾರಂಭಿಸಿದಾಗ, ಆತನ ಕಡೆಗಿದ್ದ ನಮ್ಮ ಗಣ್ಯತೆ ಮತ್ತು ಪ್ರೀತಿಯು, ನಾವು ನಮ್ಮ ಯೋಚನಾವಿಧ ಮತ್ತು ಜೀವನರೀತಿಯಲ್ಲಿ ಅಳವಡಿಸುವಿಕೆಗಳನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸಿತು. ಈ ಪ್ರೀತಿಯು, ನಾವು ನಮ್ಮ ಜೀವನವನ್ನು ದೇವರಿಗೆ ಸಮರ್ಪಿಸುವ ಒಂದು ಆಶೆಯನ್ನು ಉಂಟುಮಾಡಿ, ಅದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಬಹಿರಂಗವಾಗಿ ಸಂಕೇತಿಸುವ ತನಕ ಬೆಳೆಯಿತು. ಇದು ದೇವರಿಗೆ ನಾವು ಸಲ್ಲಿಸುವ ಸೇವೆಯಲ್ಲಿ ಪ್ರಗತಿಯನ್ನು ಮಾಡುವ ಮತ್ತು ನಮ್ಮ ಜೊತೆ ಮಾನವನಿಗಾಗಿ ಪ್ರೀತಿಪರ ಚಿಂತೆಯನ್ನು ತೋರಿಸುವ ನಮ್ಮ ದೃಢವಾದ ನಿರ್ಣಯದ ರುಜುವಾತನ್ನು ಕೊಟ್ಟಿತು. ಈಗ ಸಮಯವು ಗತಿಸಿರಲಾಗಿ, ಫಿಲಿಪ್ಪಿ 3:16ರಲ್ಲಿರುವ ಪ್ರೇರಿತ ಮಾತುಗಳ ಭಾವಾರ್ಥವನ್ನು ನಾವು ಪರಿಗಣಿಸುವ ಅಗತ್ಯವಿರಬಹುದು.
5 ನಾವು ಮಾಡಿರುವಂತಹದರಲ್ಲಿಯೇ ಅತಿ ಪ್ರಾಮುಖ್ಯ ನಿರ್ಣಯವಾಗಿರುವ, ದೇವರಿಗೆ ನಮ್ಮ ಸಮರ್ಪಣೆಯು, ನಮ್ಮ ಜೀವನ ನಮೂನೆಯಲ್ಲಿ ದೊಡ್ಡ ಬದಲಾವಣೆಗಳನ್ನು ಅವಶ್ಯಪಡಿಸಿತು. ನಾವು ಸಿದ್ಧಮನಸ್ಸಿನಿಂದ ಆ ಹೆಜ್ಜೆಯನ್ನು ತೆಗೆದುಕೊಂಡು, ಸಂತೋಷದಿಂದ ನಮ್ಮ ಜೀವಿತಗಳನ್ನು ದೇವರ ಮಾರ್ಗಗಳಿಗೆ ಹೊಂದಿಸಿಕೊಂಡೆವು ಯಾಕಂದರೆ ನಮ್ಮ ಕಡೆಗಿರುವ ಆತನ ಪ್ರೀತಿಯ ಅನೇಕ ವ್ಯಕ್ತಪಡಿಸುವಿಕೆಗಳಿಂದ ನಾವು ಪ್ರಚೋದಿಸಲ್ಪಟ್ಟಿದ್ದೆವು. ಇದು ಪ್ರತಿಯಾಗಿ, ದೇವರ ಕಡೆಗಿರುವ ನಮ್ಮ ಪ್ರೀತಿಯನ್ನು ಹೆಚ್ಚಿಸಿತು. ಅಂದಿನಿಂದ, ದೇವರಿಗಾಗಿರುವ ನಮ್ಮ ಪ್ರೀತಿಯು ಪ್ರಗತಿ ಮಾಡುತ್ತಾ ಮುಂದುವರಿದಿದೆಯೊ? ಅದು ನಮ್ಮ ಜೀವನದಲ್ಲಿ ಹೆಚ್ಚು ಬಲಶಾಲಿಯಾದ ಶಕ್ತಿಯಾಗಿ ಪರಿಣಮಿಸಿದೆಯೊ? ಅಥವಾ, ‘ಮೊದಲು ಅವರಿಗಿದ್ದ ಪ್ರೀತಿಯನ್ನು ಬಿಟ್ಟು ಬಿಟ್ಟಿದ್ದ’ ಎಫೆಸ ಸಭೆಯ ಕ್ರೈಸ್ತರಂತೆ ನಾವು ಆಗಿದ್ದಿರಬಹುದೊ?—ಪ್ರಕ. 2:4, 5.
6 ದೇವರ ಕಡೆಗಿರುವ ಪ್ರೀತಿಯು, ಜಡ ಅಥವಾ ನಿಷ್ಕ್ರಿಯವಲ್ಲ, ಅದು ಪ್ರಗತಿಪರವಾಗಿದೆ. ದೇವರ ಕಡೆಗಿರುವ ನಮ್ಮ ಪ್ರೀತಿಯು, ಪ್ರಗತಿಗಾಗಿ ಇನ್ನು ಆಸ್ಪದವೇ ಇಲ್ಲದ ಒಂದು ಉಚ್ಚಬಿಂದುವನ್ನು ತಲಪಿದೆಯೆಂದು ನಮಗನಿಸುವ, ಜೀವನದ ಒಂದು ಹಂತವನ್ನು ನಾವು ಎಂದೂ ತಲಪದಿರುವೆವು. ದೇವರ ಕುರಿತಾದ ನಮ್ಮ ಜ್ಞಾನವನ್ನು ನಾವು ಗಾಢಗೊಳಿಸಿದಂತೆ, ಆತನಿಗಾಗಿರುವ ನಮ್ಮ ಪ್ರೀತಿಯು ಬೆಳೆಯುತ್ತಾ ಮುಂದುವರಿಯುತ್ತದೆ. ಅದು ನಿತ್ಯತೆಯಾದ್ಯಂತ ಬೆಳೆಯುತ್ತಾ ಇರುವುದು. ಪೌಲನು ಇದನ್ನು ರೋಮಾಪುರ 11:33-36ರಲ್ಲಿ ಎಷ್ಟು ಚೆನ್ನಾಗಿ ವ್ಯಕ್ತಪಡಿಸಿದನು. “ಕರ್ತನ [“ಯೆಹೋವನ, NW] ಮನಸ್ಸನ್ನು ತಿಳುಕೊಂಡವನಾರು?” ಎಂಬ ಪ್ರಶ್ನೆಯ ಸತ್ಯತೆಯನ್ನು ನಾವೂ ನಮ್ರಭಾವದಿಂದ ಅಂಗೀಕರಿಸುತ್ತೇವೆ.
7 ಆ ಮಾತುಗಳು, ನಾವು ನಮ್ಮ ವೈಯಕ್ತಿಕ ಜೀವನದ ಕುರಿತಾಗಿ ಆಲೋಚಿಸುವಂತೆ ಮತ್ತು ಯೆಹೋವನಿಗಾಗಿರುವ ನಮ್ಮ ಪ್ರೀತಿಯ ಆಳವನ್ನು ಪರೀಕ್ಷಿಸುವಂತೆ ಮಾಡತಕ್ಕದ್ದು. ನಾವು ಪ್ರಗತಿಯನ್ನು ಮಾಡುತ್ತಿದ್ದೇವೊ ಅಥವಾ ಜೀವಿತದ ಒತ್ತಡಗಳ ಕಾರಣದಿಂದ ಆತ್ಮಿಕ ವಿಷಯಗಳಿಗಾಗಿ ಕಡಿಮೆ ಸಮಯವಿರುವುದನ್ನು ನಾವು ಕಂಡುಕೊಳ್ಳುತ್ತಿದ್ದೇವೊ? ಕ್ರೈಸ್ತ ಸಭೆಯ ಹೊರಗಿರುವ ನಮ್ಮ ನೆರೆಯವರಿಗೆ ಅಥವಾ ನಮ್ಮ ಹೆಚ್ಚು ನಿಕಟವಾದ ನೆರೆಯವರಾಗಿರುವ ನಮ್ಮ ಸಹೋದರಸಹೋದರಿಯರಿಗಾಗಿ ಪ್ರೀತಿಯನ್ನು ವ್ಯಕ್ತಪಡಿಸಲು ಸಮಯವನ್ನು ಕಂಡುಕೊಳ್ಳುವುದು ಹೆಚ್ಚೆಚ್ಚು ಕಷ್ಟಕರವಾಗುತ್ತಿದೆಯೊ? ಹಾಗಿರುವಲ್ಲಿ, ಫಿಲಿಪ್ಪಿ 3:16ರಲ್ಲಿ ಈ ಹಿಂದೆ ಉಲ್ಲೇಖಿಸಲ್ಪಟ್ಟ ವಚನವು, ನಮಗಾಗಿ ವಿಶೇಷವಾದ ಅರ್ಥವನ್ನು ಹೊಂದಿರುತ್ತದೆ.
