ಅಂತ್ಯವು ನಿಕಟವಾಗುತ್ತಿರುವಂತೆ ಸಾಕ್ಷಿಕಾರ್ಯವನ್ನು ತೀವ್ರಗೊಳಿಸುವುದು
1 ಸುಗ್ಗೀಕಾಲವು ಸಂತೋಷದ ಸಮಯವಾಗಿದೆ. ಅಷ್ಟುಮಾತ್ರವಲ್ಲದೆ, ಇದು ಪರಿಶ್ರಮದ ಕಾಲವೂ ಆಗಿದೆ. ಬೆಳೆಗಳನ್ನು ಕೊಯ್ಯಲು ಕೇವಲ ಸೀಮಿತ ಸಮಯವಿರುತ್ತದೆ. ಕೆಲಸಗಾರರು ಅಲೆದಾಡುತ್ತಾ ಕಾಲ ಕಳೆಯಬಾರದು.
2 ಯೇಸು “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯನ್ನು ಸಾಂಕೇತಿಕವಾಗಿ ಸುಗ್ಗೀಕಾಲಕ್ಕೆ ಹೋಲಿಸಿದನು. (ಮತ್ತಾ. 13:39) ವಿಷಯಗಳ ಈ ವ್ಯವಸ್ಥೆಯ ಅಂತ್ಯದಲ್ಲಿ ನಾವು ಜೀವಿಸುತ್ತಿದ್ದೇವಾದುದರಿಂದ, “ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ” ಸಾಕ್ಷಿಯನ್ನು ನೀಡಲಿಕ್ಕೆ ನಮಗೆ ಕೇವಲ ಸೀಮಿತ ಸಮಯವಿದೆ. (ಮತ್ತಾ. 24:14) ಅಂತ್ಯವು ಸಮೀಪವಾದಂತೆ, ನಾವು ಶುಶ್ರೂಷೆಯಲ್ಲಿ ನಮ್ಮ ಪಾಲನ್ನು ತೀವ್ರಗೊಳಿಸಬೇಕು. ಏಕೆ? ಯೇಸು ವಿವರಿಸಿದ್ದು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ.”—ಮತ್ತಾ. 9:37, 38; ರೋಮಾ. 12:11.
3 ತುರ್ತಿನಿಂದ ಕೆಲಸ ಮಾಡಿರಿ: ಯೇಸು ತನ್ನ ಮಹಾ ಸಾರುವ ಕಾರ್ಯವನ್ನು ಆರಂಭಿಸಿದಾಗ, ನೇಮಿತ ಕೆಲಸವನ್ನು ಮಾಡಿ ಮುಗಿಸಲು ಅವನಿಗೆ ಕೇವಲ ಮೂರುವರೆ ವರ್ಷಗಳಿದ್ದವು. ಅವನು ತುರ್ತಿನ ಪ್ರಜ್ಞೆಯಿಂದ ಪ್ರಚಾರಮಾಡಿದನು. ಅವನು ಹೇಳಿದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಸಾರಿ ಹೇಳಬೇಕಾಗಿದೆ; ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.”—ಲೂಕ 4:43.
4 ಅದೇ ರೀತಿಯ ತುರ್ತಿನ ಪ್ರಜ್ಞೆಯನ್ನು ಯೇಸು ತನ್ನ ಶಿಷ್ಯರ ಹೃದಯದಲ್ಲಿ ಬೇರೂರಿಸಿದನು. (ಮಾರ್ಕ 13:32-37) ಆದುದರಿಂದಲೇ, ಅವರು “ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.” (ಅ.ಕೃ. 5:42) ಅವರ ಜೀವಿತಗಳಲ್ಲಿ ಅಷ್ಟೇನೂ ಪ್ರಾಮುಖ್ಯವಲ್ಲದ ವಿಷಯಗಳು ಆದ್ಯತೆಯನ್ನು ಪಡೆದುಕೊಳ್ಳಲಿಲ್ಲ. ಅವರು ಕಡಿಮೆ ಸಂಖ್ಯೆಯಲ್ಲಿದ್ದರೂ, “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸುವಾರ್ತೆಯನ್ನು ಸಾರುವುದರಲ್ಲಿ ಸಫಲರಾದರು.—ಕೊಲೊ. 1:23.
5 “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ,” ಆದುದರಿಂದ, ಅದೇ ತುರ್ತಿನ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದಕ್ಕೆ ಇನ್ನೂ ಹೆಚ್ಚಿನ ಕಾರಣವಿದೆ. (1 ಪೇತ್ರ 4:7) ವಿಷಯಗಳ ಈ ವ್ಯವಸ್ಥೆಯ ಅಂತ್ಯಕ್ಕೆ ಯೆಹೋವನು ದಿನವನ್ನು ಮತ್ತು ತಾಸನ್ನು ನಿಗದಿಮಾಡಿದ್ದಾನೆ. (ಮತ್ತಾ. 24:36) ಉಳಿದಿರುವ ಸಮಯದಲ್ಲಿ ಈ ಸಾರುವ ಕೆಲಸವು ಪೂರ್ಣಗೊಳ್ಳುವುದು. ಆದುದರಿಂದಲೇ, ನಾವು ಸುವಾರ್ತೆಯೊಂದಿಗೆ ಹೆಚ್ಚೆಚ್ಚು ಜನರನ್ನು ತಲಪಲು ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಬೇಕು.
6 ಅಂತ್ಯವು ಸಮೀಪಿಸಿದಂತೆ, ಸಾಕ್ಷಿ ಕಾರ್ಯದಲ್ಲಿ ನಮ್ಮ ಪಾಲ್ಗೊಳ್ಳುವಿಕೆಯನ್ನು ತೀವ್ರಗೊಳಿಸುವ ಮೂಲಕ, ಯೇಸುವಿನಂತೆ, ‘ಮಾಡಬೇಕೆಂದು ನೀನು ನಮಗೆ ಕೊಟ್ಟ ಕೆಲಸವನ್ನು ನಾವು ನೆರವೇರಿಸಿದ್ದೇವೆ’ ಎಂದು ಯೆಹೋವನಿಗೆ ಹೇಳುವ ಸಂತೃಪ್ತಿಯು ನಮ್ಮ ಪಾಲಿಗಿರುವುದು.—ಯೋಹಾ. 17:4.