ಯೆಹೋವನ ನಾಮವನ್ನು ಭೂಮಂಡಲದಲ್ಲೆಲ್ಲ ತಿಳಿಯಪಡಿಸುವುದು
1 “ಭೂಲೋಕದ ಕಟ್ಟಕಡೆಯ ವರೆಗೂ” ಸಾಕ್ಷಿಗಳಾಗಿರುವಂತೆ ಯೇಸು ತನ್ನ ಶಿಷ್ಯರಿಗೆ ಆಜ್ಞಾಪಿಸಿದಾಗ, ಅನುಸರಿಸಲಿಕ್ಕಾಗಿ ಅವನು ಈಗಾಗಲೇ ಅವರಿಗೆ ಒಂದು ಮಾದರಿಯನ್ನಿಟ್ಟಿದ್ದನು. (ಅ. ಕೃ. 1:8) ಅವನು ಜನರನ್ನು ಯಾವುದೇ ಸಂದರ್ಭದಲ್ಲಿ ಎಲ್ಲಿಯೇ ಕಂಡುಕೊಂಡರೂ, ಮಾನವಕುಲಕ್ಕಾಗಿರುವ ದೇವರ ಉದ್ದೇಶದ ಕುರಿತು ಅವರೊಂದಿಗೆ ಮಾತಾಡಿದನು. ಯೇಸುವನ್ನು ಅನುಕರಿಸುತ್ತಾ, ನಂಬಿಗಸ್ತ ಆಳು ವರ್ಗವು ಯೆಹೋವನ ನಾಮವನ್ನು ‘ಭೂಮಂಡಲದಲ್ಲೆಲ್ಲ ತಿಳಿಯಪಡಿಸಲು’ ಅನೇಕಾನೇಕ ವಿಧಗಳನ್ನು ಉಪಯೋಗಿಸುತ್ತಿದೆ.—ಯೆಶಾ. 12:4, 5.
2 ಗತ ಸಮಯಗಳಲ್ಲಿ ಯಾವ ಮಾಧ್ಯಮಗಳು ಉಪಯೋಗಿಸಲ್ಪಟ್ಟವು? ಗತ ವರ್ಷಗಳಲ್ಲಿ, ಪ್ರಸಂಗಗಳು (ಸರ್ಮನ್ಗಳು) ವಾರ್ತಾಪತ್ರಿಕೆಗಳಲ್ಲಿ ಪ್ರಕಟಿಸಲ್ಪಟ್ಟವು; “ಫೋಟೊ-ಡ್ರಾಮ ಆಫ್ ಕ್ರಿಯೇಷನ್” ಎಂಬ ಚಲನ ಚಿತ್ರವನ್ನು ತಯಾರಿಸಿ, ಲಕ್ಷಾಂತರ ಜನರಿಗೆ ತೋರಿಸಲಾಯಿತು; ಲೌಡ್-ಸ್ಪೀಕರ್ ಸಜ್ಜಿತ ಕಾರ್ಗಳನ್ನು ಉಪಯೋಗಿಸಲಾಯಿತು; ಮತ್ತು ಫೋನೋಗ್ರಾಫನ್ನು ವ್ಯಾಪಕವಾಗಿ ಬಳಸಲಾಯಿತು ಹಾಗೂ ಸ್ವಲ್ಪ ಸಮಯದ ವರೆಗೆ ರೇಡಿಯೋವನ್ನು ಸಹ ಉಪಯೋಗಿಸಲಾಯಿತು. ಈ ಎಲ್ಲ ಮಾಧ್ಯಮಗಳನ್ನು ಸುವಾರ್ತೆಯನ್ನು ಸಾರಲಿಕ್ಕಾಗಿಯೇ ಉಪಯೋಗಿಸಲಾಯಿತು. ಜನರನ್ನು ವೈಯಕ್ತಿಕವಾಗಿ ಭೇಟಿಯಾಗುವ ವಿಚಾರದ ಮೇಲೆ ಯಾವಾಗಲೂ ಹೆಚ್ಚಿನ ಒತ್ತನ್ನು ಹಾಕಲಾಗಿದೆ ಎಂಬುದು ನಿಶ್ಚಯ. ಏಕೆಂದರೆ ಹೀಗೆ ಮಾಡುವುದರಿಂದ, ಆಸಕ್ತಿಯು ಕಂಡುಕೊಳ್ಳಲ್ಪಡುವಾಗ ಅದನ್ನು ಮುಂದುವರಿಸಿಕೊಂಡು ಹೋಗಸಾಧ್ಯವಿದೆ. ಇದರ ಫಲಿತಾಂಶವಾಗಿ, ಯೆಹೋವನ ನಾಮವನ್ನು ಎಲ್ಲೆಲ್ಲೂ ತಿಳಿಯಪಡಿಸಲು ಮನೆಮನೆಯ ಶುಶ್ರೂಷೆಯು ಬಹಳ ಪರಿಣಾಮಕಾರಿಯಾಗಿ ಕಂಡುಬಂದಿದೆ.—ಅ. ಕೃ. 5:42.
