ಪಯನೀಯರ್ ಸೇವೆ—ನೀವದನ್ನು ಮಾಡಬಲ್ಲಿರೊ?
1 “ಇನ್ನೇನನ್ನೂ ಮಾಡುವುದನ್ನು ನಾನು ಕಲ್ಪಿಸಿಕೊಳ್ಳಲಾರೆ. ಇದೇ ರೀತಿಯ ಆನಂದವನ್ನು ತರುವ ಇನ್ನಾವುದನ್ನೂ ನಾನು ಖಂಡಿತವಾಗಿಯೂ ಕಲ್ಪಿಸಿಕೊಳ್ಳಲಾರೆ.” ಇದನ್ನು ಯಾರು ಹೇಳಿದರು? ತಮ್ಮ ಜೀವಿತದಲ್ಲಿ ಪೂರ್ಣ ಸಮಯದ ಶುಶ್ರೂಷೆಯನ್ನು ಆನಂದಭರಿತ ವೃತ್ತಿಯನ್ನಾಗಿ ಮಾಡಿಕೊಂಡಿರುವ, ನೂರಾರು ಸಾವಿರ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು. ನೀವು ಪಯನೀಯರ್ ಸೇವೆಯನ್ನು ಮಾಡಬಲ್ಲಿರೊ ಎಂಬ ವಿಚಾರವನ್ನು ನೀವು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿದ್ದೀರೊ? ಯೆಹೋವನಿಗೆ ನಾವು ಸಂಪೂರ್ಣವಾದ ಸಮರ್ಪಣೆಯನ್ನು ಮಾಡಿರಲಾಗಿ, ರಾಜ್ಯದ ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ನಾವು ಹೆಚ್ಚಿನ ಪಾಲನ್ನು ತೆಗೆದುಕೊಳ್ಳಬಹುದೊ ಎಂಬ ವಿಚಾರವನ್ನು ಖಂಡಿತವಾಗಿಯೂ ಪರಿಗಣಿಸತಕ್ಕದ್ದು. ಆ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾ, ಪಯನೀಯರ್ ಸೇವೆಯ ಕುರಿತು ಅನೇಕರು ಕೇಳುವ ಕೆಲವು ಪ್ರಶ್ನೆಗಳನ್ನು ದಯವಿಟ್ಟು ಪರಿಗಣಿಸಿರಿ.
ಪ್ರಶ್ನೆ 1: “ಪಯನೀಯರ್ ಸೇವೆಯನ್ನು ಎಲ್ಲರೂ ಮಾಡಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ. ನಾನದನ್ನು ಮಾಡಬಲ್ಲೆ ಎಂದು ನನಗೆ ಹೇಗೆ ತಿಳಿಯುವುದು?”
2 ಅದಕ್ಕೆ ಉತ್ತರವು ನಿಮ್ಮ ಪರಿಸ್ಥಿತಿಗಳು ಮತ್ತು ಶಾಸ್ತ್ರೀಯ ಹಂಗುಗಳ ಮೇಲೆ ಅವಲಂಬಿಸುತ್ತದೆ. ಯಾರ ಆರೋಗ್ಯ ಅಥವಾ ಸದ್ಯದ ಸ್ಥಿತಿಯು ಅವರಿಗೆ, ಶುಶ್ರೂಷೆಯಲ್ಲಿ ಒಂದು ತಿಂಗಳಿನಲ್ಲಿ 90 ತಾಸುಗಳನ್ನು ವ್ಯಯಿಸಲು ಅನುಮತಿಸುವುದಿಲ್ಲವೊ, ಅಂತಹ ಅನೇಕ ಮಂದಿ ಇದ್ದಾರೆ. ಕ್ರೈಸ್ತ ಪತ್ನಿಯರೂ ತಾಯಂದಿರೂ ಆಗಿರುವ ಅನೇಕ ನಂಬಿಗಸ್ತ ಸಹೋದರಿಯರನ್ನು ಉದಾಹರಣೆಯಾಗಿ ತೆಗೆದುಕೊಳ್ಳಿರಿ. ತಮ್ಮ ಪರಿಸ್ಥಿತಿಗಳು ಅನುಮತಿಸುವಷ್ಟರ ಮಟ್ಟಿಗೆ, ಅವರು ತಮಗೆ ಸಾಧ್ಯವಿರುವಷ್ಟು ಹೆಚ್ಚಾಗಿ ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಂದರ್ಭವು ಸಿಕ್ಕಿದಂತೆ, ಅವರು ಪ್ರತಿ ವರ್ಷ ಒಂದು ಅಥವಾ ಹೆಚ್ಚು ತಿಂಗಳುಗಳ ವರೆಗೆ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುತ್ತಾ, ಸೇವೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸುವುದರಿಂದ ಬರುವ ಆನಂದಗಳನ್ನು ಕೊಯ್ಯುತ್ತಾರೆ. (ಗಲಾ. 6:9) ಸದ್ಯದಲ್ಲಿ ಅವರು ಪೂರ್ಣ ಸಮಯದ ಪಯನೀಯರರೋಪಾದಿ ಸೇವೆಸಲ್ಲಿಸುವಂತೆ ಅವರ ಪರಿಸ್ಥಿತಿಗಳು ಅನುಮತಿಸದಿದ್ದರೂ, ಅವರು ಪಯನೀಯರ್ ಆತ್ಮವನ್ನು ಪ್ರವರ್ಧಿಸುತ್ತಾರೆ ಮತ್ತು ಸುವಾರ್ತೆಯ ಹುರುಪಿನ ಪ್ರಚಾರಕರೋಪಾದಿ ಸಭೆಗೆ ಆಶೀರ್ವಾದವಾಗಿದ್ದಾರೆ.
3 ಇನ್ನೊಂದು ಕಡೆ, ಹಂಗುಗಳಿಂದ ತುಲನಾತ್ಮಕವಾಗಿ ಮುಕ್ತರಾಗಿರುವ ಅನೇಕ ಸಹೋದರ ಸಹೋದರಿಯರು, ತಮ್ಮ ಆದ್ಯತೆಗಳನ್ನು ಕ್ರಮಪಡಿಸಿಕೊಳ್ಳುವ ಮೂಲಕ ಪಯನೀಯರ್ ಸೇವೆಗಾಗಿ ಅವಕಾಶವನ್ನು ಕಲ್ಪಿಸಿಕೊಂಡಿದ್ದಾರೆ. ನಿಮ್ಮ ಕುರಿತಾಗಿ ಏನು? ಐಹಿಕ ಶಾಲಾ ಶಿಕ್ಷಣವನ್ನು ಮುಗಿಸಿರುವ ಒಬ್ಬ ಯುವ ವ್ಯಕ್ತಿ ನೀವಾಗಿದ್ದೀರೊ? ಕುಟುಂಬಕ್ಕಾಗಿ ಬೇಕಾಗಿರುವಷ್ಟನ್ನು ಒದಗಿಸಲು ಶಕ್ತನಾಗಿರುವ ಗಂಡನ ಪತ್ನಿ ನೀವಾಗಿದ್ದೀರೊ? ನಿಮ್ಮ ಮೇಲೆ ಅವಲಂಬಿತರಾಗಿರುವ ಮಕ್ಕಳಿಲ್ಲದ ವಿವಾಹಿತರು ನೀವೊ? ನಿಮ್ಮ ಐಹಿಕ ಉದ್ಯೋಗದಿಂದ ನೀವು ನಿವೃತ್ತಿಪಡೆದಿದ್ದೀರೊ? ಪಯನೀಯರ್ ಸೇವೆ ಮಾಡಬೇಕೊ ಇಲ್ಲವೊ ಎಂಬುದು, ಪ್ರತಿಯೊಬ್ಬ ವ್ಯಕ್ತಿಯು ಸ್ವತಃ ಮಾಡಬೇಕಾದ ಒಂದು ನಿರ್ಣಯವಾಗಿದೆ. ಪ್ರಶ್ನೆಯೇನೆಂದರೆ, ಪಯನೀಯರ್ ಸೇವೆಗಾಗಿ ನೀವು ನಿಮ್ಮ ಜೀವಿತದಲ್ಲಿ ಅವಕಾಶವನ್ನು ಕಲ್ಪಿಸಿಕೊಳ್ಳಬಲ್ಲಿರೊ?
