ನೀವು ಒಬ್ಬ ಹಿಂದೂ ವ್ಯಕ್ತಿಗೆ ಏನನ್ನು ಹೇಳುವಿರಿ?
1 ನಿಮಗೆ ಗೊತ್ತಿರುವಂತೆ, ಈ ದೇಶದಲ್ಲಿ ನಾವು ಶುಶ್ರೂಷೆಯಲ್ಲಿ ಭೇಟಿಯಾಗುವ ಹೆಚ್ಚಿನ ಜನರು ಹಿಂದೂ ಧರ್ಮದವರಾಗಿರುತ್ತಾರೆ. ಇವರನ್ನು ಭೇಟಿಯಾಗುವಾಗ, ನೀವು ಹೇಗೆ ಮತ್ತು ಏನನ್ನು ಮಾತಾಡುವಿರಿ?
2 ಈ ಅಂಶಗಳನ್ನು ನೆನಪಿನಲ್ಲಿಡಿರಿ: ಸತ್ಯವನ್ನು ಸರಳವಾಗಿ ಮತ್ತು ಜಾಣ್ಮೆಯಿಂದ ಪ್ರಸ್ತುತಪಡಿಸುವಾಗ, ಅನೇಕ ವೇಳೆ ಸಕಾರಾತ್ಮಕ ಪ್ರತಿಕ್ರಿಯೆಯು ಸಿಗುತ್ತದೆ. ಮೊದಲು, ಮನೆಯ ಮುಖ್ಯಸ್ಥನೊಂದಿಗೆ ಮಾತಾಡಬಹುದೋ ಎಂದು ಕೇಳಿರಿ. ಅವನು ಚೆನ್ನಾಗಿ ಪ್ರತಿಕ್ರಿಯೆ ತೋರಿಸುವಲ್ಲಿ, ಆಗ ಇತರ ಕುಟುಂಬದ ಸದಸ್ಯರಿಗೆ ಸಾಕ್ಷಿಯನ್ನು ನೀಡಲು ಸುಲಭವಾಗುವುದು. ಹಿಂದೂ ಸಂಸ್ಕೃತಿಯು ಎಲ್ಲ ಸೃಷ್ಟಿಜೀವಿಗಳಿಗೆ ಗೌರವ ಕೊಡುವುದನ್ನು ಪ್ರೋತ್ಸಾಹಿಸುತ್ತದೆ ಮತ್ತು ಅದು ಜನರಲ್ಲಿ ಆಸಕ್ತಿಯನ್ನು ತೋರಿಸುತ್ತದೆ. ಹೀಗಿರುವುದರಿಂದ, ಎಲ್ಲ ಜನರು ಇಂದು ಯಾವುದರ ಕುರಿತಾಗಿ ಚಿಂತಿಸುತ್ತಾರೊ ಅಂತಹ ವಿಷಯಗಳ ಕುರಿತಾಗಿ ಮಾತಾಡಿರಿ. ಇದು ಅರ್ಥಭರಿತವಾದ ಮತ್ತು ಪರಸ್ಪರ ಪ್ರಯೋಜನದಾಯಕವಾಗಿರುವ ಸಂಭಾಷಣೆಗೆ ಎಡೆಮಾಡಿಕೊಡಬಹುದು. ಹಿಂದೂ ಧರ್ಮವು ಆಧ್ಯಾತ್ಮಿಕತೆಯನ್ನು ಉತ್ತೇಜಿಸುತ್ತದೆ. ಈ ಕಾರಣಕ್ಕಾಗಿಯೇ ಹಿಂದೂಗಳು, ತಾವು ಯಾರೊಂದಿಗೆ ಒಂದು ವೈಯಕ್ತಿಕವಾದ ಆಪ್ತ ಸಂಬಂಧವನ್ನು ಆನಂದಿಸಸಾಧ್ಯವಿದೆಯೊ ಅಂತಹ ಒಬ್ಬ ದೇವರನ್ನು ಆರಾಧಿಸಲು ಹಾತೊರೆಯುತ್ತಾರೆ. ಆದುದರಿಂದ, ನೀವು ಪರಸ್ಪರ ಸಮ್ಮತಿಸುವಂತಹ ಕೆಲವು ವಿಷಯಗಳನ್ನು ಉಪಯೋಗಿಸುತ್ತಾ ಮನುಷ್ಯನು ಸೃಷ್ಟಿಕರ್ತನೊಂದಿಗೆ ಸ್ನೇಹವನ್ನು ಬೆಳೆಸಲು ಬೈಬಲ್ ಮತ್ತು ನಮ್ಮ ಸಾಹಿತ್ಯವು ಸಹಾಯಮಾಡುತ್ತದೆಂಬುದನ್ನು ಅವರಿಗೆ ತೋರಿಸಿರಿ. ಹೆಚ್ಚುಕಡಿಮೆ ಎಲ್ಲ ಹಿಂದೂಗಳು ವಿನಯಶೀಲರೂ ಸ್ನೇಹಪರರೂ ಆಗಿರುತ್ತಾರೆ. ನಾವು ಕೂಡ ಹಾಗೆಯೇ ಇರುವಂತೆ ಇದು ಕೇಳಿಕೊಳ್ಳುತ್ತದೆ, ಮತ್ತು ಘರ್ಷಣೆಗಳಿಂದ ದೂರವಿರಬೇಕು. ಹಿಂದೂ ಧರ್ಮವನ್ನು ನಾವು ಆಳವಾಗಿ ಅಭ್ಯಾಸಮಾಡುವ ಆವಶ್ಯಕತೆ ಇಲ್ಲದಿದ್ದರೂ, ಅವರ ನಂಬಿಕೆಗಳ ಕುರಿತು ಸ್ವಲ್ಪ ವಿಷಯಗಳನ್ನು ತಿಳಿದುಕೊಳ್ಳುವುದು ಸಹಾಯಕಾರಿಯಾಗಿರುವುದು.
3 ತಕ್ಕದಾದ ಸಾಧನಗಳನ್ನು ಉಪಯೋಗಿಸಿರಿ: ಹಿಂದೂ ಜನರನ್ನು ಮನಸ್ಸಿನಲ್ಲಿಟ್ಟುಕೊಂಡು ಅನೇಕ ಪ್ರಕಾಶನಗಳನ್ನು ನಾವು ತಯಾರಿಸಿದ್ದೇವೆ. ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಎಂಬ ಬ್ರೋಷರನ್ನು ಇಂಗ್ಲಿಷ್ ಭಾಷೆಯನ್ನು ಹೊರತುಪಡಿಸಿ ಇತರ 13 ಭಾರತೀಯ ಭಾಷೆಗಳಲ್ಲಿ ಮುದ್ರಿಸಲಾಗಿದೆ. “ಇಗೋ! ನಾನು ಎಲ್ಲವನ್ನೂ ಹೊಸದು ಮಾಡುತ್ತೇನೆ” ಮತ್ತು ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಬ್ರೋಷರುಗಳು ಸಹ ಹಿಂದೂ ಧರ್ಮದ ಜನರಿಗೆ ಸಾರುವಾಗ ಪರಿಣಾಮಕಾರಿಯಾಗಿ ರುಜುವಾಗಿವೆ. ಕುರುಕ್ಷೇತ್ರದಿಂದ ಅರ್ಮಗೆದೋನಿಗೆ—ಮತ್ತು ನಿಮ್ಮ ಪಾರಾಗುವಿಕೆ ಎಂಬ ಪುಸ್ತಿಕೆಯು ಇಂಗ್ಲಿಷ್, ಕನ್ನಡ, ಗುಜರಾಥಿ, ಪಂಜಾಬಿ, ಬಂಗಾಲಿ, ಮತ್ತು ಮಲೆಯಾಳಂ ಭಾಷೆಗಳಲ್ಲಿ ಲಭ್ಯವಿದೆ. ಮರಣದ ಮೇಲೆ ವಿಜಯ—ಅದು ನಿಮಗೆ ಸಾಧ್ಯವೊ? (ಇಂಗ್ಲಿಷ್) ಎಂಬ ಪುಸ್ತಿಕೆಯು ಇಂಗ್ಲಿಷ್, ಗುಜರಾಥಿ, ನೇಪಾಲಿ ಮತ್ತು ಪಂಜಾಬಿ ಭಾಷೆಗಳಲ್ಲಿ ದೊರಕುವಾಗ, ಮುಕ್ತಿಗೆ ನಡಿಸುವ ದೈವಿಕ ಸತ್ಯದ ಹಾದಿ ಎಂಬ ಪುಸ್ತಿಕೆಯು ಇಂಗ್ಲಿಷ್, ಉರ್ದು, ತೆಲುಗು, ಮಲೆಯಾಳಂ, ಮಿಸೊ ಭಾಷೆಗಳಲ್ಲಿ ಲಭ್ಯವಿದೆ. ಅಪೇಕ್ಷಿಸು ಬ್ರೋಷರ್ ಮತ್ತು ಜ್ಞಾನ ಪುಸ್ತಕವನ್ನು ಬೈಬಲ್ ಅಭ್ಯಾಸಗಳನ್ನು ನಡೆಸುವುದರಲ್ಲಿ ಯಶಸ್ವಿಕರವಾಗಿ ಉಪಯೋಗಿಸಬಹುದು.
4 ಇಬ್ಬರಿಗೂ ಒಪ್ಪಿಗೆಯಾಗುವಂತಹ ವಿಷಯದೊಂದಿಗೆ ಸಂಭಾಷಣೆಯನ್ನು ಆರಂಭಿಸಿರಿ: ಹಿಂದೂಗಳು ನಮ್ಮೊಂದಿಗೆ ಒಪ್ಪಿಕೊಳ್ಳುವಂತಹ ವಿಷಯಗಳನ್ನು ಕಂಡುಕೊಳ್ಳುವುದು ಅಷ್ಟೇನೂ ಕಷ್ಟಕರವಾಗಿರುವುದಿಲ್ಲ. ದುಷ್ಟತನವು ತೀರ ಉಚ್ಚವಾದ ಸ್ಥಿತಿಯನ್ನು ಮುಟ್ಟಿರುವ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆಂಬ ಮತ್ತು ಒಂದು ಭೀಕರ ವಿನಾಶದ ಮೂಲಕ ದೇವರು ಲೋಕದಿಂದ ಸಮಸ್ಯೆಗಳನ್ನು ತೆಗೆದುಹಾಕುವನು ಮತ್ತು ಒಂದು ಸತ್ಯಯುಗವು ಇದನ್ನು ಹಿಂಬಾಲಿಸಿ ಬರುವುದೆಂಬ ನಂಬಿಕೆಯು ಅವರಿಗಿದೆ. ಅವರ ಈ ನಂಬಿಕೆಗಳನ್ನು ಕಡೇ ದಿವಸಗಳು, ಮಹಾ ಸಂಕಟ ಮತ್ತು ಬರಲಿರುವ ಹೊಸ ಲೋಕದ ಕುರಿತಾದ ಬೈಬಲಿನ ಬೋಧನೆಗಳೊಂದಿಗೆ ಎಷ್ಟು ಸುಲಭವಾಗಿ ಜೋಡಿಸಬಹುದೆಂಬುದನ್ನು ನೀವು ನೋಡಬಲ್ಲಿರಿ. ಜೀವನವು ಪರಿಹಾರವೇ ಇಲ್ಲದಿರುವ ಸಮಸ್ಯೆಗಳ ಸರಣಿಯಾಗಿದೆಯೆಂದು ಅನೇಕ ಹಿಂದೂಗಳು ಪರಿಗಣಿಸುವುದರಿಂದ, ಕುಟುಂಬ ಜೀವನ, ಪಾತಕ ಮತ್ತು ಸುರಕ್ಷೆ ಎಂಬಂತಹ ವಿಷಯಗಳಲ್ಲಿ ಹಾಗೂ ಮರಣದಲ್ಲಿ ಏನು ಸಂಭವಿಸುತ್ತದೆ ಎಂಬುದರ ಕುರಿತಾಗಿಯೂ ಅವರು ಆಸಕ್ತರಾಗಿದ್ದಾರೆ. ನೀವು ಪ್ರಯತ್ನಿಸಬಹುದಾದ ಎರಡು ಮಾದರಿ ನಿರೂಪಣೆಗಳನ್ನು ಇಲ್ಲಿ ಕೊಡಲಾಗಿದೆ.