8 ದೇವರಿಗಾಗಿ ಮತ್ತು ನೆರೆಯವರಿಗಾಗಿರುವ ನಮ್ಮ ಪ್ರೀತಿಯು, ನಮ್ಮ ಆತ್ಮಿಕ ಪ್ರಗತಿಯನ್ನು ಪ್ರಚೋದಿಸಲು ಸಾಕಾಗುವಷ್ಟು ಇದೆಯೊ ಎಂಬುದನ್ನು ನಾವು ಹೇಗೆ ನಿರ್ಧರಿಸಸಾಧ್ಯವಿದೆ? ನಮ್ಮ ನಿರ್ಣಯ ಮಾಡುವಿಕೆಯು ಯಾವಾಗಲೂ, ದೇವರಿಗಾಗಿ ಮತ್ತು ಮನುಷ್ಯನಿಗಾಗಿರುವ ಪ್ರೀತಿಯಿಂದ ಮಾರ್ಗದರ್ಶಿಸಲ್ಪಡುತ್ತದೊ? 2 ಕೊರಿಂಥ 13:5ರೊಂದಿಗೆ ಹೊಂದಿಕೆಯಲ್ಲಿ ನಾವು ಇದರ ವಿಶ್ಲೇಷಣೆಯನ್ನು ಹೇಗೆ ಮಾಡುತ್ತೇವೆ? ಇದನ್ನು, ಸಭೆಯಲ್ಲಿರುವ ಇತರರೊಂದಿಗಿನ ಹೋಲಿಸುವಿಕೆಯ ಮೂಲಕ ಮಾಡಲಾಗುವುದಿಲ್ಲ. ದೇವರ ಮತ್ತು ನೆರೆಯವನ ಕಡೆಗಿರುವ ಪ್ರೀತಿಯು ಒಂದು ವೈಯಕ್ತಿಕ ವಿಷಯವಾಗಿದೆ. ನಮ್ಮ ಸ್ವಂತ ಸಾಂಕೇತಿಕ ಹೃದಯದಲ್ಲಿ ಪ್ರದರ್ಶಿಸಲ್ಪಡುವ ಪ್ರೀತಿಯು, ಪ್ರಾಮುಖ್ಯ ಸಂಗತಿಯಾಗಿದೆ. ಗಲಾತ್ಯ 6:4ರಲ್ಲಿ ಪೌಲನು ಯೋಗ್ಯವಾದ ಮನೋಭಾವವನ್ನು ವ್ಯಕ್ತಪಡಿಸಿದನು. ಅವನು ಇದೇ ವಿಚಾರವನ್ನು ರೋಮಾಪುರ 14:12ರಲ್ಲಿ ಒತ್ತಿಹೇಳಿದನು.
9 ನಾವು ನಿಧಾನಿಸುವಂತೆ ಮಾಡಿರುವ, ದೇವರ ಕಡೆಗಿರುವ ನಮ್ಮ ಪ್ರೀತಿಯಲ್ಲಿನ ತಣ್ಣಗಾಗುವಿಕೆಯನ್ನು ನಾವು ಗ್ರಹಿಸುತ್ತೇವೊ? ಆತ್ಮಿಕ ಚಟುವಟಿಕೆಗಳಲ್ಲಿ ಒಳಗೂಡುವ ನಮ್ಮ ಅಪೇಕ್ಷೆಯು ಕುಂದಿದೆಯೊ? ಆದಿ ಕ್ರೈಸ್ತರಲ್ಲಿ ಕೆಲವರಿಗೆ ಹೀಗೆ ಅನಿಸಿತು ಮತ್ತು ಇದು 2 ಥೆಸಲೊನೀಕ 3:13ರಲ್ಲಿ ಕಂಡುಕೊಳ್ಳಲ್ಪಡುವ ಉತ್ತೇಜನದಾಯಕ ಮಾತುಗಳನ್ನು ಬರೆಯುವಂತೆ ಪೌಲನನ್ನು ಪ್ರಚೋದಿಸಿರಬಹುದು. ಲೋಕವು ಅವರ ಮೇಲೆ ಹೇರಲು ಪ್ರಯತ್ನಿಸುವ ಬೇಡಿಕೆಗಳ ಎದುರಿನಲ್ಲೂ, ಕ್ರೈಸ್ತರು ಆತ್ಮಿಕ ಪ್ರಗತಿಯನ್ನು ಮಾಡುತ್ತಾ ಮುಂದುವರಿಯಬೇಕೆಂದು ಪೌಲನಿಗೆ ತಿಳಿದಿತ್ತು. ನಾವು ಅವನ ಮಾತುಗಳನ್ನು ನಮ್ಮ ಜೀವಿತದಲ್ಲಿ ಅನ್ವಯಿಸಿದಂತೆ, ಆತ್ಮಿಕ ಯಶಸ್ಸಿನ ಕುರಿತಾಗಿ ನಾವು ಭರವಸೆಯಿಂದಿರಬಲ್ಲೆವು. ಫಿಲಿಪ್ಪಿ 4:13ರಲ್ಲಿ ಅವನು ನಮಗೆ ಇನ್ನೂ ಹೆಚ್ಚಿನ ಉತ್ತೇಜನವನ್ನು ಕೊಟ್ಟನು.