4 ನಮ್ಮ ಜೀವಿತಗಳನ್ನು ಅಪಕರ್ಷಣೆಗಳಿಂದ ತುಂಬಿಸಲು ಮತ್ತು ನಮ್ಮನ್ನು ಒಂದು ಸ್ವಾರ್ಥಪರ ಜೀವನ ರೀತಿಯಲ್ಲಿ ಮುಳುಗಿಸಲು, ಸೈತಾನನು ತನ್ನ ಲೌಕಿಕ ವಿಷಯಗಳ ವ್ಯವಸ್ಥೆಯನ್ನು ಉಪಯೋಗಿಸುತ್ತಾನೆ. ನಾವು ಲೋಕದ ಭಾಗವಾಗಿರದೆ ಉಳಿಯಲು ದೃಢನಿಶ್ಚಯವುಳ್ಳವರಾಗಿರುವಲ್ಲಿ, ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುವಂತೆ ಮತ್ತು ನಮಗೆ ಲಭ್ಯವಿರುವ ದೇವಪ್ರಭುತ್ವ ಸೇವೆಯ ಎಲ್ಲ ಸುಯೋಗಗಳಿಗಾಗಿ ಪ್ರಯತ್ನಪಟ್ಟು, ಅವುಗಳನ್ನು ಸ್ವೀಕರಿಸಲು ಯೆಹೋವನು ನಮಗೆ ಸಹಾಯಮಾಡುವನು. ಒಬ್ಬ ಪಯನೀಯರ್ ಆಗಿ ಸೇವೆ ಸಲ್ಲಿಸಲಿಕ್ಕೋಸ್ಕರ ನೀವು ನಿಮ್ಮ ಪರಿಸ್ಥಿತಿಗಳನ್ನು ಹೊಂದಿಸಿಕೊಳ್ಳಬಹುದಾದರೆ, ಹಾಗೇಕೆ ಮಾಡಬಾರದು?
ಪ್ರಶ್ನೆ 2: “ಪೂರ್ಣ ಸಮಯದ ಸೇವೆಯಲ್ಲಿ ನನ್ನನ್ನು ಆರ್ಥಿಕವಾಗಿ ಬೆಂಬಲಿಸಿಕೊಳ್ಳಲು ಶಕ್ತನಾಗಿರುವೆನೆಂದು ನಾನು ಹೇಗೆ ಖಚಿತನಾಗಿರಬಲ್ಲೆ?”
5 ಅನೇಕ ದೇಶಗಳಲ್ಲಿ, ಜೀವಿತದ ಆವಶ್ಯಕತೆಗಳೆಂದು ವೀಕ್ಷಿಸಲಾಗಿರುವ ವಸ್ತುಗಳನ್ನು ಪಡೆದುಕೊಳ್ಳಲಿಕ್ಕಾಗಿ, ಐಹಿಕ ಕೆಲಸದಲ್ಲಿ ವ್ಯಯಿಸಬೇಕಾದ ತಾಸುಗಳ ಸಂಖ್ಯೆಯು, ವರ್ಷಗಳು ದಾಟಿದಂತೆ ಹೆಚ್ಚಾಗಿವೆಯೆಂಬುದು ಸತ್ಯ. ಹಾಗಿದ್ದರೂ, ಅನೇಕರು ಹಲವಾರು ದಶಕಗಳಿಂದ ಪಯನೀಯರ್ ಸೇವೆಯನ್ನು ಮಾಡಿದ್ದಾರೆ ಮತ್ತು ಯೆಹೋವನು ಅವರನ್ನು ಪೋಷಿಸುತ್ತಾ ಬಂದಿದ್ದಾನೆ. ಒಬ್ಬ ಪಯನೀಯರ್ ಆಗಿ ಸಫಲನಾಗಲು, ನಂಬಿಕೆ ಮತ್ತು ಸ್ವತ್ಯಾಗದ ಆತ್ಮವು ಅಗತ್ಯ. (ಮತ್ತಾ. 17:20) “ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಮೇಲಿಗೂ ಕಡಿಮೆಯಿಲ್ಲ” ಎಂಬ ಆಶ್ವಾಸನೆ ನಮಗೆ ಕೀರ್ತನೆ 34:10ರಲ್ಲಿದೆ. ಪಯನೀಯರ್ ಸೇವೆಯನ್ನು ಪ್ರವೇಶಿಸುವ ವ್ಯಕ್ತಿಯು, ಯೆಹೋವನು ತನಗೆ ಒದಗಿಸುವನು ಎಂಬ ಪೂರ್ಣ ಭರವಸೆಯೊಂದಿಗೆ ಹಾಗೆ ಮಾಡಬೇಕು. ಎಲ್ಲೆಡೆಯೂ ಇರುವ ನಂಬಿಗಸ್ತ ಪಯನೀಯರರಿಗೆ ಆತನು ಅದನ್ನೇ ಮಾಡುತ್ತಿದ್ದಾನೆ! (ಕೀರ್ತ. 37:25) 2 ಥೆಸಲೊನೀಕ 3:8, 10 ಮತ್ತು 1 ತಿಮೊಥೆಯ 5:8ರಲ್ಲಿರುವ ಮೂಲತತ್ವಗಳಿಗೆ ಹೊಂದಿಕೆಯಲ್ಲಿ, ಇತರರು ತಮ್ಮನ್ನು ಆರ್ಥಿಕವಾಗಿ ಬೆಂಬಲಿಸಬೇಕೆಂಬುದನ್ನು ಪಯನೀಯರರು ಅಪೇಕ್ಷಿಸುವುದಿಲ್ಲ.
6 ಪಯನೀಯರ್ ಸೇವೆಯ ಕುರಿತು ಯೋಚಿಸುತ್ತಿರುವ ಯಾವನೇ ವ್ಯಕ್ತಿಯು, ಯೇಸು ಹೇಳಿದಂತೆ ಮಾಡಬೇಕು: ‘ಮೊದಲು ಕೂತುಕೊಂಡು, ಅದಕ್ಕೆ ಎಷ್ಟು ಖರ್ಚು ಹಿಡಿದೀತು . . . ಎಂದು ಲೆಕ್ಕಮಾಡಬೇಕು.’ (ಲೂಕ 14:28) ಇದನ್ನು ಮಾಡುವುದು ವ್ಯಾವಹಾರಿಕ ಬುದ್ಧಿಯನ್ನು ತೋರಿಸುತ್ತದೆ. ಹಲವಾರು ವರ್ಷಗಳ ವರೆಗೆ ಯಶಸ್ವಿಕರವಾಗಿ ಪಯನೀಯರ್ ಸೇವೆಯನ್ನು ಮಾಡಿರುವವರೊಂದಿಗೆ ಮಾತಾಡಿರಿ. ಯೆಹೋವನು ಅವರನ್ನು ಹೇಗೆ ಪೋಷಿಸಿದ್ದಾನೆಂಬುದನ್ನು ಕೇಳಿರಿ. ನಿಮ್ಮ ಸರ್ಕಿಟ್ ಮೇಲ್ವಿಚಾರಕರು, ಪೂರ್ಣ ಸಮಯದ ಶುಶ್ರೂಷೆಯಲ್ಲಿ ಹೇಗೆ ಯಶಸ್ಸನ್ನು ಪಡೆದುಕೊಳ್ಳುವುದು ಎಂಬುದರ ಕುರಿತಾಗಿ ಸಲಹೆಗಳನ್ನು ನೀಡಲು ಸಂತೋಷಿಸುವ ಒಬ್ಬ ಅನುಭವಸ್ಥ ಪಯನೀಯರರಾಗಿದ್ದಾರೆ.