5 ಒಬ್ಬ ಗೃಹಸ್ಥನಿಗೆ ಈ ಕೆಳಗಿನ ವಿಷಯವು ಹಿಡಿಸಬಹುದು:
◼“ಇಂದು ಅನೇಕ ದೇಶಗಳಲ್ಲಿ ಕುಟುಂಬ ಜೀವನದ ಸ್ಥಿತಿಯ ಕುರಿತು ಚಿಂತಿತರಾಗಿರುವ ವ್ಯಕ್ತಿಗಳನ್ನು ನಾನು ಭೇಟಿಯಾಗುತ್ತಿದ್ದೇನೆ. ಕುಟುಂಬವನ್ನು ಐಕ್ಯದ ಬಂಧದಲ್ಲಿರಿಸಲು ಯಾವುದು ಸಹಾಯಮಾಡುವುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕುಟುಂಬದ ಕುರಿತು ಹಿಂದೂ ಬರಹಗಳು ಏನನ್ನು ಹೇಳುತ್ತವೆಂಬುದು ಕೆಲವು ಜನರಿಗೆ ಗೊತ್ತಿದೆ, ಆದರೆ ಈ ವಿಷಯದ ಕುರಿತು ಬೈಬಲ್ ಏನನ್ನು ಹೇಳುತ್ತದೆಂಬುದನ್ನು ಹೋಲಿಸಿ ನೋಡುವ ಅವಕಾಶವು ಇವರಿಗೆ ಎಂದೂ ಸಿಕ್ಕಿರುವುದಿಲ್ಲ. ನಾನು ನಿಮ್ಮೊಂದಿಗೆ ಕೊಲೊಸ್ಸೆ 3:12-14ರಲ್ಲಿರುವ ಈ ವಿಚಾರವನ್ನು ಹಂಚಿಕೊಳ್ಳಲು ಬಯಸುತ್ತೇನೆ.” ವಚನವನ್ನು ಓದಿದ ನಂತರ, ಮನೆಯವನಿಗೆ ಜ್ಞಾನ ಪುಸ್ತಕದ 15ನೇ ಅಧ್ಯಾಯವನ್ನು ತೋರಿಸಿ, ಹೀಗನ್ನಿರಿ: “ನಿಮ್ಮೊಂದಿಗೆ ಈ ಅಧ್ಯಾಯವನ್ನು ಓದುವುದಕ್ಕಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಲು ನಾನು ಇಷ್ಟಪಡುತ್ತೇನೆ.”