10 ಬೈಬಲ್ ಓದುವಿಕೆ ಮತ್ತು ವೈಯಕ್ತಿಕ ಅಭ್ಯಾಸದ ಮೂಲಕ ಆತ್ಮಿಕ ಬಲ: ಯೆಹೋವನು, ತನ್ನ ಲಿಖಿತ ವಾಕ್ಯದ ಮೂಲಕ ಆತ್ಮಿಕ ಬಲ ಮತ್ತು ಶಕ್ತಿಯನ್ನು ಕೊಡುತ್ತಾನೆ. (ಇಬ್ರಿ. 4:12) ಈ ಲೋಕದ ಒತ್ತಡಗಳ ಕಾರಣದಿಂದ ನಿಧಾನಿಸುವ ಯಾವುದೇ ಪ್ರವೃತ್ತಿಯನ್ನು ಪ್ರತಿರೋಧಿಸಲು ನಾವು ಬೈಬಲನ್ನು ಹೇಗೆ ಉಪಯೋಗಿಸಸಾಧ್ಯವಿದೆ? ಅನೇಕರು ದಶಕಗಳಿಂದ—ಹಲವಾರು ವರ್ಷಗಳಿಂದಲೂ—ಯೆಹೋವನಿಗೆ ನಂಬಿಗಸ್ತ ಸೇವೆಯನ್ನು ಸಲ್ಲಿಸುತ್ತಾ ತಾಳಿಕೊಂಡಿದ್ದಾರೆ, ಮತ್ತು ಈಗ ಅವರು ಅಸ್ವಸ್ಥತೆ ಅಥವಾ ವೃದ್ಧಾಪ್ಯದೊಂದಿಗೆ ಹೋರಾಡುತ್ತಿದ್ದಾರೆ. ನಾವು ಆ ಸ್ಥಾನದಲ್ಲಿರುವಲ್ಲಿ, ಇಬ್ರಿಯ 6:10ರಲ್ಲಿರುವ ಮಾತುಗಳಿಂದ ನಾವು ಉತ್ತೇಜನವನ್ನು ಪಡೆದುಕೊಳ್ಳಬಲ್ಲೆವು. ಆದರೆ ನಮ್ಮ ಆತ್ಮಿಕ ಚಟುವಟಿಕೆಯ ಕೊರತೆಯು, ವೃದ್ಧಾಪ್ಯ ಅಥವಾ ಅಸ್ವಸ್ಥತೆಯ ಕಾರಣದಿಂದಲ್ಲವೆಂಬುದನ್ನು ನಾವು ಗ್ರಹಿಸುವಲ್ಲಿ ಆಗೇನು? ದೇವರ ವಾಕ್ಯವು ನಮಗೆ ಆತ್ಮಿಕ ಬಲವನ್ನು ಹೇಗೆ ಕೊಡಬಲ್ಲದು?
