ಉತ್ಸುಕತೆಯಿಂದ ಸುವಾರ್ತೆಯನ್ನು ಸಾರಿರಿ
1 ‘ನಿಮ್ಮನ್ನು . . . ನೋಡಬೇಕೆಂದು ಅಪೇಕ್ಷಿಸುತ್ತೇನೆ. . . . ನಿಮಗೆ ಸಹ ಸುವಾರ್ತೆಯನ್ನು ಸಾರುವುದಕ್ಕೆ [“ನನಗಂತೂ ಉತ್ಸುಕತೆಯಿದೆ,” NW] ನಾನಂತೂ ಸಿದ್ಧನಿದ್ದೇನೆ.’ ರೋಮಿನಲ್ಲಿದ್ದ ಸಹೋದರರಿಗೆ ಪತ್ರವನ್ನು ಬರೆಯುವಾಗ ಪ್ರಾರಂಭದ ಒಕ್ಕಣೆಯಲ್ಲಿ ಅಪೊಸ್ತಲ ಪೌಲನು ಈ ರೀತಿಯ ಹೇಳಿಕೆಗಳನ್ನು ವ್ಯಕ್ತಪಡಿಸಿದನು. ಅವರನ್ನು ಭೇಟಿಮಾಡಲು ಪೌಲನು ಏಕೆ ಉತ್ಸುಕನಾಗಿದ್ದನು? ಅವನು ಹೇಳಿದ್ದು: ‘ನಿಮ್ಮಲ್ಲೂ ಫಲಪ್ರದವಾಗಬೇಕೆಂಬ ಉದ್ದೇಶದಿಂದ . . . ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ. ಆ ಸುವಾರ್ತೆಯು ದೇವರ ಬಲಸ್ವರೂಪವಾಗಿದ್ದು . . . ರಕ್ಷಣೆ ಉಂಟುಮಾಡುವಂಥದಾಗಿದೆ.’—ರೋಮಾ. 1:11-16.
2 ಎಫೆಸದ ಹಿರಿಯರೊಂದಿಗೆ ಮಾತಾಡುವಾಗ, ಪೌಲನು ಅದೇ ರೀತಿಯ ಉತ್ಸುಕತೆಯನ್ನು ತೋರಿಸಿದನು. ಅವನು ಅವರಿಗೆ ಜ್ಞಾಪಿಸಿದ್ದು: “ನಾನು ಆಸ್ಯಸೀಮೆಯಲ್ಲಿ ಕಾಲಿಟ್ಟ ಮೊದಲನೆಯ ದಿವಸದಿಂದ . . . ನಾನು . . . ಸಭೆಯಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಿಸುವದಕ್ಕೂ ಹಿಂತೆಗಿಯದೆ ಯೆಹೂದ್ಯರಿಗೂ ಗ್ರೀಕರಿಗೂ . . . ಖಂಡಿತವಾಗಿ ಬೋಧಿಸುವವನಾಗಿದ್ದೆನು.” (ಅ.ಕೃ. 20:18-21) ತನಗೆ ನೇಮಿಸಲ್ಪಟ್ಟ ಟೆರಿಟೊರಿಯಲ್ಲೆಲ್ಲ ರಕ್ಷಣೆಯ ಸುವಾರ್ತೆಯನ್ನು ಸಾರುವುದರಲ್ಲಿ ಮತ್ತು ರಾಜ್ಯದ ಫಲವನ್ನು ಪಡೆದುಕೊಳ್ಳುವುದರಲ್ಲಿ ಆಸಕ್ತಿಯುಳ್ಳವನೂ ಆಗಿದ್ದನು. ಅನುಕರಿಸಲಿಕ್ಕಾಗಿ ಎಂತಹ ಒಂದು ಉತ್ತಮ ಮನೋಭಾವ!
3 ನಮ್ಮನ್ನು ನಾವು ಹೀಗೆ ಪ್ರಶ್ನಿಸಿಕೊಳ್ಳಬಹುದು: ‘ನನ್ನ ಟೆರಿಟೊರಿಯಲ್ಲಿ ಸುವಾರ್ತೆಯನ್ನು ಸಾರುವುದರಲ್ಲಿ ನಾನು ಇದೇ ರೀತಿಯ ಉತ್ಸುಕತೆಯನ್ನು ತೋರಿಸುತ್ತೇನೋ? ಸಾರುವ ಕೆಲಸವನ್ನು ಕೇವಲ ಒಂದು ಕರ್ತವ್ಯವಾಗಿ ಎಣಿಸದೆ, ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸುವಾರ್ತೆಯನ್ನು ಸಾರುವುದರಲ್ಲಿ ನಾನು ಉತ್ಸುಕನಾಗಿದ್ದೇನೋ? ನನ್ನ ವೈಯಕ್ತಿಕ ಸ್ಥಿತಿಗತಿಗಳ ಬಗ್ಗೆ ನಾನು ಪ್ರಾರ್ಥನಾಪೂರ್ವಕವಾಗಿ ಯೋಚಿಸಿದ್ದೇನೋ? ನಮ್ಮ ಟೆರಿಟೊರಿಯಲ್ಲಿರುವ ಸಾಧ್ಯತೆಗಳ ಬಗ್ಗೆ, ಅಂದರೆ, ಮನೆಯಿಂದ ಮನೆಗೆ, ರಸ್ತೆಯಲ್ಲಿ, ವ್ಯಾಪಾರದ ಕ್ಷೇತ್ರಗಳಲ್ಲಿ, ಟೆಲಿಫೋನ್ ಮೂಲಕ ಮತ್ತು ಅನೌಪಚಾರಿಕವಾಗಿ ಸಾರುವಂತಹದ್ದರ ಕುರಿತು ಪರೀಕ್ಷೆಮಾಡಿ ನೋಡಿದ್ದೇನೋ?’