7 ಒಬ್ಬ ವ್ಯಕ್ತಿಯು ತನ್ನನ್ನು ಯೆಹೋವನ ಹಸ್ತಗಳಲ್ಲಿ ಒಪ್ಪಿಸುವ ತನಕ, ಅವನು ಮತ್ತಾಯ 6:33ರಲ್ಲಿರುವ ಯೇಸುವಿನ ವಾಗ್ದಾನದ ಸತ್ಯತೆಯನ್ನು ಎಂದಿಗೂ ಪೂರ್ಣವಾಗಿ ಅನುಭವಿಸಲಾರನು. ಒಬ್ಬ ನಂಬಿಗಸ್ತ ಪಯನೀಯರಳು ಹೇಳಿದ್ದು: “ನನ್ನ ಸಹಭಾಗಿಯೂ ನಾನೂ, ಪಯನೀಯರರೋಪಾದಿ ಒಂದು ಹೊಸ ನೇಮಕಕ್ಕೆ ಆಗಮಿಸಿದಾಗ, ನಮ್ಮಲ್ಲಿ ಕೆಲವು ತರಕಾರಿಗಳು, ಒಂದು ಪೊಟ್ಟಣ ಮಾರ್ಜರಿನ್ ಇತ್ತು ಮತ್ತು ಹಣವಿರಲಿಲ್ಲ. ನಾವು ಆಹಾರವನ್ನು ರಾತ್ರಿಯೂಟಕ್ಕೆ ಮುಗಿಸಿ ಹೇಳಿದ್ದು, ‘ಈಗ ನಾಳೆಗಾಗಿ ನಮ್ಮಲ್ಲಿ ಏನೂ ಇಲ್ಲ.’ ನಾವು ಅದರ ಕುರಿತಾಗಿ ಪ್ರಾರ್ಥಿಸಿ ನಿದ್ರಿಸಿದೆವು. ಮರುದಿನ ಮುಂಜಾವಿನಲ್ಲಿ ಒಬ್ಬ ಸ್ಥಳಿಕ ಸಾಕ್ಷಿಯು ಭೇಟಿ ಮಾಡಿದಳು ಮತ್ತು ಹೀಗೆ ಹೇಳುವ ಮೂಲಕ ಸ್ವತಃ ಪರಿಚಯಿಸಿಕೊಂಡಳು. ‘ಪಯನೀಯರರನ್ನು ಕಳುಹಿಸುವಂತೆ ನಾನು ಯೆಹೋವನ ಬಳಿ ಪ್ರಾರ್ಥಿಸಿದೆ. ಈಗ ನಾನು ದಿನದ ಬಹುತೇಕ ಸಮಯ ನಿಮ್ಮೊಂದಿಗೆ ಜೊತೆಗೂಡಬಲ್ಲೆ, ಆದರೆ ನಾನು ದೂರದಲ್ಲಿ ವಾಸಿಸುವುದರಿಂದ, ನಾನು ನಿಮ್ಮೊಂದಿಗೆ ಮಧ್ಯಾಹ್ನದ ಊಟವನ್ನು ಮಾಡಬೇಕಾಗಿದೆ, ಆದುದರಿಂದ ನಮ್ಮೆಲ್ಲರಿಗಾಗಿ ನಾನು ಈ ಆಹಾರವನ್ನು ತಂದಿದ್ದೇನೆ.’ ಅದು ದೊಡ್ಡ ಪ್ರಮಾಣದ ದನದ ಮಾಂಸ ಹಾಗೂ ತರಕಾರಿಗಳಾಗಿತ್ತು.” ‘ನಮ್ಮ ಪ್ರಾಣಧಾರಣೆಗೆ ಚಿಂತಿಸುವುದನ್ನು’ ನಿಲ್ಲಿಸಬಹುದೆಂದು ಯೇಸು ನಮಗೆ ಆಶ್ವಾಸನೆ ನೀಡಿದ್ದರಲ್ಲಿ ಆಶ್ಚರ್ಯವಿಲ್ಲ! ಅವನು ಅನಂತರ ಕೂಡಿಸಿದ್ದು: “ಚಿಂತೆಮಾಡಿಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು?”—ಮತ್ತಾ. 6:25, 27.
8 ನಮ್ಮ ಸುತ್ತಲಿನ ಲೋಕವು ಹೆಚ್ಚೆಚ್ಚು ಪ್ರಾಪಂಚಿಕವಾಗುತ್ತಿದೆ. ನಾವು ಅದಕ್ಕೆ ತಕ್ಕಂತೆ ನಡೆಯುವಂತೆ ನಮ್ಮ ಮೇಲೆ ಹೆಚ್ಚಿನ ಒತ್ತಡವು ಹೇರಲ್ಪಡುತ್ತಿದೆ. ಆದರೆ, ಪೂರ್ಣ ಸಮಯದ ಶುಶ್ರೂಷೆಗಾಗಿ ನಮ್ರವಾದ ಗಣ್ಯತೆಯನ್ನು ಹೊಂದಿರುವುದು, ನಾವು ಕಡಿಮೆ ಪ್ರಾಪಂಚಿಕ ವಸ್ತುಗಳೊಂದಿಗೆ ಸಂತೃಪ್ತರಾಗಿರುವಂತೆ ಮಾಡುತ್ತದೆ. (1 ತಿಮೊ. 6:8) ತಮ್ಮ ಜೀವಿತಗಳನ್ನು ಸರಳವೂ ವ್ಯವಸ್ಥಿತವಾಗಿಯೂ ಇಡುವ ಪಯನೀಯರರಿಗೆ, ಸೇವೆಗಾಗಿ ಹೆಚ್ಚು ಸಮಯವಿರುತ್ತದೆ ಮತ್ತು ಇತರರಿಗೆ ಸತ್ಯವನ್ನು ಕಲಿಸುವುದರಿಂದ, ಅವರು ಹೆಚ್ಚಿನ ಆನಂದ ಮತ್ತು ಆತ್ಮಿಕ ಬಲವನ್ನು ಪಡೆದುಕೊಳ್ಳುತ್ತಾರೆ. ಅವರು ಒಂದು ಸಂನ್ಯಾಸಿ ಜೀವನವನ್ನು ನಡಿಸಲು ಪ್ರಯತ್ನಿಸದಿದ್ದರೂ, ತಮ್ಮ ಆರ್ಥಿಕ ಪರಿಸ್ಥಿತಿಯ ಕಡೆಗೆ ಅವರು ತೋರಿಸಿರುವ ಸಮತೂಕದ ಮನೋಭಾವವು, ಅವರು ಪಯನೀಯರ್ ಸೇವೆಯ ಆಶೀರ್ವಾದಗಳಲ್ಲಿ ಆನಂದಿಸುವಂತೆ ಸಾಧ್ಯಮಾಡಿದೆ.
9 ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಮತ್ತು ಈ ದುಷ್ಟ ಲೋಕಕ್ಕಾಗಿ ಸಮಯವು ಮುಗಿಯುತ್ತಾ ಇದೆಯೆಂಬ ತೀವ್ರ ಪ್ರಜ್ಞೆ ನಿಮಗಿರುವಲ್ಲಿ, ಸುವಾರ್ತೆಯನ್ನು ಪ್ರತಿಯೊಂದು ಸಂದರ್ಭದಲ್ಲಿ ಸಾರಲು ಅಗತ್ಯವಿರುವ ತ್ಯಾಗಗಳನ್ನು ಮಾಡಲು ನೀವು ಆತ್ಮಿಕವಾಗಿ ಪ್ರಚೋದಿಸಲ್ಪಡುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿಯ ಕಡೆಗೆ ಇನ್ನೊಂದು ನೋಟವನ್ನು ಹರಿಸುವ ಮೂಲಕ ಮತ್ತು ಯೆಹೋವನ ಹಸ್ತಗಳಲ್ಲಿ ವಿಷಯವನ್ನು ಬಿಟ್ಟುಬಿಡುವ ಮೂಲಕ, ನೀವು ಆತನಿಗೆ ಪೂರ್ಣ ಸಮಯ ಸೇವೆಯನ್ನು ಸಲ್ಲಿಸಬಲ್ಲಿರೆಂದು ನಿಮಗೆ ತಿಳಿದುಬರಬಹುದು. ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿ ನೀವು ಕೆಲವೊಂದು ಪ್ರಾಪಂಚಿಕ ಬಯಕೆಗಳನ್ನು ತ್ಯಾಗಮಾಡಬೇಕಾದರೂ, ನೀವು ಯೆಹೋವನ ಹೇರಳವಾದ ಆಶೀರ್ವಾದಗಳಲ್ಲಿ ಆನಂದಿಸುವಿರಿ.—ಕೀರ್ತ. 145:16.
ಪ್ರಶ್ನೆ 3: “ಒಬ್ಬ ಹದಿವಯಸ್ಕನೋಪಾದಿ, ನಾನು ಪಯನೀಯರ್ ಸೇವೆಯನ್ನು ಒಂದು ವೃತ್ತಿಯಾಗಿ ಏಕೆ ಪರಿಗಣಿಸಬೇಕು?”
10 ನಿಮ್ಮ ಶಾಲೆಯ ಕೊನೆಯ ವರ್ಷಗಳನ್ನು ಮುಗಿಸುತ್ತಿರುವಾಗ, ನೀವು ಸ್ವಾಭಾವಿಕವಾಗಿಯೇ ಭವಿಷ್ಯತ್ತಿನ ಕುರಿತಾಗಿ ಯೋಚಿಸುತ್ತೀರಿ. ಅದು ಭದ್ರವಾಗಿರಬೇಕು, ಸಂತೋಷಕರವಾಗಿರಬೇಕು ಮತ್ತು ತೃಪ್ತಿದಾಯಕವಾಗಿರಬೇಕೆಂದು ನೀವು ಬಯಸುತ್ತೀರಿ. ಶಾಲಾ ಮಾರ್ಗದರ್ಶನ ಸಲಹೆಗಾರರು, ಅನೇಕ ವರ್ಷಗಳ ಕಾಲೇಜ್ ಶಿಕ್ಷಣವನ್ನು ಕೇಳಿಕೊಳ್ಳುವ ಒಂದು ಲಾಭಪ್ರದ ವೃತ್ತಿಯೊಳಗೆ ನಿಮ್ಮನ್ನು ನಡೆಸುವಂತೆ ಪ್ರಯತ್ನಿಸಬಹುದು. ನಿಮ್ಮ ಸುಶಿಕ್ಷಿತ ಕ್ರೈಸ್ತ ಮನಸ್ಸಾಕ್ಷಿಯು, ನೀವು ಸಾಧ್ಯವಿರುವಷ್ಟು ಪೂರ್ಣವಾಗಿ ಯೆಹೋವನಿಗೆ ಸೇವೆಸಲ್ಲಿಸಲು ತಯಾರಾಗಿರಬೇಕೆಂದು ನಿಮಗೆ ಹೇಳುತ್ತದೆ. (ಪ್ರಸಂ. 12:1) ನೀವು ಕಟ್ಟಕಡೆಗೆ ಮದುವೆಯಾಗಿ ಒಂದು ಕುಟುಂಬವನ್ನು ಹೊಂದುವುದರ ಕುರಿತಾಗಿಯೂ ಯೋಚಿಸಬಹುದು. ನೀವೇನು ಮಾಡುವಿರಿ?
11 ನಿಮ್ಮ ಜೀವನದ ಈ ಸಮಯದಲ್ಲಿ ನೀವು ಮಾಡುವಂತಹ ನಿರ್ಣಯಗಳು, ನಿಮ್ಮ ಇಡೀ ಭವಿಷ್ಯತ್ತನ್ನು ರೂಪಿಸಬಹುದು. ನೀವು ಈಗಾಗಲೇ ಯೆಹೋವನ ಒಬ್ಬ ಸಮರ್ಪಿತ, ದೀಕ್ಷಾಸ್ನಾನ ಪಡೆದುಕೊಂಡಿರುವ ಸಾಕ್ಷಿಯಾಗಿರುವಲ್ಲಿ, ನೀವು ನಿಮ್ಮನ್ನೇ ಪೂರ್ಣವಾಗಿ ಯೆಹೋವನಿಗೆ ಸಮರ್ಪಿಸಿಕೊಂಡಿದ್ದೀರಿ. (ಇಬ್ರಿ. 10:7) ನಿಮಗೆ ಸಿಗುವ ಪ್ರಥಮ ಅವಕಾಶದಲ್ಲೇ, ಒಂದು ಅಥವಾ ಹೆಚ್ಚು ತಿಂಗಳುಗಳಿಗೆ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಪ್ರಯತ್ನಿಸಿರಿ. ಇದು ಕ್ರಮದ ಪಯನೀಯರ್ ಸೇವೆಯಿಂದ ಬರುವ ಆನಂದಗಳು ಮತ್ತು ಜವಾಬ್ದಾರಿಗಳ ರುಚಿಯನ್ನು ನಿಮಗೆ ಕೊಡುವುದು, ಮತ್ತು ನೀವು ನಿಮ್ಮ ಜೀವಿತದೊಂದಿಗೆ ಏನನ್ನು ಮಾಡಬೇಕೆಂಬುದರ ನಿಮ್ಮ ದೃಷ್ಟಿಕೋನವು ನಿಸ್ಸಂದೇಹವಾಗಿಯೂ ಹೆಚ್ಚು ಸ್ಪಷ್ಟವಾಗುವುದು. ಶಾಲೆಯನ್ನು ಮುಗಿಸಿದ ನಂತರ ಇರುವ ಸಮಯದಲ್ಲಿ, ಪೂರ್ಣ ಸಮಯದ ಐಹಿಕ ಕೆಲಸವನ್ನು ಆರಂಭಿಸುವ ಬದಲಿಗೆ, ಕ್ರಮದ ಪಯನೀಯರ್ ಸೇವೆಯನ್ನು ಏಕೆ ಆರಂಭಿಸಬಾರದು? ಜೀವನದಲ್ಲಿ ತಡವಾಗಿ ಪಯನೀಯರ್ ಸೇವೆಯನ್ನು ಆರಂಭಿಸಿದವರು, ಅದನ್ನು ಬೇಗನೆ ಆರಂಭಿಸದೆ ಇದ್ದದಕ್ಕಾಗಿ ವಿಷಾದಪಡುತ್ತಾರೆ.
12 ಒಬ್ಬ ಯುವ ವ್ಯಕ್ತಿಯೋಪಾದಿ, ಅವಿವಾಹಿತ ಸ್ಥಿತಿಯನ್ನು ಬೆನ್ನಟ್ಟಲಿಕ್ಕಾಗಿ ನಿಮಗಿರುವ ಸದಾವಕಾಶದ ಲಾಭವನ್ನು ಪಡೆದುಕೊಳ್ಳಿರಿ ಮತ್ತು ಪೂರ್ಣ ಸಮಯದ ಸಾರುವ ಚಟುವಟಿಕೆಯಲ್ಲಿ ನೀವು ಪಡೆದುಕೊಳ್ಳುವ ಪ್ರಯೋಜನಗಳಲ್ಲಿ ಆನಂದಿಸಿರಿ. ಮುಂದೊಂದು ದಿನ ನೀವು ವಿವಾಹವಾಗಲು ಬಯಸುತ್ತಿರುವಲ್ಲಿ, ಪ್ರಥಮವಾಗಿ ಕ್ರಮದ ಪಯನೀಯರ್ ಕೆಲಸದಲ್ಲಿ ಸೇವೆಸಲ್ಲಿಸುವ ಮೂಲಕ ನೀವು ವಿವಾಹಕ್ಕಾಗಿ ಒಂದು ಉತ್ತಮ ತಳಪಾಯವನ್ನು ಇಡಸಾಧ್ಯವಿದೆ. ಇದಕ್ಕಿಂತಲೂ ಉತ್ತಮವಾದ ತಳಪಾಯವಿಲ್ಲ. ನೀವು ಪ್ರೌಢತೆ ಮತ್ತು ಆತ್ಮಿಕತೆಯಲ್ಲಿ ಬೆಳೆದಂತೆ, ಸಮಮನಸ್ಸಿನ ವಿವಾಹ ಸಂಗಾತಿಯೊಂದಿಗೆ ಪಯನೀಯರ್ ಸೇವೆಯನ್ನು ನಿಮ್ಮ ಜೀವನದ ವೃತ್ತಿಯನ್ನಾಗಿ ಮಾಡಲು ಆರಿಸಿಕೊಳ್ಳಬಹುದು. ಜೊತೆಯಾಗಿ ಪಯನೀಯರ್ ಸೇವೆಯನ್ನು ಮಾಡಿರುವ ಕೆಲವು ದಂಪತಿಗಳು, ಸರ್ಕಿಟ್ ಕೆಲಸವನ್ನು ಪ್ರವೇಶಿಸಿದ್ದಾರೆ ಅಥವಾ ವಿಶೇಷ ಪಯನೀಯರರಾಗಿದ್ದಾರೆ. ನಿಜವಾಗಿಯೂ ತೃಪ್ತಿದಾಯಕವಾದ ಒಂದು ಜೀವನರೀತಿ!