11 ದೇವರ ವಾಕ್ಯದ ಓದುವಿಕೆ ಮತ್ತು ಅಭ್ಯಾಸವು ಸಹಾಯಮಾಡಸಾಧ್ಯವಿರುವ ಎರಡು ವಿಧಗಳನ್ನು ನಾವು ಸಂಕ್ಷಿಪ್ತವಾಗಿ ಚರ್ಚಿಸುವೆವು. ಮೊದಲನೆಯದಾಗಿ, ಬೈಬಲಿನ ದೈನಂದಿನ ಓದುವಿಕೆಯು ಮತ್ತು ನಾವು ಏನನ್ನು ಓದುತ್ತೇವೊ ಅದರ ಕುರಿತು ಮನನ ಮಾಡುವಿಕೆಯು, ಯೆಹೋವನ ವ್ಯಕ್ತಿತ್ವದ ಕುರಿತು ನಮಗೆ ಹೆಚ್ಚು ಗಾಢವಾದ ಒಳನೋಟವನ್ನು ಕೊಡುತ್ತದೆ. ಆತನ ಎಲ್ಲ ವ್ಯವಹಾರಗಳು ಮತ್ತು ಮೂಲತತ್ತ್ವಗಳಲ್ಲಿ ತೋರಿಬರುವ ವಿವೇಕ ಮತ್ತು ಪ್ರೀತಿಯನ್ನು ಗಣ್ಯಮಾಡಲು ನಾವು ಕಲಿಯುತ್ತೇವೆ. ಕೀರ್ತನೆ 119:97ರ ಮಾತುಗಳನ್ನು ಬರೆದಂತಹ ಕೀರ್ತನೆಗಾರನಂತೆಯೇ ನಮಗೂ ಅನಿಸುತ್ತದೆ. ದೇವರ ವಾಕ್ಯಕ್ಕಾಗಿರುವ ನಮ್ಮ ಪ್ರೀತಿಯು ಬೆಳೆದಂತೆ, ಈ ವಾಕ್ಯದ ಮೂಲಕರ್ತನಿಗಾಗಿರುವ ನಮ್ಮ ಪ್ರೀತಿಯು ಹೆಚ್ಚುತ್ತದೆ. ದೇವರಿಗಾಗಿರುವ ಗಾಢವಾದ ಪ್ರೀತಿಯು, ನಮ್ಮ ಜೀವಿತಗಳಲ್ಲಿ ಒಂದು ಪ್ರಬಲ ಶಕ್ತಿಯಾಗಿ ಪರಿಣಮಿಸುತ್ತದೆ. (ಪರಮ ಗೀತ 8:6, 7) ಆತನ ಸೇವೆಯಲ್ಲಿ ‘ಹೆಣಗಾಡು’ತ್ತಾ ಇರಲು ಬೇಕಾಗಿರುವ ಆತ್ಮಿಕ ಅಪೇಕ್ಷೆ ಮತ್ತು ಬಲವನ್ನು ಅದು ನಮಗೆ ಕೊಡುತ್ತದೆ.—ಲೂಕ 13:24.
12 ಎರಡನೆಯದಾಗಿ, ಬೈಬಲು ಪವಿತ್ರಾತ್ಮದ ಉತ್ಪನ್ನವಾಗಿದೆ. ದೇವರ ವಾಕ್ಯದ ದೈನಂದಿನ ಓದುವಿಕೆಯು, ಪವಿತ್ರಾತ್ಮದ ಒಂದು ಅದ್ಭುತಕರ ಮೂಲವನ್ನು ತೆರೆಯುತ್ತದೆ. ಸರಿಯಾದುದನ್ನು ಮಾಡುವುದರಲ್ಲಿ ಎಂದಿಗೂ ಬಿಟ್ಟುಕೊಡದಂತೆ, ನಂಬಿಗಸ್ತ ಸೇವಕರು ಬಲವನ್ನು ಹೊಂದಲು ಶಕ್ತರನ್ನಾಗಿ ಮಾಡಿದಂತಹದ್ದು ಪವಿತ್ರಾತ್ಮವೇ. ಅದೇ ಪವಿತ್ರಾತ್ಮವು ಇಂದು ಎಲ್ಲರಿಗೂ ಲಭ್ಯವಿದೆ, ಆದರೆ ಅದನ್ನು ಪಡೆದುಕೊಳ್ಳಲು, ಇಟ್ಟುಕೊಳ್ಳಲು, ಮತ್ತು ಅದು ನಮ್ಮ ಜೀವಿತಗಳನ್ನು ಪ್ರಭಾವಿಸುವಂತೆ ಅನುಮತಿಸಲಿಕ್ಕಾಗಿ ನಮ್ಮ ವತಿಯಿಂದ ಪ್ರಯತ್ನವು ಆವಶ್ಯಕ.