6 ಒಬ್ಬ ಯುವ ವ್ಯಕ್ತಿಯು ಈ ರೀತಿಯ ವಿಷಯಕ್ಕೆ ಪ್ರತಿಕ್ರಿಯಿಸಬಹುದು:
◼“ನೀವು ದೇವರಲ್ಲಿ ನಂಬಿಕೆ ಇಡುತ್ತೀರೆಂಬುದು ನಿಸ್ಸಂದೇಹ. ನಮಗಾಗಿ ದೇವರ ಉದ್ದೇಶವು ಏನಾಗಿದೆಯೆಂದು ನೀವು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಆಮೇಲೆ ಆದಿಕಾಂಡ 1:28ನ್ನು ಓದಿ, ಹೀಗೆ ಹೇಳಿರಿ: “ಅನೇಕ ಸ್ಥಳಗಳಲ್ಲಿ ಭೂಮಿಯು ಮಿತಿಮೀರಿ ಜನನಿಬಿಡವಾಗಿದೆ ಮತ್ತು ಸಮಸ್ಯೆಗಳಿಂದ ಬಾಧಿತವಾಗಿದೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಸೃಷ್ಟಿಕರ್ತನು ನಮಗೆ ಸಹಾಯಮಾಡಲು ಸಿದ್ಧನಾಗಿದ್ದಾನೆಂದು ನೀವು ನೆನಸುತ್ತೀರೋ?” ಪ್ರತಿಕ್ರಿಯೆಯನ್ನು ಕೇಳಿಸಿಕೊಂಡ ನಂತರ, ಸೂಕ್ತವಾದ ಪ್ರಕಾಶನಕ್ಕೆ ಗಮನವನ್ನು ತಿರುಗಿಸಿರಿ.
7 ಸಕಾರಾತ್ಮಕ ಪರಿಣಾಮಗಳನ್ನು ಅನುಭವಿಸಿರಿ: 22 ವರ್ಷ ವಯಸ್ಸಿನ ಒಬ್ಬ ಹಿಂದೂ ವ್ಯಕ್ತಿಯು ಮಾರ್ಕೆಟಿನಲ್ಲಿ ಸಾರುತ್ತಿದ್ದ ಸಹೋದರಿಯೊಬ್ಬಳನ್ನು ಭೇಟಿಯಾಗಿ, ಬೈಬಲ್ ಅಭ್ಯಾಸಕ್ಕಾಗಿ ಕೇಳಿಕೊಂಡನು. ಸುಮಾರು ಎಂಟು ವರ್ಷಗಳ ಹಿಂದೆ ತನ್ನ ತಾಯಿ ಮತ್ತು ಅವಳ ಮಧ್ಯೆ ನಡೆದ ಚರ್ಚೆಯನ್ನು ತಾನು ಕೇಳಿಸಿಕೊಂಡಿದ್ದೆನೆಂದು ಅವನು ಅವಳಿಗೆ ವಿವರಿಸಿದನು. ಮಾನವಕುಲದ ಸಮಸ್ಯೆಗಳಿಗೆ ಬೈಬಲು ನೀಡುವ ಪ್ರಾಯೋಗಿಕ ಉತ್ತರಗಳಿಂದ ಅವನು ಪ್ರಭಾವಿಸಲ್ಪಟ್ಟನಾದರೂ, ಅವನ ತಾಯಿಗೆ ಅದರಲ್ಲಿ ಆಸಕ್ತಿಯಿರಲಿಲ್ಲ ಮತ್ತು ಸತ್ಯವನ್ನು ಸ್ವತಃ ಬೆನ್ನಟ್ಟುವುದಕ್ಕೆ ತಾನು ತೀರ ಚಿಕ್ಕವನೆಂದು ಅವನು ಭಾವಿಸಿದ್ದನು. ಈಗ ಅವನು ಪ್ರಾಪ್ತ ವಯಸ್ಕನಾಗಿದ್ದರಿಂದ, ಅವನು ಹೆಚ್ಚನ್ನು ಕಲಿತುಕೊಳ್ಳಲು ಬಯಸಿದನು. ಯುವ ವ್ಯಕ್ತಿಯು ಸಮಯವನ್ನು ವ್ಯರ್ಥಗೊಳಿಸಲಿಲ್ಲ. ಕೇವಲ 23 ದಿನಗಳಲ್ಲಿ ಅವನು ಜ್ಞಾನ ಪುಸ್ತಕದ ಅಭ್ಯಾಸವನ್ನು ಮುಗಿಸಿದನು ಮತ್ತು ಮಾರ್ಕೆಟಿನಲ್ಲಿ ಆ ಸಹೋದರಿಯನ್ನು ಭೇಟಿಯಾದ ಕೇವಲ ನಾಲ್ಕು ತಿಂಗಳುಗಳ ಬಳಿಕ ದೀಕ್ಷಾಸ್ನಾನಕ್ಕಾಗಿ ಕೇಳಿಕೊಂಡನು!