13 ನೀವು ಎಷ್ಟೇ ಸಮಯದ ವರೆಗೆ ಪಯನೀಯರ್ ಸೇವೆಯನ್ನು ಮುಂದುವರಿಸಲಿ, ನೀವು ನಿಮ್ಮ ಶಿಕ್ಷಣವನ್ನು ಸಮಗ್ರಗೊಳಿಸಿರುವಿರಿ, ಮತ್ತು ಭೂಮಿಯ ಮೇಲೆ ಇನ್ನಾವುದೇ ಉದ್ಯೋಗವು ಒದಗಿಸಲಾರದ ಅಮೂಲ್ಯವಾದ ತರಬೇತಿಯನ್ನು ಪಡೆದಿರುವಿರಿ. ಪಯನೀಯರ್ ಸೇವೆಯು, ಶಿಸ್ತು, ವೈಯಕ್ತಿಕ ವ್ಯವಸ್ಥೆ, ಜನರೊಂದಿಗೆ ವ್ಯವಹರಿಸುವ ವಿಧ, ಯೆಹೋವನ ಮೇಲೆ ಅವಲಂಬನೆ, ಮತ್ತು ತಾಳ್ಮೆ ಹಾಗೂ ದಯೆಯನ್ನು ವಿಕಸಿಸಿಕೊಳ್ಳುವ ವಿಧವನ್ನು ಕಲಿಸುತ್ತದೆ. ಈ ಗುಣಗಳು ನಿಮಗೆ ಹೆಚ್ಚು ಶ್ರೇಷ್ಠವಾದ ಜವಾಬ್ದಾರಿಗಳನ್ನು ವಹಿಸಿಕೊಳ್ಳುವಂತೆ ನಿಮ್ಮನ್ನು ಸಜ್ಜುಗೊಳಿಸುವವು.
14 ಮಾನವಕುಲಕ್ಕೆ ಜೀವನವು ಹಿಂದೆಂದೂ ಇಷ್ಟು ಅನಿಶ್ಚಿತವಾಗಿರಲಿಲ್ಲ. ಯೆಹೋವನು ವಾಗ್ದಾನಿಸಿರುವ ಸಂಗತಿಗಳನ್ನು ಬಿಟ್ಟು, ನಿಜವಾಗಿ ಶಾಶ್ವತವಾಗಿರುವ ಸಂಗತಿಗಳು ಕೊಂಚವೇ. ನಿಮ್ಮ ಭವಿಷ್ಯತ್ತು ನಿಮ್ಮ ಮುಂದೆ ವಿಶಾಲವಾಗಿ ತೆರೆದಿರುವುದರಿಂದ, ಬರಲಿರುವ ವರ್ಷಗಳಲ್ಲಿ ನೀವು ನಿಮ್ಮ ಜೀವನದಲ್ಲಿ ಏನು ಮಾಡುವಿರೆಂಬುದನ್ನು ಗಂಭೀರವಾಗಿ ಯೋಚಿಸಲಿಕ್ಕಾಗಿ, ಇದಕ್ಕಿಂತಲೂ ಉತ್ತಮವಾದ ಯಾವ ಸಮಯವಿದೆ? ಪಯನೀಯರ್ ಸೇವೆಯ ಸುಯೋಗವನ್ನು ಜಾಗರೂಕತೆಯಿಂದ ತೂಗಿ ನೋಡಿರಿ. ಪಯನೀಯರ್ ಸೇವೆಯನ್ನು ನಿಮ್ಮ ವೃತ್ತಿಯಾಗಿ ಆರಿಸಿಕೊಂಡದಕ್ಕಾಗಿ ನೀವು ಎಂದೂ ವಿಷಾದಪಡದಿರುವಿರಿ.
ಪ್ರಶ್ನೆ 4: “ತಾಸುಗಳ ಆವಶ್ಯಕತೆಯನ್ನು ಪೂರೈಸುವುದು ಒಂದು ಸತತವಾದ ಒತ್ತಡ ಅಲ್ಲವೊ? ನಾನು ಕಡಿಮೆ ತಾಸುಗಳನ್ನು ಮಾಡುವಲ್ಲಿ ಆಗೇನು?”
15 ಕ್ರಮದ ಪಯನೀಯರ್ ಅರ್ಜಿಯನ್ನು ತುಂಬಿಸುವಾಗ, ನೀವು ಈ ಪ್ರಶ್ನೆಯನ್ನು ಉತ್ತರಿಸಬೇಕು: “1,000 ತಾಸುಗಳ ವಾರ್ಷಿಕ ಆವಶ್ಯಕತೆಯನ್ನು ಸಮಂಜಸವಾಗಿ ಮುಟ್ಟಲು ನಿರೀಕ್ಷಿಸಬಹುದಾದ ರೀತಿಯಲ್ಲಿ ನೀವು ನಿಮ್ಮ ವೈಯಕ್ತಿಕ ವ್ಯವಹಾರಗಳನ್ನು ಸಂಘಟಿಸಿದ್ದೀರೊ?” ಆ ಆವಶ್ಯಕತೆಯನ್ನು ಪೂರೈಸಲು, ನೀವು ಒಂದು ದಿನದಲ್ಲಿ ಸರಾಸರಿ ಸುಮಾರು ಮೂರು ತಾಸುಗಳನ್ನು ಸೇವೆಯಲ್ಲಿ ವ್ಯಯಿಸಬೇಕು. ಇದಕ್ಕೆ ಒಳ್ಳೆಯ ಕಾರ್ಯತಖ್ತೆ ಮತ್ತು ಸ್ವಶಿಸ್ತು ಅಗತ್ಯ ಎಂಬುದು ಸ್ಪಷ್ಟ. ಹೆಚ್ಚಿನ ಪಯನೀಯರರು ಕೆಲವೇ ತಿಂಗಳುಗಳೊಳಗೆ ಒಂದು ವ್ಯಾವಹಾರಿಕ, ಕಾರ್ಯಸಾಧ್ಯ ನಿಯತಕ್ರಮವನ್ನು ರಚಿಸುತ್ತಾರೆ.
16 ಆದರೆ ‘ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ,’ ಎಂದು ಪ್ರಸಂಗಿ 9:11 ಸತ್ಯವಾಗಿ ಹೇಳುತ್ತದೆ. ಗಂಭೀರವಾದ ಕಾಯಿಲೆ ಅಥವಾ ಬೇರೆ ಯಾವುದೋ ಮುಂಗಾಣದ ಪರಿಸ್ಥಿತಿಗಳು, ಒಬ್ಬ ಪಯನೀಯರನು ಕಡಿಮೆ ತಾಸುಗಳನ್ನು ಮಾಡಲು ಕಾರಣವಾಗಬಹುದು. ಆ ಸಮಸ್ಯೆಯು ಹೆಚ್ಚು ದೀರ್ಘ ಸಮಯ ಉಳಿಯದಿರುವಲ್ಲಿ ಮತ್ತು ಅದು ಸೇವಾ ವರ್ಷದ ಆರಂಭದಲ್ಲಿ ಸಂಭವಿಸುವಲ್ಲಿ, ಕಡಿಮೆಯಾಗಿರುವ ತಾಸುಗಳನ್ನು ಮಾಡಲಿಕ್ಕಾಗಿ, ಕಾರ್ಯತಖ್ತೆಯನ್ನು ಸರಿಹೊಂದಿಸಿಕೊಂಡು, ಹೆಚ್ಚಿನ ತಾಸುಗಳನ್ನು ಮಾಡಬೇಕಾಗಬಹುದು ಅಷ್ಟೇ. ಆದರೆ ಸೇವಾ ವರ್ಷವು ಕೊನೆಗೊಳ್ಳಲು ಕೆಲವೇ ತಿಂಗಳುಗಳು ಉಳಿದಿರುವಾಗ, ಒಂದು ಗಂಭೀರ ಸಮಸ್ಯೆಯು ಏಳುವಲ್ಲಿ ಮತ್ತು ಪಯನೀಯರನು ತನ್ನ ತಾಸುಗಳನ್ನು ಪೂರೈಸಲು ಸಾಧ್ಯವಿಲ್ಲದಿದ್ದಲ್ಲಿ, ಆಗೇನು?