13 ಈ ಮುಂದಿನ ಅಭಿವ್ಯಕ್ತಿಗಳು ನಮ್ಮ ಭಾವನೆಗಳನ್ನು ಪ್ರತಿಬಿಂಬಿಸುತ್ತವೊ? “ನಾನು ಓದುವ ವ್ಯಕ್ತಿಯೇ ಅಲ್ಲ.” “ಅಭ್ಯಾಸ ಮಾಡುವುದು ನನಗೆ ತುಂಬ ಕಷ್ಟದ ಕೆಲಸ.” “ನಾನೊಬ್ಬ ಒಳ್ಳೆಯ ವಿದ್ಯಾರ್ಥಿಯಲ್ಲ, ಆದುದರಿಂದ ನನಗೆ ಓದುವುದರಲ್ಲಿ ಮತ್ತು ಅಭ್ಯಾಸಮಾಡುವುದರಲ್ಲಿ ಆನಂದವೇ ಆಗುವುದಿಲ್ಲ.” “ನನ್ನ ಕಾರ್ಯಮಗ್ನ ಕಾರ್ಯತಖ್ತೆಯಲ್ಲಿ ಓದುವಿಕೆ ಮತ್ತು ಅಭ್ಯಾಸಕ್ಕೆ ಹೊಂದಿಕೆಯಾಗಲು ಸಮಯವನ್ನು ಕಂಡುಕೊಳ್ಳುವುದು ಕಷ್ಟ.” “ನಾನು ಒಳ್ಳೆಯ ಉದ್ದೇಶಗಳೊಂದಿಗೆ ಆರಂಭಿಸುತ್ತೇನೆ, ಆದರೆ ಬೇರೆ ವಿಷಯಗಳು ಮಧ್ಯೆ ಬರುತ್ತವೆ, ಮತ್ತು ಓದುವಿಕೆ ಹಾಗೂ ಅಭ್ಯಾಸಕ್ಕಾಗಿರುವ ನನ್ನ ಕಾರ್ಯತಖ್ತೆ ಪಕ್ಕಕ್ಕೆ ಸರಿಸಲ್ಪಡುತ್ತದೆ.” ಈ ಸಮಸ್ಯೆಗಳಲ್ಲಿ ಒಂದು ಅಥವಾ ಹೆಚ್ಚನ್ನು ನಾವು ಎದುರಿಸುತ್ತಿದ್ದೇವೊ? ಹಾಗಿರುವಲ್ಲಿ, ನಾವು ಏನು ಮಾಡಸಾಧ್ಯವಿದೆ? ಮೊದಲನೆಯ ಸಂಗತಿಯು, ದೇವರ ಕಡೆಗಿರುವ ನಮ್ಮ ಹೃದಯದ ಭಾವನೆಗಳನ್ನು ಪರೀಕ್ಷಿಸುವುದೇ ಆಗಿದೆ. ಒಬ್ಬ ಪ್ರಿಯ, ಆಪ್ತ ಮಿತ್ರ ಅಥವಾ ಸಂಬಂಧಿಯಿಂದ ನಮಗೆ ಒಂದು ಪತ್ರ ಬರುವಲ್ಲಿ, ಅದನ್ನು ಓದಲಿಕ್ಕಾಗಿ ನಮಗೆ ಸಮಯವಿಲ್ಲ, ಅಥವಾ ನಮಗೆ ಓದಲು ಇಷ್ಟವಿಲ್ಲದಿರುವುದರಿಂದ ಅದನ್ನು ತೆರೆಯುವ ಗೊಡವೆಗೆ ಹೋಗದಿರುವೆವೆಂದು ನಾವು ತರ್ಕಿಸುವೆವೊ? ಇಲ್ಲ. ನಾವು ಅದನ್ನು ತೆರೆದು, ಓದಲು ಕಾತುರರಾಗಿರುತ್ತೇವೆ. ಬೈಬಲಿನ ರೂಪದಲ್ಲಿ, ನಮ್ಮ ಸ್ವರ್ಗೀಯ ತಂದೆಯಿಂದ ಬರುವ ಸಂವಾದದ ಕುರಿತಾಗಿ ನಮಗೆ ಯಾವುದೇ ವಿಭಿನ್ನ ಅನಿಸಿಕೆಯಾಗಬೇಕೊ?