3 ಇಂದು ಯಾವ ಮಾಧ್ಯಮಗಳು ಉಪಯೋಗಿಸಲ್ಪಡುತ್ತಿವೆ? ಕಾಲವು ಬದಲಾಗುತ್ತಿರುವುದರಿಂದ ಲೋಕವು ಸಹ ತುಂಬ ತರಾತುರಿಯಲ್ಲಿದೆ, ಮತ್ತು ಅನೇಕ ಸ್ಥಳಗಳಲ್ಲಿ ಜನರನ್ನು ಮನೆಯಲ್ಲಿ ಕಂಡುಕೊಳ್ಳುವುದೇ ಅಪರೂಪವಾಗಿದೆ. ಆತ್ಮಿಕ ವಿಷಯಗಳ ಕುರಿತು ಓದಿ, ಮನನ ಮಾಡುವುದಕ್ಕೆ ಸಮಯವನ್ನು ವ್ಯಯಿಸುವವರು ಕೊಂಚ ಮಂದಿ ಮಾತ್ರ. ಆದುದರಿಂದ, ನಾವು ನಮ್ಮ ಶುಶ್ರೂಷೆಯನ್ನು ಅದಕ್ಕೆ ತಕ್ಕಂತೆ ಹೊಂದಿಸಿಕೊಳ್ಳುವ ಅಗತ್ಯವಿದೆ. ಮನೆಮನೆಯ ಶುಶ್ರೂಷಾ ಕೆಲಸವನ್ನು ಮಾಡಿ ಟೆರಿಟೊರಿಯನ್ನು ಆವರಿಸುವುದರ ಜೊತೆಗೆ, ಜನರಿರುವಲ್ಲೆಲ್ಲ ಹೋಗಿ ಸಾರುವಂತೆ ಮತ್ತು ನಮ್ಮಲ್ಲಿರುವ ನಂಬಿಕೆಗೆ ಆಧಾರವನ್ನು ನೀಡಲು ‘ಯಾವಾಗಲೂ ಸಿದ್ಧವಾಗಿರುವಂತೆ’ ನಮಗೆ ಉತ್ತೇಜನವನ್ನು ನೀಡಲಾಗಿದೆ. (1 ಪೇತ್ರ 3:15) ಇದರರ್ಥ, ಸಹೋದ್ಯೋಗಿಗಳಿಗೆ, ಸಹಪಾಠಿಗಳಿಗೆ, ರಸ್ತೆಯಲ್ಲಿ, ಉದ್ಯಾನವನದಲ್ಲಿ ಅಥವಾ ವಾಹನ ನಿಲುಗಡೆಯ ಸ್ಥಳಗಳಲ್ಲಿ ಸಿಗುವ ಜನರಿಗೆ, ಅಂಗಡಿಯಿಂದ ಅಂಗಡಿಗೆ ಹಾಗೂ ಜನರಿರುವಂತಹ ಎಲ್ಲ ಸ್ಥಳಗಳಲ್ಲಿ ಸಾರಲು ಪ್ರಯತ್ನಿಸುವುದೇ ಆಗಿದೆ. ಯೆಹೋವನ ಬೆಂಬಲವು ನಮಗಿರುವುದರಿಂದ ನಮ್ಮ ಪ್ರಯತ್ನಗಳಿಗೆ ಖಂಡಿತವಾಗಿಯೂ ಪ್ರತಿಫಲವು ಸಿಗುವುದು. ಜನರಿರುವಲ್ಲೆಲ್ಲ ಹೋಗಿ ಸಾರುವುದರಲ್ಲಿ ನೀವು ಸಹ ಪಾಲ್ಗೊಳ್ಳುತ್ತಿದ್ದೀರೋ?
4 ನಮ್ಮ ಟೆರಿಟೊರಿಯಲ್ಲಿ ಯೆಹೋವನ ನಾಮವನ್ನು ತಿಳಿಯಪಡಿಸಲಿಕ್ಕಾಗಿ ನಮಗೆ ಸಿಗುವಂತಹ ಯಾವುದೇ ಅವಕಾಶವನ್ನು ನಾವು ಬಿಟ್ಟುಕೊಡದಿರೋಣ. ಸಹೃದಯಿಗಳನ್ನು ಹುಡುಕಲಿಕ್ಕಾಗಿ ನಾವು ಯೆಹೋವನ ಸಹಾಯವನ್ನು ಬೇಡಿಕೊಳ್ಳುತ್ತಿರುವಾಗ, ನಮ್ಮ ಶುಶ್ರೂಷೆಯನ್ನು ಸಂಪೂರ್ಣವಾಗಿ ಪೂರೈಸುವುದರಲ್ಲಿ ನಾವು ಸಂತೃಪ್ತಿಯನ್ನು ಕಂಡುಕೊಳ್ಳಸಾಧ್ಯವಿದೆ.—ಯೋಹಾ. 6:44.