17 ನೀವು ಕೆಲವೊಂದು ತಿಂಗಳುಗಳ ವರೆಗೆ ತಾತ್ಕಾಲಿಕವಾಗಿ ಅಸ್ವಸ್ಥರಾಗಿರುವಲ್ಲಿ ಅಥವಾ ನಿಮ್ಮ ನಿಯಂತ್ರಣವನ್ನು ಮೀರಿರುವ ಬೇರೆ ಯಾವುದೋ ತುರ್ತು ಕಾರಣಕ್ಕಾಗಿ, ಅವಶ್ಯವಾಗಿರುವ ತಾಸುಗಳನ್ನು ಮಾಡಲು ಸಾಧ್ಯವಿಲ್ಲದಿರುವಲ್ಲಿ, ನೀವು ಸಭೆಯ ಸೇವಾ ಕಮಿಟಿಯ ಒಬ್ಬ ಸದಸ್ಯನೊಂದಿಗೆ ಮಾತಾಡಿ, ಸಮಸ್ಯೆಯನ್ನು ವಿವರಿಸಬಹುದು. ಮಾಡಲು ಸಾಧ್ಯವಾಗದಿದ್ದ ತಾಸುಗಳನ್ನು ಮಾಡುವ ಕುರಿತಾಗಿ ಚಿಂತಿಸದೆ, ನೀವು ಪಯನೀಯರ್ ಸೇವೆಯಲ್ಲಿ ಮುಂದುವರಿಯುವಂತೆ ಅನುಮತಿಸುವುದು ಉಚಿತವೆಂದು ಈ ಹಿರಿಯರು ನೆನಸುವಲ್ಲಿ, ಅವರು ಆ ನಿರ್ಣಯವನ್ನು ಮಾಡಸಾಧ್ಯವಿದೆ. ನೀವು ಮಾಡಲು ಸಾಧ್ಯವಾಗದಿದ್ದ ತಾಸುಗಳನ್ನು ಮಾಡುವ ಅಗತ್ಯವಿಲ್ಲವೆಂದು ತೋರಿಸಲು, ಸೆಕ್ರಿಟರಿಯು ಕಾಂಗ್ರಿಗೇಷನ್ ಪಬ್ಲಿಷರ್ ರೆಕಾರ್ಡ್ ಕಾರ್ಡ್ನಲ್ಲಿ ಬರೆಯುವನು. ಇದು ಗೈರುಹಾಜರಿಯ ರಜೆಯಲ್ಲ, ಬದಲಾಗಿ ನಿಮ್ಮ ಪರಿಸ್ಥಿತಿಗಳಿಗಾಗಿ ವಿಶೇಷವಾದ ಪರಿಗಣನೆಯಾಗಿದೆ ಅಷ್ಟೇ.—ಅಕ್ಟೋಬರ್ 1986ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ 18ನೆಯ ಪ್ಯಾರಗ್ರಾಫನ್ನು ನೋಡಿರಿ.
18 ಅನುಭವಸ್ಥ ಪಯನೀಯರರು ಸೇವಾ ವರ್ಷದ ಆರಂಭದಲ್ಲೇ ಹೆಚ್ಚು ತಾಸುಗಳನ್ನು ಮಾಡುತ್ತಾರೆ. ಅವರ ಪಯನೀಯರ್ ಸೇವೆಯು ಆದ್ಯ ಸಂಗತಿಯಾಗಿರುವುದರಿಂದ, ಅವರು ಅನಾವಶ್ಯಕವಾದ ಚಟುವಟಿಕೆಗಳನ್ನು ಕಡಮೆಮಾಡುವುದು ಅಗತ್ಯವೆಂಬುದನ್ನು ಕಂಡುಕೊಳ್ಳುತ್ತಾರೆ. ಸರಿಯಾದ ಕಾರ್ಯತಖ್ತೆಯಿಲ್ಲದ್ದರಿಂದ ಅಥವಾ ಸ್ವಶಿಸ್ತಿನ ಕೊರತೆಯಿಂದಾಗಿ ಒಬ್ಬ ಪಯನೀಯರನು ಕಡಿಮೆ ತಾಸುಗಳನ್ನು ಮಾಡುವಲ್ಲಿ, ಅವನು ಮಾಡದೆ ಹೋಗಿರುವ ತಾಸುಗಳನ್ನು ಮಾಡುವುದು ತನ್ನ ಜವಾಬ್ದಾರಿಯಾಗಿದೆಯೆಂದು ಅವನಿಗನಿಸಬೇಕು ಮತ್ತು ವಿಶೇಷವಾದ ಪರಿಗಣನೆಯನ್ನು ನಿರೀಕ್ಷಿಸಬಾರದು.
19 ಒಬ್ಬ ಪಯನೀಯರನು ಯಾವಾಗಲಾದರೊಮ್ಮೆ ತನ್ನ ಪರಿಸ್ಥಿತಿಗಳಲ್ಲಿ ತಪ್ಪಿಸಿಕೊಳ್ಳಲಾರದ ಒಂದು ಬದಲಾವಣೆಯನ್ನು ಅನುಭವಿಸುತ್ತಾನೆ. ಮುಂದುವರಿಯುತ್ತಿರುವ ಆರೋಗ್ಯದ ಸಮಸ್ಯೆ, ಹೆಚ್ಚಿಸಲ್ಪಟ್ಟಿರುವ ಕುಟುಂಬ ಜವಾಬ್ದಾರಿ, ಮುಂತಾದ ಕಾರಣಗಳಿಗಾಗಿ, ದೀರ್ಘ ಸಮಯದ ವರೆಗೆ ತಾನು ತಾಸುಗಳ ಆವಶ್ಯಕತೆಯನ್ನು ಪೂರೈಸಲಾರೆನೆಂದು ಅವನು ಕಂಡುಕೊಳ್ಳಬಹುದು. ಈ ವಿದ್ಯಮಾನದಲ್ಲಿ, ಪುನಃ ಪ್ರಚಾರಕನಾಗಿ, ಸಾಧ್ಯವಿರುವಾಗಲ್ಲೆಲ್ಲಾ ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ಪಾಲ್ಗೊಳ್ಳುವುದು ವಿವೇಕಯುತ. ಒಬ್ಬ ಪಯನೀಯರನ ಪರಿಸ್ಥಿತಿಗಳು, ಅವನು ಇನ್ನು ಮುಂದೆ ತಾಸುಗಳ ಆವಶ್ಯಕತೆಯನ್ನು ಪೂರೈಸುವಂತೆ ಅನುಮತಿಸದಿರುವಲ್ಲಿ, ಅವನ ಹೆಸರು ಪಯನೀಯರ್ ಪಟ್ಟಿಯಲ್ಲಿ ಉಳಿಯುವಂತೆ ಬಿಡುವ ಯಾವ ಕ್ರಮವಾದ ಒದಗಿಸುವಿಕೆ ಇರುವುದಿಲ್ಲ.
20 ಯೋಗ್ಯರಾಗಿರುವವರಿಗೆ ವಿಶೇಷವಾದ ಪರಿಗಣನೆಯನ್ನು ತೋರಿಸುವ ಒದಗಿಸುವಿಕೆಯು, ಅನಗತ್ಯವಾಗಿ ಚಿಂತೆಮಾಡದೆ ಪಯನೀಯರ್ ಸೇವೆಯನ್ನು ಪ್ರವೇಶಿಸುವಂತೆ ಅನೇಕರನ್ನು ಉತ್ತೇಜಿಸುವುದೆಂದು ನಾವು ನಿರೀಕ್ಷಿಸುತ್ತೇವೆ. ಈಗಾಗಲೇ ಪೂರ್ಣ ಸಮಯದ ಸೇವೆಯಲ್ಲಿರುವವರು, ಅದನ್ನು ಮುಂದುವರಿಸುವಂತೆಯೂ ಇದು ಉತ್ತೇಜಿಸಬೇಕು. ಪಯನೀಯರರು ತಮ್ಮ ಪೂರ್ಣ ಸಮಯದ ಸೇವೆಯಲ್ಲಿ ಯಶಸ್ವಿಗಳಾಗಬೇಕೆಂದು ನಾವು ಬಯಸುತ್ತೇವೆ.