8 ಟ್ರೇನ್ನಲ್ಲಿ ಭೇಟಿಯಾದ ಹಿಂದೂ ವ್ಯಕ್ತಿಯೊಂದಿಗೆ ಒಬ್ಬ ಸಹೋದರನು ಅಭ್ಯಾಸವನ್ನು ಆರಂಭಿಸಿದನು. ಈ ವ್ಯಕ್ತಿಯ ವೈವಾಹಿಕ ಜೀವನದಲ್ಲಿ ತೊಂದರೆಗಳಿದ್ದವು. ಅವನಿಗೆ ಮಿತಿಮೀರಿ ಕುಡಿಯುವ ಸಮಸ್ಯೆಯೂ ಇತ್ತು. ಕುಟುಂಬ ಜೀವನದ ಕುರಿತು ಬೈಬಲಿನ ಬುದ್ಧಿವಾದವನ್ನು ತನ್ನೊಂದಿಗೆ ಹಂಚಿಕೊಳ್ಳಲು ಸಾಕ್ಷಿಯು ನೀಡಿದ ಆಮಂತ್ರಣಕ್ಕೆ ಈ ವ್ಯಕ್ತಿಯು ಒಪ್ಪಿದನು. ಬೈಬಲಿನ ನೈತಿಕ ಬೋಧನೆಗಳು ಅವನಿಗೆ ಹಿಡಿಸಿದವು ಮತ್ತು ಅವನು ಒಂದು ಬೈಬಲ್ ಅಭ್ಯಾಸಕ್ಕೆ ಒಪ್ಪಿದನು. ಅವನು ಮತ್ತು ಅವನ ಕುಟುಂಬವು ಕೂಟಗಳಿಗೆ ಒಟ್ಟುಗೂಡಿ ಹಾಜರಾಗಲು ತೊಡಗಿತು. ಅನಂತರ, ಅವರು ಸತ್ಯವನ್ನು ಸ್ನೇಹಿತರೊಂದಿಗೆ ಮತ್ತು ಸಂಬಂಧಿಕರೊಂದಿಗೆ ಹಂಚಿಕೊಂಡರು. ಇಷ್ಟರವರೆಗೆ, ಇವರಲ್ಲಿ ಆರು ಜನರು ಸತ್ಯವನ್ನು ಸ್ವೀಕರಿಸಿದ್ದಾರೆ!
9 “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ. (1 ತಿಮೊ. 2:4) ಹಿಂದೂ ಧರ್ಮದಂತಹ, ಕ್ರೈಸ್ತೇತರ ಧರ್ಮಕ್ಕೆ ಸೇರಿದವರೆಂದು ಹೇಳಿಕೊಳ್ಳುವ ಸ್ತ್ರೀಪುರುಷರು ಇದರಲ್ಲಿ ಒಳಗೊಂಡಿರುತ್ತಾರೆ. ನಿಮ್ಮ ಟೆರಿಟೊರಿಯಲ್ಲಿರುವ ಹಿಂದೂ ವ್ಯಕ್ತಿಗಳನ್ನು ನೀವು ಭೇಟಿಯಾಗುವಾಗ, ಈ ಲೇಖನದಲ್ಲಿ ಕೊಡಲಾದ ಕೆಲವು ಸಲಹೆಗಳನ್ನು ನೀವು ಯಾಕೆ ಉಪಯೋಗಿಸಿ ನೋಡಬಾರದು?