4 ಏಪ್ರಿಲ್ ತಿಂಗಳಿನಲ್ಲಿ ಉತ್ಸುಕತೆಯಿಂದ ಪಾಲ್ಗೊಳ್ಳಿರಿ: ಏಪ್ರಿಲ್ ತಿಂಗಳು ಸಾರುವ ಕಾರ್ಯದಲ್ಲಿ ನಮ್ಮ ವೈಯಕ್ತಿಕ ಪಾಲನ್ನು ಹೆಚ್ಚಿಸಲಿಕ್ಕಾಗಿ ಒಂದು ಒಳ್ಳೆಯ ಸಮಯವಾಗಿದೆ. ಕಡಿಮೆಗೊಳಿಸಿದ ತಾಸಿನ ಆವಶ್ಯಕತೆಯು ಅನೇಕರಿಗೆ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವಂತೆ ಶಕ್ತಗೊಳಿಸಬೇಕು. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ನೀವು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವಂತೆ ನಿಮ್ಮ ಪರಿಸ್ಥಿತಿಗಳು ಅನುಮತಿಸಬಹುದು. ಅಥವಾ ಹೊಂದಾಣಿಸಲ್ಪಟ್ಟ ತಾಸಿನ ಆವಶ್ಯಕತೆಯಿಂದಾಗಿ ನೀವು ಒಬ್ಬ ರೆಗ್ಯುಲರ್ ಪಯನೀಯರರಾಗಿ ಸೇವೆಮಾಡಸಾಧ್ಯವಿರಬಹುದು. ನೀವು ಸಭಾ ಪ್ರಚಾರಕರಾಗಿರುವಲ್ಲಿ, ಪಯನೀಯರ್ ಸೇವೆಯನ್ನು ಮಾಡಲು ಶಕ್ತರಾಗಿರುವವರಿಗೆ ಬೆಂಬಲವನ್ನು ನೀಡುತ್ತಾ, ಈ ತಿಂಗಳು ಮತ್ತು ಮುಂದಿನ ತಿಂಗಳುಗಳಲ್ಲಿ ನೀವು ಸೇವೆಯಲ್ಲಿ ಸಾಮಾನ್ಯವಾಗಿ ವ್ಯಯಿಸುವುದಕ್ಕಿಂತಲೂ ಹೆಚ್ಚಿನ ಸಮಯವನ್ನು ಕಳೆಯಸಾಧ್ಯವಿದೆಯೋ? ಅದು ಯೆಹೋವನ ಹೃದಯವನ್ನು ಪ್ರಫುಲ್ಲಗೊಳಿಸುವುದು!
5 ಸಾರುವ ಕಾರ್ಯದಲ್ಲಿ ಹೆಚ್ಚಿನದ್ದನ್ನು ಮಾಡುವ ಮೂಲಕ ರಾಜ್ಯದ ಪ್ರಚಾರಕರೆಲ್ಲರೂ ಪೌಲನಂತೆ ಉತ್ಸುಕತೆಯನ್ನು ತೋರಿಸುತ್ತಾ ಮುಂದುವರಿಯಬೇಕು. ಶುಶ್ರೂಷೆಯಲ್ಲಿ ನಮ್ಮ ಕೈಲಾದುದೆಲ್ಲವನ್ನು ಮಾಡುವಾಗ ನಮಗೆ ನಿಜವಾದ ಸಂತೋಷವು ಲಭಿಸುವುದು. ಪೌಲನಿಗೆ ಸಹ ಪವಿತ್ರ ಸೇವೆಯಲ್ಲಿ ಇಂತಹ ಆನಂದವು ಸಿಕ್ಕಿತು. ಅವನ ಅತ್ಯುತ್ತಮ ಮಾದರಿಯನ್ನು ನಾವು ಅನುಕರಿಸೋಣ.—ರೋಮಾ. 11:13; 1 ಕೊರಿಂ. 4:16.