ಪ್ರಶ್ನೆ 5: “ನಾನು ಯಾವುದಾದರೂ ಕೆಲಸಮಾಡಿ ಅದರಿಂದ ಸಂತೋಷವನ್ನು ಪಡೆದುಕೊಳ್ಳಲು ಬಯಸುತ್ತೇನೆ. ಪಯನೀಯರ್ ಸೇವೆಯು ನನಗೆ ತೃಪ್ತಿಯನ್ನು ಕೊಡಬಲ್ಲದೊ?”
21 ನಿಜ ಸಂತೋಷವು, ಯೆಹೋವನೊಂದಿಗೆ ಒಂದು ಆಪ್ತ, ವೈಯಕ್ತಿಕ ಸಂಬಂಧವನ್ನು ಹೊಂದಿರುವ ಮತ್ತು ನಾವು ಆತನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿದ್ದೇವೆಂಬ ಮನಗಾಣಿಕೆಯ ಮೇಲೆ ಬಹಳವಾಗಿ ಅವಲಂಬಿಸಿರುತ್ತದೆ. “ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ” ಯೇಸು ಒಂದು ಯಾತನಾ ಕಂಬವನ್ನು ಸಹಿಸಿಕೊಂಡನು. (ಇಬ್ರಿ. 12:2) ಅವನ ಸಂತೋಷವು, ದೇವರ ಚಿತ್ತವನ್ನು ಮಾಡುವುದರಿಂದ ಬಂತು. (ಕೀರ್ತ. 40:8) ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ, ನಮ್ಮ ಜೀವನದ ಹೆಚ್ಚಿನ ಚಟುವಟಿಕೆಗಳು ಯೆಹೋವನ ಆರಾಧನೆಗೆ ಸಂಬಂಧಿಸಿರುವಲ್ಲಿ, ನಾವು ನಿಜ ಸಂತೋಷವನ್ನು ಅನುಭವಿಸಬಹುದು. ಆತ್ಮಿಕ ಬೆನ್ನಟ್ಟುವಿಕೆಗಳು ನಮಗೆ ಉದ್ದೇಶದ ಪ್ರಜ್ಞೆಯನ್ನು ಕೊಡುತ್ತವೆ ಯಾಕಂದರೆ ನಾವು ಸರಿಯಾದದ್ದನ್ನೇ ಮಾಡುತ್ತಿದ್ದೇವೆಂದು ನಮ್ಮ ಹೃದಯದಲ್ಲಿ ನಮಗೆ ತಿಳಿದಿದೆ. ಕೊಡುವುದರಿಂದ ಸಂತೋಷವು ಸಿಗುತ್ತದೆ, ಮತ್ತು ದೇವರ ಹೊಸ ಲೋಕದಲ್ಲಿ ನಿತ್ಯಜೀವವನ್ನು ಗಳಿಸುವ ವಿಧವನ್ನು ಇತರರಿಗೆ ಕಲಿಸುವುದಕ್ಕೆ ನಮ್ಮನ್ನೇ ಕೊಟ್ಟುಕೊಳ್ಳುವುದಕ್ಕಿಂತಲೂ ಹೆಚ್ಚು ಉತ್ತಮವಾದ ಮಾರ್ಗ ಬೇರೊಂದಿಲ್ಲ.—ಅ. ಕೃ. 20:35.
22 ಮೊದಲನೆಯ ಪ್ಯಾರಗ್ರಾಫ್ನಲ್ಲಿ ಉಲ್ಲೇಖಿಸಲ್ಪಟ್ಟಿರುವ ಪಯನೀಯರನು ಈ ರೀತಿಯಲ್ಲಿ ವಿವರಿಸಿದನು: “ನಿಮ್ಮೊಂದಿಗೆ ಅಭ್ಯಾಸಮಾಡಿದ ಒಬ್ಬನು ಯೆಹೋವನ ಕ್ರಿಯಾಶೀಲ ಸ್ತುತಿಗಾರನಾಗುವುದನ್ನು ನೋಡುವುದಕ್ಕಿಂತ ಹೆಚ್ಚಿನ ಹರ್ಷವಿರಬಲ್ಲದೊ? ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ಜನರು ತಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಪ್ರಚೋದಿಸಲ್ಪಡುವುದರಲ್ಲಿ ದೇವರ ವಾಕ್ಯವು ಎಷ್ಟು ಬಲಶಾಲಿಯಾಗಿದೆಯೆಂದು ನೋಡುವುದು ರೋಮಾಂಚಕವೂ ನಂಬಿಕೆವರ್ಧಕವೂ ಆಗಿದೆ.” (ಅಕ್ಟೋಬರ್ 15, 1997ರ ಕಾವಲಿನಬುರುಜು, 18-23ನೆಯ ಪುಟಗಳನ್ನು ನೋಡಿರಿ.) ಹಾಗಾದರೆ, ನಿಮಗೆ ಯಾವುದು ಸಂತೋಷವನ್ನು ತರುತ್ತದೆ? ಲೋಕವು ನೀಡುವ ತಾತ್ಕಾಲಿಕ ಆನಂದದ ಬದಲಿಗೆ, ನೀವು ಶಾಶ್ವತವಾದ ಸಾರ್ಥಕ ಪ್ರಯತ್ನಗಳನ್ನು ಅಮೂಲ್ಯವೆಂದೆಣಿಸುವುದಾದರೆ, ಪಯನೀಯರ್ ಸೇವೆಯು ನಿಮ್ಮನ್ನು ನಿಜವಾಗಿಯೂ ಸಂತೋಷಿತರನ್ನಾಗಿ ಮಾಡುವ ಸಾಧನೆಯ ಅದ್ಭುತಕರ ಪ್ರಜ್ಞೆಯನ್ನು ಕೊಡುವುದು.
ಪ್ರಶ್ನೆ 6: “ನಿತ್ಯಜೀವವನ್ನು ಪಡೆಯಲು ಅದು ಆವಶ್ಯಕವಾಗಿಲ್ಲದಿರುವಲ್ಲಿ, ನಾನು ಪಯನೀಯರ್ ಸೇವೆಯನ್ನು ಮಾಡುವುದು ಅಥವಾ ಮಾಡದೆ ಇರುವುದು ನನ್ನ ಆಯ್ಕೆಯಲ್ಲವೊ?”
23 ನಿಜ, ಪಯನೀಯರ್ ಸೇವೆಯನ್ನು ಮಾಡುವ ನಿರ್ಣಯವನ್ನು ನೀವೇ ಮಾಡಬೇಕು. ನಿಮ್ಮ ಜೀವನದ ವೈಯಕ್ತಿಕ ಪರಿಸ್ಥಿತಿಗಳನ್ನು ಯೆಹೋವನೊಬ್ಬನೇ ವಿಮರ್ಶಿಸಬಲ್ಲನು. (ರೋಮಾ. 14:4) ನೀವು ನಿಮ್ಮ ಪೂರ್ಣ ಹೃದಯ, ಪ್ರಾಣ, ಮನಸ್ಸು ಮತ್ತು ಶಕ್ತಿಯೊಂದಿಗೆ ಆತನ ಸೇವೆಯನ್ನು ಮಾಡುವಂತೆ ಆತನು ಯೋಗ್ಯವಾಗಿಯೇ ಅಪೇಕ್ಷಿಸುತ್ತಾನೆ. (ಮಾರ್ಕ 12:30; ಗಲಾ. 6:4, 5) ಮನಸ್ಸಿಲ್ಲದೆ ಅಥವಾ ಹಂಗಿನಿಂದಾಗಿ ಅಲ್ಲ, ಬದಲಾಗಿ ಹರ್ಷದಿಂದ ಕೊಡುವ, ಆನಂದದಿಂದ ಆತನಿಗೆ ಸೇವೆಸಲ್ಲಿಸುವ ವ್ಯಕ್ತಿಯನ್ನು ಆತನು ಪ್ರೀತಿಸುತ್ತಾನೆ. (2 ಕೊರಿಂ. 9:7; ಕೊಲೊ 3:23) ನೀವು ಪೂರ್ಣ ಸಮಯ ಸೇವೆಸಲ್ಲಿಸುವ ಕಾರಣವು, ನೀವು ಯೆಹೋವನನ್ನು ಮತ್ತು ಟೆರಿಟೊರಿಯಲ್ಲಿರುವ ಜನರನ್ನು ಪ್ರೀತಿಸುತ್ತಿರುವುದೇ ಆಗಿರಬೇಕು. (ಮತ್ತಾ. 9:36-38; ಮಾರ್ಕ 12:30, 31) ನಿಮಗೆ ಹೀಗನಿಸುವಲ್ಲಿ, ಪಯನೀಯರ್ ಸೇವೆಯ ಕುರಿತು ನೀವು ಗಂಭೀರವಾಗಿ ಯೋಚಿಸುವುದು ಯೋಗ್ಯವಾಗಿದೆ.