14 ಸೊಸೈಟಿ ಅಥವಾ ಹಿರಿಯರು, ನಮಗಾಗಿ ಬೈಬಲ್ ಓದುವಿಕೆಯ ಕಟ್ಟುನಿಟ್ಟಾದ ಕಾರ್ಯತಖ್ತೆಯನ್ನು ಮಾಡಸಾಧ್ಯವಿಲ್ಲ, ಯಾಕಂದರೆ ಪ್ರತಿಯೊಬ್ಬ ವ್ಯಕ್ತಿಯ ಪರಿಸ್ಥಿತಿಗಳು ಭಿನ್ನವಾಗಿವೆ. ದೇವರ ಕಡೆಗಿರುವ ನಮ್ಮ ಪ್ರೀತಿಯು ಮತ್ತು ಆ ಪ್ರೀತಿಯನ್ನು ಗಾಢಗೊಳಿಸುವ ನಮ್ಮ ಅಪೇಕ್ಷೆಯು, ನಾವು ಬೈಬಲ್ ವಾಚನ ಮತ್ತು ವೈಯಕ್ತಿಕ ಅಭ್ಯಾಸವನ್ನು ನಮ್ಮ ದೈನಂದಿನ ಚಟುವಟಿಕೆಯ ಒಂದು ಕ್ರಮವಾದ ವೈಶಿಷ್ಟ್ಯವನ್ನಾಗಿ ಮಾಡುವಂತೆ ಪ್ರಚೋದಿಸುವುದು. ಪ್ರತಿಯೊಂದು ಕುಟುಂಬದ ತಲೆಯು ಅದನ್ನು, ಕುಟುಂಬದ ಆತ್ಮಿಕ ಅಭಿರುಚಿಗಳ ಕಾಳಜಿ ವಹಿಸುವ ಮತ್ತು ಮಕ್ಕಳ ತರಬೇತಿಯ ಒಂದು ಅತ್ಯಾವಶ್ಯಕ ಭಾಗದೋಪಾದಿ ವೀಕ್ಷಿಸಬೇಕು. ದೇವರ ಪ್ರೀತಿಯನ್ನು ದಿನನಿತ್ಯವೂ ತಮ್ಮ ಮಕ್ಕಳ ಹೃದಯಗಳಲ್ಲಿ ಬೇರೂರಿಸುವಂತೆ ಹೆತ್ತವರು ಉಪದೇಶಿಸಲ್ಪಟ್ಟಿದ್ದರು. (ಧರ್ಮೋ. 6:4-9) ದೇವರ ಈ ಆವಶ್ಯಕತೆಯನ್ನು ಪೂರೈಸುವ ಒಂದು ಉತ್ತಮ ವಿಧವು ಬೈಬಲ್ ಓದುವಿಕೆಯಾಗಿದೆ. ಸರಿಯಾದುದನ್ನು ಮಾಡುವುದರಲ್ಲಿ ನಾವು ಎಂದೂ ಬಿಟ್ಟುಕೊಡದಿರುವಂತಾಗಲಿ! ದೇವರಿಗಾಗಿ ಮತ್ತು ಕ್ರಿಸ್ತನಿಗಾಗಿರುವ ನಮ್ಮ ಪ್ರೀತಿಯು, ನಾವು ದೈನಂದಿನ ಬೈಬಲ್ ಓದುವಿಕೆಯಲ್ಲಿ ತೊಡಗುವಂತೆ ನಮ್ಮನ್ನು ನಿರ್ಬಂಧಿಸಲಿ. (2 ಕೊರಿಂ. 5:14) ಇತರರು ನಮ್ಮ ಆತ್ಮಿಕ ಪ್ರಗತಿಯನ್ನು, ದೇವರಿಗಾಗಿರುವ ನಮ್ಮ ಪ್ರೀತಿಯ ಒಂದು ತೋರ್ಪಡಿಸುವಿಕೆಯಾಗಿ ಗಮನಿಸುವರು.—1 ತಿಮೊ. 4:15.