24 ಇಲ್ಲಿ ಕೊಡಲ್ಪಟ್ಟಿರುವ ವಿಷಯವು, ಪಯನೀಯರ್ ಸೇವೆಯನ್ನು ಮಾಡುವ ನಿಮ್ಮ ಪ್ರತೀಕ್ಷೆಗಳನ್ನು ತೂಗಿನೋಡುವಂತೆ ಸಹಾಯಮಾಡುವುದೆಂದು ನಾವು ನಿರೀಕ್ಷಿಸುತ್ತೇವೆ. ಕ್ರಮದ ಪಯನೀಯರ್ ಸೇವೆಯನ್ನು ಮಾಡಲು ನೀವು ನಿಮ್ಮ ಪರಿಸ್ಥಿತಿಗಳನ್ನು ಸರಿಹೊಂದಿಸಬಹುದೊ? “ನನ್ನ ಸಾಪ್ತಾಹಿಕ ಪಯನೀಯರ್ ಸೇವಾ ಕಾರ್ಯತಖ್ತೆ” ಎಂಬ ಶೀರ್ಷಿಕೆಯುಳ್ಳ ಒಂದು ಕ್ಯಾಲೆಂಡರ್ ಕೆಳಗೆ ಮುದ್ರಿಸಲ್ಪಟ್ಟಿದೆ. ಪ್ರತಿ ವಾರ ಶುಶ್ರೂಷೆಯಲ್ಲಿ ಸುಮಾರು 23 ತಾಸುಗಳನ್ನು ಹಾಕುವಂತೆ ಅನುಮತಿಸುವ ಒಂದು ವ್ಯಾವಹಾರಿಕ ಕಾರ್ಯತಖ್ತೆಯನ್ನು ನೀವು ತಯಾರಿಸಬಲ್ಲಿರೊ ಎಂದು ನೋಡಿರಿ. ಅನಂತರ ನಿಮ್ಮ ಪೂರ್ಣ ನಂಬಿಕೆ ಮತ್ತು ಭರವಸೆಯನ್ನು ಯೆಹೋವನಲ್ಲಿಡಿರಿ. ಆತನ ಸಹಾಯದಿಂದ ನೀವು ಯಶಸ್ವಿಯಾಗಬಲ್ಲಿರಿ! ಆತನು ಹೀಗೆ ವಾಗ್ದಾನಿಸಿದ್ದಾನೆ: “ನಾನು . . . ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆ”ನು.—ಮಲಾ. 3:10.
25 ಆದುದರಿಂದ “ಪಯನೀಯರ್ ಸೇವೆ—ನೀವದನ್ನು ಮಾಡಬಲ್ಲಿರೊ?” ಎಂದು ನಾವು ಕೇಳುತ್ತೇವೆ. ನೀವು “ಹೌದು” ಎಂದು ಹೇಳಸಾಧ್ಯವಿರುವಲ್ಲಿ, ಕ್ರಮದ ಪಯನೀಯರ್ ಸೇವೆಯನ್ನು ಬೇಗನೆ ಆರಂಭಿಸಲು ಒಂದು ತಾರೀಖನ್ನು ನಿಶ್ಚಯಿಸಿಕೊಳ್ಳಿರಿ ಮತ್ತು ಯೆಹೋವನು ನಿಮ್ಮನ್ನು ಒಂದು ಆನಂದಭರಿತ ಜೀವನದೊಂದಿಗೆ ಆಶೀರ್ವದಿಸುವನೆಂಬ ಆಶ್ವಾಸನೆ ನಿಮಗಿರಲಿ!
[ಪುಟ 6ರಲ್ಲಿರುವಚಿತ್ರ]
(For fully formatted text, see publication)
ನನ್ನ ಸಾಪ್ತಾಹಿಕ ಪಯನೀಯರ್ ಸೇವಾ ಕಾರ್ಯತಖ್ತೆ
ಸೋಮವಾರ ಬೆಳಗ್ಗೆ ಕ್ಷೇತ್ರ ಸೇವೆ
ಮಂಗಳವಾರ ಬೆಳಗ್ಗೆ ಕ್ಷೇತ್ರ ಸೇವೆ
ಬುಧವಾರ ಬೆಳಗ್ಗೆ ಕ್ಷೇತ್ರ ಸೇವೆ
ಗುರುವಾರ ಬೆಳಗ್ಗೆ ಕ್ಷೇತ್ರ ಸೇವೆ
ಶುಕ್ರವಾರ ಬೆಳಗ್ಗೆ ಕ್ಷೇತ್ರ ಸೇವೆ
ಶನಿವಾರ ಬೆಳಗ್ಗೆ ಕ್ಷೇತ್ರ ಸೇವೆ
ಆದಿತ್ಯವಾರ ಬೆಳಗ್ಗೆ ಕ್ಷೇತ್ರ ಸೇವೆ
ಸೋಮವಾರ ಮಧ್ಯಾಹ್ನ ಕ್ಷೇತ್ರ ಸೇವೆ
ಮಂಗಳವಾರ ಮಧ್ಯಾಹ್ನ ಕ್ಷೇತ್ರ ಸೇವೆ
ಬುಧವಾರ ಮಧ್ಯಾಹ್ನ ಕ್ಷೇತ್ರ ಸೇವೆ
ಗುರುವಾರ ಮಧ್ಯಾಹ್ನ ಕ್ಷೇತ್ರ ಸೇವೆ
ಶುಕ್ರವಾರ ಮಧ್ಯಾಹ್ನ ಕ್ಷೇತ್ರ ಸೇವೆ
ಶನಿವಾರ ಮಧ್ಯಾಹ್ನ ಕ್ಷೇತ್ರ ಸೇವೆ
ಆದಿತ್ಯವಾರ ಮಧ್ಯಾಹ್ನ ಕ್ಷೇತ್ರ ಸೇವೆ
ಸೋಮವಾರ ಸಾಯಂಕಾಲ ಕ್ಷೇತ್ರ ಸೇವೆ
ಮಂಗಳವಾರ ಸಾಯಂಕಾಲ ಕ್ಷೇತ್ರ ಸೇವೆ
ಬುಧವಾರ ಸಾಯಂಕಾಲ ಕ್ಷೇತ್ರ ಸೇವೆ
ಗುರುವಾರ ಸಾಯಂಕಾಲ ಕ್ಷೇತ್ರ ಸೇವೆ
ಶುಕ್ರವಾರ ಸಾಯಂಕಾಲ ಕ್ಷೇತ್ರ ಸೇವೆ
ಶನಿವಾರ ಸಾಯಂಕಾಲ ಕ್ಷೇತ್ರ ಸೇವೆ
ಆದಿತ್ಯವಾರ ಸಾಯಂಕಾಲ ಕ್ಷೇತ್ರ ಸೇವೆ
ವಾರದ ಪ್ರತಿ ದಿನಕ್ಕಾಗಿ ನಿಮ್ಮ ಕಾರ್ಯತಖ್ತೆಯನ್ನು ದಾಖಲಿಸಲು ಪೆನ್ಸಿಲನ್ನು ಉಪಯೋಗಿಸಿ.
ಕ್ಷೇತ್ರ ಸೇವೆಯಲ್ಲಿ ಪ್ರತಿ ವಾರ ಸುಮಾರು 23 ತಾಸುಗಳ ಮೊತ್ತವನ್ನು ಶೆಡ್ಯೂಲ್ ಮಾಡಿರಿ.
ಶೆಡ್ಯೂಲ್ ಮಾಡಲ್ಪಟ್ಟಿರುವ ಒಟ್ಟು ಸಾಪ್ತಾಹಿಕ ತಾಸುಗಳು ________________