15 ಪುಟ 158ರಲ್ಲಿ ಆರಂಭಿಸುತ್ತಾ, ದೈನಂದಿನ ಬೈಬಲ್ ಓದುವಿಕೆಯ ಕುರಿತಾಗಿ ಜ್ಞಾನ ಪುಸ್ತಕವು ಈ ಮುಂದಿನ ವಿಷಯವನ್ನು ಹೇಳುತ್ತದೆ: “ನಮಗೆ ಉತ್ತಮವಾಗಿರುವ ಶಾರೀರಿಕ ಆಹಾರಕ್ಕೆ ನಾವು ರುಚಿಯನ್ನು ಬೆಳೆಸಿಕೊಳ್ಳುವ ಅಗತ್ಯ ನಮಗಿರುವಂತೆಯೇ, ‘ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸು’ವಂತೆ ನಾವು ಪ್ರೋತ್ಸಾಹಿಸಲ್ಪಡುತ್ತೇವೆ. ದೇವರ ವಾಕ್ಯವನ್ನು ದಿನಾಲೂ ಓದುವ ಮೂಲಕ ಆತ್ಮಿಕ ಆಹಾರಕ್ಕೆ ರುಚಿಯನ್ನು ಬೆಳೆಸಿರಿ. . . . ನೀವು ಬೈಬಲಿನಲ್ಲಿ ಏನನ್ನು ಓದುತ್ತೀರೋ ಅದನ್ನು ಮನನಮಾಡಿರಿ. . . . ವಿಷಯವನ್ನು ಪರ್ಯಾಲೋಚಿಸುವುದೆಂದು ಅದರ ಅರ್ಥ. . . . ನೀವು ಓದುತ್ತಿರುವುದನ್ನು ನಿಮಗೆ ಆಗಲೇ ತಿಳಿದಿರುವ ವಿಷಯಗಳಿಗೆ ಸಂಬಂಧಿಸುವ ಮೂಲಕ ನೀವು ಆತ್ಮಿಕ ಆಹಾರವನ್ನು ಜೀರ್ಣಿಸಬಲ್ಲಿರಿ. ಆ ವಿಷಯವು ನಿಮ್ಮ ಜೀವಿತವನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಪರಿಗಣಿಸಿರಿ, ಅಥವಾ ಯೆಹೋವನ ಗುಣಗಳ ಮತ್ತು ವ್ಯವಹಾರಗಳ ಕುರಿತು ಅದು ಏನನ್ನು ಪ್ರಕಟಪಡಿಸುತ್ತದೋ ಅದರ ಮೇಲೆ ಪ್ರತಿಬಿಂಬಿಸಿರಿ. ಹೀಗೆ, ವೈಯಕ್ತಿಕ ಅಧ್ಯಯನದ ಮೂಲಕ, ಯೆಹೋವನು ಒದಗಿಸುವ ಆತ್ಮಿಕ ಆಹಾರವನ್ನು ನೀವು ಸೇವಿಸಬಲ್ಲಿರಿ. ಅದು ನಿಮ್ಮನ್ನು ದೇವರ ಬಳಿ ಹೆಚ್ಚು ಸಮೀಪಕ್ಕೆ ಎಳೆದು, ನಿಮ್ಮ ದೈನಂದಿನ ಸಮಸ್ಯೆಗಳನ್ನು ನಿಭಾಯಿಸಲು ಸಹಾಯಮಾಡುವುದು.”
16 ಆದುದರಿಂದ, ವೈಯಕ್ತಿಕ ಅಭ್ಯಾಸವನ್ನು ಎಂದೂ ಅಲಕ್ಷಿಸಬೇಡಿರಿ; ಅದು ಆತ್ಮಿಕ ಪ್ರಗತಿಗಾಗಿ ಅತ್ಯಾವಶ್ಯಕ ಮತ್ತು ಆತ್ಮಿಕ ಪ್ರಗತಿಯು, ದೇವರ ಅದ್ಭುತಕರವಾದ ಹೊಸ ಲೋಕದೊಳಗೆ ಪಾರಾಗಲಿಕ್ಕಾಗಿ ಅತ್ಯಾವಶ್ಯಕ. ನಾವೆಲ್ಲರೂ ಯೆಹೋವನನ್ನು ಮತ್ತು ನಮ್ಮ ನೆರೆಯವನನ್ನು, ಪ್ರಗತಿಮಾಡಲು ಬಯಸುವಂತೆ ಸಾಕಾಗುವಷ್ಟು ಪ್ರೀತಿಸುತ್ತಾ ಮುಂದುವರಿಯುವಂತಾಗಲಿ, ಮತ್ತು ನಾವು ಈ ಪ್ರಗತಿಯನ್ನು ನಮ್ಮ ವೈಯಕ್ತಿಕ ಅಭ್ಯಾಸದಲ್ಲಿ ಶ್ರದ್ಧಾಪೂರ್ವಕರಾಗಿರುವ ಮೂಲಕ ಸಾಧಿಸುವಂತಾಗಲಿ.—ಜ್ಞಾನೋ. 2:1-9.